ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 7, 2022

Mahabharata Tatparya Nirnaya Kannada 22-233-238

 

ತದೈವ ಮೈನ್ದೋ ವಿವಿದಶ್ಚ ಭೌಮೇ ಹತೇ ಸಖಾಯೌ ದಾನವಾವೇಶಯುಕ್ತೌ ।

ಆನರ್ತ್ತರಾಷ್ಟ್ರಂ ವಾಸುದೇವಪ್ರತೀಪೌ ವ್ಯನಾಶಯೇತಾಂ ವಾಸುದೇವೋsಥ ಚೋಚೇ             ॥೨೨.೨೩೩॥

 

ಇದೇ ಸಮಯದಲ್ಲಿ ಮೈನ್ದ ಮತ್ತು ವಿವಿದ ಎನ್ನುವ ಕಪಿಗಳು ದಾನವರ ಆವೇಶದಿಂದ ಕೂಡಿದವರಾಗಿ,  ತಮ್ಮ ಮಿತ್ರ ನರಕಾಸುರನನ್ನು ಶ್ರೀಕೃಷ್ಣ ಸಂಹಾರ ಮಾಡಿರುವುದರಿಂದ, ಕೃಷ್ಣನ ಮೇಲೆ ಸೇಡಿರಿಸಿಕೊಂಡು, ಅನರ್ತದೇಶವಾದ ದ್ವಾರಕೆಯನ್ನು ನಾಶಮಾಡಿದರು.

[ಮೈನ್ದ ಮತ್ತು ವಿವಿದ ಇವರು  ರಾಮಾಯಣ ಕಾಲದಲ್ಲಿ ರಾಮನಿಗೆ ಸೇವೆ ಸಲ್ಲಿಸಿದ ಆಶ್ವೀದೇವತೆಗಳ ಅವತಾರ ರೂಪ. ಇವರು ಅನೇಕ ಜನ ರಾಕ್ಷಸರನ್ನು ಕೊಂದವರು.    ಸಮುದ್ರಮಥನದ ಕಾಲದಲ್ಲಿ ದೈತ್ಯಾವೇಷದಿಂದಾಗಿ ದೇವರ ಅನುಮತಿ ಇಲ್ಲದೇ ಅಮೃತವನ್ನು ಪಾನ ಮಾಡಿದರು. ಅದರಿಂದಾಗಿ ಅವರಿಗೆ ಧೀರ್ಘಾಯುಷ್ಯ ಬಂದಿತ್ತು. ದೈತ್ಯಾವೇಶ ಇದ್ದುದರಿಂದ ರಾಮಚಂದ್ರ ಪರಂದಾಮಕ್ಕೆ ತೆರಳುವಾಗ ಅವರು ಅವನ ಜೊತೆಗೆ ಹೋಗಲಾಗಲಿಲ್ಲ. ಕಾಲಾನಂತರ ಅವರು ನರಕಾಸುರನ ಗೆಳೆಯರಾದರು.  ಕೃಷ್ಣ ನರಕಾಸುರನನ್ನು ಕೊಂದದ್ದರಿಂದ ಕೃಷ್ಣನ ಮೇಲೆ ದ್ವೇಷ ಬೆಳೆಸಿದರು. ಸಮಯ ಕಾದುಕೊಂಡಿದ್ದ ಅವರಿಗೆ ಸಾಯುವ ಕಾಲ ಬಂದುದರಿಂದ ಬುದ್ಧಿ ಪ್ರಚೋದನೆಯಾಯಿತು. ಅವರು ಯಾದವ ಪಟ್ಟಣವನ್ನು ನಾಶಮಾಡಲು ಪ್ರಾರಂಭಿಸಿದರು.]

 

ರಾಮಾಯ ಸೋSದಾದ್ ವರಮಬ್ಜನಾಭೋ ವದ್ಧ್ಯಾವೇತೌ ಭವತಾಂ ತೇsಪ್ಯವದ್ಧ್ಯೌ ।

ವರಾದ್ ವಿರಿಞ್ಚಸ್ಯ ತಥಾSಮೃತಾಶನಾದುಭೌ ಚ ಮೈನ್ದೋ ವಿವಿದೋ ಬ್ರಜೇತಿ             ॥೨೨.೨೩೪॥

 

ಯಾವಾಗ  ಈರೀತಿ ಮೈನ್ದ ಮತ್ತು ವಿವಿದ ದ್ವಾರಕೆಯನ್ನು ನಾಶಮಾಡಲಾರಂಭಿಸಿದರೋ, ಆಗ ಬಲರಾಮನನ್ನು ಕುರಿತು ಶ್ರೀಕೃಷ್ಣ ‘ಇವರಿಬ್ಬರೂ ಕೂಡಾ ನಿನ್ನಿಂದ ಸಾಯಬೇಕು’ ಎಂದು ಹೇಳಿದ. ವಸ್ತುತಃ ಅಮೃತವನ್ನು ಪಾನ ಮಾಡಿದ್ದುದರಿಂದಲೂ, ಬ್ರಹ್ಮ ದೇವರ ವರದಿಂದಲೂ ಅವರು ಅವಧ್ಯರಾಗಿದ್ದರು. ಆದರೆ ನಾರಾಯಣನು ಹಿಂದೆ  ‘ಬ್ರಹ್ಮನ ವರದಿಂದ ಅವಧ್ಯರಾದ ಮೈನ್ದ ವಿವಿದರು ಬಲರಾಮನಿಂದ ಸಾಯುತ್ತಾರೆ’ ಎನ್ನುವ ವರವನ್ನು ನೀಡಿದ್ದ.

 

ಗತ್ವಾ ಸ ಮೈನ್ದಂ ಪ್ರಥಮಂ ಜಘಾನ ಕ್ರೋಧಾತ್ ಯುದ್ಧಾಯಾSಗತಂ ರೈವತಾಗ್ರೇ ।

ದಿನೇ ಪರಸ್ಮಿನ್ ವಿವಿದಂ ಜಘಾನ ಶಿಲಾ ವರ್ಷನ್ತಂ ಮುಸಲೇನಾಗ್ರ್ಯಕರ್ಮ್ಮಾ                 ॥೨೨.೨೩೫॥

 

ಯಾದವರ ಕ್ರೀಡಾವಿಹಾರ ಸ್ಥಳವಾದ  ರೈವತ ಪರ್ವತದ ಮೇಲ್ಗಡೆ ಮೊದಲದಿನ ಕ್ರೋಧದಿಂದ, ಯುದ್ಧಕ್ಕೆಂದು ಬಂದ ಮೈನ್ದನನ್ನು ಬಲರಾಮ ಕೊಂದ. ಮರುದಿನ ಕಲ್ಲುಗಳ ಮಳೆಗರೆಯುತ್ತಿರುವ  ವಿವಿದನನ್ನು  ತನ್ನ ಒನಕೆಯಿಂದ ಕೊಂದ.

 

ತಯೋರಾವಿಷ್ಟೌ ತಾವಸುರೌ ತಮೋSನ್ಧಂ ಪ್ರಾಪ್ತೌ ಚ ತಾವಶಿವನೌ ಸ್ವಂ ಚ ಲೋಕಮ್ ।

ದುರ್ಯ್ಯೋಧನಸ್ಯಾSಸ ಪುತ್ರೀ ರತಿರ್ಯ್ಯಾ ಪೂರ್ವಂ ನಾಮ್ನಾ ಲಕ್ಷಣಾ ಕಾನ್ತರೂಪಾ             ॥೨೨.೨೩೬॥

 

ಮೈನ್ದ-ವಿವಿದರಲ್ಲಿ  ಆವೇಶವನ್ನು ಹೊಂದಿ, ಕೆಟ್ಟ ಕೆಲಸವನ್ನು ಮಾಡಿಸುತ್ತಿದ್ದ ಅಸುರರು ಅನ್ದಂತಮಸ್ಸನ್ನು ಹೊಂದಿದರೆ,  ಆಶ್ವೀದೇವತೆಗಳು ತಮ್ಮ ಲೋಕಕ್ಕೆ ತೆರಳಿದರು.

ದುರ್ಯೋಧನನಿಗೆ ಒಬ್ಬಳು ಮಗಳಿದ್ದಳು. ಅವಳು ಹಿಂದೆ ರತಿಯೇ ಆಗಿದ್ದಳು. ತುಂಬಾ ಸುಂದರವಾಗಿದ್ದ ಅವಳ ಹೆಸರು ‘ಲಕ್ಷಣಾ’ ಎಂದಿತ್ತು.

 

ಸ್ವಯಮ್ಬರಸ್ಥಾಂ ತಾಂ ಬಲಾದೇವ ಸಾಮ್ಬೋ ಜಗ್ರಾಹ ಸಾ ಚೈನಮಾಸಾನುರಕ್ತಾ ।

ಬಲಾದ್ ಗೃಹೀತಾಂ ವೀಕ್ಷ್ಯ ತಾಂ ಕರ್ಣ್ಣಮುಖ್ಯಾ ದುರ್ಯ್ಯೋಧನಾದ್ಯಾ ಯುಯುಧುಃ ಕ್ರೋಧದೀಪ್ತಾಃ ॥೨೨.೨೩೭॥

 

ಸ್ವಯಮ್ಬರದಲ್ಲಿರುವ ಅವಳನ್ನು ಕೃಷ್ಣನ ಮಗನಾಗಿರುವ ಸಾಂಬನು ಬಲಾತ್ಕಾರದಿಂದ ಅಪಹರಿಸಿದ. ಅವಳಾದರೋ ಸಾಂಬನಲ್ಲಿ ಆಸಕ್ತಳಾಗಿದ್ದಳು. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ ಕೂಡಾ, ಉಳಿದವರನ್ನು ಧಿಕ್ಕರಿಸಿ ಬಲಾತ್ಕಾರದಿಂದ ಅಪಹರಿಸುವುದನ್ನು ಕಂಡು ಕರ್ಣ-ದುರ್ಯೋಧನ ಮೊದಲಾದವರು ಸಿಟ್ಟುಗೊಂಡು ಯುದ್ಧಮಾಡಿದರು.

 

ಕೃಚ್ಛ್ರೇಣ ತಂ ವಿರಥೀಕೃತ್ಯ ಚೈಕಂ ಸರ್ವೇ ಸಮೇತಾ ಜಗೃಹುರ್ದ್ಧಾರ್ತ್ತರಾಷ್ಟ್ರಾಃ ।

ಕರ್ಣ್ಣೇನ ಭೂರಿಶ್ರವಸಾ ಚ ಸಾರ್ದ್ಧಂ ಬಾಹ್ವೋರ್ಬಲಾದೇವ ದುರ್ಯ್ಯೋಧನಸ್ಯ             ॥೨೨.೨೩೮॥

 

ಕರ್ಣ ಹಾಗೂ ಭೂರಿಶ್ರವಸ್ಸಿನಿಂದ ಕೂಡಿದ ದುರ್ಯೋಧನಾದಿಗಳು ತಮ್ಮ ತೋಳ್ಬಲದಿಂದ, ಕಷ್ಟದಿಂದ ಸಾಂಬನನ್ನು  ರಥಹೀನನನ್ನಾಗಿ ಮಾಡಿ ಬಂಧಿಸಿದರು.

Tuesday, August 2, 2022

Mahabharata Tatparya Nirnaya Kannada 22-227-232

 

ಕೃಷ್ಣಃ ಕ್ರೀಡನ್ ದ್ವಾರವತ್ಯಾಂ ಸುಪೂರ್ಣ್ಣನಿತ್ಯಾನನ್ದಃ ಕ್ವಚಿದಾಹ ಸ್ಮ ಭೈಷ್ಮೀಮ್ ।

ವಿಡಮ್ಬಯನ್ ಗೃಹಿಣಾಮೇವ ಚೇಷ್ಟಾ ನಿತ್ಯಾವಿರೋಧೋSಪಿ ತಯಾ ವಿದೋಷಯಾ ॥೨೨.೨೨೭॥

 

ಪರಿಪೂರ್ಣವಾದ ನಿತ್ಯಾನಂದವುಳ್ಳ ಶ್ರೀಕೃಷ್ಣಪರಮಾತ್ಮನು  ದ್ವಾರಕೆಯಲ್ಲಿ ತನ್ನ ಲೀಲೆಗಳನ್ನು ತೋರುತ್ತಾ,  ಒಮ್ಮೆ, ಸಾಮಾನ್ಯ ಗೃಹಸ್ಥರ ಚರ್ಯಗಳನ್ನು ಅನುಕರಿಸುವವನಾಗಿ(ಸಾಮಾನ್ಯ ಗೃಹಸ್ಥರು ಹೆಂಡತಿಯೊಡನೆ ಯಾವ ರೀತಿ ಹಾಸ್ಯ ಮೊದಲಾದವುಗಳನ್ನು ಮಾಡುತ್ತಾರೋ, ಆ ರೀತಿಯ ಗೃಹಸ್ಥರ ಕ್ರಿಯೆಗಳನ್ನು ಅನುಕರಿಸುತ್ತಾ), ಪರಸ್ಪರ ನಿತ್ಯ ವಿರೋಧರಹಿತರಾಗಿದ್ದರೂ ಕೂಡಾ,  ರುಗ್ಮಿಣಿ ಜೊತೆಗೆ ಹೀಗೆ ಮಾತನಾಡಲು ಪ್ರಾರಂಭಿಸಿದ:  

 

ತ್ವಯಾ ನ ಕಾರ್ಯ್ಯಂ ಮಮ ಕಿಞ್ಚ ಭದ್ರೇ ಮಯಾSರೀಣಾಂ ಮಾನಭಙ್ಗಾರ್ತ್ಥಮೇವ ।

ಸಮಾಹೃತಾSಸೀತಿ ಸಾ ಚಾವಿಯೋಗಂ ಸದಾ ಕೃಷ್ಣೇನಾSತ್ಮನೋSಪ್ಯೇವ ವೇತ್ರೀ             ॥೨೨.೨೨೮॥

 

ಸ್ತ್ರಿಯಾ ಭೇತವ್ಯಂ ಭರ್ತ್ತುರಿತ್ಯೇವ ಧರ್ಮ್ಮಂ ವಿಜ್ಞಾಪಯನ್ತೀ ದುಃಖಿತೇವಾSಸ ದೇವೀ ।

ತಾಂ ಸಾನ್ತ್ವಯಾಮಾಸ ಗೃಹಸ್ಥಧರ್ಮ್ಮಂ ವಿಜ್ಞಾಪಯನ್ ದೇವದೇವೋSಪ್ಯದುಃಖಾಮ್ ॥೨೨.೨೨೯॥

 

‘ಮಂಗಳಕರಳಾದ ರುಗ್ಮಿಣಿಯೇ, ನಿನ್ನಿಂದ ನನಗೆ ಯಾವ ಕಾರ್ಯ ಪ್ರಯೋಜನವೂ ಇಲ್ಲ. ಆದರೂ ಶತ್ರುಗಳಾಗಿರುವ ಜರಾಸಂಧ ಮೊದಲಾದವರ ಅಹಂಕಾರ ನಾಶಕ್ಕಾಗಿಯೇ ನಿನ್ನನ್ನು ತಂದಿರುವುದು’ ಎಂದು ಕೃಷ್ಣ ಹೇಳಿದಾಗ, ತನಗೆ ನಾರಾಯಣನಿಂದ ವಿಯೋಗ ಇಲ್ಲವೆನ್ನುವುದನ್ನು ತಿಳಿದವಳಾಗಿದ್ದರೂ ಕೂಡಾ, ಹೆಣ್ಣು ಗಂಡನಿಗೆ ವಿಧೇಯಳಾಗಿ ಇರಬೇಕು ಎನ್ನುವ ಧರ್ಮವನ್ನು ಜನರಿಗೆ ತೋರಿಸುವವಳಾಗಿ  ರುಗ್ಮಿಣಿ ದುಃಖಪಟ್ಟವಳಂತೆ ಕಂಡಳು. ಆರೀತಿಯಾಗಿ ದುಃಖಪಡುವಂತೆ ಕಾಣುವ ಅವಳನ್ನು, ಹೆಂಡತಿಗೆ ಒಬ್ಬ ಗಂಡ ಹೇಗೆ ರಕ್ಷಣೆ ಕೊಡಬೇಕು, ಹೇಗೆ ದುಃಖ ನಿವಾರಣೆ ಮಾಡಬೇಕು  ಎನ್ನುವ ಗೃಹಸ್ಥಧರ್ಮವನ್ನು ತೋರಿಸುತ್ತಾ ಶ್ರೀಕೃಷ್ಣ  ಸಮಾಧಾನ ಮಾಡಿದ. [ಭಾಗವತದಲ್ಲಿ ಈ ಕುರಿತು ವಿಸ್ತಾರವಾದ ವಿವರಣೆಯನ್ನು ನಾವು ಕಾಣಬಹುದು.]

 

ಏವಂ ಕ್ರೀಡತ್ಯಬ್ಜನಾಭೇ ರಮಾಯಾಂ ಕೃಷ್ಣಾದಿಷ್ಟೋ ಗೋಕುಲಂ ರೌಹಿಣೇಯಃ ।

ಪ್ರಾಯಾದ್ ದೃಷ್ಟ್ವಾ ತತ್ರ ನನ್ದಂ ಯಶೋದಾಂ ತತ್ಪೂಜಿತಃ ಕೃಷ್ಣವಾರ್ತ್ತಾಂ ಚ ಪೃಷ್ಟಃ ॥೨೨.೨೩೦॥

 

ಈರೀತಿಯಾಗಿ ಲಕ್ಷ್ಮೀಸ್ವರೂಪಳಾದ ರುಗ್ಮಿಣಿಯಲ್ಲಿ ಶ್ರೀಕೃಷ್ಣನು ಕ್ರೀಡಿಸುತ್ತಿರಲು, ಕೃಷ್ಣನ ನಿರ್ದೇಶನದಂತೆ  ಬಲರಾಮನು ಗೋಕುಲಕ್ಕೆ ತೆರಳಿದ. ಅಲ್ಲಿ ನಂದಗೋಪನನ್ನೂ, ಸಾಕುತಾಯಿ ಯಶೋದೆಯನ್ನೂ ಕಂಡು, ಅವರಿಂದ ಸತ್ಕರಿಸಲ್ಪಟ್ಟ. ಅವರಿಂದ ಶ್ರೀಕೃಷ್ಣನ ಕುರಿತಾಗಿ ಕೇಳಲ್ಪಟ್ಟವನಾದ.

 

ಮಾಸೌ ತತ್ರ ನ್ಯವಸದ್ ಗೋಪಿಕಾಭೀ ರೇಮೇ ಕ್ಷೀಬೋ ಯಮುನಾಮಾಹ್ವಯಚ್ಚ ।

ಮತ್ತೋsಯಮಿತ್ಯೇವ ನದೀಮನಾಗತಾಂ ಚಕರ್ಷ ರಾಮೋ ಲಾಙ್ಗಲೇನಾಗ್ರ್ಯವೀರ್ಯ್ಯಃ ॥೨೨.೨೩೧॥

 

ನಂದಗೋಕುಲದಲ್ಲಿ ಗೋಪಿಕೆಯರೊಂದಿಗೆ ಕ್ರೀಡಿಸಿಸುತ್ತಾ ಎರಡು ತಿಂಗಳುಗಳ ಕಾಲ ವಾಸಮಾಡಿದನು. ಒಂದು ದಿನ ಯಮುನಾ ನದಿ ತಟದಲ್ಲಿ ಮದೋನ್ಮತ್ತನಾಗಿದ್ದ ಬಲರಾಮನು ಯಮುನೆಯನ್ನು ಕರೆದನು. ‘ಇವನು ಮತ್ತಿನಲ್ಲಿದ್ದಾನೆ’ ಎಂದು ಬಾರದೇ ಇದ್ದ ಯಮುನಾ ನದಿಯನ್ನು ಬಲರಾಮ ತನ್ನ ನೇಗಿಲಿನಿಂದ ತನ್ನೆಡೆಗೆ ಎಳೆದ.

 

ಪುನಸ್ತಯಾ ಪ್ರಣತಃ ಸಂಸ್ತುತಶ್ಚ ವ್ಯಸರ್ಜ್ಜಯತ್ ತಾಮಥ ನನ್ದಗೋಪಮ್ ।

ಆಪೃಚ್ಛ್ಯ ಚಾಗಾದ್ ದ್ವಾರಕಾಂ ಕೇಶವಾಯ ನ್ಯವೇದಯನ್ನನ್ದಗೋಪಾದಿಭಕ್ತಿಮ್             ॥೨೨.೨೩೨॥

 

ಆಗ ಯಮುನಾದೇವಿಯಿಂದ (ನದಿಯ ಅಭಿಮಾನಿ ದೇವತೆಯಿಂದ) ನಮಸ್ಕರಿಸಲ್ಪಟ್ಟು, ಸ್ತೋತ್ರ ಮಾಡಲ್ಪಟ್ಟವನಾಗಿ, ಅವಳನ್ನು ಬಿಟ್ಟನು. ತದನಂತರ ನಂದಗೋಪನಿಗೆ ‘ಹೋಗಿ ಬರುತ್ತೇನೆ’ ಎಂದು ಹೇಳಿ, ದ್ವಾರಕಾಪಟ್ಟಣಕ್ಕೆ ಬಂದು, ಶ್ರೀಕೃಷ್ಣನಿಗೆ ನಂದಗೋಪಾದಿಗಳ ಭಕ್ತಿಯನ್ನು ಒಪ್ಪಿಸಿದನು.

Tuesday, July 26, 2022

Mahabharata Tatparya Nirnaya Kannada 22-219-226

ನಿಹತ್ಯ ತೌ ಕೇಶವೋ ರೌಗ್ಮಿಣೇಯಂ ಪುನರ್ವೈದರ್ಭ್ಯಾಂ ಜನಯಾಮಾಸ ಸದ್ಯಃ ।

ಸ ಚೈಕಲವ್ಯೋ ರಾಮಜಿತಃ ಶಿವಾಯ ಚಕ್ರೇ ತಪೋSಜೇಯತಾಂ ಚಾSಪ ತಸ್ಮಾತ್ ॥೨೨.೨೧೯॥

 

ಪೌಣ್ಡ್ರಕ ವಾಸುದೇವ ಮತ್ತು ಕಾಶೀರಾಜನನ್ನು ಕೊಂದ ಬಳಿಕ ಶ್ರೀಕೃಷ್ಣ ರುಗ್ಮಿಣಿಯಲ್ಲಿ ಮಗನನ್ನು (ಪ್ರದ್ಯುಮ್ನನನ್ನು) ಹುಟ್ಟಿಸಿದ. ಇತ್ತ ಬಲರಾಮನಿಂದ ಸೋತ ಏಕಲವ್ಯ ಶಿವನನ್ನು ಕುರಿತು ತಪಸ್ಸನ್ನು ಮಾಡಿ, ಶಿವನಿಂದ ಅಜೇಯತ್ವದ ವರವನ್ನು ಪಡೆದ.

 

ಸ ಶರ್ವದತ್ತೇನ ವರೇಣ ದೃಪ್ತಃ ಪುನರ್ಯೋದ್ಧುಂ ಕೃಷ್ಣಮೇವಾSಸಸಾದ ।

ತಸ್ಯಾಸ್ತ್ರಶಸ್ತ್ರಾಣಿ ನಿವಾರ್ಯ್ಯ ಕೇಶವಶ್ಚಕ್ರೇಣ ಚಕ್ರೇ ತಮಪಾಸ್ತಕನ್ಧರಮ್             ॥೨೨.೨೨೦॥

 

ಏಕಲವ್ಯನು ರುದ್ರ ಕೊಟ್ಟ ವರದಿಂದ ದರ್ಪವನು ಹೊಂದಿ, ಮತ್ತೆ ಯುದ್ಧಮಾಡಲೆಂದು ಕೃಷ್ಣನ ಬಳಿ ಬಂದನು. ಶ್ರೀಕೃಷ್ಣನಾದರೋ, ಅವನ ಶಸ್ತ್ರಾಸ್ತ್ರಗಳನ್ನು ನಿಗ್ರಹಿಸಿ, ಚಕ್ರದಿಂದ ಅವನ ಶಿರಚ್ಛೇದ ಮಾಡಿದ.  

 

ಸ ಚಾSಪ ಪಾಪಸ್ತಮ ಏವ ಘೋರಂ ಕೃಷ್ಣದ್ವೇಷಾನ್ನಿತ್ಯದುಃಖಾತ್ಮಕಂ ತತ್ ।

ಏವಂ ಯದೂನಾಮೃಷಭೇಣ ಸೂದಿತೇ ಪೌಣ್ಡ್ರೇ ತಥಾ ಕಾಶಿನೃಪೇ ಚ ಪಾಪೇ             ॥೨೨.೨೨೧॥

 

ಕಾಶೀಶಪುತ್ರಸ್ತು ಸುದಕ್ಷಿಣಾಖ್ಯಸ್ತಪೋSಚರಚ್ಛಙ್ಕರಾಯೋರುಭಕ್ತ್ಯಾ ।

ಪ್ರತ್ಯಕ್ಷಗಂ ತಂ ಶಿವಂ ಪಾಪಬುದ್ಧಿಃ ಕೃಷ್ಣಾಭಾವಂ ಯಾಚತೇ ದುಷ್ಟಚೇತಾಃ             ॥೨೨.೨೨೨॥

 

ಪಾಪಿಷ್ಠನಾದ  ಏಕಲವ್ಯ ಕೃಷ್ಣನನ್ನು ದ್ವೇಷಿಸಿದ ಫಲವಾಗಿ ನಿತ್ಯದುಃಖವಿರುವ  ಘೋರವಾದ ಅನ್ಧಂತಮಸ್ಸನ್ನು ಹೊಂದಿದನು.  ಈರೀತಿಯಾಗಿ ಯಾದವರಲ್ಲಿಯೇ ಶ್ರೇಷ್ಠನಾದ ಶ್ರೀಕೃಷ್ಣನಿಂದ ಪೌಣ್ಡ್ರಕ ವಾಸುದೇವ, ಪಾಪಿಷ್ಠನಾದ ಕಾಶಿರಾಜನು ಸಾಯಲು, ಸುದಕ್ಷಿಣ ಎನ್ನುವ ಕಾಶಿರಾಜನ ಮಗನು ಶಂಕರನನ್ನು ಕುರಿತು ಬಹಳ ಭಕ್ತಿಯಿಂದ ತಪಸ್ಸನ್ನು ಮಾಡಿದನು. ಪ್ರತ್ಯಕ್ಷನಾದ ಶಿವನಲ್ಲಿ ಪಾಪಬುದ್ಧಿಯವನಾದ ಸುದಕ್ಷಿಣನು ಕೃಷ್ಣನ ನಾಶವನ್ನು ಬೇಡಿದನು.

 

ಕೃತ್ಯಾಮಸ್ಮೈ ದಕ್ಷಿಣಾಗ್ನೌ ಶಿವೋSಪಿ ದೈತ್ಯಾವೇಶಾದದದಾದಾವೃತಾತ್ಮಾ ।

ಸ ದಕ್ಷಿಣಾಗ್ನಿಶ್ಚಾಸುರಾವೇಶಯುಕ್ತಃ ಸಮ್ಪೂಜಿತಃ ಕಾಶಿರಾಜಾತ್ಮಜೇನ             ॥೨೨.೨೨೩॥

 

ವರಾದುಮೇಶಸ್ಯ ವಿವೃದ್ಧಶಕ್ತಿರ್ಯ್ಯಯೌ ಕೃಷ್ಣೋ ಯತ್ರ ಸಮ್ಪೂರ್ಣ್ಣಶಕ್ತಿಃ ।

ಕೃಷ್ಣಸ್ತಸ್ಯ ಪ್ರತಿಘಾತಾರ್ತ್ಥಮುಗ್ರಂ ಸಮಾದಿಶಚ್ಛಕ್ರಮನನ್ತವೀರ್ಯ್ಯಃ             ॥೨೨.೨೨೪॥

 

ದೈತ್ಯಾವೇಷಕ್ಕೆ ಒಳಗಾದ ಶಿವ ದಕ್ಷಿಣಾಗ್ನಿ ಕುಂಡದಲ್ಲಿರುವ  ದಕ್ಷಿಣಾಗ್ನಿಸ್ವರೂಪಭೂತವಾದ ಕೃತ್ಯಾದೇವತೆಯನ್ನು ಸುದಕ್ಷಿಣನಿಗೆ ಕೊಟ್ಟ. (ಪರಮಾತ್ಮನ ಭಕ್ತನಾಗಿರುವ ಶಿವ ದೈತ್ಯಾವೇಷಕ್ಕೆ ಒಳಗಾಗಿ ಈ ರೀತಿ ಮಾಡಿದ. ಇಲ್ಲಿ ಕೃತ್ಯಾದೇವತೆ ಎಂದರೆ ಅದು ದಕ್ಷಿಣಾಗ್ನಿಗೆ  ಅಭಿಮಾನಿ ದೇವತೆ)  ಅಸುರಾವೇಶದಿಂದ ಕೂಡಿದ್ದ ಆ ದಕ್ಷಿಣಾಗ್ನಿಸ್ವರೂಪವಾದ ಕೃತ್ಯಾದೇವತೆಯು ಕಾಶೀರಾಜನ ಮಗನಿಂದ ಚೆನ್ನಾಗಿ ಪೂಜಿಸಲ್ಪಟ್ಟದ್ದಾಗಿ,  ಸದಾಶಿವನ ವರದಿಂದ ಹೆಚ್ಚಿದ ಸಾಮರ್ಥ್ಯವುಳ್ಳದ್ದಾದ  ಕೃಷ್ಣನಿದ್ದೆಡೆಗೆ ಹೋಯಿತು. ಕೃಷ್ಣನಾದರೋ ಅದರ ನಾಶಕ್ಕಾಗಿ ಸುದರ್ಶನ ಚಕ್ರವನ್ನು ಆದೇಶಿಸಿದ.  

 

ಜಾಜ್ವಲ್ಯಮಾನಂ ತದಮೋಘವೀರ್ಯ್ಯಂ ವ್ಯದ್ರಾವಯದ್ ವಹ್ನಿಮಿಮಂ ಸುದೂರಮ್ ।

ಕೃತ್ಯಾತ್ಮಕೋ ವಹ್ನಿರಸೌ ಪ್ರಧಾನವಹ್ನೇಃ ಪುತ್ರಶ್ಚಕ್ರವಿದ್ರಾವಿತೋSಥ ॥೨೨.೨೨೫॥

 

ಸಹಾನುಬನ್ಧಂ ಚ ಸುದಕ್ಷಿಣಂ ತಂ ಭಸ್ಮೀಚಕಾರಾSಶು  ಸಪುತ್ರಭಾರ್ಯ್ಯಮ್ ।

ದಗ್ಧ್ವಾ ಪುರೀಂ ವಾರಣಸೀಂ ಸುದರ್ಶನಃ ಪುನಃ ಪಾರ್ಶ್ವಂ ವಾಸುದೇವಸ್ಯ ಚಾSಗಾತ್

ಸುದಕ್ಷಿಣೋSಸೌ ತಮ ಏವ ಜಗ್ಮಿವಾನ್ ಕೃಷ್ಣದ್ವೇಷಾತ್ ಸಾನುಬನ್ಧಃ ಸುಪಾಪಃ ॥೨೨.೨೨೬॥

 

ಪ್ರಜ್ವಲಿಸುತ್ತಿರುವ, ಎಂದೂ ವ್ಯರ್ಥವಾಗದ ಪೌರುಷವುಳ್ಳ ಆ ಸುದರ್ಶನವು ದಕ್ಷಿಣಾಗ್ನಿ ಸ್ವರೂಪಭೂತವಾದ ಕೃತ್ಯಾಗ್ನಿಯನ್ನು ಅತಿದೂರಕ್ಕೆ  ಓಡಿಸಿತು. ಆ ದಕ್ಷಿಣಾಗ್ನಿಯು ಪ್ರಧಾನ ವಹ್ನಿಯ ಮಗನು.

ಕೃಷ್ಣನನ್ನು ನಾಶಮಾಡಲೆಂದು ಬಂದು, ಸುದರ್ಶನ ಚಕ್ರದಿಂದ ಓಡಿಸಲ್ಪಟ್ಟ ಆ ಕೃತ್ಯಾಗ್ನಿಯು ಬಂಧುಬಾಂಧವರಿಂದ ಕೂಡಿದ, ಹೆಂಡತಿ ಮಕ್ಕಳೊಂದಿಗೆ ಕೂಡಿದ ಸುದಕ್ಷಿಣನನ್ನು ಬಸ್ಮೀಕರಿಸಿತು.  ಕೃತ್ಯಾಗ್ನಿಯನ್ನು ಬೆನ್ನೆತ್ತಿ ಬಂದ ಸುದರ್ಶನ ವಾರಣಸಿ ಪಟ್ಟಣವನ್ನೇ ಸುಟ್ಟು ಮರಳಿ ಪರಮಾತ್ಮನ ಬಳಿ ಬಂದಿತು. ಹೀಗೆ ಕೃಷ್ಣನನ್ನು ದ್ವೇಷಿಸಿದ ಸುದಕ್ಷಿಣ, ತನ್ನ ಬಂಧುಬಾಂಧವರೊಂದಿಗೆ ಅನ್ಧಂತಮಸ್ಸನ್ನೇ ಹೊಂದಿದನು.