ಬಭಾರ ತೇನೈವ
ಯುಧಿಷ್ಠಿರಸ್ತಾನ್ ಪ್ರತ್ಯೇಕಶಸ್ತ್ರಿಂಶತದಾಸಿದಾಸಕಾನ್ ।
ಸುವರ್ಣ್ಣಪಾತ್ರೇಷು ಹಿ
ಭುಞ್ಜತೇ ಯೇ ಗೃಹೇ ತದೀಯೇ ಬಹುಕೋಟಿದಾಸಿಕೇ ॥
೨೨.೦೬॥
ಯುಧಿಷ್ಠಿರನು ಯಾವ ಋಷಿ-ಮುನಿಗಳು ಬಹಳಕೋಟಿ ದಾಸ-ದಾಸಿಯರನ್ನು ಹೊಂದಿದ್ದ ಧರ್ಮರಾಜನ ಮನೆಯಲ್ಲಿ(ಇಂದ್ರಪ್ರಸ್ಥದಲ್ಲಿ),
ಬಂಗಾರದ ಪಾತ್ರೆಯಲ್ಲಿ ಉಣ್ಣುತ್ತಿದ್ದರೋ, ಅಂತಹ ಪ್ರತಿಯೊಬ್ಬರೂ ೩೦ ಮಂದಿ ದಾಸರೂ, ೩೦
ಮಂದಿ ದಾಸಿಯರೂ ಇರುವ ಆ ಯತಿಯಾದಿಗಳನ್ನು ಈ
ಅಕ್ಷಯ ಪಾತ್ರೆಯಿಂದಲೇ ಪೋಷಿಸಿದನು.
ಸತ್ಸಙ್ಗಮಾಕಾಙ್ಕ್ಷಿಣ
ಏವ ತೇSವಸನ್ ಪಾರ್ತ್ಥೈಃ
ಸಹಾನ್ಯೇ ಚ ಮುನೀನ್ದ್ರವೃನ್ದಾಃ ।
ಶ್ರುಣ್ವನ್ತ ಏಭ್ಯಃ
ಪರಮಾರ್ತ್ಥಸಾರಾಃ ಕಥಾ ವದನ್ತಶ್ಚ ಪುರಾತನಾಸ್ತಥಾ ॥
೨೨.೦೭॥
ಆ ಎಲ್ಲಾ ಯತಿಗಳು ಸಜ್ಜನರ ಸಂಗವಾಗಬೇಕು ಎನ್ನುವ ಒಂದೇ ಒಂದು ಉದ್ದೇಶದಿಂದ ಪಾಂಡವರ ಜೊತೆಗೆ ವಾಸಮಾಡಿದರು.
ಈ ಎಲ್ಲರ ಸಮೂಹವು ನಾರಾಯಣನ ಮಹಿಮೆಯನ್ನೇ ಸಾರವಾಗಿ ಉಳ್ಳ ಪುರಾತನ ಕಥೆಗಳನ್ನು ಹೇಳುತ್ತಾ,
ಕೇಳುತ್ತಾ ವಾಸಮಾಡಿದರು.
ಏವಂ ಗಜಾನಾಂ
ಬಹುಕೋಟಿವೃನ್ದಾಂಸ್ತಥಾ ರಥಾನಾಂ ಚ ಹಯಾಂಶ್ಚ ವೃನ್ದಶಃ ।
ವಿಸೃಜ್ಯ ರತ್ನಾನಿ
ನರಾಂಶ್ಚ ವೃನ್ದಶೋ ವನೇ ವಿಜಹ್ರುರ್ದ್ದಿವಿ ದೇವವತ್ ಸುಖಮ್ ॥ ೨೨.೦೮॥
ಪಾಂಡವರು ಇಂದ್ರಪ್ರಸ್ಥದಲ್ಲಿದ್ದ ಕೋಟಿ-ಕೋಟಿ ಸಂಖ್ಯೆಯ ಆನೆಗಳನ್ನೂ, ರಥಗಳನ್ನೂ,
ಕುದುರೆಗಳ ವೃನ್ದವನ್ನೂ ಬಿಟ್ಟು, ರತ್ನ ಮೊದಲಾದವುಗಳನ್ನೂ ಬಿಟ್ಟು, ತಮ್ಮ ಸೇವೆ ಮಾಡುವ ಅಧಿಕಾರಿ ಮೊದಲಾದವರನ್ನೂ ಕೂಡಾ ಬಿಟ್ಟು,
ಯಾವರೀತಿ ದೇವತೆಗಳು ಸ್ವರ್ಗದಲ್ಲಿ
ವಿಹಾರಮಾಡುತ್ತಾರೋ ಆರೀತಿ ಕಾಡಿನಲ್ಲಿ ಸುಖವಾಗಿ ವಿಹಾರ ಮಾಡಿದರು.
ಗವಾಂ ಚ ಲಕ್ಷಂ
ಪ್ರದದಾತಿ ನಿತ್ಯಶಃ ಸುವರ್ಣ್ಣಭಾರಾಂಶ್ಚ ಶತಂ ಯುಧಿಷ್ಠಿರಃ ।
ಸಭ್ರಾತೃಕೋSಸೌ ವನಮಾಪ್ಯ ಶಕ್ರವನ್ಮುಮೋದ ವಿಪ್ರೈಃ ಸಹಿತೋ ಯಥಾಸುಖಮ್ ॥೨೨.೦೯ ॥
ಲಕ್ಷ ಹಸುಗಳನ್ನೂ, ಬಂಗಾರದ ಗಟ್ಟಿಗಳನ್ನೂ ನಿತ್ಯವೂ ದಾನ ಮಾಡುತ್ತಿದ್ದ ಯುಧಿಷ್ಠಿರ, ಈಗ ಕಾಡಿಗೆ
ಬಂದು, ಬ್ರಾಹ್ಮಣರಿಂದ ಕೂಡಿಕೊಂಡು, ಸುಖವಾಗಿಯೇ ತನ್ನ ತಮ್ಮಂದಿರಿಂದ ಕೂಡಿ ಇಂದ್ರನಂತೆ
ಸುಖಿಸಿದ.
ಪಾರ್ತ್ಥೇಷು ಯಾತೇಷು
ಕಿಮತ್ರ ಕಾರ್ಯ್ಯಮಿತಿ ಸ್ಮ ಪೃಷ್ಟೋ ವಿದುರೋSಗ್ರಜೇನ ।
ಆಹೂಯ ರಾಜ್ಯಂ
ಪ್ರತಿಪಾದಯೇತಿ ಪ್ರಾಹೈನಮಾಹಾಥ ರುಷಾSSಮ್ಬಿಕೇಯಃ ॥೨೨.೧೦॥
ಪಾಂಡವರು ಕಾಡಿಗೆ ತೆರಳಲು, ‘ಈ ವಿಚಾರದಲ್ಲಿ ಏನು ಮಾಡಬೇಕು’ ಎಂದು ಅಣ್ಣನಾದ ಧೃತರಾಷ್ಟ್ರನಿಂದ
ಕೇಳಲ್ಪಟ್ಟ ವಿದುರನು ‘ಪಾಂಡವರನ್ನು ಕರೆದು ರಾಜ್ಯವನ್ನು ಹಿಂತಿರುಗಿಸು’
ಎಂದ. ಆಗ ಅಂಬಿಕೆಯ ಮಗನಾದ ಧೃತರಾಷ್ಟ್ರನು ಸಿಟ್ಟಿನಿಂದ ಹೇಳಿದ:
ಜ್ಞಾತಂ ಪ್ರತೀಪೋSಸಿ
ಮಮಾSತ್ಮಜಾನಾಂ ನ ಮೇ ತ್ವಯಾ ಕಾರ್ಯ್ಯಮಿಹಾಸ್ತಿ ಕಿಞ್ಚಿತ್ ।
ಯಥೇಷ್ಟತಸ್ತಿಷ್ಠ ವಾ
ಗಚ್ಛ ವೇತಿ ಪ್ರೋಕ್ತೋ ಯಯೌ ವಿದುರಃ ಪಾಣ್ಡುಪುತ್ರಾನ್ ॥೨೨.೧೧ ॥
‘ಸ್ಪಷ್ಟವಾಗಿ ನೀನು ನನ್ನ ಮಕ್ಕಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವೆ. ಇದನ್ನು ಸಹಿಸಲು
ಸಾಧ್ಯವಿಲ್ಲ. ನಿನ್ನಿಂದ ನನಗೆ ಏನೂ ಆಗಬೇಕಾದ್ದಿಲ್ಲ. ಬಯಸಿದರೆ ಇಲ್ಲಿ ಇರಬಹುದು. ಇಲ್ಲವೆಂದರೆ
ಇಲ್ಲಿಂದ ತೊಲಗಬಹುದು’ ಎಂದು. ಈರೀತಿ ಧೃತರಾಷ್ಟ್ರನಿಂದ ಗಟ್ಟಿಯಾಗಿ ಹೇಳಲ್ಪಟ್ಟ ವಿದುರನು
ಪಾಂಡವರ ಬಳಿಗೆ ತೆರಳಿದ.
No comments:
Post a Comment