ಸುತೋ ಯಯೌ ಶರಣಂ ತಾನ್ ರಮೇಶಭೀಮಾರ್ಜ್ಜುನಾನ್ ಸಹದೇವೋsಸ್ಯ ಧೀಮಾನ್ ।
ರಥಂ ಸ್ವಸಾರಂ ಚ ದದೌ ಸ ಮಾರುತೇರ್ನ್ನನಾಮ ಕೃಷ್ಣಂ ಪರಯಾ ಚ ಭಕ್ತ್ಯಾ ॥೨೧.೧೬೮॥
ಬುದ್ಧಿವಂತನಾಗಿರುವ ಜರಾಸಂಧನ ಮಗ ಸಹದೇವನು
ಕೃಷ್ಣ-ಭೀಮ-ಅರ್ಜುನರಲ್ಲಿ ರಕ್ಷಣೆ ಬೇಡಿ, ಅವರಲ್ಲಿ ಶರಣುಹೊಂದಿ, ಭೀಮಸೇನನಿಗೆ ರಥವನ್ನೂ, ತಂಗಿಯನ್ನೂ ಕೊಟ್ಟು, ಉತ್ಕೃಷ್ಟವಾದ
ಭಕ್ತಿಯಿಂದ ಕೃಷ್ಣನನ್ನು ನಮಸ್ಕರಿಸಿದನು.
[ಇಲ್ಲಿ ಮಾರುತಿಃ ಎನ್ನುವ ಪದ ‘ಮಾರುತಯೇ’ ಎಂದಾಗಬೇಕಿತ್ತು.
ಆದರೆ ಮಾರುತೇಃ ಎಂದು ಷಷ್ಠಿ ವಿಭಕ್ತಿಯಲ್ಲಿ ಹೇಳಿದ್ದಾರೆ. ಏಕೆಂದರೆ ರಥ ಮತ್ತು ಸಹದೇವನ
ತಂಗಿಯನ್ನು ಭೀಮಸೇನ ಸ್ವೀಕರಿಸಿರುವುದು ತನಗಾಗಿ ಅಲ್ಲ. ರಥವನ್ನು ಕೃಷ್ಣನಿಗಾಗಿ ಸ್ವೀಕರಿಸಿದರೆ,
ತಂಗಿ ಮಾದ್ರಿಪುತ್ರ ಸಹದೇವನನ್ನು ಮದುವೆಯಾಗುತ್ತಾಳೆ. ಈ ಅಂಶವನ್ನು ಇಲ್ಲಿ ಷಷ್ಠಿ ವಿಭಕ್ತಿ ಪ್ರಯೋಗದಿಂದ
ಸೂಚಿಸಲಾಗಿದೆ].
[ಜರಾಸಂಧನ ಮಗ ನೀಡಿರುವ ರಥದ ಇತಿಹಾಸವನ್ನು ಹೇಳುತ್ತಾರೆ:]
ರಥೋ ಹ್ಯಸೌ ವಸುನಾ
ವಾಸುದೇವಾಚ್ಛಕ್ರಾನ್ತರಾsಪ್ತೋ ವಸುವಂಶಜತ್ವಾತ್
।
ಜರಾಸುತಸ್ಯಾsಸ ವೃಕೋದರಸ್ತಂ ಹರೇ ರಥಂ ಪ್ರಾರ್ಪ್ಪಯಾಮಾಸ ತಸ್ಮೈ ॥೨೧.೧೬೯॥
ಸಹದೇವನಿಂದ ಕೊಡಲ್ಪಟ್ಟ ಆ ರಥವು ಪರಮಾತ್ಮನಿಂದ ಇಂದ್ರನ
ಮೂಲಕವಾಗಿ ಉಪರಿಚರ ವಸುವಿಗೆ ಬಂದಿತ್ತು. ಜರಾಸಂಧ ಉಪರಿಚರ ವಸುವಿನ ವಂಶದಲ್ಲಿ ಬಂದಿದ್ದರಿಂದ ಆ
ರಥ ಅವನಲ್ಲಿತ್ತು. ಅಂಥಹ ರಥವನ್ನು ಭೀಮಸೇನನು ಭಕ್ತಿಯಿಂದ ಶ್ರೀಕೃಷ್ಣನಿಗೊಪ್ಪಿಸಿದನು.
[ಮಹಾಭಾರತದ ಆದಿಪರ್ವದಲ್ಲಿ ಹೇಳುವಂತೆ: ಇಂದ್ರನು ಸಂತುಷ್ಟನಾಗಿ ಪರಮಾತ್ಮನ ಭಕ್ತನಾದ ಉಪರಿಚರ
ವಸುವಿಗೆ ರಥವನ್ನು ಕೊಡುತ್ತಾನೆ. ಆದರೆ ಮೂಲತಃ ಆ ರಥ ನಾರಾಯಣನಿಂದ ಬಂದಿರುವುದು ಎನ್ನುವ ವಿವರವನ್ನು
ಬ್ರಹ್ಮಾಂಡ ಪುರಾಣದಲ್ಲಿ ಹೇಳಿರುವುದನ್ನು ನಾವು ಕಾಣುತ್ತೇವೆ.
ತದನಂತರ ಅದು ಜರಾಸಂಧನಿಗೆ ಬಂದಿರುವ ಕಥೆಯನ್ನೂ ಬ್ರಹ್ಮಾಂಡ ಪುರಾಣ ವಿವರಿಸುತ್ತದೆ].
ಕೃಷ್ಣೋsಸ್ಮರದ್ ಗರುಡಂ ಸ ಧ್ವಜೇsಭೂದ್ ರಥಂ ಕೃಷ್ಣೋsಥಾsರುಹತ್ ಪಾಣ್ಡವಾಭ್ಯಾಮ್ ।
ಭೀಮಃ ಕನ್ಯಾಂ
ಸಹದೇವಸ್ಯ ಹೇತೋಃ ಸಮಗ್ರಹೀದನುಜಸ್ಯಾsತ್ಮನಃ ಸಃ ॥೨೧.೧೭೦॥
(ಪರಮಾತ್ಮ ಗರುಡ ಅಥವಾ ಮುಖ್ಯಪ್ರಾಣನ ಚಿಹ್ನೆ ಇಲ್ಲದ ರಥವನ್ನು
ಏರುವುದಿಲ್ಲ. ಹಾಗಾಗಿ-) ಶ್ರೀಕೃಷ್ಣನು ಗರುಡನನ್ನು ನೆನಪಿಸಿಕೊಂಡನು. ಆಗ ಗರುಡ ರಥದ ಧ್ವಜದಲ್ಲಿ
ಪ್ರತಿಷ್ಠಿತನಾದನು. ತದನಂತರ ಕೃಷ್ಣನು ಭೀಮಾರ್ಜುನರಿಂದ ಕೂಡಿಕೊಂಡು ರಥವನ್ನೇರಿದನು. ಭೀಮಸೇನನು ತನ್ನ
ತಮ್ಮನಾದ ಸಹದೇವನಿಗಾಗಿ ಜರಾಸಂಧನ ಪುತ್ರಿಯನ್ನು ಸ್ವೀಕರಿಸಿದನು.
ನಕುಲಸ್ಯಾsದಾನ್ಮದ್ರರಾಜೋ ಹಿ ಪೂರ್ವಂ ಸ್ವೀಯಾಂ ಕನ್ಯಾಂ ಸಾ ತಥೈಷಾsಪ್ಯುಷಾ ಹಿ ।
ಏಕಾ ಪೂರ್ವಂ ತೇ ಅಶ್ವಿನೋಶ್ಚೈವ ಭಾರ್ಯ್ಯಾ ಯಮೌ ರೇಮಾತೇ ಯದುಷಾ ಅಶ್ವಿಭಾರ್ಯ್ಯಾ ॥೨೧.೧೭೧॥
ಸಹದೇವನಿಗೆ ಜರಾಸಂಧನ ಪುತ್ರಿಯೊಂದಿಗೆ ವಿವಾಹವಾಗುವ ಮೊದಲೇ ಮದ್ರರಾಜನಾದ ಶಲ್ಯನು ತನ್ನ
ಮಗಳನ್ನು ನಕುಲನಿಗೆ ಮದುವೆಮಾಡಿ ಕೊಟ್ಟಿರುತ್ತಾನೆ. ಜರಾಸಂಧನ ಮಗಳು ಹಾಗೂ ಮದ್ರರಾಜನ ಮಗಳು
ಮೂಲರೂಪದಲ್ಲಿ ಅಶ್ವೀದೇವತೆಯರ ಪತ್ನಿಯಾದ ಉಷಾದೇವಿಯೇ ಆಗಿದ್ದಾಳೆ. [ಮೂಲರೂಪದಲ್ಲಿಯೂ ಕೂಡಾ ಅಶ್ವೀದೇವತೆಗಳಿಗೆ
ಒಬ್ಬಳೇ ಹೆಂಡತಿ. ಅವಳೇ ಉಷಾ. ಉಷಾದೇವಿ ಇಲ್ಲಿ ಶಲ್ಯನ
ಮಗಳಾಗಿ ಹಾಗೂ ಜರಾಸಂಧನ ಮಗಳಾಗಿ ಎರಡುರೂಪದಿಂದ ಅವತರಿಸಿದ್ದಳು. ಅವಳು ಒಂದು ರೂಪದಿಂದ ನಕುಲನ
ಪತ್ನಿಯಾದರೆ, ಇನ್ನೊಂದು ರೂಪದಲ್ಲಿ ಸಹದೇವನ ಪತ್ನಿಯಾದಳು].
ತತಃ
ಕೃಷ್ಣಾಯಾಮಗ್ರಜಭ್ರಾತೃಭಾರ್ಯ್ಯಾವೃತ್ತಿಂ ಹಿ ತೌ ಚಕ್ರತುರ್ಮ್ಮಾದ್ರಿಪುತ್ರೌ ।
ಜರಾಸುತಸ್ಯಾsತ್ಮಜಃ ಕೇಶವಾದೀನ್ ರತ್ನೈಃ ಸಮಭ್ಯರ್ಚ್ಚ್ಯ ಯಯಾವನುಜ್ಞಯಾ ॥೨೧.೧೭೨॥
ತದನಂತರ (ಹೀಗೆ ಮದುವೆಯಾದಮೇಲೆ) ಆ ಮಾದ್ರಿಯ ಮಕ್ಕಳಾದ ನಕುಲ-ಸಹದೇವರು ದ್ರೌಪದಿಯಲ್ಲಿ ಅತ್ತಿಗೆ ಎನ್ನುವ
ಭಾವನೆಯನ್ನು ತೋರಿಸಲು ಪ್ರಾರಂಭಿಸಿದರು. ಜರಾಸಂಧನ ಮಗನಾದ ಸಹದೇವನು ಕೃಷ್ಣಾದಿಗಳನ್ನು ರತ್ನಾದಿಗಳಿಂದ
ಪೂಜಿಸಿ(ಕೃಷ್ಣಾದಿಗಳಿಗೆ ತನ್ನ ದೇಶದಲ್ಲಿರುವ ಅಮೂಲ್ಯವಾದ ರತ್ನಗಳನ್ನು ಕೊಟ್ಟು), ಅವರ ಅನುಜ್ಞೆಯನ್ನು
ಪಡೆದು ತೆರಳಿದನು.
ತದಾಜ್ಞಯಾ ಪಿತೃಕಾರ್ಯ್ಯಾಣಿ
ಕೃತ್ವಾ ತದಾಜ್ಞಯೈವಾಮುಚತ್ ತಾನ್ ನೃಪಾಂಶ್ಚ ।
ತೈಃ ಸಂಸ್ತುತಃ ಕೇಶವೋ
ಭೀಮಪಾರ್ತ್ಥಯುಕ್ತೋ ಯಯೌ ಭಕ್ತಿನಮ್ರೈರ್ಯ್ಯಥಾವತ್ ॥೨೧.೧೭೩॥
ಕೃಷ್ಣ-ಭೀಮಾರ್ಜುನರ ಅಣತಿಯಿಂದ ಪಿತೃಕಾರ್ಯವನ್ನು ಮಾಡಿ,
ಪರಮಾತ್ಮನ ಆಜ್ಞೆಯಂತೆ ಜರಾಸಂಧ ಬಂಧಿಸಿದ್ದ ರಾಜರೆಲ್ಲರನ್ನು ಸಹದೇವ ಬಿಡುಗಡೆಗೊಳಿಸಿದನು. ಆ
ಎಲ್ಲಾ ರಾಜರುಗಳಿಂದ ಕೊಂಡಾಡಲ್ಪಟ್ಟ ಶ್ರೀಕೃಷ್ಣನು
ಭೀಮಾರ್ಜುನರಿಂದ ಕೂಡಿಕೊಂಡು ಇಂದ್ರಪ್ರಸ್ಥಕ್ಕೆ ಹಿಂತಿರುಗಿದನು.
ಸಮ್ಭಾವಿತಾಸ್ತೇ
ಸಹದೇವೇನ ಸಮ್ಯಕ್ ಪ್ರಶಸ್ಯ ಕೃಷ್ಣಂ ಭೀಮಸೇನಂ ಚ ಸರ್ವೇ ।
ಯಯುರ್ಗ್ಗೃಹಾನ್
ಸ್ವಾನಪತತ್ ಕೇಶವದ್ವಿಡ್ ಜರಾಸುತೋsನ್ಧೇ ತಮಸಿ ಕ್ರಮೇಣ ॥೨೧.೧೭೪॥
ಜರಾಸಂಧನಿಂದ ಬಂಧನಕ್ಕೆ ಒಳಗಾಗಿದ್ದ ರಾಜರೆಲ್ಲರೂ ಸಹದೇವನಿಂದ
ಚೆನ್ನಾಗಿ ಗೌರವಿಸಲ್ಪಟ್ಟವರಾಗಿ, ಕೃಷ್ಣನನ್ನೂ, ಭೀಮಸೇನನನ್ನೂ ಚೆನ್ನಾಗಿ ಹೊಗಳಿ (ಪೂಜೆಯನ್ನು
ಅರ್ಪಿಸಿ), ತಮ್ಮ ದೇಶಕ್ಕೆ ತೆರಳಿದರು. ನಾರಾಯಣನನ್ನು
ದ್ವೇಷಮಾಡುವ ಜರಾಸಂಧನು ಕ್ರಮವಾಗಿ ಅನ್ಧಂತಮಸ್ಸಿನಲ್ಲಿ ಬಿದ್ದನು.
No comments:
Post a Comment