ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 13, 2022

Mahabharata Tatparya Nirnaya Kannada 21: 343-349

 

ಯುಧಿಷ್ಠಿರೋ ದುಃಖಹೇತುಸ್ತವೈಕೋ ಯದ್ಯೇನಮನ್ಯೇ ನ ಗುರುರ್ನ್ನ ಏಷಃ ।

ಇತಿ ಬ್ರೂಯುರಥವಾ ಭೀಮಪಾರ್ತ್ಥಾವೇಕೋsಪಿವಾ ಭೀಮ ಇಹೋತ್ಸೃಜೇ ತ್ವಾಮ್ ॥೨೧.೩೪೩॥

 

ಗಟ್ಟಿಯಾಗಿ ಸಭೆಗೆ ಕೇಳುವಂತೆ - ಯುಧಿಷ್ಠಿರನೇ ನಮ್ಮ ದುಃಖಕ್ಕೆ ಕಾರಣನಾಗಿದ್ದಾನೆ, ಅವನು ನಮಗೆ ಹಿರಿಯನಲ್ಲ ಎಂದು ಭೀಮಾರ್ಜುನರು ಹೇಳಿದರೆ ಅಥವಾ ಭೀಮ ಒಬ್ಬನೇ ಹೇಳಿದರೂ ಕೂಡಾ ಸಾಕು, ನಾನು ನಿಮ್ಮನ್ನು ಬಿಡುಗಡೆಗೊಳಿಸುತ್ತೇನೆ’ ಎನ್ನುತ್ತಾನೆ ದುರ್ಯೋಧನ.

 

ಇತ್ಯುಕ್ತ ಊಚೇ ಪವಮಾನುಸೂನುಃ ಪೂಜ್ಯೋSಸ್ಮಾಕಂ ಧರ್ಮ್ಮಜೋSಸಂಶಯೇನ ।

ಗುರುಶ್ಚಾಹಂ ವೋSಖಿಲಾನಾಂ ಯತೋ ಹಿ ಬಲಜ್ಯೇಷ್ಠಂ ಕ್ಷತ್ರಮಾಹುರ್ಮ್ಮಹಾನ್ತಃ ॥೨೧.೩೪೪॥

 

ಈರೀತಿಯಾಗಿ ಹೇಳಲ್ಪಟ್ಟಾಗ ಭೀಮಸೇನನು ‘ನಮಗೆ ಧರ್ಮರಾಜನು ಯಾವುದೇ ಸಂದೇಹಕ್ಕೆ ಎಡೆಯಿಲ್ಲದಂತೆ ಪೂಜ್ಯನಾಗಿದ್ದಾನೆ. ನಾನು ಈ ಸಭೆಯಲ್ಲಿ ಸೇರಿದ ಎಲ್ಲರಿಗೂ ಹಿರಿಯ. ಹೇಗೆಂದರೆ ಮಹಾತ್ಮರು  ಕ್ಷತ್ರಿಯರಲ್ಲಿ ಬಲಜ್ಯೇಷ್ಠ ಎನಿಸಿದವನನ್ನೇ  ಹಿರಿಯನೆಂದು ಹೇಳುತ್ತಾರೆ.  

 

   ಬಲಜ್ಯೇಷ್ಠ್ಯೇ ಯದಿ ವಃ ಸಂಶಯಃ ಸ್ಯಾದುತ್ತಿಷ್ಠಧ್ವಂ ಸರ್ವ ಏವಾದ್ಯ ವೀರಾಃ ।

   ಮೃದ್ನಾಮಿ ವಃ ಪಾದತಳೇನ ಸರ್ವಾನ್ ಸಹಾನುಬನ್ಧಾನ್ ಯಶ್ಚ ಮಾಂ ಯೋದ್ಧುಕಾಮಃ ॥೨೧.೩೪೫॥

 

ಒಂದುವೇಳೆ ನಿಮಗೆ ನನ್ನ ಬಲಜ್ಯೇಷ್ಠತೆಯ ವಿಷಯದಲ್ಲಿ  ಸಂಶಯವಿದ್ದರೆ ಇಲ್ಲಿ ಇರುವವರೆಲ್ಲರೂ ಬನ್ನಿ, ನಿಮ್ಮೆಲ್ಲರನ್ನೂ ನನ್ನ ಕಾಲಿನ ಅಡಿಯಿಂದ ಮರ್ದಿಸುವೆನು. ಯಾರು ನನ್ನನ್ನು ಕುರಿತು ಯುದ್ಧ ಮಾಡಲು ಬಯಸುತ್ತಾರೋ, ಅವರ ಬಂಧುಗಳನ್ನೂ ನಾನು ಬಿಡುವುದಿಲ್ಲ.

 

 ಇತಿ ಬ್ರುವನ್ ಸಮುತ್ಥಿತೋ ನದನ್ ವೃಕೋದರೋ ಯದಾ ।

ವಿಘೂರ್ಣ್ಣಿತಾ ಸಭಾSಖಿಲಾ ಭಯಾನ್ನಚಾSಹ ಕಿಞ್ಚನ   ॥೨೧.೩೪೬॥

 

ಈರೀತಿಯಾಗಿ ಹೇಳಿ, ಘರ್ಜಿಸುತ್ತಾ ಭೀಮಸೇನ ಎದ್ದುನಿಂತ. ಆಗ ಸಭೆಯಲ್ಲಿ ಭಯದಿಂದ ಎಲ್ಲರೂ ತಟಸ್ಥರಾದರು. ಯಾರೂ ಏನನ್ನೂ ಹೇಳಲಿಲ್ಲ.

 

ಭೀಷ್ಮೋ ದ್ರೋಣೋ ವಿದುರಾದ್ಯಾಃ ಕ್ಷಮಸ್ವ ಸರ್ವಂ ತ್ವಯೋಕ್ತಂ ಸತ್ಯಮಿತ್ಯೇವ ಹಸ್ತೌ ।

ಗೃಹೀತ್ವೈನಂ ಸ್ಥಾಪಯಾಮಾಸುರಸ್ಮಿನ್ ಸ್ಥಿತೇ ಶಾನ್ತಿಂ ಚಾSಪಿರೇ ಧಾರ್ತ್ತರಾಷ್ಟ್ರಾಃ ॥೨೧.೩೪೭॥

 

ತದನಂತರ ಭೀಷ್ಮಾಚಾರ್ಯರು, ದ್ರೋಣರು, ವಿದುರ ಮೊದಲಾದ ಎಲ್ಲರೂ ಭೀಮನ ಕೈಗಳನ್ನು ಹಿಡಿದು - ‘ನೀನು ಹೇಳಿದ್ದೆಲ್ಲವೂ ನನ್ನಿ(ಸತ್ಯ). ಆದರೆ ಸ್ವಲ್ಪ ಸಹನೆ ತೆಗೆದುಕೋ(ಈಗಲೇ ಎಲ್ಲರನ್ನೂ ಕೊಲ್ಲಬೇಡ)’. ಎಂದು ಹೇಳಿ ಅವನನ್ನು ಕೂಡಿಸಿದರು. ಅವನು ಕುಳಿತಾಗ ದುರ್ಯೋಧನಾದಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟರು.

 

ನಿವಾರಿತೋ ಧರ್ಮ್ಮಜೇನ ಗುರುಭಿಶ್ಚಾಪರೈಸ್ತದಾ।

ಮಾನನಾರ್ತ್ಥಂ ಗುರೂಣಾಂ ತು ನ ಭೀಮಸ್ತಾನ್ ಜಘಾನ ಹ             ॥೨೧.೩೪೮॥

 

ಧರ್ಮರಾಜನಿಂದಲೂ, ಹಿರಿಯರಿಂದಲೂ ತಡೆಯಲ್ಪಟ್ಟವನಾಗಿ, ಗುರುಗಳನ್ನು(ಹಿರಿಯರನ್ನು) ಗೌರವಿಸಲೋಸುಗ ಭೀಮಸೇನನು ದುರ್ಯೋಧನಾದಿಗಳನ್ನೂ ಆಗ ಕೊಲ್ಲಲಿಲ್ಲ.

 

ನಚಾತ್ಯವರ್ತ್ತತ ಜ್ಯೇಷ್ಠಂ ಧರ್ಮ್ಮಾತ್ಮಾನಂ ಯುಧಿಷ್ಠಿರಮ್ ।

ತೇಷಾಂ ಪಾಪಾಭಿವೃದ್ಧ್ಯರ್ತ್ಥಂ ಜ್ಯೇಷ್ಠವೃತ್ತಿಂ ಚ ದರ್ಶಯನ್ ॥೨೧.೩೪೯॥

 

ಧರ್ಮಜನಾಗಿರುವ ಅಣ್ಣ ಯುಧಿಷ್ಠಿರನನ್ನು ಭೀಮ ಮೀರಲಿಲ್ಲ. ದುರ್ಯೋಧನ ಮೊದಲಾದವರ ಪಾಪ ಎಷ್ಟು ಎನ್ನುವುದು ಜಗತ್ತಿಗೆ ತಿಳಿಯಬೇಕು(ಅವರ ಪಾಪದ ಕೊಡ ತುಂಬಲು ಕಾಲಾವಕಾಶ ಬೇಕು) – ಅದಕ್ಕಾಗಿ, ಅಣ್ಣನನ್ನು ಅನುಸರಿಸುವುದು ತಮ್ಮನ ಧರ್ಮ ಎಂದು ತೋರಿಸುತ್ತಾ ಈರೀತಿ ಮಾಡಿದ.

No comments:

Post a Comment