ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 8, 2022

Mahabharata Tatparya Nirnaya Kannada 21: 180-190

 

ಅಸಾಧಾರಣಹೇತುಶ್ಚ ಭೀಮ ಏವ ಪ್ರಕೀರ್ತ್ತಿತಃ ।

ಯಜ್ಞಸ್ಯಾಸ್ಯ ಜರಾಸನ್ಧವದಾತ್ ಕರ್ಣ್ಣಜಯಾದಪಿ         ೨೧.೧೮೦

 

ಜಯಾಚ್ಚ ಕೀಚಕಾದೀನಾಮನ್ಯೈರ್ಜ್ಜೇತುಮಶಕ್ಯತಃ ।

ದ್ವಿತೀಯಃ ಫಲ್ಗುನಶ್ಚೈವ ತೃತೀಯಸ್ತು ಯುಧಿಷ್ಠಿರಃ         ೨೧.೧೮೧

 

ಪಾಂಡವರು ಮಾಡುತ್ತಿರುವ ಈ ಯಜ್ಞಕ್ಕೆ ಭೀಮಸೇನನೇ ಅಸಾಧಾರಣ ಕಾರಣ. ಏಕೆಂದರೆ ಜರಾಸಂಧನನ್ನು ಕೊಂದುದರಿಂದ, ಕರ್ಣನನ್ನು ಜಯಿಸಿರುವುದರಿಂದ, ಇನ್ನ್ಯಾರಿಂದಲೂ ಗೆಲ್ಲಲು ಸಾಧ್ಯವಿರದ  ಕೀಚಕ ಮೊದಲಾದವರನ್ನು ಗೆದ್ದುದರಿಂದ. ಇನ್ನು ಎರಡನೇ ಕಾರಣ ಅರ್ಜುನ ಹಾಗೂ ಮೂರನೇ ಕಾರಣ ಯುಧಿಷ್ಠಿರ.

 

ತಸ್ಮಾದ್ ಬ್ರಹ್ಮಪದಾವಾಪ್ತ್ಯೈ ವ್ಯಾಸೋ ಭೀಮಸ್ಯ ತಂ ಕ್ರತುಮ್ ।

ಅನನ್ಯಕೃತಮಾದಿಶ್ಯ ದಿಶಾಂ ವಿಜಯಮಾದಿಶತ್                     ೨೧.೧೮೨

 

ಹೀಗೆ ಭೀಮಸೇನನ  ಬ್ರಹ್ಮಪದವಿಪ್ರಾಪ್ತಿಗಾಗಿ ವೇದವ್ಯಾಸರು ಇತಿಹಾಸದಲ್ಲಿ ಯಾರೂ ಮಾಡಿರದ ಅಶ್ವಮೇಧಯಾಗದಿಂದ ಕೂಡಿರುವ ರಾಜಸೂಯ ಯಾಗವನ್ನು ಆಜ್ಞೆಮಾಡಿ, ದಿಕ್ಕುಗಳ ವಿಜಯವನ್ನು(ದಿಗ್ವಿಜಯಕ್ಕೆ) ಅಪ್ಪಣೆ ಮಾಡಿದರು.

 

ಅಥಾsಬ್ರವೀದ್ ಧನಞ್ಜಯೋ ಧನುರ್ಧ್ವಜೋ ರಥೋ ವರಃ ।

ಮಮಾಸ್ತಿ ತದ್ದಿಶಾಂ ಜಯೋ ಮಮೈವ ವಾಞ್ಛಿತಃ ಪ್ರಭೋ             ೨೧.೧೮೩

 

ತದನಂತರ ಅರ್ಜುನ ಹೇಳುತ್ತಾನೆ:  ಸರ್ವಸಮರ್ಥರಾದ ವೇದವ್ಯಾಸರೇ, ಒಳ್ಳೆಯ ಬಿಲ್ಲು, ಧ್ವಜ,  ಶ್ರೇಷ್ಠವಾಗಿರುವ ರಥ  ನನ್ನಲ್ಲಿದೆ. ಹಾಗಾಗಿ ನನಗೇ ದಿಕ್ಕುಗಳ ಜಯ ಯೋಗ್ಯ(ದಿಗ್ವಿಜಯವನ್ನು ನಾನೊಬ್ಬನೇ ಮಾಡುತ್ತೇನೆ).  

 

ಇತೀರಿತೋsಖಿಲಪ್ರಭುರ್ಜ್ಜಗಾದ ಸತ್ಯಮಸ್ತಿತೇ ।

ಸಮಸ್ತಸಾಧನೋನ್ನತಿರ್ಮ್ಮಹಚ್ಚ ವೀರ್ಯ್ಯಮಸ್ತಿತೇ                 ೨೧.೧೮೪

 

ತಥಾsಪಿ ಕೀಚಕಾದಯೋ ವೃಕೋದರಾದೃತೇ ವಶಮ್ ।

ನ ಯಾನ್ತಿ ನಾಪಿ ತೇ ವಶಂ ಪ್ರಯಾತಿ ಕರ್ಣ್ಣ ಏವ ಚ                  ೨೧.೧೮೫

 

ಈರೀತಿಯಾಗಿ ಅರ್ಜುನ ಹೇಳಿದಾಗ ಎಲ್ಲರಿಗೂ ಒಡೆಯರಾಗಿರುವ ವೇದವ್ಯಾಸ ದೇವರು ಹೇಳುತ್ತಾರೆ: ಧನಂಜಯ, ನಿನ್ನಲ್ಲಿ ಖಂಡಿತವಾಗಿ ಒಳ್ಳೆಯ ವೀರ್ಯವಿದೆ. ಸಮಸ್ತ ಸಾಧನ ಸಂಪತ್ತಿದೆ. ಇಷ್ಟೆಲ್ಲಾ ಇದ್ದರೂ, ಕೀಚಕಾದಿಗಳು ಭೀಮಸೇನನಲ್ಲದೆ ಇತರರಿಗೆ ವಶರಾಗುವುದಿಲ್ಲ. ಮುಖ್ಯವಾಗಿ ಕರ್ಣ ನಿನ್ನ ವಶವನ್ನು ಹೊಂದುವುದಿಲ್ಲ.

 

ಬಲಾಧಿಕೋsಸಿ ಕರ್ಣ್ಣತಸ್ತಥಾsಪಿ ನಾಮೃತಃ ಕರಮ್ ।

ದದಾತಿ ತೇ ಹ್ಯತಿಸ್ಪೃಧಾ ನ ವದ್ಧ್ಯ ಏಷ ತೇsದ್ಯ ಚ                    ೨೧.೧೮೬

 

ಸವರ್ಮ್ಮಕುಣ್ಡಲತ್ವತೋ ನ ವದ್ಧ್ಯ ಏಷ ಯತ್ ತ್ವಯಾ ।

ತತೋ ವೃಕೋದರೋ ದಿಶಂ ಪ್ರಯಾತು ತೇ ಪಿತುಃ ಪ್ರಿಯಾಮ್ ೨೧.೧೮೭

 

ಕರ್ಣನಿಗಿಂತ ನೀನು ಬಲಶಾಲಿಯಾಗಿರುವುದೇನೋ ನಿಜ. ಆದರೂ ಕೂಡಾ ಅತ್ಯಂತ ಸ್ಪರ್ಧಾ-ಮನೋವೃತ್ತಿಯುಳ್ಳ ಅವನು ಸಾಯದೇ ನಿನಗೆ ಕಪ್ಪ ಸಿಗುವುದಿಲ್ಲ. ಆದರೆ ಅವನನ್ನು ಈಗ ಕೊಲ್ಲುವಂತಿಲ್ಲ.

ಅಷ್ಟೇ ಅಲ್ಲದೆ, ಕವಚ ಕುಂಡಲಗಳಿರುವುದರಿಂದ ಅವನನ್ನು ಕೊಲ್ಲಬಾರದು. ಆ ಕಾರಣದಿಂದ ಭೀಮಸೇನನು ನಿನ್ನ ತಂದೆಯಾಗಿರುವ ಇಂದ್ರನಿಗೆ ಪ್ರಿಯವಾಗಿರುವ ಪೂರ್ವದಿಕ್ಕನ್ನು ಕುರಿತು ತೆರಳಲಿ.  

 

ಜೀವಗ್ರಾಹಭಯಾತ್ ಕರ್ಣ್ಣೋ ದದಾತಿ ಕರಮಞ್ಜಸಾ ।

ಭೀಮಾಯ ನಾತ್ರ ಸನ್ದೇಹೋ ಜಿತೋsನೇನ ಚ ಸಂಯುಗೇ             ೨೧.೧೮೮

 

ಭೀಮಸೇನ ತನ್ನನ್ನು ಜೀವಂತವಾಗಿ ಹಿಡಿಯುತ್ತಾನೆ ಎನ್ನುವ ಭಯದಿಂದ ಕರ್ಣನು ಚೆನ್ನಾಗಿ ಕರವನ್ನು ಕೊಡುತ್ತಾನೆ. ಇದರಲ್ಲಿ ಯಾವುದೇ ಸಂಶಯವಿಲ್ಲ.

 

ಅಜೇಯೌ ಶರ್ವವಚನಾದ್ ರಣೇ ಕೀಚಕಪೌಣ್ಡ್ರಕೌ ।

ವಶಂ ಪ್ರಯಾತೋ ಭೀಮಸ್ಯ ತಥಾsವದ್ಧ್ಯೋsಪಿ ಚೇದಿಪಃ             ೨೧.೧೮೯

 

ರುದ್ರದೇವರ ವರದಿಂದಾಗಿ ಕೀಚಕ ಮತ್ತು ಪೌಂಡ್ರಕರು ಅಜೇಯರಾಗಿದ್ದಾರೆ. ಅವರೂ ಕೂಡಾ ಭೀಮಸೇನನ ಬಲಕ್ಕೆ ಬಾಗುತ್ತಾರೆ. ಹಾಗೆಯೇ ಅವಧ್ಯನಾಗಿರುವ ಶಿಶುಪಾಲ ಕೂಡಾ ಭೀಮನ ವಶವನ್ನು ಹೊಂದುತ್ತಾನೆ.

 

ಜೀವಗ್ರಾಹಭಯಂ ಹ್ಯೇಷಾಂ ಭೀಮಾನ್ಮಾಗಧಪಾತನಾತ್ ।

ತಸ್ಮಾತ್ ಕರಂ ಪ್ರಯಚ್ಛನ್ತಿ ಜಿತಾ ವಾ ಪೂರ್ವಮೇವ ವಾ             ೨೧.೧೯೦

 

ಭೀಮಸೇನ ಜರಾಸಂಧನನ್ನು ಮಣಿಸಿರುವುದರಿಂದ ಇವರೆಲ್ಲರಿಗೂ ಭೀಮನಿಂದ ಜೀವಂತ ಸೆರೆಯ ಭಯವಿದೆ. ಅದರಿಂದಾಗಿ ಯುದ್ಧದಲ್ಲಿ ಸೋತು ಕರವನ್ನು ನೀಡುತ್ತಾರೆ ಅಥವಾ ಯುದ್ಧವನ್ನು ಮಾಡುವ ಮೊದಲೇ ಕರನೀಡುತ್ತಾರೆ.

Mahabharata Tatparya Nirnaya Kannada 21: 175-179

 

ಕೃಷ್ಣಶ್ಚ ಪಾರ್ತ್ಥೌ ಚ ತಥೈಕಯಾನಂ ಸಮಾಸ್ಥಿತಾ ಧರ್ಮ್ಮಜಮಭ್ಯಗಚ್ಛನ್ ।

ತೇಷಾಂ ಶಙ್ಖಧ್ವನಿಸಮ್ಬೋಧಿತಾತ್ಮಾ ರಾಜಾ ಪ್ರೀತಶ್ಚಾತಿತರಾಂ ಬಭೂವ             ೨೧.೧೭೫

 

ಕೃಷ್ಣ ಹಾಗೂ ಭೀಮಸೇನಾರ್ಜುನರು ಒಂದೇ ರಥವನ್ನು ಏರಿದವರಾಗಿ ಧರ್ಮರಾಜನ ಬಳಿ ತೆರಳಿದರು. ಆ ಮೂವರ ಶಂಖಧ್ವನಿಯಿಂದ (ಶ್ರೀಕೃಷ್ಣನ ಪಾಂಚಜನ್ಯ, ಭೀಮನ ಪೌಂಡ್ರ ಮತ್ತು ಅರ್ಜುನನ ದೇವದತ್ತ ಎನ್ನುವ ಶಂಖಧ್ವನಿಯಿಂದ)  ಎಚ್ಚರಿಸಲ್ಪಟ್ಟ ಮನಸ್ಸುಳ್ಳವನಾದ(ಎಲ್ಲವೂ ಒಳ್ಳೆಯದಾಯಿತು ಎಂದರಿತ) ಧರ್ಮರಾಜನು ಅತ್ಯಂತ ಪ್ರೀತನಾದ.

 

ದ್ವೈಪಾಯನೋsಥ ಭಗವಾನಭಿಗಮ್ಯ ಪಾರ್ತ್ಥಾನಾಜ್ಞಾಪಯತ್ ಸಕಲಸಮ್ಭೃತಿಸಾಧನಾಯ ।

ತಂ ರಾಜಸೂಯಸಹಿತಂ ಪರಮಾಶ್ವಮೇಧಯಜ್ಞಂ ಸಮಾದಿಶದನನ್ಯಕೃತಂ ವಿರಿಞ್ಚಾತ್೨೧.೧೭೬

 

ತದನಂತರ ಷಡ್ಗುಣೈಶ್ವರ್ಯ ಸಂಪನ್ನರಾದ ವೇದವ್ಯಾಸರು ಪಾಂಡವರನ್ನು ಕುರಿತು ಬಂದು, ಬ್ರಹ್ಮದೇವರನ್ನು ಹೊರತುಪಡಿಸಿದರೆ ಬೇರೆ ಯಾರೂ ಮಾಡಿರದ, ರಾಜಸೂಯದಿಂದ ಕೂಡಿರುವ, ಅತ್ಯಂತ ಉತ್ಕೃಷ್ಟವಾದ ಅಶ್ವಮೇಧ ಯಜ್ಞವನ್ನು ಮಾಡಬೇಕೆಂದೂ ಮತ್ತು ಯಜ್ಞಕ್ಕೆ ಬೇಕಾದ ಸಕಲ ಸಾಧನಗಳೂ ಸಿದ್ಧವಾಗಬೇಕೆಂದೂ ಆಜ್ಞೆ ಮಾಡಿದರು.

[ಕೇವಲ ರಾಜಸೂಯ ಮಾಡುವುದಲ್ಲ, ಅಶ್ವಮೇಧದಿಂದ ಕೂಡಿರುವ ರಾಜಸೂಯ ಮಾಡಬೇಕು ಎನ್ನುವ ಆಜ್ಞೆ. ಪಾಂಡವರನ್ನು ಬಿಟ್ಟು ಬೇರೆ ಯಾರಿಗೂ ಮಾಡಲು ಅಸಾಧ್ಯವಾದ, ವಿಶಿಷ್ಟವಾದ ಯಾಗವನ್ನು ವೇದವ್ಯಾಸರು ಪಾಂಡವರಲ್ಲಿ ಮಾಡಲು ಆಜ್ಞೆಯನ್ನಿತ್ತರು].

 

ಕರ್ತ್ತಾ ಹಿ ತಸ್ಯ ಪರಮೇಷ್ಠಿಪದಂ ಪ್ರಯಾತಿ ಯದ್ಯನ್ಯಸದ್ಗುಣವರೈಃ ಪರಮೇಷ್ಠಿತುಲ್ಯಃ ।

ಭೀಮೇ ಮಖಸ್ಯ ಫಲಮತ್ಯಧಿಕಂ ನಿಧಾತುಂ ವ್ಯಾಸಃ ಕ್ರತುಂ ತಮದಿಶದ್ ಗುರುರಬ್ಜಜಸ್ಯ ೨೧.೧೭೭

 

ಒಂದು ವೇಳೆ ಉಳಿದ ಶ್ರೇಷ್ಠ ಸದ್ಗುಣಗಳಿಂದ ಬ್ರಹ್ಮನಿಗೆ ಸದೃಶನಾದವನು ಈ ಯಾಗವನ್ನು ಮಾಡಿದರೆ ಅವನು ಬ್ರಹ್ಮಪದವಿಯನ್ನು ಹೊಂದುತ್ತಾನೆ. ಅದರಿಂದ ಭೀಮಸೇನನಲ್ಲಿ ಯಾಗದ ಅತ್ಯುತ್ಕೃಷ್ಟವಾದ ಫಲವನ್ನು ಮಾಡಲು, ಬ್ರಹ್ಮದೇವರ ಗುರುವಾಗಿರುವ ವೇದವ್ಯಾಸರು ಈ ವಿಶಿಷ್ಟವಾದ ಯಾಗವನ್ನು ಮಾಡಲು ಆಜ್ಞೆ ಮಾಡಿದರು.

 

[ಯಜಮಾನನಾಗಿ ಧರ್ಮರಾಜ ಕುಳಿತಿರುವಾಗ ಭೀಮಸೇನನಿಗೆ ಹೇಗೆ ಅತ್ಯುತ್ಕೃಷ್ಟ ಫಲ ಸಲ್ಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರರೂಪವಾಗಿ ಕರ್ಮದ ರಹಸ್ಯವನ್ನು ವಿವರಿಸುತ್ತಾರೆ:]

 

ಅಸಾಧಾರಣಹೇತುರ್ಯ್ಯಃ ಕರ್ಮ್ಮಣೋ ಯಸ್ಯ ಚೇತನಃ ।

ಸ ಏವ ತತ್ಫಲಂ ಪೂರ್ಣ್ಣಂ ಭುಙ್ಕ್ತೇsನ್ಯೋsಲ್ಪಮಿತಿ ಸ್ಥಿತಿಃ             ೨೧.೧೭೮

 

ಯಾವ ಕರ್ಮಕ್ಕೆ ಯಾವ ಜೀವನು ಅಸಾಧಾರಣ(ಪ್ರಮುಖ) ಕಾರಣನೋ, ಅವನೇ ಆ ಕರ್ಮದ ಮುಖ್ಯ ಫಲವನ್ನು ಭೋಗಿಸುತ್ತಾನೆ. ಉಳಿದವರು ಯೋಗ್ಯತಾನುಸಾರವಾಗಿ ಸ್ವಲ್ಪ ಮಾತ್ರ ಫಲವನ್ನು ಪಡೆಯುತ್ತಾರೆ ಎನ್ನುವುದು  ಸ್ಥಿತಿ (ಇದು ಶಾಸ್ತ್ರ ನಿರ್ಣಯ).

 

[ಹಾಗಿದ್ದರೆ ಎಲ್ಲವುದಕ್ಕೂ ಮುಖ್ಯ ಹೇತುವಾಗಿರುವ ನಾರಾಯಣನಿಗೆ ಸಮಸ್ತಫಲ ಸಲ್ಲಬೇಕಲ್ಲವೇ ಎಂದರೆ:]

 

ವಿನಾ ವಿಷ್ಣುಂ ನಿರ್ಣ್ಣಯೋsಯಂ ಸ ಹಿ ಕರ್ಮ್ಮಫಲೋಜ್ಝಿತಃ ।

ಹೇತವೋsಪಿ ಹಿ ಪಾಪಸ್ಯ ನ ಪ್ರಾಯಃ ಫಲಭಾಗಿನಃ ।

ದೇವಾಃ ಪುಣ್ಯಸ್ಯ ದೈತ್ಯಾಶ್ಚ ಮಾನುಷಾಸ್ತದ್ವಿಭಾಗಿನಃ             ೨೧.೧೭೯

 

ದೇವರನ್ನು ಬಿಟ್ಟು ಈ  ನಿರ್ಣಯವು. ಏಕೆಂದರೆ ಭಗವಂತನಿಗೆ ಯಾವ ಕರ್ಮದ ಲೇಪವೂ ಇಲ್ಲ. ದೇವತೆಗಳು ದೈತ್ಯರ ಪಾಪದ ಪ್ರೇರಣೆಗೆ ಕಾರಣರಾದರೂ ಕೂಡಾ, ಪ್ರಾಯಃ(ಹೆಚ್ಚಾಗಿ) ಅವರು ಅದರ  ಫಲ ಭಾಗಿನರಾಗುವುದಿಲ್ಲ. (ಉದಾಹರಣೆಗೆ ದೈತ್ಯರ ದೇಹದಲ್ಲಿ ದೇವತೆಗಳ ಪ್ರವೇಶವಿರುತ್ತದೆ ಮತ್ತು ದೈತ್ಯರ ಕಾರ್ಯದಲ್ಲಿ ಅವರ ಪ್ರಚೋದನೆ ಇರುತ್ತದೆ. ಇದಲ್ಲದೇ ಮುಖ್ಯವಾಗಿ ಬ್ರಹ್ಮ-ರುದ್ರರು ದೈತ್ಯರಿಗೆ ವರವನ್ನು ಕೊಡುತ್ತಾರೆ. ಆರೀತಿ ವರವನ್ನು ಪಡೆದು ದೈತ್ಯರ ಕೆಟ್ಟ ಕೆಲಸ ಮಾಡಿದರೂ ಕೂಡಾ, ಆ ಪಾಪದ ಫಲಕ್ಕೆ ದೇವತೆಗಳು ಫಲ ಭಾಗೀನರಾಗುವುದಿಲ್ಲ). ದೈತ್ಯರು ಪುಣ್ಯಕರ್ಮವನ್ನು ಮಾಡಿದರೂ ಕೂಡಾ ಹೆಚ್ಚಾಗಿ ಪುಣ್ಯದ ಫಲವನ್ನು ಅನುಭವಿಸುವುದಿಲ್ಲ. (ದೇವತೆಗಳು ಪುಣ್ಯಕ್ಕೆ ಕಾರಣರಾದಾಗ ಆ ಪುಣ್ಯದ ಫಲವನ್ನು ಅವರು ಭೋಗಿಸುತ್ತಾರೆ). ಮನುಷ್ಯರು ಪುಣ್ಯವನ್ನಾಗಲೀ, ಪಾಪವನ್ನಾಗಲೀ ಸಂಪೂರ್ಣ ಭೋಗಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. (ಪುಣ್ಯದ ಫಲವನ್ನು ದೇವತೆಗಳೂ, ಪಾಪದ ಫಲವನ್ನು ದೈತ್ಯರೂ ಪಡೆಯುತ್ತಾರೆ) ಹಾಗಾಗಿ ಪುಣ್ಯ-ಪಾಪದ ಸ್ವಲ್ಪ ಫಲವನ್ನಷ್ಟೇ ಮಾನವರು ಅನುಭವಿಸುತ್ತಾರೆ.    

Wednesday, January 5, 2022

Mahabharata Tatparya Nirnaya Kannada 21: 168-174

 

ಸುತೋ ಯಯೌ ಶರಣಂ ತಾನ್ ರಮೇಶಭೀಮಾರ್ಜ್ಜುನಾನ್ ಸಹದೇವೋsಸ್ಯ ಧೀಮಾನ್ ।

ರಥಂ ಸ್ವಸಾರಂ ಚ ದದೌ ಸ ಮಾರುತೇರ್ನ್ನನಾಮ ಕೃಷ್ಣಂ ಪರಯಾ ಚ ಭಕ್ತ್ಯಾ               ೨೧.೧೬೮

 

ಬುದ್ಧಿವಂತನಾಗಿರುವ ಜರಾಸಂಧನ ಮಗ ಸಹದೇವನು ಕೃಷ್ಣ-ಭೀಮ-ಅರ್ಜುನರಲ್ಲಿ ರಕ್ಷಣೆ ಬೇಡಿ, ಅವರಲ್ಲಿ ಶರಣುಹೊಂದಿ, ಭೀಮಸೇನನಿಗೆ ರಥವನ್ನೂ, ತಂಗಿಯನ್ನೂ ಕೊಟ್ಟು, ಉತ್ಕೃಷ್ಟವಾದ ಭಕ್ತಿಯಿಂದ ಕೃಷ್ಣನನ್ನು ನಮಸ್ಕರಿಸಿದನು.

[ಇಲ್ಲಿ ಮಾರುತಿಃ ಎನ್ನುವ ಪದ ‘ಮಾರುತಯೇ’ ಎಂದಾಗಬೇಕಿತ್ತು. ಆದರೆ ಮಾರುತೇಃ ಎಂದು ಷಷ್ಠಿ ವಿಭಕ್ತಿಯಲ್ಲಿ ಹೇಳಿದ್ದಾರೆ. ಏಕೆಂದರೆ ರಥ ಮತ್ತು ಸಹದೇವನ ತಂಗಿಯನ್ನು ಭೀಮಸೇನ ಸ್ವೀಕರಿಸಿರುವುದು ತನಗಾಗಿ ಅಲ್ಲ. ರಥವನ್ನು ಕೃಷ್ಣನಿಗಾಗಿ ಸ್ವೀಕರಿಸಿದರೆ, ತಂಗಿ ಮಾದ್ರಿಪುತ್ರ ಸಹದೇವನನ್ನು ಮದುವೆಯಾಗುತ್ತಾಳೆ. ಈ ಅಂಶವನ್ನು ಇಲ್ಲಿ ಷಷ್ಠಿ ವಿಭಕ್ತಿ ಪ್ರಯೋಗದಿಂದ ಸೂಚಿಸಲಾಗಿದೆ].  

 

[ಜರಾಸಂಧನ ಮಗ ನೀಡಿರುವ ರಥದ ಇತಿಹಾಸವನ್ನು ಹೇಳುತ್ತಾರೆ:]

 

ರಥೋ ಹ್ಯಸೌ ವಸುನಾ ವಾಸುದೇವಾಚ್ಛಕ್ರಾನ್ತರಾsಪ್ತೋ ವಸುವಂಶಜತ್ವಾತ್ ।

ಜರಾಸುತಸ್ಯಾsಸ ವೃಕೋದರಸ್ತಂ ಹರೇ ರಥಂ ಪ್ರಾರ್ಪ್ಪಯಾಮಾಸ ತಸ್ಮೈ             ೨೧.೧೬೯

 

ಸಹದೇವನಿಂದ ಕೊಡಲ್ಪಟ್ಟ ಆ ರಥವು ಪರಮಾತ್ಮನಿಂದ ಇಂದ್ರನ ಮೂಲಕವಾಗಿ ಉಪರಿಚರ ವಸುವಿಗೆ ಬಂದಿತ್ತು. ಜರಾಸಂಧ ಉಪರಿಚರ ವಸುವಿನ ವಂಶದಲ್ಲಿ ಬಂದಿದ್ದರಿಂದ ಆ ರಥ ಅವನಲ್ಲಿತ್ತು. ಅಂಥಹ ರಥವನ್ನು ಭೀಮಸೇನನು ಭಕ್ತಿಯಿಂದ ಶ್ರೀಕೃಷ್ಣನಿಗೊಪ್ಪಿಸಿದನು.

[ಮಹಾಭಾರತದ ಆದಿಪರ್ವದಲ್ಲಿ ಹೇಳುವಂತೆ:  ಇಂದ್ರನು ಸಂತುಷ್ಟನಾಗಿ ಪರಮಾತ್ಮನ ಭಕ್ತನಾದ ಉಪರಿಚರ ವಸುವಿಗೆ ರಥವನ್ನು ಕೊಡುತ್ತಾನೆ. ಆದರೆ ಮೂಲತಃ ಆ ರಥ ನಾರಾಯಣನಿಂದ ಬಂದಿರುವುದು ಎನ್ನುವ ವಿವರವನ್ನು ಬ್ರಹ್ಮಾಂಡ ಪುರಾಣದಲ್ಲಿ  ಹೇಳಿರುವುದನ್ನು ನಾವು ಕಾಣುತ್ತೇವೆ. ತದನಂತರ ಅದು ಜರಾಸಂಧನಿಗೆ ಬಂದಿರುವ ಕಥೆಯನ್ನೂ ಬ್ರಹ್ಮಾಂಡ ಪುರಾಣ ವಿವರಿಸುತ್ತದೆ].

 

ಕೃಷ್ಣೋsಸ್ಮರದ್ ಗರುಡಂ ಸ ಧ್ವಜೇsಭೂದ್ ರಥಂ ಕೃಷ್ಣೋsಥಾsರುಹತ್ ಪಾಣ್ಡವಾಭ್ಯಾಮ್ ।

ಭೀಮಃ ಕನ್ಯಾಂ ಸಹದೇವಸ್ಯ ಹೇತೋಃ ಸಮಗ್ರಹೀದನುಜಸ್ಯಾsತ್ಮನಃ ಸಃ             ೨೧.೧೭೦

 

(ಪರಮಾತ್ಮ ಗರುಡ ಅಥವಾ ಮುಖ್ಯಪ್ರಾಣನ ಚಿಹ್ನೆ ಇಲ್ಲದ ರಥವನ್ನು ಏರುವುದಿಲ್ಲ. ಹಾಗಾಗಿ-) ಶ್ರೀಕೃಷ್ಣನು ಗರುಡನನ್ನು ನೆನಪಿಸಿಕೊಂಡನು. ಆಗ ಗರುಡ ರಥದ ಧ್ವಜದಲ್ಲಿ ಪ್ರತಿಷ್ಠಿತನಾದನು. ತದನಂತರ ಕೃಷ್ಣನು ಭೀಮಾರ್ಜುನರಿಂದ ಕೂಡಿಕೊಂಡು ರಥವನ್ನೇರಿದನು. ಭೀಮಸೇನನು ತನ್ನ ತಮ್ಮನಾದ ಸಹದೇವನಿಗಾಗಿ ಜರಾಸಂಧನ ಪುತ್ರಿಯನ್ನು ಸ್ವೀಕರಿಸಿದನು.

 

ನಕುಲಸ್ಯಾsದಾನ್ಮದ್ರರಾಜೋ ಹಿ ಪೂರ್ವಂ ಸ್ವೀಯಾಂ ಕನ್ಯಾಂ ಸಾ ತಥೈಷಾsಪ್ಯುಷಾ ಹಿ ।

ಏಕಾ ಪೂರ್ವಂ ತೇ ಅಶ್ವಿನೋಶ್ಚೈವ ಭಾರ್ಯ್ಯಾ ಯಮೌ ರೇಮಾತೇ ಯದುಷಾ ಅಶ್ವಿಭಾರ್ಯ್ಯಾ ೨೧.೧೭೧


ಸಹದೇವನಿಗೆ ಜರಾಸಂಧನ ಪುತ್ರಿಯೊಂದಿಗೆ ವಿವಾಹವಾಗುವ ಮೊದಲೇ ಮದ್ರರಾಜನಾದ ಶಲ್ಯನು ತನ್ನ ಮಗಳನ್ನು ನಕುಲನಿಗೆ ಮದುವೆಮಾಡಿ ಕೊಟ್ಟಿರುತ್ತಾನೆ. ಜರಾಸಂಧನ ಮಗಳು ಹಾಗೂ ಮದ್ರರಾಜನ ಮಗಳು ಮೂಲರೂಪದಲ್ಲಿ ಅಶ್ವೀದೇವತೆಯರ ಪತ್ನಿಯಾದ ಉಷಾದೇವಿಯೇ ಆಗಿದ್ದಾಳೆ. [ಮೂಲರೂಪದಲ್ಲಿಯೂ ಕೂಡಾ ಅಶ್ವೀದೇವತೆಗಳಿಗೆ ಒಬ್ಬಳೇ ಹೆಂಡತಿ. ಅವಳೇ ಉಷಾ.  ಉಷಾದೇವಿ ಇಲ್ಲಿ ಶಲ್ಯನ ಮಗಳಾಗಿ ಹಾಗೂ ಜರಾಸಂಧನ ಮಗಳಾಗಿ ಎರಡುರೂಪದಿಂದ ಅವತರಿಸಿದ್ದಳು. ಅವಳು ಒಂದು ರೂಪದಿಂದ ನಕುಲನ ಪತ್ನಿಯಾದರೆ, ಇನ್ನೊಂದು ರೂಪದಲ್ಲಿ ಸಹದೇವನ ಪತ್ನಿಯಾದಳು].

 

ತತಃ ಕೃಷ್ಣಾಯಾಮಗ್ರಜಭ್ರಾತೃಭಾರ್ಯ್ಯಾವೃತ್ತಿಂ ಹಿ ತೌ ಚಕ್ರತುರ್ಮ್ಮಾದ್ರಿಪುತ್ರೌ ।

ಜರಾಸುತಸ್ಯಾsತ್ಮಜಃ ಕೇಶವಾದೀನ್ ರತ್ನೈಃ ಸಮಭ್ಯರ್ಚ್ಚ್ಯ ಯಯಾವನುಜ್ಞಯಾ ೨೧.೧೭೨

 

ತದನಂತರ (ಹೀಗೆ ಮದುವೆಯಾದಮೇಲೆ) ಮಾದ್ರಿಯ ಮಕ್ಕಳಾದ ನಕುಲ-ಸಹದೇವರು ದ್ರೌಪದಿಯಲ್ಲಿ ಅತ್ತಿಗೆ ಎನ್ನುವ ಭಾವನೆಯನ್ನು ತೋರಿಸಲು ಪ್ರಾರಂಭಿಸಿದರು. ಜರಾಸಂಧನ ಮಗನಾದ ಸಹದೇವನು ಕೃಷ್ಣಾದಿಗಳನ್ನು ರತ್ನಾದಿಗಳಿಂದ ಪೂಜಿಸಿ(ಕೃಷ್ಣಾದಿಗಳಿಗೆ ತನ್ನ ದೇಶದಲ್ಲಿರುವ ಅಮೂಲ್ಯವಾದ ರತ್ನಗಳನ್ನು ಕೊಟ್ಟು), ಅವರ ಅನುಜ್ಞೆಯನ್ನು ಪಡೆದು ತೆರಳಿದನು.

 

ತದಾಜ್ಞಯಾ ಪಿತೃಕಾರ್ಯ್ಯಾಣಿ ಕೃತ್ವಾ ತದಾಜ್ಞಯೈವಾಮುಚತ್ ತಾನ್ ನೃಪಾಂಶ್ಚ ।

ತೈಃ ಸಂಸ್ತುತಃ ಕೇಶವೋ ಭೀಮಪಾರ್ತ್ಥಯುಕ್ತೋ ಯಯೌ ಭಕ್ತಿನಮ್ರೈರ್ಯ್ಯಥಾವತ್ ೨೧.೧೭೩

 

ಕೃಷ್ಣ-ಭೀಮಾರ್ಜುನರ ಅಣತಿಯಿಂದ ಪಿತೃಕಾರ್ಯವನ್ನು ಮಾಡಿ, ಪರಮಾತ್ಮನ ಆಜ್ಞೆಯಂತೆ ಜರಾಸಂಧ ಬಂಧಿಸಿದ್ದ ರಾಜರೆಲ್ಲರನ್ನು ಸಹದೇವ ಬಿಡುಗಡೆಗೊಳಿಸಿದನು. ಆ ಎಲ್ಲಾ ರಾಜರುಗಳಿಂದ  ಕೊಂಡಾಡಲ್ಪಟ್ಟ ಶ್ರೀಕೃಷ್ಣನು ಭೀಮಾರ್ಜುನರಿಂದ ಕೂಡಿಕೊಂಡು ಇಂದ್ರಪ್ರಸ್ಥಕ್ಕೆ ಹಿಂತಿರುಗಿದನು.

 

ಸಮ್ಭಾವಿತಾಸ್ತೇ ಸಹದೇವೇನ ಸಮ್ಯಕ್ ಪ್ರಶಸ್ಯ ಕೃಷ್ಣಂ ಭೀಮಸೇನಂ ಚ ಸರ್ವೇ ।

ಯಯುರ್ಗ್ಗೃಹಾನ್ ಸ್ವಾನಪತತ್ ಕೇಶವದ್ವಿಡ್ ಜರಾಸುತೋsನ್ಧೇ ತಮಸಿ ಕ್ರಮೇಣ ೨೧.೧೭೪

 

ಜರಾಸಂಧನಿಂದ ಬಂಧನಕ್ಕೆ ಒಳಗಾಗಿದ್ದ ರಾಜರೆಲ್ಲರೂ ಸಹದೇವನಿಂದ ಚೆನ್ನಾಗಿ ಗೌರವಿಸಲ್ಪಟ್ಟವರಾಗಿ, ಕೃಷ್ಣನನ್ನೂ, ಭೀಮಸೇನನನ್ನೂ ಚೆನ್ನಾಗಿ ಹೊಗಳಿ (ಪೂಜೆಯನ್ನು ಅರ್ಪಿಸಿ), ತಮ್ಮ ದೇಶಕ್ಕೆ ತೆರಳಿದರು. ನಾರಾಯಣನನ್ನು ದ್ವೇಷಮಾಡುವ ಜರಾಸಂಧನು ಕ್ರಮವಾಗಿ ಅನ್ಧಂತಮಸ್ಸಿನಲ್ಲಿ ಬಿದ್ದನು.