ತಸ್ಮಿನ್ ಗತೇ ಭ್ರಾತೃವಿಯೋಗಕರ್ಶಿತಃ
ಪಪಾತ ಭೂಮೌ ಸಹಸೈವ ರಾಜಾ ।
ಸಙ್ಜ್ಞಾಮವಾಪ್ಯಾSದಿಶದಾಶು
ಸಞ್ಜಯಂ ಜೀವಾಮಿ ಚೇದಾಶು ಮಮಾSನಯಾನುಜಮ್ ॥೨೨.೧೨॥
ವಿದುರನು ಹೊರಡಲು, ತಮ್ಮನ ಬೇರ್ಪಡೆಯಿಂದ ಸಂಕಟಗೊಂಡ ಧೃತರಾಷ್ಟ್ರನು ನೆಲಕ್ಕೆ ಕುಸಿದ.
ಮಧ್ಯದಲ್ಲಿ ಮೂರ್ಛೆ ತಿಳಿದೆದ್ದಾಗ- ಸಂಜಯನನ್ನು ಕುರಿತು ಹೇಳಿದ: ‘ನಾನು ಬದುಕಬೇಕು ಎಂದಿದ್ದರೆ
ಕೂಡಲೇ ನನ್ನ ತಮ್ಮನಾದ ವಿದುರನನ್ನು ಕರೆದು ತಾ’ ಎಂದು.
ಇತೀರಿತಃ ಸಞ್ಜಯಃ ಪಾಣ್ಡವೇಯಾನ್ ಪ್ರಾಪ್ಯಾSನಯದ್
ವಿದುರಂ ಶೀಘ್ರಮೇವ ।
ಸೋSಪ್ಯಾಗತಃ
ಕ್ಷಿಪ್ರಮಪಾಸ್ತದೋಷೋ ಜ್ಯೇಷ್ಠಂ ವವನ್ದೇSಥ ಸ ಚೈನಮಾಶ್ಲಿಷತ್ ।
ಅಙ್ಕಂ ಸಮಾರೋಪ್ಯ ಸ ಮೂರ್ಧ್ನಿ
ಚೈನಮಾಘ್ರಾಯ ಲೇಭೇ ಪರಮಾಂ ಮುದಂ ತದಾ ॥
೨೨.೧೩॥
ಈರೀತಿಯಾಗಿ ಹೇಳಲ್ಪಟ್ಟ ಸಂಜಯನು ಪಾಂಡವರಿರುವಲ್ಲಿಗೆ ಹೋಗಿ, ಶೀಘ್ರದಲ್ಲಿಯೇ ವಿದುರನನ್ನು
ಕರೆತಂದ. ಅವನಾದರೋ, ಬೇಗದಲ್ಲಿಯೇ ಅಣ್ಣನಿಂದ ಆದ ಅಪಕಾರ-ಅವಮಾನಗಳನ್ನು ಮರೆತು, ಅಣ್ಣನನ್ನು
ನಮಿಸಿದ. ಧೃತರಾಷ್ಟ್ರ ವಿದುರನನ್ನು ಗಟ್ಟಿಯಾಗಿ ತಬ್ಬಿಕೊಂಡ. ತೊಡೆಯಮೇಲೆ ಏರಿಸಿಕೊಂಡು ವಿದುರನ
ನೆತ್ತಿಯನ್ನು ಮೂಸಿ ಆನಂದವನ್ನು ಹೊಂದಿದ.
ಕ್ಷತ್ತಾರಮಾಯಾನ್ತಮುದೀಕ್ಷ್ಯ
ಸರ್ವೇ ಸಸೌಬಲಾ ಧಾರ್ತ್ತರಾಷ್ಟ್ರಾ ಅಮರ್ಷಾತ್ ।
ಸಮ್ಮನ್ತ್ರ್ಯಹನ್ತುಂ
ಪಾಣ್ಡವಾನಾಮುತೈಕಂ ಛನ್ನೋಪಧೇನೈವ ಸಸೂತಜಾ ಯಯುಃ ॥
೨೨.೧೪॥
ಮರಳಿ ಬಂದಿರುವ ವಿದುರನನ್ನು ಕಂಡು ಶಕುನಿಯಿಂದ ಕೂಡಿದ ದುರ್ಯೋಧನಾದಿಗಳೆಲ್ಲರೂ ಹೊಟ್ಟೆಕಿಚ್ಚಿನಿಂದ, ಸಹಿಸಲಾಗದೇ, ತಾವೆಲ್ಲರೂ ಕೂಡಾ ಮಂತ್ರಾಲೋಚನೆ ಮಾಡುತ್ತಾ,
ಪಾಂಡವರಲ್ಲಿ ಕನಿಷ್ಠಪಕ್ಷ ಒಬ್ಬನನ್ನು ಮೋಸದಿಂದ ಕೊಲ್ಲಲು ಕರ್ಣನಿಂದೊಡಗೂಡಿ ತೆರಳಿದರು.
ವಿಜ್ಞಾಯ ತೇಷಾಂ ಗಮನಂ
ಸಮಸ್ತಲೋಕಾನ್ತರಾತ್ಮಾ ಪರಮೇಶ್ವರೇಶ್ವರಃ ।
ವ್ಯಾಸೋSಭಿಗಮ್ಯಾವದದಾಮ್ಬಿಕೇಯಂ
ನಿವಾರಯಾSಶ್ವೇವ ಸುತಂ ತವೇತಿ ॥ ೨೨.೧೫॥
ಈ ದುರ್ಯೋಧನಾದಿಗಳ ತೆರಳುವಿಕೆಯನ್ನು ತಿಳಿದು, ಎಲ್ಲಾ ಜನರ ಅಂತರ್ಯಾಮಿಯಾಗಿರುವ, ಬ್ರಹ್ಮರುದ್ರಾದಿಗಳಿಗೂ ಒಡೆಯನಾಗಿರುವ ವೇದವ್ಯಾಸರು ಆಗಮಿಸಿ,
ಧೃತರಾಷ್ಟ್ರನ ಕುರಿತು ‘ನಿನ್ನ ಮಗನನ್ನು ಕೂಡಲೇ ತಡೆಹಿಡಿ’ ಎಂದು ಹೇಳಿದರು.
ಅವಾಪ್ಯ ಪಾರ್ತ್ಥಾನಯಮದ್ಯ
ಮೃತ್ಯುಂ ಸಹಾನುಬನ್ಧೋ ಗಮಿತಾ ಹ್ಯಸಂಶಯಮ್ ।
ಇತೀರಿತೇ ತೇನ
ನಿವಾರಯೇತಿ ಪ್ರೋಕ್ತೋ ಹರಿಃ ಪ್ರಾಹ ನ ಸಂವದೇ ತೈಃ ॥ ೨೨.೧೬॥
‘ಈ ದುರ್ಯೋಧನನು ಈಗಲೇ ಪಾಂಡವರನ್ನು ಹೊಂದಿ ಅವನ
ಎಲ್ಲಾ ಬಂಧುಗಳ ಜೊತೆಗೆ ನಾಶವಾಗುತ್ತಾನೆ. ಇದರಲ್ಲಿ ಸಂಶಯವಿಲ್ಲ’. ಎಂದು ವೇದವ್ಯಾಸರು ಹೇಳುತ್ತಿರಲು,
‘ನೀವೇ ತಡೆಯಬಹುದಲ್ಲ’ ಎನ್ನುತ್ತಾನೆ ಧೃತರಾಷ್ಟ್ರ. ಆಗ ವ್ಯಾಸರು ‘ನಾನು ಅವರೊಂದಿಗೆ ಮಾತನಾಡುವುದಿಲ್ಲ’
ಎನ್ನುತ್ತಾರೆ.
ಮೈತ್ರೇಯ ಆಯಾಸ್ಯತಿ ಸೋSಪಿ
ವಾಚಂ ಶಿಕ್ಷಾರ್ತ್ಥಮೇತೇಷ್ವಭಿಧಾಸ್ಯತೀಹ ।
ತಾಂ ಚೇದ್ ಕರೋತ್ಯೇಷ ಸುತಸ್ತವಾಸ್ಯ
ಭದ್ರಂ ತದಾ ಸ್ಯಾಚ್ಛಪ್ಸ್ಯತಿ ತ್ವನ್ಯಥಾ ಸಃ ॥ ೨೨.೧೭॥
‘ಮೈತ್ರೇಯನು ಬರುತ್ತಾನೆ, ಅವನೂ ಕೂಡಾ ತಿದ್ದುವ ಸಲುವಾಗಿ ದುರ್ಯೋಧನಾದಿಗಳಲ್ಲಿ ನೀತಿಯನ್ನು
ಉಪದೇಶ ಮಾಡುತ್ತಾನೆ. ಅದನ್ನು ಪಾಲಿಸಿದರೆ ಇವನಿಗೆ ಮಂಗಳ ಉಂಟಾಗುತ್ತದೆ. ಇಲ್ಲದಿದ್ದರೆ ಮೈತ್ರೇಯನು
ಶಾಪ ಕೊಡುತ್ತಾನೆ’.
ಉಕ್ತ್ವೇತಿ ರಾಜಾನಮನನ್ತಶಕ್ತಿರ್ವ್ಯಾಸೋ ಯಯೌ ತತ್ರಗತೇಷು
ತೇಷು ।
ಸುಯೋಧನಾದ್ಯೇಷು ಹತೇಷು
ಪಾರ್ತ್ಥೈರ್ಭೂಭಾರಹಾನಿರ್ನ್ನ ಭವೇದಿತಿ ಪ್ರಭುಃ ॥ ೨೨.೧೮॥
ಈರೀತಿಯಾಗಿ ಧೃತರಾಷ್ಟ್ರನಿಗೆ ಹೇಳಿದ, ಎಣೆಯಿರದ ಕಸುವಿನ ವೇದವ್ಯಾಸರು ಅಲ್ಲಿಂದ ತೆರಳಿದರು.
ದುರ್ಯೋಧನಾದಿಗಳು ಕಾಡಿಗೆ ಹೋದರೆ ಬೇಗ ಸಾಯುತ್ತಾರೆ. ಆಗ ಭೂಭಾರ ನಾಶವಾಗುತ್ತಿರಲಿಲ್ಲ’ ಈ ಎಲ್ಲಾ
ಕಾರಣದಿಂದ ವೇದವ್ಯಾಸರು ಸ್ವಯಂ ದುರ್ಯೋಧನನನ್ನು ಮಾತನಾಡಿಸಲಿಲ್ಲ.
No comments:
Post a Comment