ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 18, 2020

Mahabharata Tatparya Nirnaya Kannada 19201_19205

 

ಉದ್ವಾಹ್ಯ ಕಾಶಿತನಯಾಂ ಗಿರಿಜಾಧಿವಿಷ್ಟಾಂ ಸಾಕ್ಷಾನ್ನರೇಷು ಜನಿತಾಂ ಪ್ರಥಮಾಮಲಕ್ಷ್ಮೀಮ್ ।

ತಸ್ಯಾಂ ಸುತಂ ತ್ವಜನಯತ್ ಪುರ ಆಸ ಯೋsಕ್ಷಃ ಕನ್ಯಾಂ ಪುರಾ ಪ್ರಿಯತಮಾಂ ಚ ಷಡಾನನಸ್ಯ ॥೧೯.೨೦೧॥

 

ಪಾರ್ವತಿಯಿಂದ ಆವಿಷ್ಟಳಾದ, ಮನುಷ್ಯರಲ್ಲಿ ಹುಟ್ಟಿದ, ಜ್ಯೇಷ್ಠ ಅಲಕ್ಷ್ಮಿಯಾಗಿರುವ ಕಾಶಿರಾಜನ ಮಗಳನ್ನು ಮದುವೆಯಾದ ದುರ್ಯೋಧನ, ಅವಳಲ್ಲಿ ಪೂರ್ವದಲ್ಲಿ ಯಾರು ‘ಅಕ್ಷಕುಮಾರ’ ಎಂಬ ಹೆಸರಿನಿಂದ ಕರೆಯಲ್ಪಪಟ್ಟಿದ್ದನೋ, (ರಾಮಾಯಣದಲ್ಲಿ ಹನುಮಂತನಿಂದ ಕೊಲ್ಲಲ್ಪಟ್ಟ ಅಕ್ಷಕುಮಾರ) ಅವನನ್ನೇ ಮಗನಾಗಿಯೂ ಮತ್ತು ಹಿಂದೆ ಯಾರು ಸ್ಕಂದನ(ಷಡಾನನ/ಷಣ್ಮುಖನ) ಪ್ರಿಯೆಯಾಗಿದ್ದಳೋ, ಅವಳನ್ನು ಮಗಳಾಗಿಯೂ ಪಡೆದನು.

 

ಪುತ್ರೋ ಬಭೂವ ಸ ತು ಲಕ್ಷಣನಾಮಧೇಯಃ ಸಾ ಲಕ್ಷಣೇತ್ಯಧಿಕರೂಪಗುಣಾssಸ ಕನ್ಯಾ ।

ತಸ್ಯಾನುಜಾಶ್ಚ ನಿಜಯೋಗ್ಯಗುಣಾ ಅವಾಪುರ್ಭಾರ್ಯ್ಯಾಃ ಪುನಶ್ಚ ಸ ಸುಯೋಧನ ಆಪ ಭಾರ್ಯ್ಯಾಃ ॥೧೯.೨೦೨॥

 

ಆ ಮಗನಾದರೋ ‘ಲಕ್ಷಣ’ ಎಂಬ ಹೆಸರುಳ್ಳವನಾದನು. ಆತ್ಯಂತಿಕ ಗುಣ-ರೂಪವನ್ನು ಹೊಂದಿದ ಆ ಕನ್ಯೆಯು ‘ಲಕ್ಷಣಾ’ ಎಂಬ ಹೆಸರುಳ್ಳವಳಾದಳು. ದುರ್ಯೋಧನನ ಉಳಿದ ತಮ್ಮಂದಿರೂ ಕೂಡಾ ತಮಗೆ ಯೋಗ್ಯವಾದ ಗುಣವುಳ್ಳ ಹೆಂಡಂದಿರನ್ನು ಹೊಂದಿದರು. ದುರ್ಯೋಧನನು ಇನ್ನೂ ಹಲವಾರು ಜನ ಹೆಂಡತಿಯರನ್ನು ಹೊಂದಿದನು.

 

ಪೂರ್ವಂ ಸುರಾನ್ತಕ ಇತಿ ಪ್ರಥಿತಃ ಸುತೋsಭೂದ್ ದುಃಶಾಸನಸ್ಯ ತದನು ಪ್ರತಿತಪ್ಯಮಾನಾಃ ।

ದೃಷ್ಟ್ವೈವ ಪಾರ್ತ್ಥಬಲವೀರ್ಯ್ಯಗುಣಾನ್ ಸಮೃದ್ಧಿಂ ತಾಂ ಚೈವ ತೇ ಪ್ರತಿ ಯಯುಃ ಸ್ಮ ಕಲಿಙ್ಗದೇಶಮ್ ॥೧೯.೨೦೩॥

 

ಹಿಂದೆ ಸುರಾನ್ತಕ ಎಂದು ಪ್ರಸಿದ್ಧನಾದ ರಾಕ್ಷಸ ದುಃಶಾಸನನ ಮಗನಾಗಿ ಹುಟ್ಟಿದನು. ಹೀಗಿರಲು,  ದ್ರೌಪದಿಯ ಮದುವೆಯಾದ ಮೇಲೆ, ಪಾಂಡವರ ಬಲ-ವೀರ್ಯ ಗುಣಾದಿಗಳನ್ನು, ಅವರ ಸಂಪತ್ತು ಸಮೃದ್ಧಿಗಳನ್ನು ಕಂಡೇ, ಹೊಟ್ಟೆಕಿಚ್ಚು ಪಡುತ್ತಾ,  ದುರ್ಯೋಧನಾದಿಗಳು ಕಲಿಙ್ಗದೇಶದತ್ತ ತೆರಳಿದರು.

 

ಆಸೀತ್ ಸ್ವಯಮ್ಬರ ಉತಾತ್ರ ಕಲಿಙ್ಗರಾಜಪುತ್ರ್ಯಾಃ ಸುವಜ್ರ ಇತಿ ಯಂ ಪ್ರವದನ್ತಿ ಭೂಪಾಃ ।

ರೌದ್ರಾದ್ ವರಾದವಿಜಿತಸ್ಯ ಚ ತಸ್ಯ ಕನ್ಯಾಂ ದೃಪ್ತೋ ಬಲಾತ್ ಸ ಜಗೃಹೇ ಧೃತರಾಷ್ಟ್ರಸೂನುಃ ॥೧೯.೨೦೪॥

 

ಕಲಿಙ್ಗದೇಶದಲ್ಲಿ  ರಾಜನ ಮಗಳ ಸ್ವಯಮ್ಬರವು ನಡೆದಿತ್ತು. ರುದ್ರದೇವರ ವರದಿಂದ ಸೋಲಿಲ್ಲದ ಯಾವ ಕಲಿಙ್ಗದೇಶದ ರಾಜನನ್ನು ಅರಸರು  ‘ಸುವಜ್ರ’ ಎಂದು ಹೇಳುತ್ತಿದ್ದರೋ,  ಅವನ ಕನ್ಯೆಯನ್ನು ದರ್ಪಿಷ್ಠನಾಗಿ, ಬಲಾತ್ಕಾರದಿಂದ ದುರ್ಯೋಧನ ಅಪಹರಿಸಿದ.

 

ತತ್ರಾಥ ರುದ್ರವರತಃ ಸ ಜರಾಸುತೇನ ಯುಕ್ತೋ ಬಬನ್ಧ ಚ ಸುಯೋಧನಮಾಶು ಜಿತ್ವಾ ।

ಕರ್ಣ್ಣಃ ಪರಾದ್ರವದಿಹ ಸ್ಮ ಸುತೇಷು ಪಾಣ್ಡೋರ್ಯ್ಯಸ್ಮಾತ್ ಸ್ಪೃಧಾsಗಮದತಃ ಸ ಪರಾಜಿತೋsಭೂತ್ ॥೧೯.೨೦೫॥

 

ಅಲ್ಲಿ ಜರಾಸಂಧನಿಂದಲೂ ಕೂಡಿದ ಸುವಜ್ರನು, ರುದ್ರದೇವರ ವರಬಲದಿಂದ,   ದುರ್ಯೋಧನನನ್ನು ಕೂಡಲೇ ಸೋಲಿಸಿ ಕಟ್ಟಿಹಾಕಿದನು. ಕರ್ಣನು ಯುದ್ಧರಂಗದಿಂದ ಪಲಾಯನ ಮಾಡಿದನು. ಯಾವಕಾರಣದಿಂದ ಪಾಂಡುವಿನ ಮಕ್ಕಳಾದ ಯುಧಿಷ್ಠಿರಾದಿಗಳಲ್ಲಿ ಸ್ಪರ್ಧೆಯಿಂದ^ ಕರ್ಣನು ಯುದ್ಧಕ್ಕೆ ಬಂದಿದ್ದನೋ, ಆಕಾರಣದಿಂದಲೇ ಅವನು  ಪರಾಜಿತನಾದನು.

[^ಸ್ಪರ್ಧಾ ಮನೋಭಾವ ಇಲ್ಲದೇ ಯುದ್ಧ ಮಾಡಿದರೆ ಮಾತ್ರ ಗೆಲ್ಲುವೆ ಎನ್ನುವ ಪರಶುರಾಮನ ವಾಕ್ಯವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು]

No comments:

Post a Comment