ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 5, 2020

Mahabharata Tatparya Nirnaya Kannada 2033_2036

 

ಅವಿಶ್ವಾಸಾತ್ ಸ ತು ಸಕ್ರೋಧ ಏವ ಯಯೌ ವಿದೇಹಾನವಸತ್ ಪಞ್ಚ ಚಾಬ್ದಾನ್ ।

ಜಾನನ್ ಪಾರ್ತ್ಥೇಭ್ಯೋsಹಾರ್ಯ್ಯತಾಂ ಕೇಶವಸ್ಯ ವಶೀಕರ್ತ್ತುಂ ಧಾರ್ತ್ತರಾಷ್ಟ್ರೋ ಬಲಂ ಗಾತ್ ॥೨೦.೩೩॥

 

ಮಣಿ ಇಲ್ಲವೆಂದ ಶ್ರೀಕೃಷ್ಣನಲ್ಲಿ ವಿಶ್ವಾಸವಿಡದೇ ಬಲರಾಮನು, ಮುನಿಸಿಕೊಂಡು ವಿದೇಹಕ್ಕೆ(ಇಂದಿನ ನೇಪಾಳಕ್ಕೆ) ತೆರಳಿದನು. ಅಲ್ಲಿ ಅವನು ಐದು ವರ್ಷಗಳ ಪರ್ಯಂತ ವಾಸಮಾಡಿದನು. ಆಗ, ಪಾಂಡವರ ಕಡೆಯಿರುವ  ಶ್ರೀಕೃಷ್ಣನನ್ನು ತನ್ನೆಡೆಗೆ ಸೆಳೆಯಲು ಸಾಧ್ಯವಿಲ್ಲಾ ಎಂದು ತಿಳಿದ  ದುರ್ಯೋಧನ, ಬಲರಾಮನನ್ನು ವಶೀಕರಿಸಲೆಂದು ವಿದೇಹಕ್ಕೆ ತೆರಳಿದನು.    

[ಹರಿವಂಶದಲ್ಲಿ ಬಲರಾಮನ ಕೋಪದ ಕುರಿತಾದ ವಿವರ ಕಾಣಸಿಗುತ್ತದೆ:  ಪದ್ಭ್ಯಾಮೇವ ತತೋ  ಗತ್ವಾ ಶತಧನ್ವಾನಮಚ್ಯುತಃ । ಮಿಥಿಲಾಮಭಿತೋ ರಾಜನ್ ಜಘಾನ ಪರಮಾಸ್ತ್ರವಿತ್ । ಸ್ಯಮಂತಕಂ ಚ  ನಾಪಶ್ಯದ್ಧತ್ವಾ ಭೋಜಂ ಮಹಾಬಲಮ್  । ನಿವೃತ್ತಂ ಚಾಬ್ರವೀತ್  ಕೃಷ್ಣಂ ರತ್ನಂ ದೇಹೀತಿ ಲಾಙ್ಗಲೀ । (ಕೃಷ್ಣ ಮರಳಿ ಬಂದಾಗ ಬಲರಾಮ ಮಣಿಯನ್ನು ಕೇಳಿದ) ನಾಸ್ತೀತಿ ಕೃಷ್ಣಶ್ಚೋವಾಚ ತತೋ ರಾಮೋ ರುಷಾsನ್ವಿತಃ । ಧಿಕ್ ಶಬ್ದಮಸಕೃತ್ ಕೃತ್ವಾ ಪ್ರತ್ಯುವಾಚ ಜನಾರ್ದನಮ್ । ಭ್ರಾತೃತ್ವಾನ್ಮರ್ಷಯಾಮ್ಯೇಷ ಸ್ವಸ್ತಿ ತೇsಸ್ತು ವ್ರಜಾಮ್ಯಹಮ್ ।  ಕೃತ್ಯಂ ನ ಮೇ ದ್ವಾರಕಯಾ ನ ತ್ವಯಾ ನಚ ವೃಷ್ಣಿಭಿಃ । ಪ್ರವಿವೇಶ ತತೋ ರಾಮೋ ಮಿಥಿಲಾಮರಿಮರ್ದನಃ’ (ಹರಿವಂಶಪರ್ವ ೩೯.೨೩) ‘ಅಥ ದುರ್ಯೋಧನೋ ರಾಜಾ ಗತ್ವಾ ತು ಮಿಥಿಲಾಂ  ಪ್ರಭುಃ । ಗದಾಶಿಕ್ಷಾಂ ತತೋ ದಿವ್ಯಾಂ ಬಲಭದ್ರಾದವಾಪ್ತವಾನ್’ (೩೯.೨೮). (ಶ್ರೀಕೃಷ್ಣ ಇಲ್ಲವೆಂದಾಗ  ಅಸಮಾದಾನದಿಂದ ಬಲರಾಮ ಧಿಕ್..ಧಿಕ್..ಧಿಕ್ .. ಎಂದು ಹಲವಾರು ಬಾರಿ ಹೇಳಿ ‘ಕೃಷ್ಣಾ, ನೀನು ನನ್ನ ತಮ್ಮಾ ಎಂದು ಬಿಟ್ಟಿದ್ದೇನೆ, ಬೇರೆ ಯಾರಾದರೂ ಆಗಿದ್ದರೆ ಇಲ್ಲೇ ಕೊಂದು ಬಿಡುತ್ತಿದ್ದೆ. ನಿನ್ನಿಂದ, ನೀನು ಕಟ್ಟಿದ ದ್ವಾರಕೆಯಿಂದ ಮತ್ತು  ಯಾದವರಿಂದ ನನಗೇನೂ ಆಗಬೇಕಿಲ್ಲ’ ಎಂದು ಉಗ್ರವಾಗಿ ಹೇಳಿ ಬಲರಾಮ ಹೊರಟು ಹೋದ. ಬಳಿಕ ದುರ್ಯೋಧನ ಬಲರಾಮನಲ್ಲಿ ಬಂದು ಅವನಿಂದ ಗದಾವಿದ್ಯೆಯನ್ನು ಕಲಿತ)   

 

ಬಭೂವ ಶಿಷ್ಯೋsಸ್ಯ ತಥಾ ಗದಾಯಾಮಸನ್ನಿಧಾನಂ ಕೇಶವಸ್ಯ ಪ್ರತೀಕ್ಷನ್ ।

ತದಾ ಯಯಾಚೇ ಭಗಿನೀಂ  ಚ ತಸ್ಯ ಸ ಚ ಪ್ರತಿಜ್ಞಾಮಕರೋತ್ ಪ್ರದಾನೇ ೨೦.೩೪॥

 

ದುರ್ಯೋಧನನು ಕೇಶವನ ಇಲ್ಲದಿರುವಿಕೆಯನ್ನು ಕಾದು, ಗದಾಭ್ಯಾಸದಲ್ಲಿ ಪರಿಣಿತನಾಗಲು ಇಲ್ಲಿ ಬಲರಾಮನ ಶಿಷ್ಯನಾದನು. ಆಗಲೇ ಬಲರಾಮನ ತಂಗಿಯನ್ನು ದುರ್ಯೋಧನ ಬೇಡಿದ ಕೂಡಾ. ಅವನಾದರೋ, ತಂಗಿಯನ್ನು ದುರ್ಯೋಧನನಿಗೆ ಕೊಡುವುದಾಗಿ ಪ್ರತಿಜ್ಞೆಮಾಡಿದನು.

[ ವಿಷ್ಣುಪುರಾಣದಲ್ಲಿ ಈ ವಿವರ ಕಾಣಸಿಗುತ್ತದೆ:  ‘ಯಾವಚ್ಚ ಜನಕರಾಜಗೃಹೇ ಬಲಭದ್ರೋsವತಸ್ಥೇ ತಾವದ್ ಧಾರ್ತರಾಷ್ಟ್ರೋ ದುರ್ಯೋಧನಸ್ತತ್ಸಕಾಶಾದ್ ಗದಾಶಿಕ್ಷಾಮಶಿಕ್ಷತ’ (೧೩.೪೭), ಭಾಗವತದಲ್ಲಿ: ‘ಉವಾಸ ತಸ್ಯಾಂ ಕತಿಚಿನ್ಮಿಥಿಲಾಯಾಂ  ಸಮಾ ವಿಭುಃ । ತತೋsಶಿಕ್ಷದ್  ಗದಾಂ ಕಾಲೇ ಧಾರ್ತರಾಷ್ಟ್ರಃ ಸುಯೋಧನಃ’ (೧೦.೬೧.೩೨). ಎಂದು  ಶುಕೋಕ್ತಿಃ ।  ]

 

ಜ್ಯೇಷ್ಠಂ ಹ್ಯೇನಂ ಕೇಶವೋ ನಾತಿವರ್ತ್ತೇದಿತ್ಯೇವ ಮೇನೇ ಧಾರ್ತ್ತರಾಷ್ಟ್ರಃ ಸ ತಸ್ಮಾತ್ ।

ಜಗ್ರಾಹ ಹಸ್ತಂ ದಕ್ಷಿಣಂ ಸತ್ಯಹೇತೋರ್ದ್ದದೌ ಚ ರಾಮಃ ಕರಮಸ್ಮೈ ಹಲಾಙ್ಕಮ್ ॥೨೦.೩೫॥

 

ಕೃಷ್ಣನು ದೊಡ್ಡಣ್ಣನಾದ ಬಲರಾಮನನ್ನು ಮೀರಲಾರ ಎಂದು ತಿಳಿದು ದುರ್ಯೋಧನನು, ಆಣೆಗಾಗಿ (ಸತ್ಯಪ್ರತಿಜ್ಞೆ/ಭಾಷೆಗಾಗಿ) ಬಲರಾಮನ ಬಲಗೈಯನ್ನು ಹಿಡಿದುಕೊಂಡು ‘ನಿನ್ನ ತಂಗಿ ಸುಭದ್ರೆಯನ್ನು ನನಗೆ ಕೊಡು ಎಂದು ಕೇಳಿದ. ರಾಮನು ನೇಗಿಲಿನ ಚಿನ್ನೆಯುಳ್ಳ ತನ್ನ ಕೈಯನ್ನು ಕೊಟ್ಟ.(ಅಂದರೆ ತನ್ನ ಆಯುಧವಾದ ಮಸಲವನ್ನು ಹಿಡಿಯುವ ಕೈಯಿಂದ ‘ಸುಭದ್ರೆಯನ್ನು ಖಂಡಿತಾ ನಿನಗೇ ಕೊಡುತ್ತೇನೆ’ ಎಂದು ದುರ್ಯೋಧನನಿಗೆ ಬಲರಾಮ ಮಾತುಕೊಟ್ಟ) 

 

ರೂಪೇಣ ತಸ್ಯಾ ಮೋಹಿತೋ ಧಾರ್ತ್ತರಾಷ್ಟ್ರೋ ವಿಶೇಷತಃ ಕೃಷ್ಣರಾಮೌ ಭಗಿನ್ಯಾಃ ।

ಸ್ನೇಹಾದ್ ವಶಂ ಯಾಸ್ಯತ ಇತ್ಯಗೃಹ್ಣಾದ್ದಸ್ತಂ ಹಲಾಙ್ಕಂ ಹಲಿನೋ ರಿಪುಘ್ನಮ್ ॥೨೦.೩೬॥

 

ಸುಭದ್ರೆಯ ರೂಪಕ್ಕೆ ದುರ್ಯೋಧನ ಮೋಹಿತನಾಗಿದ್ದ. ಅಷ್ಟೇ ಅಲ್ಲಾ, ‘ವಿಶೇಷವಾಗಿ ಬಲರಾಮ ಕೃಷ್ಣರು ತಂಗಿಯ ಪ್ರೀತಿಯಿಂದ ತನ್ನ ವಶರಾಗುತ್ತಾರೆ’ ಎಂದು ಶತ್ರುಗಳನ್ನು ಸಂಹರಿಸುವ ನೇಗಿಲಿನ ಗುರುತುಳ್ಳ ಬಲರಾಮನ ಕೈಯನ್ನು ಹಿಡಿದುಕೊಂಡ.

Wednesday, December 2, 2020

Mahabharata Tatparya Nirnaya Kannada 2029_2032

 [ಈ ಸಮಯದಲ್ಲಿ ದ್ವಾರಕೆಯಲ್ಲಿ ಏನು ನಡೆಯುತ್ತಿತ್ತು ಎನ್ನುವುದನ್ನು ವಿವರಿಸುತ್ತಾರೆ:]

 

ಕೃಷ್ಣೋsಪಿ ಗತ್ವಾ ದ್ವಾರವತೀಂ ಸರಾಮಃ ಸತ್ಯಾಪಿತುರ್ವಧಕರ್ತ್ತಾರಮೇವ ।

ಶತಧನ್ವಾನಂ ಹನ್ತುಮೈಚ್ಛತ್ ಸ ಚೈವ ಯಯಾಚೇsಕ್ರೂರಂ ಕೃತವರ್ಮ್ಮಾನುಯುಕ್ತಮ್ ॥೨೦.೨೯॥

 

ಇತ್ತ ದ್ವಾರಕಾ ಪಟ್ಟಣಕ್ಕೆ ತೆರಳಿದ ಶ್ರೀಕೃಷ್ಣನು, ಬಲರಾಮನಿಂದ ಕೂಡಿಕೊಂಡು ಸತ್ಯಭಾಮೆಯ ತಂದೆಯಾದ ಸತ್ರಾಜಿತನ ಕೊಲೆಮಾಡಿರುವ ಶತಧನ್ವನನ್ನು ಕೊಲ್ಲಲು ಬಯಸಿದನು. ಶತಧನ್ವನಾದರೋ, ಕೃತವರ್ಮನಿಂದ ಕೂಡಿರುವ ಅಕ್ರೂರನನ್ನು ರಕ್ಷಣೆಗಾಗಿ ಬೇಡಿದನು.

 

ತಾವಬ್ರೂತಾಂ ಸರ್ವಲೋಕೈಕಕರ್ತ್ತುರ್ನ್ನಾsವಾಂ ವಿರೋಧಂ ಮನಸಾsಪಿ ಕುರ್ವಃ ।

ಕೃಷ್ಣಸ್ಯ ಸರ್ವೇಶಿತುರಿತ್ಯನೂಕ್ತ ಆರುಹ್ಯ ಚಾಶ್ವೀಂ ಭಯತಃ ಪರಾದ್ರವತ್ ॥೨೦.೩೦॥

 

ಆಗ ಕೃತವರ್ಮ ಹಾಗೂ ಅಕ್ರೂರ ಹೇಳುತ್ತಾರೆ: ‘ಸಮಸ್ತ ಲೋಕದ ಸೃಷ್ಟಿ-ಸ್ಥಿತಿ-ಲಯಗಳನ್ನೂ ಮಾಡುವ ನಾರಾಯಣನ ವಿರೋಧವನ್ನು ನಾವಿಬ್ಬರು ಮನಸ್ಸಿನಿಂದಲೂ ಚಿಂತಿಸಲಾರೆವು’ ಎಂದು. ಈ ರೀತಿಯಾಗಿ ಹೇಳಲ್ಪಟ್ಟವನಾದ ಶತಧನ್ವ,  ಭಯದಿಂದ ಹೆಣ್ಣು  ಕುದುರೆಯನ್ನು ಏರಿ ಅಲ್ಲಿಂದ ಓಡಿದನು. 

 

ಅನ್ವೇವ ತಂ ಕೃಷ್ಣರಾಮೌ ರಥೇನ ಯಾತೌ ಶತಂ ಯೋಜನಾನಾಂ ದಿನೇನ ।

ಗತ್ವಾ ಮೃತಾಯಾಂ ಬಡಬಾಯಾಂ ಪದೈವ ಸ ಪ್ರಾದ್ರವತ್  ಕೃಷ್ಣ ಏನಂ ಪದಾsಗಾತ್ ॥೨೦.೩೧॥

 

ಅವನನ್ನು ಅನುಸರಿಸಿ ಕೃಷ್ಣ-ರಾಮರು ರಥದಲ್ಲಿ  ತೆರಳಿದರು. ಒಂದು ದಿವಸದಲ್ಲಿಯೇ ನೂರು ಯೋಜನಗಳ ತನಕ ಓಡಿ, ಅದಕ್ಕಿಂತ ಮುಂದೆ ಓಡಲಾಗದೇ, ಎದೆಯೊಡೆದು ಸತ್ತ ಕುದುರೆಯಿರುತ್ತಿರಲು,  ಶತಧನ್ವ ಕಾಲ್ಗಳಿಂದಲೇ  ಓಡಲಾರಮ್ಭಿಸಿದ. ಆಗ ಶ್ರೀಕೃಷ್ಣನು ರಥದಿಂದ ಇಳಿದು ಕಾಲ್ಗಳಿಂದಲೇ  ಅವನನ್ನು ಅನುಸರಿಸಿದ.    

[ಆ ಕುದುರೆಯ ಹೆಸರು ‘ಹೃದಯಾ’ ಎಂದು, ಅದು ದಿನಕ್ಕೆ ನೂರು ಯೋಜನಾ ಓಡುವಷ್ಟು ಸಮರ್ಥವಾಗಿತ್ತಂತೆ, ವಿಷ್ಣುಪುರಾಣದಲ್ಲಿ ಈ ಕುರಿತಾದ ವಿವರ ಕಾಣಸಿಗುತ್ತದೆ, ಅವನ ಚಾಟಿ ಏಟನ್ನು ಸಹಿಸಲಾಗದೇ, ಬಾಯಲ್ಲಿ ನೊರೆಯನ್ನು ಕಕ್ಕುತ್ತಾ, ಎದೆಯೊಡೆದು ಪ್ರಾಣಬಿಟ್ಟಿತಂತೆ ಆ ಹೆಣ್ಣು ಕುದುರೆ.  ಬ್ರಹ್ಮಾಂಡ ಪುರಾಣದ ಉಪೋದ್ಗತಪಾದದಲ್ಲೂ(೭೧.೭೨) ಈ ವಿವರ ಕಾಣಸಿಗುತ್ತದೆ: ‘ವಿಖ್ಯಾತಾ ಹೃದಯಾ ನಾಮ ಶತಯೋಜನಗಾಮಿನೀ । ಭೋಜಸ್ಯ ಬಡಬಾ ದಿವ್ಯಾ ಯಯಾ ಕೃಷ್ಣಮಯೋಧಯತ್’]   

 

ಛಿತ್ವಾ ಶಿರಸ್ತಸ್ಯ ಚಕ್ರೇಣ ಕೃಷ್ಣೋ ಜಾನನ್ನಕ್ರೂರೇ ಮಣಿಮೇನೇನ ದತ್ತಮ್ ।

ಅಪ್ಯಜ್ಞವಲ್ಲೋಕವಿಡಮ್ಬನಾಯ ಪರೀಕ್ಷ್ಯ ವಾಸೋsತ್ರ ನೇತ್ಯಾಹ ರಾಮಮ್ ॥೨೦.೩೨॥

 

ಶತಧನ್ವನ ಕತ್ತನ್ನು ಕೃಷ್ಣ ಚಕ್ರದಿಂದ ಕತ್ತರಿಸಿ, ಅಕ್ರೂರನಲ್ಲಿ ಈ ಶತಧನ್ವನಿಂದ ಮಣಿಯು ಕೊಡಲ್ಪಟ್ಟಿತು ಎಂದು ತಿಳಿದವನಾದರೂ, ಅರಿಯದವನಂತೆ, ಲೋಕದ ವಿಡಂಬನೆಗಾಗಿ ಶತಧನ್ವನ ಬಟ್ಟೆಗಳನ್ನೆಲ್ಲಾ ಪರೀಕ್ಷೆ ಮಾಡಿ, ಬಲರಾಮನ ಬಳಿ ಬಂದು ಮಣಿ ಇಲ್ಲವೆಂದು ಹೇಳಿದ.  


Monday, November 30, 2020

Mahabharata Tatparya Nirnaya Kannada 2020_2028

 

ಪೂರ್ವಂ ಹಿ ಗಙ್ಗಾ ಮಮ ವಿಷ್ಣುಪೂಜಾವಿಘ್ನಾರ್ತ್ಥಮಾಯಾದ್ ವಾಮಕರೇಣ ಸಾ ಮೇ ।

ನುನ್ನಾ ಪರಸ್ತಾದ್ ಬಹುಯೋಜನಂ ಗತಾ ಪುರೇ ಕುರೂಣಾಂ ಶಿವ ಆಗತಸ್ತದಾ ॥೨೦.೨೦॥

 

ಹಿಂದೆ ಕೌರವರ ಪಟ್ಟಣವಾದ ಹಸ್ತಿನಾವತಿಯಲ್ಲಿ ಗಂಗೆಯು ನನ್ನ ವಿಷ್ಣುಪೂಜೆಯನ್ನು ಅಡ್ಡಿ ಮಾಡುವುದಕ್ಕಾಗಿ ಬಂದಳು. ಅವಳು ನನ್ನ ಎಡಗೈಯಿಂದ ತಳ್ಳಲ್ಪಟ್ಟವಳಾಗಿ, ಬಹಳ ಯೋಜನಾ ಆಚೆ ಸರಿದಳು. ಆಗ ಸದಾಶಿವನು ಬಂದನು.

 

ಸ ವ್ಯಾಘ್ರರೂಪೀ ಕಪಿಲಾತ್ಮಕಾಮುಮಾಂ ಪರೀಕ್ಷಯನ್ ಮಾಂ ಹನ್ತುಮಿವಾsದ್ರವದ್ ದ್ರುತಮ್ ।

ಸ ಮೇ ಯುದ್ಧೇ ವಿಜಿತೋ ಮೂರ್ಚ್ಛಿತಶ್ಚ ಗದಾಪ್ರಹಾರಾದಾಸ ಲಿಙ್ಗಾನ್ತರಸ್ಥಃ ॥೨0.೨೧॥

 

ನನ್ನನ್ನು ಪರೀಕ್ಷೆ ಮಾಡಲೋಸುಗ ಆ ಸದಾಶಿವನು ಹುಲಿರೂಪವನ್ನು ಧರಿಸಿ, ಗೋವಿನ ವೇಷವನ್ನು ಧರಿಸಿದ ಉಮೆಯನ್ನು ಕೊಲ್ಲಲೋ ಎಂಬಂತೆ ಓಡಿ ಬಂದನು. ಆಗ ಅವನು ನನ್ನ ಗದಾಪ್ರಹಾರದಿಂದ ಯುದ್ಧದಲ್ಲಿ ಸೋತು, ಮೂರ್ಛಿತನಾಗಿ ಇನ್ನೊಂದು ಲಿಂಗದಲ್ಲಿ ಇರತಕ್ಕವನಾದನು.

 

ವ್ಯಾಘ್ರೇಶ್ವರಂ ನಾಮ ಲಿಙ್ಗಂ ಪೃಥಿವ್ಯಾಂ ಖ್ಯಾತಂ ತದಾಸ್ತೇ ತದ್ವದನ್ಯತ್ರ ಯುದ್ಧೇ ।

ತೀರೇ ಗೋಮತ್ಯಾ ಹೈಮವತೇ ಗಿರೌ ಹಿ ಜಿತಸ್ತತ್ರಾಪ್ಯಾಸ ಶಾರ್ದ್ದೂಲಲಿಙ್ಗಮ್ ॥೨೦.೨೨॥

 

ಅದು ಇಂದು ವ್ಯಾಘ್ರೇಶ್ವರ ಎಂಬ ಹೆಸರಿನ ಲಿಂಗವಾಗಿ ಖ್ಯಾತವಾಗಿದೆ. ಅದೇ ರೀತಿ ಹಿಮಾಲಯ ಪರ್ವತದ ಗೋಮತೀ ನದಿ ತೀರದಲ್ಲಿ ನಡೆದ ಇನ್ನೊಂದು ಯುದ್ಧದಲ್ಲಿ ಶಿವ ನನ್ನಿಂದ ಸೋತ. ಅಲ್ಲಿಯೂ ಕೂಡಾ ಶಾರ್ದೂಲಲಿಙ್ಗ ಎನ್ನುವ ಹೆಸರು ಬಂತು.

 

ಏವಂ ಪ್ರತ್ಯಕ್ಷೇ ವಿಷ್ಣುಪದಾಶ್ರಯಸ್ಯ ಬಲಾಧಿಕ್ಯೇ ಕಿಮು ವಕ್ತವ್ಯಮತ್ರ ।

ವಿಷ್ಣೋರಾಧಿಕ್ಯೇ ಕ್ಷತ್ರಿಯಾಣಾಂ ಪ್ರಮಾಣಂ ಬಲಂ ವಿಪ್ರೇ ಜ್ಞಾನಮೇವೇತಿ ಚಾsಹುಃ ॥೨೦.೨೩ ॥

 

ಈರೀತಿಯಾಗಿ ನಾರಾಯಣನನ್ನು ಆಶ್ರಯಿಸಿದವನಾದ ನನ್ನ ಬಲದ ಆಧಿಕ್ಯವು ಸ್ಫುಟವಾಗಿ ತೋರುತ್ತಿರಲು ಈ ವಿಚಾರದಲ್ಲಿ ಇನ್ನೇನು ಹೇಳಬೇಕಾದದ್ದಿದೆ ? ವಿಷ್ಣು ಸರ್ವೋತ್ತಮ ಎನ್ನುವುದರಲ್ಲಿ ಕ್ಷತ್ರಿಯರಿಗೆ ‘ಬಲವು ಪ್ರಮಾಣ’. ವೈಷ್ಣವನಾಗಿರುವ ವಿಪ್ರನಲ್ಲಿ ‘ಜ್ಞಾನವೇ ಪ್ರಮಾಣ’ ಎಂದು ಹೇಳುತ್ತಾರೆ. 

 

 

ಮಯಾ ಕೇದಾರೇ ವಿಪ್ರರೂಪೀ ಜಿತಶ್ಚ  ರುದ್ರೋsವಿಶಲ್ಲಿಙ್ಗಮೇವಾsಶು ಭೀತಃ ।

ತತಃ ಪರಂ ವೇದವಿದಾಮಗಮ್ಯತಾಶಾಪಂ ಪ್ರಾದಾಚ್ಛಙ್ಕರೋ ಬ್ರೀಳಿತೋsತ್ರ ॥೨೦.೨೪ ॥

 

ನನ್ನಿಂದ ಕೇದಾರ ಕ್ಷೇತ್ರದಲ್ಲಿ ಬ್ರಾಹ್ಮಣನ ವೇಷ ಧರಿಸಿದ ಬಂದ ರುದ್ರ(ವಾಗ್ಯುದ್ಧದಲ್ಲಿ) ಸೋತ ಮತ್ತು ಕೂಡಲೇ ನನ್ನಿಂದ ಅಳುಕಿ ಲಿಂಗವನ್ನು ಪ್ರವೇಶಿಸಿದ. ಅದಾದಮೇಲೆ ವೇದವನ್ನು ಬಲ್ಲವರಿಗೆ ‘ಕೇದಾರಕ್ಕೆ ಬರಬಾರದು’ ಎನ್ನುವ ಶಾಪವನ್ನು ನಾಚಿದ ಶಂಕರ ಕೊಟ್ಟ.

 

ಏವಂ ಪ್ರತ್ಯಕ್ಷೇ ವಿಷ್ಣು ಬಲೇ ಪ್ರತೀಪಂ ಮನೋ ಯಸ್ಯ ಹ್ಯುತ್ತರಂ ಸ ಬ್ರವೀತು ।

ಕ್ರೋಧೋsಧಿಕಶ್ಚೇತ್ ಕ್ಷಿಪ್ರಮಾಯಾತು ಯೋದ್ಧುಮಿತ್ಯುಕ್ತಾಸ್ತೇsಭ್ಯಾಯಯುರಾತ್ತಶಸ್ತ್ರಾಃ ॥೨೦.೨೫॥

 

ಈ ರೀತಿಯಾಗಿ ನಾರಾಯಣನ ಬಲವು ಪ್ರತ್ಯಕ್ಷವಾಗಿ ಸಿದ್ಧವಾಗುತ್ತಿರಲು,  ಯಾರ ಮನಸ್ಸು ಇದಕ್ಕೆ ವಿರುದ್ಧವಾಗಿದೆಯೋ ಅವನು ಉತ್ತರವನ್ನು ಹೇಳಲಿ. ಒಂದು ವೇಳೆ ಬಹಳ ಕೋಪಗೊಂಡವರಾದರೆ ಕೂಡಲೇ ನನ್ನೊಂದಿಗೆ ಯುದ್ಧಕ್ಕೆ ಬನ್ನಿರಿ’. ಈ ರೀತಿಯಾಗಿ ಭೀಮಸೇನನಿಂದ ಹೇಳಲ್ಪಟ್ಟ ಜರಾಸಂಧಾದಿಗಳು ಶಸ್ತ್ರವನ್ನು ಹಿಡಿದು ನುಗ್ಗಿ ಬಂದರು.

 

ವಿದ್ರಾಪ್ಯ ತಾನ್ ಬಾಣಸಙ್ಘೈಃ ಸಮಸ್ತಾನ್ ಜರಾಸುತಂ ಗದಯಾ ಯೋಧಯಿತ್ವಾ ।

ಬಾಹುಭ್ಯಾಂ ಚೈನಂ ಪರಿಗೃಹ್ಯಾsಶು ವಿಷ್ಣೋಃ ಪಾದೋತ್ಥಾಯಾಂ ಪ್ರಾಕ್ಷಿಪದ್ ದೇವನದ್ಯಾಮ್ ॥೨೦.೨೬॥

 

ಎಲ್ಲಾ ಅರಸರನ್ನು ಬಾಣಗಳ ಸುರಿಮಳೆಯಿಂದ ಓಡಿಸಿದ ಭೀಮಸೇನ, ಜರಾಸಂಧನೊಂದಿಗೆ  ಗದೆಯಿಂದ ಯುದ್ಧಮಾಡಿ, ತನ್ನೆರಡು ಕೈಗಳಿಂದ ಅವನನ್ನು ಹಿಡಿದುಕೊಂಡು, ನಾರಾಯಣನ ಪಾದದಿಂದ ಹುಟ್ಟಿದ ಗಂಗೆಯಲ್ಲಿ ಅವನನ್ನು ಎಸೆದ.

[ಜರಾಸಂಧ ಗಂಗೆ ವಿಷ್ಣುಪಾದದಿಂದ ಹುಟ್ಟಿರುವ ನದಿಯಾದ್ದರಿಂದ ಗಂಗೆಯಲ್ಲಿ ಸ್ನಾನ ಮಾಡುತ್ತಿರಲಿಲ್ಲ. ಹಾಗಾಗಿ ಅಲ್ಲೇ ಅವನನ್ನು ಮುಳುಗಿಸಿದ]

 

ಸ ಬ್ರೀಳಿತಃ ಪ್ರಯಯೌ ಮಾಗಧಾಂಶ್ಚ ಭೂಪೈಃ ಸಮೇತೋ ಭೀಮಸೇನೋ ರಥಂ ಸ್ವಮ್ ।

ಆರುಹ್ಯ ಕಾಶೀಶ್ವರಪೂಜಿತಶ್ಚ ಯಯೌ ಕಾಳ್ಯಾ ಶಕ್ರಸನಾಮಕಂ ಪುರಮ್ ॥೨೦.೨೭॥

 

ಜರಾಸಂಧನು ಬಹಳ ನಾಚಿಕೊಂಡು ಮಾಗಧದೇಶಕ್ಕೆ ತನ್ನ ಅನುಯಾಯಿ ರಾಜರಿಂದ ಕೂಡಿಕೊಂಡು ಹಿಂತಿರುಗಿದ. ಭೀಮಸೇನನು ಕಾಶೀ ರಾಜನಿಂದ ಪೂಜಿತನಾಗಿ, ತನ್ನ ರಥವನ್ನು ಏರಿ,  ಕಾಳಿಯಿಂದ ಕೂಡಿಕೊಂಡು ಇಂದ್ರಪ್ರಸ್ಥ ಎನ್ನುವ ಹೆಸರಿನ ಪಟ್ಟಣದತ್ತ ತೆರಳಿದ. 

 

ತಸ್ಯಾಂ ತ್ರಿಲೋಕಾಧಿಕರೂಪಸದ್ಗುಣೈರಾ ಸಮ್ಮತಾಯಾಂ ರಮಮಾಣಃ ಸುತಂ ಚ ।

ಶರ್ವತ್ರಾತಂ ನಾಮಾಜನಯತ್ ಪುರಾ ಯಃ ಸಮಾನವಾಯುರ್ಬಲವೀರ್ಯ್ಯಯುಕ್ತಃ ॥೨೦.೨೮॥

 

ಮೂರುಲೋಕಕ್ಕೂ ಮಿಗಿಲೆನಿಸಿರುವ ರೂಪ ಹಾಗೂ ಗುಣಗಳಿಂದ ಅತ್ಯಂತ ಸಮ್ಮತಳಾದ ಕಾಳಿಯೊಂದಿಗೆ ಭೀಮಸೇನ ರಮಿಸುತ್ತಾ,  ಶರ್ವತ್ರಾತ ಎಂಬ ಹೆಸರಿನ ಮಗನನ್ನು ಹುಟ್ಟಿಸಿದ. ಹಿಂದೆ ಯಾರು ಬಲ ಹಾಗೂ ವೀರ್ಯದಿಂದ ಕೂಡಿರುವ ‘ಸಮಾನ’ ವಾಯುವೋ ಅವನನ್ನೇ ಇಲ್ಲಿ ಹುಟ್ಟಿಸಿದ.

[ಕಾಳಿ ಶರ್ವತ್ರಾತ ಎನ್ನುವ ಮಗನನ್ನು ಪಡೆದಳು ಎನ್ನುವುದನ್ನು ಪುರಾಣಗಳಲ್ಲಿ ಹೇಳಿರುವುದನ್ನು ಕಾಣಬಹುದು:  ಕಾಳೀ ಚ ಭೀಮಸೇನಾದೇವ ಶರ್ವತ್ರಾತಂ ಪುತ್ರಮವಾಪ’ ಎಂದು ವಿಷ್ಣುಪುರಾಣ (೪.೨೦.೧೧),   ಕಾಳೀ ಶರ್ವಗತಂ ತತಃ’ ಎಂದು ಭಾಗವತ (೯.೧೯.೩೧),  ]