ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 9, 2021

Mahabharata Tatparya Nirnaya Kannada 21: 106-112

                       ಯುಧಿಷ್ಠಿರೇ ಬ್ರುವತ್ಯಜಂ ಮಖೇನ ಮೇ ತ್ವಲಂ ತ್ವಿತಿ ।

ತಮಾಹ ಮಾರುತಾತ್ಮಜೋ ನಿಹನ್ಮಿ ಮಾಗಧಂ ರಣೇ             ೨೧.೧೦೬

 

ಯುಧಿಷ್ಠಿರನು ಭಗವಂತನನ್ನು ಕುರಿತು ‘ನನಗೆ ಈ ಯಾಗ ಬೇಕಿಲ್ಲ ಎಂದು ಹೇಳುತ್ತಿರಲು,  ಭೀಮಸೇನ ‘ಯುದ್ಧದಲ್ಲಿ  ಜರಾಸಂಧನನ್ನು ಕೊಲ್ಲುತ್ತೇನೆ’ ಎಂತನ್ದನು.

 

ಇತೀರಿತೇsವದದ್ಧರಿರ್ವ್ರಜಾಮಹೇ ವಯಂ ತ್ರಯಃ ।

ಅಹಂ ಚ ಭೀಮಫಲ್ಗುನೌ ನಿಹನ್ತುಮೇವ ಮಾಗಧಮ್     ೨೧.೧೦೭

 

ಈರೀತಿಯಾಗಿ ಭೀಮಸೇನನಿಂದ ಹೇಳಲ್ಪಡುತ್ತಿರಲು, ಶ್ರೀಕೃಷ್ಣ : ‘ನಾನು, ಭೀಮ ಮತ್ತು ಅರ್ಜುನ-ಮೂವರೂ ಜರಾಸಂಧನನ್ನು ಕೊಲ್ಲಲಿಕ್ಕಾಗಿಯೇ ಹೋಗುವೆವು’ ಎಂದ. 

ವೃಕೋದರೇಣ ಹನ್ಯತೇ ಯದಿ ಸ್ಮ ಮಾಗಧಾಧಿಪಃ ।

ಮಖಶ್ಚ ಸೇತ್ಸ್ಯತೇ ದ್ಧ್ರುವಂ ಜಗಚ್ಚ ತೇ ವಶೇ ಭವೇತ್   ೨೧.೧೦೮

 

‘ಒಂದುವೇಳೆ ಜರಾಸಂಧನು ಭೀಮಸೇನನಿಂದ ಸಂಹರಿಸಲ್ಪಟ್ಟರೆ ಆಗ ನಿನಗೆ ರಾಜಸೂಯ ಯಾಗ ಸುಲಭವಾಗಿ ಸಿದ್ಧಿಸುತ್ತದೆ. ಇಡೀ ಜಗತ್ತು ನಿನ್ನ ವಶಕ್ಕೆ ಬರುತ್ತದೆ’.

[ಈಗಾಗಲೇ ೨೨,೮೦೦ ಮಂದಿ ರಾಜರು ಜರಾಸಂಧನ ಸೆರೆಯಲ್ಲಿದ್ದಾರೆ. ಜರಾಸಂಧನನ್ನು ಕೊಂದಾಗ ಎಲ್ಲರೂ ನಿರಾಯಾಸವಾಗಿ ಯುಧಿಷ್ಠಿರನಿಗೆ ಕಪ್ಪ ಕೊಡುತ್ತಾರೆ].

 

ಇತೀರಿತೇ ತು ಶೌರಿಣಾ ಜಗಾದ ಧರ್ಮ್ಮನನ್ದನಃ।

ಸ ಶೂರಸೇನಮಣ್ಡಲಪ್ರಹಾಣತೋ ಹರೇಸ್ತ್ರಸನ್          ೨೧.೧೦೯

 

ಈರೀತಿಯಾಗಿ ಶ್ರೀಕೃಷ್ಣ ಹೇಳಲು, ಯಾದವರು ಮಧುರಾ ನಗರವನ್ನು ಬಿಟ್ಟದ್ದರಿಂದ ಪರಮಾತ್ಮನ ಬಗೆಗೆ ಭಯಪಡುತ್ತಾ(ಜರಾಸಂಧನ ಮೇಲಿನ ಭಯದಿಂದ ಯಾದವರು ಮಧುರೆಯನ್ನು ಬಿಟ್ಟಿರುವುದು ಎಂಬ ತಪ್ಪು ಕಲ್ಪನೆಯಿಂದ) ಧರ್ಮರಾಜನು ಮಾತನಾಡಿದನು:

 

ಭಯಾದ್ಧಿ ಯಸ್ಯ ಮಾಧುರಂ ವಿಹಾಯ ಮಣ್ಡಲಂ ಗತಾಃ ।

ಭವನ್ತ ಏವ ಸಾಗರಂ ತತೋ ಬಿಭೇಮ್ಯಹಂ ರಿಪೋಃ     ೨೧.೧೧೦

 

‘ಯಾರ ಭಯದಿಂದ ನೀವೂ (ಯಾದವರೂ) ಕೂಡಾ ಮಧುರೆಯನ್ನು ಬಿಟ್ಟು ಸಮುದ್ರವನ್ನು ಸೇರಿದಿರೋ, ಆ ಕಾರಣದಿಂದ ನಾನು ಜರಾಸಂಧನಿಂದ ಭಯಪಡುತ್ತಿದ್ದೇನೆ.

 

ಇಮೌ ಹಿ ಭೀಮಫಲ್ಗುನೌ ಮಮಾಕ್ಷಿಣೀ ಸದಾ ಪ್ರಭೋ ।

ಮನೋನಿಭೋ ಭವಾನ್ ಸದಾ ನ ವೋ ವಿನಾsಸ್ಮ್ಯತಃ ಪುಮಾನ್             ೨೧.೧೧೧

 

ಈ ಭೀಮಾರ್ಜುನರು ನನ್ನ ಕಣ್ಣಿನಂತೆ. ನೀನು ಮನಸ್ಸಿನಂತೆ. ಅದರಿಂದ ನಿಮ್ಮನ್ನು ಬಿಟ್ಟು ನಾನಿಲ್ಲ.

[‘ಭೀಮಾರ್ಜುನಾವುಭೌ ನೇತ್ರೇ ಮನೋ ಮನ್ಯೇ ಜನಾರ್ದನಮ್ । ಮನಶ್ಚಶುರ್ವಿಹೀನಸ್ಯ ಕೀದೃಶಂ ಜೀವಿತಂ ಭವೇತ್’ (ಸಭಾಪರ್ವ ೧೬.೨)    ಭೀಮಾರ್ಜುನರು ನನಗೆ ಕಣ್ಗಳಿದ್ದ ಹಾಗೆ. ಕೃಷ್ಣ ನನ್ನ ಮನಸ್ಸಿದ್ದ ಹಾಗೆ. ಮನಸ್ಸು ಕಣ್ಣು ಇಲ್ಲದೇ ಹೋದರೆ ಹೇಗೆ ಜೀವಿತಕ್ಕೆ ಅರ್ಥವಿಲ್ಲದ್ದಾಗುತ್ತದೋ ಹಾಗೇ  ನೀವು ಮೂವರು ನನ್ನ ಬಾಳಲ್ಲಿ ಇಲ್ಲದೇ ಹೋದರೆ ನನ್ನ ಜೀವನಕ್ಕೆ ಅರ್ಥವೇನು ಎಂದು ಕೇಳುತ್ತಾನೆ ಯುಧಿಷ್ಠಿರ].

 

ಅತೋ ನ ಜೀವಿತಾತ್ ಪ್ರಿಯಾನಹಂ ರಿಪೋರ್ಬಲೀಯಸಃ ।

ಸಕಾಶಮಾತ್ಮಹೇತುತಃ ಪ್ರಯಾತಯಾಮಿ ವೋ ವಿಭೋ             ೨೧.೧೧೨

 

ಆ ಕಾರಣದಿಂದ ನನ್ನ ಪ್ರಾಣಕ್ಕಿಂತಲೂ ಕೂಡಾ ಮಿಗಿಲಾಗಿರುವ ನಿಮ್ಮನ್ನು ನನ್ನ ಒಂದು ಕೀರ್ತಿಗಾಗಿ (ರಾಜಸೂಯ ಯಾಗ ಮಾಡಿದ್ದಾನೆ ಎನ್ನುವ ಯಶಸ್ಸಿಗಾಗಿ) ಬಲಿಷ್ಠನಾದ ಶತ್ರುವಿನ ಬಳಿಗೆ ಕಳುಹಿಸುವುದಿಲ್ಲ’.

Sunday, December 5, 2021

Mahabharata Tatparya Nirnaya Kannada 21: 99-105

 

ಇತೀರಿತೇsಮುನಾ ಹರಿಃ ಸಮುದ್ಯಮಾತ್ ಪ್ರಧಾನತಃ ।

ಸ್ಥಿತೇ ಹಿ ಯಜ್ಞಕಾರಣೇ ವೃಕೋದರೇ ಜಗಾದ ಹ           ೨೧.೯೯

 

ಈರೀತಿಯಾಗಿ ಭೀಮಸೇನನಿಂದ ಹೇಳಲ್ಪಡುತ್ತಿರಲು, ‘ಪ್ರಧಾನವಾಗಿರುವ ಪ್ರಯತ್ನವನ್ನು ಮಾಡುವ, ಯಜ್ಞಕ್ಕೆ ಕಾರಣನಾಗಿರುವ ಭೀಮಸೇನನಿರಲು ಈ ಯಜ್ಞ ನಡೆಯುವುದು ಸೂಕ್ತ ಎನ್ನುತ್ತಾನೆ  ಶ್ರೀಕೃಷ್ಣ.

[ಸಮಗ್ರ ರಾಜಕೀಯ ಪರಿಸ್ಥಿತಿಯೊಂದಿಗೆ ಆದಿಭೌತಿಕ ಪರಿಸ್ಥಿತಿಯನ್ನೂ ಕೂಡಾ ಕೃಷ್ಣ ಇಲ್ಲಿ ಹೇಳುತ್ತಾ, ರಾಜಕೀಯದ ಪ್ರಾಮುಖ್ಯತೆಯನ್ನು ಪ್ರತಿಪಾದನೆ ಮಾಡುತ್ತಿದ್ದಾನೆ].


ಸ ಏಕ ಏವ ಪೂರುಷೋ ಜರಾಸುತೋsದ್ಯ ವರ್ತ್ತತೇ ।

ಸಮಸ್ತಸದ್ವಿರೋಧಿನಾಂ ಬಲಂ ಕಲೇರನನ್ತರಃ              ೨೧.೧೦೦

 

ಈ ಯಾಗಕ್ಕೆ ಅಡ್ಡಿ ಮಾಡುವ ಒಬ್ಬನೇ ಒಬ್ಬ ಪುರುಷನಿದ್ದಾನೆ. ಅವನೇ ಜರಾಸಂಧ. ಎಲ್ಲಾ ದುಷ್ಟರಿಗೆ ಬಲ ತುಂಬುವಂತೆ ಇರುವ(ಆಶ್ರಯಭೂತನು) ಅವನು ಕಲಿಯ ನಂತರದ ಸ್ಥಾನದಲ್ಲಿದ್ದಾನೆ.  

 

ತಥಾ ಸತಾಂ ಸಮಾಶ್ರಯೋ ಯದುದ್ಭವಾಃ ಸತಾಂ ಗುಣಾಃ ।

ಸ ಏಕ ಏವ ತಾದೃಶಸ್ತ್ವಯಾ ವಿಚಿನ್ತ್ಯ ಯಾತ್ಯತಾಮ್    ೨೧.೧೦೧

 

ಹಾಗೆಯೇ, ಸಜ್ಜನರಿಗೆ ಆಶ್ರಯನಾಗಿರುವವನು ಇಲ್ಲಿದ್ದಾನೆ. (ಹೇಗೆ ಅಸಜ್ಜನರಿಗೆ ಆಶ್ರಯನಾಗಿರುವ ಜರಾಸಂಧ ಅಲ್ಲಿದ್ದಾನೋ ಹಾಗೆಯೇ ಔದಾರ್ಯ, ಜ್ಞಾನ, ಭಕ್ತಿ,  ಮೊದಲಾದ ಎಲ್ಲಾ ಗುಣಗಳು ಯಾವ ಮುಖ್ಯಪ್ರಾಣನ ಅನುಗ್ರಹದಿಂದ ಸಜ್ಜನರಿಗೆ ಬರುವುದೋ ಅಂತಹ ಭೀಮಸೇನ ಇಲ್ಲಿದ್ದಾನೆ) ಅದರಿಂದಾಗಿ ನಿನ್ನಿಂದ(ಯುಧಿಷ್ಠಿರನಿಂದ) ಚಿಂತನಾಪೂರ್ವಕವಾಗಿ  ಯುದ್ಧಕ್ಕೆಂದು (ಆ ಭೀಮಸೇನನು) ಕಳುಹಿಸಲ್ಪಡಲಿ.

 

ಯದಿ ಸ್ಮ ತೇನ ಮಾಗಧೋ ನಿಹನ್ಯತೇ ಸತಾಂ ಜಯಃ ।

ವಿಪರ್ಯ್ಯಯೇಣ ಚಾಸತಾಮಿತಿ ಸ್ಮ ವಿದ್ಧಿ ನಾನ್ಯಥಾ      ೨೧.೧೦೨

 

ಒಂದು ವೇಳೆ ಭೀಮಸೇನನಿಂದ ಜರಾಸಂಧ ಹತನಾದರೆ ಸಜ್ಜನರಿಗೆ ಜಯವು. ಇಲ್ಲದಿದ್ದರೆ ದುರ್ಜನರಿಗೆ ಜಯವು. ಹೀಗೇ ತಿಳಿ, ಬೇರೆರೀತಿಯಾಗಿ ಅಲ್ಲ.

[ರಾಜಸೂಯ ಯಾಗ ಸಮಗ್ರ ವೇದಗಳ ನಿರ್ಣಯ. ಸಮಗ್ರ ಸತ್ಕರ್ಮಗಳ ನಿರ್ಣಯ. ವೇದಗಳ ನಿಯಮ ಸಮಗ್ರವಾಗಿರಬೇಕಾದರೆ ಈ ಯಾಗ ಯಶಸ್ವಿಯಾಗಬೇಕು. ಒಂದು ವೇಳೆ, ಸಜ್ಜನರಿಗೆ ಆಶ್ರಯನಾದ ಮುಖ್ಯಪ್ರಾಣನ ಅವತಾರವಾದ ಭೀಮಸೇನನಿಂದ ಜರಾಸಂಧನ ಕೊಲೆಯಾದರೆ - ಸಮಗ್ರ ವೇದ, ಇತಿಹಾಸ, ಪುರಾಣಗಳು, ನೀತಿಗಳು, ಭಕ್ತಿ ಮೊದಲಾದ ಗುಣಗಳ ಜಯವಾದಂತೆ. ವ್ಯತಿರಿಕ್ತ ನಡೆದರೆ  ವೇದ-ಧರ್ಮಗಳು  ಪ್ರಮಾಣ ಅಲ್ಲಾ ಎಂದು ಸಿದ್ದವಾಗುತ್ತದೆ. ಹೀಗೇ ತಿಳಿ. ಬೇರೆ ರೀತಿಯಾಗಿ ಅಲ್ಲಾ ಎಂದಿದ್ದಾನೆ ಶ್ರೀಕೃಷ್ಣ. ಹೀಗಾಗಿ ರಾಜಸೂಯ ಯಾಗ ಎನ್ನುವುದು ಇಂದಿನ ಯುದ್ಧಗಳಂತೆ ತಮ್ಮ ಪ್ರಭುತ್ವವನ್ನು ಸಾಧಿಸಲು ಮಾಡಿದ ಯುದ್ಧವಾಗಿರಲಿಲ್ಲ. ಅದು ಜಗತ್ತಿಗೇ ಒಂದು ಸಂದೇಶವಾಗಿತ್ತು. ಜರಾಸಂಧ ಗೆದ್ದರೆ ವೇದ ಪ್ರಮಾಣವೇ ಅಲ್ಲವೆಂದು ತಿಳಿಯಬೇಕು, ಭೀಮಸೇನ ಗೆದ್ದರೆ ವೇದ-ಧರ್ಮ ಪ್ರಮಾಣ ಎಂದು ತಿಳಿದುಕೊಳ್ಳಬೇಕು -ಇಷ್ಟು ಸೈದ್ಧಾಂತಿಕ ಹಿನ್ನೆಲೆ ಭೀಮ-ಜರಾಸಂಧರ ಯುದ್ಧಕ್ಕಿತ್ತು ಎನ್ನುವುದು ಶ್ರೀಕೃಷ್ಣನ ಈ ಮಾತಿನಿಂದ ನಮಗೆ ತಿಳಿಯುತ್ತದೆ].

 

ಸ ಪಾರಮೇಷ್ಠ್ಯಸತ್ಪದಂ ಪ್ರಯಾತ್ಯಸಂಶಯಂ ಯುಧಿ ।

ಯ ಏವ ಹನ್ತಿ ಮಾಗಧಂ ಸ ವೇದಧರ್ಮ್ಮಪಾಲಕಃ        ೨೧.೧೦೩

 

ಯಾರು ಜರಾಸಂಧನನ್ನು ಕೊಲ್ಲುತ್ತಾನೋ ಅವನು ವೇದದ ಧರ್ಮವನ್ನು ಪಾಲನೆ ಮಾಡುವವನು. ಅವನೇ ಸಂಶಯಕ್ಕೆ ಎಣೆಯಿಲ್ಲದಂತೆ ಬ್ರಹ್ಮನ ಲೋಕಕ್ಕೆ ತೆರಳುತ್ತಾನೆ ಮತ್ತು ಬ್ರಹ್ಮಪದವಿಯನ್ನು ಹೊಂದುತ್ತಾನೆ.

 

ನಿಹನ್ತಿ ಮಾಗಧೇಶ್ವರಂ ಯ ಏಷ ವೈಷ್ಣವಂ ಜಗತ್ ।

ಕರೋತಿ ಶರ್ವಪಾಲಿತೋ ಯತಃ ಸ ಬಾರ್ಹದ್ರಥಃ        ೨೧.೧೦೪

 

ಯಾವ ಕಾರಣದಿಂದ ಜರಾಸಂಧನು ಶಿವನಿಂದ ಪಾಲಿತನಾದವನೋ, (ಶೈವಜಗತ್ತಿನ ಪ್ರತಿನಿಧಿಯೋ) ಅಂತಹ ಜರಾಸಂಧನನ್ನು ಯಾರು ಕೊಲ್ಲುತ್ತಾನೋ ಅವನು ಪ್ರಪಂಚವನ್ನು ಪರಮಾತ್ಮನ ಭಕ್ತಿಯಲ್ಲಿ  ನೆಲೆಗೊಳಿಸುತ್ತಾನೆ.

 

ನಿಹನ್ತಿ ಶೈವನಾಯಕಂ ಯ ಏಷ ವೈಷ್ಣವಾಗ್ರಣೀಃ ।

ಇತಿ ಸ್ಮ ಭಾವಸಂಯುತೇ ವದತ್ಯಜೇsಬಿಭೇನ್ನೃಪಃ      ೨೧.೧೦೫

 

‘ಯಾರು ಶೈವರಿಗೆ ಗುರುವಾಗಿರುವ ಜರಾಸಂಧನನ್ನು ಕೊಲ್ಲುತ್ತಾನೋ, ಅವನು ವೈಷ್ಣವಗ್ರೇಸರನಾಗುತ್ತಾನೆ(ಪರಮಾತ್ಮನ ಭಕ್ತರಲ್ಲಿ ಶ್ರೇಷ್ಠನೆನಿಸುತ್ತಾನೆ). ಈರೀತಿಯಾಗಿ ಭಗವಂತ  ನುಡಿಯಲು  ಯುಧಿಷ್ಠಿರನಿಗೆ  ಭಯವಾಯಿತು.

 

[ಜರಾಸಂಧ ಶೈವರಿಗೆ ಗುರು. ಆತ ಎಲ್ಲಾ ಶಿವಾಗಮಗಳನ್ನೂ ಬಲ್ಲವನಾಗಿದ್ದ. ಬಲಶಾಲಿಯೂ ಹೌದು. ಶಿವನ ತತ್ವವನ್ನು ಆಗಮಗಳಲ್ಲಿರುವಂತೆಯೇ ಪಾಲನೆ ಮಾಡುತ್ತಿರುವವನು ಜರಾಸಂಧ. ಅದೇ ರೀತಿ ವೈಷ್ಣವ ಆಗಮಗಳನ್ನು, ವೈಷ್ಣವಪ್ರಜ್ಞೆಯನ್ನು ಜಗತ್ತಿನಲ್ಲಿ ಬಿತ್ತುತ್ತಾ ವೈಷ್ಣವ ಗುರುವಾಗಿರುವವನು ಭೀಮಸೇನ. ಅವರಿಬ್ಬರ ನಡುವೆ ಕಾದಾಟ ಏರ್ಪಟ್ಟಾಗ ಜ್ಞಾನದಿಂದ ಹಾಗೂ ಬಲದಿಂದ ಯಾರು ಗೆಲ್ಲುತ್ತಾರೋ ಅದು ಶಾಸ್ತ್ರದ ನಿರ್ಣಯವಾಗುತ್ತದೆ. (ಸೂಚನೆ: ಬಲ ದೇವತೆಗಳಿಗೆ ಮತ್ತು ಕ್ಷತ್ರಿಯರಿಗೆ ಮಾತ್ರ ಮಾಪಕ ಹೊರತು ಇತರರಿಗಲ್ಲ). ಹೀಗಾಗಿ ಇಲ್ಲಿ ಅವರಿಬ್ಬರ ನಡುವಿನ ಕಾದಾಟಕ್ಕೆ ಈ ಮಟ್ಟದ ಪ್ರಾಮುಖ್ಯತೆಯಿದೆ. ಈ ಹಿನ್ನೆಲೆಯಿಂದ ಶ್ರೀಕೃಷ್ಣ ಮೇಲಿನ ಮಾತನ್ನು ಹೇಳಿದ್ದಾನೆ].

Thursday, December 2, 2021

Mahabharata Tatparya Nirnaya Kannada 21: 90-98

 

[ಈ ರೀತಿಯಾಗಿ ಹೇಳಿದ ಕೃಷ್ಣ ಮುಂದೆ ಇನ್ನೂ ಕೆಲವು ಮಾತುಗಳನ್ನು ಹೇಳಲಿದ್ದಾನೆ. ಆದರೆ ಅದಕ್ಕೂ ಮೊದಲು, ಹಿನ್ನೆಲೆಯಾಗಿ,  ಮುಂದೆ ಶ್ರೀಕೃಷ್ಣ ಹೇಳಲಿರುವ ಮಾತುಗಳ ಹಿಂದೆ ಯಾವ ಭಾವವಿದೆ ಎನ್ನುವುದನ್ನು ಮುಂದಿನ ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ:]

 

ಉದೀರ್ಯ್ಯ ಚೈವಮೀಶ್ವರಃ ಕ್ರತೋರಮುಷ್ಯ ಯೋಗ್ಯತಾ ।

ವೃಕೋದರೇ ಯತೋsಖಿಲಾ ಚತುರ್ಮ್ಮುಖತ್ವಯೋಗ್ಯತಾ     ೨೧.೯೦

 

ತತಃ ಸುಪೂರ್ಣ್ಣಮಸ್ಯ ತತ್ ಫಲಂ ವಿಧಾತುಮಞ್ಜಸಾ ।

ಜಗಾದ ವಾಯುವಾಹನೋ ವಚೋ ಯುಧಿಷ್ಠಿರಂ ತ್ವಿದಮ್        ೨೧.೯೧

 

ಸರ್ವಸಮರ್ಥನಾದ ಶ್ರೀಕೃಷ್ಣನು ಈ ರೀತಿಯಾಗಿ ಹೇಳಿ, ಯಾವ ಕಾರಣದಿಂದ ಈ ರಾಜಸೂಯ ಯಾಗದ ಸಮಗ್ರವಾದ ಫಲವನ್ನು ಪಡೆಯುವ ಯೋಗ್ಯತೆ (ಮುಂದೆ ಚತುರ್ಮುಖನಾಗುವ ಯೋಗ್ಯತೆ) ಭೀಮಸೇನನಲ್ಲಿ ಇದೆಯೋ, ಅದರಿಂದ ಈ ಯಾಗದ ಪೂರ್ಣಫಲವನ್ನು ಭೀಮಸೇನನಿಗೆ ಚೆನ್ನಾಗಿ ಹೊಂದಿಸಿಕೊಡುವುದಕ್ಕಾಗಿ, ವಾಯುವಾಹನನು (ಮುಖ್ಯಪ್ರಾಣನನ್ನೇರಿ ಸಾಗುವ ಶ್ರೀಕೃಷ್ಣನು) ಯುಧಿಷ್ಠಿರನನ್ನು ಕುರಿತು ಮಾತನ್ನು ಹೇಳಿದ:

 

ಕ್ವ ರಾಜಸೂಯಮದ್ಯ ತೇ ಜರಾಸುತೇ ತು ಜೀವತಿ ।

ಜಯೇತ್ ಕ ಏವ ತಂ ಯುಧಾ ಮೃತೋ ನ ಯೋsಪಿ ಸೀರಿಣಾ ೨೧.೯೨

 

‘ನಿನಗೆ ಪ್ರಚಲಿತ ರಾಜಕೀಯ ಪರಿಸ್ಥಿತಿಯಲ್ಲಿ ರಾಜಸೂಯ ಯಾಗ ಮಾಡಲು ಸಾಧ್ಯವೇ? ವಿಶೇಷವಾಗಿ ಜರಾಸಂಧ ಬದುಕಿರುವಾಗ ಅವನನ್ನು ಯುದ್ಧದಿಂದ ಯಾರು ತಾನೇ ಗೆದ್ದಾರು? ಯಾರು ಬಲರಾಮನಿಂದಲೂ ಕೂಡಾ ಸಾವನ್ನಪ್ಪಲಿಲ್ಲವೋ, ಅಂತಹ ಜರಾಸಂಧನನ್ನು ಯಾರು ಗೆಲ್ಲುತ್ತಾನೆ? 

 

ವಿರಿಞ್ಚಶರ್ವವಾಕ್ಯತಃ ಸಮಸ್ತಲೋಕಜಾಯಿನಿ ।

ಸ್ಥಿತೇ ತು ತೇ ಜರಾಸುತೇ ನ ಸೇತ್ಸ್ಯತಿ ಕ್ರತೂತ್ತಮಃ     ೨೧.೯೩

 

ಬ್ರಹ್ಮ ಹಾಗೂ ರುದ್ರರ ವರದಿಂದ ಎಲ್ಲಾ ಲೋಕವನ್ನೂ ಗೆದ್ದ ಜರಾಸಂಧನಿರಲು ನಿನ್ನ ರಾಜಸೂಯ ಯಾಗವು ಸಿದ್ಧವಾಗುವುದಿಲ್ಲ’.

 

ಇತೀರಿತೇ ರಥಾಙ್ಗಿನಾ ಜಗಾದ ಧರ್ಮ್ಮನನ್ದನಃ ।

ನಿವರ್ತ್ತಿತಂ ಮನಃ ಕ್ರತೋರಲಂ ಮಮಾಮುನಾ ಪ್ರಭೋ    ೨೧.೯೪

 

ಈರೀತಿಯಾಗಿ ಚಕ್ರಧರನಾದ ಕೃಷ್ಣನಿಂದ ಹೇಳಲ್ಪಡುತ್ತಿರಲು, ಧರ್ಮರಾಜನು ಹೇಳುತ್ತಾನೆ: ‘ಪ್ರಭೋ, ಈಗ ನನ್ನ ಮನಸ್ಸು ಯಜ್ಞದಿಂದ ನಿವೃತ್ತವಾಗಿದೆ’ ಎಂದು.  

 

ಬಭೂವುರೇವ ಭೂಭೃತೋ ನಚಾsಧಿರಾಜ್ಯಮಾಪಿರೇ ।

ಯದಾ ಚ ಚಕ್ರವರ್ತ್ತಿನಸ್ತದೇದೃಶಾ ನ ಶತ್ರವಃ                          ೨೧.೯೫

 

ಈ ಮೊದಲು ಅನೇಕ ರಾಜರು ಬಂದು ಹೋಗಿದ್ದಾರೆ. ಆದರೆ ಎಲ್ಲರೂ ವಿಸ್ತಾರವಾದ ಸಕಲ ಪ್ರಪಂಚವನ್ನು ಸಾಮ್ರಾಜ್ಯವನ್ನಾಗಿ ಮಾಡಿಕೊಳ್ಳಲು ಶಕ್ತರಾಗಲಿಲ್ಲ(ಎಲ್ಲರೂ ಚಕ್ರವರ್ತಿಗಳಾಗಲು ಸಾಧ್ಯವಾಗಿಲ್ಲ). ಇನ್ನು ಹಿಂದೆ ಚಕ್ರವರ್ತಿಗಳಾದವರು (ಉದಾಹರಣೆಗೆ ಹರಿಶ್ಚಂದ್ರ), ಅವರ ಕಾಲದಲ್ಲಿ  ಜರಾಸಂಧನಂತಹ ಬಲಿಷ್ಠ ಶತ್ರುಗಳು ಇರಲಿಲ್ಲ.

 

ಇತೀರಿತೇsಮುನಾsವದತ್ ಪ್ರಧಾನಮಾರುತಾತ್ಮಜಃ ।

ಪದಂ ಚತುರ್ಮ್ಮುಖಸ್ಯ ವಾ ಸುಸಾದ್ಧ್ಯಮೇವ ಯತ್ನತಃ              ೨೧.೯೬

 

ಈರೀತಿಯಾಗಿ ಹೇಳಿದಾಗ ಮುಖ್ಯಪ್ರಾಣನ ಮಗನಾದ ಭೀಮಸೇನನು ಹೇಳುತ್ತಾನೆ: ‘ಚತುರ್ಮುಖನ ಪದವಿಯನ್ನು ಕೂಡಾ ಪ್ರಯತ್ನಪಟ್ಟು ಗಳಿಸಬಹುದು’ ಎಂದು.

 

ನಿಜಾನುಭಾವವರ್ಜ್ಜಿತಾ ಹರೇರನುಗ್ರಹೋಜ್ಝಿತಾಃ

ಮಹಾಪ್ರಯತ್ನವರ್ಜ್ಜಿತಾ ಜನಾ ನ ಜಗ್ಮುರುನ್ನತಿಮ್                 ೨೧.೯೭

 

‘ಸ್ವರೂಪಭೂತವಾದಭಕ್ತಿಯಿಂದ ರಹಿತರಾದವರು, ಪರಮಾತ್ಮನ ಅನುಗ್ರಹದಿಂದ ಉಜ್ಝಿತರಾದವರು (ವರ್ಜಿತರಾದವರು),  ಮಹಾಪ್ರಯತ್ನ ಮಾಡದ ಜನರು ಎತ್ತರದ ಸ್ಥಾನವನ್ನು ಹೊಂದುವುದಿಲ್ಲ.

 

ಸ್ಥಿರೋsನುಭಾವ ಏವ ಮೇ ಮಹಾನನುಗ್ರಹೋ ಹರೇಃ ।

ಪ್ರಯತ್ನಮೇಕಮಗ್ರತೋ ನಿಧಾಯ ಭೂತಿಮಾಪ್ನುಮಃ              ೨೧.೯೮

 

ನನಗೆ ಪರಮಾತ್ಮನಲ್ಲಿ ಭಕ್ತಿ ಸ್ಥಿರವಾಗಿದೆ. ದೇವರ ಅನುಗ್ರಹ ದೊಡ್ಡದಾಗಿ ನನ್ನ ಮೇಲಿದೆ. ಹಾಗಾಗಿ ನಮ್ಮ ಪ್ರಯತ್ನವನ್ನು ಮುಂದೆ ಇಟ್ಟುಕೊಂಡು ಸಂಪತ್ತನ್ನು ಹೊಂದೋಣ’ ಎನ್ನುತ್ತಾನೆ ಭೀಮಸೇನ.