ಕೋಶಸ್ಯ ಚಾರ್ದ್ಧಸಹಿತಾಸ್ತು ಯದೈವ ಪಾರ್ತ್ಥಾ ಗಚ್ಛನ್ತಿ ತಾನನುಯಯುರ್ನ್ನಿಖಿಲಾಶ್ಚ ಪೌರಾಃ ।
ಊಚುಶ್ಚ ಹಾ ಬತ ಸುಯೋಧನ ಏಷ ಪಾಪೋ ದೂರೇ ಚಕಾರ ನನು
ಪಾಣ್ಡುಸುತಾನ್ ಗುಣಾಢ್ಯಾನ್॥೧೯.೨೧೪॥
ಕೋಶದ ಅರ್ಧದಿಂದ ಕೂಡಿರುವ ಪಾಂಡವರು ಯಾವಾಗ ತೆರಳುತ್ತಿದ್ದರೋ,
ಆಗ ಅವರನ್ನು ಎಲ್ಲಾ ಪ್ರಜೆಗಳೂ ಕೂಡಾ ಅನುಸರಿಸಿದರು ಮತ್ತು ಹೇಳಿದರೂ ಕೂಡಾ. ‘ಅಯ್ಯೋ, ಈ ಪಾಪಿಷ್ಠನಾಗಿರುವ
ಸುಯೋಧನನು ಸದ್ಗುಣಸಂಪನ್ನರಾದ ಪಾಂಡವರನ್ನು ದೂರಮಾಡಿದನಲ್ಲಾ.
ಭೀಮಪ್ರತಾಪಮವಲಮ್ಬ್ಯ ಕಲಿಙ್ಗಬನ್ಧಾನ್ಮುಕ್ತಃ ಸುತಾಮಪಿ ಹಿ
ತಸ್ಯ ಪುರಂ ನಿನಾಯ ।
ದ್ವೇಷ್ಟ್ಯೇವಮಪ್ಯತಿಬಲಾನ್ ಹಿ ಸದೈವ ಪಾರ್ತ್ಥಾನ್ ಯಾಮೋ ವಯಂ
ಗುಣಿಭಿರದ್ಯ ಸಹೈವ ಪಾರ್ತ್ಥೈಃ ॥೧೯.೨೧೫॥
ಭೀಮನ ಪರಾಕ್ರಮವನ್ನು ಆಶ್ರಯಿಸಿ ಕಲಿಙ್ಗಬಂಧದಿಂದ ಮುಕ್ತನಾಗಿ,
ಅವನ ಮಗಳನ್ನೂ ಕೂಡಾ ಮನೆಗೆ ತಂದ. (ಅಪಮಾನದಿಂದ ಬಿಡಿಸಿದ್ದಲ್ಲದೇ, ಆ ಹುಡುಗಿಯೊಂದಿಗೆ
ಮದುವೆಯಾಗಲೂ ಭೀಮ ಕಾರಣನಾದ) ಆದರೂ ಕೂಡಾ ಅತ್ಯಂತ ಬಲವುಳ್ಳ ಪಾಂಡವರನ್ನು ಈ ದುರ್ಯೋಧನ ಸದಾ ದ್ವೇಷಮಾಡುತ್ತಾನೆ.
ನಾವು ಗುಣವಂತರಾಗಿರುವ ಪಾಂಡವರೊಂದಿಗೆ ಕೂಡಿಕೊಂಡು ಹೊರಡೋಣ’ ಎಂದು ಜನರೆಲ್ಲಾ
ಮಾತನಾಡಿಕೊಳ್ಳುತ್ತಿದ್ದರು.
ಆಜ್ಞಾಪಯತ್ಯಪಿ ಸ ಭೇರಿರವೇಣ ಪಾರ್ತ್ಥಾನ್ ನೈವಾನುಗಚ್ಛತ ಯದಿ
ವ್ರಜಥಾನು ವೋsದ್ಯ ।
ವಿತ್ತಂ ಹರಿಷ್ಯ ಇಹ ಸರ್ವಮಪೀತಿ ತಚ್ಚ ಪಾಪಃ ಕರೋತು ನ ವಯಂ
ವಿಜಹಾಮ ಪಾರ್ತ್ಥಾನ್॥೧೯.೨೧೬॥
ಪಾಂಡವರೊಂದಿಗೆ ಜನರೂ ಹೊರಡುತ್ತಿದ್ದಾರೆ ಎನ್ನುವ
ಸಮಾಚಾರವನ್ನು ಕೇಳಿ ತಿಳಿದ ದುರ್ಯೋಧನ, ಡಂಗುರ ಹೊಡೆಸಿ ಈರೀತಿ ಆಜ್ಞೆಮಾಡಿದ: ‘ಪಾಂಡವರನ್ನು ಅನುಸರಿಸಬೇಡಿ. ಒಂದುವೇಳೆ ನೀವು ಅವರನ್ನು
ಹೊಂದಿದಿರಾದರೆ, ನಿಮ್ಮೆಲ್ಲಾ ಆಸ್ತಿಯನ್ನು ಕಳೆದುಕೊಳ್ಳುತ್ತೀರಿ’ ಎಂದು. ಆದರೆ ಜನರು ಅದನ್ನು
ಲೆಕ್ಕಿಸದೇ, ‘ಪಾಪಿಷ್ಠನಾದ ಅವನು ಮಾಡಲಿ, ನಾವು
ಪಾಂಡವರನ್ನು ಬಿಡುವುದಿಲ್ಲಾ’ ಎಂದರು.
ಸದ್ಭಿರ್ಹಿ ಸಙ್ಗತಿರಿಹೈವ ಸುಖಸ್ಯ ಹೇತುರ್ಮ್ಮೋಕ್ಷ್ಯೈಕಹೇತುರಥ
ತದ್ವಿಪರೀತಮನ್ಯತ್ ।
ತಸ್ಮಾದ್ ವ್ರಜೇಮ ಸಹ ಪಾಣ್ಡುಸುತೈರ್ಹಿ ಶಕ್ರಪ್ರಸ್ಥಂ ತ್ವಿತಿ
ಸ್ಮ ಧೃತಚೇತಸ ಆಹ ಧಾರ್ಮ್ಮಃ ॥೧೯.೨೧೭॥
‘ಸಜ್ಜನರ ಸಹವಾಸವು ಇಲ್ಲಿ ಸುಖಕ್ಕೆ ಮುಖ್ಯ ಕಾರಣವು ಹಾಗೂ ಮೋಕ್ಷಕ್ಕೂ
ಕಾರಣ ಕೂಡಾ. ಇದಕ್ಕಿಂತ ಬೇರೆಯಾದ ದುರ್ಜನ ಸಂಗ ಅದಕ್ಕೆ ವಿರುದ್ಧವಾದುದು(ಇಲ್ಲಿಯೂ ದುಃಖಕ್ಕೆ
ಕಾರಣ, ಅಲ್ಲಿಯೂ ದುಃಖಕ್ಕೆ ಕಾರಣವಾದುದು).
ಆಕಾರಣದಿಂದ ಪಾಂಡವರ ಜೊತೆಗೆ ಇಂದ್ರಪ್ರಸ್ಥಕ್ಕೆ ಹೋಗೋಣ ಎಂದು ಗಟ್ಟಿಯಾಗಿ ನಿರ್ಧಾರಮಾಡಿದ ಪ್ರಜೆಗಳನ್ನುದ್ದೇಶಿಸಿ
ಯಮಧರ್ಮನ ಮಗನಾದ ಯುಧಿಷ್ಠಿರ ಮಾತನಾಡಿದನು:
ಪ್ರೀತಿರ್ಯ್ಯದಿ ಸ್ಮ ಭವತಾಂ ಮಯಿ ಸಾನುಜೇsಸ್ತಿ ತಿಷ್ಠಧ್ವಮತ್ರ ಪಿತುರೇವ ಹಿ ಶಾಸನೇ ಮೇ ।
ಕೀರ್ತ್ತಿರ್ಹಿ ವೋsನುಗಮನಾತ್ ಪಿತುರತ್ಯಯೇನ ನಶ್ಯೇನ್ನ ಇತ್ಯನುಸರಧ್ವಮಿಹಾsಮ್ಬಿಕೇಯಮ್ ॥೧೯.೨೧೮॥
‘ಒಂದುವೇಳೆ ನಿಮಗೆಲ್ಲರಿಗೂ ನಮ್ಮೆಲ್ಲರಲ್ಲಿ ಪ್ರೀತಿ
ಇದ್ದದ್ದಾದರೆ, ಇಲ್ಲಿ ನನ್ನ ದೊಡ್ಡಪ್ಪನ ಆಳ್ವಿಕೆಯಲ್ಲಿಯೇ ಇರಿ. ನಿಮ್ಮ ಅನುಸರಣೆಯಿಂದ
ಧೃತರಾಷ್ಟ್ರನ ಕೀರ್ತಿನಾಶವಾಗುತ್ತದೆ. ಈರೀತಿಯಾಗಿ ಚಿಂತಿಸಿ, ಧೃತರಾಷ್ಟ್ರನನ್ನೇ ರಾಜನನ್ನಾಗಿ ಒಪ್ಪಿಕೊಳ್ಳಿ, ಅವನ ಆಳ್ವಿಕೆಯಲ್ಲಿಯೇ ಇರಿ’.
ಇತ್ಯೇವ ತೈಃ ಪುರಜನಾ ನಿಖಿಲೈರ್ನ್ನಿಷಿದ್ಧಾಃ ಕೃಚ್ಛ್ರೇಣ
ತಸ್ಥುರಪಿ ತಾನ್ ಮನಸಾsನ್ವಗಚ್ಛನ್ ।
ಪ್ರಾಪ್ಯಾಥ ಶಕ್ರಪುರಮಸ್ಮರತಾಂ ಚ ಕೃಷ್ಣೌ ದೇವೇಶವರ್ದ್ದಕಿಮಥಾsಗಮದತ್ರ ಸೋsಪಿ ॥೧೯.೨೧೯॥
ಈರೀತಿಯಾಗಿ ಯುಧಿಷ್ಠಿರನಿಂದ ಹೇಳಲ್ಪಟ್ಟು, ತಡೆಯಲ್ಪಟ್ಟವರಾದ
ಜನರು ಅಲ್ಲೇ ನಿಂತರೂ, ಪಾಂಡವರನ್ನು ಮನಸ್ಸಿನಿಂದ ಅನುಸರಿಸಿದರು. ತದನಂತರ ಪಾಂಡವರು ಖಾಣ್ಡವಪ್ರಸ್ಥವನ್ನು ಹೊಂದಿದರು. ಅಲ್ಲಿ ವಾಸಿಷ್ಠಯಾದವ
ಕೃಷ್ಣರು ದೇವತೆಗಳ ಬಡಗಿಯಾದ ವಿಶ್ವಕರ್ಮನನ್ನು
ನೆನಪಿಸಿಕೊಂಡಾಗ ಅವನು ಅಲ್ಲಿಗೆ ಬಂದ.
No comments:
Post a Comment