ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 18, 2020

Mahabharata Tatparya Nirnaya Kannada 19214_19219

 ಕೋಶಸ್ಯ ಚಾರ್ದ್ಧಸಹಿತಾಸ್ತು ಯದೈವ ಪಾರ್ತ್ಥಾ ಗಚ್ಛನ್ತಿ ತಾನನುಯಯುರ್ನ್ನಿಖಿಲಾಶ್ಚ ಪೌರಾಃ ।

ಊಚುಶ್ಚ ಹಾ ಬತ ಸುಯೋಧನ ಏಷ ಪಾಪೋ ದೂರೇ ಚಕಾರ ನನು ಪಾಣ್ಡುಸುತಾನ್ ಗುಣಾಢ್ಯಾನ್॥೧೯.೨೧೪॥

 

ಕೋಶದ ಅರ್ಧದಿಂದ ಕೂಡಿರುವ ಪಾಂಡವರು ಯಾವಾಗ ತೆರಳುತ್ತಿದ್ದರೋ, ಆಗ ಅವರನ್ನು ಎಲ್ಲಾ ಪ್ರಜೆಗಳೂ ಕೂಡಾ ಅನುಸರಿಸಿದರು ಮತ್ತು ಹೇಳಿದರೂ ಕೂಡಾ. ‘ಅಯ್ಯೋ, ಈ ಪಾಪಿಷ್ಠನಾಗಿರುವ ಸುಯೋಧನನು ಸದ್ಗುಣಸಂಪನ್ನರಾದ ಪಾಂಡವರನ್ನು ದೂರಮಾಡಿದನಲ್ಲಾ.

 

ಭೀಮಪ್ರತಾಪಮವಲಮ್ಬ್ಯ ಕಲಿಙ್ಗಬನ್ಧಾನ್ಮುಕ್ತಃ ಸುತಾಮಪಿ ಹಿ ತಸ್ಯ ಪುರಂ ನಿನಾಯ ।

ದ್ವೇಷ್ಟ್ಯೇವಮಪ್ಯತಿಬಲಾನ್ ಹಿ ಸದೈವ ಪಾರ್ತ್ಥಾನ್ ಯಾಮೋ ವಯಂ ಗುಣಿಭಿರದ್ಯ ಸಹೈವ ಪಾರ್ತ್ಥೈಃ ॥೧೯.೨೧೫॥

 

ಭೀಮನ ಪರಾಕ್ರಮವನ್ನು ಆಶ್ರಯಿಸಿ ಕಲಿಙ್ಗಬಂಧದಿಂದ ಮುಕ್ತನಾಗಿ, ಅವನ ಮಗಳನ್ನೂ ಕೂಡಾ ಮನೆಗೆ ತಂದ. (ಅಪಮಾನದಿಂದ ಬಿಡಿಸಿದ್ದಲ್ಲದೇ, ಆ ಹುಡುಗಿಯೊಂದಿಗೆ ಮದುವೆಯಾಗಲೂ ಭೀಮ ಕಾರಣನಾದ) ಆದರೂ ಕೂಡಾ ಅತ್ಯಂತ ಬಲವುಳ್ಳ ಪಾಂಡವರನ್ನು ಈ ದುರ್ಯೋಧನ ಸದಾ ದ್ವೇಷಮಾಡುತ್ತಾನೆ. ನಾವು ಗುಣವಂತರಾಗಿರುವ ಪಾಂಡವರೊಂದಿಗೆ ಕೂಡಿಕೊಂಡು ಹೊರಡೋಣ’ ಎಂದು ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

 

ಆಜ್ಞಾಪಯತ್ಯಪಿ ಸ ಭೇರಿರವೇಣ ಪಾರ್ತ್ಥಾನ್ ನೈವಾನುಗಚ್ಛತ ಯದಿ ವ್ರಜಥಾನು ವೋsದ್ಯ ।

ವಿತ್ತಂ ಹರಿಷ್ಯ ಇಹ ಸರ್ವಮಪೀತಿ ತಚ್ಚ ಪಾಪಃ ಕರೋತು ನ ವಯಂ ವಿಜಹಾಮ ಪಾರ್ತ್ಥಾನ್॥೧೯.೨೧೬॥

 

ಪಾಂಡವರೊಂದಿಗೆ ಜನರೂ ಹೊರಡುತ್ತಿದ್ದಾರೆ ಎನ್ನುವ ಸಮಾಚಾರವನ್ನು ಕೇಳಿ ತಿಳಿದ ದುರ್ಯೋಧನ, ಡಂಗುರ ಹೊಡೆಸಿ ಈರೀತಿ ಆಜ್ಞೆಮಾಡಿದ:  ‘ಪಾಂಡವರನ್ನು ಅನುಸರಿಸಬೇಡಿ. ಒಂದುವೇಳೆ ನೀವು ಅವರನ್ನು ಹೊಂದಿದಿರಾದರೆ, ನಿಮ್ಮೆಲ್ಲಾ ಆಸ್ತಿಯನ್ನು ಕಳೆದುಕೊಳ್ಳುತ್ತೀರಿ’ ಎಂದು. ಆದರೆ ಜನರು ಅದನ್ನು ಲೆಕ್ಕಿಸದೇ, ‘ಪಾಪಿಷ್ಠನಾದ ಅವನು ಮಾಡಲಿ, ನಾವು ಪಾಂಡವರನ್ನು ಬಿಡುವುದಿಲ್ಲಾ’ ಎಂದರು.

 

ಸದ್ಭಿರ್ಹಿ ಸಙ್ಗತಿರಿಹೈವ ಸುಖಸ್ಯ ಹೇತುರ್ಮ್ಮೋಕ್ಷ್ಯೈಕಹೇತುರಥ ತದ್ವಿಪರೀತಮನ್ಯತ್ ।

ತಸ್ಮಾದ್ ವ್ರಜೇಮ ಸಹ ಪಾಣ್ಡುಸುತೈರ್ಹಿ ಶಕ್ರಪ್ರಸ್ಥಂ ತ್ವಿತಿ ಸ್ಮ ಧೃತಚೇತಸ ಆಹ ಧಾರ್ಮ್ಮಃ ॥೧೯.೨೧೭॥

 

‘ಸಜ್ಜನರ ಸಹವಾಸವು ಇಲ್ಲಿ ಸುಖಕ್ಕೆ ಮುಖ್ಯ ಕಾರಣವು ಹಾಗೂ ಮೋಕ್ಷಕ್ಕೂ ಕಾರಣ ಕೂಡಾ. ಇದಕ್ಕಿಂತ ಬೇರೆಯಾದ ದುರ್ಜನ ಸಂಗ ಅದಕ್ಕೆ ವಿರುದ್ಧವಾದುದು(ಇಲ್ಲಿಯೂ ದುಃಖಕ್ಕೆ ಕಾರಣ, ಅಲ್ಲಿಯೂ ದುಃಖಕ್ಕೆ ಕಾರಣವಾದುದು). ಆಕಾರಣದಿಂದ ಪಾಂಡವರ ಜೊತೆಗೆ ಇಂದ್ರಪ್ರಸ್ಥಕ್ಕೆ ಹೋಗೋಣ ಎಂದು ಗಟ್ಟಿಯಾಗಿ ನಿರ್ಧಾರಮಾಡಿದ ಪ್ರಜೆಗಳನ್ನುದ್ದೇಶಿಸಿ ಯಮಧರ್ಮನ ಮಗನಾದ ಯುಧಿಷ್ಠಿರ ಮಾತನಾಡಿದನು:

 

ಪ್ರೀತಿರ್ಯ್ಯದಿ ಸ್ಮ ಭವತಾಂ ಮಯಿ ಸಾನುಜೇsಸ್ತಿ ತಿಷ್ಠಧ್ವಮತ್ರ ಪಿತುರೇವ ಹಿ ಶಾಸನೇ ಮೇ ।

ಕೀರ್ತ್ತಿರ್ಹಿ ವೋsನುಗಮನಾತ್ ಪಿತುರತ್ಯಯೇನ ನಶ್ಯೇನ್ನ ಇತ್ಯನುಸರಧ್ವಮಿಹಾsಮ್ಬಿಕೇಯಮ್ ॥೧೯.೨೧೮॥

 

‘ಒಂದುವೇಳೆ ನಿಮಗೆಲ್ಲರಿಗೂ ನಮ್ಮೆಲ್ಲರಲ್ಲಿ ಪ್ರೀತಿ ಇದ್ದದ್ದಾದರೆ, ಇಲ್ಲಿ ನನ್ನ ದೊಡ್ಡಪ್ಪನ ಆಳ್ವಿಕೆಯಲ್ಲಿಯೇ ಇರಿ. ನಿಮ್ಮ ಅನುಸರಣೆಯಿಂದ ಧೃತರಾಷ್ಟ್ರನ ಕೀರ್ತಿನಾಶವಾಗುತ್ತದೆ. ಈರೀತಿಯಾಗಿ ಚಿಂತಿಸಿ, ಧೃತರಾಷ್ಟ್ರನನ್ನೇ ರಾಜನನ್ನಾಗಿ ಒಪ್ಪಿಕೊಳ್ಳಿ, ಅವನ ಆಳ್ವಿಕೆಯಲ್ಲಿಯೇ ಇರಿ’.

 

ಇತ್ಯೇವ ತೈಃ ಪುರಜನಾ ನಿಖಿಲೈರ್ನ್ನಿಷಿದ್ಧಾಃ ಕೃಚ್ಛ್ರೇಣ ತಸ್ಥುರಪಿ ತಾನ್ ಮನಸಾsನ್ವಗಚ್ಛನ್ ।

ಪ್ರಾಪ್ಯಾಥ ಶಕ್ರಪುರಮಸ್ಮರತಾಂ ಚ ಕೃಷ್ಣೌ ದೇವೇಶವರ್ದ್ದಕಿಮಥಾsಗಮದತ್ರ ಸೋsಪಿ ॥೧೯.೨೧೯॥

 

ಈರೀತಿಯಾಗಿ ಯುಧಿಷ್ಠಿರನಿಂದ ಹೇಳಲ್ಪಟ್ಟು, ತಡೆಯಲ್ಪಟ್ಟವರಾದ ಜನರು ಅಲ್ಲೇ ನಿಂತರೂ, ಪಾಂಡವರನ್ನು ಮನಸ್ಸಿನಿಂದ ಅನುಸರಿಸಿದರು. ತದನಂತರ ಪಾಂಡವರು  ಖಾಣ್ಡವಪ್ರಸ್ಥವನ್ನು ಹೊಂದಿದರು. ಅಲ್ಲಿ ವಾಸಿಷ್ಠಯಾದವ ಕೃಷ್ಣರು ದೇವತೆಗಳ ಬಡಗಿಯಾದ ವಿಶ್ವಕರ್ಮನನ್ನು  ನೆನಪಿಸಿಕೊಂಡಾಗ ಅವನು ಅಲ್ಲಿಗೆ ಬಂದ.

Mahabharata Tatparya Nirnaya Kannada 19206_19213

 

ದುರ್ಯ್ಯೋಧನೇsನುಜಜನೈಃ ಸಹ ತೈರ್ಗ್ಗೃಹೀತೇ ಭೀಷ್ಮಾಮ್ಬಿಕೇಯವಿದುರಾಗ್ರಜವಾಕ್ಯನುನ್ನಃ ।

ಭೀಮೋ ವಿಜಿತ್ಯ ನೃಪತೀನ್ ಸಜರಾಸುತಾಂಸ್ತಾನ್ ಹತ್ವಾ ಸುವಜ್ರಮಮುಚದ್ ಧೃತರಾಷ್ಟ್ರಪುತ್ರಾನ್॥೧೯.೨೦೬॥

 

ತಮ್ಮಂದಿರಿಂದ ಕೂಡಿಕೊಂಡು ದುರ್ಯೋಧನನು ಅವರಿಂದ ಸೆರೆಹಿಡಿಯಲ್ಪಡಲು, ಭೀಷ್ಮ, ಧೃತರಾಷ್ಟ್ರ, ವಿದುರ ಮತ್ತು ಧರ್ಮರಾಜ ಇವರ ವಾಕ್ಯದಿಂದ ಪ್ರೇರಿತನಾಗಿ ಭೀಮಸೇನನು ಜರಾಸಂಧನೇ ಮೊದಲಾಗಿರುವ ರಾಜರನ್ನು ಗೆದ್ದು, ಸುವಜ್ರನನ್ನು ಕೊಂದು ಧೃತರಾಷ್ಟ್ರನ ಪುತ್ರರನ್ನು ಬಿಡಿಸಿದನು.   

 

ತೇsಪಿ ಸ್ಮ ಕರ್ಣ್ಣಸಹಿತಾ ಮೃತಕಪ್ರತೀಕಾ ನಾಗಾಹ್ವಯಂ ಪುರಮಥಾsಯಯುರಪ್ಯಮೀಷಾಮ್ ।

ದೃಷ್ಟ್ವಾ ವಿರೋಧಮವದನ್ನೃಪತಿಶ್ಚ ಧರ್ಮ್ಮಪುತ್ರಂ ಪುರನ್ದರಕೃತಸ್ಥಲಮಾಶು ಯಾಹಿ ॥೧೯.೨೦೭॥

 

ಕರ್ಣನಿಂದ ಕೂಡಿರುವ ದುರ್ಯೋಧನಾದಿಗಳು ಸತ್ತ ಮೋರೆಯೊಂದಿಗೆ ಹಸ್ತಿನಾವತಿ ಪಟ್ಟಣವನ್ನು ಸೇರಿದರು. ಹೀಗಿದ್ದರೂ ಕೂಡಾ, ದುರ್ಯೋಧನನು ಪಾಂಡವರಿಗೆ ಸಲ್ಲಿಸುತ್ತಿರುವ ತೀವ್ರ ವಿರೋಧವನ್ನು ಕಂಡು, ಧೃತರಾಷ್ಟ್ರನು ಧರ್ಮಪುತ್ರನಿಗೆ  ‘ನೀನು ಇಂದ್ರಪ್ರಸ್ಥಕ್ಕೆ ಬೇಗ ಹೋಗು’ ಎಂದು ಹೇಳಿದನು.

 

ತತ್ರಾರ್ದ್ಧರಾಜ್ಯಮನುಭುಙ್ಕ್ಷ್ವಸಹಾನುಜೈಸ್ತ್ವಂ ಕೋಶಾರ್ದ್ಧಮೇವ ಚ ಗೃಹಾಣ ಪುರಾ ಹಿ ಶಕ್ರಃ ।

ತತ್ರಾಭಿಷಿಕ್ತ ಉತ ಕಞ್ಜಭವಾದಿದೇವೈಸ್ತತ್ರಸ್ಥ ಏವ ಸ ಚಕಾರ ಚಿರಂ ಚ ರಾಜ್ಯಮ್ ॥೧೯.೨೦೮॥

 

‘ಅಲ್ಲಿ ನಿನ್ನ ತಮ್ಮಂದಿರಿಂದ ಕೂಡಿಕೊಂಡು ಅರ್ಧರಾಜ್ಯವನ್ನನುಭವಿಸು. ಅರ್ಧಕೋಶವನ್ನೂ ನೀನು ತೆಗೆದುಕೊಂಡು ಹೋಗು. ಹಿಂದೆ  ಶಕ್ರನು ಬ್ರಹ್ಮನೇ ಮೊದಲಾದ ದೇವತೆಗಳಿಂದ ಅಭಿಷಿಕ್ತನಾಗಿ, ಅಲ್ಲಿಯೇ ದೀರ್ಘಕಾಲ ರಾಜ್ಯವಾಳಿದ್ದನು.

 

ತ್ವಂ ವೀರ ಶಕ್ರಸಮ ಏವ ತತಸ್ತವೈವ ಯೋಗ್ಯಂ ಪುರಂ ತದತ ಆಶ್ವಭಿಷೇಚಯಾಮಿ ।

ಇತ್ಯುಕ್ತ ಆಹ ಸ ಯುಧಿಷ್ಠಿರ ಓಮಿತಿ ಸ್ಮ ಚಕ್ರೇsಭಿಷೇಕಮಪಿ ತಸ್ಯ ಸ ಆಮ್ಬಿಕೇಯಃ ॥೧೯.೨೦೯॥

 

ಓ ವೀರನೇ, ನೀನು ಇಂದ್ರನಿಗೆ ಸಮಾನನಾಗಿದ್ದೀಯ. ಆ ಕಾರಣದಿಂದ ಆ ಪಟ್ಟಣವು ನಿನಗೇ ಯೋಗ್ಯವಾದುದು. ಕೂಡಲೇ, ಇಲ್ಲೇ ನಾನು ನಿನಗೆ ಅಭಿಷೇಕ ಮಾಡುತ್ತೇನೆ’ ಎಂದು ಧೃತರಾಷ್ಟ್ರನು ಹೇಳಲು, ಯುಧಿಷ್ಠಿರನು ‘ಓಂ’ (ಆಯಿತು ) ಎಂದು ಹೇಳಿದ. ನಂತರ  ಅಂಬಿಕೆಯ ಮಗನಾದ ಧೃತರಾಷ್ಟ್ರನು ಅವನಿಗೆ ಪಟ್ಟಾಭಿಷೇಕವನ್ನೂ ಮಾಡಿದ.  

 

ತಸ್ಯಾಭಿಷೇಕಮಕರೋತ್ ಪ್ರಥಮಂ ಹಿ ಕೃಷ್ಣೋ ವಾಸಿಷ್ಠನನ್ದನ ಉರುರ್ಭವ ಚಕ್ರವರ್ತೀ ।

ಯಷ್ಟಾsಶ್ವಮೇಧನಿಖಿಲಾತ್ಮಕರಾಜಸೂಯಪೂರ್ವೈರ್ಮ್ಮಖೈಃ ಸತತಮೇವ ಚ ಧರ್ಮ್ಮಶೀಲಃ ॥೧೯.೨೧೦॥

 

ಮೊದಲು ವೇದವ್ಯಾಸರು ಧರ್ಮರಾಜನಿಗೆ ಅಭಿಷೇಕವನ್ನು ಮಾಡಿ, ‘ದೊಡ್ಡ ಚಕ್ರವರ್ತಿಯಾಗು. ಅಶ್ವಮೇಧದ ಸಮಸ್ತ ಸ್ವರೂಪಭೂತವಾದ ರಾಜಸೂಯ ಮೊದಲಾದ ಯಾಗಗಳಿಂದ ದೇವರನ್ನು ಪೂಜಿಸು. ಧರ್ಮಶೀಲನಾಗು’ ಎಂದು ಆಶೀರ್ವಾದ ಮಾಡಿದರು.

 

ಇತ್ಯೇವ ಪಾರ್ಷತಸುತಾಸಹಿತೇsಭಿಷಿಕ್ತೇ ಕೃಷ್ಣೋsಪಿ ವೃಷ್ಣಿವೃಷಭಃ ಸ ತಥಾsಭ್ಯಷಿಞ್ಚತ್ ।

ಏವಂ ಚ ಮಾರುತಿಶಿರಸ್ಯಭಿಷೇಕಮೇತೌ ಸಞ್ಚಕ್ರತುಃ ಸ್ಮ ಯುವರಾಜಪದೇ ಸಭಾರ್ಯ್ಯಮ್ ॥೧೯.೨೧೧॥

 

ಈರೀತಿಯಾಗಿ ದ್ರೌಪದಿಯಿಂದ ಕೂಡಿದ ಧರ್ಮರಾಜನು ಅಭಿಷಿಕ್ತನಾಗಲು, ತದನಂತರ ಯಾದವ ಕೃಷ್ಣನೂ ಕೂಡಾ ಅಭಿಷೇಕ ಮಾಡಿದನು. ಹಾಗೆಯೇ ದ್ರೌಪದಿಯೊಂದಿಗೆ ಭೀಮಸೇನನ ಶಿರಸ್ಸಿನಲ್ಲಿಯೂ ಕೂಡಾ ಇವರಿಬ್ಬರು(ಶ್ರೀಕೃಷ್ಣ ಮತ್ತು ವೇದವ್ಯಾಸರು) ಯುವರಾಜ ಪದವಿಯಲ್ಲಿ ಅಭಿಷೇಕ ಮಾಡಿದರು.

 

ಭೀಮೇ ಚ ಪಾರ್ಷತಸುತಾಸಹಿತೇsಭಿಷಿಕ್ತೇ ತಾಭ್ಯಾಮನನ್ತಸುಖಶಕ್ತಿಚಿದಾತ್ಮಕಾಭ್ಯಾಮ್ ।

ಅನ್ಯೈಶ್ಚ ವಿಪ್ರವೃಷಭೈಃ ಸುಕೃತೇಭಿಷೇಕೇ ಧರ್ಮ್ಮಾತ್ಮಜಾನು ಮುಮುದುರ್ನ್ನಿಖಿಲಾಶ್ಚ ಸನ್ತಃ ॥೧೯.೨೧೨॥

 

ಧರ್ಮರಾಜನ ರಾಜ್ಯಾಭಿಷೇಕ, ಜೊತೆಗೆ ದ್ರೌಪದಿಯಿಂದ ಕೂಡಿಕೊಂಡ ಭೀಮಸೇನನೂ  ಅನಂತ ಗುಣಶಕ್ತಿಜ್ಞಾನವುಳ್ಳ ಅವರಿಬ್ಬರಿಂದ ಅಭಿಷೇಕಕ್ಕೆ ಒಳಗಾಗಲು, ಉಳಿದ ಶ್ರೇಷ್ಠ ಬ್ರಾಹ್ಮಣರಿಂದಲೂ ಕೂಡಾ ಅಭಿಷೇಕವು ಚನ್ನಾಗಿ ಜರುಗಲು, ಎಲ್ಲಾ ಸಜ್ಜನರೂ ಕೂಡಾ ಸಂತಸಪಟ್ಟರು.

 

ತಸ್ಮಿನ್ ಮಹೋತ್ಸವವರೇ ದಿನಸಪ್ತಕಾನುವೃತ್ತೇ ವಸಿಷ್ಠವೃಷಭೇಣ ಚ ವೃಷ್ಣಿಪೇನ ।

ಕೃಷ್ಣೇನ ತೇ ಯಯುರಮಾ ಪೃಥಯಾ ತಯಾ ಚ ಪಾಞ್ಚಾಲರಾಜಸುತಯಾ ಸ್ಥಲಮಿನ್ದ್ರವಾಸಮ್ ॥೧೯.೨೧೩॥

 

ಏಳು ದಿನ ನಿರಂತರವಾಗಿ ನಡೆದ ಆ ಶ್ರೇಷ್ಠವಾದ ಮಹೋತ್ಸವದ ನಂತರ,  ವೇದವ್ಯಾಸರು ಮತ್ತು ಶ್ರೀಕೃಷ್ಣನ ಜೊತೆಗೇ, ಕುಂತಿದೇವಿಯಿಂದಲೂ, ದ್ರೌಪದಿಯಿಂದಲೂ ಕೂಡಾ ಕೂಡಿಕೊಂಡ ಪಾಂಡವರು  ಇಂದ್ರಪ್ರಸ್ಥಕ್ಕೆ ತೆರಳಿದರು.

Mahabharata Tatparya Nirnaya Kannada 19201_19205

 

ಉದ್ವಾಹ್ಯ ಕಾಶಿತನಯಾಂ ಗಿರಿಜಾಧಿವಿಷ್ಟಾಂ ಸಾಕ್ಷಾನ್ನರೇಷು ಜನಿತಾಂ ಪ್ರಥಮಾಮಲಕ್ಷ್ಮೀಮ್ ।

ತಸ್ಯಾಂ ಸುತಂ ತ್ವಜನಯತ್ ಪುರ ಆಸ ಯೋsಕ್ಷಃ ಕನ್ಯಾಂ ಪುರಾ ಪ್ರಿಯತಮಾಂ ಚ ಷಡಾನನಸ್ಯ ॥೧೯.೨೦೧॥

 

ಪಾರ್ವತಿಯಿಂದ ಆವಿಷ್ಟಳಾದ, ಮನುಷ್ಯರಲ್ಲಿ ಹುಟ್ಟಿದ, ಜ್ಯೇಷ್ಠ ಅಲಕ್ಷ್ಮಿಯಾಗಿರುವ ಕಾಶಿರಾಜನ ಮಗಳನ್ನು ಮದುವೆಯಾದ ದುರ್ಯೋಧನ, ಅವಳಲ್ಲಿ ಪೂರ್ವದಲ್ಲಿ ಯಾರು ‘ಅಕ್ಷಕುಮಾರ’ ಎಂಬ ಹೆಸರಿನಿಂದ ಕರೆಯಲ್ಪಪಟ್ಟಿದ್ದನೋ, (ರಾಮಾಯಣದಲ್ಲಿ ಹನುಮಂತನಿಂದ ಕೊಲ್ಲಲ್ಪಟ್ಟ ಅಕ್ಷಕುಮಾರ) ಅವನನ್ನೇ ಮಗನಾಗಿಯೂ ಮತ್ತು ಹಿಂದೆ ಯಾರು ಸ್ಕಂದನ(ಷಡಾನನ/ಷಣ್ಮುಖನ) ಪ್ರಿಯೆಯಾಗಿದ್ದಳೋ, ಅವಳನ್ನು ಮಗಳಾಗಿಯೂ ಪಡೆದನು.

 

ಪುತ್ರೋ ಬಭೂವ ಸ ತು ಲಕ್ಷಣನಾಮಧೇಯಃ ಸಾ ಲಕ್ಷಣೇತ್ಯಧಿಕರೂಪಗುಣಾssಸ ಕನ್ಯಾ ।

ತಸ್ಯಾನುಜಾಶ್ಚ ನಿಜಯೋಗ್ಯಗುಣಾ ಅವಾಪುರ್ಭಾರ್ಯ್ಯಾಃ ಪುನಶ್ಚ ಸ ಸುಯೋಧನ ಆಪ ಭಾರ್ಯ್ಯಾಃ ॥೧೯.೨೦೨॥

 

ಆ ಮಗನಾದರೋ ‘ಲಕ್ಷಣ’ ಎಂಬ ಹೆಸರುಳ್ಳವನಾದನು. ಆತ್ಯಂತಿಕ ಗುಣ-ರೂಪವನ್ನು ಹೊಂದಿದ ಆ ಕನ್ಯೆಯು ‘ಲಕ್ಷಣಾ’ ಎಂಬ ಹೆಸರುಳ್ಳವಳಾದಳು. ದುರ್ಯೋಧನನ ಉಳಿದ ತಮ್ಮಂದಿರೂ ಕೂಡಾ ತಮಗೆ ಯೋಗ್ಯವಾದ ಗುಣವುಳ್ಳ ಹೆಂಡಂದಿರನ್ನು ಹೊಂದಿದರು. ದುರ್ಯೋಧನನು ಇನ್ನೂ ಹಲವಾರು ಜನ ಹೆಂಡತಿಯರನ್ನು ಹೊಂದಿದನು.

 

ಪೂರ್ವಂ ಸುರಾನ್ತಕ ಇತಿ ಪ್ರಥಿತಃ ಸುತೋsಭೂದ್ ದುಃಶಾಸನಸ್ಯ ತದನು ಪ್ರತಿತಪ್ಯಮಾನಾಃ ।

ದೃಷ್ಟ್ವೈವ ಪಾರ್ತ್ಥಬಲವೀರ್ಯ್ಯಗುಣಾನ್ ಸಮೃದ್ಧಿಂ ತಾಂ ಚೈವ ತೇ ಪ್ರತಿ ಯಯುಃ ಸ್ಮ ಕಲಿಙ್ಗದೇಶಮ್ ॥೧೯.೨೦೩॥

 

ಹಿಂದೆ ಸುರಾನ್ತಕ ಎಂದು ಪ್ರಸಿದ್ಧನಾದ ರಾಕ್ಷಸ ದುಃಶಾಸನನ ಮಗನಾಗಿ ಹುಟ್ಟಿದನು. ಹೀಗಿರಲು,  ದ್ರೌಪದಿಯ ಮದುವೆಯಾದ ಮೇಲೆ, ಪಾಂಡವರ ಬಲ-ವೀರ್ಯ ಗುಣಾದಿಗಳನ್ನು, ಅವರ ಸಂಪತ್ತು ಸಮೃದ್ಧಿಗಳನ್ನು ಕಂಡೇ, ಹೊಟ್ಟೆಕಿಚ್ಚು ಪಡುತ್ತಾ,  ದುರ್ಯೋಧನಾದಿಗಳು ಕಲಿಙ್ಗದೇಶದತ್ತ ತೆರಳಿದರು.

 

ಆಸೀತ್ ಸ್ವಯಮ್ಬರ ಉತಾತ್ರ ಕಲಿಙ್ಗರಾಜಪುತ್ರ್ಯಾಃ ಸುವಜ್ರ ಇತಿ ಯಂ ಪ್ರವದನ್ತಿ ಭೂಪಾಃ ।

ರೌದ್ರಾದ್ ವರಾದವಿಜಿತಸ್ಯ ಚ ತಸ್ಯ ಕನ್ಯಾಂ ದೃಪ್ತೋ ಬಲಾತ್ ಸ ಜಗೃಹೇ ಧೃತರಾಷ್ಟ್ರಸೂನುಃ ॥೧೯.೨೦೪॥

 

ಕಲಿಙ್ಗದೇಶದಲ್ಲಿ  ರಾಜನ ಮಗಳ ಸ್ವಯಮ್ಬರವು ನಡೆದಿತ್ತು. ರುದ್ರದೇವರ ವರದಿಂದ ಸೋಲಿಲ್ಲದ ಯಾವ ಕಲಿಙ್ಗದೇಶದ ರಾಜನನ್ನು ಅರಸರು  ‘ಸುವಜ್ರ’ ಎಂದು ಹೇಳುತ್ತಿದ್ದರೋ,  ಅವನ ಕನ್ಯೆಯನ್ನು ದರ್ಪಿಷ್ಠನಾಗಿ, ಬಲಾತ್ಕಾರದಿಂದ ದುರ್ಯೋಧನ ಅಪಹರಿಸಿದ.

 

ತತ್ರಾಥ ರುದ್ರವರತಃ ಸ ಜರಾಸುತೇನ ಯುಕ್ತೋ ಬಬನ್ಧ ಚ ಸುಯೋಧನಮಾಶು ಜಿತ್ವಾ ।

ಕರ್ಣ್ಣಃ ಪರಾದ್ರವದಿಹ ಸ್ಮ ಸುತೇಷು ಪಾಣ್ಡೋರ್ಯ್ಯಸ್ಮಾತ್ ಸ್ಪೃಧಾsಗಮದತಃ ಸ ಪರಾಜಿತೋsಭೂತ್ ॥೧೯.೨೦೫॥

 

ಅಲ್ಲಿ ಜರಾಸಂಧನಿಂದಲೂ ಕೂಡಿದ ಸುವಜ್ರನು, ರುದ್ರದೇವರ ವರಬಲದಿಂದ,   ದುರ್ಯೋಧನನನ್ನು ಕೂಡಲೇ ಸೋಲಿಸಿ ಕಟ್ಟಿಹಾಕಿದನು. ಕರ್ಣನು ಯುದ್ಧರಂಗದಿಂದ ಪಲಾಯನ ಮಾಡಿದನು. ಯಾವಕಾರಣದಿಂದ ಪಾಂಡುವಿನ ಮಕ್ಕಳಾದ ಯುಧಿಷ್ಠಿರಾದಿಗಳಲ್ಲಿ ಸ್ಪರ್ಧೆಯಿಂದ^ ಕರ್ಣನು ಯುದ್ಧಕ್ಕೆ ಬಂದಿದ್ದನೋ, ಆಕಾರಣದಿಂದಲೇ ಅವನು  ಪರಾಜಿತನಾದನು.

[^ಸ್ಪರ್ಧಾ ಮನೋಭಾವ ಇಲ್ಲದೇ ಯುದ್ಧ ಮಾಡಿದರೆ ಮಾತ್ರ ಗೆಲ್ಲುವೆ ಎನ್ನುವ ಪರಶುರಾಮನ ವಾಕ್ಯವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು]