ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 8, 2022

Mahabharata Tatparya Nirnaya Kannada 21: 175-179

 

ಕೃಷ್ಣಶ್ಚ ಪಾರ್ತ್ಥೌ ಚ ತಥೈಕಯಾನಂ ಸಮಾಸ್ಥಿತಾ ಧರ್ಮ್ಮಜಮಭ್ಯಗಚ್ಛನ್ ।

ತೇಷಾಂ ಶಙ್ಖಧ್ವನಿಸಮ್ಬೋಧಿತಾತ್ಮಾ ರಾಜಾ ಪ್ರೀತಶ್ಚಾತಿತರಾಂ ಬಭೂವ             ೨೧.೧೭೫

 

ಕೃಷ್ಣ ಹಾಗೂ ಭೀಮಸೇನಾರ್ಜುನರು ಒಂದೇ ರಥವನ್ನು ಏರಿದವರಾಗಿ ಧರ್ಮರಾಜನ ಬಳಿ ತೆರಳಿದರು. ಆ ಮೂವರ ಶಂಖಧ್ವನಿಯಿಂದ (ಶ್ರೀಕೃಷ್ಣನ ಪಾಂಚಜನ್ಯ, ಭೀಮನ ಪೌಂಡ್ರ ಮತ್ತು ಅರ್ಜುನನ ದೇವದತ್ತ ಎನ್ನುವ ಶಂಖಧ್ವನಿಯಿಂದ)  ಎಚ್ಚರಿಸಲ್ಪಟ್ಟ ಮನಸ್ಸುಳ್ಳವನಾದ(ಎಲ್ಲವೂ ಒಳ್ಳೆಯದಾಯಿತು ಎಂದರಿತ) ಧರ್ಮರಾಜನು ಅತ್ಯಂತ ಪ್ರೀತನಾದ.

 

ದ್ವೈಪಾಯನೋsಥ ಭಗವಾನಭಿಗಮ್ಯ ಪಾರ್ತ್ಥಾನಾಜ್ಞಾಪಯತ್ ಸಕಲಸಮ್ಭೃತಿಸಾಧನಾಯ ।

ತಂ ರಾಜಸೂಯಸಹಿತಂ ಪರಮಾಶ್ವಮೇಧಯಜ್ಞಂ ಸಮಾದಿಶದನನ್ಯಕೃತಂ ವಿರಿಞ್ಚಾತ್೨೧.೧೭೬

 

ತದನಂತರ ಷಡ್ಗುಣೈಶ್ವರ್ಯ ಸಂಪನ್ನರಾದ ವೇದವ್ಯಾಸರು ಪಾಂಡವರನ್ನು ಕುರಿತು ಬಂದು, ಬ್ರಹ್ಮದೇವರನ್ನು ಹೊರತುಪಡಿಸಿದರೆ ಬೇರೆ ಯಾರೂ ಮಾಡಿರದ, ರಾಜಸೂಯದಿಂದ ಕೂಡಿರುವ, ಅತ್ಯಂತ ಉತ್ಕೃಷ್ಟವಾದ ಅಶ್ವಮೇಧ ಯಜ್ಞವನ್ನು ಮಾಡಬೇಕೆಂದೂ ಮತ್ತು ಯಜ್ಞಕ್ಕೆ ಬೇಕಾದ ಸಕಲ ಸಾಧನಗಳೂ ಸಿದ್ಧವಾಗಬೇಕೆಂದೂ ಆಜ್ಞೆ ಮಾಡಿದರು.

[ಕೇವಲ ರಾಜಸೂಯ ಮಾಡುವುದಲ್ಲ, ಅಶ್ವಮೇಧದಿಂದ ಕೂಡಿರುವ ರಾಜಸೂಯ ಮಾಡಬೇಕು ಎನ್ನುವ ಆಜ್ಞೆ. ಪಾಂಡವರನ್ನು ಬಿಟ್ಟು ಬೇರೆ ಯಾರಿಗೂ ಮಾಡಲು ಅಸಾಧ್ಯವಾದ, ವಿಶಿಷ್ಟವಾದ ಯಾಗವನ್ನು ವೇದವ್ಯಾಸರು ಪಾಂಡವರಲ್ಲಿ ಮಾಡಲು ಆಜ್ಞೆಯನ್ನಿತ್ತರು].

 

ಕರ್ತ್ತಾ ಹಿ ತಸ್ಯ ಪರಮೇಷ್ಠಿಪದಂ ಪ್ರಯಾತಿ ಯದ್ಯನ್ಯಸದ್ಗುಣವರೈಃ ಪರಮೇಷ್ಠಿತುಲ್ಯಃ ।

ಭೀಮೇ ಮಖಸ್ಯ ಫಲಮತ್ಯಧಿಕಂ ನಿಧಾತುಂ ವ್ಯಾಸಃ ಕ್ರತುಂ ತಮದಿಶದ್ ಗುರುರಬ್ಜಜಸ್ಯ ೨೧.೧೭೭

 

ಒಂದು ವೇಳೆ ಉಳಿದ ಶ್ರೇಷ್ಠ ಸದ್ಗುಣಗಳಿಂದ ಬ್ರಹ್ಮನಿಗೆ ಸದೃಶನಾದವನು ಈ ಯಾಗವನ್ನು ಮಾಡಿದರೆ ಅವನು ಬ್ರಹ್ಮಪದವಿಯನ್ನು ಹೊಂದುತ್ತಾನೆ. ಅದರಿಂದ ಭೀಮಸೇನನಲ್ಲಿ ಯಾಗದ ಅತ್ಯುತ್ಕೃಷ್ಟವಾದ ಫಲವನ್ನು ಮಾಡಲು, ಬ್ರಹ್ಮದೇವರ ಗುರುವಾಗಿರುವ ವೇದವ್ಯಾಸರು ಈ ವಿಶಿಷ್ಟವಾದ ಯಾಗವನ್ನು ಮಾಡಲು ಆಜ್ಞೆ ಮಾಡಿದರು.

 

[ಯಜಮಾನನಾಗಿ ಧರ್ಮರಾಜ ಕುಳಿತಿರುವಾಗ ಭೀಮಸೇನನಿಗೆ ಹೇಗೆ ಅತ್ಯುತ್ಕೃಷ್ಟ ಫಲ ಸಲ್ಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರರೂಪವಾಗಿ ಕರ್ಮದ ರಹಸ್ಯವನ್ನು ವಿವರಿಸುತ್ತಾರೆ:]

 

ಅಸಾಧಾರಣಹೇತುರ್ಯ್ಯಃ ಕರ್ಮ್ಮಣೋ ಯಸ್ಯ ಚೇತನಃ ।

ಸ ಏವ ತತ್ಫಲಂ ಪೂರ್ಣ್ಣಂ ಭುಙ್ಕ್ತೇsನ್ಯೋsಲ್ಪಮಿತಿ ಸ್ಥಿತಿಃ             ೨೧.೧೭೮

 

ಯಾವ ಕರ್ಮಕ್ಕೆ ಯಾವ ಜೀವನು ಅಸಾಧಾರಣ(ಪ್ರಮುಖ) ಕಾರಣನೋ, ಅವನೇ ಆ ಕರ್ಮದ ಮುಖ್ಯ ಫಲವನ್ನು ಭೋಗಿಸುತ್ತಾನೆ. ಉಳಿದವರು ಯೋಗ್ಯತಾನುಸಾರವಾಗಿ ಸ್ವಲ್ಪ ಮಾತ್ರ ಫಲವನ್ನು ಪಡೆಯುತ್ತಾರೆ ಎನ್ನುವುದು  ಸ್ಥಿತಿ (ಇದು ಶಾಸ್ತ್ರ ನಿರ್ಣಯ).

 

[ಹಾಗಿದ್ದರೆ ಎಲ್ಲವುದಕ್ಕೂ ಮುಖ್ಯ ಹೇತುವಾಗಿರುವ ನಾರಾಯಣನಿಗೆ ಸಮಸ್ತಫಲ ಸಲ್ಲಬೇಕಲ್ಲವೇ ಎಂದರೆ:]

 

ವಿನಾ ವಿಷ್ಣುಂ ನಿರ್ಣ್ಣಯೋsಯಂ ಸ ಹಿ ಕರ್ಮ್ಮಫಲೋಜ್ಝಿತಃ ।

ಹೇತವೋsಪಿ ಹಿ ಪಾಪಸ್ಯ ನ ಪ್ರಾಯಃ ಫಲಭಾಗಿನಃ ।

ದೇವಾಃ ಪುಣ್ಯಸ್ಯ ದೈತ್ಯಾಶ್ಚ ಮಾನುಷಾಸ್ತದ್ವಿಭಾಗಿನಃ             ೨೧.೧೭೯

 

ದೇವರನ್ನು ಬಿಟ್ಟು ಈ  ನಿರ್ಣಯವು. ಏಕೆಂದರೆ ಭಗವಂತನಿಗೆ ಯಾವ ಕರ್ಮದ ಲೇಪವೂ ಇಲ್ಲ. ದೇವತೆಗಳು ದೈತ್ಯರ ಪಾಪದ ಪ್ರೇರಣೆಗೆ ಕಾರಣರಾದರೂ ಕೂಡಾ, ಪ್ರಾಯಃ(ಹೆಚ್ಚಾಗಿ) ಅವರು ಅದರ  ಫಲ ಭಾಗಿನರಾಗುವುದಿಲ್ಲ. (ಉದಾಹರಣೆಗೆ ದೈತ್ಯರ ದೇಹದಲ್ಲಿ ದೇವತೆಗಳ ಪ್ರವೇಶವಿರುತ್ತದೆ ಮತ್ತು ದೈತ್ಯರ ಕಾರ್ಯದಲ್ಲಿ ಅವರ ಪ್ರಚೋದನೆ ಇರುತ್ತದೆ. ಇದಲ್ಲದೇ ಮುಖ್ಯವಾಗಿ ಬ್ರಹ್ಮ-ರುದ್ರರು ದೈತ್ಯರಿಗೆ ವರವನ್ನು ಕೊಡುತ್ತಾರೆ. ಆರೀತಿ ವರವನ್ನು ಪಡೆದು ದೈತ್ಯರ ಕೆಟ್ಟ ಕೆಲಸ ಮಾಡಿದರೂ ಕೂಡಾ, ಆ ಪಾಪದ ಫಲಕ್ಕೆ ದೇವತೆಗಳು ಫಲ ಭಾಗೀನರಾಗುವುದಿಲ್ಲ). ದೈತ್ಯರು ಪುಣ್ಯಕರ್ಮವನ್ನು ಮಾಡಿದರೂ ಕೂಡಾ ಹೆಚ್ಚಾಗಿ ಪುಣ್ಯದ ಫಲವನ್ನು ಅನುಭವಿಸುವುದಿಲ್ಲ. (ದೇವತೆಗಳು ಪುಣ್ಯಕ್ಕೆ ಕಾರಣರಾದಾಗ ಆ ಪುಣ್ಯದ ಫಲವನ್ನು ಅವರು ಭೋಗಿಸುತ್ತಾರೆ). ಮನುಷ್ಯರು ಪುಣ್ಯವನ್ನಾಗಲೀ, ಪಾಪವನ್ನಾಗಲೀ ಸಂಪೂರ್ಣ ಭೋಗಿಸುವ ಶಕ್ತಿಯನ್ನು ಹೊಂದಿರುವುದಿಲ್ಲ. (ಪುಣ್ಯದ ಫಲವನ್ನು ದೇವತೆಗಳೂ, ಪಾಪದ ಫಲವನ್ನು ದೈತ್ಯರೂ ಪಡೆಯುತ್ತಾರೆ) ಹಾಗಾಗಿ ಪುಣ್ಯ-ಪಾಪದ ಸ್ವಲ್ಪ ಫಲವನ್ನಷ್ಟೇ ಮಾನವರು ಅನುಭವಿಸುತ್ತಾರೆ.    

No comments:

Post a Comment