ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 18, 2020

Mahabharata Tatparya Nirnaya Kannada 19206_19213

 

ದುರ್ಯ್ಯೋಧನೇsನುಜಜನೈಃ ಸಹ ತೈರ್ಗ್ಗೃಹೀತೇ ಭೀಷ್ಮಾಮ್ಬಿಕೇಯವಿದುರಾಗ್ರಜವಾಕ್ಯನುನ್ನಃ ।

ಭೀಮೋ ವಿಜಿತ್ಯ ನೃಪತೀನ್ ಸಜರಾಸುತಾಂಸ್ತಾನ್ ಹತ್ವಾ ಸುವಜ್ರಮಮುಚದ್ ಧೃತರಾಷ್ಟ್ರಪುತ್ರಾನ್॥೧೯.೨೦೬॥

 

ತಮ್ಮಂದಿರಿಂದ ಕೂಡಿಕೊಂಡು ದುರ್ಯೋಧನನು ಅವರಿಂದ ಸೆರೆಹಿಡಿಯಲ್ಪಡಲು, ಭೀಷ್ಮ, ಧೃತರಾಷ್ಟ್ರ, ವಿದುರ ಮತ್ತು ಧರ್ಮರಾಜ ಇವರ ವಾಕ್ಯದಿಂದ ಪ್ರೇರಿತನಾಗಿ ಭೀಮಸೇನನು ಜರಾಸಂಧನೇ ಮೊದಲಾಗಿರುವ ರಾಜರನ್ನು ಗೆದ್ದು, ಸುವಜ್ರನನ್ನು ಕೊಂದು ಧೃತರಾಷ್ಟ್ರನ ಪುತ್ರರನ್ನು ಬಿಡಿಸಿದನು.   

 

ತೇsಪಿ ಸ್ಮ ಕರ್ಣ್ಣಸಹಿತಾ ಮೃತಕಪ್ರತೀಕಾ ನಾಗಾಹ್ವಯಂ ಪುರಮಥಾsಯಯುರಪ್ಯಮೀಷಾಮ್ ।

ದೃಷ್ಟ್ವಾ ವಿರೋಧಮವದನ್ನೃಪತಿಶ್ಚ ಧರ್ಮ್ಮಪುತ್ರಂ ಪುರನ್ದರಕೃತಸ್ಥಲಮಾಶು ಯಾಹಿ ॥೧೯.೨೦೭॥

 

ಕರ್ಣನಿಂದ ಕೂಡಿರುವ ದುರ್ಯೋಧನಾದಿಗಳು ಸತ್ತ ಮೋರೆಯೊಂದಿಗೆ ಹಸ್ತಿನಾವತಿ ಪಟ್ಟಣವನ್ನು ಸೇರಿದರು. ಹೀಗಿದ್ದರೂ ಕೂಡಾ, ದುರ್ಯೋಧನನು ಪಾಂಡವರಿಗೆ ಸಲ್ಲಿಸುತ್ತಿರುವ ತೀವ್ರ ವಿರೋಧವನ್ನು ಕಂಡು, ಧೃತರಾಷ್ಟ್ರನು ಧರ್ಮಪುತ್ರನಿಗೆ  ‘ನೀನು ಇಂದ್ರಪ್ರಸ್ಥಕ್ಕೆ ಬೇಗ ಹೋಗು’ ಎಂದು ಹೇಳಿದನು.

 

ತತ್ರಾರ್ದ್ಧರಾಜ್ಯಮನುಭುಙ್ಕ್ಷ್ವಸಹಾನುಜೈಸ್ತ್ವಂ ಕೋಶಾರ್ದ್ಧಮೇವ ಚ ಗೃಹಾಣ ಪುರಾ ಹಿ ಶಕ್ರಃ ।

ತತ್ರಾಭಿಷಿಕ್ತ ಉತ ಕಞ್ಜಭವಾದಿದೇವೈಸ್ತತ್ರಸ್ಥ ಏವ ಸ ಚಕಾರ ಚಿರಂ ಚ ರಾಜ್ಯಮ್ ॥೧೯.೨೦೮॥

 

‘ಅಲ್ಲಿ ನಿನ್ನ ತಮ್ಮಂದಿರಿಂದ ಕೂಡಿಕೊಂಡು ಅರ್ಧರಾಜ್ಯವನ್ನನುಭವಿಸು. ಅರ್ಧಕೋಶವನ್ನೂ ನೀನು ತೆಗೆದುಕೊಂಡು ಹೋಗು. ಹಿಂದೆ  ಶಕ್ರನು ಬ್ರಹ್ಮನೇ ಮೊದಲಾದ ದೇವತೆಗಳಿಂದ ಅಭಿಷಿಕ್ತನಾಗಿ, ಅಲ್ಲಿಯೇ ದೀರ್ಘಕಾಲ ರಾಜ್ಯವಾಳಿದ್ದನು.

 

ತ್ವಂ ವೀರ ಶಕ್ರಸಮ ಏವ ತತಸ್ತವೈವ ಯೋಗ್ಯಂ ಪುರಂ ತದತ ಆಶ್ವಭಿಷೇಚಯಾಮಿ ।

ಇತ್ಯುಕ್ತ ಆಹ ಸ ಯುಧಿಷ್ಠಿರ ಓಮಿತಿ ಸ್ಮ ಚಕ್ರೇsಭಿಷೇಕಮಪಿ ತಸ್ಯ ಸ ಆಮ್ಬಿಕೇಯಃ ॥೧೯.೨೦೯॥

 

ಓ ವೀರನೇ, ನೀನು ಇಂದ್ರನಿಗೆ ಸಮಾನನಾಗಿದ್ದೀಯ. ಆ ಕಾರಣದಿಂದ ಆ ಪಟ್ಟಣವು ನಿನಗೇ ಯೋಗ್ಯವಾದುದು. ಕೂಡಲೇ, ಇಲ್ಲೇ ನಾನು ನಿನಗೆ ಅಭಿಷೇಕ ಮಾಡುತ್ತೇನೆ’ ಎಂದು ಧೃತರಾಷ್ಟ್ರನು ಹೇಳಲು, ಯುಧಿಷ್ಠಿರನು ‘ಓಂ’ (ಆಯಿತು ) ಎಂದು ಹೇಳಿದ. ನಂತರ  ಅಂಬಿಕೆಯ ಮಗನಾದ ಧೃತರಾಷ್ಟ್ರನು ಅವನಿಗೆ ಪಟ್ಟಾಭಿಷೇಕವನ್ನೂ ಮಾಡಿದ.  

 

ತಸ್ಯಾಭಿಷೇಕಮಕರೋತ್ ಪ್ರಥಮಂ ಹಿ ಕೃಷ್ಣೋ ವಾಸಿಷ್ಠನನ್ದನ ಉರುರ್ಭವ ಚಕ್ರವರ್ತೀ ।

ಯಷ್ಟಾsಶ್ವಮೇಧನಿಖಿಲಾತ್ಮಕರಾಜಸೂಯಪೂರ್ವೈರ್ಮ್ಮಖೈಃ ಸತತಮೇವ ಚ ಧರ್ಮ್ಮಶೀಲಃ ॥೧೯.೨೧೦॥

 

ಮೊದಲು ವೇದವ್ಯಾಸರು ಧರ್ಮರಾಜನಿಗೆ ಅಭಿಷೇಕವನ್ನು ಮಾಡಿ, ‘ದೊಡ್ಡ ಚಕ್ರವರ್ತಿಯಾಗು. ಅಶ್ವಮೇಧದ ಸಮಸ್ತ ಸ್ವರೂಪಭೂತವಾದ ರಾಜಸೂಯ ಮೊದಲಾದ ಯಾಗಗಳಿಂದ ದೇವರನ್ನು ಪೂಜಿಸು. ಧರ್ಮಶೀಲನಾಗು’ ಎಂದು ಆಶೀರ್ವಾದ ಮಾಡಿದರು.

 

ಇತ್ಯೇವ ಪಾರ್ಷತಸುತಾಸಹಿತೇsಭಿಷಿಕ್ತೇ ಕೃಷ್ಣೋsಪಿ ವೃಷ್ಣಿವೃಷಭಃ ಸ ತಥಾsಭ್ಯಷಿಞ್ಚತ್ ।

ಏವಂ ಚ ಮಾರುತಿಶಿರಸ್ಯಭಿಷೇಕಮೇತೌ ಸಞ್ಚಕ್ರತುಃ ಸ್ಮ ಯುವರಾಜಪದೇ ಸಭಾರ್ಯ್ಯಮ್ ॥೧೯.೨೧೧॥

 

ಈರೀತಿಯಾಗಿ ದ್ರೌಪದಿಯಿಂದ ಕೂಡಿದ ಧರ್ಮರಾಜನು ಅಭಿಷಿಕ್ತನಾಗಲು, ತದನಂತರ ಯಾದವ ಕೃಷ್ಣನೂ ಕೂಡಾ ಅಭಿಷೇಕ ಮಾಡಿದನು. ಹಾಗೆಯೇ ದ್ರೌಪದಿಯೊಂದಿಗೆ ಭೀಮಸೇನನ ಶಿರಸ್ಸಿನಲ್ಲಿಯೂ ಕೂಡಾ ಇವರಿಬ್ಬರು(ಶ್ರೀಕೃಷ್ಣ ಮತ್ತು ವೇದವ್ಯಾಸರು) ಯುವರಾಜ ಪದವಿಯಲ್ಲಿ ಅಭಿಷೇಕ ಮಾಡಿದರು.

 

ಭೀಮೇ ಚ ಪಾರ್ಷತಸುತಾಸಹಿತೇsಭಿಷಿಕ್ತೇ ತಾಭ್ಯಾಮನನ್ತಸುಖಶಕ್ತಿಚಿದಾತ್ಮಕಾಭ್ಯಾಮ್ ।

ಅನ್ಯೈಶ್ಚ ವಿಪ್ರವೃಷಭೈಃ ಸುಕೃತೇಭಿಷೇಕೇ ಧರ್ಮ್ಮಾತ್ಮಜಾನು ಮುಮುದುರ್ನ್ನಿಖಿಲಾಶ್ಚ ಸನ್ತಃ ॥೧೯.೨೧೨॥

 

ಧರ್ಮರಾಜನ ರಾಜ್ಯಾಭಿಷೇಕ, ಜೊತೆಗೆ ದ್ರೌಪದಿಯಿಂದ ಕೂಡಿಕೊಂಡ ಭೀಮಸೇನನೂ  ಅನಂತ ಗುಣಶಕ್ತಿಜ್ಞಾನವುಳ್ಳ ಅವರಿಬ್ಬರಿಂದ ಅಭಿಷೇಕಕ್ಕೆ ಒಳಗಾಗಲು, ಉಳಿದ ಶ್ರೇಷ್ಠ ಬ್ರಾಹ್ಮಣರಿಂದಲೂ ಕೂಡಾ ಅಭಿಷೇಕವು ಚನ್ನಾಗಿ ಜರುಗಲು, ಎಲ್ಲಾ ಸಜ್ಜನರೂ ಕೂಡಾ ಸಂತಸಪಟ್ಟರು.

 

ತಸ್ಮಿನ್ ಮಹೋತ್ಸವವರೇ ದಿನಸಪ್ತಕಾನುವೃತ್ತೇ ವಸಿಷ್ಠವೃಷಭೇಣ ಚ ವೃಷ್ಣಿಪೇನ ।

ಕೃಷ್ಣೇನ ತೇ ಯಯುರಮಾ ಪೃಥಯಾ ತಯಾ ಚ ಪಾಞ್ಚಾಲರಾಜಸುತಯಾ ಸ್ಥಲಮಿನ್ದ್ರವಾಸಮ್ ॥೧೯.೨೧೩॥

 

ಏಳು ದಿನ ನಿರಂತರವಾಗಿ ನಡೆದ ಆ ಶ್ರೇಷ್ಠವಾದ ಮಹೋತ್ಸವದ ನಂತರ,  ವೇದವ್ಯಾಸರು ಮತ್ತು ಶ್ರೀಕೃಷ್ಣನ ಜೊತೆಗೇ, ಕುಂತಿದೇವಿಯಿಂದಲೂ, ದ್ರೌಪದಿಯಿಂದಲೂ ಕೂಡಾ ಕೂಡಿಕೊಂಡ ಪಾಂಡವರು  ಇಂದ್ರಪ್ರಸ್ಥಕ್ಕೆ ತೆರಳಿದರು.

No comments:

Post a Comment