ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, October 4, 2022

Mahabharata Tatparya Nirnaya Kannada 22-308-315

 

ವಸತ್ಸು ತತ್ರ ಪಾರ್ತ್ಥೇಷು ಪುನಃ ಕತಿಪಯೈರ್ದ್ದಿನೈಃ ।

ಉವಾಚ ಭೀಮಸೇನಸ್ಯ ಯಶೋಧರ್ಮ್ಮಾಭಿವೃದ್ಧಯೇ ॥೨೨.೩೦೮॥

 

ಪಞ್ಚವರ್ಣ್ಣಾನಿ ಪುಷ್ಪಾಣಿ ಕೃಷ್ಣಾ ವೀಕ್ಷ್ಯಾsಹೃತಾನಿ ತು ।

ಮಾರುತೇನ ಕುಬೇರಸ್ಯ ಗೃಹಾನ್ನೃಭಿರಗಮ್ಯತಃ ॥೨೨.೩೦೯॥

 

ಅಲ್ಲಿಯೇ (ಆ ಪರ್ವತದ ಆಸುಪಾಸಿನಲ್ಲಿ) ಪಾಂಡವರು ವಾಸಮಾಡುತ್ತಿರಲು, ಮತ್ತೆ ಕೆಲವು ದಿನಗಳಾದ ಮೇಲೆ,  ಭೀಮಸೇನನ ಯಶಸ್ಸು ಹಾಗೂ ಪುಣ್ಯದ ಬೆಳವಣಿಗೆಯಾಗಲೆಂದು, ಮನುಷ್ಯರಿಂದ ತಲುಪಲು ಅಸಾಧ್ಯವಾದ, ಕುಬೇರನ ಮನೆಯಿಂದ ಗಾಳಿಯಿಂದ ತರಲ್ಪಟ್ಟ ಐದು ಬಣ್ಣದ ತಾವರೆಗಳನ್ನು ಕಂಡು ದ್ರೌಪದೀ ದೇವಿಯು ಭೀಮಸೇನನನ್ನು ಕುರಿತು ಹೇಳಿದಳು:

 

ಅಗಮ್ಯೋsಯಂ ಗಿರಿಃ ಸರ್ವೈಃ ಕುಬೇರೇಣಾಭಿಪಾಲಿತಃ ।

ಅದ್ಯ ತ್ವಯೈವ ಗನ್ತವ್ಯೋ ವಿಧೂಯಾಖಿಲರಾಕ್ಷಸಾನ್ ॥೨೨.೩೧೦॥

 

ಕುಬೇರನಿಂದ ಪಾಲಿತವಾಗಿರುವ ಈ ಪರ್ವತವು ಮನುಷ್ಯರಿಂದ ಹೋಗಲು ಅಸಾಧ್ಯವಾಗಿದೆ. ಆದಕಾರಣ ಅಲ್ಲಿರುವ ಎಲ್ಲಾ ರಾಕ್ಷಸರನ್ನು ತಿರಸ್ಕರಿಸಿ ನಿನ್ನಿಂದಲೇ ಹೋಗಲು ಶಕ್ಯವಾದುದು.

 

ಇತ್ಯುಕ್ತ ಆಶು ಸಗದಃ ಸಧನುಃ ಸಬಾಣೋ ಭೀಮೋ ಗಿರೀನ್ದ್ರಮಜಿತೋರುಬಲೋ ವಿಗಾಹೇ ।

ಪ್ರಾಪ್ತಂ ನಿಶಾಮ್ಯ ಬಲದೈವತಸೂನುಮತ್ರ ಪದ್ಮತ್ರಯಂ ನ್ಯರುಣದುದ್ಧತರಾಕ್ಷಸಾನಾಮ್ ॥೨೨.೩೧೧॥

 

ಈರೀತಿಯಾಗಿ ಹೇಳಲ್ಪಟ್ಟ, ಯಾರಿಗೂ ಮಣಿಯದ ಬಲವಿರುವ ಭೀಮಸೇನನು ಗದೆ, ಬಿಲ್ಲು-ಬಾಣದೊಂದಿಗೆ ಕೂಡಿ, ಪರ್ವತದತ್ತ ತೆರಳಿದನು. ಬಲಕ್ಕೆ ಅಧಿದೇವತೆಯಾಗಿರುವ ಮುಖ್ಯಪ್ರಾಣನ ಮಗನಾಗಿರುವ ಭೀಮಸೇನನನ್ನು ಕಂಡ ಕೋಟ್ಯಂತರ ರಾಕ್ಷಸರು ಅವನನ್ನು ತಡೆದರು.

 

ಅಗ್ರೇ ನಿಧಾಯ ಮಣಿಮನ್ತಮಜೇಯಮುಗ್ರಂ ಶಮ್ಭೋರ್ವರಾದ್ ವಿವಿಧಶಸ್ತ್ರಮಹಾಭಿವೃಷ್ಟ್ಯಾ ।

ತಾನ್ ಸರ್ವರಾಕ್ಷಸಗಣಾನ್ ಮಣಿಮತ್ಸಮೇತಾನ್ ಭೀಮೋ ಜಘಾನ ಸಪದಿ ಪ್ರವರೈಃ ಶರೌಘೈಃ ॥೨೨.೩೧೨॥

 

ರುದ್ರದೇವರ ವರದಿಂದ ಮಣಿಸಲಾಗದ ಭಯಂಕರನಾದ ಮಣಿಮಂತನನ್ನು ಮುಂದೆ ಇಟ್ಟುಕೊಂಡು, ತರತರದ ಆಯುಧವನ್ನು ಭೀಮಸೇನನ ಮೇಲೆ ಎಸೆಯುತ್ತಾ ಬರುತ್ತಿರುವ ಮಣಿಮಂತನಿಂದ ಕೂಡಿರುವ ಎಲ್ಲಾ ರಾಕ್ಷಸರ ಸಮೂಹವನ್ನು ಕೂಡಲೇ ಶ್ರೇಷ್ಠವಾಗಿರುವ ಬಾಣಗಳಿಂದ ಭೀಮಸೇನನು ಸಂಹರಿಸಿದನು.  

 

ಅವದ್ಧ್ಯಾಂಸ್ತಾನ್ ಕ್ಷಣೇನೈವ ಹತ್ವಾ ಭೀಮೋ ಮಹಾಬಲಃ ।

ರಣೇ ಕ್ರೋಧವಶಾನ್ ಸರ್ವಾನತಿಷ್ಠದ್ ಗಿರಿಮೂರ್ದ್ಧನಿ ॥೨೨.೩೧೩॥

 

ಮಹಾಪರಾಕ್ರಮಿಯಾದ ಭೀಮಸೇನನು ಯಾರೂ ಕೊಲ್ಲಲಾಗದ ಆ ಕ್ರೋಧವಶರನ್ನು ಕ್ಷಣದಲ್ಲಿ -ಯುದ್ಧದಲ್ಲಿ ಕೊಂದು ಬೆಟ್ಟದ ಮೇಲ್ಗಡೆ ನಿಂತನು.

 

ತೇ ಹತಾ ಭೀಮಸೇನೇನ ಪ್ರಾಪುರನ್ಧನ್ತಮೋsಖಿಲಾಃ ।

ಹತಾಃ ಸೌಗನ್ಧಿಕವನೇ ಮಣಿಮಾಂಶ್ಚ ಪುನಃ ಕಲೌ                     ॥೨೨.೩೧೪॥

 

ಜಾತೋ ಮಿಥ್ಯಾಮತಿಂ ಸಮ್ಯಗಾಸ್ತೀರ್ಯ್ಯಾsಪುಸ್ತಮೋsಧಿಕಮ್ ।

ತತೋ ವೈಶ್ರವಣೋ ರಾಜಾ ಮಹಾಪದ್ಮತ್ರಯೇ ಹತೇ             ॥೨೨.೩೧೫॥

 

ಆ ಎಲ್ಲಾ ದೈತ್ಯರು ಭೀಮಸೇನನಿಂದ ಕೊಲ್ಲಲ್ಪಟ್ಟವರಾಗಿ ಅನ್ಧಂತಮಸ್ಸನ್ನು ಹೊಂದಿದರು. ಕಲಿಯುಗದಲ್ಲಿ ಮಣಿಮಂತನು ಮತ್ತೆ ಹುಟ್ಟಿ ಎಲ್ಲವೂ ಮಿಥ್ಯಾ, ದೇವರಿಗೆ ಸ್ವತಂತ್ರವಾದ ಗುಣವಿಲ್ಲ, ಇತ್ಯಾದಿಯಾದ ಮಿಥ್ಯಾಜ್ಞಾನವನ್ನು ಪ್ರಚಾರಮಾಡಿ, ಅನ್ಧಂತಮಸ್ಸನ್ನು ಹೊಂದಿದನು.

Mahabharata Tatparya Nirnaya Kannada 22-300-307

 

[ಭೀಮಸೇನನ ಸಾಮರ್ಥ್ಯದ ಕುರಿತು ಹೇಳುತ್ತಾರೆ:]

 

‘ವಾತೇನ ಕುನ್ತ್ಯಾಂ ಬಲವಾನ್ ಸ ಜಾತಃ ಶೂರಸ್ತಪಸ್ವೀ ದ್ವಿಷತಾಂ ನಿಹನ್ತಾ ।

‘ಸತ್ಯೇ ಚ ಧರ್ಮ್ಮೇ ಚ ರತಃ ಸದೈವ ಪರಾಕ್ರಮೇ ಶತ್ರುಭಿರಪ್ರಧೃಷ್ಯಃ’ ॥೨೨.೩೦೦॥

 

ಆ ಭೀಮಸೇನನು ಮುಖ್ಯಪ್ರಾಣನಿಂದ ಕುಂತಿಯಲ್ಲಿ ಹುಟ್ಟಿದ ಬಲಿಷ್ಠನು. ಜ್ಞಾನಿಯಾಗಿರುವ ಅವನು ಸತ್ಯದಲ್ಲಿಯೂ, ಧರ್ಮದಲ್ಲಿಯೂ ರಥನಾಗಿರುವ, ಹಗೆಗಳನ್ನು ಕೊಲ್ಲುವ,  ಶತ್ರುಗಳಿಂದ ಕೊಲ್ಲಲಾಗದ ಅತ್ಯಂತ ಮಿಗಿಲಾಗಿರುವ ಪರಾಕ್ರಮಶಾಲಿ.  

[‘ವಾತೇನ ಕುನ್ತ್ಯಾಮ್- ಎಂದು ಮಹಾಭಾರತದಲ್ಲಿ(ವನಪರ್ವ ೧೫೫.೨೦) ಈ ಮೇಲಿನ ವಿವರಣೆ ಕಾಣಸಿಗುತ್ತದೆ.]

 

ತತ್ರಾಪರಾಂಶ್ಚೈವ ಬಹೂನಸತ್ಯಂ ನಿರೀಶ್ವರಂ ಚಾಪ್ರತಿಷ್ಠಂ ಚ ಲೋಕಮ್ ।

ಸಿದ್ಧೋsಹಮೀಶೋsಹಮಿತಿ ಬ್ರುವಾಣಾನ್ ಗುಣಾನ್ ವಿಷ್ಣೋಃ ಖ್ಯಾಪಯನ್ ವಾದತೋsಜೈತ್ ॥೨೨.೩೦೧॥

 

ಆ ಸೌಗಂಧಿಕವನದಲ್ಲಿ - ಈ ಜಗತ್ತು ಅಸತ್ಯ, ದೇವರಿಗೆ ಈ ಜಗದ ಒಡೆತನವಿಲ್ಲ. ತಾವು ಏನನ್ನು ಹೊಂದಬೇಕೋ ಅದನ್ನು ಹೊಂದಿದ್ದೇವೆ, ನಾನು ಎಲ್ಲದರ ಒಡೆಯ, ನಾನೇ ಬ್ರಹ್ಮ, ನಾನೇ ದೇವರು, ಎಂಬಿತ್ಯಾದಿಯಾಗಿ ಹೇಳುತ್ತಿರುವ ಬಹುಮಂದಿ ದೈತ್ಯರನ್ನು  – ‘ನಾರಾಯಣ ಸರ್ವೋತ್ತಮ, ಸರ್ವೋತ್ಕೃಷ್ಟ. ಅವನು ಎಲ್ಲಾ ಜ್ಞಾನಾನಂದಗಳಿಂದ ಪೂರ್ಣ, ಆದರೆ ನೀವು ಅಲ್ಲ’ ಎನ್ನುವ ವಾದದಿಂದ  ಭೀಮಸೇನ ಗೆದ್ದ.

 

ಭಿನ್ನಂ ವಿಷ್ಣುಮಧಿಕಂ ಸರ್ವತಶ್ಚ ಬ್ರುವನ್ ಪ್ರವೀರಾನ್ ಲಕ್ಷಮೇಷಾಂ ನಿಜಘ್ನೇ ।

‘ತೇ ತಸ್ಯ ವೀರ್ಯಂ ಚ ಬಲಂ ಚ ದೃಷ್ಟ್ವಾ ವಿದ್ಯಾಬಲಂ ಬಾಹುಬಲಂ ತಥೈವ ।

‘ಅಶಕ್ನುವನ್ತಃ ಸಹಿತಾಃ ಸಮಸ್ತಾ ಹತಪ್ರವೀರಾಃ ಸಹಸಾ ನಿವೃತ್ತಾಃ’ ॥೨೨.೩೦೨॥

 

ನಮಗಿಂತ ಭಿನ್ನನಾಗಿರುವ, ಎಲ್ಲರಿಗಿಂತಲೂ  ಮಿಗಿಲಾಗಿರುವ ನಾರಾಯಣನನ್ನು ಪ್ರತಿಪಾದನೆ ಮಾಡುತ್ತಾ, ಲಕ್ಷ ಸಂಖ್ಯೆಯ ರಾಕ್ಷಸರನ್ನು ಭೀಮ ಕೊಂದ. ಆ ರಾಕ್ಷಸರಾದರೋ ಭೀಮಸೇನನ ವೀರ್ಯವನ್ನೂ(ಹಿಡಿದ ಕೆಲಸವನ್ನು ಮಾಡಿ ಮುಗಿಸುವ ತಾಕತ್ತನ್ನೂ), ವಿದ್ಯಾಬಲವನ್ನೂ, ಬಾಹುಬಲವನ್ನು(ತೋಳ್ಬಲವನ್ನು) ಕಂಡು, ಅವನನ್ನು ಸಹಿಸಲಾರದೇ -ಎಷ್ಟೋ ಜನ ಭೀಮಸೇನನಿಂದ ಸತ್ತರು, ಉಳಿದವರು ಅಲ್ಲಿಂದ ಓಡಿಹೋದರು.

[ಈ ಶ್ಲೋಕವನ್ನು ನೇರವಾಗಿ ಮಹಾಭಾರತದ ವನಪರ್ವದಿಂದ ನೀಡಲಾಗಿದೆ. ‘ಅಶಕ್ನುವನ್ತಃ ಸಹಿತಂ ಸಮನ್ತಾದ್ ದ್ರುತಂ ಪ್ರವೀರಾಃ ಸಹಸಾ ನಿವೃತ್ತಾಃ’ (ವನಪರ್ವ ೧೫೫.೨೨)].

 

ವಿಕ್ರಮ್ಯ ತಾನ್ ಗದಯಾsಸೌ ನಿಹತ್ಯ ವಿದ್ರಾಪ್ಯ ಸರ್ವಾನ್ ನಳಿನೀಂ ಪ್ರವಿಶ್ಯ ।

ಪೀತ್ವಾsಮೃತಾಮ್ಭಶ್ಚ ತತೋsಮ್ಬುಜಾನಿ ದಿವ್ಯಾನಿ ಜಗ್ರಾಹ ಕುರುಪ್ರವೀರಃ ॥೨೨.೩೦೩॥

 

ಅವರೆಲ್ಲರನ್ನೂ ಆಕ್ರಮಿಸಿ ಗದೆಯಿಂದ ಕೊಂದು, ಎಲ್ಲರನ್ನೂ ಓಡಿಸಿ, ಸರೋವರವನ್ನು ಹೊಕ್ಕು, ಅಮೃತಕ್ಕೆ ಸಮಾನವಾಗಿರುವ ನೀರನ್ನು ಕುಡಿದ ಭೀಮಸೇನನು, ಸರೋವರದಲ್ಲಿನ ಅಲೌಕಿಕವಾದ ತಾವರೆಗಳನ್ನು ಹಿಡಿದುಕೊಂಡನು.

 

ಅಥೋ ಕಲಹಶಂಸೀನಿ ನಿಮಿತ್ತಾನಿ ಯುಧಿಷ್ಠಿರಃ ।

ದೃಷ್ಟ್ವಾ ಕೃಷ್ಣಾಮಪೃಚ್ಛಚ್ಚ ಕ್ವ ಭೀಮ ಇತಿ ದೀನಧೀಃ ॥೨೨.೩೦೪॥

 

ಇತ್ತ ಯುದ್ಧವನ್ನು ಸೂಚಿಸುವ ಶಕುನಗಳನ್ನು ಕಂಡ ಯುಧಿಷ್ಠಿರನು ಕಥಿಗೊಂಡವನಾಗಿ, ದ್ರೌಪದಿಯನ್ನು ಕುರಿತು ಭೀಮಸೇನನೆಲ್ಲಿದ್ದಾನೆ ಎಂದು ಪ್ರಶ್ನೆ ಮಾಡಿದ.

 

ಸೌಗನ್ಧಿಕಾರ್ತ್ಥಂ ಯಾತಂ ತಂ ಶ್ರುತ್ವಾ ಕೃಷ್ಣಾಮುಖಾನ್ನೃಪಃ ।

ಆರುಹ್ಯ ರಾಕ್ಷಸಶ್ರೇಷ್ಠಾನ್ ಕೃಷ್ಣಯಾ ಭ್ರಾತೃಭಿಃ ಸಹ ॥೨೨.೩೦೫॥

 

ಯಯೌ ವೃಕೋದರೋ ಯತ್ರ ದೃಷ್ಟ್ವಾ ಚೈನಮವಸ್ಥಿತಮ್ ।

ಉವಾಚ ಮೈವಮಿತ್ಯೇನಂ ಭೀತೋ ಗಿರಿಶಕೋಪತಃ ॥೨೨.೩೦೬॥

 

ಧರ್ಮರಾಜನು ದ್ರೌಪದಿಯಿಂದ ‘ಭೀಮನು ಸೌಗಂಧಿಕ ಪುಷ್ಪವನ್ನು ತರಲು ಹೋಗಿದ್ದಾನೆ’ ಎನ್ನುವ ವಿಷಯವನ್ನು ಕೇಳಿ, ಘಟೋತ್ಕಚ ಮೊದಲಾದವರನ್ನು ಏರಿ, ದ್ರೌಪದಿಯಿಂದಲೂ, ತಮ್ಮಂದಿರಿಂದಲೂ ಕೂಡಿಕೊಂಡು, ಎಲ್ಲಿ ಭೀಮಸೇನ ಇದ್ದನೋ ಅಲ್ಲಿಗೆ ತೆರಳಿದ. ಅಲ್ಲಿ ನಿರ್ಭೀತನಾಗಿ ನಿಂತ ವೃಕೋದರನನ್ನು ಕಂಡ ಧರ್ಮರಾಜ, ಶಿವನಿಗೆ ಸಿಟ್ಟು ಬಂದೀತು ಎನ್ನುವ ದೃಷ್ಟಿಯಿಂದ ‘ನೀನು ಹೀಗೆ ಮಾಡಬಾರದಿತ್ತು ಎಂದು ಹೇಳಿದ.

 

ದೇವೇಭ್ಯೋ ಮರಣಾದ್ ಭೀತಾ ರಾಕ್ಷಸಾ ವಿತ್ತಪಾಜ್ಞಯಾ ।

ತದೀಯಾಂ ನಳಿನೀಂ ತೇ ಹಿ ರಕ್ಷನ್ತ್ಯಸ್ಯಾsಶ್ರಯೋ ಹರಃ ।

ಜಾನನ್ ವಿತ್ತೇಶ್ವರೋ ಭೀಮಮಾಹಾತ್ಮ್ಯಂ ನ ಚುಕೋಪ ಹ ॥೨೨.೩೦೭॥

 

ದೇವತೆಗಳಿಂದ ಸಾವಿನ ಭಯದಿಂದ ರಾಕ್ಷಸರು ಕುಬೇರನ ಅಣತಿಯಿಂದ ಅವನಿಗೆ ಸೇರಿದ ಸರೋವರವನ್ನು ರಕ್ಷಿಸುತ್ತಿದ್ದರು. ಕುಬೇರನಿಗೆ ಶಿವ ಆಶ್ರಯನಷ್ಟೇ. ಆದರೆ ಕುಬೇರನು ಭೀಮಸೇನನ ಮಾಹಾತ್ಮ್ಯವನ್ನು ತಿಳಿದು ಮುನಿಯಲಿಲ್ಲ.

Monday, October 3, 2022

Mahabharata Tatparya Nirnaya Kannada 22-294-299

ತದ್ರೂಪವೃದ್ಧಿಂ ಭೀಮಸೇನೋsಥ ದೃಷ್ಟ್ವಾ ಶ್ರುತ್ವಾ ಹನೂಮನ್ಮುಖತಃ ಕಥಾಶ್ಚ ।

ರಾಮಸ್ಯ ತಚ್ಚಾತುರಾತ್ಮ್ಯಂ ಚ ದಿವ್ಯಂ ಚಾತುರ್ಯ್ಯುಗಂ ಧರ್ಮ್ಮಮಪ್ಯಗ್ರ್ಯಮೇವ ॥೨೨.೨೯೪॥

 

ದ್ವಜಾದ್ ಬೀಭತ್ಸೋರ್ಗ್ಗರ್ಜ್ಜನೇನೈವ ಶತ್ರುಪರಾಭವೇ ತೇನ ದತ್ತೇsರ್ಜ್ಜುನಸ್ಯ ।

ಯಯೌ ಪ್ರಣಮ್ಯೈನಮಾಶ್ವೇವ ಭೀಮಃ ಸೌಗನ್ಧಿಕಂ ವನಮತ್ಯಗ್ರ್ಯರೂಪಮ್ ॥೨೨.೨೯೫॥

 

ಭೀಮಸೇನನು ಹನುಮಂತನ ಆಕಾರವೃದ್ಧಿಯನ್ನು ಕಂಡು, ಹನುಮಂತನ ಮುಖದಿಂದ ರಾಮಾಯಣದ ಕಥೆಗಳನ್ನು ಕೇಳಿ, ಶ್ರೀರಾಮಚಂದ್ರನ  ಚತುರ್ಯುಗ ನಿಯಾಮಕತ್ವವನ್ನೂ ಕೇಳಿ, ನಾಲ್ಕೂ ಯುಗಗಳಲ್ಲಿ ವಿಹಿತವಾಗಿರುವ, ಅಲೌಕಿಕವಾಗಿರುವ, ಶ್ರೇಷ್ಠವಾಗಿರುವ ಧರ್ಮವನ್ನೂ ಕೇಳಿ, ಅರ್ಜುನನ ಧ್ವಜದಲ್ಲಿ ನಿಂತು ಕೇವಲ ಹುಂಕಾರದಿಂದ ಶತ್ರುಗಳನ್ನು ಸೋಲುವಂತೆ ಮಾಡುವೆನೆಂಬ ವರವು ಅರ್ಜುನನಿಗೆ ಕೊಡಲ್ಪಡುತ್ತಿರಲು, ಹನುಮಂತನಿಗೆ ನಮಸ್ಕರಿಸಿ, ಅತ್ಯಂತ ಶ್ರೇಷ್ಠವಾದ ಆಕೃತಿಯುಳ್ಳ ಸೌಗಂಧಿಕ ಪುಷ್ಪಗಳ ಕಾಡನ್ನು ಕುರಿತು ತೆರಳಿದನು.

 

ನರಾಗಮ್ಯಾಂ ನಳಿನೀಮೇತ್ಯ ತತ್ರ ದೃಷ್ಟ್ವಾ ಪದ್ಮಾನ್ಯದ್ಭುತಾಕಾರವನ್ತಿ ।

ಹೈಮಾನಿ ದಿವ್ಯಾನ್ಯತಿಗನ್ಧವನ್ತಿ ಸಮಾಸದದ್ ವಾರ್ಯ್ಯಮಾಣೋ ನರಾಶೈಃ ॥೨೨.೨೯೬॥

 

ಭೀಮಸೇನನು ಮನುಷ್ಯರು ಹೋಗಲಾಗದ ಆ ಸರೋವರವನ್ನು ಹೊಂದಿ, ಸರೋವರದಲ್ಲಿ ಅತ್ಯದ್ಭುತವಾದ ಆಕಾರವುಳ್ಳ, ಅಲೌಕಿಕವಾಗಿರುವ, ಅತ್ಯಂತ ಪರಿಮಳವನ್ನು ಬೀರುವ, ಪುಟಕ್ಕಿಟ್ಟಿರುವ ಬಂಗಾರದಂತೆ ಕೆಂಪಾಗಿರುವ ತಾವರೆಗಳನ್ನು ತೆಗೆದುಕೊಳ್ಳಲು, ನರಭಕ್ಷಕರಿಂದ ತಡೆಯಲ್ಪಟ್ಟರೂ  ಕೂಡಾ  ಸರೋವರಕ್ಕಿಳಿದ.

 

ತೇ ಭೀಮಮಾತ್ತಾಯುಧಮುಗ್ರರೂಪಂ ಮಹಾಬಲಂ ರೂಪನವಾವತಾರಮ್ ।

ನ್ಯವಾರಯನ್ ಕ್ರೋಧವಶಾಃ ಸಮೇತಾಃ ಶತಂ ಸಹಸ್ರಾಣ್ಯಜಿತಾನಿ ಸಙ್ಖೇ ॥೨೨.೨೯೭॥

 

ಲಕ್ಷಾಂತರ ಸಂಖ್ಯೆಯಿಂದ ಕೂಡಿರುವ, ಯುದ್ಧದಲ್ಲಿ ಸೋಲದ, ಕ್ರೋಧಾದೀನರೆಂಬ ಆ ದೈತ್ಯರು,  ಅತ್ಯಂತ ಬಲಿಷ್ಠನಾದ, ಬಹಳ ಸುಂದರನಾದ^, ಆಯುಧವನ್ನು ಹಿಡಿದು ಸಿಟ್ಟನ್ನು ಪ್ರದರ್ಶನ ಮಾಡುತ್ತಿರುವ ಭೀಮಸೇನನನ್ನು ತಡೆದರು.

[^ಮಹಾಭಾರತದಲ್ಲಿ(ವನಪರ್ವ ೧೪೮.೩೫) ವೇದವ್ಯಾಸರು  ‘ನವಾವತಾರೋ ರೂಪಸ್ಯ ವಿಕ್ರೀಡನ್ನಿವ ಪಾಣ್ಡವಃ’ ಎಂದು ವರ್ಣಿಸಿರುವ ಮಾತು ಇದಾಗಿದೆ].

 

ವರಾಚ್ಛಿವಸ್ಯೈವ ಪರೈರಜೇಯಾಃ ಶಸ್ತ್ರಾಸ್ತ್ರವೃಷ್ಟಿಂ ಮುಮುಚುಃ ಸುಭೀಮಾಮ್ ।

ಭೀಮೇsಖಿಲಜ್ಞೇ ತಪಸಾಂ ನಿಧಾನೇ ಬಲೋದಧೌ ಶೈವಶಾಸ್ತ್ರಂ ವದನ್ತಃ ॥೨೨.೨೯೮॥

 

ಸದಾಶಿವನ ಅನುಗ್ರಹದಿಂದ ಜಯಿಸಲು ಅಸಾಧ್ಯವಾಗಿರುವ ಆ ಕ್ರೋಧಾದೀನ ದೈತ್ಯರು, ತಪಸ್ಸಿಗೆ ಆಶ್ರಯೀಭೂತನಾದ,  ಬಲದಲ್ಲಿ ಸಮುದ್ರದಂತಿರುವ, ಸರ್ವಜ್ಞನಾದ ಭೀಮಸೇನನಲ್ಲಿ, ಶೈವಶಾಸ್ತ್ರವನ್ನು ಸಾಧಿಸುವವರಾಗಿ, ಅತಿ ಭಯಂಕರವಾದ ಶಸ್ತ್ರಾಸ್ತ್ರಗಳ ಮಳೆಗರೆದರು.

 

ತಾನ್ ವೈಷ್ಣವೈರೇವ ಶಾಸ್ತ್ರೈಃ ಸ ಭೀಮೋ ವಿಜಿತ್ಯ ಪೂರ್ವಂ ವಾಙ್ಮಯೇ ಸಙ್ಗರೇ ತು ।

ಶಸ್ತ್ರಾಸ್ತ್ರವರ್ಷಸ್ಯ ಕುರ್ವನ್ ಪ್ರತೀಪಂ ಜಘ್ನೇsಖಿಲಾನ್ ಗದಯಾ ತೇಷು ವೀರಾನ್ ॥೨೨.೨೯೯॥

 

ಅವರೆಲ್ಲರನ್ನೂ ಮೊದಲು ವಿಷ್ಣುಸಂಬಂಧಿಯಾದ ಶಾಸ್ತ್ರದ ವಾಙ್ಮಯ ಯುದ್ಧದಲ್ಲಿ ಗೆದ್ದು, ತದನಂತರ ಶಸ್ತ್ರಾಸ್ತ್ರವನ್ನು ಎಸೆದ ದೈತ್ಯರಿಗೆ ಪ್ರತೀಕಾರವನ್ನು ಮಾಡುತ್ತಾ, ಅವರಲ್ಲಿ ವೀರರಾಗಿರುವವರನ್ನು ಭೀಮಸೇನ ತನ್ನ ಗದೆಯಿಂದ ಕೊಂದ.

[ಮಹಾಭಾರತದಲ್ಲಿ(ವನಪರ್ವ ೧೫೫.೨೨) ‘ತೇತಸ್ಯವೀರ್ಯಂಚ ಬಲಂ ಚ ದೃಷ್ಟ್ವಾ ವಿದ್ಯಾಬಲಂ ಬಾಹುಬಲಂ ತಥೈವ’ ಎಂದು ಹೇಳಿದ್ದಾರೆ. ಆ ದೈತ್ಯರು ಭೀಮಸೇನನ ವಿದ್ಯಾಬಲವನ್ನೂ,  ಬಾಹುಬಲವನ್ನೂ ಕಂಡು ಸಹಿಸಲಾಗದೇ ಯುದ್ಧಕ್ಕೆ ಬಂದಿದ್ದರು ಎಂದು ವೇದವ್ಯಾಸರು ಅಲ್ಲಿ ಹೇಳಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು]