ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 9, 2020

Mahabharata Tatparya Nirnaya Kannada 2048_2051

 

ಪಿತೃಷ್ವಸುರ್ಮ್ಮಿತ್ರವಿನ್ದಾ ಸುತಾ ಚ ಕೃಷ್ಣೇ ಮಾಲಾಮಾಸಜದ್ ರಾಜಮದ್ಧ್ಯೇ ।

ವಿನ್ದಾನುವಿನ್ದೌ ಭ್ರಾತರಾವೇವ ತಸ್ಯಾ ನ್ಯಷೇಧತಾಂ ಧಾರ್ತ್ತರಾಷ್ಟ್ರಾರ್ತ್ಥಮುಗ್ರೌ ॥೨೦.೪೮॥

 

ಶ್ರೀಕೃಷ್ಣನ ಅತ್ತೆಯ (ರಾಜಾಧಿದೇವೀ ವಸುದೇವನ ತಂಗಿ, ಆವಂತಿ ರಾಜ ಜಗತ್ಸೇನನ ಪತ್ನಿ) ಮಗಳಾದ ಮಿತ್ರವಿನ್ದೆಯು ಎಲ್ಲಾ ರಾಜರ ಮಧ್ಯದಲ್ಲಿ ಶ್ರೀಕೃಷ್ಣನಿಗೆ ಮಾಲೆಯನ್ನು ಹಾಕಿದಳು. ತಾಮಸರಾಗಿದ್ದ(ಉಗ್ರೌ) ಅವಳ ಅಣ್ಣಂದಿರಾಗಿರುವ ವಿನ್ದ ಮತ್ತು ಅನುವಿನ್ದರು ದುರ್ಯೋಧನನಿಗಾಗಿ ಅವಳನ್ನು ನಿಗ್ರಹ ಮಾಡಿದ್ದರು. (ಕೃಷ್ಣನನ್ನು ಮದುವೆಯಾಗಬಾರದು, ಆಗುವುದಾದರೆ ದುರ್ಯೋಧನನನ್ನು ಆಗಬೇಕು ಎಂದು).

 [ಈ ಕುರಿತು ಭಾಗವತ ವಾಕ್ಯ ಹೀಗಿದೆ : ‘ವಿನ್ದಾನುವಿನ್ದಾವಾವನ್ತ್ಯೌ ದುರ್ಯೋಧನವಶಾನುಗೌ । ಸ್ವಯಂವರೇ ಸ್ವಭಗಿನೀಂ ಕೃಷ್ಣಕಾಮಾಂ ನ್ಯಷೇಧತಾಮ್’ (೧೦.೬೧.೩೪)]

 

ಜಿತ್ವಾssವನ್ತ್ಯೌ ತೌ ನೃಪತೀಂಶ್ಚೈವ ಸರ್ವಾನಾದಾಯ ತಾಂ ಪ್ರಯಯೌ ವಾಸುದೇವಃ ।

ಪಿತೃಷ್ವಸುಸ್ತನಯಾಂ ಚ ದ್ವಿತೀಯಾಂ ಭದ್ರಾಂ ದತ್ತಾಮಗ್ರಹೀದ್ ಭ್ರಾತೃಭಿಃ ಸಃ ॥೨೦.೪೯ ॥

 

ಶ್ರೀಕೃಷ್ಣನು ಆವಂತಿ ದೇಶದ ರಾಜಕುಮಾರರಾದ ವಿನ್ದಾsನುವಿನ್ದರನ್ನು ಗೆದ್ದು, ಜೊತೆಗೆ  ಉಳಿದ ಎಲ್ಲಾ ರಾಜರನ್ನೂ ಗೆದ್ದು, ಮಿತ್ರವಿನ್ದೆಯೊಂದಿಗೆ ದ್ವಾರಕೆಗೆ ತೆರಳಿದನು. ಶ್ರೀಕೃಷ್ಣನ ಇನ್ನೊಬ್ಬ ಅತ್ತೆಯ (ಶ್ರುತಕೀರ್ತಿ ವಸುದೇವನ ಇನ್ನೊಬ್ಬ ತಂಗಿ, ಕೈಕೇಯ ರಾಜ ಧೃಷ್ಟಕೇತುವಿನ ಪತ್ನಿ) ಮಗಳಾಗಿರುವ ಭದ್ರೆಯನ್ನು, ಆಕೆಯ ಸಹೋದರರೇ ಕರೆತಂದು ಪರಮಾತ್ಮನಿಗೆ ಒಪ್ಪಿಸಿದರು. ಶ್ರೀಕೃಷ್ಣ ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದ.

 

ವಿಶ್ವೇಷಾಂ ದೇವಾನಾಮವತಾರಾ ಹಿ ಪಞ್ಚ ತೇ ಕೈಕೇಯಾ ಭ್ರಾತರೋsಸ್ಯಾ ಹರೇಶ್ಚ ।

ಭಕ್ತಾ ನಿತ್ಯಂ ಪಾಣ್ಡವಾನಾಂ ಚ ತಾತೋsಪ್ಯೇಷಾಂ ವಶೇ ಶೈವ್ಯನಾಮರ್ಭುರಗ್ರೇ ॥೨೦.೫೦॥

 

ಐದು ಜನ ಕೈಕೇಯರು ವಿಶ್ವೇದೇವತೆಗಳ ಅವತಾರಭೂತರು. ಅವರು ಈ ಭದ್ರೆಯ ಅಣ್ಣಂದಿರು. ಅವರು ಪರಮಾತ್ಮನ ನಿತ್ಯಭಕ್ತರು. ಪಾಂಡವರ ಅನುಯಾಯಿಗಳು ಮತ್ತು ಭಕ್ತರೂ ಕೂಡಾ. ಇವರ ತಂದೆ ಶೈವ್ಯ ಎನ್ನುವ ಹೆಸರಿನ ಋಭುದೇವತೆಯಾಗಿದ್ದ[1]. ಅವನ ಮಕ್ಕಳಾಗಿ ಐದು ಜನ ವಿಶ್ವೇದೇವತೆಗಳು ಹುಟ್ಟಿದ್ದರು. ಅವರ ತಂಗಿಯಾಗಿ ಹುಟ್ಟಿರುವ ಷಣ್ಮಹಿಷಿಯರಲ್ಲಿ ಒಬ್ಬಳಾದ ಭದ್ರೆಯನ್ನು ಅವರು ಪರಮಾತ್ಮನಿಗೆ ಅರ್ಪಿಸಿದರು.

[‘ಶ್ಯೆವ್ಯಸ್ಯ ಚ ಸುತಾಂ ತನ್ವೀಂ ರೂಪೇಣಾಪ್ಸರಸೋಪಮಾಮ್’ ಎಂದು ಹರಿವಂಶದಲ್ಲಿದೆ(ವಿಷ್ಣುಪರ್ವಣಿ ೬೦.೪೩). ಈ ಶ್ಯೆವ್ಯನನ್ನೇ ಗೀತೆಯಲ್ಲಿ ‘ಶ್ಯೆವ್ಯಶ್ಚ[2] ನರಪುಙ್ಗವಃ’ ಎಂದಿರುವುದು]

 

ಸ್ವಯಮ್ಬರೋ ಲಕ್ಷಣಾಯಾಸ್ತಥಾssಸೀದ್ ಯಥಾ ದ್ರೌಪದ್ಯಾ ಲಕ್ಷವೇಧಾತ್ಮಕಃ ಸಃ ।

ಮದ್ರೇಷು ತಸ್ಯಾಶ್ಚ ಪಿತಾ ಪಿನಾಕಂ ಸ್ವಯಮ್ಬರಾರ್ಥಂ ಜಗೃಹೇ ಗಿರೀಶಾತ್ ॥೨೦.೫೧॥

 

ಯಾವರೀತಿ ದ್ರೌಪದಿಯ ಸ್ವಯಮ್ಬರವು ಗುರಿಯನ್ನು ಭೇದಿಸಬೇಕು ಎಂಬುದಾಗಿ ಆಗಿತ್ತೋ, ಹಾಗೆಯೇ ಲಕ್ಷಣಾ ಎನ್ನುವವಳ  ಸ್ವಯಮ್ಬರವು ನಡೆದಿತ್ತು. ಅವಳ ತಂದೆಯು(ಬೃಹತ್ಸೇನನು) ಮದ್ರದೇಶದಲ್ಲಿ ಸ್ವಯಮ್ಬರ ಮಾಡಲಿಕ್ಕಾಗಿಯೇ ರುದ್ರನಿಂದ ಪಿನಾಕವೆಂಬ ಧನುಸ್ಸನ್ನು ಪಡೆದುಕೊಂಡಿದ್ದ. 

[ಹರಿವಂಶದಲ್ಲಿ(ವಿಷ್ಣುಪರ್ವಣಿ ೬೦.೪೨) ‘ಸಾತ್ರಾಜಿತೀಂ ಸತ್ಯಭಾಮಾಂ ಲಕ್ಷಣಾಂ ಚಾರುಹಾಸಿನೀಮ್’ ಎಂದಿದ್ದಾರೆ. ಲಕ್ಷಣೆಯ ಇನ್ನೊಂದು ಹೆಸರು ಚಾರುಹಾಸಿನಿ. ವಿಷ್ಣುಪುರಾಣದಲ್ಲಿ  ಇದನ್ನು ಹೇಳಿದ್ದಾರೆ: ‘ಭಗವತೋsಪ್ಯತ್ರ ಮರ್ತ್ಯಲೋಕೇsವತೀರ್ಣಸ್ಯ ಷೋಡಶಸಹಸ್ರಾಣ್ಯಷ್ಟೋತ್ತರಶತಾಧಿಕಾನಿ ಸ್ತ್ರೀಣಾಮಭವನ್ । ತಾಸಾಂ ಚ ರುಗ್ಮಿಣೀಸತ್ಯಭಾಮಾಜಾಮ್ಬವತೀಚಾರುಹಾಸಿನೀಪ್ರಮುಖಾ ಅಷ್ಟೌ ಪತ್ನ್ಯಃ  ಪ್ರಧಾನಾಃ’  ಹದಿನಾರು ಸಾವಿರದ ನೂರಕ್ಕೂ ಹೆಚ್ಚು ಮಂದಿ ಶ್ರೀಕೃಷ್ಣನ ಪತ್ನಿಯರಾದರು. ಅವರಲ್ಲಿ ರುಗ್ಮಿಣೀ, ಸತ್ಯಭಾಮಾ, ಜಾಮ್ಬವತೀ, ಚಾರುಹಾಸಿನಿ(ಲಕ್ಷಣೆ), ಮುಂತಾದ ಎಂಟು ಜನ ಪ್ರಧಾನರು].



[1]ಋಭು, ವಿಭ್ವಾ ಮತ್ತು ವಾಜಶ್ರೇತಿ  ಎನ್ನುವ ದೇವತೆಗಳು ತಾರತಮ್ಯದಲ್ಲಿ ಹದಿನೆಂಟನೇ ಕಕ್ಷೆಯಲ್ಲಿದ್ದಾರೆ.   

[2] ಶ್ಯೆವ್ಯ ಸರಿಯಾದ ಪ್ರಯೋಗ. ಕೆಲವರು ಶ್ಯಬ್ಯ ಎನ್ನುತ್ತಾರೆ.

Sunday, December 6, 2020

Mahabharata Tatparya Nirnaya Kannada 2044_2047

 ವಸನ್ನಜಸ್ತತ್ರ ಬಹೂಂಶ್ಚ ಮಾಸಾನ್ ಸಫಲ್ಗುನೋsಯಾನ್ಮೃಗಯಾಂ ಕದಾಚಿತ್ ।

ಹತ್ವಾ ಮೃಗಾನ್ ಯಮುನಾತೀರಸಂಸ್ಥಃ ಸೋsನ್ಯಾಂ ಕಾಳಿನ್ದೀಂ ದದೃಶೇ ತತ್ಸ್ವಸಾರಮ್॥೨೦.೪೪॥

 

ಇಂದ್ರಪ್ರಸ್ಥದಲ್ಲಿ ಶ್ರೀಕೃಷ್ಣನು ಬಹಳ ತಿಂಗಳುಗಳ ಕಾಲ ವಾಸಮಾಡಿದವನಾಗಿ ಒಮ್ಮೆ ಅರ್ಜುನನಿಂದ ಕೂಡಿಕೊಂಡು ಬೇಟೆಗಾಗಿ ತೆರಳಿದ. ಕೆಲವು ಮೃಗಗಳನ್ನು ಕೊಂದು, ಯಮುನಾ ನದಿಯ ತೀರಕ್ಕೆ ಬಂದು, ಅಲ್ಲಿ ಇನ್ನೊಬ್ಬಳು ಕಾಳಿನ್ದೀಯನ್ನು ಕಂಡನು.

 

ಸಾ ಸೂರ್ಯ್ಯಪುತ್ರೀ ಯಮುನಾsನುಜಾತಾ ತಪಶ್ಚರನ್ತೀ ಕೃಷ್ಣಪತ್ನೀತ್ವಕಾಮಾ ।

ಪೃಷ್ಟಾsರ್ಜ್ಜುನೇನಾsಹ ಸಮಸ್ತಮೇತತ್ ಪತ್ನೀಂ ಚ ತಾಂ ಜಗೃಹೇ ವಾಸುದೇವಃ ॥೨೦.೪೫॥

 

ಅವಳು ಸೂರ್ಯನ ಮಗಳು. ಯಮುನೆಯ ತಂಗಿ. ಕೃಷ್ಣನ ಹೆಂಡತಿಯಾಗಬೇಕು ಎಂದು ಬಯಸಿ, ತಪಸ್ಸನ್ನು ಮಾಡುತ್ತಿರುವ ಅವಳು ಅರ್ಜುನನಿಂದ ಪ್ರಶ್ನೆಮಾಡಲ್ಪಟ್ಟವಳಾಗಿ, ತನ್ನ ತಪಸ್ಸಿನ ಕಾರಣವೆಲ್ಲವನ್ನೂ ಕೂಡಾ ಹೇಳಿದಳು. ನಂತರ ವಾಸುದೇವನು ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದನು.

 

[ಭಾಗವತದಲ್ಲಿ ಹೀಗೆ ಹೇಳಿದ್ದಾರೆ: ‘ಅಹಂ ದೇವಸ್ಯ ಸವಿತುರ್ದುಹಿತಾ ಪತಿಮಿಚ್ಛತೀ । ವಿಷ್ಣುಂ ವರೇಣ್ಯಂ ವರದಂ ತಪಃ ಪರಮಮಾಸ್ಥಿತಾ(೧೦.೬೨.೨೫).  ಕಾಳಿನ್ದೀತಿ ಸಮಾಖ್ಯಾತಾ ವಸಾಮಿ ಯಮುನಾಜಲೇ । ನಿರ್ಮಿತೇ ಭವನೇ ಪಿತ್ರಾ ಯಾವದಚ್ಯುತದರ್ಶನಮ್’(೨೭).

ಪುರಾಣದಲ್ಲಿ ಯಮುನಾ ನದಿಯ ಅಭಿಮಾನಿನಿಯೇ ಶ್ರೀಕೃಷ್ಣನನ್ನು ಮದುವೆಯಾದಳು ಎಂದು ಹೇಳಿದಂತೆ ಕಾಣುತ್ತದೆ. ಅದಕ್ಕಾಗಿ ಈ ವಿಷಯವನ್ನು ಸ್ಪಷ್ಟಪಡಿಸುತ್ತಾ  ಆಚಾರ್ಯರು ಇಲ್ಲಿ ‘ಅನ್ಯಾಂ ಕಾಳಿನ್ದೀಂ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ,ತತ್ ಸ್ವಸಾರಮ್’, ‘ಯಮುನಾನುಜಾತಾ’ ಎನ್ನುವ ವಿಶೇಷಣವನ್ನು ಕೊಡುತ್ತಾ, ಇವಳು ಬೇರೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ ಕೂಡಾ]

 

ತತೋ ಗತ್ವಾ ನಗ್ನಜಿತೋ ಗೃಹಂ ಚ ಸ್ವಯಮ್ಬರೇ ಸಪ್ತ ವೃಷಾನಗೃಹ್ಣಾತ್ ।

ಸರ್ವೈರಗ್ರಾಹ್ಯಾನಸುರಾನ್ ವರೇಣ ಶಿವಸ್ಯ ಯೈರ್ನ್ನಿರ್ಜ್ಜಿತಾ ಭೂಮಿಪಾಲಾಃ ॥೨೦.೪೬॥

 

ತದನಂತರ ನಗ್ನಜಿತ್ ಎಂಬ ರಾಜನ ಮನೆಯನ್ನು ಕುರಿತು ತೆರಳಿದ ಶ್ರೀಕೃಷ್ಣ, ಅಲ್ಲಿ ನಡೆಯುತ್ತಿದ್ದ  ಸ್ವಯಮ್ಬರದಲ್ಲಿ, ಯಾವ ಗೂಳಿಗಳ ರೂಪದಲ್ಲಿರುವ ಅಸುರರಿಂದ ಎಲ್ಲಾ ರಾಜರೂ ಕೂಡಾ ಸೋತಿದ್ದರೋ, ಅಂತಹ ಶಿವನ ವರದಿಂದ ಯಾರಿಂದಲೂ ನಿಗ್ರಹಿಸಲಾಗದ ಏಳು ಗೂಳಿಗಳ ರೂಪದಲ್ಲಿರುವ ಅಸುರರನ್ನು ನಿಗ್ರಹಿಸಿದ.  

 

ತತೋ ನೀಲಾಂ ತಸ್ಯ ಸುತಾಂ ಚ ಲೇಭೇ ಪೂರ್ವಂ ನೀಲಾ ಗೋಪಕನ್ಯಾsಪಿ ಯಾssಸೀತ್ ।

ಸಾ ದೇಹೇsಸ್ಯಾಃ ಪ್ರಾವಿಶತ್ ಪೂರ್ವಮೇಷಾ ಯಸ್ಮಾದೇಕಾ ದ್ವಿವಿಧಾ ಸಮ್ಪ್ರಜಾತಾ ॥೨೦.೪೭॥

 

ತದನಂತರ ಅವನ ಮಗಳಾದ ನೀಲಾದೇವಿಯನ್ನು ಪಡೆದನು. ನೀಲೆಯು ಮೊದಲಿಗೆ ಗೋಪಕನ್ಯೆಯೂ ಆಗಿದ್ದಳು. ಅವಳು ಈ ನೀಲೆಯ ದೇಹದಲ್ಲಿ ಪ್ರವೇಶಮಾಡಿದಳು. ಮೊದಲಿಗೇನೇ ಇವಳು ಎರಡು ರೂಪದಿಂದ ಹುಟ್ಟಿದ್ದಳು. ಈಗ ಒಂದೇ ಆದಳು.

[ಯಶೋದೆಯ ಅಣ್ಣ ಕುಂಭಕ, ಕುಂಭಕನ ಮಗಳು ನೀಲೆ. ಅವಳೇ ಇವಳು. ಇದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಬ್ರಹ್ಮವೈವರ್ತಪುರಾಣದಲ್ಲಿ ರಾಧೆಯ ಕುರಿತಾಗಿ ಬಹಳವಾಗಿ ಹೇಳಿದ್ದಾರೆ. ಆ ರಾಧೆ ಯಾರು ಎಂದರೆ ಈ ನೀಲಾದೇವಿ. ಪರಮಾತ್ಮನನ್ನು ವ್ರಜದಲ್ಲಿದ್ದಾಗ ಮದುವೆಯಾದವಳು ಇದೇ ನೀಲೆ. ಅವಳು ‘ಎಲ್ಲರಿಗಿಂತ ಮೊದಲು ನನ್ನನ್ನು ಮದುವೆಯಾಗಬೇಕು ಎಂದು ವರ ಕೇಳಿದ್ದಳು. ಅಷ್ಟೇ ಅಲ್ಲ, ಮುಂಜಿಗಿಂತ ಮೊದಲು ನನ್ನನ್ನು ಮದುವೆಯಾಗಬೇಕು ಎಂದು ಕೇಳಿಕೊಂಡಿದ್ದಳು ಕೂಡಾ. ಹಾಗಾಗಿ ಗೋಪಕನ್ಯೆಯರು ಶ್ರೀಕೃಷ್ಣನೊಂದಿಗೆ ಕ್ರೀಡಿಸುವುದಕ್ಕೂ ಮುನ್ನ, ಅಲ್ಲಿಯೂ ಕೂಡಾ ಏಳು ಗೂಳಿಗಳನ್ನು ನಿಗ್ರಹಿಸಿ ಕೃಷ್ಣ ಅವಳನ್ನು ಮದುವೆಯಾಗಿದ್ದ [ಉಲ್ಲೇಖ: ಮಹಾಭಾರತ ತಾತ್ಪರ್ಯ ನಿರ್ಣಯ ೧೩.೪೮-೪೯]. ಅವಳನ್ನೇ ರಾಧೇ ಎಂದು ಉಪಾಸನೆ ಮಾಡುತ್ತಾರೆ. ನಂತರ ಆ ನೀಲೆಯೇ ಈ ನೀಲೆಯಲ್ಲಿ ಪ್ರವೇಶಮಾಡಿದಳು. ಒಬ್ಬಳೇ ಎರಡುರೂಪದಲ್ಲಿ ಹುಟ್ಟಿದ್ದು, ನಂತರ ಒಂದಾಗಿರುವುದು. ಆತ್ಮಭೇದವಿರಲಿಲ್ಲ, ದೇಹಭೇದವಿತ್ತು. ಆಮೇಲೆ ದೇಹಭೇದವೂ ಹೋಗಿ ಒಂದಾಯಿತು

ನಗ್ನಜಿನ್ನಾಮ ಕೌಸಲ್ಯ ಆಸೀದ್ ರಾಜಾsತಿಧಾರ್ಮಿಕಃ । ತಸ್ಯ ಸತ್ಯಾsಭವತ್ ಕನ್ಯಾ ರಾಜನ್ ನೀಲೇತಿಚಾಹ್ವಯಾ’ (ಭಾಗವತ ೧೦.೬೩.೩೬), ನಗ್ನಜಿತ್ ಎನ್ನುವ ಕೋಸಲದೇಶದ ರಾಜ ಇದ್ದ. ಅವನಿಗೆ ಸತ್ಯಾ ಎನ್ನುವ ಮಗಳಿದ್ದಳು, ಅವಳ ಹೆಸರು ನೀಲೇ ಆಗಿತ್ತು ಎನ್ನುತ್ತದೆ ಭಾಗವತ. ಇನ್ನು ಹರಿವಂಶದಲ್ಲಿ (ವಿಷ್ಣುಪರ್ವಣಿ ೬೦.೪೧) ‘ಸತ್ಯಾಂ ನಾಗ್ನಜಿತೀಮಪಿ’ ಎಂದಿದೆ. ಹೀಗಾಗಿ ಇಲ್ಲಿ ವಿರೋಧವಿಲ್ಲ].          

Mahabharata Tatparya Nirnaya Kannada 2037_2043

 [ಯಾರು ಈ ಸುಭದ್ರೆ? ಆ ಕುರಿತು ವಿವರಿಸುತ್ತಾರೆ: ]


ಜಾತಾ ದೇವಕ್ಯಾಂ ಸಾ ಸುಭದ್ರೇತಿ ನಾಮ್ನಾ ಭದ್ರಾ ರೂಪೇಣಾನಕದುನ್ದುಭೇಸ್ತಾಮ್ ।

ಕೃತ್ವಾ ಪುತ್ರೀಂ ರೋಹಿಣೀ ಸ್ವಾಮರಕ್ಷತ್ ಪೂರ್ವಂ ತು ಯಾsಸೀತ್ ತ್ರಿಜಟೈವ ನಾಮ್ನಾ ॥೨೦.೩೭॥

 

ಹಿತವಾದ ರೂಪವುಳ್ಳ ಸುಭದ್ರೆ ಆನಕದುನ್ದುಭಿ[1]-ದೇವಕಿಯಲ್ಲಿ ಹುಟ್ಟಿದ್ದಳು. ಅವಳನ್ನು ವಸುದೇವನ ಮತ್ತೊಂದು ಹೆಂಡತಿಯಾದ ರೋಹಿಣಿಯು ತನ್ನ ಮಗಳನ್ನಾಗಿ ಮಾಡಿಕೊಂಡು ರಕ್ಷಣೆ ಮಾಡಿದಳು. (ಸುಭದ್ರೆ ಹುಟ್ಟಿದ್ದು ವಸುದೇವ-ದೇವಕಿಯಲ್ಲಿ, ಬೆಳೆದದ್ದು ರೋಹಿಣಿಯಲ್ಲಿ).  ಹಿಂದೆ(ರಾಮಾಯಣದಲ್ಲಿ) ಯಾರು ಹೆಸರಿನಿಂದ ‘ತ್ರಿಜಟೆ’ ಎನ್ನುವವಳಿದ್ದಳೋ, ಅವಳೇ ಇವಳು.  

 

ಸೀತಾಯಾಃ ಪ್ರಾಙ್ ನಿತ್ಯಶುಶ್ರೂಷಣಾತ್ ಸಾ ಬಭೂವ ವಿಷ್ಣೋರ್ಭಗಿನೀ ಪ್ರಿಯಾ ಚ ।

ಉಮಾವೇಶಾದ್ ರೂಪಗುಣೋಪಪನ್ನಾ ಪದ್ಮೇಕ್ಷಣಾ ಚಮ್ಪಕದಾಮಗೌರೀ ॥೨೦.೩೮॥


ಸೀತೆಯ ನಿತ್ಯಸೇವೆ ಮಾಡಿದ್ದರಿಂದಾಗಿ ಅವಳು ನಾರಾಯಣನ ಪ್ರೀತಿಪಾತ್ರ ತಂಗಿಯಾದಳು. ಪಾರ್ವತಿಯ ಆವೇಶದಿಂದ ರೂಪ ಹಾಗು ಗುಣದಿಂದ ಕೂಡಿದವಳೂ, ತಾವರೆ ಎಸಳಿನಂತಹ ಕಣ್ಗಳುಳ್ಳವಳೂ, ಸಂಪಿಗೆಯಂತೆ ಹೊಂಬಣ್ಣದವಳೂ ಆಗಿದ್ದಳು. 

 

ಏತತ್ ಕೃತ್ವಾ ಧೃತರಾಷ್ಟ್ರಾತ್ಮಜಃ ಸ ಯಯೌ ಕುರೂನ್ ನಿವಸತ್ಯತ್ರ ರಾಮೇ ।

ಕೃಷ್ಣೋsಕ್ರೂರಂ ವಿವಸನ್ತಂ ಭಯೇನ ಸಹಾರ್ದ್ದಿಕ್ಯಂ ಚಾsನಯಿತ್ವಾ ಜಗಾದ ॥೨೦.೩೯॥

 

ಹೀಗೆ, ಇಷ್ಟು ಮಾಡಿ(ಬಲರಾಮನಿಂದ ಗದಾ ಶಿಕ್ಷಣ ಮತ್ತು ಸುಭದ್ರೆಯನ್ನು ತನಗೆ ಕೊಡುವುದಾಗಿ ಮಾತು ಪಡೆದು), ದುರ್ಯೋಧನ ತನ್ನ ರಾಜ್ಯಕ್ಕೆ ಹಿಂತಿರುಗಿದ. ಇತ್ತ ಶ್ರೀಕೃಷ್ಣನು ಕೃತವರ್ಮನಿಂದ ಕೂಡಿಕೊಂಡು ಎಲ್ಲೋ ಇರುವ ಅಕ್ರೂರನನ್ನು ಕರೆಸಿದ. (ಶ್ರೀಕೃಷ್ಣ-ಬಲರಾಮರು ಶತಧನ್ವನನ್ನು ಹಿಂಬಾಲಿಸಿ ಹೊರಟ ತಕ್ಷಣ ಕೃತವರ್ಮನಿಂದ ಕೂಡಿದ ಅಕ್ರೂರ ದೇಶಾಂತರ ಹೋಗಿದ್ದ. ಐದು ವರ್ಷಗಳ ಕಾಲ ಕಾದ ಶ್ರೀಕೃಷ್ಣ ಇದೀಗ ಅವರನ್ನು ಕರೆಸಿದ). 

 

ಆನೀಯ ರಾಮಂ ಚ ಸಮಸ್ತಸಾತ್ತ್ವತಾಂ ಯದಾsವಾದೀತ್ ಕೇಶವಃ ಸನ್ನಿಧಾನೇ ।

ಮಣಿಸ್ತ್ವಯ್ಯಾಸ್ತೇ ದರ್ಶಯೇತ್ಯೇವ ಭೀತಸ್ತದಾsಕ್ರೂರೋsದರ್ಶಯದ್ ರತ್ನಮಸ್ಮೈ ॥೨೦.೪೦॥

 

ಬಲರಾಮನನ್ನೂ ವಿದೇಹಪಟ್ಟಣದಿಂದ ಕರೆಸಿದ ಕೇಶವ, ಎಲ್ಲರೂ ನೋಡುತ್ತಿರುವಾಗಲೇ, ‘ಎಲೋ ಅಕ್ರೂರ, ನಿನ್ನಲ್ಲಿ ಮಣಿ ಇದೇ, ಅದನ್ನು ತೋರಿಸು’ ಎಂದು ಹೇಳಿದ. ಪರಮಾತ್ಮನ  ಮಾತಿನಿಂದ ಹೆದರಿದ ಅಕ್ರೂರನು ರತ್ನವನ್ನು ತೋರಿಸಿದ.

[‘ನನು ದಾನಪತೇ ನ್ಯಸ್ತಸ್ತ್ವಯ್ಯಸೌ ಶತಧನ್ವನಾ  । ಸ್ಯಮಂತಕಮಣಿಃ ಶ್ರೀಮಾನ್ ವಿದಿತಃ ಪೂರ್ವಮೇವ ನಃ’  ಎಂದು ಭಾಗವತದಲ್ಲಿ(೧೦.೬೧.೪೩) ಈಕುರಿತು ವಿವರ ಕಾಣಸಿಗುತ್ತದೆ.  ].

  

ಅವ್ಯಾಜತಾಮಾತ್ಮನೋ ದರ್ಶಯಿತ್ವಾ ಹಲಾಯುಧೇ ಕೇಶವಸ್ತಸ್ಯ ಜಾನನ್ ।

ರತ್ನಾಕಾಙ್ಕ್ಷಾಮುಗ್ರಸೇನಸ್ಯ ಚೈವ ಮಾತುಶ್ಚ ಸಾಮ್ಬಸ್ಯ ಪುನರ್ಬಭಾಷೇ ॥೨೦.೪೧॥

 

ಹೀಗೆ ಶ್ರೀಕೃಷ್ಣನು ತಾನು ಕಪಟಿ ಅಲ್ಲಾ  ಎನ್ನುವುದನ್ನು ಹಲಾಯುಧನಲ್ಲಿ ತೋರಿಸಿ,  ಬಲರಾಮನ ಜೊತೆಗೆ ಉಗ್ರಸೇನನ ಹಾಗೂ ಸಾಂಬನ ತಾಯಿಯಾಗಿರುವ ಜಾಮ್ಬವತಿಗೂ ಮಣಿಯ ಬಯಕೆಯಿರುವುದನ್ನು ತಿಳಿದು, ಮತ್ತೆ ಹೀಗೆ ಹೇಳಿದ:

 

ಆಸ್ತಾಮಕ್ರೂರೇ ಮಣಿರನ್ಯೈರಧಾರ್ಯ್ಯಃ  ಸದಾ ಯಜ್ಞಾದ್ ದಾನಪತೇಃ ಸ ಧಾರ್ಯ್ಯಃ ।

ನ ಸತ್ಯಾ ಕೃಷ್ಣಾವಾಞ್ಛಿತಂ ಕಿಞ್ಚಿದಿಚ್ಛೇತ್ ತಥಾsಪಿ ತಸ್ಯಾ ಯೋಗ್ಯ ಇತ್ಯಾಹ ಕೃಷ್ಣಃ ॥೨೦.೪೨॥

 

‘ಬೇರೊಬ್ಬರಿಂದ ಧರಿಸಲಾಗದ ಈ ಸ್ಯಮಂತಕ ಮಣಿಯು ಅಕ್ರೂರನಲ್ಲಿಯೇ ಇರಲಿ. ಅಕ್ರೂರನು ಯಾವಾಗಲೂ ಯಜ್ಞ ಮಾಡುವುದರಿಂದ ಅವನಿಗೆ ಇದು ಉಪಯೋಗವಾಗುತ್ತದೆ. ಸತ್ಯಭಾಮೆಯು ಕೃಷ್ಣ ಬಯಸದ್ದನ್ನು ಬಯಸುವುದೇ ಇಲ್ಲಾ. ಆದರೂ ಈ ಮಣಿ ಅವಳಿಗೆ ಯೋಗ್ಯ’

 

[ವಿಷ್ಣುಪುರಾಣದಲ್ಲಿ(೪.೧೩.೬೮-೭೦) ಹೀಗಿದೆ: ಏತಚ್ಚ ಸರ್ವಕಾಲಂ ಶುಚಿನಾ ಬ್ರಹ್ಮಚರ್ಯಗುಣವತಾ ಧ್ರಿಯಮಾಣಮಶೇಷರಾಷ್ಟ್ರಸ್ಯೋಪಕಾರಕಮ್ । ಅಶುಚಿನಾ ಧ್ರಿಯಮಾಣಮಾಧಾರಮೇವ ಹನ್ತಿ । ಅತೋsಹಮಸ್ಯ ಷೋಡಶಸ್ತ್ರೀಸಹಸ್ರಪರಿಗ್ರಹಾದಸಮರ್ಥೋ ಧಾರಣೇ । ಕಥಂ ಚೈತತ್ ಸತ್ಯಭಾಮಾ ಸ್ವೀಕರೋತು? ಆರ್ಯೇಣ ಬಲಭದ್ರೇಣಾಪಿ ಮದಿರಾಪಾನಾದ್ಯಶೇಷಭೋಗಪರಿತ್ಯಾಗಃ ಕಥಂ ಕಾರ್ಯಃ । ತದಯಂ ಯದುಲೋಕೋsಯಂ ಬಲಭದ್ರೋsಹಂ ಸತ್ಯಾ ಚ ತ್ವಾಂ ದಾನಪತೇ, ಪಾರ್ಥಯಾಮಃ । ಏತದ್ ಭವಾನೇವ ಧಾರಯಿತುಂ ಸಮರ್ಥಃ’  ಎಲ್ಲಾ ಕಾಲದಲ್ಲಿಯೂ ಶುಚಿಯಾಗಿ ಬ್ರಹ್ಮಚರ್ಯವನ್ನು ಇಟ್ಟುಕೊಂಡಿರುವ ವ್ಯಕ್ತಿಯಿಂದ ಈ ಮಣಿ ಧರಿಸಲ್ಪಪಟ್ಟಿದ್ದರೆ ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ.  ಒಬ್ಬ ಅಶುಚಿಯಾಗಿ ಧರಿಸಿದರೆ ರಾಷ್ಟ್ರ ನಾಶವಾಗಿ ಹೋಗುತ್ತದೆ. ನಾನಿದನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ೧೬,೧೦೦ ಮಂದಿಯನ್ನು ನಾನು ಮದುವೆಯಾಗುವುದಿದೆ. ನಾನು ಪಡೆಯದ್ದನ್ನು ಸತ್ಯಭಾಮೆ ಹೇಗೆ ಪಡೆಯುತ್ತಾಳೆ? ಅಣ್ಣ ಬಲರಾಮ ಮದಿರಾಪಾನಿಯಾಗಿರುವುದರಿಂದ ಅವನೂ ಮಣಿಯನ್ನು ಧರಿಸಲು ಸಾಧ್ಯವಿಲ್ಲ. ಅದರಿಂದಾಗಿ ಸಮಸ್ತ ಯದುಗಳು, ಸತ್ಯಭಾಮೆ, ನಾನು ಮತ್ತು ಅಣ್ಣ ಬಲಭದ್ರ, ನಾವೆಲ್ಲರೂ ಸೇರಿ ನಿನ್ನನ್ನು ಪ್ರಾರ್ಥನೆ ಮಾಡುತ್ತಿದ್ದೇವೆ- ‘ಅಕ್ರೂರ, ನೀನೇ ಇದನ್ನು ಧಾರಣೆ ಮಾಡುವುದು ಒಳ್ಳೆಯದು.

ಇನ್ನು ಭಾಗವತದಲ್ಲಿ(೧೦.೬೧.೪೮-೫೧) ಹೀಗಿದೆ: ‘ದೃಷ್ಟ್ವಾ ಮಣಿಂ ಹಲಧರಸ್ತದರ್ಥಂ ಪ್ರೋಷ್ಯ ಚಾsಗತಃ। ಯೋಗ್ಯೋsಹಮಿತಿ ಮನ್ವಾನಶ್ಚಕಮೇ ಕುರುಪುಙ್ಗವ । ಸತ್ಯಭಾಮಾ ಪಿತೃಧನಂ ಮನ್ವಾನಾ ಸ್ವಾತ್ಮನೋಚಿತಮ್ । ಗ್ರಹೀತುಮೈಚ್ಛದ್ ವಿಸ್ರಬ್ಧಾ ಹರೇಶ್ಚಿತ್ತಮಜಾನತೀ । ಜಾಮ್ಬವತ್ಯಪಿ ಶುಲ್ಕಾರ್ಥಂ ಪಿತ್ರಾ ದತ್ತೋ ಮಮೇತಿ ಹ । ಸ್ಪೃಹಾಂ ಚಕ್ರೇ ಮಣೌ ತಸ್ಮಿನ್ ಸರ್ವಂ ವಿಜ್ಞಾಯ ಮಾಧವಃ ।  ಅಕ್ರೂರಸ್ಯ ಕರೇ ಭೂಯೋ ಮಣಿಂ ಪ್ರತ್ಯರ್ಪಯದ್ ವಿಭುಃ’ ಮಣಿ ಸಿಕ್ಕಿದೆ ಎಂದು ಗೊತ್ತಾದಾಗ ಬಲರಾಮ ಬಂದ. ’ನಾನು ಆ ಮಣಿಯನ್ನು ಧರಿಸಲು ಯೋಗ್ಯ ಎಂದು ಅವನ ಮನಸ್ಸಿನಲ್ಲಿತ್ತು. ಈ ಮಣಿ ಸತ್ಯಭಾಮೆಯ ಅಪ್ಪನ ಸ್ವತ್ತು. ಹಾಗಾಗಿ, ಪರಮಾತ್ಮನ ಚಿತ್ತವನ್ನು  ತಿಳಿಯದಿರುವವರಿಗೆ ಅದು ಸತ್ಯಭಾಮೆಯಲ್ಲಿರಬೇಕು ಎನಿಸಿತು. ಇನ್ನು ಜಾಂಬವತಿಗೆ ‘ಇದು ನನ್ನ ಅಪ್ಪ ಕೃಷ್ಣನಿಗೆ ಕೊಟ್ಟಿರುವುದರಿಂದ ಅದು ನನ್ನಲ್ಲಿರಬೇಕು’  ಎನಿಸಿತು. ಇದೆಲ್ಲವನ್ನೂ ಕೂಡಾ ಕಂಡ ಶ್ರೀಕೃಷ್ಣ ಅಕ್ರೂರನನಲ್ಲಿ ಮಣಿಯನ್ನಿರಿಸಿದ].

 

ಲಬ್ಧ್ವಾ ರತ್ನಂ ದಾನಪತಿಃ ಸದೈವ ಸನ್ದೀಕ್ಷಿತೋsಭೂದ್ ಯಜ್ಞಕರ್ಮ್ಮಣ್ಯತನ್ದ್ರಃ ।

ಪ್ರದರ್ಶ್ಯ ಕೃಷ್ಣೋ ಹಲಿನೇ ರತ್ನಮೇತಚ್ಛಕ್ರಪ್ರಸ್ಥಂ ಪಾಣ್ಡವಸ್ನೇಹತೋsಗಾತ್ ॥೨೦.೪೩॥

 

ದಾನಪತಿ ಅಕ್ರೂರನು ಸ್ಯಮಂತಕ ಮಣಿಯನ್ನು ಹೊಂದಿ, ಯಾವಾಗಲೂ ಯಜ್ಞ ಕರ್ಮದಲ್ಲಿ ಯಾವುದೇ ಉದಾಸೀನ ಇಲ್ಲದೇ, ಆತ್ಯಂತಿಕವಾಗಿ ತನ್ನನ್ನು ತೊಡಗಿಸಿಕೊಂಡ. ಹೀಗೆ ಶ್ರೀಕೃಷ್ಣನು ಬಲರಾಮನಿಗೆ ರತ್ನವನ್ನು ತೋರಿಸಿ, (ತನ್ನ ಮೇಲೆ ಬಂದ ಅಪವಾದವನ್ನು ತೊಡೆದುಕೊಂಡು), ಪಾಂಡವರಮೇಲಿನ ಪ್ರೀತಿಯಿಂದ ಇಂದ್ರಪ್ರಸ್ಥಕ್ಕೆ ತೆರಳಿದ.



[1] ವಸುದೇವನ ಇನ್ನೊಂದು ಹೆಸರು