ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 7, 2021

Mahabharata Tatparya Nirnaya Kannada 20: 228 - 232

 

ವಿಶೇಷತೋ ಧ್ವಜಸಂಸ್ಥೇ ಹನೂಮತ್ಯಜೇಯತಾ ಸ್ಯಾಜ್ಜಯರೂಪೋ ಯತೋsಸೌ ।

ಸರ್ವಂ ಚ ತದ್ ದಿವ್ಯಮಭೇದ್ಯಮೇವ ವಿದ್ಯುತ್ಪ್ರಭಾ ಜ್ಯಾ ಚ ಗಾಣ್ಡೀವಸಂಸ್ಥಾ ॥೨೦.೨೨೮॥

 

ಯಾವ ಕಾರಣದಿಂದ ಎಲ್ಲರನ್ನೂ ಗೆದೆಯಬಲ್ಲ ಆ ಮುಖ್ಯಪ್ರಾಣನು ಜಯರೂಪನೇ ಆಗಿದ್ದಾನೋ, ಅಂತಹ  ಹನುಮಂತನು ವಿಶೇಷವಾಗಿ ಧ್ವಜದಲ್ಲಿ ಇರತ್ತಿರಲು, ಈ ರಥಿಕನನ್ನು ಇನ್ನೊಬ್ಬರು ಜಯಿಸಲು ಅಶಕ್ಯರು. ಮಿಂಚಿನಂತೆ ಕಾಂತಿಯುಳ್ಳ ನೇಣಿರುವ ಗಾಣ್ಡೀವ ಹಾಗೂ ಸಮಸ್ತವೂ ಅಲೌಕಿಕವಾದದ್ದು ಹಾಗೂ ಅಭೇದ್ಯವಾದುದು.

[ಮೇಲಿನ ಮಾತಿಗೆ ವಿರೋಧವೆಂಬಂತೆ ಮಹಾಭಾರತದಲ್ಲಿ ಅಶ್ವತ್ಥಾಮ ಗಾಣ್ಡೀವವನ್ನು ಭೇದಿಸಿದ ಎಂದು ಹೇಳಿದಂತೆ ಕಾಣುತ್ತೇದೆ. ‘ಅಥಾನ್ಯಾ ಜ್ಯಾssಸೀತ್ ತಯಾ ಗಾಣ್ಡಿವಂ ಸೋsಪ್ಯಯುಙ್ಕ್ತ’  ಆದರೆ ಅಲ್ಲಿ ಮುಂದೆ  ‘ಅಥಾನ್ಯಯಾ ಜ್ಯಯಾ ಪುನರ್ಗಾಣ್ಡಿವಂ ಸೋsಪ್ಯಯುಙ್ಕ್ತ’ ಎಂದು ಹೇಳಬೇಕಿತ್ತು. ಆದರೆ ಅಲ್ಲಿ ಹಾಗೆ ಹೇಳದೇ ‘ಸಂಧಾಯ ಚಾಪರಾಮ್’ ಎಂದು ಹೇಳಿದ್ದಾರೆ. ಅಂದರೆ ‘ಇನ್ನೊಮ್ಮೆ ನೇಣನ್ನು ಕಟ್ಟಿದ’ ಎಂದು ಹೇಳಿದ್ದಾರೆ. ಹೀಗಾಗಿ ಅಶ್ವತ್ಥಾಮ ಗಾಣ್ಡೀವ ಬಿಲ್ಲಿನ ನೇಣಿನ ಸಂಪರ್ಕವನ್ನಷ್ಟೇ ಕತ್ತರಿಸಿದ ಎನ್ನುವುದು ತಿಳಿಯುತ್ತದೆ. ಹೀಗಾಗಿ ಗಾಣ್ಡೀವ ಅಭೇದ್ಯ ಎನ್ನುವ ಮಾತಿಗೆ ಇದು ವಿರೋಧವನ್ನು ಹೇಳುವುದಿಲ್ಲ.]

 

ಗಾಣ್ಡೀವಮಪ್ಯಾಸ ಕೃಷ್ಣಪ್ರಸಾದಾಚ್ಛಕ್ಯಂ ಧರ್ತ್ತುಂ ಪಾಣ್ಡವಸ್ಯಾಪ್ಯಧಾರ್ಯ್ಯಮ್ ।

ದೇವೈಶ್ಚ ತೈರ್ಬ್ರಹ್ಮವರಾದ್ ಧೃತಂ ತದ್ ಬ್ರಹ್ಮೈವ ಸಾಕ್ಷಾತ್ ಪ್ರಭುರಸ್ಯ ಧಾರಣೇ ॥೨೦.೨೨೯॥

 

ಬ್ರಹ್ಮನನ್ನು ಹೊರತುಪಡಿಸಿ ಉಳಿದವರಿಗೆ ಗಾಣ್ಡೀವವನ್ನು ಧರಿಸಲು ಸಾಧ್ಯವಿಲ್ಲ. ಆದರೆ   ಕೃಷ್ಣನ ಅನುಗ್ರಹದಿಂದ ಅರ್ಜುನನಿಗೆ ಗಾಣ್ಡೀವ ಧರಿಸಲು ಸಾಧ್ಯವಾಯಿತು. ಇತರ ದೇವತೆಗಳಿಗೂ ಬ್ರಹ್ಮನ ವರದಿಂದಲೇ ಗಾಣ್ಡೀವ ಧರಿಸಲು ಸಾಧ್ಯವಾಗಿರುವುದು.

  

ಇನ್ದ್ರಸ್ಯ ದತ್ತಶ್ಚ ವರಃ ಸ್ವಯಮ್ಭುವಾ ತೇನಾಪಿ ಪಾರ್ತ್ಥಸ್ಯ ಬಭೂವ ಧಾರ್ಯ್ಯಮ್ ।

ಇನ್ದ್ರೋ ಹ್ಯಸೌ ಫಲ್ಗುನತ್ವೇನ ಜಾತಸ್ತತತಃ ಸೋsಸ್ತ್ರೈಃ ಶರಶಾಲಾಂ ಚಕಾರ ॥೨೦.೨೩೦॥

 

ಗಾಣ್ಡೀವ ಧರಿಸಲು ಇತರ ದೇವತೆಗಳಂತೆ ಇಂದ್ರನಿಗೂ ಬ್ರಹ್ಮದೇವರ ವರವಿತ್ತು. ಅದರಿಂದಲೂ ಕೂಡಾ ಅರ್ಜುನನಾಗಿ ಹುಟ್ಟಿದ ಇಂದ್ರನಿಗೆ ಅದನ್ನು ಧರಿಸಲು ಸಾಧ್ಯವಾಯಿತು.

ತದನಂತರ ಅಸ್ತ್ರಗಳಿಂದ ಅರ್ಜುನ ಖಾಣ್ಡವವನಕ್ಕೆ  ಆವರಣವಾಗಿ ಶರಶಾಲೆಯನ್ನು ನಿರ್ಮಾಣ ಮಾಡಿದ.

 

ಸ ಯೋಜನದ್ವಾದಶಕಾಭಿವಿಸ್ತೃತಂ ಪುರಂ ಚಕಾರಾsಶು ಪುರನ್ದರಾತ್ಮಜಃ ।

ಹುತಾಶನೋsಪ್ಯಾಶು ವನಂ ಪ್ರಗೃಹ್ಯ ಪ್ರಭಕ್ಷಯಾಮಾಸ ಸಮುದ್ಧತಾರ್ಚ್ಚಿಃ ॥೨೦.೨೩೧॥

 

ಇಂದ್ರನ ಮಗನಾಗಿರುವ ಅರ್ಜುನನು ಹನ್ನೆರಡು ಯೋಜನ ವಿಸ್ತೃತವಾಗಿರುವ ಖಾಣ್ಡವವನಕ್ಕೆ ಶರಶಾಲೆಯನ್ನು ನಿರ್ಮಿಸುತ್ತಿದ್ದಂತೇ,  ಅಗ್ನಿ ಜಾಜ್ವಲ್ಯಮಾನನಾಗಿ ಕಾಡನ್ನು  ತಿನ್ನಲಾರಂಭಿಸಿದ.

 

ಪ್ರಭಕ್ಷ್ಯಮಾಣಂ ನಿಜಕಕ್ಷಮೀಕ್ಷ್ಯ ಸನ್ಧುಕ್ಷಯಾಮಾಸ ತದಾssಶುಶುಕ್ಷಣಿಮ್ ।

ಅಕ್ಷೋಪಮಾಭಿರ್ಬಹುಲೇಕ್ಷಣೋsಮ್ಭಸಾಂ ಧಾರಾಭಿರಾಕ್ಷುಬ್ಧಮನಾಃ ಕ್ಷಯಾಯ ॥೨೦.೨೩೨॥

 

ತಿನ್ನಲ್ಪಡುತ್ತಿರುವ ತನ್ನ ವನವನ್ನು ಕಂಡು, ಬಹಳ ಕಣ್ಣುಗಳುಳ್ಳ ಇಂದ್ರನು ಅಗ್ನಿಯನ್ನು ಬಹಳ ದೊಡ್ಡದಾಗಿರುವ ನೀರಿನ ಧಾರೆಗಳಿಂದ ಶಮನಮಾಡಲು ಬಯಸಿದ.

[ಮಹಾಭಾರತದಲ್ಲಿ(ಆದಿಪರ್ವ ೨೫೨.೧೯) ಈಕುರಿತ ವಿವರವನ್ನು ಕಾಣಬಹುದು.  ‘ತತೋsಕ್ಷಮಾತ್ರಾ ವ್ಯಸೃಜನ್ ಧಾರಾಃ ಶತಸಹಸ್ರಶಃ ।  ಚೋದಿತಾ ದೇವರಾಜೇನ ಜಲದಾಃ ಖಾಣ್ಡವಂ ಪ್ರತಿ’ ಒಂದು ಒನಕೆಯಷ್ಟು ದಪ್ಪನಾದ ಹನಿಗಳಿಂದ ಕೂಡಿದ ಧಾರಾಕಾರ ಮಳೆಯನ್ನು ಇಂದ್ರ ಸುರಿಸಿದ.

ಇಲ್ಲಿ ಆಚಾರ್ಯರು ಲಾಟಾನುಪ್ರಾಸ ಪ್ರಯೋಗ ಮಾಡಿರುವುದನ್ನು ಕಾಣುತ್ತೇವೆ. ಜೊತೆಗೆ ಇಲ್ಲಿ ಒಂಬತ್ತು ‘ಕ್ಷ-ಕಾರ’ ಪ್ರಯೋಗವಾಗಿರುವುದನ್ನು ಓದುಗರು ಗಮನಿಸಬೇಕು. ‘ಕ್ಷಕಾರೋ ನೃಸಿಂಹವಚನಃ’.  ಆ ನರಸಿಂಹನ ಆವೇಶ ಆಗ ಅಗ್ನಿಯಲ್ಲಿತ್ತು. ಆದ್ದರಿಂದ ಅವನು ಎಲ್ಲವನ್ನೂ ನುಂಗಲು ಸಾಧ್ಯವಾಯಿತು. ಅಗ್ನಿಯಲ್ಲಿರುವ ನರಸಿಂಹನೇ ಆ ಕಾಡನ್ನು ನಾಶ ಮಾಡಿದ ಎನ್ನುವ ಸೂಕ್ಷ್ಮ ಈ ಮಂತ್ರದಲ್ಲಡಗಿದೆ. ಇದೇ ರೀತಿಯ ಪ್ರಯೋಗವನ್ನು ಆಚಾರ್ಯರು ಅಣು-ವ್ಯಾಖ್ಯಾನದಲ್ಲಿ ಬಳಸಿರುವುದನ್ನು ಕಾಣುತ್ತೇವೆ- ‘ಪ್ರತ್ಯಕ್ಷೇಕ್ಷಾಕ್ಷಮಃ ಸಾಕ್ಷಾತ್ ಕಂ ಪಕ್ಷಮವಲಮ್ಬತೇ । ತಸ್ಮಾದಕ್ಷಮಪಕ್ಷತ್ವಾನ್ಮೋಕ್ಷಶಾಸ್ತ್ರೇsಭ್ಯುಪೇಕ್ಷಿತಃ’   ನವವಿಧವಾದ ಭಕ್ತಿ, ನವವಿಧವಾಗಿರುವ ದ್ವೇಷ ಎರಡನ್ನೂ ಕೂಡಾ ಗಮನಿಸಿ, ಅದಕ್ಕೆ ಅನುಕೂಲವಾಗಿರುವ ಫಲವನ್ನು ನರಸಿಂಹ  ಆಯಾ ಪಕ್ಷಗಳಿಗೆ ಕೊಡುತ್ತಾನೆ ಎನ್ನುವುದು ಅಣುವ್ಯಾಖ್ಯಾನದಲ್ಲಿ ಸೂಚಿತವಾದ ಅರ್ಥ. ಅದೇ ರೀತಿ ಇಲ್ಲಿಯೂ ಕೂಡಾ ಅಂತಹುದೇ ಅರ್ಥವನ್ನು ಮಾಡಬೇಕು ಎಂದು ವ್ಯಾಖ್ಯಾನಕಾರರು ಹೇಳಿದ್ದಾರೆ. ಖಾಣ್ಡವವನದಲ್ಲಿ ದೈತ್ಯರು, ನಾಗರು, ಪಿಶಾಚಿಗಳು, ಯಕ್ಷರೇ ಮೊದಲಾದ ನವ ವಿಧದ ಜೀವಸಂಕುಲಗಳಿದ್ದವು. ಅವರೊಬ್ಬರನ್ನೂ ಬಿಡದೆ ಅಗ್ನಿ ಸುಟ್ಟಿದ್ದಾನೆ ಎಂದು ಹೇಳುವುದಕ್ಕೆ ಇಲ್ಲಿ ಒಂಬತ್ತು ಕ್ಷ-ಕಾರ ಪ್ರಯೋಗ ಮಾಡಲಾಗಿದೆ].

Sunday, October 3, 2021

Mahabharata Tatparya Nirnaya Kannada 20: 221 - 227

 [ಯಾವ ಇಂದ್ರ ಅಗ್ನಿಗೆ ಖಾಣ್ಡವ ಕೊಡಬಾರದು ಎಂದು ವಿರೋಧ ಮಾಡುತ್ತಿದ್ದನೋ, ಅವನೇ ಅರ್ಜುನನಾಗಿ ಬಂದಿದ್ದಾನೆ. ಅವನು ತನಗೆ ತಾನೇ ಹೇಗೆ ವಿರೋಧ ಮಾಡಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆಗೆ  ಉತ್ತರಿಸುತ್ತಾರೆ:]

ನರಾವೇಶಾದನ್ನದಾನಪ್ರತಿಶ್ರವಾತ್ ಸ್ವಸ್ಯಾಪಿ ಶಕ್ರಸ್ಯ ವಿರೋಧಮೈಚ್ಛತ್ ।

ಪಾರ್ತ್ಥಃ ಕೃಷ್ಣಸ್ಯ ಪ್ರೇರಣಾಚ್ಚೈವ ವಹ್ನಿಃ ಪಾರ್ತ್ಥಂ ಯಯಾಚೇ ಶಕ್ರವಿರೋಧಶಾನ್ತ್ಯೈಃ ॥೨೦.೨೨೧॥

 

ನರನೆಂಬ ಶೇಷನ ಆವೇಶ ಇದ್ದುದರಿಂದ, “ನಾನು ನಿನಗೆ ಅನ್ನವನ್ನು ಕೊಡುತ್ತೇನೆ” ಎಂದು ಪ್ರತಿಜ್ಞೆ ಮಾಡಿರುವುದರಿಂದ, ಕೃಷ್ಣನ ಪ್ರೇರಣೆಯಿಂದ, ತಾನೇ ಆಗಿರುವ ಇಂದ್ರನಿಗೆ ಅರ್ಜುನ ವಿರೋಧವನ್ನು ಬಯಸಿದ. ಅದರಿಂದಾಗಿಯೇ ಅಗ್ನಿಯು ಇಂದ್ರನ ವಿರೋಧ ಪರಿಹಾರಕ್ಕಾಗಿ ಅರ್ಜುನನನ್ನು ಬೇಡಿದನು.

 

ನಹಿ ಸ್ವದತ್ತಸ್ಯ ಪುನಃ ಸ ವೈರಂ ಶಕ್ರಃ ಕುರ್ಯ್ಯಾತ್ ಸ್ವಯಮಿನ್ದ್ರೋ ಹಿ ಪಾರ್ತ್ಥಃ ।

ನಾಪ್ರೇರಿತೋ ವಿಷ್ಣುನಾ ತಸ್ಯ ರೋಧಂ ಪಾರ್ತ್ಥಃ ಕುರ್ಯ್ಯಾದಿತಿ ಕೃಷ್ಣಂ ಯಯಾಚೇ ॥೨೦.೨೨೨॥

 

ತಾನೇ ಅರ್ಜುನನಾಗಿರುವ ಇಂದ್ರನು ತನ್ನಿಂದಲೇ ಕೊಡಲ್ಪಟ್ಟುದ್ದರ ವಿರುದ್ಧವಾಗಿ ಶತ್ರುತ್ವವನ್ನು ಮಾಡುವುದಿಲ್ಲವಷ್ಟೇ.  ‘ನಾರಾಯಣನಿಂದ ಪ್ರೇರಿತನಾಗದೇ ಇಂದ್ರನ ತಡೆಯುವಿಕೆಯನ್ನು ಅರ್ಜುನನು ಮಾಡಲಾರ’ ಎಂದು ತಿಳಿದ ಅಗ್ನಿ ಕೃಷ್ಣನನ್ನೂ ಕೂಡಾ ಬೇಡಿದ.

 

ನಚಾಯುಕ್ತಃ ಕೇಶವೇನೈಷ ಶಕ್ತ ಇತಿ ಕೃಷ್ಣಾದಾಪ ಭೂಯೋsಪ್ಯನುಜ್ಞಾಮ್ ।

ಯಯೌ ಸಮೀಪಂ ಚ ಹರೇರ್ಬದರ್ಯ್ಯಾಮಾದಾಯ ಚಕ್ರಂ ಚಾಮುತಃ  ಕೇಶವೇsದಾತ್ ॥೨೦.೨೨೩॥

 

ಕೇಶವನಿಂದ ಕೂಡದಿದ್ದರೆ ಕೇವಲ ಅರ್ಜುನನು ಶಕ್ತನಲ್ಲವೆಂದು ಅಗ್ನಿ ಕೃಷ್ಣನಿಂದ ಮತ್ತೆ ಅಣತಿಯನ್ನು ಬೇಡಿದ. ಹೀಗೆ ಕೃಷ್ಣನಿಂದ ಅನುಜ್ಞೆಯನ್ನು ಪಡೆದ ಅಗ್ನಿ ಬದರಿ ನಾರಾಯಣನ ಸಮೀಪಕ್ಕೆ ತೆರಳಿ, ಆ ನಾರಾಯಣರೂಪಿ ಪರಮಾತ್ಮನಿಂದ ಚಕ್ರವನ್ನು ತೆಗೆದುಕೊಂಡು ಬಂದು ಕೇಶವನಿಗೆ ಕೊಟ್ಟ.

 

[ಜರಾಸಂಧನೊಂದಿಗೆ ಯುದ್ಧಮಾಡುವಾಗ ಚಕ್ರ ಇಳಿದು ಬಂತು ಎಂದು ಭಾಗವತದಲ್ಲಿ ಹೇಳಿದ್ದಾರೆ.  ಆದರೆ ಖಾಣ್ಡವವನ ದಾಹ ಕಾಲದಲ್ಲಿ  ಅಗ್ನಿ ಬದರೀನಾರಾಯಣನಿಂದ ಚಕ್ರವನ್ನು ತಂದು ಕೃಷ್ಣನಿಗೆ ಕೊಟ್ಟ ಎನ್ನುತ್ತದೆ ಮಹಾಭಾರತ.  ಯಾವುದು ಸರಿ ಎಂದರೆ:]  

ಚಕ್ರಂ ಗೋಮನ್ತೇ ಕೃಷ್ಣಮಾಪಾಪಿ ಪೂರ್ವಂ ಭಕ್ತ್ಯಾ ವಹ್ನಿಃ ಕೇಶವೇsದಾತ್ ಪುನಸ್ತತ್ ।

ಚಕ್ರಂ ಚ ವಿಷ್ಣೋರ್ಬಹುಧಾ ವ್ಯವಸ್ಥಿತಂ ತದಗ್ನಿದತ್ತಂ ಪ್ರಾಕ್ತನಂ ಚೈಕಧಾssಸೀತ್ ॥೨೦.೨೨೪॥

 

ಗೋಮಂತಪರ್ವತದಲ್ಲಿ ಚಕ್ರವು ಕೃಷ್ಣನ ಬಳಿ ಬಂದಿತು. ಭಕ್ತಿಯಿಂದ ವಹ್ನಿಯು ಪುನಃ ಮತ್ತೆ ನಾರಾಯಣನಿಂದ ಪಡೆದ ಅದನ್ನು ಕೇಶವನಿಗೆ ಕೊಟ್ಟನು. ಭಗವಂತನ ಚಕ್ರವು ಬಹುರೂಪವಾಗಿರುವುದು.  ಅದರಿಂದ ಅಗ್ನಿ ಕೊಟ್ಟ ಚಕ್ರವೂ, ಮೊದಲಿದ್ದ ಚಕ್ರವೂ ಒಂದೇ ಆಗಿತ್ತು. (ಹೀಗಾಗಿ ವಿರೋಧವಿಲ್ಲ).

 

ಧನುಶ್ಚ ಗಾಣ್ಡೀವಮಥಾಬ್ಜಜಸ್ಯ ಕರೋತಿ ಯೇನಾಖಿಲಸಂಹೃತಿಂ ಸಃ ।

ಅಂಶೇನ ದತ್ತಂ ತದುಮಾಪತೇಶ್ಚ ಶಕ್ರಸ್ಯ ಸೋಮಸ್ಯ ಜಲೇಶಿತುಶ್ಚ ॥೨೦.೨೨೫॥

 

ತದನಂತರ ಯಾವುದರಿಂದ ಬ್ರಹ್ಮನು ಎಲ್ಲರ ಸಂಹಾರವನ್ನು ಮಾಡುತ್ತಾನೋ, ಅಂತಹ ಬ್ರಹ್ಮನಿಗೆ ಸೇರಿದ ಗಾಣ್ಡೀವ ಎನ್ನುವ ಧನುಸ್ಸನ್ನು ಅಗ್ನಿ ಅರ್ಜುನನಿಗೆ ಕೊಟ್ಟ. ಈ ಗಾಣ್ಡೀವ ಆಂಶಿಕವಾಗಿ ಶಿವನಿಗೆ ಕೊಡಲ್ಪಟ್ಟಿತ್ತು. ಹಾಗೆಯೇ  ಇಂದ್ರ, ಚಂದ್ರ ಹಾಗೂ ವರುಣನಿಗೂ ಕೊಡಲ್ಪಟ್ಟಿತ್ತು.

 

ತೇನೈವ ತೇ ಜಿಗ್ಯುರಥೋ ಜಗತ್ ತ್ರಯಂ ಪ್ರಸಾದತಸ್ತೇ ಕ್ರಮಶೋsಬ್ಜಯೋನೇಃ ।

ಅನನ್ಯಧಾರ್ಯ್ಯಂ ವಿಜಯಾವಹಂ ಚ ಭಾರೇಣ ಲಕ್ಷಸ್ಯ ಸಮಂ ಶುಭಾವಹಮ್ ॥೨೦.೨೨೬ ॥

 

ಧನುಸ್ಸನ್ನು ಹೊಂದಿರುವುದರಿಂದಲೇ ರುದ್ರಾದಿಗಳು ಕ್ರಮವಾಗಿ ಮೂರು ಲೋಕಗಳನ್ನು ಗೆದ್ದರು. ಬ್ರಹ್ಮನ ಅನುಗ್ರಹದಿಂದ ಅವರೆಲ್ಲರೂ ಯಾರಿಗೂ ಧರಿಸಲು ಅಸಾಧ್ಯವಾದ, ವಿಜಯವನ್ನು ತಂದುಕೊಡುವ, ಇಪ್ಪತ್ತುಲಕ್ಷ ತೊಲೆಗೆ(ಭಾರ=೨೦ ತೊಲೆ) ಸಮವಾಗಿರುವ, ಮಂಗಳವನ್ನು ನೀಡುವ ಆ ಗಾಣ್ಡೀವ ಬಿಲ್ಲನ್ನು ಧರಿಸಿದರು, ಗೆದ್ದರು ಕೂಡಾ.

 

ರಥಂ ಚ ಶುಭ್ರಾಶ್ವಯುತಂ ಜಯಾವಹಂ ತೂಣೌ ತಥಾ ಚಾಕ್ಷಯಸಾಯಕೌ ಶುಭೌ ।

ಧ್ವಜಂ ಚ ರಾಮಸ್ಯ ಹನೂಮದಙ್ಕಮಾದಾಯ ಸರ್ವಂ ವರುಣಾದರ್ಜ್ಜುನೇsದಾತ್ ॥೨೦.೨೨೭॥

 

ಬಿಳಿ ಕುದುರೆಗಳುಳ್ಳ ಜಯವನ್ನು ತರುವ ರಥವನ್ನೂ, ಮುಗಿಯದ ಬಾಣಗಳುಳ್ಳ ಮಂಗಳಕರವಾದ ಬತ್ತಳಿಕೆಗಳನ್ನೂ, ಹನುಮಂತನ ಚಿಹ್ನೆಯುಳ್ಳ ರಾಮಚಂದ್ರನಿಗೆ ಸೇರಿದ ಧ್ವಜನ್ನೂ, ಹೀಗೆ ಎಲ್ಲವನ್ನೂ  ಅಗ್ನಿ ವರುಣನಿಂದ ತಂದು ಅರ್ಜುನನಿಗೆ ಕೊಟ್ಟ.

Saturday, October 2, 2021

Mahabharata Tatparya Nirnaya Kannada 20: 215 - 220

ತತಃ ಕದಾಚಿತ್ ಖಾಣ್ಡವಂ ಕೃಷ್ಣಪಾರ್ತ್ಥೌ ಚಿಕ್ರೀಡಿಷೂ ಸತ್ಯಭಾಮಾಸುಭದ್ರೇ ।

ಆದಾಯ ಯಾತೌಪರಿಚಾರಕೈಶ್ಚ ರಥೇನ ಗನ್ಧರ್ವವರಾನುಗೀತೌ ॥ ೨೦.೨೧೫ ॥

 

ತದನಂತರ ಒಮ್ಮೆ ಕೃಷ್ಣಾರ್ಜುನರು ಕ್ರೀಡಾರ್ಥವಾಗಿ, ಸತ್ಯಭಾಮೆ ಹಾಗೂ ಸುಭದ್ರೆಯರೊಂದಿಗೆ,  ಪರಿಚಾರಕರಿಂದ ಕೂಡಿದವರಾಗಿ, ಗಂಧರ್ವರ ಗಾನದೊಂದಿಗೆ, ರಥದಿಂದ ಖಾಣ್ಡವವನಕ್ಕೆ ತೆರಳಿದರು.

 

ಸ್ವೈರಂ ತಯೋಸ್ತತ್ರ ವಿಕ್ರೀಡತೋಶ್ಚ ಸ್ತ್ರೀರತ್ನಾಭ್ಯಾಂ ಮನ್ದವಾತಾನುಜುಷ್ಟೇ ।

ವನೇ ಪ್ರಸೂನಸ್ತಬಕೋರುರಾಜಿತೇ ಜಲೇ ಚ ತಿಗ್ಮದ್ಯುತಿಕನ್ಯಕಾಯಾಃ ॥ ೨೦.೨೧೬ ॥

 

ಸೂರ್ಯನ ಮಗಳಾದ ಯಮುನಾನದಿಯ ನೀರಿನಲ್ಲಿ, ಹೂ-ಚಿಗುರುಗಳಿಂದ ತುಂಬಿರುವ ಕಾಡಿನಲ್ಲಿ, ಸ್ತ್ರೀಶ್ರೇಷ್ಠರಾದ ಸತ್ಯಾಭಾಮೆ ಸುಭದ್ರೆಯರ ಜೊತೆಗೆ, ತಂಗಾಳಿಯಿಂದ ಕೂಡಿರುವ ಆ ವನದಲ್ಲಿ ಅವರು ವಿಹರಿಸುತ್ತಿದ್ದರು.

 

ಭೂತ್ವಾ ವಿಪ್ರಸ್ತೌ ಯಯಾಚೇsನ್ನಮೇತ್ಯ ಕೃಶಾನುರೂಚೇ ಚ ಮತೇ ರಮೇಶಿತುಃ ।

ಪಾರ್ತ್ಥಃ ಕೀದೃಕ್ ತೇsನ್ನಮಿಷ್ಟಂ ವದೇತಿ ಸ ಚಾವಾದೀದ್ ವಹ್ನಿರಹಂ ವನಾರ್ತ್ಥೀ ॥ ೨೦.೨೧೭ ॥

 

ಆಗ ಅಗ್ನಿದೇವನು ಬ್ರಾಹ್ಮಣರೂಪನಾಗಿ ಅವರಲ್ಲಿಗೆ ಬಂದು ಅರ್ಜುನನಲ್ಲಿ ಅನ್ನವನ್ನು ಬೇಡಿದನು. ಅರ್ಜುನನು ಶ್ರೀಕೃಷ್ಣನ ಅನುಜ್ಞೆಯಂತೆ ‘ನಿನಗೆ ಯಾವರೀತಿಯ ಅನ್ನಬೇಕು’ ಎಂದು ಕೇಳಿದನು. ಆಗ ಅವನು : ‘ನಾನು ಅಗ್ನಿ, ನನಗೆ ಬೇಕಾಗಿರುವ ಅನ್ನ ಕಾಡು’ ಎಂದನು. 


[ಅಗ್ನಿ ಏಕೆ ಖಾಣ್ಡವವನವನ್ನು ಅನ್ನವಾಗಿ ಬೇಡಿದ ಎಂದರೆ:]

ಪ್ರಯಾಜಾನ್ ದೇವಾನನುಯಾಜಾಂಶ್ಚ ಶುಲ್ಕಂ ಹವಿರ್ದ್ದಾನೇ ದೇವತಾನಾಮಯಾಚಿಷಮ್ ।

ಬಲಹ್ರಾಸಸ್ತವ ಭೂಯಾದಿತಿ ಸ್ಮ ಶಪ್ತ್ವೈವ ತೇ ತಾಂಶ್ಚ ದದುಃ ಪುರಾ ಮಮ ॥ ೨೦.೨೧೮ ॥

 

‘ಹಿಂದೆ ದೇವತೆಗಳಿಗೆ ನಾನು ನನ್ನಲ್ಲಿ ಹೋಮಿಸಿದ ಹವಿಸ್ಸನ್ನು ತಂದುಕೊಡುವ ವಿಷಯದಲ್ಲಿ ಪ್ರಯಾಜ ಮತ್ತು  ಅನುಯಾಜ ಎನ್ನುವ ಆಹುತಿ ವಿಶೇಷಗಳನ್ನು ಶುಲ್ಕವಾಗಿ ಬೇಡಿದೆ. ಆಗ ದೇವತೆಗಳು “ನಿನಗೆ ಬಲಹ್ರಾಸವಾಗಲಿ” ಎನ್ನುವ ಶಾಪ ಕೊಟ್ಟೇ, ಪ್ರಯಾಜ ಮತ್ತು  ಅನುಯಾಜ ಆಹುತಿ ವಿಶೇಷವನ್ನು ಕೊಟ್ಟರು’.  

[ ಪ್ರಯಾಜ ಮಂತ್ರಗಳು ಐದು: ‘ಯೇ३ಯಜಾಮಹೇ ಸಮಿಧಃ ಸಮಿಧೋ ಅಗ್ನ ಆಜ್ಯಸ್ಯ ವ್ಯಂತೂ३ ವೌ३ಷಟ್’  ಮತ್ತು ಅನುಯಾಜ ಮಂತ್ರಗಳು ಮೂರು: ‘ದೇವಂ ಬರ್ಹಿರ್ವಸುವನೇ ವಸುಧೇಯಸ್ಯ ವೇತು’ ಇತ್ಯಾದಿಯಾಗಿ ಹೇಳುತ್ತಾರೆ. ‘ಪ್ರಯಾಜ ಮತ್ತು ಅನುಯಾಜ ಮಂತ್ರಗಳಿಂದ ಆಹುತಿಯನ್ನು ಬ್ರಾಹ್ಮಣರು ನನಗೆ ಕೊಟ್ಟರೆ, ನನ್ನಲ್ಲಿ ಹೊಮಿಸಿದ ಹವಿಸ್ಸನ್ನು ನಿಮಗೆ ತಂದು ತಲುಪಿಸುತ್ತೇನೆ. ಯಜ್ಞ ಪದ್ಧತಿಯಲ್ಲಿ ಈ ರೀತಿ ಪರಿಷ್ಕಾರ ಆಗಬೇಕು’ ಎಂದು ಅಗ್ನಿ ಬೇಡಿದ್ದ. ಆಗ ದೇವತೆಗಳು: ‘ನೀನು ಹೆಚ್ಚಿನ ಶುಲ್ಕ ಅಪೇಕ್ಷಿಸುತ್ತಿದ್ದೀಯ. ಕೊಡುತ್ತೇವೆ, ಆದರೆ ನಿನ್ನ ಬಲಹ್ರಾಸವಾಗಲಿ’ ಎಂದು ಶಾಪ ಕೊಟ್ಟರು].

 

ಪುನಃ ಪೂರ್ತ್ತಿಃ ಕೇನ ಮೇ ಸ್ಯಾದ್ ಬಲಸ್ಯೇತ್ಯಬ್ಜೋದ್ಭವಂ ಪೃಷ್ಟವಾನಸ್ಮಿ ನತ್ವಾ ।

ಯದಾ ವನಂ ಖಾಣ್ಡವಂ ಹಿ ತ್ವಮತ್ಸಿ ತದಾ ಬಲಂ ತೇ ಭವತೀತಿ ಸೋsಬ್ರವೀತ್ ॥೨೦.೨೧೯॥

 

‘ಆಗ ನಾನು ಚತುರ್ಮುಖನಿಗೆ ನಮಿಸಿ,  “ಮತ್ತೆ ಯಾವುದರಿಂದ ನನ್ನ ಬಲ ಮರಳಿ ಬರುವಂತಾಗುತ್ತದೆ” ಎಂದು ಕೇಳಿದಾಗ, ಅವನು  “ನೀನು ಖಾಣ್ಡವವನವನ್ನು ತಿಂದಾಗ ನಿನಗೆ ನಿನ್ನ ಬಲವು ಮರಳಿ ಬರುತ್ತದೆ” ಎಂದು ಹೇಳಿದ’.

 

ಶಕ್ರಸ್ಯೇದಂ ಖಾಣ್ಡವಂ ತೇನ ವಿಘ್ನಂ ಕರೋತ್ಯಸೌ ತೇನ ವಾಂ ಪ್ರಾರ್ತ್ಥಯಾಮಿ ।

ಇತ್ಯುಕ್ತೇ ತಂ ಪಾರ್ತ್ಥ ಊಚೇ ಯದಿ ಸ್ಯಾದ್ ರಥೋ ಧನುಶ್ಚಾಥ ಶಕ್ರಂ ನಿರೋತ್ಸ್ಯೇ ॥೨೦.೨೨೦॥

 

‘ಈ ಖಾಣ್ಡವ ವನವು ಇಂದ್ರನಿಗೆ ಸಂಬಂಧಪಟ್ಟಿದೆ. ಹಾಗಾಗಿ ಇಂದ್ರನು ಅಡ್ಡಿ ಉಂಟು ಮಾಡುತ್ತಾನೆ. ಆ ಕಾರಣದಿಂದ ನಿಮ್ಮಿಬ್ಬರನ್ನೂ ಬೇಡುತ್ತಿದ್ದೇನೆ’ ಎಂದು ಅಗ್ನಿ ಹೇಳಲು, ಅವನನ್ನು ಕುರಿತು ಅರ್ಜುನನು ಹೇಳುತ್ತಾನೆ:  ‘ಒಂದು ವೇಳೆ ಒಳ್ಳೆಯ ರಥ ಮತ್ತು ಧನುಸ್ಸು ನನಗೆ ಸಿಕ್ಕರೆ ನಾನು ಇಂದ್ರನನ್ನು ತಡೆಯುತ್ತೇನೆ’ ಎಂದು.