ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, March 11, 2022

Mahabharata Tatparya Nirnaya Kannada 21: 326-332

 

ಸೂತೋ ಗತ್ವಾ ತದನ್ತಂ ಸಮಕಥಯದಿಮಾಂ ದ್ಯೂತಮದ್ಧ್ಯೇ ಜಿತಾSಸಿ

 ಕ್ಷಿಪ್ರಂ ಚಾsಯಾಹಿ ರಾಜ್ಞಾಂ ಸಮಿತಿಮುರುತರಾಮಿತ್ಯಥೋ ಸಾsಪ್ಯವಾದೀತ್ ।

ನಾಹಂ ಯಾಸ್ಯೇ ಗುರೂಣಾಂ ಸಮಿತಿಮಿತಿ ಯಯೌ ಸೋsಪ್ಯಮುಂ ಭೀಮಭೀತಂ

ಜ್ಞಾತ್ವಾ ದುಃಶಾಸನಂ ಸೋsಪ್ಯದಿಶದಥ ನೃಪೋ ಧಾರ್ತ್ತರಾಷ್ಟ್ರೋSನುಜಂ ಸ್ವಮ್ ॥೨೧.೩೨೬॥

 

ದುರ್ಯೋಧನನ ಸಾರಥಿಯು ದ್ರೌಪದಿಯ ಸಮೀಪಕ್ಕೆ ತೆರಳಿ ಅವಳನ್ನು ಕುರಿತು ಹೀಗೆ ಹೇಳುತ್ತಾನೆ: ‘ ನೀನು  ಜೂಜಿನಲ್ಲಿ ಪಣವಾಗಿ ಸೋತಿದ್ದೀಯೇ, ಹೀಗಾಗಿ ತಕ್ಷಣ ರಾಜರ ಸಮೂಹದ ಮುಂದೆ ಬರತಕ್ಕದ್ದು  ಎಂದು. ತದನಂತರ ದ್ರೌಪದಿ ‘ನಾನು ಹಿರಿಯರ ಸಮೂಹದ ಸಭೆಯ ಎದುರು ಬರಲಾರೆ’ ಎಂದಾಗ, ಅವನು ದುರ್ಯೋಧನನ ಬಳಿಗೆ ಹಿಂತಿರುಗುತ್ತಾನೆ. ದುರ್ಯೋಧನನು ತನ್ನ ಸಾರಥಿ  ಭೀಮಸೇನನಿಂದಾಗಿ  ಭಯಗ್ರಸ್ಥನಾಗಿದ್ದಾನೆ ಎಂದು ತಿಳಿದು, ತನ್ನ ತಮ್ಮನಾದ ದುಶ್ಯಾಸನನಿಗೆ ಆಜ್ಞೆ ಮಾಡಿದನು.

 

ಸ ಪಾಪಪೂರುಷೋತ್ತಮಃ ಪ್ರಗೃಹ್ಯ ಕೇಶಪಕ್ಷಕೇ ।

ಪುರಃ ಸ್ವಮಾತುರಾನಯತ್ ಸಭಾಮಯುಗ್ಮವಾಸಸೀಮ್             ॥೨೧.೩೨೭॥

 

ಪಾಪಪುರುಷರಲ್ಲೇ ಅಗ್ರಗಣ್ಯನಾದ ದುಶ್ಯಾಸನನು ದ್ರೌಪದಿಯನ್ನು ಅವಳ ಮುಡಿಯಲ್ಲಿ ಹಿಡಿದು, ತನ್ನ ತಾಯಿಯ ಎದುರೇ, ಒಂದೇ ಬಟ್ಟೆಯನ್ನು ತೊಟ್ಟ ಅವಳನ್ನು ಸಭೆಗೆ ಕರೆತಂದ.

 

ಸಮಾಹೃತಾ ರಜಸ್ವಲಾ ಜಗಾದ ಭೀಷ್ಮಪೂರ್ವಕಾನ್ ।

ಅಧರ್ಮ್ಮ ಏಷ ವಾರ್ಯ್ಯತೇ ನ ಧರ್ಮ್ಮಿಬಿರ್ಭವದ್ವಿದೈಃ  ॥೨೧.೩೨೮॥

 

ರಜಸ್ವಲೆ(ಋತುಮತಿ)ಯಾಗಿರುವ ಅವಳು ಕರೆತರಲ್ಪಟ್ಟವಳಾಗಿ, ಭೀಷ್ಮ ಮೊದಲಾದವರಿಗೆ ‘ನಿಮ್ಮಂತಹ ಧಾರ್ಮಿಕರಿಂದ ಈ ಅಧರ್ಮವು ತಡೆಯಲ್ಪಡುವುದಿಲ್ಲವೇ’ ಎಂದು ಪ್ರಶ್ನಿಸಿದಳು.  

 

ಕಥಂ ಛಲಾತ್ಮಕೇ ದ್ಯೂತೇ ಜಿತೇ ಧರ್ಮ್ಮಜಯೋ ಭವೇತ್ ।

ನಹಿ ದ್ಯೂತಂ ಧರ್ಮ್ಯಮಾಹುರ್ವಿಶೇಷೇಣ ತು ಭೂಭುಜಾಮ್ ॥೨೧.೩೨೯॥

 

‘ಮೋಸವನ್ನೇ ಒಳಗೊಂಡ ಜೂಜಿನಲ್ಲಿ ಸೋಲುತ್ತಿರಲು ಧರ್ಮದಿಂದ ಜಯ ಹೇಗಾದೀತು? ಜೂಜು ಧರ್ಮ ಎಂದು ಯಾರೂ ಹೇಳುವುದಿಲ್ಲ. ವಿಶೇಷವಾಗಿ ರಾಜರಿಗೆ ಜೂಜು ಧರ್ಮವಲ್ಲ.   

 

ಯೇ ಧರ್ಮ್ಮಂ ನ ವದನ್ತೀಹ ನ ತೇ ವೃದ್ಧಾ ಇತೀರಿತಾಃ ।

ಅವೃದ್ಧಮಣ್ಡಿತಾಂ ನೈವ ಸಭೇತ್ಯಾಹುರ್ಮ್ಮನೀಷಿಣಃ     ॥೨೧.೩೩೦॥

 

ಯಾರು ಧರ್ಮವನ್ನು ಹೇಳುವುದಿಲ್ಲವೋ ಅವರು ವೃದ್ದರೇ ಅಲ್ಲ.  (ಯಾರು ವಯಸ್ಸಿನಿಂದ ಹಿರಿಯರಾಗಿದ್ದು ಧರ್ಮವನ್ನು ಹೇಳುವುದಿಲ್ಲವೋ ಅವರು ಹಿರಿಯರಲ್ಲ ಎಂದೇ ಅರ್ಥ). ಜ್ಞಾನವೃದ್ದರು ಇಲ್ಲದ ಸಭೆಯನ್ನು ಸಭೆ ಎಂದೇ ಕರೆಯುವುದಿಲ್ಲ.

 

ಕಥಂ ದ್ಯೂತೇ ಜಿತಾ ಚಾಹಮಜಿತೇ ಸ್ವಪತೌ ಸ್ಥಿತೇ ।

ಸಮಾನಧರ್ಮ್ಮಿಣೀಮಾಹುರ್ಭಾರ್ಯ್ಯಾಂ  ಯಸ್ಮಾದ್ ವಿಪಶ್ಚಿತಃ ॥೨೧.೩೩೧॥

 

ನನ್ನ ಗಂಡ ಪರಾಜಿತನಾಗದಿರಲು ನಾನು ಹೇಗೆ ಪರಾಜಿತಳು? [ಧರ್ಮದಿಂದ ಜಯವೇ ಹೊರತು ಅಧರ್ಮದಿಂದ ನಡೆದ ಜೂಜಿನಲ್ಲಿ ಪಡೆದ ಜಯ ಜಯವಲ್ಲ. ಹಾಗಾಗಿ ಇಲ್ಲಿ ಧರ್ಮರಾಜ ಅಪರಾಜಿತ. ಗಂಡ ಅಪರಾಜಿತನಾಗಿರುವಾಗ ಹೆಂಡತಿ ಹೇಗೆ ಪರಾಜಿತಳು? ]  ಜ್ಞಾನಿಗಳು ಹೆಂಡಿರನ್ನು ಗಂಡನಿಗೆ ಸಮಾನ ಧರ್ಮ ಉಳ್ಳವಳು ಎಂದು ಹೇಳುತ್ತಾರೆ. 

 

ಸಹೈವ ಕರ್ಮ್ಮ ಕರ್ತ್ತವ್ಯಂ ಪತೌ ದಾಸೇ ಹಿ ಭಾರ್ಯ್ಯಯಾ ।

ದಾಸೀತ್ವಂ ನ ಪೃಥಙ್ ಮೇ ಸ್ಯಾಜ್ಜಿತೇSಪಿ ಹಿ ಪತೌ ತತಃ ॥೨೧.೩೩೨॥

 

ಗಂಡ ಒಂದು ವೇಳೆ ದಾಸನಾದರೂ ಕೂಡಾ ಹೆಂಡತಿಯೊಟ್ಟಿಗೆ ಕೂಡಿಕೊಂಡು ಕರ್ಮ ಮಾಡಬೇಕು. ಹೀಗಾಗಿ ನನಗೆ ಪ್ರತ್ಯೇಕವಾದ ದಾಸೀತ್ವವಿಲ್ಲ.’ (ಗಂಡ ಸೋತಿದ್ದರೂ ಕೂಡಾ  ಜೊತೆಯಾಗಿ ದಾಸೀತ್ವವೇ ವಿನಃ ಪ್ರತ್ಯೇಕ ಇಲ್ಲ).

Sunday, March 6, 2022

Mahabharata Tatparya Nirnaya Kannada 21: 321-325

 

  ವೈಚಿತ್ರವೀರ್ಯ್ಯತನಯೇನ ತು ಪಾಣ್ಡುಪುತ್ರಾಃ ಸಮ್ಭಾವಿತಾಸ್ತಮುಪ ಚ ನ್ಯವಿಶನ್ ನಿಶಾಂ ತಾಮ್ ।

  ಪ್ರಾತಶ್ಚ ಭೀಷ್ಮಮುಖರಾಃ ಸಕಲಾಶ್ಚ ಭೂಪಾ ಆಸೇದುರಾಶು ಚ ಸಭಾಂ ಸಹ ಪಾಣ್ಡುಪುತ್ರೈಃ ॥೨೧.೩೨೧॥

 

ಪಾಂಡುವಿನ ಮಕ್ಕಳು ಧೃತರಾಷ್ಟ್ರನಿಂದ ಗೌರವಿಸಲ್ಪಟ್ಟವರಾಗಿ, ಆ ರಾತ್ರಿಯನ್ನು ಅವನ ಬಳಿಯೇ ಕಳೆದರು. ಬೆಳಿಗ್ಗೆ ಭೀಷ್ಮರೇ ಪ್ರಧಾನರಾಗಿಉಳ್ಳ ಎಲ್ಲಾ ರಾಜರೂ ಕೂಡಾ, ಪಾಂಡವರ ಜೊತೆಗೂಡಿ  ಸಭೆಯನ್ನು ಹೊಂದಿದರು.

 

  ವೈಚಿತ್ರವೀರ್ಯ್ಯನೃಪತಿರ್ವಿದುರಾನ್ವಿತೋsಸ್ಯ ಗಾನ್ಧಾರರಾಜಸಹಿತಾಸ್ತನಯಾಃ ಸಕರ್ಣ್ಣಾಃ ।

  ಪ್ರಾಪ್ತಾಃ ಸಭಾತಳಮಥಾSಹ್ವಯದತ್ರ ಧರ್ಮ್ಮರಾಜಂ ಸುತಃ ಸುಬಲಕಸ್ಯ ಸ ದೇವನಾಯ ॥೨೧.೩೨೨॥

 

ವಿದುರನಿಂದ ಒಡಗೂಡಿರುವ ಧೃತರಾಷ್ಟ್ರನು, ಶಕುನಿ ಹಾಗೂ ಕರ್ಣನಿಂದ ಕೂಡಿಕೊಂಡಿರುವ ಧೃತರಾಷ್ಟ್ರನ ಮಕ್ಕಳು ಸಭೆಯನ್ನು ಹೊಂದಿದರು. ತದನಂತರ (ಸಭೆಯ ಔಪಚಾರಿಕ ವಿಧಿಗಳಾದ ಮೇಲೆ), ಸುಬಲರಾಜನ ಮಗನಾಗಿರುವ ಶಕುನಿಯು  ಜೂಜಿಗಾಗಿ ಧರ್ಮರಾಜನನ್ನು ಆಹ್ವಾನಮಾಡಿದನು.    

 

  ಸರ್ವಾಂಶ್ಚ ತತ್ರ ಕಲಿರಾವಿಶದೇವ ಭೀಮಪೂರ್ವಾನ್ ವಿನೈವ ಚತುರಃ ಸಪೃಥಾಂ ಚ ಕೃಷ್ಣಾಮ್ ।

  ಕ್ಷತ್ತಾರಮೇವ ಚ ತತೋ ನಹಿ ಭೀಷ್ಮಮುಖ್ಯೈಸ್ತೇ ವಾರಿತಾಃ ಕುಲವಿನಾಶನಕರ್ಮ್ಮವೃತ್ತಾಃ ॥೨೧.೩೨೩॥

 

ಆ ಸಭೆಯಲ್ಲಿ  ಭೀಮಸೇನನೇ ಮೊದಲಾದ ನಾಲ್ವರನ್ನೂ, ಕುಂತಿಯಿಂದ ಕೂಡಿದ ದ್ರೌಪದಿಯನ್ನೂ ಮತ್ತು  ವಿದುರನನ್ನು ಬಿಟ್ಟು(ಈ ಏಳು ಜನರನ್ನು ಬಿಟ್ಟು), ಇತರ ಎಲ್ಲರನ್ನೂ ಕಲಿಯೇ ಪ್ರವೇಶ ಮಾಡಿದ್ದ. ಆ ಕಾರಣದಿಂದ ಕುಲವನ್ನೇ ನಾಶ ಮಾಡುವ ಕರ್ಮವಾಗಿರುವ ಜೂಜಿನಲ್ಲಿ ತೊಡಗಿದಾಗ ಇತರ ಯಾರಿಂದಲೂ ತಡೆಯಲ್ಪಡಲಿಲ್ಲ.

 

ಭೀಮಾದಿಭಿಃ ಸ ವಿದುರೇಣ ಚ ವಾರ್ಯ್ಯಮಾಣೋ ದ್ಯೂತೇ ನಿಧಾಯ ಪಣಮಪ್ಯಖಿಲಂ ಸ್ವವಿತ್ತಮ್ ।

ಗಾನ್ಧಾರಕೇಣ ವಿದಿತಾಕ್ಷಹೃದಾ ಜಿತೋ ದ್ರಾಕ್ ಪಾಣ್ಡೋಃ ಸುತೋsಥ ನಕುಲಂ ನ್ಯದಧಾತ್ ಪಣಾಯ ॥೨೧.೩೨೪॥

 

ಭೀಮಸೇನ ಮೊದಲಾದವರಿಂದ ಹಾಗೂ ವಿದುರನಿಂದ ತಡೆಯಲ್ಪಟ್ಟರೂ ಕೂಡಾ, ಧರ್ಮರಾಜ ಜೂಜಿನಲ್ಲಿ ತನ್ನೆಲ್ಲಾ ಆಸ್ತಿಯನ್ನು ಪಣವಾಗಿಟ್ಟು, ಶೀಘ್ರದಲ್ಲಿ ನಿಪುಣ ಜೂಜುಕೋರನಾದ ಶಕುನಿಯಿಂದ ಗೆಲ್ಲಲ್ಪಟ್ಟವನಾಗಿ, ಆನಂತರ ನಕುಲನನ್ನು ಪಣಕ್ಕೆಂದು ಇಟ್ಟನು.

 

ತಸ್ಮಿನ್ ಜಿತೇSಥ ಸಹದೇವಮಥಾರ್ಜ್ಜುನಂ ಚ ಭೀಮಂ  ಚ ಸೋಮಕಸುತಾಂ ಸ್ವಮಪಿ ಕ್ರಮೇಣ ।

ರಾಜಾ ನಿಧಾಯ ವಿಜಿತೋSಥ ಸುಯೋಧನಃ ಸ್ವಂ ಸೂತಂ ದಿದೇಶ ಪೃಷತಾತ್ಮಜಪುತ್ರಿಕಾಯಾಃ ॥೨೧.೩೨೫॥

 

ನಕುಲನನ್ನು ಪಣಕ್ಕಿಟ್ಟು ಸೋಲಲು, ಸಹದೇವನನ್ನೂ, ತದನಂತರ ಅರ್ಜುನನನ್ನೂ, ತದನಂತರ ಭೀಮನನ್ನೂ, ನಂತರ ದ್ರೌಪದಿಯನ್ನೂ, ಹೀಗೆ ಕ್ರಮವಾಗಿ ತನ್ನನ್ನೂ ಪಣಕ್ಕೆ ಒಡ್ಡಿದ ಧರ್ಮರಾಜ,  ಪರಾಜಿತನಾದನು. ಧರ್ಮರಾಜ ಸೋತಮೇಲೆ ದುರ್ಯೋಧನನು ಪೃಷದ ಎನ್ನುವ ರಾಜನ ಮಗನಾದ ದ್ರುಪದರಾಜನ ಮಗಳಾದ ದ್ರೌಪದೀದೇವಿಯನ್ನು ಸಭೆಗೆ  ಕರೆತರಲು ತನ್ನ ಸಾರಥಿಯನ್ನು ಕಳುಹಿಸಿದ.

Mahabharata Tatparya Nirnaya Kannada 21: 315-320

 

ವಿದುರಸ್ತು ತತೋ ಗತ್ವಾ ಧರ್ಮ್ಮರಾಜಮಥಾSಹ್ವಯತ್ ।

ಭ್ರಾತೃಭಿರ್ವಾರ್ಯ್ಯಮಾಣೋsಪಿ ಕೃಷ್ಣಯಾ ಚ ಸ ಧರ್ಮ್ಮರಾಟ್ ।

ಸಾರ್ದ್ಧಂ ಮಾತ್ರಾ ಭ್ರಾತೃಭಿಶ್ಚ ಕೃಷ್ಣಯಾ ಚ ಯಯೌ ದ್ರುತಮ್ ॥೨೧.೩೧೫॥

 

ಈರೀತಿ ಧೂತನಾಗಿ ಬಂದ ವಿದುರ ಧರ್ಮರಾಜನನ್ನು ಕುರಿತು ಆಹ್ವಾನ ಮಾಡಿದನು. ತದನಂತರ ಸಹೋದರರಿಂದಲೂ, ತಾಯಿಯಿಂದಲೂ ತಡೆಯಲ್ಪಟ್ಟರೂ ಕೂಡಾ ಧರ್ಮರಾಜ, ತಾಯಿ, ತಮ್ಮಂದಿರು ಮತ್ತು ದ್ರೌಪದಿಯೊಂದಿಗೆ ದ್ಯೂತಕ್ಕಾಗಿ ಹಸ್ತಿನಪುರಕ್ಕೆ ಹೊರಟನು.

 

ಜ್ಯೇಷ್ಠಾಜ್ಞಯೈವ ವಿದುರ ಆಹ್ವಯನ್ನಪಿ ಧರ್ಮ್ಮಜಮ್ ।

ನಾSಗನ್ತವ್ಯಮಿತಿ ಪ್ರಾಹ ದೋಷಾನುಕ್ತ್ವಾSಕ್ಷಜಾನ್ ಬಹೂನ್ ॥೨೧.೩೧೬॥

 

ವಿದುರನು ಧೃತರಾಷ್ಟ್ರನ ಆಜ್ಞೆಯಂತೇ ಧರ್ಮರಾಜನನ್ನು ಕುರಿತು ಆಹ್ವಾನ ಮಾಡಿದ್ದರೂ ಕೂಡಾ, ದ್ಯೂತದಿಂದಾಗುವ ಅನರ್ಥಗಳನ್ನು ಧರ್ಮರಾಜನಿಗೆ ವಿವರಿಸಿ, ಬರಬೇಡ ಎಂದು ಹೇಳಿದ.

[ಮೊದಲು ವಿದುರ ಧರ್ಮರಾಜನಲ್ಲಿಗೆ ಬಂದು- ‘ಅಣ್ಣ ನಿನ್ನನ್ನು ಜೂಜಿಗಾಗಿ ಕರೆದಿದ್ದಾನೆ, ಎಲ್ಲರೂ ಸೇರುವುದಕ್ಕಾಗಿ ಈ ಆಮಂತ್ರಣ. ಇಲ್ಲಿ ಯಾವುದೇ ದುರುದ್ದೇಶವಿಲ್ಲ’ ಎಂದು ರಾಜಧೂತನಾಗಿ ಧೃತರಾಷ್ಟ್ರನ  ಮಾತನ್ನು ಹೇಳಿದ.  ನಂತರ ಧರ್ಮರಾಜನ ಹಿತೈಷಿಯಾಗಿ, ಎಲ್ಲಾ ರೀತಿಯ ಜೂಜೂ ಕೂಡಾ  ಕೆಟ್ಟದ್ದೇ.  ಹಾಗಾಗಿ ‘ನೀನು ಬರಬಾರದು’ ಎಂದು ತನ್ನ ವೈಯಕ್ತಿಕ  ಅಭಿಪ್ರಾಯವನ್ನೂ ಹೇಳಿದ].

 

ಇತೀಹ ದೋಷಸಞ್ಚಯಸ್ತಥಾ ಚ ತೇ ಪಿತುರ್ವಚಃ ।

ಸಮೀಕ್ಷ್ಯ ತದ್ ದ್ವಯಂ ಸ್ವಯಂ ಕುರುಷ್ವ ಕಾರ್ಯ್ಯಮಾತ್ಮನಃ ॥೨೧.೩೧೭॥

 

ಹಿಂದೆ ಹೇಳಿದಂತೆ  ಜೂಜು ದೋಷಗಳ ಗಣಿ ಇದ್ದಂತೆ. ಆದರೂ ಇದು ನಿನ್ನ ದೊಡ್ಡಪ್ಪನ ಮಾತು. ಇವೆರಡನ್ನೂ ಪರಾಮರ್ಶಿಸಿ ಯೋಗ್ಯವಾದ ಕರ್ಮವನ್ನು ಮಾಡು ಎನ್ನುತ್ತಾನೆ ವಿದುರ.

[ಧೃತರಾಷ್ಟ್ರನ ಆಹ್ವಾನ ಹಾಗೂ ಜೂಜಿನ ಹಿಂದಿರುವ ದೋಷ ಎರಡನ್ನೂ ವಿದುರ ತಟಸ್ಥವಾಗಿ ಧರ್ಮರಾಜನ ಮುಂದೆ ಹೇಳಿ, ‘ನೀನು ಯಾವುದನ್ನು ನಿಶ್ಚಯಿಸುತ್ತೀಯೋ ಅದನ್ನು ಮಾಡು’ ಎನ್ನುತ್ತಾನೆ].

 

ಇತೀರಿತೋsಪಿ ಪಾಣ್ಡವೋ ಯಯೌ ಕಲಿಪ್ರವೇಶಿತಃ ।

ವಿಚಿತ್ರವೀರ್ಯ್ಯಜಂ ಚ ತಂ ಸಮಾಸದತ್ ಸಸೈನಿಕಃ ॥೨೧.೩೧೮॥

 

ಈರೀತಿಯಾಗಿ ಎಲ್ಲವೂ ಹೇಳಲ್ಪಟ್ಟರೂ ಕೂಡಾ ಕಲಿ ಪ್ರವೇಶಕ್ಕೊಳಗಾಗಿದ್ದ ಧರ್ಮರಾಜನು, ಸೈನಿಕರಿಂದ ಕೂಡಿಕೊಂಡು ವಿಚಿತ್ರವೀರ್ಯ ಪುತ್ರನಾದ ದೊಡ್ಡಪ್ಪನ ಬಳಿಗೆ ತೆರಳಿದನು. 

 

[ಧರ್ಮರಾಜನು ಯಾರ ಮಾತನ್ನೂ ಕೇಳದೇ, ಯಾರೊಂದಿಗೂ ಪರಾಮರ್ಶಿಸದೇ ಹೊರಡಲು ಕಾರಣವಾದ ಹಿನ್ನೆಲೆಯನ್ನು ಹೇಳುತ್ತಾರೆ:]

 

ಕಲ್ಯಾವೇಶಾನ್ನೃಪತಿಃ ಪ್ರತಿಜಜ್ಞೇ ಪೂರ್ವಮೇವ ಧರ್ಮ್ಮಾತ್ಮಾ ।

ಆಹೂತೋ ದ್ಯೂತರಣಾನ್ನಿವರ್ತ್ತೇಯಂ ನೈವ ವಾರಿತೋSಪೀತಿ ॥೨೧.೩೧೯॥

 

ಧರ್ಮಾತ್ಮನಾದ ಯುಧಿಷ್ಠಿರನು  ಕಲಿಯ ಆವೇಶದಿಂದ ಹಿಂದೆ (ವಿದ್ಯಾಭ್ಯಾಸ ಮುಗಿದ ಒಡನೆಯೇ) ‘ಆಹ್ವಾನ ಮಾಡಿದರೆ ದ್ಯೂತವೆಂಬ ಯುದ್ಧದಿಂದ ಹಿಂದಿರುಗಲಾರೆ, ತಡೆದರೂ ಕೂಡಾ’ ಎಂದು ಪ್ರತಿಜ್ಞೆ ಮಾಡಿದ್ದನು.

 

ತೇನಾSಯಾತ್ ಸ್ವಸುಹೃದ್ಭಿರ್ನ್ನಿವಾರ್ಯ್ಯಮಾಣೋSಪಿ ನಾಗಪುರಮಾಶು ।

ನಹಿ ಧರ್ಮ್ಮೋ ದ್ಯೂತಕೃತೋ ವಿಶೇಷತಃ ಕ್ಷತ್ರಿಯಸ್ಯ ಲೋಕಗುರೋಃ ॥೨೧.೩೨೦॥

 

ಆ ಕಾರಣದಿಂದ ಭೀಮಸೇನ ಮೊದಲಾದವರಿಂದ ತಡೆಯಲ್ಪಟ್ಟರೂ ಕೂಡಾ, ಕೇಳಿದ ಒಡನೆಯೇ ಶೀಘ್ರದಲ್ಲಿ ಧರ್ಮರಾಜ ಹಸ್ತಿನಪುರಕ್ಕೆ ಬಂದ. ವಿಶೇಷವಾಗಿ ಲೋಕವನ್ನಾಳುವ, ಲೋಕಕ್ಕೆ ಮಾರ್ಗದರ್ಶನ ಮಾಡುವ ಕ್ಷತ್ರಿಯನಿಗೆ ದ್ಯೂತ ಸಲ್ಲದು.

[ಧರ್ಮರಾಜ ನೇರವಾಗಿ ಆಹ್ವಾನವನ್ನು ತಿರಸ್ಕರಿಸಬಹುದಿತ್ತು. ಆದರೆ ಕಲಿ ಪ್ರವೇಶದಿಂದಾಗಿ ಆ ರೀತಿ ಮಾಡಲಿಲ್ಲ].