ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, October 26, 2021

Mahabharata Tatparya Nirnaya Kannada 21: 12-16

                                    ಹಯಂ ಸಭೀಮಫಲ್ಗುನಾ  ಹರೇ ರಥಂ ಸಮಾಸ್ಥಿತಾಃ ।

ವ್ಯಚಾರಯನ್ ಹರೇಃ ಸುತಾ ದಿನಸ್ಯ ಪಾದಮಾತ್ರತಃ ॥೨೧.೧೨॥

 

ಭೀಮಸೇನ, ಅರ್ಜುನ, ಮೊದಲಾದವರೊಂದಿಗೆ ಪರಮಾತ್ಮನ ರಥವನ್ನು ಏರಿದ ಶ್ರೀಕೃಷ್ಣನ ಮಕ್ಕಳು, ದಿನದ ಕಾಲು ಭಾಗದಲ್ಲಿ  ಕುದುರೆಯೊಂದಿಗೆ ಎಲ್ಲಾಕಡೆ ತಿರುಗಾಡಿಕೊಂಡು ಬಂದರು.

 

ಜಿತಾಃ ಸಮಸ್ತಭೂಭೃತೋ ಜರಾಸುತಾದಯಃ ಕ್ಷಣಾತ್ ।

ವೃಕೋದರಾದಿಭಿಸ್ತು ತೈರ್ಹಯಶ್ಚ ದಿವ್ಯ ಆಯಯೌ ॥೨೧.೧೩॥

 

ಜರಾಸಂಧ ಮೊದಲಾಗಿರುವ ಎಲ್ಲಾ ರಾಜರೂ ಕೂಡಾ ಒಂದೇ ಕ್ಷಣದಲ್ಲಿ ಭೀಮಸೇನ ಮೊದಲಾದವರಿಂದ ಸೋಲಿಸಲ್ಪಟ್ಟರು. ಹೀಗೆ ಆ ಅಲೌಕಿಕವಾದ ಕುದುರೆ ದಿನದ ಕಾಲುಭಾಗದಲ್ಲೇ ಎಲ್ಲಾ ಕಡೆ ತಿರುಗಿ ಹಿಂತಿರುಗಿ ಬಂತು. 

ಹಯಃ ಸ ಕೃಷ್ಣನಿರ್ಮ್ಮಿತೋ ದಿನೇನ ಲಕ್ಷಯೋಜನಮ್ ।

ಕ್ಷಮೋ ಹಿ ಗನ್ತುಮಞ್ಜಸಾ ದಿನಾಶ್ವಮೇಧಸಿದ್ಧಯೇ ॥೨೧.೧೪॥

 

ಒಂದು ದಿನದಲ್ಲಿ ಅಶ್ವಮೇಧವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಕೃಷ್ಣನಿಂದ ನಿರ್ಮಿಸಲ್ಪಟ್ಟ ಕುದುರೆಯು ಒಂದು ದಿನದಲ್ಲಿ ಲಕ್ಷ ಯೋಜನ ಸಂಚರಿಸಲು ಸಮರ್ಥವಾಗಿತ್ತು.  

 

ಪರಾಶರಾತ್ಮಜೋ ಹರಿರ್ಹರಿಂ ಯದಾ ತ್ವದೀಕ್ಷಯತ್ ।

ತದಾssಸಸಾದ ಹ ದ್ವಿಜಸ್ತೃಣಾವಹೋ ರುರಾವ ಚ ॥೨೧.೧೫॥

 

ಯಾವಾಗ ಪರಾಶರರ ಮಗನಾದ ವೇದವ್ಯಾಸರೂಪಿ ನಾರಾಯಣನು ಕೃಷ್ಣನನ್ನು ದೀಕ್ಷಿತನಾಗುವಂತೆ  ಮಾಡಿದನೋ,(ವೇದವ್ಯಾಸರೇ ಶ್ರೀಕೃಷ್ಣನಿಗೆ ಪೌರೋಹಿತ್ಯ ಮಾಡಿದರು). ಆಗ ಒಂದಿಷ್ಟು ಹುಲ್ಲನ್ನು ಹಿಡಿದ ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದ ಮತ್ತು ಅತ್ತನು ಕೂಡಾ.

[ಭಾಗವತದಲ್ಲಿ(೧೦.೧೦೦.೧೩) ಈ ಕುರಿತ ವಿವರಣೆ ಕಾಣಸಿಗುತ್ತದೆ: ‘ತೃಣಮೂಲಧರಃ ಕಶ್ಚಿದ್ ಬ್ರಾಹ್ಮಣೋsಭ್ಯೇತ್ಯ ಸತ್ವರಃ । ಚುಕ್ರೋಶ ಆರ್ತ ಉದ್ಬಾಹುರ್ಯಜ್ಞವಾಟಮುಖೇ ಸ್ಥಿತಃ]

 

ಬ್ರಜನ್ತಿ ಜನ್ಮನೋsನು ಮೇ ಸದಾ ಸುತಾ ಅದೃಶ್ಯತಾಮ್ ।

ಇತೀರಿತೇsರ್ಜ್ಜುನೋsಬ್ರವೀದಹಂ ಹಿ ಪಾಮಿ ತೇ ಸುತಾನ್ ॥೨೧.೧೬॥

 

ನನ್ನ ಮಕ್ಕಳೆಲ್ಲರೂ ಕೂಡಾ ಹುಟ್ಟಿದ ಕೂಡಲೇ ಅದೃಶ್ಯರಾಗಿಬಿಡುತ್ತಾರೆ ಎಂದು ಆ ಬ್ರಾಹ್ಮಣ  ಹೇಳಲ್ಪಡುತ್ತಿರಲು, ಅರ್ಜುನನು ಹೇಳಿದ: ‘ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ’ ಎಂದು.

[ ‘ಜಾತೋಜಾತೋ ಮಹಾಬಾಹೋ  ಪುತ್ರೋ ಮೇ ಹ್ರೀಯತೇsನಘ । ತ್ರಯೋ ಹತಾಶ್ಚತುರ್ಥಂ ತ್ವಂ ಕೃಷ್ಣ ರಕ್ಷಿತುಮರ್ಹಸಿ’ – ನನ್ನ ಮಕ್ಕಳು ಹುಟ್ಟಿದ ತಕ್ಷಣ ಕಾಣೆಯಾಗುತ್ತಿದ್ದಾರೆ,   ಮೂರುಮಂದಿ ಸತ್ತು ಹೋಗಿದ್ದಾರೆ. ನಾಲ್ಕನೆಯವನನ್ನು ಓ ಕೃಷ್ಣಾ, ನೀನು ರಕ್ಷಿಸಲು ತೊಡಗಬೇಕು’ ಎಂದು ಆ ಬ್ರಾಹ್ಮಣ ಬೇಡುವುದನ್ನು ಹರಿವಂಶದಲ್ಲಿ (ವಿಷ್ಣುಪರ್ವ ೧೧.೧೧)  ವಿವರಿಸಿರುವುದನ್ನು ಕಾಣುತ್ತೇವೆ.]

Sunday, October 24, 2021

Mahabharata Tatparya Nirnaya Kannada 21: 07-11

                        ಪ್ರಿಯಾಶ್ಚ ಯೇ ರಮೇಶಿತುರ್ಹರಿಂ ತ್ರಿರೂಪಮೇತ್ಯ ತೇ ।

ವಸಿಷ್ಠವೃಷ್ಣಿನನ್ದನಂ ಭೃಗೂತ್ತಮಂ ತಥಾssರ್ಚ್ಚಯನ್ ॥೨೧.೦೭॥

 

ಯಾರು ಪರಮಾತ್ಮನಿಗೆ ಪ್ರಿಯರಾಗಿದ್ದಾರೋ(ಯಾರು ಭಗವದ್ಭಕ್ತರೋ), ಅವರೆಲ್ಲರೂ ವಸಿಷ್ಠ ವಂಶದಲ್ಲಿ ಬಂದಿರುವ ವೇದವ್ಯಾಸರು, ಯಾದವ ವಂಶದಲ್ಲಿ ಬಂದಿರುವ ವಾಸುದೇವ(ಶ್ರೀಕೃಷ್ಣ) ಮತ್ತು ಭೃಗು ವಂಶದಲ್ಲಿ ಬಂದಿರುವ ಪರಶುರಾಮ- ಈ ಮೂರು ರೂಪದಲ್ಲಿರುವ ಪರಮಾತ್ಮನನ್ನು ಹೊಂದಿ ಚೆನ್ನಾಗಿ ಪೂಜಿಸಿದರು.

 

ಕೃತಾರ್ತ್ಥತಾಂ ಚ ತೇ ಯಯೂ ರಮೇಶಪಾದದರ್ಶನಾತ್ ।

ರವಿಗ್ರಹೇ ಸಮಾಪ್ಲುತಾ ಭೃಗೂದ್ವಹೋತ್ಥತೀರ್ತ್ಥಕೇ ॥೨೧.೦೮॥

 

ಪರಶುರಾಮನಿಂದ ನಿರ್ಮಿತವಾದ ತೀರ್ಥದಲ್ಲಿ(ಸಮಂತಪಂಚಕದಲ್ಲಿ) ಸ್ನಾನಮಾಡಿದ ಅವರೆಲ್ಲರೂ, ಪರಮಾತ್ಮನ ಪಾದ ದರ್ಶನದಿಂದ ಧನ್ಯತೆಯನ್ನು ಹೊಂದಿದರು.

 

ಅನುಗ್ರಹಂ ವಿಧಾಯ ಸಸ್ವಕೇಷು ಕೇಶವಸ್ತ್ರಿವೃತ್ ।

ಅಯಾಜಯಚ್ಚ ಶೂರಜಂ ಮಖೈಃ ಸಮಾಪ್ತದಕ್ಷಿಣೈಃ ॥೨೧.೦೯॥

 

ಆ ಕೇಶವನು ಮೂರು ರೂಪಗಳಿಂದ ಕೂಡಿದವನಾಗಿ, ತನ್ನವರಿಗೆ ಅನುಗ್ರಹವನ್ನು ಮಾಡಿ, ಶೂರಸೇನ ಪುತ್ರನಾದ ವಸುದೇವ ಪರಿಪೂರ್ಣವಾದ ದಕ್ಷಿಣೆಯುಳ್ಳ ಯಾಗಗಳನ್ನು ಮಾಡಲು ಕಾರಣನಾದನು.

 

ಸಮಸ್ತಲೋಕಸಂಸ್ಥಿತಾತ್ಮಭಕ್ತಿಮಜ್ಜನಸ್ಯ ಸಃ ।

ಸುಕಾಲದರ್ಶನಾತ್ ಪರಂ ವ್ಯಧಾದನುಗ್ರಹಂ ಹರಿಃ ॥೨೧.೧೦॥

 

ಪರಮಾತ್ಮನು ಸಮಸ್ತ ಲೋಕದಲ್ಲಿರುವ ತನ್ನ ಭಕ್ತರಿಗೆ, ಈ ಪುಣ್ಯಕಾಲದಲ್ಲಿ ದರ್ಶನವನ್ನು ನೀಡಿ  ವಿಶೇಷವಾದ ಅನುಗ್ರಹವನ್ನು ಮಾಡಿದನು.

 

ತತೋ ಯಯೌ ಸ್ವಕಾಂ ಪುರೀಂ ಪೃಥಾಸುತೈಃ ಸಹಾಚ್ಯುತಃ ।

ಚಕಾರ ತತ್ರ ಚಾsಹ್ನಿಕಂ ಕ್ರತುಂ ಮಹಾಶ್ವಮೇಧಕಮ್ ॥೨೧.೧೧॥

 

ತದನಂತರ, ಕುಂತಿಯ ಮಕ್ಕಳಾದ ಪಾಂಡವರಿಂದ ಕೂಡಿಕೊಂಡು ತನ್ನ ಪಟ್ಟಣಕ್ಕೆ ತೆರಳಿದ ಶ್ರೀಕೃಷ್ಣ, ತನ್ನ ಪಟ್ಟಣದಲ್ಲಿ ಒಂದು ದಿನದ ಅಶ್ವಮೇಧ ಎನ್ನುವ ಯಾಗವನ್ನು ಮಾಡಿದನು.

[ಭಾಗವತ ಮತ್ತು ಹರಿವಂಶದಲ್ಲಿ ಈ ಅಶ್ವಮೇಧಯಾಗದ ಕುರಿತು ಹೇಳಿರುವುದನ್ನು ಕಾಣಬಹುದು:   ಕದಾಚಿದ್ ವಾಜಿಮೇಧೇನ ಯಷ್ಟುಮುದ್ಯಮ್ಯ ಕೇಶವಃ । ಮಹೀಮ್ ಪ್ರದಕ್ಷಿಣಂ ಕರ್ತುಂ ಪ್ರಾಹಿಣೋತ್ ಪ್ರೋಕ್ಷಿತಂ  ಹಯಂ’ [ಭಾಗವತ ೧೦.೧೦೦.೧] ಶ್ರೀಕೃಷ್ಣನು ಅಶ್ವಮೇಧಯಾಗ ಮಾಡಲು ಸಿದ್ಧನಾಗಿ, ಇಡೀ ಭೂಮಿಯನ್ನು ಸುತ್ತಿ ಬರಲು, ಮಂತ್ರದಿಂದ ಸಂಸ್ಕೃತವಾದ ಕುದುರೆಯನ್ನು ಕಳುಹಿಸಿದ.  ತತಃ ಕದಾಚಿದ್ ಧರ್ಮಾತ್ಮಾ ದೀಕ್ಷಿತೋ ಮಧುಸೂದನಃ । ಏಕಾಹೇನ ಮಹಾಬಾಹುಃ ಶಾಸ್ತ್ರೇ ದೃಷ್ಟೇನ ಕರ್ಮಣಾ’ (ಹರಿವಂಶ-ವಿಷ್ಣುಪರ್ವ ೧೧೧.೭) ಇಲ್ಲಿ ಏಕಾಹೇನ ಎಂದಿದೆ. ಅಂದರೆ ಅದು ಒಂದು ದಿನದ ಯಾಗವಾಗಿತ್ತು].

Friday, October 22, 2021

Mahabharata Tatparya Nirnaya Kannada 21: 01-06

 

೨೧. ಪಾಣ್ಡವವನಪ್ರವೇಶಃ

ಓಂ

ಜನಾರ್ದ್ದನಾಜ್ಞಯಾ ಮಯಃ ಸಮಸ್ತಕೌತುಕೋತ್ತರಾಮ್ ।

ಸಭಾಂ ವಿಧಾಯ ಭೂಭೃತೇ ದದೌ ಗದಾಂ ವೃಕೋದರೇ ॥೨೧.೦೧॥

 

ಮಯನು ಕೃಷ್ಣನ ಆಜ್ಞೆಯಂತೆ ಎಲ್ಲಾ ರೀತಿಯ ಅಚ್ಚರಿಯಿಂದ ಕೂಡಿರುವ,  ಎಲ್ಲಕ್ಕೂ ಮಿಗಿಲಾಗಿರುವ ಸಭೆಯನ್ನು ಯುಧಿಷ್ಠಿರನಿಗಾಗಿ ನಿರ್ಮಿಸಿಕೊಟ್ಟು, ಭೀಮಸೇನನಿಗೆ ಗದೆಯನ್ನು ಒಪ್ಪಿಸಿದನು.

 

[ಇಲ್ಲಿ ‘ವೃಕೋದರಾಯ ಗದಾಂ ದದೌ’ ಎಂದು ಚತುರ್ಥೀ ವಿಭಕ್ತಿಯಲ್ಲಿ ಹೇಳಬೇಕಿತ್ತು. ಆದರೆ ಹಾಗೇ ಹೇಳದೇ  ಸಪ್ತಮೀ ವಿಭಕ್ತಿಯಲ್ಲಿ ಹೇಳಿದ್ದಾರೆ. ಏಕೆ ಹೀಗೆ ಎನ್ನುವುದರ ಹಿನ್ನೆಲೆ ನಮಗೆ ಮಹಾಭಾರತವನ್ನು ನೋಡಿದಾಗ ತಿಳಿಯುತ್ತದೆ. ‘ಅಸ್ತಿ ಬಿನ್ದುಸರಸ್ಯುಗ್ರಾ ಗದಾ ಚ ಕುರುನನ್ದನ । ನಿಹಿತಾ ಯೌವನಾಶ್ವೇನ ರಾಜ್ಞಾ ಹತ್ವಾ ರಣೇ ರಿಪೂನ್’ (ಸಭಾಪರ್ವ: ೩.೬) ಬಿನ್ದುಸರಸು ಎನ್ನುವ ಸರೋವರದಲ್ಲಿ ಯೌವನಾಶ್ವನ(ಮುಚುಕುನ್ದನ) ಗದೆ ಇತ್ತು. (ಯುವನಾಶ್ವ ಎನ್ನುವ ರಾಜನ ಮಗ ಮಾನ್ಧಾತ. ಮಾನ್ಧಾತನ ಮಗ ಮುಚುಕುನ್ದ). ಅದನ್ನು ಮಯ ಭೀಮಸೇನನಿಗೆ ಕೊಟ್ಟ. ಆದರೆ ಇಲ್ಲಿ ಸಪ್ತಮಿ ವಿಭಕ್ತಿ ಪ್ರಯೋಗ ಏಕೆ ಎನ್ನುವುದು ಮುಂದಿನ ಶ್ಲೋಕದಲ್ಲಿ ತಿಳಿಯುತ್ತದೆ:]

 

ಸ ವಾಯುಧಾರಿತಾಂ ಗದಾಂ ಹಿ ಯೌವನಾಶ್ವಭೂಭೃತಾ ।

ಪ್ರಸಾದತೋsಸ್ಯ ಲಮ್ಭಿತಾಮವಾಪ್ಯ ಮೋದಮಾಪ ಹ ॥೨೧.೦೨॥

 

ಮುಚುಕುನ್ದ ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನ ಅನುಗ್ರಹದಿಂದ ಧರಿಸಿದ್ದ. ಆ ತನ್ನ ಗದೆಯನ್ನು ಭೀಮಸೇನ ಮಯನ ಮೂಲಕ ಪಡೆದು ಸಂತಸವನ್ನು ಹೊಂದಿದ.

[ಹೀಗಾಗಿ ಆ ಗದೆ ಭೀಮಸೇನನಿಗೆ ಮಯನ ಕಾಣಿಕೆ ಅಲ್ಲ. ಮುಖ್ಯಪ್ರಾಣನ ಗದೆಯನ್ನು ಮುಖ್ಯಪ್ರಾಣನಿಗೆ(ಭೀಮನಿಗೆ) ಮಯ ಒಪ್ಪಿಸಿದ್ದು ಅಷ್ಟೇ. ಹೀಗಾಗಿ ಆಚಾರ್ಯರು ಸಪ್ತಮೀ ವಿಭಕ್ತಿ ಪ್ರಯೋಗ ಮಾಡಿರುವುದು]. 

 

ಪುನಶ್ಚ ವತ್ಸರದ್ವಯಂ ಸಮುಷ್ಯ ಕೇಶವೋ ಯಯೌ ।

ಸಮರ್ಚ್ಚಿತಶ್ಚ ಪಾಣ್ಡವೈರ್ವಿಯೋಜನೇsಸ್ಯ ಚಾಕ್ಷಮೈಃ ॥೨೧.೦೩॥


ಮತ್ತೆ (ಖಾಣ್ಡವದಾಹ ಆದಮೇಲೆ) ಎರಡು ವರ್ಷಗಳ ಕಾಲ ಇಂದ್ರಪ್ರಸ್ಥದಲ್ಲಿಯೇ ವಾಸಮಾಡಿದ ಶ್ರೀಕೃಷ್ಣನು, ತನ್ನಿಂದ ದೂರದಲ್ಲಿರುವುದನ್ನು ಸಹಿಸುವುದರಲ್ಲಿ ಅಸಮರ್ಥರಾದ ಪಾಂಡವರಿಂದ ಚೆನ್ನಾಗಿ ಅರ್ಚಿಸಲ್ಪಟ್ಟವನಾಗಿ, ತನ್ನ ಪಟ್ಟಣವಾದ ದ್ವಾರಕೆಗೆ ತೆರಳಿದನು.

 

ತತೋ ವಸನ್ ಸ್ವಪುರ್ಯ್ಯಜಃ ಕ್ವಚಿದ್ ರವಿಗ್ರಹೇ ಹರಿಃ ।

ಸದಾರಪುತ್ರಬಾನ್ಧವಃ ಸಮನ್ತಪಞ್ಚಕಂ ಯಯೌ ॥೨೧.೦೪॥

 

ತದನಂತರ, ಎಂದೂ ಹುಟ್ಟದ ಶ್ರೀಕೃಷ್ಣನು, ತನ್ನ ಪಟ್ಟಣದಲ್ಲಿ ವಾಸಮಾಡುತ್ತಾ, ಒಂದಾನೊಂದು ಸೂರ್ಯಗ್ರಹಣದ ಸಂದರ್ಭದಲ್ಲಿ ತನ್ನ ಬಾಂಧವರು, ಮಕ್ಕಳು ಮತ್ತು ಹೆಂಡತಿಯರೊಡಗೂಡಿ ಸಮಂತಪಂಚಕಕ್ಕೆ (ಕುರುಕ್ಷೇತ್ರಕ್ಕೆ) ಬಂದನು.  

 

ಪೃಥಾಸುತಾಶ್ಚ ಸರ್ವಶಃ ಸದಾರಪುತ್ರಮಾತೃಕಾಃ ।

ಕ್ಷಿತೀಶ್ವರಾಶ್ಚ ಸರ್ವಶಃ ಪ್ರಿಯಾಪ್ರಿಯಾ ಹರೇಶ್ಚ ಯೇ ॥೨೧.೦೫॥

 

ಪೃಥೆಯ ಮಕ್ಕಳಾದ ಪಾಂಡವರೂ ಕೂಡಾ ತಮ್ಮ ಹೆಂಡತಿ, ಮಕ್ಕಳು ಮತ್ತು ತಾಯಿಯೊಂದಿಗೆ ಅಲ್ಲಿಗೆ ಬಂದರು. ಪರಮಾತ್ಮನಿಗೆ ಪ್ರಿಯರಾದವರು, ಅಪ್ರಿಯರಾದವರು, ಹೀಗೆ ಎಲ್ಲಾ ರಾಜರೂ ಕೂಡಾ ಅಲ್ಲಿಗೆ ಬಂದರು.

 

ತಥೈವ ನನ್ದಗೋಪಕಃ ಸದಾರಗೋಪಗೋಪಿಕಃ ।

ಮುನೀಶ್ವರಾಶ್ಚ ಸರ್ವತಃ ಸಮೀಯುರತ್ರ ಚ ಪ್ರಜಾಃ ॥೨೧.೦೬॥

 

ಹಾಗೆಯೇ ನಂದಗೋಪನೂ ಕೂಡಾ ತನ್ನ ಹೆಂಡತಿ, ಗೋಪ-ಗೋಪಿಕೆಯರಿಂದ ಒಡಗೂಡಿ ಅಲ್ಲಿಗೆ ಬಂದ. ಮುನೀಶ್ವರರೂ ಕೂಡಾ ಬಂದರು. ಪರಮಾತ್ಮನ ಭಕ್ತರಾಗಿರುವ ಪ್ರಜೆಗಳೂ ಕೂಡಾ ಅಲ್ಲಿಗೆ ಬಂದರು.