ಧರ್ಮ್ಮಾತ್ಮಜೋSಥಾSಜಗಾಮೋದಕಾನ್ತಂ
ದೃಷ್ಟ್ವಾ ಭ್ರಾತೄಂಸ್ತತ್ರ ದುಃಖಾಭಿತಪ್ತಃ ।
ಇಚ್ಛನ್ ಪಾತುಂ ವಾರಿ ಸಂವಾರಿತಶ್ಚ ಪಿತ್ರಾ ಬಕಾಗಾರಮಿತೇನ ನಾಪಾತ್ ॥೨೨.೪೫೧॥
ತದನಂತರ ಯಮಧರ್ಮನ ಮಗನಾದ ಯುಧಿಷ್ಠಿರನು ನೀರಿಗಾಗಿ ತೆರಳಿದ ತಮ್ಮಂದಿರರ್ಯಾರೂ ಹಿಂತಿರುಗದೇ
ಇರುವುದನ್ನು ನೋಡಿ, ತಾನೇ ನೀರಿನ ಬಳಿಗೆ ಬಂದ. ಅಲ್ಲಿ ತನ್ನ ತಮ್ಮಂದಿರನ್ನು ನೋಡಿ ದುಃಖಗೊಂಡರೂ
ಕೂಡಾ, ನೀರನ್ನು ಕುಡಿಯಲು ಬಯಸಿದವನಾದನು. ಆಗ ಕೊಕ್ಕರೆಯ ವೇಷದಲ್ಲಿರುವ ತಂದೆಯಿಂದ
ತಡೆಯಲ್ಪಟ್ಟವನಾಗಿ ನೀರನ್ನು ಕುಡಿಯಲಿಲ್ಲ.
ಅರ್ತ್ಥೇ ಭ್ರಾತೄಣಾಮೈಚ್ಛದಸೌ ತದೀಯಪ್ರಶ್ನಪ್ರತಿವ್ಯಾಹರಣಂ ದಯಾಳುಃ ।
ತತೋ ಧರ್ಮ್ಮೋ ಯಕ್ಷತನುಃ ಸ ಭೂತ್ವಾ ಪ್ರಶ್ನಾಂಶ್ಚಕ್ರೇ ವ್ಯಾಕರೋತ್ ತಾನ್ ಸ ಪಾರ್ತ್ಥಃ ॥೨೨.೪೫೨॥
ತನ್ನ ತಮ್ಮಂದಿರಿಗಾಗಿ ಆ ಯಕ್ಷನ ಪ್ರಶ್ನೆಗೆ ಉತ್ತರಕೊಡಲು ದಯಾಳುವಾದ ಧರ್ಮರಾಜ ಬಯಸಿದ. ಆಗ
ಬಕವೇಷವನ್ನು ಬಿಟ್ಟು, ದೊಡ್ಡ ಅವ್ಯಕ್ತವಾದ ವೇಷವನ್ನು ಧರಿಸಿದ ಯಮಧರ್ಮನು, ಯುಧಿಷ್ಠಿರನಿಗೆ ಪ್ರಶ್ನೆಗಳನ್ನು
ಮಾಡಿದನು ಮತ್ತು ಧರ್ಮರಾಜನು ಅದಕ್ಕೆ ಉತ್ತರಕೊಟ್ಟನು.
ತತಸ್ತುಷ್ಟೋ ವರಮಸ್ಮೈ ದದೌ ಸ ಏಕೋತ್ಥಾನಂ ಭ್ರಾತೃಮದ್ಧ್ಯೇ ಸ ವವ್ರೇ ।
ಯದ್ಯೇಕಃ ಸ್ಯಾನ್ನಕುಲೋSಸ್ತ್ವಿತ್ಯಥಾSಹ
ತುಷ್ಟೋ ಧರ್ಮ್ಮಃ ಕಥಮೇತತ್ ಕೃತಂ ತೇ ॥೨೨.೪೫೩॥
ಯುಧಿಷ್ಠಿರನ ಉತ್ತರದಿಂದ ಸಂತೃಪ್ತನಾದ ಯಮಧರ್ಮ, ಧರ್ಮರಾಜನಿಗೆ ಅವನ ತಮ್ಮಂದಿರರಲ್ಲಿ
ಯಾರಾದರೂ ಒಬ್ಬ ಮಾತ್ರ ಏಳಬಹುದು ಎನ್ನುವ ವರವನ್ನಿತ್ತನು. ಒಬ್ಬನೇ ಆದರೆ ನಕುಲನೇ ಏಳಲಿ ಎಂದು
ಯುಧಿಷ್ಠಿರ ಹೇಳಿದಾಗ, ತೃಪ್ತಿಗೊಂಡ ಯಮಧರ್ಮನು ಏಕಾಗಿ ಇದನ್ನು ಮಾಡಿದೆ(ಏಕಾಗಿ ನಕುಲನನ್ನು ಆರಿಸಿದೆ)
ಎಂದು ಕೇಳಿದನು.
ಅತಿಪ್ರೀತಿರ್ಭೀಮಸೇನೇ ತವಾಸ್ತಿ ಬಲೀ ಚಾಸೌ ರಾಜ್ಯಹೇತುಸ್ತವ ಸ್ಯಾತ್ ।
ಇತ್ಯುಕ್ತ ಊಚೇ ಮಾದ್ರಿಪುತ್ರಂ ವಿಹಾಯ ಕುನ್ತೀಪುತ್ರೋ ನ ಮಯೋತ್ಥಾಪನೀಯಃ ॥೨೨.೪೫೪॥
‘ನಿನಗೆ ಭೀಮಸೇನನಲ್ಲಿ ಅತ್ಯಂತ ಪ್ರೀತಿ ಇದೆ. ಅವನು ಅತ್ಯಂತ ಬಲಿಷ್ಠ. ಅವನು ನಿನಗೆ
ರಾಜ್ಯಕ್ಕೂ ಕಾರಣನಾಗುವನು’ ಎಂದು ಯಮಧರ್ಮ ಹೇಳಿದಾಗ, ಧರ್ಮರಾಜ ಹೇಳುತ್ತಾನೆ: ‘ಇಬ್ಬರಿಗೇ
ಅವಕಾಶವಿರಬೇಕಾದರೆ ಮಾದ್ರಿಯ ಮಗನನ್ನು ಬಿಟ್ಟು ಕುಂತಿಯ ಮಗನು ನನ್ನಿಂದ ಏಳಿಸಲು ಯೋಗ್ಯನಾಗುವುದಿಲ್ಲ’
ಎಂದು.
[ಇಬ್ಬರೇ ಎಂದು ಹೇಳಿದಾಗ ಕುಂತಿಯ ಮಗನಾಗಿ ನಾನು ಬದುಕಿದ್ದೇನೆ, ಹಾಗೆಯೇ ಮಾದ್ರಿಯ ಮಗನೊಬ್ಬ ಬೇಕಲ್ಲವೇ ? ಅದಕ್ಕಾಗಿ ನಕುಲನನ್ನು ಆರಿಸಿಕೊಂಡೆ ಎಂದು
ಧರ್ಮರಾಜ ಹೇಳಿದ]
ಸ ಏವಮುಕ್ತೋ ನಿತರಾಂ ಪ್ರೀಯಮಾಣ ಉತ್ಥಾಪಯಾಮಾಸ ಚ ತಾನ್ ಸಮಸ್ತಾನ್ ।
ಯತೇಷ್ಟರೂಪಪ್ರಾಪ್ತಿಮೇಷಾಂ ಪುನಶ್ಚ ಸ್ವಕಾಮತೋ ನಿಜರೂಪಾಪ್ತಿಮಾದಾತ್ ॥೨೨.೪೫೫॥
ಈರೀತಿಯಾಗಿ ಹೇಳಿದಾಗ ಆ ಯಮಧರ್ಮನು ಅತ್ಯಂತ ಪ್ರೀತಿಯುಳ್ಳವನಾಗಿ, ಅವರೆಲ್ಲರನ್ನೂ
ಎಬ್ಬಿಸಿದನು ಮತ್ತು ಅವರಿಗೆ ‘ನೀವು ಬಯಸಿದ ರೂಪವನ್ನು ತೆಗೆದುಕೊಳ್ಳಲು ಶಕ್ತರಾಗುವಿರಿ’ ಎನ್ನುವ
ವರವನ್ನು ಕೊಟ್ಟನು. ಅಷ್ಟೇ ಅಲ್ಲಾ, ‘ನೀವು ಬಯಸಿದಾಗ
ನಿಮ್ಮ ನಿಜರೂಪಕ್ಕೆ ಹಿಂತಿರುಗಬಹುದು’ ಎನ್ನುವ ವರವನ್ನೂ ಕೊಟ್ಟನು.
ಆಜ್ಞಾತವಾಸೇSಜ್ಞಾತತಾಂ ಸರ್ವದೈವ ದದೌ ತೇಷಾಂ ಪ್ರೀತ ಇವಾSನೃಶಂಸ್ಯಾತ್ ।
ಏವಂ ಕ್ರೀಡನ್ ಪುತ್ರ ಇತ್ಯಾತ್ಮನೈವ ಯಶೋಧರ್ಮಾವಾತ್ಮನೋ ವರ್ದ್ಧಯನ್ ಸಃ ॥೨೨.೪೫೬॥
ಅಜ್ಞಾತವಾಸದಲ್ಲಿ ಯಾವಾಗಲೂ ಆ ಪಾಂಡವರು ಯಾರಿಗೂ ತಿಳಿಯದಂತಾಗಿರಲಿ ಎನ್ನುವ ವರವನ್ನೂ
ಯಮಧರ್ಮ ಕೊಟ್ಟ. ಧರ್ಮರಾಜನ ಕರುಣೆಯಿಂದ ಪ್ರೀತನಾಗಿಯೋ ಎಂಬಂತೆ ಯಮಧರ್ಮ ಈ ಎಲ್ಲಾ ವರಗಳನ್ನು
ಪಾಂಡವರಿಗೆ ಕೊಟ್ಟ. ಮಗ ಎಂದು ತನ್ನಿಂದಲೇ ತಾನು ಸಂತೋಷಪಡುತ್ತಾ, ತನ್ನ ಕೀರ್ತಿಯನ್ನು (ಪುಣ್ಯವನ್ನು) ಜಗತ್ತಿನ ದೃಷ್ಟಿಯಲ್ಲಿ ಬೆಳೆಸಿಕೊಳ್ಳುತ್ತಾ ಯಮ ಸಂತಸಪಟ್ಟ.
[ಯಕ್ಷ ರೂಪದಿಂದ ತಾನೇ ಪ್ರಶ್ನೆಯನ್ನು ಕೇಳಿ, ಅದಕ್ಕೆ ಯುಧಿಷ್ಠಿರ ರೂಪದಲ್ಲಿ ತಾನೇ
ಉತ್ತರಕೊಟ್ಟು, ಅದಕ್ಕೆ ತಾನೇ ಪರೀಕ್ಷೆಯನ್ನು ಕೊಟ್ಟು, ತಾನೇ
ಮಾದ್ರಿಪುತ್ರನನ್ನು ಆರಿಸಿ, ಅದಕ್ಕೆ ಕಾರಣವನ್ನು ಹೇಳಿ, ತನಗೆಷ್ಟು ದಯೆ ಇದೇ ಎನ್ನುವುದನ್ನು ಜಗತ್ತಿನ ಜನರಿಗೆ ತೋರಿಸಿಕೊಂಡು, ತನ್ನ
ಕೀರ್ತಿಯನ್ನು ಯಮಧರ್ಮ ಬೆಳೆಸಿಕೊಂಡ]
ಯುಧಿಷ್ಠಿರಾತ್ಮನಸ್ತಸ್ಯ ಯಶೋಧರ್ಮ್ಮವಿವೃದ್ಧಯೇ ।
ಕೃತ್ವಾSರಣ್ಯಪಹಾರಾದಿ ಪುನರ್ದ್ದತ್ವಾ ಚ ತತ್ ಸ್ವಯಮ್ ।
ದಾತುಂ ವಿಪ್ರಾಯ ತದ್ಧಸ್ತೇ ಯಯೌ ಧರ್ಮ್ಮೋ ದಿವಂ ಪುನಃ ॥೨೨.೪೫೭॥
ಯುಧಿಷ್ಠಿರನೇ ಆಗಿರುವ ತನ್ನ ಕೀರ್ತಿ ಮತ್ತು ಪುಣ್ಯ ಬೆಳೆಯಲೆಂದು, ತಾನೇ ಅರಣಿಯನ್ನು
ಅಪಹರಿಸಿ, ತಾನೇ ಅದನ್ನು ತನ್ನ ಕೈಯಲ್ಲಿ ಕೊಟ್ಟು ‘ಬ್ರಾಹ್ಮಣರಿಗೆ ಕೊಡಿ’ ಎಂದು
ಹೇಳಿದ. ತದನಂತರ ಯಮಧರ್ಮನು ತನ್ನ ಲೋಕಕ್ಕೆ
ತೆರಳಿದ.
ತತೋ ರಾಜಾ ಭೀಮಸೇನಾರ್ಜ್ಜುನೌ ಚ ಸಾರ್ದ್ಧಂ ಯಮಾಭ್ಯಾಮರಣೀಂ ಪ್ರದಾಯ ।
ಮುದಾ ಯುತಾಃ ಕೃಷ್ಣಯಾ ಸಾರ್ದ್ಧಮೇವ ಸನ್ತುಷ್ಟುವುಃ ಕೃಷ್ಣಮನನ್ತಮಚ್ಯುತಮ್ ॥೨೨.೪೫೮॥
ತದನಂತರ ಧರ್ಮರಾಜನು, ಭೀಮಸೇನ, ಅರ್ಜುನ ಹಾಗೂ ನಕುಲ ಸಹದೇವರಿಂದ ಕೂಡಿಕೊಂಡು,
ಅರಣಿಯನ್ನು ಬ್ರಾಹ್ಮಣರಿಗೆ ಕೊಟ್ಟು, ದ್ರೌಪದಿಯ ಜೊತೆಗೂಡಿ, ಸಂತಸದಿಂದ ಎಣೆಯಿರದ
ಗುಣ-ಪರಾಕ್ರಮವುಳ್ಳ, ತನ್ನ ಪದವಿಯಿಂದ ಎಂದೂ ಜಾರದ ಶ್ರೀಕೃಷ್ಣನನ್ನು ಚನ್ನಾಗಿ ಸ್ತೋತ್ರಮಾಡಿದರು.
(ಹೀಗೆ ಪಾಂಡವರು ತಮ್ಮ ವನವಾಸವನ್ನು ಕಳೆದರು).
[ಆದಿತಃ
ಶ್ಲೋಕಾಃ : ೩೧೮೧+೪೫೮=೩೬೩೯]
॥ ಇತಿ
ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಅರಣೀಪ್ರಾಪ್ತಿರ್ನ್ನಾಮ ದ್ವಾವಿಂಶೋSದ್ಧ್ಯಾಯಃ ॥
*********