ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 17, 2022

Mahabharata Tatparya Nirnaya Kannada 22-281-287

 

ಕ್ರಮೇಣ ಪಾರ್ತ್ಥಾ ಅಪಿ ಶೈಶಿರಂ ಗಿರಿಂ ಸಮಾಸದಂಸ್ತತ್ರ ಕೃಷ್ಣಾಂ ಸುದುರ್ಗ್ಗೇ ।

ವಿಷಜ್ಜನ್ತೀಮೀಕ್ಷ್ಯ ತೈಃ ಸಂಸ್ಮೃತೋSಥ ಹೈಡಿಮ್ಬ ಆಯಾತ್ ಸಹಿತೋ ನಿಶಾಚರೈಃ ॥೨೨.೨೮೧॥

 

ತದನಂತರ ಕೃಷ್ಣಪರಮಾತ್ಮನಿಂದ ಬೀಳ್ಕೊಂಡ ಪಾಂಡವರು ಪ್ರಭಾಸದಿಂದ ಹೊರಟು ಹಿಮಾಲಯ ಪರ್ವತವನ್ನು ಹೊಂದಿದರು. ಅಲ್ಲಿ ಕಡಿದಾದ ಪ್ರದೇಶದಲ್ಲಿ ಆಯಾಸಪಡುವ ದ್ರೌಪದಿಯನ್ನು ಕಂಡು ಪಾಂಡವರಿಂದ ಮನದಲ್ಲಿ ನೆನೆಯಲ್ಪಟ್ಟವನಾದ ಘಟೋತ್ಕಚನು ರಾಕ್ಷಸರಿಂದ ಒಡಗೂಡಿ ಅಲ್ಲಿಗೆ ಬಂದನು.

 

ಉವಾಹ ಕೃಷ್ಣಾಂ ಸ ತು ತಸ್ಯ ಭೃತ್ಯಾ ಊಹುಃ ಪಾರ್ತ್ಥಾಂಸ್ತೇ ಬದರ್ಯ್ಯಾಶ್ರಮಂ ಚ ।

ಪ್ರಾಪ್ಯಾತ್ರ ನಾರಾಯಣಪೂಜಯಾ ಕೃತಸ್ವಕೀಯಕಾರ್ಯ್ಯಾ ಯಯುರುತ್ತರಾಂ ದಿಶಮ್ ॥೨೨.೨೮೨॥

 

ಘಟೋತ್ಕಚ ತಾಯಿ ದ್ರೌಪದೀದೇವಿಯನ್ನು ಹೊತ್ತ. ಅವನ ದಾಸರೆಲ್ಲರೂ ಪಾಂಡವರನ್ನು ಹೊತ್ತರು. ಪಾಂಡವರು ಬದರೀಕಾಶ್ರಮವನ್ನು ಹೊಂದಿ, ಅಲ್ಲಿ ನರ-ನಾರಾಯಣರನ್ನು ಪೂಜಿಸುವವ ಮೂಲಕ ತಮ್ಮೆಲ್ಲ ಕಾರ್ಯಗಳನ್ನು ಮುಗಿಸಿಕೊಂಡು ಉತ್ತರದಿಕ್ಕಿಗೆ ತೆರಳಿದರು.

 

ಅತೀತ್ಯ ಶರ್ವಶ್ವಶುರಂ ಗಿರಿಂ ತೇ ಸುವರ್ಣ್ಣಕೂಟಂ ನಿಷಧಂ ಗಿರಿಂ ಚ ।

ಮೇರೋಃ ಪ್ರಾಚ್ಯಾಂ ಗನ್ಧಮಾದೇ ಗಿರೌ ಚ ಪ್ರಾಪುರ್ಬದರ್ಯ್ಯಾಶ್ರಮಮುತ್ತಮಂ ಭುವಿ ॥೨೨.೨೮೩॥

 

ರುದ್ರನ ಮಾವನಾದ ಹಿಮವತ್ಪರ್ವತವನ್ನು ದಾಟಿ, ಬಂಗಾರದ ಶಿಖರವನ್ನು ಹೊಂದಿರುವ ನಿಷಧ ಪರ್ವತವನ್ನೂ ದಾಟಿ, ಮೇರುಪರ್ವತದ ಪೂರ್ವದಿಕ್ಕಿನಲ್ಲಿರುವ ಗಂಧಮಾದನ ಗಿರಿಯಲ್ಲಿರುವ, ಭೂಲೋಕದಲ್ಲೇ ಉತ್ತಮವೆನಿಸಿರುವ ಇನ್ನೊಂದು ಬದರೀಕಾಶ್ರಮವನ್ನು ಕುರಿತು ಅವರು ತೆರಳಿದರು.

 

ತಸ್ಮಿನ್ ಮುನೀನ್ದ್ರೈರಭಿಪೂಜ್ಯಮಾನಾ ನಾರಾಯಣಂ ಪೂಜಯನ್ತಃ ಸದೈವ ।

ಚಕ್ರುಸ್ತಪೋ ಜ್ಞಾನಸಮಾಧಿಯುಕ್ತಂ ಸತ್ತತ್ವವಿದ್ಯಾಂ ಪ್ರತಿಪಾದಯನ್ತಃ ॥೨೨.೨೮೪॥

 

ಆ ಬದರಿಕಾಶ್ರಮದಲ್ಲಿ ಮುನಿಗಳಿಂದ ಸತ್ಕರಿಸಲ್ಪಟ್ಟವರಾದ ಪಾಂಡವರು, ಯಾವಾಗಲೂ ನಾರಾಯಣನನ್ನು ಪೂಜಿಸುವವರಾಗಿ, ವೇದಾಂತದ ಚಿಂತನೆಯನ್ನು ಮಾಡುತ್ತಾ, ಜ್ಞಾನ ಹಾಗೂ ಧ್ಯಾನದಿಂದ ಕೂಡಿರುವ ತಪಸ್ಸನ್ನು ಮಾಡಿದರು.

 

ಏವಂ ಬದರ್ಯ್ಯಾಂ ವಿಹರತ್ಸು ತೇಷು ಕ್ವಚಿದ್ ರಹಃ ಕೃಷ್ಣಯಾ ವಾಯುಸೂನೌ ।

ಸ್ಥಿತೇ ಗರುತ್ಮಾನುರಗಂ ಜಹಾರ ಮಹಾಹ್ರದಾದ್ ವಾಸುದೇವಾಸನಾಗ್ರ್ಯಃ ॥೨೨.೨೮೫

 

ಈರೀತಿಯಾಗಿ ಬದರಿಯಲ್ಲಿ ಪಾಂಡವರು ವಿಹಾರ ಮಾಡುತ್ತಿರಲು, ಒಮ್ಮೆ ಭೀಮಸೇನನು ದ್ರೌಪದಿಯೊಂದಿಗೆ ಏಕಾಂತದಲ್ಲಿರಲು, ಪರಮಾತ್ಮನ ವಾಹನದಲ್ಲಿಯೇ ಶ್ರೇಷ್ಠನಾದ ಗರುಡನು ಅಲ್ಲಿರುವ ದೊಡ್ಡ ಸರೋವರದಿಂದ ಹಾವಂದನ್ನು ಅಪಹರಿಸಿದನು.

 

ತತ್ಪಕ್ಷವಾತೇನ ವಿಚಾಲಿತೇ ತು ತಸ್ಮಿನ್ ಗಿರೌ ಕಮಲಂ ಹೈಮಮಗ್ರ್ಯಮ್ ।

ಪಪಾತ ಕೃಷ್ಣಾಭೀಮಯೋಃ ಸನ್ನಿಧಾನ ಉದ್ಯದ್ಭಾನೋರ್ಮ್ಮಣ್ಡಲಾಭಂ ಸುಗನ್ಧಮ್ ॥೨೨.೨೮೬॥

 

ಗರುಡನ ರೆಕ್ಕೆಯ ಬಡಿತದಿಂದ ಆ ಗಂಧಮಾದನ ಪರ್ವತವು ಅಲುಗಾಡಲು,  ಉದಯಿಸುವ ಸೂರ್ಯಮಂಡಲದಂತೆ ಹೊಳೆಯುವ, ಸುವರ್ಣಾತ್ಮಕವಾದ,  ಶ್ರೇಷ್ಠವಾದ, ಸುಗಂಧಿತವಾದ ತಾವರೆಯೊಂದು ದ್ರೌಪದಿ ಮತ್ತು ಭೀಮಸೇನರ ಹತ್ತಿರ ಬಂದು ಬಿದ್ದಿತು.

 

ದೃಷ್ಟ್ವಾSತಿಗನ್ಧಂ ವರಹೇಮಕಞ್ಜಂ ಕುತೂಹಲಾದ್ ದ್ರೌಪದೀ ಭೀಮಸೇನಮ್ ।

ಬಹೂನ್ಯಯಾಚತ್ ತಾದೃಶಾನ್ಯಾನುಭಾವಮವಿಷಹ್ಯಂ ಜಾನತೀ ದೇವದೈತ್ಯೈಃ ॥೨೨.೨೮೭॥

 

ದ್ರೌಪದಿಯು ಅತ್ಯಂತ ಪರಿಮಳಭರಿತವಾದ, ಶ್ರೇಷ್ಠವಾಗಿರುವ, ಬಂಗಾರವರ್ಣದ ಆ ತಾವರೆಯನ್ನು ಕಂಡು, ಕುತೂಹಲದಿಂದ, ಅದೇರೀತಿಯಾಗಿರುವ ಬಹಳ ಕಮಲಗಳು ತನಗೆ ಬೇಕು ಎಂದು ಭೀಮನನ್ನು ಕೇಳಿದಳು. ದೇವತೆಗಳು ಹಾಗೂ ದೈತ್ಯರಿಂದಲೂ ಎದುರಿಸಲಾಗದ ಬಲ ಭೀಮಸೇನನದ್ದು ಎಂದು ತಿಳಿದವಳಾಗಿಯೇ ದ್ರೌಪದಿ ಈ ರೀತಿ ಭೀಮಸೇನನನ್ನು ಕೇಳಿದಳು.  

Tuesday, August 16, 2022

Mahabharata Tatparya Nirnaya Kannada 22-273-280

 

ಏವಂ ವಸತ್ಯಮಿತಪೌರುಷವೀರ್ಯ್ಯಸಾರೇ ನಾರಾಯಣೇ ಸ್ವಪುರಿ ಶಕ್ರಧನಞ್ಜಯೋಕ್ತಃ ।

ಸಮ್ಪ್ರಾಪ್ಯ ಲೋಮಶಮುನಿಃ ಸಕಲಾನಿ ತೀರ್ತ್ಥಾನ್ಯಾಪ್ತುಂ ಸ ಪಾಣ್ಡುತನಯೇಷು ಸಹಾಯ ಆಸೀತ್ ॥೨೨.೨೭೩॥

 

ಈರೀತಿಯಾಗಿ ಶ್ರೀಕೃಷ್ಣ ಪರಮಾತ್ಮನು ಉತ್ಕೃಷ್ಟವಾಗಿರುವ ಪೌರುಷ ಮೊದಲಾದವುಗಳನ್ನು ಹೊಂದಿ ದ್ವಾರಕೆಯಲ್ಲಿ ಆವಾಸ ಮಾಡುತ್ತಿರಲು, ಇತ್ತ, ಇಂದ್ರನಿಂದಲೂ, ಅರ್ಜುನನಿಂದಲೂ ಹೇಳಿ ಕಳುಹಿಸಲ್ಪಟ್ಟ  ಲೋಮಶಮುನಿಗಳು ಯುಧಿಷ್ಠಿರನ ಬಳಿ ಬಂದು, ಎಲ್ಲಾ ತೀರ್ಥಕ್ಷೇತ್ರದಲ್ಲಿ ಸಂಚರಿಸಲು ಪಾಂಡವರಲ್ಲಿ ಮಾರ್ಗದರ್ಶಕರಾಗಿದ್ದರು.(ತಾತ್ಪರ್ಯ : ಸ್ವರ್ಗಲೋಕಕ್ಕೆ ಲೋಮಶಮುನಿಗಳು ಹೋಗಿದ್ದಾಗ, ಅರ್ಜುನ ಮತ್ತು ಇಂದ್ರ ಅವರಲ್ಲಿ - ಯುಧಿಷ್ಠಿರ, ಭೀಮಸೇನ , ನಕುಲ-ಸಹದೇವರು ಮತ್ತು ದ್ರೌಪದಿ - ಈ ಐದೂ ಜನರೂ ಕೂಡಾ ಭೂಮಿಯಲ್ಲಿರುವ ಸಕಲ ತೀರ್ಥಕ್ಷೇತ್ರಗಳನ್ನು ಸಂಚಾರ ಮಾಡಬೇಕು, ಇದು ದೈವೇಚ್ಛೆ ಎಂದು ಹೇಳಿ ಕಳುಹಿಸಿದ್ದರು. ಲೋಮಶಮುನಿಗಳು ಯುಧಿಷ್ಠಿರನಲ್ಲಿಗೆ ಬಂದು ವಿಷಯವನ್ನು ಹೇಳಿದರು ಮತ್ತು ತೀರ್ಥಯಾತ್ರೆಯಲ್ಲಿ ಪಾಂಡವರಿಗೆ ಮಾರ್ಗದರ್ಶಕರಾದರು).

 

ಪೃಥ್ವೀಂ ಪ್ರದಕ್ಷಿಣತ ಏತ್ಯ ಸಮಸ್ತತೀರ್ತ್ಥಸ್ನಾನಂ ಯಥಾಕ್ರಮತ ಏವ ವಿಧಾಯ ಪಾರ್ತ್ಥಾಃ।

ಸಮ್ಪೂಜ್ಯ ತೇಷು ನಿಖಿಲೇಷು ಹರಿಂ ಸುಭಕ್ತ್ಯಾ ಕೃಷ್ಣೇ ಸಮರ್ಪ್ಪಯಿತುಮಾಪುರಥ ಪ್ರಭಾಸಮ್ ।

ಸಮ್ಭಾವನಾಯ ಸಕಲೈರ್ಯ್ಯದುಭಿಃ ಸಮೇತಸ್ತೇಷಾಂ ಚ ರಾಮಸಹಿತೋ ಹರಿರಾಜಗಾಮ ॥೨೨.೨೭೪॥

 

ಪಾಂಡವರು ಇಡೀ ಭೂಮಿಯನ್ನು ಪ್ರದಕ್ಷಿಣೆ ಮಾಡಿ, ಕ್ರಮವಾಗಿ ಎಲ್ಲಾ ತೀರ್ಥಕ್ಷೇತ್ರಗಳ ಸ್ನಾನವನ್ನು ಶಾಸ್ತ್ರದಲ್ಲಿ ಹೇಳಿದಂತೆ ಮಾಡಿ, ಆ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಪರಮಾತ್ಮನನ್ನು ಪೂಜಿಸಿ, ಎಲ್ಲವನ್ನೂ ಶ್ರೀಕೃಷ್ಣಪರಮಾತ್ಮನಿಗೆ ಸಮರ್ಪಿಸಲು ಪ್ರಭಾಸಕ್ಷೇತ್ರಕ್ಕೆ ಬಂದರು.  ಆಗ ಶ್ರೀಕೃಷ್ಣನೂ ಕೂಡಾ  ಎಲ್ಲಾ ಯಾದವರಿಂದ ಕೂಡಿಕೊಂಡು ಬಲರಾಮನೊಂದಿಗೆ ಪ್ರಭಾಸ ಕ್ಷೇತ್ರಕ್ಕೆ ಬಂದನು.

 

ಪಾರ್ತ್ಥೈಃ ಸಮ್ಪೂಜಿತಸ್ತತ್ರ ಕೃಷ್ಣೋ ಯದುಗಣೈಃ ಸಹ ।

ಪಾರ್ತ್ಥಾನ್ ಸಮ್ಪೂಜಯಾಮಾಸುರ್ವೃಷ್ಣಯಶ್ಚಾSಜ್ಞಯಾ ಹರೇಃ             ॥೨೨.೨೭೫॥

 

ಪ್ರಭಾಸಕ್ಷೇತ್ರದಲ್ಲಿ ಯಾದವರ ಸಮೂಹದಿಂದ ಕೂಡಿರುವ ಶ್ರೀಕೃಷ್ಣನು ಪಾಂಡವರಿಂದ ಪೂಜಿಸಲ್ಪಟ್ಟನು. ಪರಮಾತ್ಮನ ಅಣತಿಯಂತೆ ಯಾದವರೂ ಕೂಡಾ ಪಾಂಡವರನ್ನು ಸತ್ಕರಿಸಿದರು.

 

ತತ್ರ ಭೀಮಂ ತಪೋವೇಷಂ ದೃಷ್ಟ್ವಾSತಿಸ್ನೇಹಕಾರಣಾತ್ ।

ದುರ್ಯ್ಯೋಧನಂ ನಿನ್ದಯತಿ ರಾಮೇ ಸಾತ್ಯಕಿರಬ್ರವೀತ್                        ॥೨೨.೨೭೬॥

 

ಅಲ್ಲಿ ತಪಸ್ವಿಯ ವೇಷದಲ್ಲಿ ಕಾಣುತ್ತಿರುವ ಭೀಮಸೇನನನ್ನು ಕಂಡು, ಸ್ನೇಹ-ಪ್ರೀತಿ ಉಕ್ಕಿಬಂದ ಕಾರಣ, ಬಲರಾಮನು ದುರ್ಯೋಧನನನ್ನು ಬಯ್ಯುತ್ತಿರಲು, ಸಾತ್ಯಕಿಯು ಮಾತನ್ನಾಡಿದ:

 

ಸರ್ವೇ ವಯಂ ನಿಹತ್ಯಾದ್ಯ ಸಕರ್ಣ್ಣಾನ್ ಧೃತರಾಷ್ಟ್ರಜಾನ್ ।

ಅಭಿಮನ್ಯುಂ ಸ್ಥಾಪಯಾಮೋ ರಾಜ್ಯೇ ಯಾವತ್ ತ್ರಯೋದಶಮ್             ॥೨೨.೨೭೭॥

 

ಸಂವತ್ಸರಂ ಸಮಾಪ್ಯೈವ ಪುರಂ ಯಾಸ್ಯನ್ತಿ ಪಾಣ್ಡವಾಃ ।

ತತೋ ಯುಧಿಷ್ಠಿರೋ ರಾಜಾ ರಾಜ್ಯಂ ಶಾಸತು ಪೂರ್ವವತ್                ॥೨೨.೨೭೮॥

 

‘ಬಲರಾಮ, ತಡವೇಕೆ? ನಾವೆಲ್ಲರೂ ಕೂಡಾ ಕರ್ಣನಿಂದ ಕೂಡಿರುವ ದುರ್ಯೋಧನ ಮೊದಲಾದವರನ್ನು ಇವತ್ತೇ ಕೊಂದು, ಹದಿಮೂರನೇ ವರ್ಷ ಮುಗಿಯುವ ತನಕ ಅಭಿಮನ್ಯುವನ್ನು ರಾಜನನ್ನಾಗಿ  ಮಾಡೋಣ. ತಮ್ಮ ಅಜ್ಞಾತವಾಸವನ್ನು ಮುಗಿಸಿ ಪಾಂಡವರು ಹಸ್ತಿನಪುರಕ್ಕೆ ಬಂದ ನಂತರ ಯುಧಿಷ್ಠಿರನು ಹಿಂದಿನಂತೆಯೇ ರಾಜ್ಯವನ್ನಾಳಲಿ’ ಎಂದನು. (ಅಲ್ಲಿಯತನಕ ಪ್ರತಿನಿಧಿಯಂತೆ ಅಭಿಮನ್ಯುವನ್ನು ರಾಜನನ್ನಾಗಿರಿಸೋಣ ಎನ್ನುವ ಸಲಹೆ)   

 

ಏವಂ ವದತ್ಯೇವ ಶಿನಿಪ್ರವೀರೇ ಜನಾರ್ದ್ದನಃ ಪಾರ್ತ್ಥಮುಖಾನ್ಯುದೀಕ್ಷ್ಯ ।

ಉವಾಚ ಶೈನೇಯ ನ ಪಾಣ್ಡುಪುತ್ರಾಃ ಪರೇಣ ಸಂಸಾಧಿತರಾಜ್ಯಕಾಮಾಃ ॥೨೨.೨೭೯॥

 

ಸ್ವಬಾಹುವೀರ್ಯ್ಯೇಣ ನಿಹತ್ಯ ಶತ್ರೂನಾಪ್ಸ್ಯನ್ತಿ ರಾಜ್ಯಂ ತ ಇತೀರಿತೇSಮುನಾ ।

ತಥೇತಿ ಪಾರ್ತ್ಥಾ ಅವದಂಸ್ತತಸ್ತೇ ಕೃಷ್ಣಂ ಪುರಸ್ಕೃತ್ಯ ಯಯುರ್ದ್ದಶಾರ್ಹಾಃ ॥೨೨.೨೮೦॥

 

ಈರೀತಿಯಾಗಿ ಸಾತ್ಯಕಿಯು ಹೇಳುತ್ತಿರಲು, ಶ್ರೀಕೃಷ್ಣ ಪರಮಾತ್ಮನು ಪಾಂಡವರ ಮುಖಗಳನ್ನು ಕಂಡು ಹೇಳಿದ: ಓ ಸಾತ್ಯಕಿಯೇ, ಪಾಂಡವರು ಬೇರೊಬ್ಬರು ರಾಜ್ಯವನ್ನು ಗೆದ್ದು ಕೊಟ್ಟರೆ, ಅದನ್ನು ಆಳಬೇಕೆಂದು ಬಯಸುವವರಲ್ಲ.  

ಪಾಂಡವರು  ಏನಿದ್ದರೂ ತಮ್ಮ ಸ್ವಂತ ತೋಳ್ಬಲದಿಂದ ಶತ್ರುಗಳನ್ನು ಕೊಂದು ರಾಜ್ಯವನ್ನು ಹೊಂದುತ್ತಾರೆ. (ಬೇರೊಬ್ಬರು ಸಹಾಯ ಮಾಡಬಹುದೇ ವಿನಃ, ಸ್ವಾಭಿಮಾನಿಗಳಾದ ಅವರು ಬೇರೊಬ್ಬರು ಗೆದ್ದುಕೊಟ್ಟರೆ ಅದನ್ನು ಸ್ವೀಕರಿಸಲಾರರು) ಎಂದನು.  ಆಗ ಪಾಂಡವರು ಕೃಷ್ಣನ ಅಭಿಪ್ರಾಯ ಸರಿ ಎಂದು ಹೇಳಿದರು. ತದನಂತರ ಯಾದವರು ಕೃಷ್ಣನನ್ನು ಮುಂದೆ ಮಾಡಿಕೊಂಡು ದ್ವಾರಕಾ ಪಟ್ಟಣಕ್ಕೆ ಹಿಂತಿರುಗಿದರು.

Monday, August 15, 2022

Mahabharata Tatparya Nirnaya Kannada 22-266-272

 

ಮೋಚಯಿತ್ವಾSನಿರುದ್ಧಂ ಚ ಯಯೌ ಬಾಣೇನ ಪೂಜಿತಃ ।

ಏವಮಗ್ನೀನಙ್ಗಿರಸಂ ಜ್ವರಂ ಸ್ಕನ್ದಮುಮಾಪತಿಮ್             ॥೨೨.೨೬೬॥

 

ಬಾಣಂ ಚಾಯತ್ನತೋ  ಜಿತ್ವಾ ಪ್ರಾಯಾದ್ ದ್ವಾರವತೀಂ ಪುನಃ ।

ಯೇನಾಯತ್ನೇನ ವಿಜಿತಃ ಸರ್ವಲೋಕಹರೋ ಹರಃ                 ॥೨೨.೨೬೭॥

 

ಕಿಂ ಜ್ವರಾದಿಜಯೋ ವಿಷ್ಣೋಸ್ತಸ್ಯಾನನ್ತಸ್ಯ ಕತ್ಥ್ಯತೇ ।

ಈದೃಶಾನನ್ತಸಙ್ಖ್ಯಾನಾಮ್ ಶಿವಾನಾಂ ಬ್ರಹ್ಮಣಾಮಪಿ             ॥೨೨.೨೬೮॥

 

ರಮಾಯಾ ಅಪಿ ಯದ್ವೀಕ್ಷಾಂ ವಿನಾ ನ ಚಲಿತುಂ ಬಲಮ್ ।

ನಚ ಜ್ಞಾನಾದಯೋ ಭಾವಾ ನಚಾಸ್ತಿತ್ವಮಪಿ ಕ್ವಚಿತ್                 ॥೨೨.೨೬೯॥

 

ಅನನ್ತಶಕ್ತೇಃ ಕೃಷ್ಣಸ್ಯ ನ ಚಿತ್ರಃ ಶೂಲಿನೋ ಜಯಃ ।

ಚಿತ್ರಲೇಖಾಸಮೇತೋಷಾನ್ವಿತಪೌತ್ರಸಮನ್ವಿತಃ                     ॥೨೨.೨೭೦॥

 

ಸರಾಮಃ ಸಸುತೋ ವೀನ್ದ್ರಮಾರು̐ಹ್ಯ ದ್ವಾರಕಾಂ ಗತಃ ।

ರೇಮೇ ತತ್ರ ಚಿರಂ ಕೃಷ್ಣೋ ನಿತ್ಯಾನನ್ದೋ ನಿಜೇಚ್ಛಯಾ             ॥೨೨.೨೭೧॥

 

ಶ್ರೀಕೃಷ್ಣನು ಅನಿರುದ್ಧನನ್ನು ಬಂಧನದಿಂದ ಬಿಡುಗಡೆಗೊಳಿಸಿ, ಬಾಣನಿಂದ ಸತ್ಕಾರಕ್ಕೆ ಒಳಗಾಗಿ ದ್ವಾರಕಾ ಪಟ್ಟಣಕ್ಕೆ ತೆರಳಿದನು.

ಈರೀತಿಯಾಗಿ ಶ್ರೀಕೃಷ್ಣ ಅಗ್ನಿಗಳನ್ನೂ, ರುದ್ರನ ಭೃತ್ಯನಾಗಿರುವ ಅಂಗಿರಸನನ್ನೂ, ಜ್ವರನನ್ನೂ, ಷಣ್ಮುಖನನ್ನೂ, ಸದಾಶಿವನನ್ನೂ, ಬಾಣನನ್ನೂ, ಹೀಗೆ ಎಲ್ಲರನ್ನೂ ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ದ್ವಾರಕಾ ಪಟ್ಟಣಕ್ಕೆ ತೆರಳಿದನು.

ಯಾವ ಪರಮಾತ್ಮನಿಂದ ಯಾವುದೇ ಯತ್ನವಿಲ್ಲದೆ ಪ್ರಳಯಕಾಲದಲ್ಲಿ ಎಲ್ಲಾ ಲೋಕವನ್ನು ನಾಶಮಾಡುವ ಸದಾಶಿವನು ಗೆಲ್ಲಲ್ಪಟ್ಟನೋ, ಅಂತಹ ನಾರಾಯಣನಿಗೆ ಜ್ವರ ಮೊದಲಾದವರ ಮೇಲಿನ ವಿಜಯವು  ಏನು ಆಶ್ಚರ್ಯ?

ಅನಂತ ಕಾಲದಲ್ಲಿ ಅನಂತ ಸಂಖ್ಯೆಯಲ್ಲಿರುವ ಬ್ರಹ್ಮ-ರುದ್ರಾದಿಗಳಿಗಾಗಲೀ, ಅಷ್ಟೇ ಅಲ್ಲದೇ ಲಕ್ಷ್ಮೀದೇವಿಗೂ ಕೂಡಾ, ಯಾರ ಕಡೆಗಣ್ಣ ನೋಟವು ಇಲ್ಲದೇ ಅಲುಗಾಡಲೂ ಕೂಡಾ ಬಲವಿಲ್ಲವೋ, ಜ್ಞಾನ ಮೊದಲಾಗಿರುವ ಸಂಗತಿಗಳು ಇರುವುದಿಲ್ಲವೋ, ಅಸ್ತಿತ್ವ ಕೂಡಾ ಸಾಧ್ಯವಾಗುವುದಿಲ್ಲವೋ, ಅಂತಹ  ಎಣೆಯಿರದ ಕಸುವಿರುವ ಶ್ರೀಕೃಷ್ಣ ಸದಾಶಿವನನ್ನು ಗೆಲ್ಲುವುದು ಆಶ್ಚರ್ಯಕರವಾದುದ್ದೇ ಅಲ್ಲ.

ಹೀಗೆ ಶ್ರೀಕೃಷ್ಣ ಚಿತ್ರಲೇಖೆಯೊಂದಿಗಿರುವ ಉಷಾದೇವಿಯಿಂದ ಕೂಡಿರುವ ಮೊಮ್ಮಗನಾದ ಅನಿರುದ್ಧನಿಂದ ಕೂಡಿಕೊಂಡು, ಬಲರಾಮ, ಪ್ರದ್ಯುಮ್ನನಿಂದಲೂ ಕೂಡಿಕೊಂಡು, ಗರುಡನನ್ನೇರಿ ದ್ವಾರಕೆಗೆ ತೆರಳಿದನು. ಅಲ್ಲಿ ಸದಾ ಆನಂದವನ್ನು ಹೊಂದಿರುವ ಶ್ರೀಕೃಷ್ಣನು ತನ್ನ ಬಯಕೆಯಂತೆ ಕ್ರೀಡಿಸಿದನು.

 

ಏವಂವಿಧಾನ್ಯಗಣಿತಾನಿ ಯದೂತ್ತಮಸ್ಯ ಕರ್ಮ್ಮಾಣ್ಯಗಣ್ಯಮಹಿಮಸ್ಯ ಮಹೋತ್ಸವಸ್ಯ ।

ನಿತ್ಯಂ ರಮಾಕಮಲಜನ್ಮಗಿರೀಶಶಕ್ರಸೂರ್ಯ್ಯಾದಿಭಿಃ ಪರಿನುತಾನಿ ವಿಮುಕ್ತಿದಾನಿ ॥೨೨.೨೭೨॥

 

ಎಣೆಯಿರದ ಮಹಿಮೆಯುಳ್ಳ, ಉತ್ಕೃಷ್ಟ ಆನಂದ ಸ್ವರೂಪನಾದ,  ಯಾವಾಗಲೂ ಕೂಡಾ ಲಕ್ಷ್ಮೀದೇವಿ, ಬ್ರಹ್ಮ, ರುದ್ರ, ಇಂದ್ರ, ಸೂರ್ಯ, ಇವರೇ ಮೊದಲಾಗಿರುವ ಸಮಸ್ತ ದೇವತೆಗಳಿಂದ ಸ್ತೋತ್ರಮಾಡಲ್ಪಡುವ ಪರಮಾತ್ಮನ ಕರ್ಮಗಳ ಸ್ತೋತ್ರ - ಮುಕ್ತಿಯನ್ನು ಕೊಡತಕ್ಕವುಗಳಾಗಿವೆ.