ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 6, 2022

Mahabharata Tatparya Nirnaya Kannada 21: 321-325

 

  ವೈಚಿತ್ರವೀರ್ಯ್ಯತನಯೇನ ತು ಪಾಣ್ಡುಪುತ್ರಾಃ ಸಮ್ಭಾವಿತಾಸ್ತಮುಪ ಚ ನ್ಯವಿಶನ್ ನಿಶಾಂ ತಾಮ್ ।

  ಪ್ರಾತಶ್ಚ ಭೀಷ್ಮಮುಖರಾಃ ಸಕಲಾಶ್ಚ ಭೂಪಾ ಆಸೇದುರಾಶು ಚ ಸಭಾಂ ಸಹ ಪಾಣ್ಡುಪುತ್ರೈಃ ॥೨೧.೩೨೧॥

 

ಪಾಂಡುವಿನ ಮಕ್ಕಳು ಧೃತರಾಷ್ಟ್ರನಿಂದ ಗೌರವಿಸಲ್ಪಟ್ಟವರಾಗಿ, ಆ ರಾತ್ರಿಯನ್ನು ಅವನ ಬಳಿಯೇ ಕಳೆದರು. ಬೆಳಿಗ್ಗೆ ಭೀಷ್ಮರೇ ಪ್ರಧಾನರಾಗಿಉಳ್ಳ ಎಲ್ಲಾ ರಾಜರೂ ಕೂಡಾ, ಪಾಂಡವರ ಜೊತೆಗೂಡಿ  ಸಭೆಯನ್ನು ಹೊಂದಿದರು.

 

  ವೈಚಿತ್ರವೀರ್ಯ್ಯನೃಪತಿರ್ವಿದುರಾನ್ವಿತೋsಸ್ಯ ಗಾನ್ಧಾರರಾಜಸಹಿತಾಸ್ತನಯಾಃ ಸಕರ್ಣ್ಣಾಃ ।

  ಪ್ರಾಪ್ತಾಃ ಸಭಾತಳಮಥಾSಹ್ವಯದತ್ರ ಧರ್ಮ್ಮರಾಜಂ ಸುತಃ ಸುಬಲಕಸ್ಯ ಸ ದೇವನಾಯ ॥೨೧.೩೨೨॥

 

ವಿದುರನಿಂದ ಒಡಗೂಡಿರುವ ಧೃತರಾಷ್ಟ್ರನು, ಶಕುನಿ ಹಾಗೂ ಕರ್ಣನಿಂದ ಕೂಡಿಕೊಂಡಿರುವ ಧೃತರಾಷ್ಟ್ರನ ಮಕ್ಕಳು ಸಭೆಯನ್ನು ಹೊಂದಿದರು. ತದನಂತರ (ಸಭೆಯ ಔಪಚಾರಿಕ ವಿಧಿಗಳಾದ ಮೇಲೆ), ಸುಬಲರಾಜನ ಮಗನಾಗಿರುವ ಶಕುನಿಯು  ಜೂಜಿಗಾಗಿ ಧರ್ಮರಾಜನನ್ನು ಆಹ್ವಾನಮಾಡಿದನು.    

 

  ಸರ್ವಾಂಶ್ಚ ತತ್ರ ಕಲಿರಾವಿಶದೇವ ಭೀಮಪೂರ್ವಾನ್ ವಿನೈವ ಚತುರಃ ಸಪೃಥಾಂ ಚ ಕೃಷ್ಣಾಮ್ ।

  ಕ್ಷತ್ತಾರಮೇವ ಚ ತತೋ ನಹಿ ಭೀಷ್ಮಮುಖ್ಯೈಸ್ತೇ ವಾರಿತಾಃ ಕುಲವಿನಾಶನಕರ್ಮ್ಮವೃತ್ತಾಃ ॥೨೧.೩೨೩॥

 

ಆ ಸಭೆಯಲ್ಲಿ  ಭೀಮಸೇನನೇ ಮೊದಲಾದ ನಾಲ್ವರನ್ನೂ, ಕುಂತಿಯಿಂದ ಕೂಡಿದ ದ್ರೌಪದಿಯನ್ನೂ ಮತ್ತು  ವಿದುರನನ್ನು ಬಿಟ್ಟು(ಈ ಏಳು ಜನರನ್ನು ಬಿಟ್ಟು), ಇತರ ಎಲ್ಲರನ್ನೂ ಕಲಿಯೇ ಪ್ರವೇಶ ಮಾಡಿದ್ದ. ಆ ಕಾರಣದಿಂದ ಕುಲವನ್ನೇ ನಾಶ ಮಾಡುವ ಕರ್ಮವಾಗಿರುವ ಜೂಜಿನಲ್ಲಿ ತೊಡಗಿದಾಗ ಇತರ ಯಾರಿಂದಲೂ ತಡೆಯಲ್ಪಡಲಿಲ್ಲ.

 

ಭೀಮಾದಿಭಿಃ ಸ ವಿದುರೇಣ ಚ ವಾರ್ಯ್ಯಮಾಣೋ ದ್ಯೂತೇ ನಿಧಾಯ ಪಣಮಪ್ಯಖಿಲಂ ಸ್ವವಿತ್ತಮ್ ।

ಗಾನ್ಧಾರಕೇಣ ವಿದಿತಾಕ್ಷಹೃದಾ ಜಿತೋ ದ್ರಾಕ್ ಪಾಣ್ಡೋಃ ಸುತೋsಥ ನಕುಲಂ ನ್ಯದಧಾತ್ ಪಣಾಯ ॥೨೧.೩೨೪॥

 

ಭೀಮಸೇನ ಮೊದಲಾದವರಿಂದ ಹಾಗೂ ವಿದುರನಿಂದ ತಡೆಯಲ್ಪಟ್ಟರೂ ಕೂಡಾ, ಧರ್ಮರಾಜ ಜೂಜಿನಲ್ಲಿ ತನ್ನೆಲ್ಲಾ ಆಸ್ತಿಯನ್ನು ಪಣವಾಗಿಟ್ಟು, ಶೀಘ್ರದಲ್ಲಿ ನಿಪುಣ ಜೂಜುಕೋರನಾದ ಶಕುನಿಯಿಂದ ಗೆಲ್ಲಲ್ಪಟ್ಟವನಾಗಿ, ಆನಂತರ ನಕುಲನನ್ನು ಪಣಕ್ಕೆಂದು ಇಟ್ಟನು.

 

ತಸ್ಮಿನ್ ಜಿತೇSಥ ಸಹದೇವಮಥಾರ್ಜ್ಜುನಂ ಚ ಭೀಮಂ  ಚ ಸೋಮಕಸುತಾಂ ಸ್ವಮಪಿ ಕ್ರಮೇಣ ।

ರಾಜಾ ನಿಧಾಯ ವಿಜಿತೋSಥ ಸುಯೋಧನಃ ಸ್ವಂ ಸೂತಂ ದಿದೇಶ ಪೃಷತಾತ್ಮಜಪುತ್ರಿಕಾಯಾಃ ॥೨೧.೩೨೫॥

 

ನಕುಲನನ್ನು ಪಣಕ್ಕಿಟ್ಟು ಸೋಲಲು, ಸಹದೇವನನ್ನೂ, ತದನಂತರ ಅರ್ಜುನನನ್ನೂ, ತದನಂತರ ಭೀಮನನ್ನೂ, ನಂತರ ದ್ರೌಪದಿಯನ್ನೂ, ಹೀಗೆ ಕ್ರಮವಾಗಿ ತನ್ನನ್ನೂ ಪಣಕ್ಕೆ ಒಡ್ಡಿದ ಧರ್ಮರಾಜ,  ಪರಾಜಿತನಾದನು. ಧರ್ಮರಾಜ ಸೋತಮೇಲೆ ದುರ್ಯೋಧನನು ಪೃಷದ ಎನ್ನುವ ರಾಜನ ಮಗನಾದ ದ್ರುಪದರಾಜನ ಮಗಳಾದ ದ್ರೌಪದೀದೇವಿಯನ್ನು ಸಭೆಗೆ  ಕರೆತರಲು ತನ್ನ ಸಾರಥಿಯನ್ನು ಕಳುಹಿಸಿದ.

No comments:

Post a Comment