ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 26, 2022

Mahabharata Tatparya Nirnaya Kannada 22: 19-23

 

    ಸರ್ವಾಶ್ಚ ಚೇಷ್ಟಾ ಭಗವನ್ನಿಯುಕ್ತಾಃ ಸದಾ ಸಮಸ್ತಸ್ಯ ಚಿತೋSಚಿತಶ್ಚ।

    ತಥಾSಪಿ ವಿಷ್ಣುರ್ವಿನಿವಾರಯೇತ್ ಕ್ವಚಿದ್ ವಾಚಾ ವಿಧತ್ತೇ ಚ ಜನಾನ್ ವಿಡಮ್ಬಯನ್ ॥ ೨೨.೧೯॥

 

ಇಡೀ ಜಗತ್ತಿನಲ್ಲಿ ಎಲ್ಲಾ ಚೇತನ ಹಾಗೂ ಅಚೇತನಗಳ ಸಮಸ್ತ ಕ್ರಿಯೆಗಳೂ ಕೂಡಾ ಪರಮಾತ್ಮನ ಆಳ್ವಿಕೆಗೆ ಸಂಬಂಧಿಸಿದೆ. ಆದರೂ ನಾರಾಯಣನು ಆಗಾಗ ಜನರನ್ನು ಅನುಕರಿಸುತ್ತಾ, ಮಾತಿನಿಂದಲೇ ಅಕಾರ್ಯದ ವಿನಿವೃತ್ತಿ ಹಾಗೂ ಕಾರ್ಯದ ಪ್ರವೃತ್ತಿಯನ್ನು ಮಾಡುವನು. (ಹೀಗೆ  ಮಾಡೆಂದು ಹೇಳುವನು).

 

    ಮೈತ್ರೇಯ ಆಗಾದಥ ಭೂಪತಿಶ್ಚ ಪುತ್ರಾನ್ ಸಮಾಹೂಯ ಸಕರ್ಣ್ಣಸೌಬಲಾನ್ ।

    ಸಮ್ಪೂಜಯಾಮಾಸ ಮುನಿಂ ಸ ಚಾSಹ ದಾತುಂ ರಾಜ್ಯಂ ಪಾಣ್ಡವಾನ್ ಸಮ್ಪ್ರಶಂಸನ್ ॥ ೨೨.೨೦॥

 

ತದನಂತರ ಮೈತ್ರೇಯರು ಅಲ್ಲಿಗೆ ಬಂದರು. ಧೃತರಾಷ್ಟ್ರನಾದರೋ, ಕರ್ಣ-ಶಕುನಿಗಳಿಂದ ಒಡಗೂಡಿರುವ ಮಕ್ಕಳನ್ನು ಕರೆದು, ಮುನಿಗಳಿಗೆ ಪೂಜೆ ಮಾಡಿಸಿದನು. ಆ ಮೈತ್ರೇಯರು ಪಾಂಡವರ ಗುಣಗಳ ಬಗ್ಗೆ ಹೊಗಳುತ್ತಾ, ರಾಜ್ಯವನ್ನು ಹಿಂತಿರುಗಿಸುವಂತೆ ಹೇಳಿದರು.

 

ವಿಶೇಷತೋ ಭೀಮಬಲಂ ಶಶಂಸ ಕಿರ್ಮ್ಮೀರನಾಶಾದಿ ವದನ್ ಮುನೀನ್ದ್ರಃ ।

ಶ್ರುತ್ವಾSಸಹಂಸ್ತದ್ ಧೃತರಾಷ್ಟ್ರಪುತ್ರ ಆಸ್ಫಾಲಯಾಮಾಸ ನಿಜೋರುಮುಗ್ರಃ ॥ ೨೨.೨೧॥

 

ಮೈತ್ರೇಯರು ವಿಶೇಷವಾಗಿ ಕಿರ್ಮೀರನ ನಾಶ ಹೇಗಾಯಿತು ಎನ್ನುವುದನ್ನು ಹೇಳುತ್ತಾ, ಭೀಮಸೇನನ ಬಲವನ್ನು ಹೊಗಳಿದರು. ಅದನ್ನು ಕೇಳಿ ಸಹಿಸಲಾಗದೇ, ದುರ್ಯೋಧನನು ತನ್ನ ತೊಡೆಯನ್ನು ಅವಹೇಳನಕಾರಿಯಾಗಿ ತಟ್ಟಿದನು.

 

ಶಶಾಪ ಚೈನಂ ಮುನಿರುಗ್ರತೇಜಾಸ್ತವೋರುಭೇದಾಯ ಭವೇತ್ ಸುಯುದ್ಧಮ್ ।

ಇತ್ಯೂಚಿವಾನ್ ಧೃತರಾಷ್ಟ್ರಾನತೋsಪಿ ಯಯೌ ನ ಚೇದ್ ರಾಜ್ಯದಸ್ತ್ವಂ ತಥೇತಿ ॥ ೨೨.೨೨॥

 

ಆಗ ಉಗ್ರವಾದ ತಪಸ್ಸುಳ್ಳ ಮೈತ್ರೇಯರು ‘ನಿನ್ನ ತೊಡೆಯನ್ನು ಮುರಿಯಲಿಕ್ಕಾಗಿ ದೊಡ್ಡ ಯುದ್ಧ ನಡೆಯುತ್ತದೆ’ ಎಂದು ದುರ್ಯೋಧನನನ್ನು ಶಪಿಸಿದರು.  ಧೃತರಾಷ್ಟ್ರ ನಮಸ್ಕರಿಸಿದಾಗಿ(ಅವಿವೇಕಿಯಾದ ನನ್ನ ಮಗನ ಪರವಾಗಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಎಂದು ನಮಸ್ಕರಿಸಿದಾಗ) ‘ನೀನು ರಾಜ್ಯವನ್ನು ಕೊಟ್ಟರೆ ಹಾಗೆ ಆಗುವುದಿಲ್ಲ’ ಎಂದು ಹೇಳಿ ಹೊರಟುಹೋದರು.

 

[ಮೈತ್ರೇಯರಿಗೆ ಕಿರ್ಮೀರ ವಧೆಯ ಕುರಿತು ಪೂರ್ತಿಯಾಗಿ ಹೇಳಲು ದುರ್ಯೋಧನ ಬಿಡಲಿಲ್ಲ. ಆನಂತರ ಮೈತ್ರೇಯರು ಅಲ್ಲಿಂದ ಹೊರಡುವಾಗ ‘ವಿದುರನಲ್ಲಿ ಕಿರ್ಮೀರ ವಧೆಯ ಕುರಿತು ಕೇಳು ಎಂದು ಹೇಳಿ ಹೊರಟುಹೋದರು. ಮುಂದೆ ಧೃತರಾಷ್ಟ್ರನಿಂದ ಕೇಳಲ್ಪಟ್ಟ ವಿದುರ, ಯುದ್ಧನಡೆದ ಸ್ಥಳದಲ್ಲಿ ಯುದ್ಧದ ರಭಸಕ್ಕೆ ಮರಗಳು, ಪರ್ವತಗಳು ಪುಡಿಯಾಗಿರುವುದನ್ನು, ವಿವರಿಸಿ, ಯಾವ ರೀತಿ ಕಿರ್ಮೀರ ನಾಶವಾದ ಎನ್ನುವುದನ್ನು ವಿವರಿಸುತ್ತಾನೆ.]  

 

ಶ್ರುತ್ವಾ ತು ಕಿರ್ಮ್ಮೀರವಧಂ ಸ್ವಪಿತ್ರಾ ಪೃಷ್ಟಕ್ಷತ್ತ್ರೋಕ್ತಂ ಸೋSತ್ರಸದ್ ಧಾರ್ತ್ತರಾಷ್ಟ್ರಃ ।

ವನೇ ವಸನ್ತೋSಥ ಪೃಥಾಸುತಾಸ್ತೇ ವಾರ್ತ್ತಾಂ ಸ್ವಕೀಯಾಂ ಪ್ರಾಪಯಾಮಾಸುರಾಶು  ॥೨೨.೨೩॥

 

ತನ್ನ ತಂದೆಯಿಂದ ಕೇಳಲ್ಪಟ್ಟ, ವಿದುರನಿಂದ ಹೇಳಲ್ಪಟ್ಟ ಕಿರ್ಮೀರನ ವಧೆಯ ಕುರಿತು ಕೇಳಿ ದುರ್ಯೋಧನನು ತರತರನೆ ನಡುಗಿದ. ಇತ್ತ ಪಾಂಡವರು ತಮ್ಮ ಈ ವಾರ್ತೆಯನ್ನು(ನಡೆದ ಘಟನೆಯನ್ನು) ಕೃಷ್ಣನಿಗೆ ತಿಳಿಸಿದರು.

Thursday, March 24, 2022

Mahabharata Tatparya Nirnaya Kannada 22: 12-18

 

    ತಸ್ಮಿನ್ ಗತೇ ಭ್ರಾತೃವಿಯೋಗಕರ್ಶಿತಃ ಪಪಾತ ಭೂಮೌ ಸಹಸೈವ ರಾಜಾ ।

    ಸಙ್ಜ್ಞಾಮವಾಪ್ಯಾSದಿಶದಾಶು ಸಞ್ಜಯಂ ಜೀವಾಮಿ ಚೇದಾಶು ಮಮಾSನಯಾನುಜಮ್ ॥೨೨.೧೨॥

 

ವಿದುರನು ಹೊರಡಲು, ತಮ್ಮನ ಬೇರ್ಪಡೆಯಿಂದ ಸಂಕಟಗೊಂಡ ಧೃತರಾಷ್ಟ್ರನು ನೆಲಕ್ಕೆ ಕುಸಿದ. ಮಧ್ಯದಲ್ಲಿ ಮೂರ್ಛೆ ತಿಳಿದೆದ್ದಾಗ- ಸಂಜಯನನ್ನು ಕುರಿತು ಹೇಳಿದ: ‘ನಾನು ಬದುಕಬೇಕು ಎಂದಿದ್ದರೆ ಕೂಡಲೇ ನನ್ನ ತಮ್ಮನಾದ ವಿದುರನನ್ನು ಕರೆದು ತಾ ಎಂದು.

 

  ಇತೀರಿತಃ ಸಞ್ಜಯಃ ಪಾಣ್ಡವೇಯಾನ್ ಪ್ರಾಪ್ಯಾSನಯದ್ ವಿದುರಂ ಶೀಘ್ರಮೇವ ।

  ಸೋSಪ್ಯಾಗತಃ ಕ್ಷಿಪ್ರಮಪಾಸ್ತದೋಷೋ ಜ್ಯೇಷ್ಠಂ ವವನ್ದೇSಥ ಸ ಚೈನಮಾಶ್ಲಿಷತ್ ।

  ಅಙ್ಕಂ ಸಮಾರೋಪ್ಯ ಸ ಮೂರ್ಧ್ನಿ ಚೈನಮಾಘ್ರಾಯ ಲೇಭೇ ಪರಮಾಂ ಮುದಂ ತದಾ             ॥ ೨೨.೧೩॥

 

ಈರೀತಿಯಾಗಿ ಹೇಳಲ್ಪಟ್ಟ ಸಂಜಯನು ಪಾಂಡವರಿರುವಲ್ಲಿಗೆ ಹೋಗಿ, ಶೀಘ್ರದಲ್ಲಿಯೇ ವಿದುರನನ್ನು ಕರೆತಂದ. ಅವನಾದರೋ, ಬೇಗದಲ್ಲಿಯೇ ಅಣ್ಣನಿಂದ ಆದ ಅಪಕಾರ-ಅವಮಾನಗಳನ್ನು ಮರೆತು, ಅಣ್ಣನನ್ನು ನಮಿಸಿದ. ಧೃತರಾಷ್ಟ್ರ ವಿದುರನನ್ನು ಗಟ್ಟಿಯಾಗಿ ತಬ್ಬಿಕೊಂಡ. ತೊಡೆಯಮೇಲೆ ಏರಿಸಿಕೊಂಡು ವಿದುರನ ನೆತ್ತಿಯನ್ನು ಮೂಸಿ ಆನಂದವನ್ನು ಹೊಂದಿದ.

 

ಕ್ಷತ್ತಾರಮಾಯಾನ್ತಮುದೀಕ್ಷ್ಯ ಸರ್ವೇ ಸಸೌಬಲಾ ಧಾರ್ತ್ತರಾಷ್ಟ್ರಾ ಅಮರ್ಷಾತ್ ।

ಸಮ್ಮನ್ತ್ರ್ಯಹನ್ತುಂ ಪಾಣ್ಡವಾನಾಮುತೈಕಂ ಛನ್ನೋಪಧೇನೈವ ಸಸೂತಜಾ ಯಯುಃ  ॥ ೨೨.೧೪॥

 

ಮರಳಿ ಬಂದಿರುವ ವಿದುರನನ್ನು ಕಂಡು ಶಕುನಿಯಿಂದ ಕೂಡಿದ ದುರ್ಯೋಧನಾದಿಗಳೆಲ್ಲರೂ ಹೊಟ್ಟೆಕಿಚ್ಚಿನಿಂದ, ಸಹಿಸಲಾಗದೇ, ತಾವೆಲ್ಲರೂ ಕೂಡಾ ಮಂತ್ರಾಲೋಚನೆ ಮಾಡುತ್ತಾ, ಪಾಂಡವರಲ್ಲಿ ಕನಿಷ್ಠಪಕ್ಷ ಒಬ್ಬನನ್ನು ಮೋಸದಿಂದ ಕೊಲ್ಲಲು ಕರ್ಣನಿಂದೊಡಗೂಡಿ ತೆರಳಿದರು.

 

ವಿಜ್ಞಾಯ ತೇಷಾಂ ಗಮನಂ ಸಮಸ್ತಲೋಕಾನ್ತರಾತ್ಮಾ ಪರಮೇಶ್ವರೇಶ್ವರಃ ।

ವ್ಯಾಸೋSಭಿಗಮ್ಯಾವದದಾಮ್ಬಿಕೇಯಂ ನಿವಾರಯಾSಶ್ವೇವ ಸುತಂ ತವೇತಿ ॥ ೨೨.೧೫॥

 

ಈ ದುರ್ಯೋಧನಾದಿಗಳ ತೆರಳುವಿಕೆಯನ್ನು ತಿಳಿದು, ಎಲ್ಲಾ ಜನರ ಅಂತರ್ಯಾಮಿಯಾಗಿರುವ,  ಬ್ರಹ್ಮರುದ್ರಾದಿಗಳಿಗೂ ಒಡೆಯನಾಗಿರುವ ವೇದವ್ಯಾಸರು ಆಗಮಿಸಿ, ಧೃತರಾಷ್ಟ್ರನ ಕುರಿತು ‘ನಿನ್ನ ಮಗನನ್ನು ಕೂಡಲೇ ತಡೆಹಿಡಿ’ ಎಂದು ಹೇಳಿದರು.

 

ಅವಾಪ್ಯ ಪಾರ್ತ್ಥಾನಯಮದ್ಯ ಮೃತ್ಯುಂ ಸಹಾನುಬನ್ಧೋ ಗಮಿತಾ ಹ್ಯಸಂಶಯಮ್ ।

ಇತೀರಿತೇ ತೇನ ನಿವಾರಯೇತಿ ಪ್ರೋಕ್ತೋ ಹರಿಃ ಪ್ರಾಹ ನ ಸಂವದೇ ತೈಃ ॥ ೨೨.೧೬॥

 

 ‘ಈ ದುರ್ಯೋಧನನು ಈಗಲೇ ಪಾಂಡವರನ್ನು ಹೊಂದಿ ಅವನ ಎಲ್ಲಾ ಬಂಧುಗಳ ಜೊತೆಗೆ ನಾಶವಾಗುತ್ತಾನೆ. ಇದರಲ್ಲಿ ಸಂಶಯವಿಲ್ಲ’. ಎಂದು ವೇದವ್ಯಾಸರು ಹೇಳುತ್ತಿರಲು, ‘ನೀವೇ ತಡೆಯಬಹುದಲ್ಲ’ ಎನ್ನುತ್ತಾನೆ ಧೃತರಾಷ್ಟ್ರ. ಆಗ ವ್ಯಾಸರು ‘ನಾನು ಅವರೊಂದಿಗೆ ಮಾತನಾಡುವುದಿಲ್ಲ’ ಎನ್ನುತ್ತಾರೆ.

 

ಮೈತ್ರೇಯ ಆಯಾಸ್ಯತಿ ಸೋSಪಿ ವಾಚಂ ಶಿಕ್ಷಾರ್ತ್ಥಮೇತೇಷ್ವಭಿಧಾಸ್ಯತೀಹ ।

ತಾಂ ಚೇದ್ ಕರೋತ್ಯೇಷ ಸುತಸ್ತವಾಸ್ಯ ಭದ್ರಂ ತದಾ ಸ್ಯಾಚ್ಛಪ್ಸ್ಯತಿ ತ್ವನ್ಯಥಾ ಸಃ ॥ ೨೨.೧೭॥

 

‘ಮೈತ್ರೇಯನು ಬರುತ್ತಾನೆ, ಅವನೂ ಕೂಡಾ ತಿದ್ದುವ ಸಲುವಾಗಿ ದುರ್ಯೋಧನಾದಿಗಳಲ್ಲಿ ನೀತಿಯನ್ನು ಉಪದೇಶ ಮಾಡುತ್ತಾನೆ. ಅದನ್ನು ಪಾಲಿಸಿದರೆ ಇವನಿಗೆ ಮಂಗಳ ಉಂಟಾಗುತ್ತದೆ. ಇಲ್ಲದಿದ್ದರೆ ಮೈತ್ರೇಯನು ಶಾಪ ಕೊಡುತ್ತಾನೆ’.  

 

 ಉಕ್ತ್ವೇತಿ ರಾಜಾನಮನನ್ತಶಕ್ತಿರ್ವ್ಯಾಸೋ ಯಯೌ ತತ್ರಗತೇಷು ತೇಷು ।

ಸುಯೋಧನಾದ್ಯೇಷು ಹತೇಷು ಪಾರ್ತ್ಥೈರ್ಭೂಭಾರಹಾನಿರ್ನ್ನ ಭವೇದಿತಿ ಪ್ರಭುಃ ॥ ೨೨.೧೮॥

 

ಈರೀತಿಯಾಗಿ ಧೃತರಾಷ್ಟ್ರನಿಗೆ ಹೇಳಿದ, ಎಣೆಯಿರದ ಕಸುವಿನ ವೇದವ್ಯಾಸರು ಅಲ್ಲಿಂದ ತೆರಳಿದರು. ದುರ್ಯೋಧನಾದಿಗಳು ಕಾಡಿಗೆ ಹೋದರೆ ಬೇಗ ಸಾಯುತ್ತಾರೆ. ಆಗ ಭೂಭಾರ ನಾಶವಾಗುತ್ತಿರಲಿಲ್ಲ’ ಈ ಎಲ್ಲಾ ಕಾರಣದಿಂದ ವೇದವ್ಯಾಸರು ಸ್ವಯಂ ದುರ್ಯೋಧನನನ್ನು ಮಾತನಾಡಿಸಲಿಲ್ಲ.

Wednesday, March 23, 2022

Mahabharata Tatparya Nirnaya Kannada 22: 06-11

 

ಬಭಾರ ತೇನೈವ ಯುಧಿಷ್ಠಿರಸ್ತಾನ್ ಪ್ರತ್ಯೇಕಶಸ್ತ್ರಿಂಶತದಾಸಿದಾಸಕಾನ್ ।

ಸುವರ್ಣ್ಣಪಾತ್ರೇಷು ಹಿ ಭುಞ್ಜತೇ ಯೇ ಗೃಹೇ ತದೀಯೇ ಬಹುಕೋಟಿದಾಸಿಕೇ   ॥ ೨೨.೦೬॥

 

ಯುಧಿಷ್ಠಿರನು ಯಾವ ಋಷಿ-ಮುನಿಗಳು ಬಹಳಕೋಟಿ ದಾಸ-ದಾಸಿಯರನ್ನು ಹೊಂದಿದ್ದ ಧರ್ಮರಾಜನ ಮನೆಯಲ್ಲಿ(ಇಂದ್ರಪ್ರಸ್ಥದಲ್ಲಿ), ಬಂಗಾರದ ಪಾತ್ರೆಯಲ್ಲಿ ಉಣ್ಣುತ್ತಿದ್ದರೋ, ಅಂತಹ ಪ್ರತಿಯೊಬ್ಬರೂ ೩೦ ಮಂದಿ ದಾಸರೂ, ೩೦ ಮಂದಿ ದಾಸಿಯರೂ ಇರುವ ಆ ಯತಿಯಾದಿಗಳನ್ನು  ಈ ಅಕ್ಷಯ ಪಾತ್ರೆಯಿಂದಲೇ  ಪೋಷಿಸಿದನು.

 

ಸತ್ಸಙ್ಗಮಾಕಾಙ್ಕ್ಷಿಣ ಏವ ತೇSವಸನ್  ಪಾರ್ತ್ಥೈಃ ಸಹಾನ್ಯೇ ಚ ಮುನೀನ್ದ್ರವೃನ್ದಾಃ ।

ಶ್ರುಣ್ವನ್ತ ಏಭ್ಯಃ ಪರಮಾರ್ತ್ಥಸಾರಾಃ ಕಥಾ ವದನ್ತಶ್ಚ ಪುರಾತನಾಸ್ತಥಾ ॥ ೨೨.೦೭॥

 

ಆ ಎಲ್ಲಾ ಯತಿಗಳು ಸಜ್ಜನರ ಸಂಗವಾಗಬೇಕು ಎನ್ನುವ ಒಂದೇ ಒಂದು ಉದ್ದೇಶದಿಂದ ಪಾಂಡವರ ಜೊತೆಗೆ ವಾಸಮಾಡಿದರು. ಈ ಎಲ್ಲರ ಸಮೂಹವು ನಾರಾಯಣನ ಮಹಿಮೆಯನ್ನೇ ಸಾರವಾಗಿ ಉಳ್ಳ ಪುರಾತನ ಕಥೆಗಳನ್ನು ಹೇಳುತ್ತಾ, ಕೇಳುತ್ತಾ ವಾಸಮಾಡಿದರು.   

 

ಏವಂ ಗಜಾನಾಂ ಬಹುಕೋಟಿವೃನ್ದಾಂಸ್ತಥಾ ರಥಾನಾಂ ಚ ಹಯಾಂಶ್ಚ ವೃನ್ದಶಃ ।

ವಿಸೃಜ್ಯ ರತ್ನಾನಿ ನರಾಂಶ್ಚ ವೃನ್ದಶೋ ವನೇ ವಿಜಹ್ರುರ್ದ್ದಿವಿ ದೇವವತ್ ಸುಖಮ್             ॥ ೨೨.೦೮॥

 

ಪಾಂಡವರು ಇಂದ್ರಪ್ರಸ್ಥದಲ್ಲಿದ್ದ ಕೋಟಿ-ಕೋಟಿ ಸಂಖ್ಯೆಯ ಆನೆಗಳನ್ನೂ, ರಥಗಳನ್ನೂ, ಕುದುರೆಗಳ ವೃನ್ದವನ್ನೂ ಬಿಟ್ಟು, ರತ್ನ ಮೊದಲಾದವುಗಳನ್ನೂ ಬಿಟ್ಟು, ತಮ್ಮ ಸೇವೆ ಮಾಡುವ ಅಧಿಕಾರಿ ಮೊದಲಾದವರನ್ನೂ ಕೂಡಾ ಬಿಟ್ಟು,  ಯಾವರೀತಿ ದೇವತೆಗಳು ಸ್ವರ್ಗದಲ್ಲಿ ವಿಹಾರಮಾಡುತ್ತಾರೋ ಆರೀತಿ ಕಾಡಿನಲ್ಲಿ ಸುಖವಾಗಿ ವಿಹಾರ ಮಾಡಿದರು.

 

ಗವಾಂ ಚ ಲಕ್ಷಂ ಪ್ರದದಾತಿ ನಿತ್ಯಶಃ ಸುವರ್ಣ್ಣಭಾರಾಂಶ್ಚ ಶತಂ ಯುಧಿಷ್ಠಿರಃ ।

ಸಭ್ರಾತೃಕೋSಸೌ ವನಮಾಪ್ಯ ಶಕ್ರವನ್ಮುಮೋದ ವಿಪ್ರೈಃ ಸಹಿತೋ ಯಥಾಸುಖಮ್ ॥೨೨.೦೯ ॥

 

ಲಕ್ಷ ಹಸುಗಳನ್ನೂ, ಬಂಗಾರದ ಗಟ್ಟಿಗಳನ್ನೂ ನಿತ್ಯವೂ ದಾನ ಮಾಡುತ್ತಿದ್ದ ಯುಧಿಷ್ಠಿರ, ಈಗ ಕಾಡಿಗೆ ಬಂದು, ಬ್ರಾಹ್ಮಣರಿಂದ ಕೂಡಿಕೊಂಡು, ಸುಖವಾಗಿಯೇ ತನ್ನ ತಮ್ಮಂದಿರಿಂದ ಕೂಡಿ ಇಂದ್ರನಂತೆ ಸುಖಿಸಿದ.   

 

ಪಾರ್ತ್ಥೇಷು ಯಾತೇಷು ಕಿಮತ್ರ ಕಾರ್ಯ್ಯಮಿತಿ ಸ್ಮ ಪೃಷ್ಟೋ ವಿದುರೋSಗ್ರಜೇನ ।

ಆಹೂಯ ರಾಜ್ಯಂ ಪ್ರತಿಪಾದಯೇತಿ ಪ್ರಾಹೈನಮಾಹಾಥ ರುಷಾSSಮ್ಬಿಕೇಯಃ ॥೨೨.೧೦॥

 

ಪಾಂಡವರು ಕಾಡಿಗೆ ತೆರಳಲು, ‘ಈ ವಿಚಾರದಲ್ಲಿ ಏನು ಮಾಡಬೇಕು’ ಎಂದು ಅಣ್ಣನಾದ ಧೃತರಾಷ್ಟ್ರನಿಂದ ಕೇಳಲ್ಪಟ್ಟ ವಿದುರನು ‘ಪಾಂಡವರನ್ನು ಕರೆದು ರಾಜ್ಯವನ್ನು ಹಿಂತಿರುಗಿಸು ಎಂದ. ಆಗ ಅಂಬಿಕೆಯ ಮಗನಾದ ಧೃತರಾಷ್ಟ್ರನು ಸಿಟ್ಟಿನಿಂದ ಹೇಳಿದ:

 

ಜ್ಞಾತಂ ಪ್ರತೀಪೋSಸಿ ಮಮಾSತ್ಮಜಾನಾಂ ನ ಮೇ ತ್ವಯಾ ಕಾರ್ಯ್ಯಮಿಹಾಸ್ತಿ ಕಿಞ್ಚಿತ್ ।

ಯಥೇಷ್ಟತಸ್ತಿಷ್ಠ ವಾ ಗಚ್ಛ ವೇತಿ ಪ್ರೋಕ್ತೋ ಯಯೌ ವಿದುರಃ ಪಾಣ್ಡುಪುತ್ರಾನ್ ॥೨೨.೧೧ ॥

 

‘ಸ್ಪಷ್ಟವಾಗಿ ನೀನು ನನ್ನ ಮಕ್ಕಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಿನ್ನಿಂದ ನನಗೆ ಏನೂ ಆಗಬೇಕಾದ್ದಿಲ್ಲ. ಬಯಸಿದರೆ ಇಲ್ಲಿ ಇರಬಹುದು. ಇಲ್ಲವೆಂದರೆ ಇಲ್ಲಿಂದ ತೊಲಗಬಹುದು’ ಎಂದು. ಈರೀತಿ ಧೃತರಾಷ್ಟ್ರನಿಂದ ಗಟ್ಟಿಯಾಗಿ ಹೇಳಲ್ಪಟ್ಟ ವಿದುರನು ಪಾಂಡವರ ಬಳಿಗೆ ತೆರಳಿದ.