ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 14, 2022

Mahabharata Tatparya Nirnaya Kannada 22-261-265

 

ಯದಾ ಜ್ವರಾದ್ಯಾ ಅಖಿಲಾಃ ಪ್ರವಿದ್ರುತಾಸ್ತದಾ ಸ್ವಯಂ ಪ್ರಾಪ ಹರಿಂ ಗಿರೀಶಃ ।

ತಯೋರಭೂದ್ ಯುದ್ಧಮಥೈನಮಚ್ಯುತೋ ವಿಜೃಮ್ಭಯಾಮಾಸ ಹ ಜೃಮ್ಭಣಾಸ್ತ್ರತಃ ॥೨೨.೨೬೧॥

 

ಯಾವಾಗ ಜ್ವರ ಮೊದಲಾದ ಎಲ್ಲಾ ಭೃತ್ಯರು ಪಲಾಯನ ಮಾಡಿದರೋ, ಆಗ ಸ್ವಯಂ ರುದ್ರನು ಯುದ್ಧಕ್ಕಾಗಿ ನಾರಾಯಣನನ್ನು ಹೊಂದಿದನು. ಶ್ರೀಕೃಷ್ಣ ಹಾಗು ಸದಾಶಿವನ ನಡುವೆ ಯುದ್ಧವಾಯಿತು. ಸ್ವಲ್ಪ ಹೊತ್ತಿನ ನಂತರ ಶ್ರೀಕೃಷ್ಣ ಪರಮಾತ್ಮನು ಜೃಮ್ಭಣಾಸ್ತ್ರದಿಂದ ಸದಾಶಿವನ ಮೈಯನ್ನು ಕುಗ್ಗಿಸಿದ. (ಜೃಮ್ಭಣ ಎನ್ನುವುದಕ್ಕೆ  ಮೈ ಮರಗಟ್ಟುವುದು/ಸ್ತಂಭೀಕರಿಸುವುದು, ಪದೇ ಪದೇ ಆಕಳಿಸುವಂತಾಗುವುದು  ಇತ್ಯಾದಿ ಅರ್ಥಗಳಿವೆ).

 

ವಿಜೃಮ್ಭಿತೇ ಶಙ್ಕರೇ ನಿಷ್ಪ್ರಯತ್ನೇ ಸ್ಥಾಣೂಪಮೇ ಸಂಸ್ಥಿತೇ ಕಞ್ಜಜಾತಃ ।

ದೈತ್ಯಾವೇಶಾದ್ ವಾಸುದೇವಾನಭಿಜ್ಞಂ ಸಮ್ಬೋಧಯಾಮಾಸ ಸದುಕ್ತಿಭಿರ್ವಿಭುಃ ॥೨೨.೨೬೨॥

 

ಸದಾಶಿವನು ತನ್ನ ದೇಹದ ಎಲ್ಲಾ ಕ್ರಿಯೆಗಳನ್ನು ಕಳೆದುಕೊಂಡು, ಪ್ರಯತ್ನವೇ ಇಲ್ಲದ ಮೋಟು ಮರದಂತಾಗಲು, ಬ್ರಹ್ಮದೇವರು ದೈತ್ಯಾವೇಶದಿಂದಾಗಿ ಪರಮಾತ್ಮನನ್ನು ತಿಳಿಯದೇ ಯುದ್ಧ ಮಾಡುತ್ತಿರುವ  ಸದಾಶಿವನಿಗೆ ವೇದೊಕ್ತಿಯಿಂದ ತಿಳುವಳಿಕೆ(ನೆನಪಿಸಿ) ಕೊಟ್ಟರು.

 

ಪ್ರಗೃಹ್ಯ ಶರ್ವಂ ಚ ವಿವೇಶ ವಿಷ್ಣೋಃ ಸ ತೂದರಂ ದರ್ಶಯಾಮಾಸ ತತ್ರ ।

ಶಿವಸ್ಯ ರೂಪಂ ಸ್ತಮ್ಭಿತಂ ಬಿಲ್ವನಾಮ್ನಿ ವನೇ ಗಿರೀಶೇನ ಚ ಯತ್ ತಪಃ ಕೃತಮ್ ।

ಶೈವಂ ಪದಂ ಪ್ರಾಪ್ತುಮೇವಾಚ್ಯುತಾಚ್ಚ ತಚ್ಚಾವದತ್ ಕಞ್ಜಜಃ ಶಙ್ಕರಸ್ಯ ॥೨೨.೨೬೩॥

 

ಸದಾಶಿವನನ್ನು ಕರೆದುಕೊಂಡು ಬ್ರಹ್ಮದೇವರು ಶ್ರೀಕೃಷ್ಣನ ಉದರವನ್ನು ಪ್ರವೇಶಮಾಡಿದರು. (ಇದು ಹೊರಗಿರುವ ಅಯೋಗ್ಯರಿಗೆ ಕಾಣುವ ಕ್ರಿಯೆ ಅಲ್ಲ). ಅಲ್ಲಿ ಕೃಷ್ಣನ ಅಸ್ತ್ರದಿಂದ ಸ್ತಂಭಿತವಾದ ರುದ್ರನ ರೂಪಾಂತರವನ್ನು ತೋರಿಸಿ. ಬಿಲ್ವಾ ಎನ್ನುವ ಹೆಸರಿನ ಕಾಡಿನಲ್ಲಿ ಹಿಂದೆ ಸದಾಶಿವನಿಂದ ಶಿವಪದವಿಯನ್ನು ಹೊಂದಲು ಏನು ತಪಸ್ಸು ಮಾದಲ್ಪಟ್ಟಿತ್ತೋ, ಅದರ ಬಗೆಗೆ ಅರಿವು ನೀಡಿದರು. ಅಂದರೆ ಯಾವ ಪರಮಾತ್ಮನಿಂದ ಶಿವ ಪದವಿಯನ್ನು ಹೊಂದಿರುವೆಯೋ ಅದೇ ಪರಮಾತ್ಮನಿಗೆ ವಿರುದ್ಧ ನಿಂತಿರುವೆ  ಎಂದು ಬ್ರಹ್ಮದೇವರು ರುದ್ರದೇವರಿಗೆ ಬೋಧನೆ ಮಾಡಿದರು.  ಸದಾಶಿವ ಭಗವಂತನ ಯಾವ ರೂಪವನ್ನು ಉಪಾಸನೆ ಮಾಡುತ್ತಾನೋ ಆ ರೂಪದ ಬಗ್ಗೆಯೂ  ಬ್ರಹ್ಮ ದೇವರು ಹೇಳಿದರು.

 

ಅಪೇತಮೋಹೋsಥ ವೃಷಧ್ವಜೋ ಹರಿಂ ತುಷ್ಟಾವ ಬಾಣೋSಭಿಸಸಾರ ಕೇಶವಮ್ । 

ತಸ್ಯಾಚ್ಯುತೋ  ಬಾಹುಸಹಸ್ರಮಚ್ಛಿನತ್ ಪುನಶ್ಚಾರಿಂ ಜಗೃಹೇ ತಚ್ಛಿರೋರ್ತ್ಥೇ ॥೨೨.೨೬೪॥

 

ತದನಂತರ ಮೋಹವನ್ನು ಕಳೆದುಕೊಂಡ, ವೃಷಭವನ್ನೇ ಧ್ವಜದ ಚಿಹ್ನೆಯಾಗಿ ಹೊಂದಿರುವ ಸದಾಶಿವನು ಪರಮಾತ್ಮನನ್ನು ಸ್ತೋತ್ರ ಮಾಡಿದನು. ಆಗ ಬಾಣಾಸುರನು ಪರಮಾತ್ಮನ ಬಳಿ ಯುದ್ಧ ಮಾಡಲು ಬಂದ. ಶ್ರೀಕೃಷ್ಣನು ಅವನ ಸಾವಿರ ತೋಳುಗಳನ್ನು ಕತ್ತರಿಸಿದ ಮತ್ತು ಅವನ ತಲೆಯನ್ನು ಕತ್ತರಿಸಲು ಚಕ್ರವನ್ನು ಕೈಗೆತ್ತಿಕ್ಕೊಂಡ.

 

ತದಾ ಶಿವೇನ ಪ್ರಣತೋ ಬಾಣರಕ್ಷಣಕಾಮ್ಯಯಾ ।

ಕೃತ್ವಾ ಸ್ವಭಕ್ತಂ ಬಾಣಂ ತಂ ರರಕ್ಷ ದ್ವಿಭುಜೀಕೃತಮ್    ॥೨೨.೨೬೫॥

 

ಆಗ ಬಾಣಾಸುರನನ್ನು ರಕ್ಷಣೆ ಮಾಡಬೇಕು ಎನ್ನುವ ಬಯಕೆಯಿಂದ ಸದಾಶಿವನಿಂದ ನಮಸ್ಕೃತನಾದ ಶ್ರೀಕೃಷ್ಣನು,  ಬಾಣನನ್ನು ತನ್ನ ಭಕ್ತನನ್ನಾಗಿ ಮಾಡಿಕೊಂಡು, ಅವನ ಎರಡು ಭುಜವನ್ನಷ್ಟೇ ಉಳಿಸಿ ರಕ್ಷಿಸಿದ.

Friday, August 12, 2022

Mahabharata Tatparya Nirnaya Kannada 22-251-260

 

ಗೂಢಂ ಕನ್ಯಾಗೃಹೇ ತಂ ತು ಜ್ಞಾತ್ವಾ ಕನ್ಯಾಭಿರಕ್ಷಿಣಃ ।

ಊಚುರ್ಬಾಣಯಾದಿಶಚ್ಚ ಕಿಙ್ಕರಾನ್ ಗ್ರಹಣೇSಸ್ಯ ಸಃ ॥೨೨.೨೫೧॥

 

ಅಂತಃಪುರದಲ್ಲಿ ಅವಿತಿರುವ ಅನಿರುದ್ಧನನ್ನು ಅಂತಃಪುರದ ಕಾವಲುಗಾರರು ತಿಳಿದು ಬಾಣನಿಗೆ ತಿಳಿಸಿದರು. ಬಾಣಾಸುರನು ಅನಿರುದ್ಧನನ್ನು ಸೆರೆಹಿಡಿಯಲು ಭೃತ್ಯರಿಗೆ ಆಜ್ಞೆ ಮಾಡಿದನು.

 

ಆಗತಾನನಿರುದ್ಧಸ್ತಾನ್ ಪರಿಘೇಣ ಮಹಾಬಲಃ ।

ನಿಹತ್ಯ ದ್ರಾವಯಾಮಾಸ ಸ್ವಯಮಾಯಾತ್ ತತೋSಸುರಃ             ॥೨೨.೨೫೨॥

 

ಹಿಡಿಯಲು ಬಂದ ಆ ಎಲ್ಲಾ ಭೃತ್ಯರನ್ನು ಮಹಾಬಲನಾಗಿರುವ ಅನಿರುದ್ಧನು ಬಾಗಿಲಿಗೆ ಹಾಕಿದ ಚಿಲಕದಿಂದ ಕೊಂದು ಉಳಿದವರನ್ನು ಓಡಿಸಿದನು. ಆಗ ಬಾಣಾಸುರನೇ ಸ್ವಯಂ ಬಂದ.

 

ಸ ತು ಯುಧ್ವಾSತಿಕೃಚ್ಛ್ರೇಣ ನಾಗಾಸ್ತ್ರೇಣ ಬಬನ್ಧ ತಮ್ ।

ಅಥ ಕೃಷ್ಣಃ ಸಮಾರುಹ್ಯ ಗರುಡಂ ರಾಮಸಂಯುತಃ             ॥೨೨.೨೫೩॥

 

ಪ್ರದ್ಯುಮ್ನೇನ ಚ ತತ್ರಾಗಾತ್ ಪ್ರಥಮಂ ತತ್ರ ವಹ್ನಿಭಿಃ ।

ಯದ್ಧ್ವೈವಾಙ್ಗಿರಸಾ ಚೈವ  ಕ್ಷಣಾದ್ ವಿದ್ರಾಪ್ಯ ತಾನ್ ಹರಿಃ  ॥೨೨.೨೫೪॥

 

ವಿದ್ರಾಪ್ಯ ಸರ್ವಪ್ರಮಥಾನಾಸಸಾದ್ ಜ್ವರಂ ತತಃ ।

ತೇನ ಭಸ್ಮಪ್ರಹಾರೇಣ ಜ್ವರಿತಂ ರೋಹಿಣೀಸುತಮ್ ॥೨೨.೨೫೫॥

 

ಅನಿರುದ್ಧನೊಂದಿಗೆ ಸೆಣಸಿದ ಬಾಣನು, ಅತಿಕಷ್ಟದಿಂದ ಅನಿರುದ್ಧನನ್ನು ಸರ್ಪಾಸ್ತ್ರದಿಂದ ಬಂಧಿಸಿದನು. ಅನಿರುದ್ಧ ಬಾಣಾಸುರನ ಸೆರೆಗೆ ಒಳಗಾದ ವಿಷಯವನ್ನು(ನಾರದರಿಂದ) ತಿಳಿದ ಶ್ರೀಕೃಷ್ಣನು ಬಲರಾಮ, ಪ್ರದ್ಯುಮ್ನರೊಂದಿಗೆ ಕೂಡಿ ಗರುಡನನ್ನು ಏರಿ ಬಾಣಾಸುರನ ಪಟ್ಟಣವಾದ ಶೋಣಿತಪುರಕ್ಕೆ ಬಂದನು.  ನಗರವನ್ನು ಪ್ರವೇಶ ಮಾಡಬೇಕಾದರೆ  ಶುಚಿ, ಪಾವಕ ಮತ್ತು ಪವಮಾನ ಎನ್ನುವ ಮೂರು ಅಗ್ನಿರೂಪಗಳೊಂದಿಗೆ ಯುದ್ಧಮಾಡಿ, ರುದ್ರನ ಭೃತ್ಯರಲ್ಲಿ ಮುಖ್ಯಾದ ಅಂಗಿರಸನ ಜೊತೆಗೂ ಯುದ್ಧಮಾಡಿ, ಕ್ಷಣದಲ್ಲಿ ಎಲ್ಲರನ್ನು ಓಡಿಸಿ, ರುದ್ರನ ಇತರ ಗಣಗಳನ್ನೂ ಕೂಡಾ ಓಡಿಸಿ, ತದನಂತರ ಜ್ವರದ ಅಭಿಮಾನಿಯನ್ನು ಶ್ರೀಕೃಷ್ಣ ಇದಿರುಗೊಂಡ. ಜ್ವರನ ಬಸ್ಮ ಪ್ರಹಾರದಿಂದ ಬಲರಾಮನು ಜ್ವರಕ್ಕೊಳಗಾಗಿ  ಏನೂ ಮಾಡಲಾರದವನಾದ.

[ಈ ಕುರಿತು ವಿಷ್ಣುಪುರಾಣದಲ್ಲಿ, ಹರಿವಂಶದಲ್ಲಿ ವಿವರಣೆಯನ್ನು ಕಾಣಬಹುದು. ಅನಿರುದ್ಧನನ್ನು ಬಂಧಿಸಿರುವ ವಿಷಯವನ್ನು ನಾರದರು ಯಾದವರಿಗೆ ತಿಳಿಸುತ್ತಾರೆ]

 

ಆಶ್ಲಿಷ್ಯ ವಿಜ್ವರಂ ಚಕ್ರೇ ವಾಸುದೇವೋ ಜಗತ್ಪ್ರಭುಃ ।

ಸ್ವಯಂ ವಿಕ್ರೀಡ್ಯ ತೇನಾಥ ಕಞ್ಚಿತ್ ಕಾಲಂ ಜನಾರ್ದ್ದನಃ             ॥೨೨.೨೫೬॥

 

ನಿಷ್ಪಿಷ್ಯ ಮುಷ್ಟಿಭಿಶ್ಚಾನ್ಯಂ ಸಸರ್ಜ್ಜ  ಜ್ವರಮಚ್ಯುತಃ ।

ಸ್ವಯಂ ಜಿತ್ವಾSಪಿ ಗಿರಿಶಭೃತ್ಯಂ ನಾಲಮಿತಿ ಪ್ರಭುಃ                  ॥೨೨.೨೫೭॥

 

ಸ್ವಭೃತ್ಯೇನೈವ ಜೇತವ್ಯ ಇತ್ಯನ್ಯಂ ಸಸೃಜೇ ತದಾ ।

ಜ್ವರೇಣ ವೈಷ್ಣವೇನಾಸೌ ಸುಭೃಶಂ ಪೀಡಿತಸ್ತದಾ                     ॥೨೨.೨೫೮॥

 

ಜ್ವರಕ್ಕೊಳಗಾದ ಬಲರಾಮನನ್ನು ಆಲಂಗಿಸಿದ ಶ್ರೀಕೃಷ್ಣ, ಅವನನ್ನು  ಜ್ವರರಹಿತನನ್ನಾಗಿ ಮಾಡಿದನು. ಶ್ರೀಕೃಷ್ಣಪರಮಾತ್ಮನು ಕೆಲವು ಸಮಯದ ತನಕ ಜ್ವರದ ಅಭಿಮಾನಿಯೂ, ರುದ್ರನ ಭೃತ್ಯನೂ ಆದ  ಶೈವಜ್ವರನೊಂದಿಗೆ ತಾನೇ ಯುದ್ಧಮಾಡಿ, ಅವನ ಮೇಲೆ ಮುಷ್ಠಿಪ್ರಹಾರ ಮಾಡಿ, ತದನಂತರ ಶೈವ ಜ್ವರನನ್ನು ನಾಶ ಮಾಡಲು ಇನ್ನೊಂದು ಜ್ವರನನ್ನು ತಾನು ಸೃಷ್ಟಿಸಿದ. ರುದ್ರನ ಭೃತ್ಯನಾದ ಜ್ವರನನ್ನು ತಾನು ಗೆದ್ದಿದ್ದರೂ ಕೂಡಾ,  ಅದು ಸಾಲದು ಎಂದು, ತನ್ನ ಭೃತ್ಯನಿಂದಲೇ ಸೋಲಿಸಲ್ಪಡಬೇಕು ಎಂದು ಇನ್ನೊಬ್ಬ ಜ್ವರನನ್ನು ಶ್ರೀಕೃಷ್ಣ ಸೃಷ್ಟಿ ಮಾಡಿದ. ಕೃಷ್ಣ ಸೃಷ್ಟಿಸಿದ ಜ್ವರದಿಂದ ಶೈವಜ್ವರನು ಚೆನ್ನಾಗಿ ಪೀಡಿತನಾದ.

[ಲೋಕದಲ್ಲಿ ಜ್ವರ ಬಂದಾಗ ಮನಸ್ಸು ಮುದುಡುವುದು, ಮನಸ್ಸಿಗೆ ಕಷ್ಟವಾಗುವುದು, ಇತ್ಯಾದಿ ಆಗುವುದು ಈ ಶೈವಜ್ವರದಿಂದ. ವೈಷ್ಣವ ಜ್ವರ  ಎಲ್ಲಿಯೂ ಪ್ರಯೋಗದಲ್ಲಿ ಇಲ್ಲ. ದೇಹದಲ್ಲಿರುವ ಮಾಂಸಖಂಡಗಳು, ಇತ್ಯಾದಿ ಧಾತುಗಳೇನಿವೆ, ಅದೆಲ್ಲವೂ ಕೂಡಾ ಮನಸ್ಸಿನೊಂದಿಗೆ ಕೂಡಿ ಸಂಕಟಕ್ಕೆ ಒಳಗಾಗುವುದು ಶೈವಜ್ವರದಿಂದ]

 

ಗ್ರಾಸಾರ್ತ್ಥಮುಪನೀತಶ್ಚ ಜಗಾಮ ಶರಣಂ ಹರಿಮ್ ।

ತೇನ ಸ್ತುತಃ ಸ ಭಗವಾನ್ ಮೋಚಯಾಮಾಸ ತಂ ವಿಭುಃ             ॥೨೨.೨೫೯॥

 

ಶ್ರೀಕೃಷ್ಣನಿಂದ ಸೃಷ್ಟಿಸಲ್ಪಟ್ಟ ಜ್ವರನು ಶೈವಜ್ವರನನ್ನು ತಿನ್ನುವುದಕ್ಕಾಗಿ ಕೊಂಡೊಯ್ಯಲ್ಪಟ್ಟಾಗ, ಶೈವಜ್ವರನು ಕೃಷ್ಣನನ್ನೇ ಶರಣು ಹೊಂದಿದ. ಅವನಿಂದ ಸ್ತುತಿಸಲ್ಪಟ್ಟ ಶ್ರೀಕೃಷ್ಣನು ಅವನನ್ನು ಬಿಡುಗಡೆಗೊಳಿಸಿದ.

 

ಕ್ರೀಡಾರ್ತ್ಥಮತ್ಯಲ್ಪಜನೇಷ್ವಪಿ ಪ್ರಭುಃ ಕಥಞ್ಚಿದೇವ ವ್ಯಜಯದ್ ವ್ಯಥಾಂ ವಿನಾ ।

ಇತ್ಯಾದಿ ಮೋಹಾಯ ಸ ದರ್ಶಯತ್ಯಜೋ ನಿತ್ಯಸ್ವತನ್ತ್ರಸ್ಯ ಕುತೋ ವ್ಯತಾದಯಃ ॥೨೨.೨೬೦॥

 

ಶ್ರೀಕೃಷ್ಣ ಪರಮಾತ್ಮನು ಯಾವುದೇ ಬಳಲಿಕೆ ಇಲ್ಲದೇ ಗೆದ್ದರೂ, ಮೋಹಕ್ಕಾಗಿ ಅತ್ಯಂತ ಅಲ್ಪರಾಗಿರುವ ಜನರಲ್ಲೂ ಕೂಡಾ ಪ್ರಯತ್ನಪಟ್ಟಂತೆ ತೋರಿಸುತ್ತಾನೆ.(ಉದಾಹರಣೆಗೆ ಇನ್ನೊಬ್ಬ ಜ್ವರನನ್ನು ಸೃಷ್ಟಿಸಿ ಶೈವಜ್ವರನನ್ನು ಸೋಲಿಸಿರುವುದು, ಇತ್ಯಾದಿ)  ಸರ್ವಸ್ವತಂತ್ರನಾಗಿರುವ ಭಗವಂತನಿಗೆ ವ್ಯಥೆ ಇತ್ಯಾದಿ ಇಲ್ಲವೇ ಇಲ್ಲ. ಕೇವಲ ದುರ್ಜನರ ಮೋಹಕ್ಕಾಗಿ ಅವನು ಬಳಲಿದವನಂತೆ ತೋರುತ್ತಾನೆ ಅಷ್ಟೇ.

Tuesday, August 9, 2022

Mahabharata Tatparya Nirnaya Kannada 22-245-250

 

ಇತ್ಯಾದಿಕರ್ಮ್ಮಾಣಿ ಮಹಾನ್ತಿ ರಾಮಸ್ಯಾSಸಞ್ಛೇಷಸ್ಯಾಚ್ಯುತಾವೇಶಿನೋSಲಮ್ ।

ಯಸ್ಯಾಚ್ಯುತಾವೇಶವಿಶೇಷಕಾಲಂ ಜ್ಞಾತ್ವಾ ಭೀಮೋSಪ್ಯಸ್ಯ ನೋದೇತಿ ಯುದ್ಧೇ ॥೨೨.೨೪೫॥

 

ಪರಮಾತ್ಮನ ವಿಶೇಷ ಆವೇಶವಿರುವ ಶೇಷಾವತಾರಿಯಾದ ಬಲರಾಮನು ಇವೇ ಮೊದಲಾಗಿರತಕ್ಕಂತಹ ಮಹಾಕರ್ಮಗಳನ್ನು ಮಾಡಿದ. ಪರಮಾತ್ಮನ ಆವೇಶದ ಕಾಲವನ್ನು ತಿಳಿದು, ಭೀಮನೂ ಕೂಡಾ ಯುದ್ಧದಲ್ಲಿ ಅವನನ್ನು ಸೋಲಿಸಲು ಮುಂದಾಗುತ್ತಿರಲಿಲ್ಲ.

 

ಕ್ರೀಡಾಯುದ್ಧೇ ಬಹುಶೋ ರೌಹಿಣೇಯೇ ವ್ಯಕ್ತಿಂ ವಿಷ್ಣೋರ್ಭೀಮಸೇನೋ ವಿದಿತ್ವಾ ।

ತಾತ್ಕಾಲಿಕೀಂ ಕ್ರೀಡಮಾನೋSಪಿ ತೇನ ನೈವೋದ್ಯಮಂ ಕುರುತೇ ವಿಷ್ಣುಭಕ್ತ್ಯಾ             ॥೨೨.೨೪೬॥

 

ತದಾ ಜಯೀ ಪ್ರಭವತ್ಯೇಷ ರಾಮೋ ನಾತಿವ್ಯಕ್ತಸ್ತತ್ರ ಯದಾ ಜನಾರ್ದ್ದನಃ ।

ತದಾ ಭೀಮೋ ವಿಜಯೀ ಸ್ಯಾತ್ ಸದೈವ ವಿಷ್ಣೋಃ ಕೇಶಾವೇಶವಾನ್ ಯತ್ ಸ ರಾಮಃ ॥೨೨.೨೪೭॥

 

ಗದಾಯುದ್ಧದಲ್ಲಿ ಬಲರಾಮ ಭೀಮನ ಗುರು. ಅಲ್ಲಿ ಕಲಿಕೆಯ ನಂತರ ದಿನವೂ ಯುದ್ಧದ ಅಭ್ಯಾಸಕ್ಕಾಗಿ ಕ್ರೀಡಾಯುದ್ಧ ನಡೆಯುತ್ತಿತ್ತು. ಆರೀತಿಯ ಕ್ರೀಡಾಯುದ್ಧದಲ್ಲಿ ಒಮ್ಮೊಮ್ಮೆ ಬಲರಾಮನಲ್ಲಿ ಪರಮಾತ್ಮನ ಅಭಿವ್ಯಕ್ತಿಯನ್ನು ತಿಳಿದು, ಪರಮಾತ್ಮನ ಮೇಲಿನ ಭಕ್ತಿಯಿಂದ ಭೀಮಸೇನನು ಏನೂ ಪ್ರಯತ್ನಪಡುತ್ತಿರಲಿಲ್ಲ ಮತ್ತು ಅದರಿಂದಾಗಿ ಹೊಡೆಸಿಕೊಳ್ಳುತ್ತಿದ್ದ ಮತ್ತು ಬಲರಾಮನು ಗೆಲ್ಲುತ್ತಿದ್ದ. ಬಲರಾಮನಲ್ಲಿ ಯಾವಾಗ ಜನಾರ್ದನ ಅಭಿವ್ಯಕ್ತನಾಗುತ್ತಿರಲಿಲ್ಲವೋ ಆಗ ಭೀಮಸೇನ ಗೆಲ್ಲುತ್ತಿದ್ದ. ಆ ಬಲರಾಮನು ನಾರಾಯಣನ ಶುಕ್ಲಕೇಶ ಎನಿಸಿಕೊಂಡಿರುವ ಸಂಕರ್ಷಣರೂಪಿ ಭಗವಂತನ ಆವೇಶವುಳ್ಳವನು ಆಗಿರುವನಷ್ಟೇ.

 

ಏತಾದೃಶೇನೈವ ರಾಮೇಣ ಯುಕ್ತೇ ಕೃಷ್ಣೇ ದ್ವಾರ್ವತ್ಯಾಂ ನಿವಸತ್ಯಭ್ಜನಾಭೇ ।

ಸ್ವಪ್ನೇSನಿರುದ್ಧೇನ ರತಾ ಕದಾಚಿದ್ ಬಾಣಾತ್ಮಜೋಷಾ ಚಿತ್ರಲೇಖಾಮುವಾಚ ॥೨೨.೨೪೮॥

 

ಈರೀತಿಯಾಗಿ ಬಲರಾಮನಿಂದ ಕೂಡಿರುವ ಶ್ರೀಕೃಷ್ಣನು ದ್ವಾರಕಾಪಟ್ಟಣದಲ್ಲಿ ವಾಸಮಾಡುತ್ತಿರಲು, ಒಮ್ಮೆ ಬಾಣಾಸುರನ ಮಗಳಾದ ಉಷಾ ನಾಮಕ ಕನ್ಯೆಯು ಅನಿರುದ್ಧನಿಂದ ಸಂಗಮಕ್ಕೆ ಒಳಗಾದ ಕನಸನ್ನು ಕಂಡು – ಆ ವಿಷಯವನ್ನು ಚಿತ್ರಲೇಖ ಎನ್ನುವ ತನ್ನ ಆಪ್ತಸಖಿಗೆ ಹೇಳುತ್ತಾಳೆ.

[ಬಾಣ ಎನ್ನುವವನು  ಬಲಿಯ ಮಗ. ಅವನು ಭಗವದ್ ಭಕ್ತನೇ ಆಗಿದ್ದ. ಅವನಲ್ಲಿ ಬಾಣ ಎನ್ನುವ ಅಸುರನ ಆವೇಶವಿತ್ತು. ಅದರಿಂದಾಗಿ ಎಷ್ಟೋ ಬಾರಿ ಅವನು ಪರಮಾತ್ಮನಿಗೆ ವಿರುದ್ಧವಾಗಿ ನಡೆಯುತ್ತಿದ್ದ. ಅವನಿಗೆ ಉಷಾ ಎನ್ನುವ ಒಬ್ಬಳು ಮಗಳಿದ್ದಳು. ರುದ್ರ ದೇವರ ಅನುಗ್ರಹವನ್ನು ಪಡೆದಿರುವ ಆಕೆ ಒಮ್ಮೆ ಒಬ್ಬ ಸುರಾಸುಂದರಾಂಗ ಬಂದು ತನ್ನನ್ನು ಕೂಡಿದಂತೆ ಕನಸು ಕಂಡಳು.  ಈ ವಿಷಯವನ್ನು ಅವಳು ಚಿತ್ರಲೇಖ ಎನ್ನುವ ಆಪ್ತಸಖಿಯಲ್ಲಿ ಹೇಳಿದಳು]  

 

ತಮಾನಯೇತ್ಯಥ ಸಾ ಚಿತ್ರವಸ್ತ್ರೇ ಪ್ರದರ್ಶ್ಯ ಲೋಕಾನ್ ಸಮದರ್ಶಯತ್ ತಮ್ ।

ಪೌತ್ರಂ ವಿದಿತ್ವಾ ವಚನಾಚ್ಚ ತಸ್ಯಾಃ ಕೃಷ್ಣಸ್ಯ ತಂ ಚಾSನಯತ್ ತತ್ರ ರಾತ್ರೌ ॥೨೨.೨೪೯॥

 

ತಾನು ಕನಸಿನಲ್ಲಿ ಕಂಡ ಯುವಕನನ್ನು ಕರೆದು ತರುವಂತೆ ಹೇಳಲ್ಪಟ್ಟ ಚಿತ್ರಲೇಖೆಯು ಸ್ವಲ್ಪ ಯೋಚಿಸಿ, ಲೋಕದಲ್ಲಿರುವ ಎಲ್ಲಾ ಸುಂದರ ಪುರುಷರ ಚಿತ್ರವನ್ನು ಬರೆದು ಉಷಾದೇವಿಗೆ ತೋರಿಸಿದಳು. ಅಲ್ಲಿ ಅವಳು ಅನಿರುದ್ಧನ ಚಿತ್ರವನ್ನೂ ಬರೆದು ತೋರಿಸಿದಳು. ಅನಿರುದ್ಧ ಕೃಷ್ಣನ ಮೊಮ್ಮಗ ಎಂದು ತಿಳಿದೂ ಕೂಡಾ  ಉಷಾದೇವಿಯು ಅವನನ್ನು ಕರೆದು ತರುವಂತೆ ಹೇಳಿದಳು. ಚಿತ್ರಲೇಖೆ ಅನಿರುದ್ಧನನ್ನು  ರಾತ್ರಿ ಯಾರಿಗೂ ಗೊತ್ತಿಲ್ಲದಂತೆ(ಮಾಯೆಯಿಂದ) ಬಾಣನ ಪಟ್ಟಣವಾಗಿರುವ ಶೋಣಪುರಕ್ಕೆ ಕರೆತಂದಳು.

 

ಅನಿರುದ್ಧಂ ಗುಣೋದಾರಮಾನೀತಂ ಚಿತ್ರಲೇಖಯಾ ।

ಪ್ರಾಪ್ಯ ರೇಮೇ ಬಾಣಸುತಾ ದಿವಸಾನ್ ಸುಬಹೂನಪಿ ॥೨೨.೨೫೦॥

 

ಚಿತ್ರಲೇಖೆಯಿಂದ ಕರೆತರಲ್ಪಟ್ಟ ಶ್ರೇಷ್ಠಗುಣವಿರುವ ಅನಿರುದ್ಧನನ್ನು ಗಂಧರ್ವವಿಧಿಯಿಂದ ಮದುವೆಯಾದ ಬಾಣನ ಮಗಳಾಗಿರುವ ಉಷಾದೇವಿಯು ಬಹಳ ದಿವಸಗಳ ಕಾಲ ಅವನೊಂದಿಗೆ ಆನಂದಿಸಿದಳು.