ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, March 11, 2022

Mahabharata Tatparya Nirnaya Kannada 21: 326-332

 

ಸೂತೋ ಗತ್ವಾ ತದನ್ತಂ ಸಮಕಥಯದಿಮಾಂ ದ್ಯೂತಮದ್ಧ್ಯೇ ಜಿತಾSಸಿ

 ಕ್ಷಿಪ್ರಂ ಚಾsಯಾಹಿ ರಾಜ್ಞಾಂ ಸಮಿತಿಮುರುತರಾಮಿತ್ಯಥೋ ಸಾsಪ್ಯವಾದೀತ್ ।

ನಾಹಂ ಯಾಸ್ಯೇ ಗುರೂಣಾಂ ಸಮಿತಿಮಿತಿ ಯಯೌ ಸೋsಪ್ಯಮುಂ ಭೀಮಭೀತಂ

ಜ್ಞಾತ್ವಾ ದುಃಶಾಸನಂ ಸೋsಪ್ಯದಿಶದಥ ನೃಪೋ ಧಾರ್ತ್ತರಾಷ್ಟ್ರೋSನುಜಂ ಸ್ವಮ್ ॥೨೧.೩೨೬॥

 

ದುರ್ಯೋಧನನ ಸಾರಥಿಯು ದ್ರೌಪದಿಯ ಸಮೀಪಕ್ಕೆ ತೆರಳಿ ಅವಳನ್ನು ಕುರಿತು ಹೀಗೆ ಹೇಳುತ್ತಾನೆ: ‘ ನೀನು  ಜೂಜಿನಲ್ಲಿ ಪಣವಾಗಿ ಸೋತಿದ್ದೀಯೇ, ಹೀಗಾಗಿ ತಕ್ಷಣ ರಾಜರ ಸಮೂಹದ ಮುಂದೆ ಬರತಕ್ಕದ್ದು  ಎಂದು. ತದನಂತರ ದ್ರೌಪದಿ ‘ನಾನು ಹಿರಿಯರ ಸಮೂಹದ ಸಭೆಯ ಎದುರು ಬರಲಾರೆ’ ಎಂದಾಗ, ಅವನು ದುರ್ಯೋಧನನ ಬಳಿಗೆ ಹಿಂತಿರುಗುತ್ತಾನೆ. ದುರ್ಯೋಧನನು ತನ್ನ ಸಾರಥಿ  ಭೀಮಸೇನನಿಂದಾಗಿ  ಭಯಗ್ರಸ್ಥನಾಗಿದ್ದಾನೆ ಎಂದು ತಿಳಿದು, ತನ್ನ ತಮ್ಮನಾದ ದುಶ್ಯಾಸನನಿಗೆ ಆಜ್ಞೆ ಮಾಡಿದನು.

 

ಸ ಪಾಪಪೂರುಷೋತ್ತಮಃ ಪ್ರಗೃಹ್ಯ ಕೇಶಪಕ್ಷಕೇ ।

ಪುರಃ ಸ್ವಮಾತುರಾನಯತ್ ಸಭಾಮಯುಗ್ಮವಾಸಸೀಮ್             ॥೨೧.೩೨೭॥

 

ಪಾಪಪುರುಷರಲ್ಲೇ ಅಗ್ರಗಣ್ಯನಾದ ದುಶ್ಯಾಸನನು ದ್ರೌಪದಿಯನ್ನು ಅವಳ ಮುಡಿಯಲ್ಲಿ ಹಿಡಿದು, ತನ್ನ ತಾಯಿಯ ಎದುರೇ, ಒಂದೇ ಬಟ್ಟೆಯನ್ನು ತೊಟ್ಟ ಅವಳನ್ನು ಸಭೆಗೆ ಕರೆತಂದ.

 

ಸಮಾಹೃತಾ ರಜಸ್ವಲಾ ಜಗಾದ ಭೀಷ್ಮಪೂರ್ವಕಾನ್ ।

ಅಧರ್ಮ್ಮ ಏಷ ವಾರ್ಯ್ಯತೇ ನ ಧರ್ಮ್ಮಿಬಿರ್ಭವದ್ವಿದೈಃ  ॥೨೧.೩೨೮॥

 

ರಜಸ್ವಲೆ(ಋತುಮತಿ)ಯಾಗಿರುವ ಅವಳು ಕರೆತರಲ್ಪಟ್ಟವಳಾಗಿ, ಭೀಷ್ಮ ಮೊದಲಾದವರಿಗೆ ‘ನಿಮ್ಮಂತಹ ಧಾರ್ಮಿಕರಿಂದ ಈ ಅಧರ್ಮವು ತಡೆಯಲ್ಪಡುವುದಿಲ್ಲವೇ’ ಎಂದು ಪ್ರಶ್ನಿಸಿದಳು.  

 

ಕಥಂ ಛಲಾತ್ಮಕೇ ದ್ಯೂತೇ ಜಿತೇ ಧರ್ಮ್ಮಜಯೋ ಭವೇತ್ ।

ನಹಿ ದ್ಯೂತಂ ಧರ್ಮ್ಯಮಾಹುರ್ವಿಶೇಷೇಣ ತು ಭೂಭುಜಾಮ್ ॥೨೧.೩೨೯॥

 

‘ಮೋಸವನ್ನೇ ಒಳಗೊಂಡ ಜೂಜಿನಲ್ಲಿ ಸೋಲುತ್ತಿರಲು ಧರ್ಮದಿಂದ ಜಯ ಹೇಗಾದೀತು? ಜೂಜು ಧರ್ಮ ಎಂದು ಯಾರೂ ಹೇಳುವುದಿಲ್ಲ. ವಿಶೇಷವಾಗಿ ರಾಜರಿಗೆ ಜೂಜು ಧರ್ಮವಲ್ಲ.   

 

ಯೇ ಧರ್ಮ್ಮಂ ನ ವದನ್ತೀಹ ನ ತೇ ವೃದ್ಧಾ ಇತೀರಿತಾಃ ।

ಅವೃದ್ಧಮಣ್ಡಿತಾಂ ನೈವ ಸಭೇತ್ಯಾಹುರ್ಮ್ಮನೀಷಿಣಃ     ॥೨೧.೩೩೦॥

 

ಯಾರು ಧರ್ಮವನ್ನು ಹೇಳುವುದಿಲ್ಲವೋ ಅವರು ವೃದ್ದರೇ ಅಲ್ಲ.  (ಯಾರು ವಯಸ್ಸಿನಿಂದ ಹಿರಿಯರಾಗಿದ್ದು ಧರ್ಮವನ್ನು ಹೇಳುವುದಿಲ್ಲವೋ ಅವರು ಹಿರಿಯರಲ್ಲ ಎಂದೇ ಅರ್ಥ). ಜ್ಞಾನವೃದ್ದರು ಇಲ್ಲದ ಸಭೆಯನ್ನು ಸಭೆ ಎಂದೇ ಕರೆಯುವುದಿಲ್ಲ.

 

ಕಥಂ ದ್ಯೂತೇ ಜಿತಾ ಚಾಹಮಜಿತೇ ಸ್ವಪತೌ ಸ್ಥಿತೇ ।

ಸಮಾನಧರ್ಮ್ಮಿಣೀಮಾಹುರ್ಭಾರ್ಯ್ಯಾಂ  ಯಸ್ಮಾದ್ ವಿಪಶ್ಚಿತಃ ॥೨೧.೩೩೧॥

 

ನನ್ನ ಗಂಡ ಪರಾಜಿತನಾಗದಿರಲು ನಾನು ಹೇಗೆ ಪರಾಜಿತಳು? [ಧರ್ಮದಿಂದ ಜಯವೇ ಹೊರತು ಅಧರ್ಮದಿಂದ ನಡೆದ ಜೂಜಿನಲ್ಲಿ ಪಡೆದ ಜಯ ಜಯವಲ್ಲ. ಹಾಗಾಗಿ ಇಲ್ಲಿ ಧರ್ಮರಾಜ ಅಪರಾಜಿತ. ಗಂಡ ಅಪರಾಜಿತನಾಗಿರುವಾಗ ಹೆಂಡತಿ ಹೇಗೆ ಪರಾಜಿತಳು? ]  ಜ್ಞಾನಿಗಳು ಹೆಂಡಿರನ್ನು ಗಂಡನಿಗೆ ಸಮಾನ ಧರ್ಮ ಉಳ್ಳವಳು ಎಂದು ಹೇಳುತ್ತಾರೆ. 

 

ಸಹೈವ ಕರ್ಮ್ಮ ಕರ್ತ್ತವ್ಯಂ ಪತೌ ದಾಸೇ ಹಿ ಭಾರ್ಯ್ಯಯಾ ।

ದಾಸೀತ್ವಂ ನ ಪೃಥಙ್ ಮೇ ಸ್ಯಾಜ್ಜಿತೇSಪಿ ಹಿ ಪತೌ ತತಃ ॥೨೧.೩೩೨॥

 

ಗಂಡ ಒಂದು ವೇಳೆ ದಾಸನಾದರೂ ಕೂಡಾ ಹೆಂಡತಿಯೊಟ್ಟಿಗೆ ಕೂಡಿಕೊಂಡು ಕರ್ಮ ಮಾಡಬೇಕು. ಹೀಗಾಗಿ ನನಗೆ ಪ್ರತ್ಯೇಕವಾದ ದಾಸೀತ್ವವಿಲ್ಲ.’ (ಗಂಡ ಸೋತಿದ್ದರೂ ಕೂಡಾ  ಜೊತೆಯಾಗಿ ದಾಸೀತ್ವವೇ ವಿನಃ ಪ್ರತ್ಯೇಕ ಇಲ್ಲ).

No comments:

Post a Comment