ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 13, 2022

Mahabharata Tatparya Nirnaya Kannada 21: 343-349

 

ಯುಧಿಷ್ಠಿರೋ ದುಃಖಹೇತುಸ್ತವೈಕೋ ಯದ್ಯೇನಮನ್ಯೇ ನ ಗುರುರ್ನ್ನ ಏಷಃ ।

ಇತಿ ಬ್ರೂಯುರಥವಾ ಭೀಮಪಾರ್ತ್ಥಾವೇಕೋsಪಿವಾ ಭೀಮ ಇಹೋತ್ಸೃಜೇ ತ್ವಾಮ್ ॥೨೧.೩೪೩॥

 

ಗಟ್ಟಿಯಾಗಿ ಸಭೆಗೆ ಕೇಳುವಂತೆ - ಯುಧಿಷ್ಠಿರನೇ ನಮ್ಮ ದುಃಖಕ್ಕೆ ಕಾರಣನಾಗಿದ್ದಾನೆ, ಅವನು ನಮಗೆ ಹಿರಿಯನಲ್ಲ ಎಂದು ಭೀಮಾರ್ಜುನರು ಹೇಳಿದರೆ ಅಥವಾ ಭೀಮ ಒಬ್ಬನೇ ಹೇಳಿದರೂ ಕೂಡಾ ಸಾಕು, ನಾನು ನಿಮ್ಮನ್ನು ಬಿಡುಗಡೆಗೊಳಿಸುತ್ತೇನೆ’ ಎನ್ನುತ್ತಾನೆ ದುರ್ಯೋಧನ.

 

ಇತ್ಯುಕ್ತ ಊಚೇ ಪವಮಾನುಸೂನುಃ ಪೂಜ್ಯೋSಸ್ಮಾಕಂ ಧರ್ಮ್ಮಜೋSಸಂಶಯೇನ ।

ಗುರುಶ್ಚಾಹಂ ವೋSಖಿಲಾನಾಂ ಯತೋ ಹಿ ಬಲಜ್ಯೇಷ್ಠಂ ಕ್ಷತ್ರಮಾಹುರ್ಮ್ಮಹಾನ್ತಃ ॥೨೧.೩೪೪॥

 

ಈರೀತಿಯಾಗಿ ಹೇಳಲ್ಪಟ್ಟಾಗ ಭೀಮಸೇನನು ‘ನಮಗೆ ಧರ್ಮರಾಜನು ಯಾವುದೇ ಸಂದೇಹಕ್ಕೆ ಎಡೆಯಿಲ್ಲದಂತೆ ಪೂಜ್ಯನಾಗಿದ್ದಾನೆ. ನಾನು ಈ ಸಭೆಯಲ್ಲಿ ಸೇರಿದ ಎಲ್ಲರಿಗೂ ಹಿರಿಯ. ಹೇಗೆಂದರೆ ಮಹಾತ್ಮರು  ಕ್ಷತ್ರಿಯರಲ್ಲಿ ಬಲಜ್ಯೇಷ್ಠ ಎನಿಸಿದವನನ್ನೇ  ಹಿರಿಯನೆಂದು ಹೇಳುತ್ತಾರೆ.  

 

   ಬಲಜ್ಯೇಷ್ಠ್ಯೇ ಯದಿ ವಃ ಸಂಶಯಃ ಸ್ಯಾದುತ್ತಿಷ್ಠಧ್ವಂ ಸರ್ವ ಏವಾದ್ಯ ವೀರಾಃ ।

   ಮೃದ್ನಾಮಿ ವಃ ಪಾದತಳೇನ ಸರ್ವಾನ್ ಸಹಾನುಬನ್ಧಾನ್ ಯಶ್ಚ ಮಾಂ ಯೋದ್ಧುಕಾಮಃ ॥೨೧.೩೪೫॥

 

ಒಂದುವೇಳೆ ನಿಮಗೆ ನನ್ನ ಬಲಜ್ಯೇಷ್ಠತೆಯ ವಿಷಯದಲ್ಲಿ  ಸಂಶಯವಿದ್ದರೆ ಇಲ್ಲಿ ಇರುವವರೆಲ್ಲರೂ ಬನ್ನಿ, ನಿಮ್ಮೆಲ್ಲರನ್ನೂ ನನ್ನ ಕಾಲಿನ ಅಡಿಯಿಂದ ಮರ್ದಿಸುವೆನು. ಯಾರು ನನ್ನನ್ನು ಕುರಿತು ಯುದ್ಧ ಮಾಡಲು ಬಯಸುತ್ತಾರೋ, ಅವರ ಬಂಧುಗಳನ್ನೂ ನಾನು ಬಿಡುವುದಿಲ್ಲ.

 

 ಇತಿ ಬ್ರುವನ್ ಸಮುತ್ಥಿತೋ ನದನ್ ವೃಕೋದರೋ ಯದಾ ।

ವಿಘೂರ್ಣ್ಣಿತಾ ಸಭಾSಖಿಲಾ ಭಯಾನ್ನಚಾSಹ ಕಿಞ್ಚನ   ॥೨೧.೩೪೬॥

 

ಈರೀತಿಯಾಗಿ ಹೇಳಿ, ಘರ್ಜಿಸುತ್ತಾ ಭೀಮಸೇನ ಎದ್ದುನಿಂತ. ಆಗ ಸಭೆಯಲ್ಲಿ ಭಯದಿಂದ ಎಲ್ಲರೂ ತಟಸ್ಥರಾದರು. ಯಾರೂ ಏನನ್ನೂ ಹೇಳಲಿಲ್ಲ.

 

ಭೀಷ್ಮೋ ದ್ರೋಣೋ ವಿದುರಾದ್ಯಾಃ ಕ್ಷಮಸ್ವ ಸರ್ವಂ ತ್ವಯೋಕ್ತಂ ಸತ್ಯಮಿತ್ಯೇವ ಹಸ್ತೌ ।

ಗೃಹೀತ್ವೈನಂ ಸ್ಥಾಪಯಾಮಾಸುರಸ್ಮಿನ್ ಸ್ಥಿತೇ ಶಾನ್ತಿಂ ಚಾSಪಿರೇ ಧಾರ್ತ್ತರಾಷ್ಟ್ರಾಃ ॥೨೧.೩೪೭॥

 

ತದನಂತರ ಭೀಷ್ಮಾಚಾರ್ಯರು, ದ್ರೋಣರು, ವಿದುರ ಮೊದಲಾದ ಎಲ್ಲರೂ ಭೀಮನ ಕೈಗಳನ್ನು ಹಿಡಿದು - ‘ನೀನು ಹೇಳಿದ್ದೆಲ್ಲವೂ ನನ್ನಿ(ಸತ್ಯ). ಆದರೆ ಸ್ವಲ್ಪ ಸಹನೆ ತೆಗೆದುಕೋ(ಈಗಲೇ ಎಲ್ಲರನ್ನೂ ಕೊಲ್ಲಬೇಡ)’. ಎಂದು ಹೇಳಿ ಅವನನ್ನು ಕೂಡಿಸಿದರು. ಅವನು ಕುಳಿತಾಗ ದುರ್ಯೋಧನಾದಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟರು.

 

ನಿವಾರಿತೋ ಧರ್ಮ್ಮಜೇನ ಗುರುಭಿಶ್ಚಾಪರೈಸ್ತದಾ।

ಮಾನನಾರ್ತ್ಥಂ ಗುರೂಣಾಂ ತು ನ ಭೀಮಸ್ತಾನ್ ಜಘಾನ ಹ             ॥೨೧.೩೪೮॥

 

ಧರ್ಮರಾಜನಿಂದಲೂ, ಹಿರಿಯರಿಂದಲೂ ತಡೆಯಲ್ಪಟ್ಟವನಾಗಿ, ಗುರುಗಳನ್ನು(ಹಿರಿಯರನ್ನು) ಗೌರವಿಸಲೋಸುಗ ಭೀಮಸೇನನು ದುರ್ಯೋಧನಾದಿಗಳನ್ನೂ ಆಗ ಕೊಲ್ಲಲಿಲ್ಲ.

 

ನಚಾತ್ಯವರ್ತ್ತತ ಜ್ಯೇಷ್ಠಂ ಧರ್ಮ್ಮಾತ್ಮಾನಂ ಯುಧಿಷ್ಠಿರಮ್ ।

ತೇಷಾಂ ಪಾಪಾಭಿವೃದ್ಧ್ಯರ್ತ್ಥಂ ಜ್ಯೇಷ್ಠವೃತ್ತಿಂ ಚ ದರ್ಶಯನ್ ॥೨೧.೩೪೯॥

 

ಧರ್ಮಜನಾಗಿರುವ ಅಣ್ಣ ಯುಧಿಷ್ಠಿರನನ್ನು ಭೀಮ ಮೀರಲಿಲ್ಲ. ದುರ್ಯೋಧನ ಮೊದಲಾದವರ ಪಾಪ ಎಷ್ಟು ಎನ್ನುವುದು ಜಗತ್ತಿಗೆ ತಿಳಿಯಬೇಕು(ಅವರ ಪಾಪದ ಕೊಡ ತುಂಬಲು ಕಾಲಾವಕಾಶ ಬೇಕು) – ಅದಕ್ಕಾಗಿ, ಅಣ್ಣನನ್ನು ಅನುಸರಿಸುವುದು ತಮ್ಮನ ಧರ್ಮ ಎಂದು ತೋರಿಸುತ್ತಾ ಈರೀತಿ ಮಾಡಿದ.

Saturday, March 12, 2022

Mahabharata Tatparya Nirnaya Kannada 21: 333-342

 

ಇತ್ಯುಕ್ತಾ ಅಪಿ ಭೀಷ್ಮಾದ್ಯಾಃ ಕಲ್ಯಾವೇಶೇನ ಮೋಹಿತಾಃ ।

ಪೃಚ್ಛ ಧರ್ಮ್ಮಜಮಿತ್ಯುಕ್ತ್ವಾ ತೂಷ್ಣೀಮೇವ ಬಭೂವಿರೇ   ॥೨೧.೩೩೩॥

 

ಈರೀತಿಯಾಗಿ ಹೇಳಲ್ಪಟ್ಟರೂ ಕೂಡಾ ಭೀಷ್ಮ ಮೊದಲಾದವರೆಲ್ಲರೂ ಕಲಿಯ ಪ್ರವೇಶದಿಂದ ಮೊಹಿಸಲ್ಪಟ್ಟವರಾಗಿ  ‘ಧರ್ಮರಾಜನನ್ನೇ ಕೇಳು’  ಎಂದು ಹೇಳಿ ಸುಮ್ಮನಾದರು.

 

ದುರ್ಯ್ಯೋಧನಪ್ರತೀಪಂ ಹಿ ನ ಕಶ್ಚಿದಶಕತ್ ತದಾ ।

ಉವಾಚ ವಿದುರಸ್ತತ್ರ ನ ಧರ್ಮ್ಮೋSಯಮಿತಿ ಸ್ಫುಟಮ್             ॥೨೧.೩೩೪॥

 

ಆಗ ದುರ್ಯೋಧನನಿಗೆ ಎದುರಾಗಿ ಮಾತನಾಡಲು ಯಾರೂ ಕೂಡಾ ಶಕ್ತರಾಗಲಿಲ್ಲ. ಹೀಗಿರುವಾಗ ಆ ಸಭೆಯಲ್ಲಿ ವಿದುರನು ‘ಇದು ಧರ್ಮವಲ್ಲ’ ಎಂದು ಸ್ಪಷ್ಟವಾಗಿ ಹೇಳಿದನು.

 

ನ ತಸ್ಯ ವಾಚಂ ಜಗ್ರಾಹ ಧೃತರಾಷ್ಟ್ರಃ ಸಹಾತ್ಮಜಃ ।

ಊರ್ಧ್ವಬಾಹುಃ ಸ ಚುಕ್ರೋಶ ದೇವಾನಾಂ ಖ್ಯಾಪಯಂಸ್ತದಾ             ॥೨೧.೩೩೫॥

 

ಸ್ವಾಶಕ್ತಿಂ ದ್ರೌಪದೀಂ ಚಾSಹ ಜಿತಾ ನೈವಾಸಿ ಧರ್ಮ್ಮತಃ

ಅಧರ್ಮ್ಮೋ ಹಿ ಮಹಾನೇತಾಂ ಸಭಾಮಾಕ್ರಮ್ಯ ತಿಷ್ಠತಿ             ॥೨೧.೩೩೬॥

 

ಆಗ ಮಕ್ಕಳಿಂದ ಒಡಗೂಡಿದ ಧೃತರಾಷ್ಟ್ರನು ವಿದುರನ ಮಾತನ್ನು ಸ್ವೀಕರಿಸಲಿಲ್ಲ. ವಿದುರನಾದರೋ, ದೇವತೆಗಳಿಗೆ ಹೇಳುತ್ತಾ, ಕೈಗಳನ್ನು ಮೇಲೆತ್ತಿ ತನ್ನ ಅಶಕ್ತಿಯನ್ನು ವ್ಯಕ್ತಪಡಿಸಿದ.

ದ್ರೌಪದಿಯನ್ನು ಕುರಿತು ವಿದುರ - ‘ಧರ್ಮದಿಂದ ನೋಡುವುದಾದರೆ ನೀನು ಸೋತಿಲ್ಲ, ಈ ಸಭೆಯನ್ನು ಅಧರ್ಮವು ಆವರಿಸಿ ನಿಂತಿದೆ’ ಎಂದು ಹೇಳಿದ.

 

ಏವಂ ತು ವಿದುರೇಣೋಕ್ತೇ ವಿಕರ್ಣ್ಣಃ ಪಾಪಕೋSಪಿ ಸನ್ ।

ಆಹ ಡಮ್ಭಾರ್ತ್ಥಮೇವಾತ್ರ ಧರ್ಮ್ಮವಿತ್ತ್ವಂ ಪ್ರಕಾಶಯನ್ ।

ಅಧರ್ಮ್ಮ ಏವಾಯಮಿತಿ ಕರ್ಣ್ಣೋSಥೈನಮಭತ್ಸಯತ್             ॥೨೧.೩೩೭॥

 

ಈರೀತಿಯಾಗಿ ವಿದುರನಿಂದ ಹೇಳಲ್ಪಡಲು, ಅತ್ಯಂತ ಪಾಪಿಷ್ಠನಾದ ದುರ್ಯೋಧನನ ತಮ್ಮನಾದ ವಿಕರ್ಣನು  ಡಂಭಾಚಾರವನ್ನು ಪ್ರದರ್ಶಿಸುತ್ತಾ, ತನ್ನನ್ನು ಧಾರ್ಮಿಕ ಎಂದು ತೋರ್ಪಡಿಸಲು, ‘ಇದು ಸರ್ವಥಾ ಅಧರ್ಮ’ ಎಂದು ಹೇಳಿದನು. ಆಗ ಕರ್ಣ ಅವನನ್ನು ಕುರಿತು ಗದರಿದನು.

 

   ದೃಷ್ಟ್ವಾ ಭೀಮಃ ಕ್ಲಿಶ್ಯಮಾನಾಂ ತು ಕೃಷ್ಣಾಂ ಧರ್ಮ್ಮಾತ್ಯಯಂ ಧರ್ಮ್ಮರಾಜೇ ಚ ದೃಷ್ಟ್ವಾ ।

   ರಾಜಾ ಶಾಸ್ಯೋ ಯುವರಾಜೇನ ಧರ್ಮ್ಮಾಚ್ಚಲನ್ ಯಸ್ಮಾದ್ ವಾಕ್ಯಮಿದಂ ಬಭಾಷೇ ॥೨೧.೩೩೮॥

 

ಭೀಮಸೇನನು ದ್ರೌಪದಿಯನ್ನು ಕಷ್ಟಪಡುತ್ತಿರುವವಳನ್ನಾಗಿ ನೋಡಿ ಹಾಗೂ ಧರ್ಮರಾಜನಿಂದ ಧರ್ಮದ ಮೀರುವಿಕೆಯನ್ನು ಕಂಡು, ಧರ್ಮದಿಂದ ಹಿಂದೆ ಸರಿಯುವ ರಾಜನು ಯುವರಾಜನಿಂದ ನಿಗ್ರಹಿಸಲ್ಪಡಬೇಕು (ಶಿಕ್ಷಿಸಲು ಯೋಗ್ಯನು) ಎನ್ನುವುದನ್ನು  ತೋರಿಸುತ್ತಾ- ಈ ಮಾತನ್ನು ಹೇಳಿದ:

 

ಇಮಾಂ ನ್ಯಸ್ತವತೋ ದ್ಯೂತೇ ಧಕ್ಷಣೀಯೌ ಹಿ ತೇ ಭುಜೌ ।

ನೈವಮಿತ್ಯರ್ಜ್ಜುನೋSವಾದೀತ್ ತಮಾಹಾಥ ವೃಕೋದರಃ             ॥೨೧.೩೩೯॥

 

ವಕ್ತವ್ಯಂ ನತು ಕರ್ತ್ತವ್ಯಂ ತಸ್ಮಾನ್ನಹಿ ಮಯಾ ಕೃತಮ್ ।

ಉತ್ತಮೇ ವಚಸಾ ಶಿಕ್ಷಾ ಮದ್ಧ್ಯಮೇSರ್ತ್ಥಾಪಹಾರಣಮ್            ॥೨೧.೩೪೦॥

 

ಅಧಮೇ ದೇಹದಣ್ಡಶ್ಚ ತಸ್ಮಾದ್ ವಾಚ್ಯೋ ಯುಧಿಷ್ಠಿರಃ ।

ಅಥ ಕರ್ಣ್ಣೋSಬ್ರವೀತ್ ಕೃಷ್ಣಾಮಪತಿರ್ಹ್ಯಸಿ ಶೋಭನೇ             ॥೨೧.೩೪೧॥

 

                    ಧಾರ್ತ್ತರಾಷ್ಟ್ರಗೃಹಂ ಯಾಹೀತ್ಯಥ ದುರ್ಯ್ಯೋಧನೋSವದತ್ ।

ಪರಸ್ಪರವಿರೋಧಾರ್ತ್ಥಂ ಪಾಣ್ಡವಾನಾಮಿದಂ ವಚಃ      ॥೨೧.೩೪೨॥

 

‘ಈ ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿ ಇಟ್ಟ ನಿನ್ನ ಎರಡೂ ಕೈಗಳು ಸುಡಲ್ಪಡಲು ಯೋಗ್ಯ’ ಎಂದ ಭೀಮಸೇನನ ಮಾತನ್ನು ಕೇಳಿದ ಅರ್ಜುನನು ‘ಈ ರೀತಿ ಹೇಳಬಾರದಲ್ಲವೇ’ ಎಂದು ಹೇಳಿದ. ಆಗ ವೃಕೋದರನು - ‘ಹೇಳಬೇಕು, ಆದರೆ ಮಾಡಬಾರದು. ಆ ಕಾರಣದಿಂದ ನನ್ನಿಂದ ಮಾಡಲ್ಪಡಲಿಲ್ಲ. ನಮಗಿಂತ ದೊಡ್ಡವರು ತಪ್ಪು ಮಾಡಿದರೆ ಮಾತಿನಿಂದ ಶಿಕ್ಷೆ ಕೊಡಬೇಕು. ನಮಗೆ ಸಮಾನರು ತಪ್ಪು ಮಾಡಿದಾಗ ಅವರ ಸಂಪತ್ತನ್ನು ಅಪಹರಿಸಬೇಕು. ಯಾರು ನಮಗಿಂತ ಅಧಮನೋ ಅವನಿಗೆ ದೇಹ ದಂಡನೆ ಕೊಡಬೇಕು. ಆ ಕಾರಣದಿಂದ ನಮಗಿಂತ ಹಿರಿಯನಾದ ಯುಧಿಷ್ಠಿರನಿಗೆ ನಮ್ಮಿಂದ  ಹೇಳಲ್ಪಡಬೇಕು’ ಎಂದನು.

ತದನಂತರ ಕರ್ಣನು ದ್ರೌಪದಿಯನ್ನು ಕುರಿತು - ‘ಚೆಲುವೆಯೇ, ನೀನು ಗಂಡನಿಲ್ಲದವಳಾಗಿ ನಿನ್ನೆಲ್ಲಾ ರಕ್ಷಕರನ್ನೂ ಕಳೆದುಕೊಂಡಿದ್ದೀಯ. ನೀನು ದುರ್ಯೋಧನನ ಮನೆಗೆ ಹೋಗು’ ಎಂದನು. ಆಗ ದುರ್ಯೋಧನನು ಪಾಂಡವರು ಪರಸ್ಪರ ಹೊಡೆದಾಡಿಕೊಳ್ಳಲೀ ಎನ್ನುವ ಉದ್ದೇಶದಿಂದ ಈ ಮಾತನ್ನು ಹೇಳಿದ:

Friday, March 11, 2022

Mahabharata Tatparya Nirnaya Kannada 21: 326-332

 

ಸೂತೋ ಗತ್ವಾ ತದನ್ತಂ ಸಮಕಥಯದಿಮಾಂ ದ್ಯೂತಮದ್ಧ್ಯೇ ಜಿತಾSಸಿ

 ಕ್ಷಿಪ್ರಂ ಚಾsಯಾಹಿ ರಾಜ್ಞಾಂ ಸಮಿತಿಮುರುತರಾಮಿತ್ಯಥೋ ಸಾsಪ್ಯವಾದೀತ್ ।

ನಾಹಂ ಯಾಸ್ಯೇ ಗುರೂಣಾಂ ಸಮಿತಿಮಿತಿ ಯಯೌ ಸೋsಪ್ಯಮುಂ ಭೀಮಭೀತಂ

ಜ್ಞಾತ್ವಾ ದುಃಶಾಸನಂ ಸೋsಪ್ಯದಿಶದಥ ನೃಪೋ ಧಾರ್ತ್ತರಾಷ್ಟ್ರೋSನುಜಂ ಸ್ವಮ್ ॥೨೧.೩೨೬॥

 

ದುರ್ಯೋಧನನ ಸಾರಥಿಯು ದ್ರೌಪದಿಯ ಸಮೀಪಕ್ಕೆ ತೆರಳಿ ಅವಳನ್ನು ಕುರಿತು ಹೀಗೆ ಹೇಳುತ್ತಾನೆ: ‘ ನೀನು  ಜೂಜಿನಲ್ಲಿ ಪಣವಾಗಿ ಸೋತಿದ್ದೀಯೇ, ಹೀಗಾಗಿ ತಕ್ಷಣ ರಾಜರ ಸಮೂಹದ ಮುಂದೆ ಬರತಕ್ಕದ್ದು  ಎಂದು. ತದನಂತರ ದ್ರೌಪದಿ ‘ನಾನು ಹಿರಿಯರ ಸಮೂಹದ ಸಭೆಯ ಎದುರು ಬರಲಾರೆ’ ಎಂದಾಗ, ಅವನು ದುರ್ಯೋಧನನ ಬಳಿಗೆ ಹಿಂತಿರುಗುತ್ತಾನೆ. ದುರ್ಯೋಧನನು ತನ್ನ ಸಾರಥಿ  ಭೀಮಸೇನನಿಂದಾಗಿ  ಭಯಗ್ರಸ್ಥನಾಗಿದ್ದಾನೆ ಎಂದು ತಿಳಿದು, ತನ್ನ ತಮ್ಮನಾದ ದುಶ್ಯಾಸನನಿಗೆ ಆಜ್ಞೆ ಮಾಡಿದನು.

 

ಸ ಪಾಪಪೂರುಷೋತ್ತಮಃ ಪ್ರಗೃಹ್ಯ ಕೇಶಪಕ್ಷಕೇ ।

ಪುರಃ ಸ್ವಮಾತುರಾನಯತ್ ಸಭಾಮಯುಗ್ಮವಾಸಸೀಮ್             ॥೨೧.೩೨೭॥

 

ಪಾಪಪುರುಷರಲ್ಲೇ ಅಗ್ರಗಣ್ಯನಾದ ದುಶ್ಯಾಸನನು ದ್ರೌಪದಿಯನ್ನು ಅವಳ ಮುಡಿಯಲ್ಲಿ ಹಿಡಿದು, ತನ್ನ ತಾಯಿಯ ಎದುರೇ, ಒಂದೇ ಬಟ್ಟೆಯನ್ನು ತೊಟ್ಟ ಅವಳನ್ನು ಸಭೆಗೆ ಕರೆತಂದ.

 

ಸಮಾಹೃತಾ ರಜಸ್ವಲಾ ಜಗಾದ ಭೀಷ್ಮಪೂರ್ವಕಾನ್ ।

ಅಧರ್ಮ್ಮ ಏಷ ವಾರ್ಯ್ಯತೇ ನ ಧರ್ಮ್ಮಿಬಿರ್ಭವದ್ವಿದೈಃ  ॥೨೧.೩೨೮॥

 

ರಜಸ್ವಲೆ(ಋತುಮತಿ)ಯಾಗಿರುವ ಅವಳು ಕರೆತರಲ್ಪಟ್ಟವಳಾಗಿ, ಭೀಷ್ಮ ಮೊದಲಾದವರಿಗೆ ‘ನಿಮ್ಮಂತಹ ಧಾರ್ಮಿಕರಿಂದ ಈ ಅಧರ್ಮವು ತಡೆಯಲ್ಪಡುವುದಿಲ್ಲವೇ’ ಎಂದು ಪ್ರಶ್ನಿಸಿದಳು.  

 

ಕಥಂ ಛಲಾತ್ಮಕೇ ದ್ಯೂತೇ ಜಿತೇ ಧರ್ಮ್ಮಜಯೋ ಭವೇತ್ ।

ನಹಿ ದ್ಯೂತಂ ಧರ್ಮ್ಯಮಾಹುರ್ವಿಶೇಷೇಣ ತು ಭೂಭುಜಾಮ್ ॥೨೧.೩೨೯॥

 

‘ಮೋಸವನ್ನೇ ಒಳಗೊಂಡ ಜೂಜಿನಲ್ಲಿ ಸೋಲುತ್ತಿರಲು ಧರ್ಮದಿಂದ ಜಯ ಹೇಗಾದೀತು? ಜೂಜು ಧರ್ಮ ಎಂದು ಯಾರೂ ಹೇಳುವುದಿಲ್ಲ. ವಿಶೇಷವಾಗಿ ರಾಜರಿಗೆ ಜೂಜು ಧರ್ಮವಲ್ಲ.   

 

ಯೇ ಧರ್ಮ್ಮಂ ನ ವದನ್ತೀಹ ನ ತೇ ವೃದ್ಧಾ ಇತೀರಿತಾಃ ।

ಅವೃದ್ಧಮಣ್ಡಿತಾಂ ನೈವ ಸಭೇತ್ಯಾಹುರ್ಮ್ಮನೀಷಿಣಃ     ॥೨೧.೩೩೦॥

 

ಯಾರು ಧರ್ಮವನ್ನು ಹೇಳುವುದಿಲ್ಲವೋ ಅವರು ವೃದ್ದರೇ ಅಲ್ಲ.  (ಯಾರು ವಯಸ್ಸಿನಿಂದ ಹಿರಿಯರಾಗಿದ್ದು ಧರ್ಮವನ್ನು ಹೇಳುವುದಿಲ್ಲವೋ ಅವರು ಹಿರಿಯರಲ್ಲ ಎಂದೇ ಅರ್ಥ). ಜ್ಞಾನವೃದ್ದರು ಇಲ್ಲದ ಸಭೆಯನ್ನು ಸಭೆ ಎಂದೇ ಕರೆಯುವುದಿಲ್ಲ.

 

ಕಥಂ ದ್ಯೂತೇ ಜಿತಾ ಚಾಹಮಜಿತೇ ಸ್ವಪತೌ ಸ್ಥಿತೇ ।

ಸಮಾನಧರ್ಮ್ಮಿಣೀಮಾಹುರ್ಭಾರ್ಯ್ಯಾಂ  ಯಸ್ಮಾದ್ ವಿಪಶ್ಚಿತಃ ॥೨೧.೩೩೧॥

 

ನನ್ನ ಗಂಡ ಪರಾಜಿತನಾಗದಿರಲು ನಾನು ಹೇಗೆ ಪರಾಜಿತಳು? [ಧರ್ಮದಿಂದ ಜಯವೇ ಹೊರತು ಅಧರ್ಮದಿಂದ ನಡೆದ ಜೂಜಿನಲ್ಲಿ ಪಡೆದ ಜಯ ಜಯವಲ್ಲ. ಹಾಗಾಗಿ ಇಲ್ಲಿ ಧರ್ಮರಾಜ ಅಪರಾಜಿತ. ಗಂಡ ಅಪರಾಜಿತನಾಗಿರುವಾಗ ಹೆಂಡತಿ ಹೇಗೆ ಪರಾಜಿತಳು? ]  ಜ್ಞಾನಿಗಳು ಹೆಂಡಿರನ್ನು ಗಂಡನಿಗೆ ಸಮಾನ ಧರ್ಮ ಉಳ್ಳವಳು ಎಂದು ಹೇಳುತ್ತಾರೆ. 

 

ಸಹೈವ ಕರ್ಮ್ಮ ಕರ್ತ್ತವ್ಯಂ ಪತೌ ದಾಸೇ ಹಿ ಭಾರ್ಯ್ಯಯಾ ।

ದಾಸೀತ್ವಂ ನ ಪೃಥಙ್ ಮೇ ಸ್ಯಾಜ್ಜಿತೇSಪಿ ಹಿ ಪತೌ ತತಃ ॥೨೧.೩೩೨॥

 

ಗಂಡ ಒಂದು ವೇಳೆ ದಾಸನಾದರೂ ಕೂಡಾ ಹೆಂಡತಿಯೊಟ್ಟಿಗೆ ಕೂಡಿಕೊಂಡು ಕರ್ಮ ಮಾಡಬೇಕು. ಹೀಗಾಗಿ ನನಗೆ ಪ್ರತ್ಯೇಕವಾದ ದಾಸೀತ್ವವಿಲ್ಲ.’ (ಗಂಡ ಸೋತಿದ್ದರೂ ಕೂಡಾ  ಜೊತೆಯಾಗಿ ದಾಸೀತ್ವವೇ ವಿನಃ ಪ್ರತ್ಯೇಕ ಇಲ್ಲ).