ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 8, 2022

Mahabharata Tatparya Nirnaya Kannada 21: 180-190

 

ಅಸಾಧಾರಣಹೇತುಶ್ಚ ಭೀಮ ಏವ ಪ್ರಕೀರ್ತ್ತಿತಃ ।

ಯಜ್ಞಸ್ಯಾಸ್ಯ ಜರಾಸನ್ಧವದಾತ್ ಕರ್ಣ್ಣಜಯಾದಪಿ         ೨೧.೧೮೦

 

ಜಯಾಚ್ಚ ಕೀಚಕಾದೀನಾಮನ್ಯೈರ್ಜ್ಜೇತುಮಶಕ್ಯತಃ ।

ದ್ವಿತೀಯಃ ಫಲ್ಗುನಶ್ಚೈವ ತೃತೀಯಸ್ತು ಯುಧಿಷ್ಠಿರಃ         ೨೧.೧೮೧

 

ಪಾಂಡವರು ಮಾಡುತ್ತಿರುವ ಈ ಯಜ್ಞಕ್ಕೆ ಭೀಮಸೇನನೇ ಅಸಾಧಾರಣ ಕಾರಣ. ಏಕೆಂದರೆ ಜರಾಸಂಧನನ್ನು ಕೊಂದುದರಿಂದ, ಕರ್ಣನನ್ನು ಜಯಿಸಿರುವುದರಿಂದ, ಇನ್ನ್ಯಾರಿಂದಲೂ ಗೆಲ್ಲಲು ಸಾಧ್ಯವಿರದ  ಕೀಚಕ ಮೊದಲಾದವರನ್ನು ಗೆದ್ದುದರಿಂದ. ಇನ್ನು ಎರಡನೇ ಕಾರಣ ಅರ್ಜುನ ಹಾಗೂ ಮೂರನೇ ಕಾರಣ ಯುಧಿಷ್ಠಿರ.

 

ತಸ್ಮಾದ್ ಬ್ರಹ್ಮಪದಾವಾಪ್ತ್ಯೈ ವ್ಯಾಸೋ ಭೀಮಸ್ಯ ತಂ ಕ್ರತುಮ್ ।

ಅನನ್ಯಕೃತಮಾದಿಶ್ಯ ದಿಶಾಂ ವಿಜಯಮಾದಿಶತ್                     ೨೧.೧೮೨

 

ಹೀಗೆ ಭೀಮಸೇನನ  ಬ್ರಹ್ಮಪದವಿಪ್ರಾಪ್ತಿಗಾಗಿ ವೇದವ್ಯಾಸರು ಇತಿಹಾಸದಲ್ಲಿ ಯಾರೂ ಮಾಡಿರದ ಅಶ್ವಮೇಧಯಾಗದಿಂದ ಕೂಡಿರುವ ರಾಜಸೂಯ ಯಾಗವನ್ನು ಆಜ್ಞೆಮಾಡಿ, ದಿಕ್ಕುಗಳ ವಿಜಯವನ್ನು(ದಿಗ್ವಿಜಯಕ್ಕೆ) ಅಪ್ಪಣೆ ಮಾಡಿದರು.

 

ಅಥಾsಬ್ರವೀದ್ ಧನಞ್ಜಯೋ ಧನುರ್ಧ್ವಜೋ ರಥೋ ವರಃ ।

ಮಮಾಸ್ತಿ ತದ್ದಿಶಾಂ ಜಯೋ ಮಮೈವ ವಾಞ್ಛಿತಃ ಪ್ರಭೋ             ೨೧.೧೮೩

 

ತದನಂತರ ಅರ್ಜುನ ಹೇಳುತ್ತಾನೆ:  ಸರ್ವಸಮರ್ಥರಾದ ವೇದವ್ಯಾಸರೇ, ಒಳ್ಳೆಯ ಬಿಲ್ಲು, ಧ್ವಜ,  ಶ್ರೇಷ್ಠವಾಗಿರುವ ರಥ  ನನ್ನಲ್ಲಿದೆ. ಹಾಗಾಗಿ ನನಗೇ ದಿಕ್ಕುಗಳ ಜಯ ಯೋಗ್ಯ(ದಿಗ್ವಿಜಯವನ್ನು ನಾನೊಬ್ಬನೇ ಮಾಡುತ್ತೇನೆ).  

 

ಇತೀರಿತೋsಖಿಲಪ್ರಭುರ್ಜ್ಜಗಾದ ಸತ್ಯಮಸ್ತಿತೇ ।

ಸಮಸ್ತಸಾಧನೋನ್ನತಿರ್ಮ್ಮಹಚ್ಚ ವೀರ್ಯ್ಯಮಸ್ತಿತೇ                 ೨೧.೧೮೪

 

ತಥಾsಪಿ ಕೀಚಕಾದಯೋ ವೃಕೋದರಾದೃತೇ ವಶಮ್ ।

ನ ಯಾನ್ತಿ ನಾಪಿ ತೇ ವಶಂ ಪ್ರಯಾತಿ ಕರ್ಣ್ಣ ಏವ ಚ                  ೨೧.೧೮೫

 

ಈರೀತಿಯಾಗಿ ಅರ್ಜುನ ಹೇಳಿದಾಗ ಎಲ್ಲರಿಗೂ ಒಡೆಯರಾಗಿರುವ ವೇದವ್ಯಾಸ ದೇವರು ಹೇಳುತ್ತಾರೆ: ಧನಂಜಯ, ನಿನ್ನಲ್ಲಿ ಖಂಡಿತವಾಗಿ ಒಳ್ಳೆಯ ವೀರ್ಯವಿದೆ. ಸಮಸ್ತ ಸಾಧನ ಸಂಪತ್ತಿದೆ. ಇಷ್ಟೆಲ್ಲಾ ಇದ್ದರೂ, ಕೀಚಕಾದಿಗಳು ಭೀಮಸೇನನಲ್ಲದೆ ಇತರರಿಗೆ ವಶರಾಗುವುದಿಲ್ಲ. ಮುಖ್ಯವಾಗಿ ಕರ್ಣ ನಿನ್ನ ವಶವನ್ನು ಹೊಂದುವುದಿಲ್ಲ.

 

ಬಲಾಧಿಕೋsಸಿ ಕರ್ಣ್ಣತಸ್ತಥಾsಪಿ ನಾಮೃತಃ ಕರಮ್ ।

ದದಾತಿ ತೇ ಹ್ಯತಿಸ್ಪೃಧಾ ನ ವದ್ಧ್ಯ ಏಷ ತೇsದ್ಯ ಚ                    ೨೧.೧೮೬

 

ಸವರ್ಮ್ಮಕುಣ್ಡಲತ್ವತೋ ನ ವದ್ಧ್ಯ ಏಷ ಯತ್ ತ್ವಯಾ ।

ತತೋ ವೃಕೋದರೋ ದಿಶಂ ಪ್ರಯಾತು ತೇ ಪಿತುಃ ಪ್ರಿಯಾಮ್ ೨೧.೧೮೭

 

ಕರ್ಣನಿಗಿಂತ ನೀನು ಬಲಶಾಲಿಯಾಗಿರುವುದೇನೋ ನಿಜ. ಆದರೂ ಕೂಡಾ ಅತ್ಯಂತ ಸ್ಪರ್ಧಾ-ಮನೋವೃತ್ತಿಯುಳ್ಳ ಅವನು ಸಾಯದೇ ನಿನಗೆ ಕಪ್ಪ ಸಿಗುವುದಿಲ್ಲ. ಆದರೆ ಅವನನ್ನು ಈಗ ಕೊಲ್ಲುವಂತಿಲ್ಲ.

ಅಷ್ಟೇ ಅಲ್ಲದೆ, ಕವಚ ಕುಂಡಲಗಳಿರುವುದರಿಂದ ಅವನನ್ನು ಕೊಲ್ಲಬಾರದು. ಆ ಕಾರಣದಿಂದ ಭೀಮಸೇನನು ನಿನ್ನ ತಂದೆಯಾಗಿರುವ ಇಂದ್ರನಿಗೆ ಪ್ರಿಯವಾಗಿರುವ ಪೂರ್ವದಿಕ್ಕನ್ನು ಕುರಿತು ತೆರಳಲಿ.  

 

ಜೀವಗ್ರಾಹಭಯಾತ್ ಕರ್ಣ್ಣೋ ದದಾತಿ ಕರಮಞ್ಜಸಾ ।

ಭೀಮಾಯ ನಾತ್ರ ಸನ್ದೇಹೋ ಜಿತೋsನೇನ ಚ ಸಂಯುಗೇ             ೨೧.೧೮೮

 

ಭೀಮಸೇನ ತನ್ನನ್ನು ಜೀವಂತವಾಗಿ ಹಿಡಿಯುತ್ತಾನೆ ಎನ್ನುವ ಭಯದಿಂದ ಕರ್ಣನು ಚೆನ್ನಾಗಿ ಕರವನ್ನು ಕೊಡುತ್ತಾನೆ. ಇದರಲ್ಲಿ ಯಾವುದೇ ಸಂಶಯವಿಲ್ಲ.

 

ಅಜೇಯೌ ಶರ್ವವಚನಾದ್ ರಣೇ ಕೀಚಕಪೌಣ್ಡ್ರಕೌ ।

ವಶಂ ಪ್ರಯಾತೋ ಭೀಮಸ್ಯ ತಥಾsವದ್ಧ್ಯೋsಪಿ ಚೇದಿಪಃ             ೨೧.೧೮೯

 

ರುದ್ರದೇವರ ವರದಿಂದಾಗಿ ಕೀಚಕ ಮತ್ತು ಪೌಂಡ್ರಕರು ಅಜೇಯರಾಗಿದ್ದಾರೆ. ಅವರೂ ಕೂಡಾ ಭೀಮಸೇನನ ಬಲಕ್ಕೆ ಬಾಗುತ್ತಾರೆ. ಹಾಗೆಯೇ ಅವಧ್ಯನಾಗಿರುವ ಶಿಶುಪಾಲ ಕೂಡಾ ಭೀಮನ ವಶವನ್ನು ಹೊಂದುತ್ತಾನೆ.

 

ಜೀವಗ್ರಾಹಭಯಂ ಹ್ಯೇಷಾಂ ಭೀಮಾನ್ಮಾಗಧಪಾತನಾತ್ ।

ತಸ್ಮಾತ್ ಕರಂ ಪ್ರಯಚ್ಛನ್ತಿ ಜಿತಾ ವಾ ಪೂರ್ವಮೇವ ವಾ             ೨೧.೧೯೦

 

ಭೀಮಸೇನ ಜರಾಸಂಧನನ್ನು ಮಣಿಸಿರುವುದರಿಂದ ಇವರೆಲ್ಲರಿಗೂ ಭೀಮನಿಂದ ಜೀವಂತ ಸೆರೆಯ ಭಯವಿದೆ. ಅದರಿಂದಾಗಿ ಯುದ್ಧದಲ್ಲಿ ಸೋತು ಕರವನ್ನು ನೀಡುತ್ತಾರೆ ಅಥವಾ ಯುದ್ಧವನ್ನು ಮಾಡುವ ಮೊದಲೇ ಕರನೀಡುತ್ತಾರೆ.

No comments:

Post a Comment