ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, October 4, 2022

Mahabharata Tatparya Nirnaya Kannada 22-300-307

 

[ಭೀಮಸೇನನ ಸಾಮರ್ಥ್ಯದ ಕುರಿತು ಹೇಳುತ್ತಾರೆ:]

 

‘ವಾತೇನ ಕುನ್ತ್ಯಾಂ ಬಲವಾನ್ ಸ ಜಾತಃ ಶೂರಸ್ತಪಸ್ವೀ ದ್ವಿಷತಾಂ ನಿಹನ್ತಾ ।

‘ಸತ್ಯೇ ಚ ಧರ್ಮ್ಮೇ ಚ ರತಃ ಸದೈವ ಪರಾಕ್ರಮೇ ಶತ್ರುಭಿರಪ್ರಧೃಷ್ಯಃ’ ॥೨೨.೩೦೦॥

 

ಆ ಭೀಮಸೇನನು ಮುಖ್ಯಪ್ರಾಣನಿಂದ ಕುಂತಿಯಲ್ಲಿ ಹುಟ್ಟಿದ ಬಲಿಷ್ಠನು. ಜ್ಞಾನಿಯಾಗಿರುವ ಅವನು ಸತ್ಯದಲ್ಲಿಯೂ, ಧರ್ಮದಲ್ಲಿಯೂ ರಥನಾಗಿರುವ, ಹಗೆಗಳನ್ನು ಕೊಲ್ಲುವ,  ಶತ್ರುಗಳಿಂದ ಕೊಲ್ಲಲಾಗದ ಅತ್ಯಂತ ಮಿಗಿಲಾಗಿರುವ ಪರಾಕ್ರಮಶಾಲಿ.  

[‘ವಾತೇನ ಕುನ್ತ್ಯಾಮ್- ಎಂದು ಮಹಾಭಾರತದಲ್ಲಿ(ವನಪರ್ವ ೧೫೫.೨೦) ಈ ಮೇಲಿನ ವಿವರಣೆ ಕಾಣಸಿಗುತ್ತದೆ.]

 

ತತ್ರಾಪರಾಂಶ್ಚೈವ ಬಹೂನಸತ್ಯಂ ನಿರೀಶ್ವರಂ ಚಾಪ್ರತಿಷ್ಠಂ ಚ ಲೋಕಮ್ ।

ಸಿದ್ಧೋsಹಮೀಶೋsಹಮಿತಿ ಬ್ರುವಾಣಾನ್ ಗುಣಾನ್ ವಿಷ್ಣೋಃ ಖ್ಯಾಪಯನ್ ವಾದತೋsಜೈತ್ ॥೨೨.೩೦೧॥

 

ಆ ಸೌಗಂಧಿಕವನದಲ್ಲಿ - ಈ ಜಗತ್ತು ಅಸತ್ಯ, ದೇವರಿಗೆ ಈ ಜಗದ ಒಡೆತನವಿಲ್ಲ. ತಾವು ಏನನ್ನು ಹೊಂದಬೇಕೋ ಅದನ್ನು ಹೊಂದಿದ್ದೇವೆ, ನಾನು ಎಲ್ಲದರ ಒಡೆಯ, ನಾನೇ ಬ್ರಹ್ಮ, ನಾನೇ ದೇವರು, ಎಂಬಿತ್ಯಾದಿಯಾಗಿ ಹೇಳುತ್ತಿರುವ ಬಹುಮಂದಿ ದೈತ್ಯರನ್ನು  – ‘ನಾರಾಯಣ ಸರ್ವೋತ್ತಮ, ಸರ್ವೋತ್ಕೃಷ್ಟ. ಅವನು ಎಲ್ಲಾ ಜ್ಞಾನಾನಂದಗಳಿಂದ ಪೂರ್ಣ, ಆದರೆ ನೀವು ಅಲ್ಲ’ ಎನ್ನುವ ವಾದದಿಂದ  ಭೀಮಸೇನ ಗೆದ್ದ.

 

ಭಿನ್ನಂ ವಿಷ್ಣುಮಧಿಕಂ ಸರ್ವತಶ್ಚ ಬ್ರುವನ್ ಪ್ರವೀರಾನ್ ಲಕ್ಷಮೇಷಾಂ ನಿಜಘ್ನೇ ।

‘ತೇ ತಸ್ಯ ವೀರ್ಯಂ ಚ ಬಲಂ ಚ ದೃಷ್ಟ್ವಾ ವಿದ್ಯಾಬಲಂ ಬಾಹುಬಲಂ ತಥೈವ ।

‘ಅಶಕ್ನುವನ್ತಃ ಸಹಿತಾಃ ಸಮಸ್ತಾ ಹತಪ್ರವೀರಾಃ ಸಹಸಾ ನಿವೃತ್ತಾಃ’ ॥೨೨.೩೦೨॥

 

ನಮಗಿಂತ ಭಿನ್ನನಾಗಿರುವ, ಎಲ್ಲರಿಗಿಂತಲೂ  ಮಿಗಿಲಾಗಿರುವ ನಾರಾಯಣನನ್ನು ಪ್ರತಿಪಾದನೆ ಮಾಡುತ್ತಾ, ಲಕ್ಷ ಸಂಖ್ಯೆಯ ರಾಕ್ಷಸರನ್ನು ಭೀಮ ಕೊಂದ. ಆ ರಾಕ್ಷಸರಾದರೋ ಭೀಮಸೇನನ ವೀರ್ಯವನ್ನೂ(ಹಿಡಿದ ಕೆಲಸವನ್ನು ಮಾಡಿ ಮುಗಿಸುವ ತಾಕತ್ತನ್ನೂ), ವಿದ್ಯಾಬಲವನ್ನೂ, ಬಾಹುಬಲವನ್ನು(ತೋಳ್ಬಲವನ್ನು) ಕಂಡು, ಅವನನ್ನು ಸಹಿಸಲಾರದೇ -ಎಷ್ಟೋ ಜನ ಭೀಮಸೇನನಿಂದ ಸತ್ತರು, ಉಳಿದವರು ಅಲ್ಲಿಂದ ಓಡಿಹೋದರು.

[ಈ ಶ್ಲೋಕವನ್ನು ನೇರವಾಗಿ ಮಹಾಭಾರತದ ವನಪರ್ವದಿಂದ ನೀಡಲಾಗಿದೆ. ‘ಅಶಕ್ನುವನ್ತಃ ಸಹಿತಂ ಸಮನ್ತಾದ್ ದ್ರುತಂ ಪ್ರವೀರಾಃ ಸಹಸಾ ನಿವೃತ್ತಾಃ’ (ವನಪರ್ವ ೧೫೫.೨೨)].

 

ವಿಕ್ರಮ್ಯ ತಾನ್ ಗದಯಾsಸೌ ನಿಹತ್ಯ ವಿದ್ರಾಪ್ಯ ಸರ್ವಾನ್ ನಳಿನೀಂ ಪ್ರವಿಶ್ಯ ।

ಪೀತ್ವಾsಮೃತಾಮ್ಭಶ್ಚ ತತೋsಮ್ಬುಜಾನಿ ದಿವ್ಯಾನಿ ಜಗ್ರಾಹ ಕುರುಪ್ರವೀರಃ ॥೨೨.೩೦೩॥

 

ಅವರೆಲ್ಲರನ್ನೂ ಆಕ್ರಮಿಸಿ ಗದೆಯಿಂದ ಕೊಂದು, ಎಲ್ಲರನ್ನೂ ಓಡಿಸಿ, ಸರೋವರವನ್ನು ಹೊಕ್ಕು, ಅಮೃತಕ್ಕೆ ಸಮಾನವಾಗಿರುವ ನೀರನ್ನು ಕುಡಿದ ಭೀಮಸೇನನು, ಸರೋವರದಲ್ಲಿನ ಅಲೌಕಿಕವಾದ ತಾವರೆಗಳನ್ನು ಹಿಡಿದುಕೊಂಡನು.

 

ಅಥೋ ಕಲಹಶಂಸೀನಿ ನಿಮಿತ್ತಾನಿ ಯುಧಿಷ್ಠಿರಃ ।

ದೃಷ್ಟ್ವಾ ಕೃಷ್ಣಾಮಪೃಚ್ಛಚ್ಚ ಕ್ವ ಭೀಮ ಇತಿ ದೀನಧೀಃ ॥೨೨.೩೦೪॥

 

ಇತ್ತ ಯುದ್ಧವನ್ನು ಸೂಚಿಸುವ ಶಕುನಗಳನ್ನು ಕಂಡ ಯುಧಿಷ್ಠಿರನು ಕಥಿಗೊಂಡವನಾಗಿ, ದ್ರೌಪದಿಯನ್ನು ಕುರಿತು ಭೀಮಸೇನನೆಲ್ಲಿದ್ದಾನೆ ಎಂದು ಪ್ರಶ್ನೆ ಮಾಡಿದ.

 

ಸೌಗನ್ಧಿಕಾರ್ತ್ಥಂ ಯಾತಂ ತಂ ಶ್ರುತ್ವಾ ಕೃಷ್ಣಾಮುಖಾನ್ನೃಪಃ ।

ಆರುಹ್ಯ ರಾಕ್ಷಸಶ್ರೇಷ್ಠಾನ್ ಕೃಷ್ಣಯಾ ಭ್ರಾತೃಭಿಃ ಸಹ ॥೨೨.೩೦೫॥

 

ಯಯೌ ವೃಕೋದರೋ ಯತ್ರ ದೃಷ್ಟ್ವಾ ಚೈನಮವಸ್ಥಿತಮ್ ।

ಉವಾಚ ಮೈವಮಿತ್ಯೇನಂ ಭೀತೋ ಗಿರಿಶಕೋಪತಃ ॥೨೨.೩೦೬॥

 

ಧರ್ಮರಾಜನು ದ್ರೌಪದಿಯಿಂದ ‘ಭೀಮನು ಸೌಗಂಧಿಕ ಪುಷ್ಪವನ್ನು ತರಲು ಹೋಗಿದ್ದಾನೆ’ ಎನ್ನುವ ವಿಷಯವನ್ನು ಕೇಳಿ, ಘಟೋತ್ಕಚ ಮೊದಲಾದವರನ್ನು ಏರಿ, ದ್ರೌಪದಿಯಿಂದಲೂ, ತಮ್ಮಂದಿರಿಂದಲೂ ಕೂಡಿಕೊಂಡು, ಎಲ್ಲಿ ಭೀಮಸೇನ ಇದ್ದನೋ ಅಲ್ಲಿಗೆ ತೆರಳಿದ. ಅಲ್ಲಿ ನಿರ್ಭೀತನಾಗಿ ನಿಂತ ವೃಕೋದರನನ್ನು ಕಂಡ ಧರ್ಮರಾಜ, ಶಿವನಿಗೆ ಸಿಟ್ಟು ಬಂದೀತು ಎನ್ನುವ ದೃಷ್ಟಿಯಿಂದ ‘ನೀನು ಹೀಗೆ ಮಾಡಬಾರದಿತ್ತು ಎಂದು ಹೇಳಿದ.

 

ದೇವೇಭ್ಯೋ ಮರಣಾದ್ ಭೀತಾ ರಾಕ್ಷಸಾ ವಿತ್ತಪಾಜ್ಞಯಾ ।

ತದೀಯಾಂ ನಳಿನೀಂ ತೇ ಹಿ ರಕ್ಷನ್ತ್ಯಸ್ಯಾsಶ್ರಯೋ ಹರಃ ।

ಜಾನನ್ ವಿತ್ತೇಶ್ವರೋ ಭೀಮಮಾಹಾತ್ಮ್ಯಂ ನ ಚುಕೋಪ ಹ ॥೨೨.೩೦೭॥

 

ದೇವತೆಗಳಿಂದ ಸಾವಿನ ಭಯದಿಂದ ರಾಕ್ಷಸರು ಕುಬೇರನ ಅಣತಿಯಿಂದ ಅವನಿಗೆ ಸೇರಿದ ಸರೋವರವನ್ನು ರಕ್ಷಿಸುತ್ತಿದ್ದರು. ಕುಬೇರನಿಗೆ ಶಿವ ಆಶ್ರಯನಷ್ಟೇ. ಆದರೆ ಕುಬೇರನು ಭೀಮಸೇನನ ಮಾಹಾತ್ಮ್ಯವನ್ನು ತಿಳಿದು ಮುನಿಯಲಿಲ್ಲ.

Monday, October 3, 2022

Mahabharata Tatparya Nirnaya Kannada 22-294-299

ತದ್ರೂಪವೃದ್ಧಿಂ ಭೀಮಸೇನೋsಥ ದೃಷ್ಟ್ವಾ ಶ್ರುತ್ವಾ ಹನೂಮನ್ಮುಖತಃ ಕಥಾಶ್ಚ ।

ರಾಮಸ್ಯ ತಚ್ಚಾತುರಾತ್ಮ್ಯಂ ಚ ದಿವ್ಯಂ ಚಾತುರ್ಯ್ಯುಗಂ ಧರ್ಮ್ಮಮಪ್ಯಗ್ರ್ಯಮೇವ ॥೨೨.೨೯೪॥

 

ದ್ವಜಾದ್ ಬೀಭತ್ಸೋರ್ಗ್ಗರ್ಜ್ಜನೇನೈವ ಶತ್ರುಪರಾಭವೇ ತೇನ ದತ್ತೇsರ್ಜ್ಜುನಸ್ಯ ।

ಯಯೌ ಪ್ರಣಮ್ಯೈನಮಾಶ್ವೇವ ಭೀಮಃ ಸೌಗನ್ಧಿಕಂ ವನಮತ್ಯಗ್ರ್ಯರೂಪಮ್ ॥೨೨.೨೯೫॥

 

ಭೀಮಸೇನನು ಹನುಮಂತನ ಆಕಾರವೃದ್ಧಿಯನ್ನು ಕಂಡು, ಹನುಮಂತನ ಮುಖದಿಂದ ರಾಮಾಯಣದ ಕಥೆಗಳನ್ನು ಕೇಳಿ, ಶ್ರೀರಾಮಚಂದ್ರನ  ಚತುರ್ಯುಗ ನಿಯಾಮಕತ್ವವನ್ನೂ ಕೇಳಿ, ನಾಲ್ಕೂ ಯುಗಗಳಲ್ಲಿ ವಿಹಿತವಾಗಿರುವ, ಅಲೌಕಿಕವಾಗಿರುವ, ಶ್ರೇಷ್ಠವಾಗಿರುವ ಧರ್ಮವನ್ನೂ ಕೇಳಿ, ಅರ್ಜುನನ ಧ್ವಜದಲ್ಲಿ ನಿಂತು ಕೇವಲ ಹುಂಕಾರದಿಂದ ಶತ್ರುಗಳನ್ನು ಸೋಲುವಂತೆ ಮಾಡುವೆನೆಂಬ ವರವು ಅರ್ಜುನನಿಗೆ ಕೊಡಲ್ಪಡುತ್ತಿರಲು, ಹನುಮಂತನಿಗೆ ನಮಸ್ಕರಿಸಿ, ಅತ್ಯಂತ ಶ್ರೇಷ್ಠವಾದ ಆಕೃತಿಯುಳ್ಳ ಸೌಗಂಧಿಕ ಪುಷ್ಪಗಳ ಕಾಡನ್ನು ಕುರಿತು ತೆರಳಿದನು.

 

ನರಾಗಮ್ಯಾಂ ನಳಿನೀಮೇತ್ಯ ತತ್ರ ದೃಷ್ಟ್ವಾ ಪದ್ಮಾನ್ಯದ್ಭುತಾಕಾರವನ್ತಿ ।

ಹೈಮಾನಿ ದಿವ್ಯಾನ್ಯತಿಗನ್ಧವನ್ತಿ ಸಮಾಸದದ್ ವಾರ್ಯ್ಯಮಾಣೋ ನರಾಶೈಃ ॥೨೨.೨೯೬॥

 

ಭೀಮಸೇನನು ಮನುಷ್ಯರು ಹೋಗಲಾಗದ ಆ ಸರೋವರವನ್ನು ಹೊಂದಿ, ಸರೋವರದಲ್ಲಿ ಅತ್ಯದ್ಭುತವಾದ ಆಕಾರವುಳ್ಳ, ಅಲೌಕಿಕವಾಗಿರುವ, ಅತ್ಯಂತ ಪರಿಮಳವನ್ನು ಬೀರುವ, ಪುಟಕ್ಕಿಟ್ಟಿರುವ ಬಂಗಾರದಂತೆ ಕೆಂಪಾಗಿರುವ ತಾವರೆಗಳನ್ನು ತೆಗೆದುಕೊಳ್ಳಲು, ನರಭಕ್ಷಕರಿಂದ ತಡೆಯಲ್ಪಟ್ಟರೂ  ಕೂಡಾ  ಸರೋವರಕ್ಕಿಳಿದ.

 

ತೇ ಭೀಮಮಾತ್ತಾಯುಧಮುಗ್ರರೂಪಂ ಮಹಾಬಲಂ ರೂಪನವಾವತಾರಮ್ ।

ನ್ಯವಾರಯನ್ ಕ್ರೋಧವಶಾಃ ಸಮೇತಾಃ ಶತಂ ಸಹಸ್ರಾಣ್ಯಜಿತಾನಿ ಸಙ್ಖೇ ॥೨೨.೨೯೭॥

 

ಲಕ್ಷಾಂತರ ಸಂಖ್ಯೆಯಿಂದ ಕೂಡಿರುವ, ಯುದ್ಧದಲ್ಲಿ ಸೋಲದ, ಕ್ರೋಧಾದೀನರೆಂಬ ಆ ದೈತ್ಯರು,  ಅತ್ಯಂತ ಬಲಿಷ್ಠನಾದ, ಬಹಳ ಸುಂದರನಾದ^, ಆಯುಧವನ್ನು ಹಿಡಿದು ಸಿಟ್ಟನ್ನು ಪ್ರದರ್ಶನ ಮಾಡುತ್ತಿರುವ ಭೀಮಸೇನನನ್ನು ತಡೆದರು.

[^ಮಹಾಭಾರತದಲ್ಲಿ(ವನಪರ್ವ ೧೪೮.೩೫) ವೇದವ್ಯಾಸರು  ‘ನವಾವತಾರೋ ರೂಪಸ್ಯ ವಿಕ್ರೀಡನ್ನಿವ ಪಾಣ್ಡವಃ’ ಎಂದು ವರ್ಣಿಸಿರುವ ಮಾತು ಇದಾಗಿದೆ].

 

ವರಾಚ್ಛಿವಸ್ಯೈವ ಪರೈರಜೇಯಾಃ ಶಸ್ತ್ರಾಸ್ತ್ರವೃಷ್ಟಿಂ ಮುಮುಚುಃ ಸುಭೀಮಾಮ್ ।

ಭೀಮೇsಖಿಲಜ್ಞೇ ತಪಸಾಂ ನಿಧಾನೇ ಬಲೋದಧೌ ಶೈವಶಾಸ್ತ್ರಂ ವದನ್ತಃ ॥೨೨.೨೯೮॥

 

ಸದಾಶಿವನ ಅನುಗ್ರಹದಿಂದ ಜಯಿಸಲು ಅಸಾಧ್ಯವಾಗಿರುವ ಆ ಕ್ರೋಧಾದೀನ ದೈತ್ಯರು, ತಪಸ್ಸಿಗೆ ಆಶ್ರಯೀಭೂತನಾದ,  ಬಲದಲ್ಲಿ ಸಮುದ್ರದಂತಿರುವ, ಸರ್ವಜ್ಞನಾದ ಭೀಮಸೇನನಲ್ಲಿ, ಶೈವಶಾಸ್ತ್ರವನ್ನು ಸಾಧಿಸುವವರಾಗಿ, ಅತಿ ಭಯಂಕರವಾದ ಶಸ್ತ್ರಾಸ್ತ್ರಗಳ ಮಳೆಗರೆದರು.

 

ತಾನ್ ವೈಷ್ಣವೈರೇವ ಶಾಸ್ತ್ರೈಃ ಸ ಭೀಮೋ ವಿಜಿತ್ಯ ಪೂರ್ವಂ ವಾಙ್ಮಯೇ ಸಙ್ಗರೇ ತು ।

ಶಸ್ತ್ರಾಸ್ತ್ರವರ್ಷಸ್ಯ ಕುರ್ವನ್ ಪ್ರತೀಪಂ ಜಘ್ನೇsಖಿಲಾನ್ ಗದಯಾ ತೇಷು ವೀರಾನ್ ॥೨೨.೨೯೯॥

 

ಅವರೆಲ್ಲರನ್ನೂ ಮೊದಲು ವಿಷ್ಣುಸಂಬಂಧಿಯಾದ ಶಾಸ್ತ್ರದ ವಾಙ್ಮಯ ಯುದ್ಧದಲ್ಲಿ ಗೆದ್ದು, ತದನಂತರ ಶಸ್ತ್ರಾಸ್ತ್ರವನ್ನು ಎಸೆದ ದೈತ್ಯರಿಗೆ ಪ್ರತೀಕಾರವನ್ನು ಮಾಡುತ್ತಾ, ಅವರಲ್ಲಿ ವೀರರಾಗಿರುವವರನ್ನು ಭೀಮಸೇನ ತನ್ನ ಗದೆಯಿಂದ ಕೊಂದ.

[ಮಹಾಭಾರತದಲ್ಲಿ(ವನಪರ್ವ ೧೫೫.೨೨) ‘ತೇತಸ್ಯವೀರ್ಯಂಚ ಬಲಂ ಚ ದೃಷ್ಟ್ವಾ ವಿದ್ಯಾಬಲಂ ಬಾಹುಬಲಂ ತಥೈವ’ ಎಂದು ಹೇಳಿದ್ದಾರೆ. ಆ ದೈತ್ಯರು ಭೀಮಸೇನನ ವಿದ್ಯಾಬಲವನ್ನೂ,  ಬಾಹುಬಲವನ್ನೂ ಕಂಡು ಸಹಿಸಲಾಗದೇ ಯುದ್ಧಕ್ಕೆ ಬಂದಿದ್ದರು ಎಂದು ವೇದವ್ಯಾಸರು ಅಲ್ಲಿ ಹೇಳಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು] 

Sunday, August 21, 2022

Mahabharata Tatparya Nirnaya Kannada 22-288-293

 

ತಯಾSರ್ತ್ಥಿತಃ ಸಗದಸ್ತುಙ್ಗಮೇನಂ ಗಿರಿಂ ವೇಗಾದಾರುಹದ್ ವಾಯುಸೂನುಃ।

ಪ್ರಶಸ್ಯಮಾನಃ ಸುರಸಿದ್ಧಸಙ್ಘೈಃ ಮೃದ್ನನ್ ದೈತ್ಯಾನ್ ಸಿಂಹಶಾರ್ದ್ದೂಲರೂಪಾನ್ ॥೨೨.೨೮೮॥

 

ತಾವರೆಗಾಗಿ ದ್ರೌಪದಿಯಿಂದ ಬೇಡಲ್ಪಟ್ಟ ಭೀಮಸೇನನು ಗದೆಯನ್ನು ಹಿಡಿದು, ಎತ್ತರವಾಗಿರುವ ಆ ಬೆಟ್ಟವನ್ನು ವೇಗದಿಂದ ಏರಿದನು. ದೇವತೆಗಳಿಂದಲೂ, ಸಿದ್ಧರಿಂದಲೂ ಸ್ತೋತ್ರಮಾಡಲ್ಪಟ್ಟವನಾಗಿ, ಸಿಂಹ-ಶಾರ್ದೂಲ ಮೊದಲಾದವುಗಳ ವೇಷದಲ್ಲಿರುವ ದೈತ್ಯರನ್ನು ತನ್ನ ಕಾಲಿನಿಂದ ಹೊಸಕಿಹಾಕುತ್ತಾ ಭೀಮ ಮುನ್ನೆಡೆದನು.

[ಮಹಾಭಾರತದ ವನಪರ್ವದಲ್ಲಿ (೧೪೮.೪೨) ಈ ವಿವರಣೆ ಕಾಣಸಿಗುತ್ತದೆ. ‘ಸಿಂಹವ್ಯಾಘ್ರಮೃಗಾಂಶ್ಚೈವ ಮರ್ದಯಾನೋ ಮಹಾಬಲಃ’ . ಸಿಂಹ-ವ್ಯಾಘ್ರ ಮೊದಲಾದ ಪ್ರಾಣಿಗಳನ್ನು ಹೊಸಕಿ ಹಾಕುತ್ತಾ ಭೀಮ ಮುಂದೆ ಸಾಗಿದ.  ಸಿಂಹವ್ಯಾಘ್ರಾಶ್ಚ ಸಙ್ಕ್ರುದ್ಧ ಭೀಮಸೇನಮಥಾSದ್ರವನ್ । ಶಕೃನ್ಮೂತ್ರಂ ಚ ಮುಞ್ಚಾನಾ ಭಯವಿಭ್ರಾನ್ತಮಾನಸಾಃ । ವ್ಯಾದಿತಾಸ್ಯಾ ಮಹಾರೌದ್ರಾ ವ್ಯನದನ್  ಭೀಷಣಾನ್ ರವಾನ್’ (೧೪೮.೫೦-೫೧). ]

 

ಆಸೇದಿವಾಂಸ್ತತ್ರ ಹನೂಮದಾಖ್ಯಂ ನಿಜಂ ರೂಪಂ ಪ್ರೋದ್ಯದಾದಿತ್ಯಭಾಸಮ್ ।

ಜಾನನ್ನಪ್ಯೇನಂ ಸ್ವೀಯರೂಪಂ ಸ ಭೀಮಶ್ಚಿಕ್ರೀಡ ಏತೇನ ಯಥಾ ಪರೇಣ ॥೨೨.೨೮೯॥

 

ಆ ಪರ್ವತದಲ್ಲಿ ಉದಯಿಸುವ ಸೂರ್ಯನಂತೆ ಪ್ರಕಾಶಿಸುತ್ತಿರುವ ‘ಹನುಮಂತ’ ಎಂಬ ತನ್ನದೇ ಆಗಿರುವ ಇನ್ನೊಂದು ರೂಪವನ್ನು ಭೀಮಸೇನ ಹೊಂದಿದನು. ಹನುಮಂತನನ್ನು ತನ್ನದ್ದಾದ ರೂಪವೆಂದು ತಿಳಿದಿದ್ದರೂ ಕೂಡಾ, ಬೇರೊಬ್ಬರೊಂದಿಗೆ ಯಾವ ರೀತಿ ಮಾತನ್ನಾಡುತ್ತಾರೋ ಹಾಗೆ ಅವನನ್ನು ಮಾತನಾಡಿಸಿ ಭೀಮ ಕ್ರೀಡಿಸಿದ.

 

ಧರ್ಮ್ಮೋ ದೇವಾನಾಂ ಪರಮೋ ಮಾನುಷತ್ವೇ ಸ್ವೀಯೇ ರೂಪೇSಪ್ಯನ್ಯವದೇವ ವೃತ್ತಿಃ ।

ಅನಾದಾನಂ ದಿವ್ಯಶಕ್ತೇರ್ವಿಶೇಷಾನ್ನರಸ್ವಭಾವೇ ಸರ್ವದಾ ಚೈವ ವೃತ್ತಿಃ ।

ತಸ್ಮಾದ್ ಭೀಮೋ ಹನುಮಾಂಶ್ಚೈಕ ಏವ ಜ್ಯಾಯಃಕನೀಯೋವೃತ್ತಿಮತ್ರಾಭಿಪೇದೇ ॥೨೨.೨೯೦॥

 

ದೇವತೆಗಳು ಮನುಷ್ಯರಾಗಿ ಅವತರಿಸಿದಾಗ, ಮನುಷ್ಯ ಸ್ವಭಾವದಂತೆ ವರ್ತಿಸುವುದು ಅವರಿಗೆ ಧರ್ಮವಾಗಿರುತ್ತದೆ. ದಿವ್ಯಶಕ್ತಿ ಇದ್ದರೂ ಕೂಡಾ ಅದನ್ನು ಅವರು ಬಳಸಬಾರದು. ವಿಶೇಷವಾಗಿ ಅವರು ನರಸ್ವಭಾವದಲ್ಲಿ(ಬೆವರುವುದು, ನಿದ್ರಿಸುವುದು, ಆಯಾಸಗೊಳ್ಳುವುದು, ಇತ್ಯಾದಿ ನರಸ್ವಭಾವದಲ್ಲಿ) ಯಾವಾಗಲೂ ಇರಬೇಕು. ಆ ಕಾರಣದಿಂದ ಭೀಮಸೇನ ಮತ್ತು ಹನುಮಂತ ಇಬ್ಬರೂ ಒಬ್ಬರೇ(ಮುಖ್ಯಪ್ರಾಣನೇ) ಆಗಿದ್ದರೂ ಕೂಡಾ ಹನುಮಂತ ದೊಡ್ಡಣ್ಣ ಹಾಗೂ ತಾನು ಚಿಕ್ಕವನು ಎನ್ನುವ ವರ್ತನೆಯನ್ನು ಭೀಮಸೇನ ಹೊಂದಿದನು.

 

ಸರ್ವೇ ಗುಣಾ ಆವೃತಾ ಮಾನುಷತ್ವೇ ಯುಗಾನುಸಾರಾನ್ಮೂಲರೂಪಾನುಸಾರಾತ್ ।

ಕ್ರಮಾತ್ ಸುರಾಣಾಂ ಭಾಗತೋSವ್ಯಕ್ತರೂಪಾ ಆದಾನತೋ ವ್ಯಕ್ತಿಮಾಯಾನ್ತ್ಯುರೂಣಾಮ್ ॥೨೨.೨೯೧॥

 

ಮನುಷ್ಯರಂತೆ ಬಂದಾಗ ದೇವತೆಗಳಿಗೆ ಯುಗಕ್ಕೆ ಅನುಸಾರವಾಗಿ ಅವರ ಮೂಲರೂಪದ ಎಲ್ಲಾ ಗುಣಗಳಿಗೂ ಆವರಣವಿರುತ್ತದೆ. (ದೇವತೆಗಳಿಗೆ ಜ್ಞಾನ, ಆನಂದ, ಬಲ, ಐಶ್ವರ್ಯ, ಎಲ್ಲವೂ ಇರಬಹುದು. ಆದರೆ ಮನುಷ್ಯತ್ವ ಹೊಂದಿದಾಗ ಅದು ಆವೃತವಾಗಿರುತ್ತದೆ). ಹೀಗಾಗಿ ಅವರವರ ಯೋಗ್ಯತೆಗೆ ಅನುಗುಣವಾಗಿ ಅವರ ಗುಣಗಳು ಅವ್ಯಕ್ತವಾಗಿರುತ್ತದೆ. ಸ್ವರೂಪಭೂತವಾದ ಅತ್ಯಂತ ದೊಡ್ಡ ಗುಣಗಳು ಸ್ವೀಕರಿಸಿದಾಗ ಅಭಿವ್ಯಕ್ತಿಯಾಗುತ್ತದೆ, ಇಲ್ಲದಿದ್ದರೆ ಅಭಿವ್ಯಕ್ತಿ ಆಗುವುದೇ ಇಲ್ಲ.

[ದೊಡ್ಡ ಗುಣವನ್ನು ಸ್ವೀಕರಿಸಿ ಅಭಿವ್ಯಕ್ತಗೊಳಿಸಿರುವುದಕ್ಕೆ  ಉತ್ತಮ ಉದಾಹರಣೆ ಬಲರಾಮ ಪ್ರಲಂಬಾಸುರನನ್ನು ಕೊಂದಿರುವ ಘಟನೆ.   ಆಟವಾಡುವಾಗ ಬಲರಾಮನಿಗೆ ಅವನು ರಾಕ್ಷಸ ಎನ್ನುವುದು ಗೊತ್ತಿರಲಿಲ್ಲ. ಪ್ರಲಂಬ ತನ್ನ ನಿಜರೂಪವನ್ನು ಆವಿಷ್ಕರಿಸಿ, ಬಲರಾಮನನ್ನು ಬೆನ್ನಿನಲ್ಲಿ ಹೊತ್ತು ಓಡಲು ಆರಂಭಿಸಿದಾಗ ಬಲರಾಮ ಭೀತನಾದ. ಆಗ ಕೃಷ್ಣ ಬಲರಾಮನಿಗೆ ಅವನ ಮೂಲರೂಪವನ್ನೂ ಮತ್ತು ಅವನ ಅಂತರ್ಯಾಮಿಯಾಗಿರುವ ತನ್ನ ವಿಶೇಷರೂಪವನ್ನು ನೆನಪಿಸಿದ. ಆಗ ಬಲರಾಮ ತನ್ನ ಮೂಲರೂಪದ ಗುಣವನ್ನು ಸ್ವೀಕರಿಸಿದ ಮತ್ತು  ಮುಷ್ಠಿಯಿಂದ ಗುದ್ದಿ ಪ್ರಲಂಬನನ್ನು ಕೊಂದ. ಮನುಷ್ಯರೂಪದಲ್ಲಿರುವ  ದೇವತೆಗಳು ತಮ್ಮ ದೊಡ್ಡಗುಣವನ್ನು ಈ ರೀತಿ ಸಾಂದರ್ಭಿಕವಾಗಿ ಸ್ವೀಕರಿಸುತ್ತಾರೆ.

ಇದೇ ಬಲರಾಮ ಲಕ್ಷ್ಮಣನಾಗಿದ್ದಾಗ, ರಾವಣನ ಆಯುಧದ ಹೊಡೆತ ತಿಂದು ಕೆಳಗೆ ಬಿದ್ದು ಮೂರ್ಛಿತನಾಗಿದ್ದ. ಆಗ ರಾವಣ ಅವನನ್ನು ಅಪಹರಿಸಿಕೊಂಡು ಹೋಗಲು ಪ್ರಯತ್ನಪಟ್ಟ. ಆದರೆ  ರಾವಣನಿಗೆ ಲಕ್ಷ್ಮಣನನ್ನು ಎತ್ತಲು ಸಾಧ್ಯವಾಗಲಿಲ್ಲ. ಏಕೆಂದರೆ ಲಕ್ಷ್ಮಣ ತನ್ನ ಮೂಲರೂಪದ ಚಿಂತನೆ ಮಾಡಿ(ಭೂಮಿಯನ್ನು ಹೊತ್ತ ಶೇಷನ  ಭಾರವನ್ನು ಚಿಂತನೆ ಮಾಡಿ) ಅದನ್ನು ಅಭಿವ್ಯಕ್ತಗೊಳಿಸಿದ. ಹೀಗಾಗಿ ರಾವಣನಿಂದ ಅವನನ್ನು ಅಲುಗಾಡಿಸಲೂ ಸಾಧ್ಯವಾಗಲಿಲ್ಲ.]

 

ನೈವಾವ್ಯಕ್ತಿಃ ಕಾಚಿದಸ್ತೀಹ ವಿಷ್ಣೋಃ ಪ್ರಾದುರ್ಭಾವೇSಪ್ಯತಿಸುವ್ಯಕ್ತಶಕ್ತೇಃ ।

ಇಚ್ಛಾವ್ಯಕ್ತಿಃ ಪ್ರಾಯಶೋ ಮಾರುತಸ್ಯ ತದನ್ಯೇಷಾಂ ವ್ಯಕ್ತತಾ ಕಾರಣೇನ ॥೨೨.೨೯೨॥

 

ಅತ್ಯಂತ ವ್ಯಕ್ತವಾಗಿರುವ ಸ್ವರೂಪಶಕ್ತಿಯುಳ್ಳ ನಾರಾಯಣನಿಗೆ ಅವತಾರ ಕಾಲದಲ್ಲಿಯೂ ಕೂಡಾ ಬಲಜ್ಞಾನಾದಿ ಗುಣಗಳ ವಿಷಯದಲ್ಲಿ ಅನಭಿವ್ಯಕ್ತಿ ಎನ್ನುವುದು ಇರುವುದೇ ಇಲ್ಲ. ಇನ್ನು ಮುಖ್ಯಪ್ರಾಣನಿಗೆ ಬಹುತೇಕ ಎಲ್ಲಾ ಸಮಯದಲ್ಲಿ,  ಬಯಸಿದರೆ ಬಲಜ್ಞಾನಾದಿಗಳು ಅಭಿವ್ಯಕ್ತಿಯಾಗುತ್ತದೆ. ಮುಖ್ಯಪ್ರಾಣನನ್ನು ಬಿಟ್ಟು ಇತರ ದೇವತೆಗಳಿಗೆ ಯಾವುದೋ ಒಂದು ಕಾರಣ ಇದ್ದರೆ ಮಾತ್ರ ಅಭಿವ್ಯಕ್ತಿಯಾಗುತ್ತದೆ.

[ತಾತ್ಪರ್ಯ: ಇಂದ್ರಾದಿ ದೇವತೆಗಳು ಅವತಾರ ಎತ್ತಿದಾಗ (ಉದಾಹರಣೆಗೆ ರುದ್ರ ಅಶ್ವತ್ಥಾಮನಾದ, ಇಂದ್ರ ಅರ್ಜುನನಾದ, ಶೇಷ ಬಲರಾಮನಾದ) ಅವರಿಗೆ ಅವತಾರದ ಎಲ್ಲಾ ಕಾಲದಲ್ಲಿ ಬಲಜ್ಞಾನದ ಅಭಿವ್ಯಕ್ತಿ ಇರುವುದಿಲ್ಲ. ಹೀಗಾಗಿ ಕೃಷ್ಣ ಅರ್ಜುನನಿಗೆ ಉಪದೇಶ ಮಾಡಬೇಕಾಯಿತು, ಬಲರಾಮನಿಗೆ ನೀನು ಶೇಷ, ಸಂಕರ್ಷಣ ರೂಪಿಯಾದ ನನ್ನ ಆವೇಶ ನಿನ್ನಲ್ಲಿದೆ ಎಂದು ಹೇಳಬೇಕಾಯಿತು. ಆದರೆ ಆ ರೀತಿ ಪರಮಾತ್ಮನಿಗಿಲ್ಲ. ಭಗವಂತ ರಾಮನಾದ, ವೇದವ್ಯಾಸನಾದ, ಕೃಷ್ಣನಾದ, ಇನ್ನೂ ಅನೇಕ ರೂಪದಿಂದ ಭೂಮಿಯಲ್ಲಿ ಅವತರಿಸಿದ. ಅಲ್ಲಿ ಅವನಿಗೆ ಮೂಲರೂಪದ ಬಲಜ್ಞಾನಾದಿಗಳು ಇರುವುದು-ಹೋಗುವುದು ಎಂಬುದಿಲ್ಲ. ಮುಖ್ಯಪ್ರಾಣನಿಗೆ(ಉದಾಹರಣೆಗೆ ಹನುಮಂತ, ಭೀಮ) ಬಹುತೇಕ ಎಲ್ಲಾ ಸಮಯದಲ್ಲಿ ಸ್ವೇಚ್ಛಾನುಸಾರ ಬಲಜ್ಞಾನಾದಿಗಳು ಅಭಿವ್ಯಕ್ತಿಯಾಗುತ್ತದೆ. ಮುಖ್ಯಪ್ರಾಣನನ್ನು ಬಿಟ್ಟು ಇತರ ದೇವತೆಗಳಿಗೆ ಯಾವುದೋ ಒಂದು ಕಾರಣ ಇದ್ದರೆ ಮಾತ್ರ ಮೂಲರೂಪದ ಬಲಜ್ಞಾನಾದಿ ಗುಣಗಳು ಅಭಿವ್ಯಕ್ತವಾಗುತ್ತದೆ].

 

ತಸ್ಮಾದ್ ಭೀಮೋ ಧರ್ಮ್ಮವೃದ್ಧ್ಯರ್ತ್ಥಮೇವ ಸ್ವೀಯೇ ರೂಪೇSಪ್ಯನ್ಯವದ್ ವೃತ್ತಿಮೇವ ।

ಪ್ರದರ್ಶಯಾಮಾಸ ತಥಾSಸುರಾಣಾಂ ಮೋಹಾಯೈವಾಶಕ್ತವಚ್ಛಕ್ತಿರೂಪಃ             ॥೨೨.೨೯೩॥

 

ಈ ಕಾರಣದಿಂದಲೇ ಭೀಮಸೇನನು ಧರ್ಮವೃದ್ಧಿಗಾಗಿ ಸ್ವಕೀಯನಾಗಿರುವ ಹನುಮಂತನ ಮುಂದೆ   ತನ್ನನ್ನು ಇತರರು ಹೇಗೋ ಹಾಗೆ ತೋರಿಸಿಕೊಂಡ. ಅಷ್ಟೇ ಅಲ್ಲ, ಅಸುರರನ್ನು ಮೊಹಿಸುವುದಕ್ಕಾಗಿಯೇ ಶಕ್ತಿರೂಪನಾದರೂ ಕೂಡಾ ಭೀಮ ಆಶಕ್ತನಂತೆ ತೋರಿದ. 

[ಹನುಮಂತನ ಬಾಲ ಎತ್ತುವ ಪ್ರಸಂಗ ನಡೆದಿರುವುದು ಭೀಮಸೇನನ ಅಜ್ಞಾನದಿಂದಾಗಲೀ, ಬಲಹೀನತೆಯಿಂದಾಗಲೀ ಅಲ್ಲ.   ಇದೆಲ್ಲವನ್ನೂ ಕೂಡಾ ನಾರಾಯಣ ಪಂಡಿತರು ಹೀಗೆ ವಿವರಿಸಿದ್ದಾರೆ: ‘ಗಚ್ಛನ್ ಸೌಗನ್ಧಿಕಾರ್ಥಂ ಪಥಿ ಸ ಹನುಮತಃ ಪುಚ್ಛಮಚ್ಛಸ್ಯ ಭೀಮಃ ಪ್ರೋದ್ಧರ್ತುಂನಾಶಕತ್ ಸ ತ್ವಮುಮುರುವಪುಷಾ ಭೀಷಯಾಮಾಸ ಚೇತಿ । ಪೂರ್ಣಜ್ಞಾನೌಜಸೋಸ್ತೇ ಗುರುತಮ ವಪುಷೋಃ ಶ್ರೀಮದಾನನ್ದತೀರ್ಥ ಕ್ರೀಡಾಮಾತ್ರಂ ತದೇತತ್ ಪ್ರಮದದ ಸುಧೀಯಾಂ ಮೋಹಕದ್ವೇಷಭಾಜಾಮ್’]