ಸರ್ವಾಶ್ಚ ಚೇಷ್ಟಾ ಭಗವನ್ನಿಯುಕ್ತಾಃ ಸದಾ ಸಮಸ್ತಸ್ಯ ಚಿತೋSಚಿತಶ್ಚ।
ತಥಾSಪಿ ವಿಷ್ಣುರ್ವಿನಿವಾರಯೇತ್ ಕ್ವಚಿದ್ ವಾಚಾ ವಿಧತ್ತೇ
ಚ ಜನಾನ್ ವಿಡಮ್ಬಯನ್ ॥ ೨೨.೧೯॥
ಇಡೀ ಜಗತ್ತಿನಲ್ಲಿ ಎಲ್ಲಾ ಚೇತನ ಹಾಗೂ ಅಚೇತನಗಳ ಸಮಸ್ತ ಕ್ರಿಯೆಗಳೂ ಕೂಡಾ ಪರಮಾತ್ಮನ
ಆಳ್ವಿಕೆಗೆ ಸಂಬಂಧಿಸಿದೆ. ಆದರೂ ನಾರಾಯಣನು ಆಗಾಗ ಜನರನ್ನು ಅನುಕರಿಸುತ್ತಾ, ಮಾತಿನಿಂದಲೇ ಅಕಾರ್ಯದ
ವಿನಿವೃತ್ತಿ ಹಾಗೂ ಕಾರ್ಯದ ಪ್ರವೃತ್ತಿಯನ್ನು ಮಾಡುವನು. (ಹೀಗೆ ಮಾಡೆಂದು ಹೇಳುವನು).
ಮೈತ್ರೇಯ ಆಗಾದಥ ಭೂಪತಿಶ್ಚ ಪುತ್ರಾನ್
ಸಮಾಹೂಯ ಸಕರ್ಣ್ಣಸೌಬಲಾನ್ ।
ಸಮ್ಪೂಜಯಾಮಾಸ ಮುನಿಂ ಸ ಚಾSಹ
ದಾತುಂ ರಾಜ್ಯಂ ಪಾಣ್ಡವಾನ್ ಸಮ್ಪ್ರಶಂಸನ್ ॥ ೨೨.೨೦॥
ತದನಂತರ ಮೈತ್ರೇಯರು ಅಲ್ಲಿಗೆ ಬಂದರು. ಧೃತರಾಷ್ಟ್ರನಾದರೋ, ಕರ್ಣ-ಶಕುನಿಗಳಿಂದ ಒಡಗೂಡಿರುವ
ಮಕ್ಕಳನ್ನು ಕರೆದು, ಮುನಿಗಳಿಗೆ ಪೂಜೆ ಮಾಡಿಸಿದನು. ಆ ಮೈತ್ರೇಯರು ಪಾಂಡವರ ಗುಣಗಳ ಬಗ್ಗೆ
ಹೊಗಳುತ್ತಾ, ರಾಜ್ಯವನ್ನು ಹಿಂತಿರುಗಿಸುವಂತೆ ಹೇಳಿದರು.
ವಿಶೇಷತೋ ಭೀಮಬಲಂ ಶಶಂಸ
ಕಿರ್ಮ್ಮೀರನಾಶಾದಿ ವದನ್ ಮುನೀನ್ದ್ರಃ ।
ಶ್ರುತ್ವಾSಸಹಂಸ್ತದ್
ಧೃತರಾಷ್ಟ್ರಪುತ್ರ ಆಸ್ಫಾಲಯಾಮಾಸ ನಿಜೋರುಮುಗ್ರಃ ॥ ೨೨.೨೧॥
ಮೈತ್ರೇಯರು ವಿಶೇಷವಾಗಿ ಕಿರ್ಮೀರನ ನಾಶ ಹೇಗಾಯಿತು ಎನ್ನುವುದನ್ನು ಹೇಳುತ್ತಾ, ಭೀಮಸೇನನ
ಬಲವನ್ನು ಹೊಗಳಿದರು. ಅದನ್ನು ಕೇಳಿ ಸಹಿಸಲಾಗದೇ, ದುರ್ಯೋಧನನು ತನ್ನ ತೊಡೆಯನ್ನು
ಅವಹೇಳನಕಾರಿಯಾಗಿ ತಟ್ಟಿದನು.
ಶಶಾಪ ಚೈನಂ ಮುನಿರುಗ್ರತೇಜಾಸ್ತವೋರುಭೇದಾಯ
ಭವೇತ್ ಸುಯುದ್ಧಮ್ ।
ಇತ್ಯೂಚಿವಾನ್
ಧೃತರಾಷ್ಟ್ರಾನತೋsಪಿ ಯಯೌ ನ ಚೇದ್ ರಾಜ್ಯದಸ್ತ್ವಂ ತಥೇತಿ ॥ ೨೨.೨೨॥
ಆಗ ಉಗ್ರವಾದ ತಪಸ್ಸುಳ್ಳ ಮೈತ್ರೇಯರು ‘ನಿನ್ನ ತೊಡೆಯನ್ನು ಮುರಿಯಲಿಕ್ಕಾಗಿ ದೊಡ್ಡ ಯುದ್ಧ
ನಡೆಯುತ್ತದೆ’ ಎಂದು ದುರ್ಯೋಧನನನ್ನು ಶಪಿಸಿದರು. ಧೃತರಾಷ್ಟ್ರ ನಮಸ್ಕರಿಸಿದಾಗಿ(ಅವಿವೇಕಿಯಾದ ನನ್ನ ಮಗನ ಪರವಾಗಿ
ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಎಂದು ನಮಸ್ಕರಿಸಿದಾಗ) ‘ನೀನು ರಾಜ್ಯವನ್ನು ಕೊಟ್ಟರೆ
ಹಾಗೆ ಆಗುವುದಿಲ್ಲ’ ಎಂದು ಹೇಳಿ ಹೊರಟುಹೋದರು.
[ಮೈತ್ರೇಯರಿಗೆ ಕಿರ್ಮೀರ ವಧೆಯ ಕುರಿತು ಪೂರ್ತಿಯಾಗಿ ಹೇಳಲು ದುರ್ಯೋಧನ ಬಿಡಲಿಲ್ಲ. ಆನಂತರ ಮೈತ್ರೇಯರು
ಅಲ್ಲಿಂದ ಹೊರಡುವಾಗ ‘ವಿದುರನಲ್ಲಿ ಕಿರ್ಮೀರ ವಧೆಯ ಕುರಿತು ಕೇಳು’
ಎಂದು ಹೇಳಿ ಹೊರಟುಹೋದರು. ಮುಂದೆ ಧೃತರಾಷ್ಟ್ರನಿಂದ ಕೇಳಲ್ಪಟ್ಟ ವಿದುರ, ಯುದ್ಧನಡೆದ ಸ್ಥಳದಲ್ಲಿ
ಯುದ್ಧದ ರಭಸಕ್ಕೆ ಮರಗಳು, ಪರ್ವತಗಳು ಪುಡಿಯಾಗಿರುವುದನ್ನು, ವಿವರಿಸಿ, ಯಾವ ರೀತಿ ಕಿರ್ಮೀರ
ನಾಶವಾದ ಎನ್ನುವುದನ್ನು ವಿವರಿಸುತ್ತಾನೆ.]
ಶ್ರುತ್ವಾ ತು ಕಿರ್ಮ್ಮೀರವಧಂ
ಸ್ವಪಿತ್ರಾ ಪೃಷ್ಟಕ್ಷತ್ತ್ರೋಕ್ತಂ ಸೋSತ್ರಸದ್ ಧಾರ್ತ್ತರಾಷ್ಟ್ರಃ ।
ವನೇ ವಸನ್ತೋSಥ
ಪೃಥಾಸುತಾಸ್ತೇ ವಾರ್ತ್ತಾಂ ಸ್ವಕೀಯಾಂ ಪ್ರಾಪಯಾಮಾಸುರಾಶು ॥೨೨.೨೩॥
ತನ್ನ ತಂದೆಯಿಂದ ಕೇಳಲ್ಪಟ್ಟ, ವಿದುರನಿಂದ ಹೇಳಲ್ಪಟ್ಟ ಕಿರ್ಮೀರನ ವಧೆಯ ಕುರಿತು ಕೇಳಿ
ದುರ್ಯೋಧನನು ತರತರನೆ ನಡುಗಿದ. ಇತ್ತ ಪಾಂಡವರು ತಮ್ಮ ಈ ವಾರ್ತೆಯನ್ನು(ನಡೆದ ಘಟನೆಯನ್ನು)
ಕೃಷ್ಣನಿಗೆ ತಿಳಿಸಿದರು.
No comments:
Post a Comment