ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 4, 2022

Mahabharata Tatparya Nirnaya Kannada 23-36-48

 

ತತೋSಪರದಿನೇ ಸರ್ವೇ ಭೀಷ್ಮದ್ರೋಣಪುರಸ್ಸರಾಃ ।

ರಹಿತಂ ಕೀಚಕೈರ್ಮ್ಮಾತ್ಸ್ಯಂ ಶಕ್ಯಂ ಮತ್ವಾSಭಿನಿರ್ಯ್ಯಯುಃ ॥೨೩.೩೬॥

 

ಮಾರನೇದಿನ ಕೀಚಕರಿಂದ ರಹಿತವಾಗಿರುವ ಮತ್ಸ್ಯದೇಶವನ್ನು ಸುಲಭತುತ್ತು ಎಂದು ತಿಳಿದು ಭೀಷ್ಮ-ದ್ರೋಣಾದಿಗಳು ವಿರಾಟನಗರದತ್ತ ಯುದ್ಧಕ್ಕಾಗಿ ತೆರಳಿದರು.

 

[ಹಾಗಿದ್ದರೆ ಈ ಹಿಂದೆ ಏಕೆ ಈ ಭೀಷ್ಮಾದಿಗಳು ವಿರಾಟನನ್ನು ಗೆಲ್ಲುವ ಪ್ರಯತ್ನ ಮಾಡಿರಲಿಲ್ಲ ಎಂದರೆ ಹೇಳುತ್ತಾರೆ-]

 

ಕೀಚಕಸ್ಯ ಹಿಡಿಮ್ಬಸ್ಯ ಬಕಕಿರ್ಮ್ಮೀರಯೋರಪಿ ।

ಜರಾಸನ್ಧಸ್ಯ ನೃಪತೇಃ ಕಂಸಾದೀನಾಂ ಚ ಸರ್ವಶಃ ॥೨೩.೩೭॥

 

ನ ಬಾಧನಾಯ ಭೀಷ್ಮಾದ್ಯಾ ಅಪಿ ಶೇಕುಃ ಕಥಞ್ಚನ ।

ತಸ್ಮಾತ್ ತೇ ಕೀಚಕಂ ಶಾನ್ತಂ ಶ್ರುತ್ವಾ ಮಾತ್ಸ್ಯಂ ಯಯುರ್ಯ್ಯುಧೇ ॥೨೩.೩೮॥

 

ಕೀಚಕ, ಹಿಡಿಂಬ, ಬಕ, ಕಿರ್ಮೀರ, ಜರಾಸಂಧ, ಕಂಸ ಮೊದಲಾದವರನ್ನು ಗೆಲ್ಲಲು ಭೀಷ್ಮಾದಿಗಳೂ ಕೂಡಾ ಶಕ್ತರಾಗಿರಲಿಲ್ಲ. ಆ ಕಾರಣದಿಂದ ಅವರು ಕೀಚಕನು ಸತ್ತಿದ್ದಾನೆ ಎನ್ನುವುದನ್ನು ತಿಳಿದು, ವಿರಾಟನಗರವನ್ನು ಕುರಿತು ಯುದ್ಧಕ್ಕಾಗಿ ತೆರಳಿದರು.

 

[ದ್ರೋಣಾಚಾರ್ಯರು ಈ ಯುದ್ಧದಲ್ಲಿ ಪಾಲ್ಗೊಂಡಿರುವುದಕ್ಕೆ ಕಾರಣವನ್ನು ಹೇಳುತ್ತಾರೆ-]

 

ಯತಿಷ್ಯೇ ರಕ್ಷಿತುಂ ಭೀಮಾದ್ ಧಾರ್ತ್ತರಾಷ್ಟ್ರಾನಿತಿ ಸ್ವಕಾಮ್ ।

ಸತ್ಯಾಂ ಕರ್ತ್ತುಂ ಪ್ರತಿಜ್ಞಾಂ ತು ಯಯೌ ದ್ರೋಣಃ ಸಪುತ್ರಕಃ ॥೨೩.೩೯॥

 

‘ಭೀಮಸೇನನಿಂದ ದುರ್ಯೋಧನಾದಿಗಳನ್ನು ರಕ್ಷಿಸಲು ಪ್ರಯತ್ನಪಡುತ್ತೇನೆ’ ಎನ್ನುವ ತನ್ನ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಲು ದ್ರೋಣಾಚಾರ್ಯರು ಅಶ್ವತ್ಥಾಮನಿಂದ ಕೂಡಿಕೊಂಡು ತೆರಳಿದರು.

 

[ಯುದ್ಧಕ್ಕೆಂದು ಬರುತ್ತಿರುವ ಕೌರವಾದಿಗಳ ಯೋಚನೆ ಏನಿತ್ತು? ಅವರಿಗೆ ನಿಖರವಾಗಿ ಪಾಂಡವರು ವಿರಾಟನಗರದಲ್ಲಿದ್ದಾರೆ ಎಂದು ಗೊತ್ತಿತ್ತೇ? - ]

 

 

ಯದಿ ಯುದ್ಧಾಯ ನಿರ್ಯ್ಯಾನ್ತಿ ಜ್ಞಾತಾಃ ಸ್ಯುಃ ಪಾಣ್ಡವಾಸ್ತದಾ ।

ನ ಚೇದ್ ವಿರಾಟಮನತಂ ನಮಯಿಷ್ಯಾಮಹೇ ವಯಮ್ ।

ಇತಿ ಮತ್ವಾ ವಿರಾಟಸ್ಯ ಜಗೃಹುರ್ಗ್ಗಾಃ ಸಮನ್ತತಃ ॥೨೩.೪೦॥

 

ಒಂದು ವೇಳೆ ಪಾಂಡವರು ಯುದ್ಧಕ್ಕೆಂದು ಬಂದರೆ ಆಗ ತಿಳಿಯಲ್ಪಡುತ್ತಾರೆ,  ಇಲ್ಲದಿದ್ದರೆ ಈತನಕ ತಮಗೆ ಬಾಗದ ವಿರಾಟನನ್ನು ನಾವು ಬಗ್ಗಿಸುತ್ತೇವೆ ಎಂದುಕೊಂಡು ಅವರು ವಿರಾಟರಾಜನ  ಗೋವುಗಳನ್ನು ಅಪಹರಿಸಿದರು.

 

ತದೋತ್ತರಃ ಸಾರಥಿತ್ವೇ ಪ್ರಕಲ್ಪ್ಯ ಪಾರ್ತ್ಥಂ ಯಯೌ ತಾನ್ ನಿಶಾಮ್ಯೈವ ಭೀತಃ ।

ತತೋSರ್ಜ್ಜುನಃ ಸಾರಥಿಂ ತಂ ವಿಧಾಯ ಕೃಚ್ಛ್ರೇಣ ಸಂಸ್ಥಾಪ್ಯ ಚ ತಂ ಯಯೌ ಕುರೂನ್ ॥೨೩.೪೧॥

 

ಆಗ ವಿರಾಟರಾಜನ ಮಗನಾದ ಉತ್ತರಕುಮಾರನು (ಭೂಮಿನ್ಜಯನು) ಅರ್ಜುನನನ್ನು ಸಾರಥಿಯನ್ನಾಗಿ ಮಾಡಿಕೊಂಡು ಕೌರವರ ವಿರುದ್ಧ ಯುದ್ಧಕ್ಕೆಂದು ತೆರಳಿದನು. ಅಲ್ಲಿ ಅವನು ಕೌರವರನ್ನು ನೋಡಿಯೇ ಭಯಗ್ರಸ್ತನಾದನು. ತದನಂತರ ಅರ್ಜುನನು ಓಡುತ್ತಿರುವ ಅವನನ್ನು ಕಷ್ಟಪಟ್ಟು ಹಿಡಿದು, ಅವನನ್ನೇ ಸಾರಥಿಯನ್ನಾಗಿ ಮಾಡಿಕೊಂಡು ಕೌರವರನ್ನು ಕುರಿತು ಯುದ್ಧಕ್ಕೆ ತೆರಳಿದನು.   

 

ಆದಾಯ ಗಾಣ್ಡೀವಮಥ ಧ್ವಜಂ ಚ ಹನೂಮದಙ್ಕಂ ಸದರೋSಗ್ರತೋ ಗಾಃ ।

ನಿವರ್ತ್ತ್ಯ ಯುದ್ಧಾಯ ಯಯೌ ಕುರೂಂಸ್ತಾನ್ ಜಿಗ್ಯೇ ಸರ್ವಾನ್ ದ್ವೈರಥೇನೈವ ಸಕ್ತಾನ್ ॥೨೩.೪೨॥

 

ಅರ್ಜುನ ತನ್ನ ಗಾಣ್ಡೀವ ಧನುಸ್ಸನ್ನೂ, ಹನುಮಂತನ ಚಿಹ್ನೆಯಿರುವ ಧ್ವಜವನ್ನೂ ತೆಗೆದುಕೊಂಡು, ಶಂಖ ಸಹಿತನಾಗಿ, ಮೊದಲು ಹಸುಗಳನ್ನೆಲ್ಲ ವಿರಾಟ ನಗರದ ಕಡೆ ತಿರುಗಿಸಿ, ತದನಂತರ ಯುದ್ಧಕ್ಕೆ ತೆರಳಿದ. ದ್ವಂದಯುದ್ಧಕ್ಕೆಂದು ಬಂದ ಎಲ್ಲಾ ಕುರುವೀರರನ್ನು ಅರ್ಜುನ ಗೆದ್ದ.(ಮೊದಲು ಕೌರವರ ಕಡೆಯಿಂದ ಒಬ್ಬೊಬ್ಬರೇ ಯುದ್ಧಕ್ಕೆಂದು ಬಂದಿದ್ದರು. ಹಾಗಾಗಿ  ದ್ವೈರಥ-ಯುದ್ಧ)

 

ಏಕೀಭೂತಾನ್ ಪುನರೇವಾನುಯಾತಾನ್ ಸಮ್ಮೋಹನಾಸ್ತ್ರೇಣ ವಿಮೋಹಯಿತ್ವಾ ।

ಜಗ್ರಾಹ ತೇಷಾಮುತ್ತರೀಯಾಣ್ಯೃತೇ ತು ಭೀಷ್ಮಸ್ಯ ವೇದಾಸ್ತ್ರಘಾತಂ ಸ ಏವ ॥೨೩.೪೩॥

 

ನಂತರ ಎಲ್ಲರೂ ಒಟ್ಟಿಗೆ ಸೇರಿ ಯುದ್ಧಕ್ಕೆ ಬಂದಾಗ ಅರ್ಜುನ ಅವರನ್ನು ಸಮ್ಮೊಹನಾಸ್ತ್ರದಿಂದ ಮೂರ್ಛೆಗೊಳಿಸಿದ ಮತ್ತು ಭೀಷ್ಮಾಚಾರ್ಯರೊಬ್ಬರನ್ನು ಬಿಟ್ಟು, ಇತರ ಎಲ್ಲರ ಉತ್ತರೀಯವನ್ನು ತೆಗೆದುಕೊಂಡ.  (ಏಕೆ ಭೀಷ್ಮಾಚಾರ್ಯರ ಉತ್ತರೀಯವನ್ನು ಅರ್ಜುನ ತೆಗೆದುಕೊಳ್ಳಲಿಲ್ಲ ಎಂದರೆ-) ಅಲ್ಲಿ  ಸಮ್ಮೊಹನಾಸ್ತ್ರದಿಂದ ಪ್ರಭಾವಿತರಾಗದೇ ಇರುವ ತಾಕತ್ತು ಕೇವಲ ಭೀಷ್ಮಾಚಾರ್ಯರಿಗಿತ್ತು.

 

ವಿಧಾಯ ಭೀಷ್ಮಂ ವಿರಥಂ ಜಗಾಮ ತದಾ ಶ್ರುತ್ವಾ ಮತ್ಸ್ಯಪತಿರ್ಜ್ಜಿತಾನ್ ಕುರೂನ್ ।

ಮುಮೋದ ಪುತ್ರೇಣ ಜಿತಾ ಇತಿ ಸ್ಮ ತದಾSSಹ ಷಣ್ಢೇನ ಜಿತಾನ್ ಯುಧಿಷ್ಠಿರಃ ॥೨೩.೪೪॥

 

ಭೀಷ್ಮಾಚಾರ್ಯರನ್ನು ರಥಹೀನರನ್ನಾಗಿ ಮಾಡಿ ಅರ್ಜುನ ಅಲ್ಲಿಂದ ಹಿಂತಿರುಗಿದ. ಕೌರವರು ಸೋತ ವಿಷಯವನ್ನು ಕೇಳಿ ವಿರಾಟ, ತನ್ನ ಮಗನಿಂದ ಅವರು ಸೋಲಿಸಲ್ಪಟ್ಟರು ಎಂದು ಬಹಳ ಆನಂದಗೊಂಡ. ಆಗ ಯುಧಿಷ್ಠಿರ ‘ಬ್ರಹನ್ನಳೆಯಿಂದಲೇ ಈ ವಿಜಯ’ ಎಂದ.

 

ತದಾ ಕ್ರುದ್ಧಃ ಪ್ರಾಹರತ್ ತಂ ವಿರಾಟಃ ಸೋSಕ್ಷೇಣ ತದ್ ಭೀಮಧನಞ್ಜಯಾಭ್ಯಾಮ್ ।

ಶ್ರುತಂ ತದಾ ಕುಪಿತೌ ತೌ ನಿಶಾಮ್ಯ ನ್ಯವಾರಯತ್ ತಾವಪಿ ಧರ್ಮ್ಮಸೂನುಃ ॥೨೩.೪೫॥

 

(ಯುಧಿಷ್ಠಿರನಿಂದ ಅನೇಕ ಬಾರಿ ‘ಬೃಹನ್ನಳೆಯಿಂದಲೇ ವಿಜಯಪ್ರಾಪ್ತಿಯಾಯಿತು’ ಎನ್ನುವ ಮಾತನ್ನು ಕೇಳಿ)  ಮುನಿದ ವಿರಾಟನು ದಾಳದಿಂದ ಧರ್ಮರಾಜನಿಗೆ ಹೊಡೆದ. ಆ ತಾಡನವು ಭೀಮಾರ್ಜುನರಿಂದ ಕೇಳಲ್ಪಟ್ಟಿತು. ಆಗ ಅತಿಕೋಪಗೊಂಡ ಅವರಿಬ್ಬರನ್ನು ಕಂಡ ಧರ್ಮರಾಜ ಇಬ್ಬರನ್ನೂ ತಡೆದ.

 

ನಿಜಸ್ವರೂಪೇಣ ಸಮಾಸ್ಥಿತಾನ್ ನೋ ಯದಿ ಸ್ಮ ನಾಸೌ ಪ್ರಣಿಪಾತಪೂರ್ವಕಮ್ ।

ಕ್ಷಮಾಪಯೇದ್ ವದ್ಧ್ಯ ಇತ್ಯಾತ್ಮರೂಪಂ ಸಮಾಸ್ಥಿತಾಸ್ತಸ್ಥುರಥಾಪರೇ ದಿನೇ ॥೨೩.೪೬॥

 

ನಮ್ಮ ನಿಜರೂಪವನ್ನು ಕಂಡ ಬಳಿಕ ಕಾಲಿಗೆ ಬಿದ್ದು ಕ್ಷೆಮೆ ಕೇಳಲಿಲ್ಲವೆಂದರೆ ಆಗ ಅವನನ್ನು ಸಾಯಿಸೋಣ ಎಂದುಕೊಂಡ ಅವರು ಮರುದಿನ ತಮ್ಮ ನಿಜರೂಪವನ್ನು ಹೊತ್ತು ನಿಂತರು.

(ತಾತ್ಪರ್ಯ: ಭೀಮಾರ್ಜುನರು ವಿರಾಟನನ್ನು ಕೊಲ್ಲಬೇಕು ಎಂದು ಬಂದಾಗ ಯುಧಿಷ್ಠಿರ- ‘ನಾವು ಯಾರು ಎಂದು ತಿಳಿಯದೇ ವಿರಾಟ ಹೀಗೆ ಮಾಡಿದ್ದಾನೆ. ಅವನಿಗೆ ನಮ್ಮ ನಿಜರೂಪ ತಿಳಿದಮೇಲೂ ಗೌರವಿಸಿಲ್ಲ ಎಂದರೆ ಆಗ ಅವನನ್ನು ಕೊಲ್ಲೋಣ’ ಎಂದು ಹೇಳಿ ಭೀಮಾರ್ಜುನರನ್ನು ತಡೆದ. ಅದೇ ರೀತಿ ಪಾಂಡವರು ಮರುದಿನ ವಿರಾಟ ಬರುವ ಮೊದಲೇ ಅವನ ಆಸ್ಥಾನದಲ್ಲಿ ತಮ್ಮ ನಿಜರೂಪದೊಂದಿಗೆ ಬಂದು ಕುಳಿತರು)

 

ತದಾ ವಿರಾಟಾಸನಮಾಸ್ಥಿತಂ ನೃಪಂ ಯುಧಿಷ್ಠಿರಂ ವೀಕ್ಷ್ಯ ವಿರಾಟ ಆಹ ।

ಕಿಮೇತದಿತ್ಯೂಚಿವಾನುತ್ತರೋSಸ್ಮೈ ತಾನ್ ಪಾಣ್ಡವಾನ್ ಗೋಗ್ರಹಣೇ ಚ ವೃತ್ತಮ್ ॥೨೩.೪೭॥

 

ವಿರಾಟನ ಸಿಂಹಾಸನವನ್ನು ಅಲಂಕರಿಸಿರುವ ಯುಧಿಷ್ಠಿರನನ್ನು ನೋಡಿ ಅಚ್ಚರಿಗೊಂಡ ವಿರಾಟ ‘ಇದೇನು’ ಎಂದು ಕೇಳಿದ. ಆಗ ಉತ್ತರಕುಮಾರ ‘ಇವರು ಪಾಂಡವರು ಎಂದು ಹೇಳಿ, ಗೋಗ್ರಹಣ ಸಮಯದಲ್ಲಿ ನಡೆದ ಎಲ್ಲಾ ಘಟನೆಗಳನ್ನು ತಂದೆಗೆ ವಿವರಿಸಿದ.

 

ತತೋ ವಿರಾಟೋ ಭಯಕಮ್ಪಿತಾಙ್ಗಃ ಪ್ರಣಮ್ಯ ಪಾರ್ತ್ಥಾಞ್ಛರಣಂ ಜಗಾಮ  ।

ದದೌ ಚ ಕನ್ಯಾಮುತ್ತರಾಂ ಫಲ್ಗುನಾಯ ಪುತ್ರಾರ್ತ್ಥಮೇವ ಪ್ರತಿಜಗ್ರಾಹ ಸೋsಪಿ ॥೨೩.೪೮॥

 

ಆಗ ವಿರಾಟರಾಜ ಭಯದಿಂದ ನಡುಗಿ, ಅವರಿಗೆ ನಮಸ್ಕರಿಸಿ, ಪಾಂಡವರನ್ನು ರಕ್ಷಕರನ್ನಾಗಿ ಹೊಂದಿದ. ತನ್ನ ಮಗಳಾಗಿರುವ ಉತ್ತರೆಯನ್ನು ವಿರಾಟ ಅರ್ಜುನನಿಗಾಗಿ ಕೊಟ್ಟ. ಅರ್ಜುನನಾದರೋ ಮಗನಿಗೆಂದೇ ಅವಳನ್ನು ಸ್ವೀಕರಿಸಿದ.

Saturday, December 3, 2022

Mahabharata Tatparya Nirnaya Kannada 23-27-35

 

ಅವದ್ಧ್ಯಂ ತಂ ನಿಹತಂ ವೀಕ್ಷ್ಯ ತಸ್ಯ ಪಞ್ಚೋತ್ತರಂ ಶತಮೇವಾನುಜಾನಾಮ್ ।

ಸರ್ವಂ ವರಾಚ್ಛಙ್ಕರಸ್ಯ ಹ್ಯವದ್ಧ್ಯಂ ಸಹೈವ ಕೃಷ್ಣಾಂ ತೇನ ದಗ್ಧುಂ ಬಬನ್ಧ ॥೨೩.೨೭॥

 

ಯಾರಿಂದಲೂ ಸಾಯಿಸಲಾಗದ ಕೀಚಕನನ್ನು ಸತ್ತವನನ್ನಾಗಿ ಕಂಡು, ರುದ್ರನ ವರದಿಂದ ಅವಧ್ಯರಾಗಿದ್ದ ಕೀಚಕನ ನೂರಐದು ಜನ ಉಪಕೀಚಕರು ದ್ರೌಪದಿಯನ್ನು ಕೀಚಕನ ಜೊತೆಗೇ ಸುಡಲೆಂದು ಕಟ್ಟಿಹಾಕಿದರು.  

 

ಸಾ ನೀಯಮಾನಾ ಕೀಚಕೈಃ ಸಂರುರಾವ ಶ್ರುತ್ವೈವ ತಂ ಭೀಮಸೇನೋ ಮಹಾನ್ತಮ್ ।

ಉದ್ಧೃತ್ಯ ವೃಕ್ಷಂ  ತೇನ ಜಘಾನ ಸರ್ವಾನಾದಾಯ ಕೃಷ್ಣಾಂ ಪುನರಾಗಾತ್ ಪುರಂ ಚ ॥೨೩.೨೮॥

 

ಉಪಕೀಚಕರಿಂದ ಕೊಂಡೊಯ್ಯಲ್ಪಡುತ್ತಿರುವ ಅವಳು ಗಟ್ಟಿಯಾಗಿ ಕಿರುಚಿದಳು. ಆ ಕೂಗನ್ನು ಕೇಳಿ ಭೀಮಸೇನನು ದೊಡ್ಡ ಮರವೊಂದನ್ನು ಕಿತ್ತು ಅದರಿಂದ ಎಲ್ಲರನ್ನೂ ಕೂಡಾ ಕೊಂದು, ದ್ರೌಪದಿಯನ್ನು ಕರೆದುಕೊಂಡು ಮತ್ತೆ ಪಟ್ಟಣಕ್ಕೆ ಬಂದ.

 

ಏವಂ ಯತ್ನಾತ್ ತಪಸಾ ತೈರವಾಪ್ತೋ ವರಃ ಶಿವಾದಜಯತ್ವಂ ರಣೇಷು ।

ಅವದ್ಧ್ಯತಾ ಚೈವ ಷಡುತ್ತರಾಸ್ತೇ ಶತಂ ಹತಾ ಭೀಮಸೇನೇನ ಸಙ್ಖೇ ॥೨೩.೨೯॥

 

ಈರೀತಿಯಾಗಿ, ಕೀಚಕನಂತೆಯೇ ಪ್ರಯತ್ನಪಟ್ಟು ತಪಸ್ಸನ್ನಾಚರಿಸಿ ಶಿವನಿಂದ ಯುದ್ಧದಲ್ಲಿ ಅಜೇಯತ್ವ ಮತ್ತು ಅವಧ್ಯತ್ವವನ್ನು ಪಡೆದಿದ್ದ ಆ ನೂರಾ ಐದು ಮಂದಿ ಉಪಕೀಚಕರು ಮುಖ್ಯಕೀಚಕನಿಂದ ಕೂಡಿಕೊಂಡು(ಒಟ್ಟು ೧೦೬ ಮಂದಿ) ಭೀಮಸೇನನಿಂದ ಸಂಹರಿಸಲ್ಪಟ್ಟರು.

 

ಗನ್ಧರ್ವ ಇತ್ಯೇವ ನಿಹತ್ಯ ಸರ್ವಾನ್ ಮುಮೋದ ಭೀಮೋ ದ್ರೌಪದೀ ಚಾsಥ ಕೃಷ್ಣಾಮ್ ।

ಯಾಹೀತ್ಯೂಚೇ ತಾಂ ಸುದೇಷ್ಣಾ ಭಯೇನ ತ್ರಯೋದಶಾಹಂ ಪಾಲಯೇತ್ಯಾಹ ತಾಂ ಸಾ ॥೨೩.೩೦॥

 

ಅವರೆಲ್ಲರನ್ನೂ ಕೂಡಾ ಕೊಂದ ಭೀಮಸೇನ  ‘ಗಂಧರ್ವ ಕೊಂದ’ ಎಂದು ಹೇಳುತ್ತಾ ಆನಂದದಿಂದಿದ್ದ.  ದ್ರೌಪದಿಯೂ ಸಂತೋಷಗೊಂಡಳು. ಇಷ್ಟೆಲ್ಲಾ ಆದಮೇಲೆ ಭಯಗೊಂಡ ಸುದೇಷ್ಣೆಯು ದ್ರೌಪದಿಯನ್ನು  ‘ಹೋಗು’ ಎಂದು ಹೇಳಿದಳು. ಆಗ ದ್ರೌಪದಿ ‘ಇನ್ನು ಹದಿಮೂರು ದಿನ ತಡೆದುಕೋ’ ಎಂದಳು.

 

ಅಸ್ತ್ವೀತ್ಯೇನಾಮಾಹ ಭಯಾತ್ ಸುದೇಷ್ಣಾ ತಥಾSವಸನ್ ಪೂರ್ಣಮಬ್ದಂ ಚ ತೇSತ್ರ ।

ತದಾ ಪಾರ್ತ್ಥಾನ್ ಪ್ರವಿಚಿತ್ಯಾಖಿಲಾಯಾಂ ಪೃಥ್ವ್ಯಾಂ ಛನ್ನಾನ್ ಧಾರ್ತ್ತರಾಷ್ಟ್ರಸ್ಯ ದೂತಾಃ ॥೨೩.೩೧॥

 

 

ಅವಿಜ್ಞಾಯ ಪ್ರಯಯುರ್ದ್ಧಾರ್ತ್ತರಾಷ್ಟ್ರಮೂಚುರ್ಹತಂ ಕೀಚಕಂ ಯೋಷಿದರ್ತ್ಥೇ ।

ತೇನಾವದದ್ ದ್ರೌಪದೀಕಾರಣೇನ ದುರ್ಯ್ಯೋಧನೋ ನಿಹತಂ ಕೀಚಕಂ ತಮ್ ॥೨೩.೩೨॥

 

ದ್ರೌಪದಿಯ ಮಾತಿಗೆ ಭಯದಿಂದ ಸುದೇಷ್ಣಾ ಒಪ್ಪಿಕೊಂಡಳು. ಹೀಗೆ ಪಾಂಡವರು ವಿರಾಟನಗರಿಯಲ್ಲಿ ಒಂದು ವರ್ಷ ಪೂರ್ತಿ ವಾಸಮಾಡಿದರು.

ಇತ್ತ ದುರ್ಯೋಧನನ ದೂತರು ಇಡೀ ಭೂಮಿಯಲ್ಲಿ ಹುಡುಕಿದರೂ  ಪಾಂಡವರು ಎಲ್ಲಿದ್ದಾರೆ ಎಂದು ತಿಳಿಯದೇ, ದುರ್ಯೋಧನನಲ್ಲಿಗೆ ತೆರಳಿ ‘ಪಾಂಡವರು ಸಿಗಲಿಲ್ಲ, ಆದರೆ ಒಂದು ಹೆಣ್ಣಿಗಾಗಿ ಕೀಚಕನು ಕೊಲ್ಲಲ್ಪಟ್ಟಿದ್ದಾನೆ’  ಎಂದು ಹೇಳಿದರು. ಆಗ ದುರ್ಯೋಧನನು  ದ್ರೌಪದಿಗಾಗಿಯೇ ಕೀಚಕ ಸತ್ತಿದ್ದು ಎಂದು ಹೇಳಿದ.

 

ಭೀಮೇನಾಗುಸ್ತತ್ರ ದುರ್ಯ್ಯೋಧನಾದ್ಯಾ ಭೀಷ್ಮಾದಿಭಿಃ ಸಹ ಕರ್ಣ್ಣೇನ ಚೈವ ।

ಅಗ್ರೇ ಯಯೌ ತತ್ರ ಯೋದ್ಧುಂ ಸುಶರ್ಮ್ಮಾ ಸ ಗಾ ವಿರಾಟಸ್ಯ ಸಮಾಜಹಾರ ॥೨೩.೩೩॥

 

‘ಭೀಮಸೇನನೇ ಕೀಚಕನನ್ನು ಕೊಂದಿರುವುದು’ ಎಂದು ಹೇಳಿದ ದುರ್ಯೋಧನ, ಭೀಷ್ಮಾಚಾರ್ಯ, ಕರ್ಣ, ಮೊದಲಾದವರೊಂದಿಗೆ ಕೂಡಿಕೊಂಡು ವಿರಾಟನಗರಿಗೆ ತೆರಳಿದ. ಅವರಿಗೂ ಮೊದಲು ಸುಶರ್ಮ ಎನ್ನುವ ರಾಜನು ಯುದ್ಧಮಾಡಲೆಂದು ಎರಡು ದಿನ ಮೊದಲೇ ತೆರಳಿದ ಮತ್ತು ವಿರಾಟನ ಗೋವುಗಳನ್ನು ಆಕ್ರಮಿಸಿದ.   

 

ಶ್ರುತ್ವಾ ವಿರಾಟೋSನುಯಯೌ ಸಸೇನಸ್ತಂ ಪಾಣ್ಡವಾಶ್ಚಾನುಯಯುರ್ವಿನಾSರ್ಜ್ಜುನಮ್ ।

ವಿಜಿತ್ಯ ಸಙ್ಖೇ ಜಗೃಹೇ ವಿರಾಟಂ ತದಾ ಸುಶರ್ಮ್ಮಾ ತಮಯಾದ್ ವೃಕೋದರಃ ॥೨೩.೩೪॥

 

ತ್ರಿಗರ್ತದೇಶದ ರಾಜ ಸುಶರ್ಮ ಆಕ್ರಮಣ ಮಾಡಿದ್ದಾನೆ ಎಂದು ಕೇಳಿದ ವಿರಾಟರಾಜನು ಸೇನೆಯಿಂದ ಕೂಡಿಕೊಂಡು ಸುಶರ್ಮನ ಬೆನ್ನಟ್ಟಿದನು. ಅವನನ್ನು ಅರ್ಜುನನನ್ನು ಬಿಟ್ಟು ಉಳಿದ ಪಾಂಡವರು ಅನುಸರಿಸಿದರು. ಯುದ್ಧದಲ್ಲಿ ಸುಶರ್ಮ ವಿರಾಟನನ್ನು ಗೆದ್ದು ಸೆರೆಹಿಡಿದ. ಆಗ ಭೀಮಸೇನ ಸುಶರ್ಮನನ್ನು ಕುರಿತು ತೆರಳಿದ.

 

ಸ ತಸ್ಯ ಸೇನಾಂ ವಿನಿಹತ್ಯ ಮಾತ್ಸ್ಯಂ ವಿಮೋಚ್ಯ ಜಗ್ರಾಹ ಸುಶರ್ಮ್ಮರಾಜಮ್ ।

ಯುಧಿಷ್ಠಿರೋ ಮೋಚಯಮಾಸ ತಂ ಚ ತತೋ ರಾತ್ರೌ ನ್ಯವಸನ್ ಬಾಹ್ಯತಸ್ತೇ ॥೨೩.೩೫॥

 

ಭೀಮಸೇನನು ಸುಶರ್ಮನ ಸೇನೆಯನ್ನು ಕೊಂದು, ವಿರಾಟರಾಜನನ್ನು ಬಿಡಿಸಿ, ಸುಶರ್ಮನನ್ನು ಹಿಡಿದುಕೊಂಡ. ಯುಧಿಷ್ಠಿರನು ಸುಶರ್ಮನನ್ನು ಬಿಡಿಸಿದನು. ಅಂದು ಅವರೆಲ್ಲರೂ ನಗರದ ಆಚೆ ಭಾಗದಲ್ಲಿ ರಾತ್ರಿಯನ್ನು ಕಳೆದರು(ಯುದ್ಧದಲ್ಲಿ ಗೆದ್ದ ಅವರು ಆ ರಾತ್ರಿ ಪಟ್ಟಣದಿಂದ ಹೊರಭಾಗದಲ್ಲೇ ವಾಸಮಾಡಿದರು).

Mahabharata Tatparya Nirnaya Kannada 23-19-26

 

ಏವಂ ನಿವಸತಾಂ ತತ್ರ ಪಾಣ್ಡವಾನಾಂ ಮಹಾತ್ಮನಾಮ್ ।

ಸಂವತ್ಸರೇ ದ್ವಿಮಾಸೋನೇ ವಿಜಿತ್ಯ ದಿಶ ಆಗತಃ ।

ಕೀಚಕೋ ಮತ್ಸ್ಯನೃಪತೇಃ ಸ್ಯಾಲೋ ಬಲವತಾಂ ವರಃ ॥೨೩.೧೯॥

 

ಈರೀತಿಯಾಗಿ ವಿರಾಟನಗರದಲ್ಲಿ ವಾಸಮಾಡುತ್ತಿರುವ ಶ್ರೇಷ್ಠರಾದ ಪಾಂಡವರು ಅಲ್ಲಿ ಹತ್ತು ತಿಂಗಳು ಕಳೆದಿರಲು, ಆ ಸಮಯದಲ್ಲಿ, ಮತ್ಸ್ಯರಾಜನ ಹೆಂಡತಿಯ ತಮ್ಮ, ಅತ್ಯಂತ ಬಲಿಷ್ಠನಾದ ಕೀಚಕ  ದಿಕ್ಕುಗಳನ್ನು ಗೆದ್ದು  ವಿರಾಟನಗರಕ್ಕೆ ಬಂದನು.

 

ಸ ದ್ರೌಪದೀಮೀಕ್ಷ್ಯ ಮಾನೋಭವಾರ್ತ್ತಃ ಸಮ್ಪ್ರಾರ್ತ್ಥಯಾಮಾಸ ತಯಾ ನಿರಸ್ತಃ ।

ಮಾಸೇ ಗತೇ ಭಗನೀಂ ಸ್ವಾಂ ಸುದೇಷ್ಣಾಂ ಸಮ್ಪ್ರಾರ್ತ್ಥಯಾಮಾಸ ತದರ್ತ್ಥಮೇವ ॥೨೩.೨೦॥

 

ಕೀಚಕನು ದ್ರೌಪದಿಯನ್ನು ಕಂಡು ಕಾಮದಿಂದ ಪೀಡಿತನಾಗಿ ಅವಳನ್ನು ಬೇಡಿದ. ದ್ರೌಪದಿಯಿಂದ  ತಿರಸ್ಕೃತನಾಗಿ ಒಂದು ತಿಂಗಳು ಕಳೆದಮೇಲೆ ಅಕ್ಕನಾಗಿರುವ ಸುದೇಷ್ಣಾಳಲ್ಲಿ ದ್ರೌಪದಿಯನ್ನು ತನ್ನಲ್ಲಿಗೆ ಕಳುಹಿಸಿಕೊಡುವಂತೆ ಬಹಳವಾಗಿ ಬೇಡಿಕೊಂಡ.

[‘ಸ ತು ಮೂರ್ಧ್ನ್ಯಞ್ಜಲಿಂ ಕೃತ್ವಾ ಭಗಿನ್ಯಾಶ್ಚರಣಾವುಭೌ । ಸಮ್ಮೋಹಾಭಿಹತಸ್ತೂರ್ಣಂ ವಾತೋದ್ಧೂತ ಇವಾರ್ಣವಃ’ (ವಿರಾಟಪರ್ವ ೧೮.೩) – ಕೈಕಾಲು ಹಿಡಿಯುವುದು, ತಲೆಮೇಲೆ ಕೈಇಟ್ಟು ಪ್ರಾರ್ಥನೆ ಮಾಡುವುದು, ಇತ್ಯಾದಿಯಾಗಿ ಅಕ್ಕನಲ್ಲಿ ಕೀಚಕ ಬೇಡುತ್ತಿದ್ದ ಎನ್ನುತ್ತದೆ ಮಹಾಭಾರತ]  

 

ತಯಾ ನಿಷಿದ್ಧೋSಪಿ ಪುನಃಪುನಸ್ತಾಂ ಯದಾ ಯಯಾಚೇSಥ ಚ ಸಾSSಹ ಕೃಷ್ಣಾಮ್ ।

ಸಮಾನಯಾSಶ್ವೇವ ಸುರಾಂ ಮದರ್ತ್ಥಮಿತೀರಿತಾ ನೇತಿ ಭೀತಾSವದತ್ ಸಾ॥೨೩.೨೧॥

 

ಸುದೇಷ್ಣಾಳಿಂದ ನಿಷಿದ್ಧನಾದರೂ, ಮತ್ತೆ ಮತ್ತೆ ಅವಳಲ್ಲಿ ಕೀಚಕ ಬೇಡಿಕೊಂಡ. ಆಗ ಅವಳು ‘ವೇಗದಲ್ಲಿಯೇ ನನಗಾಗಿ (ಕೀಚಕನ ಮನೆಯಿಂದ)ಮದ್ಯವನ್ನು ತೆಗೆದುಕೊಂಡು ಬಾ’ ಎಂದು ದ್ರೌಪದಿಗೆ ಹೇಳಿದಳು. ದ್ರೌಪದಿ ಅಳುಕಿದವಳಾಗಿ ‘ನಾನು ಹೋಗುವುದಿಲ್ಲ’ ಎನ್ನುತ್ತಾಳೆ.

 

ಬಲಾತ್ ತಯಾ ಪ್ರೇಷಿತಾ ತದ್ಗೃಹಾಯ ಯದಾSಗಮತ್ ತೇನ ಹಸ್ತೇ ಗೃಹೀತಾ ।

ವಿಧೂಯ ತಂ ಪ್ರಾದ್ರವತ್ ಸಾ ಸಭಾಯೈ ಸ್ಮೃತ್ವಾSSದಿತ್ಯಸ್ಥಂ ವಾಸುದೇವಂ ಪರೇಶಮ್ ॥೨೩.೨೨॥

 

ಸುದೇಷ್ಣಾಳಿಂದ ಬಲಾತ್ಕಾರವಾಗಿ ಕಳುಹಿಸಲ್ಪಟ್ಟ ದ್ರೌಪದಿಯು ಕೀಚಕನ ಮನೆಗೆ ಯಾವಾಗ ತೆರಳಿದಳೋ, ಆಗ ಅವನ ಕೈಯಲ್ಲಿ ಹಿಡಿಯಲ್ಪಟ್ಟವಳಾದಳು. ಅವನನ್ನು ಕೊಡವಿ, ಸೂರ್ಯನ ಅಂತರ್ಯಾಮಿಯಾದ ನಾರಾಯಣನನ್ನು ಸ್ಮರಿಸಿ,    ಸಭೆ ನಡೆಯುತ್ತಿರುವಲ್ಲಿಗೆ ದ್ರೌಪದಿ ಓಡಿದಳು. 

 

ಅನುದ್ರುತ್ಯೈತಾಂ ಪಾತಯಿತ್ವಾ ಪದಾ ಸ ಸನ್ತಾಡಯಾಮಾಸ ತದಾ ರವಿಸ್ಥಿತಃ ।

ನಾರಾಯಣೋ ಹೇತಿನಾಮೈವ ರಕ್ಷೋ ನ್ಯಯೋಜಯತ್ ತದದೃಶ್ಯಂ ಸಮಾಗಾತ್ ॥೨೩.೨೩॥

 

ಕೀಚಕನಾದರೋ, ದ್ರೌಪದಿಯನ್ನು ಹಿಂಬಾಲಿಸಿಕೊಂಡು ಬಂದು, ಅವಳನ್ನು ಬೀಳಿಸಿ, ಕಾಲಿನಿಂದ ಒದ್ದ. ಆಗ ಸೂರ್ಯಾಂತರ್ಯಾಮಿ ನಾರಾಯಣನು ‘ಹೇತಿ’ ಎನ್ನುವ ಹೆಸರಿನ ರಾಕ್ಷಸನನ್ನು ನಿಯೋಜಿಸಿದನು. ಹೇತಿ ಯಾರಿಗೂ ಕಾಣದಂತೆ ಅಲ್ಲಿಗೆ ಬಂದ.

[ಹೇತಿ ಒಬ್ಬ ಸಾತ್ವಿಕ. ಆದರೆ ರಾಕ್ಷಸ ಶರೀರವುಳ್ಳವನು. ಅವನು ಸೂರ್ಯನ ಸೇವಕ. ಇದೇ ಹೇತಿ ಕರ್ಣನ ತೊಡೆಯನ್ನು ಕೊರೆದು ರಕ್ತಬರುವಂತೆ ಮಾಡಿ, ಪರಶುರಾಮನಿಂದ ಕರ್ಣನಿಗೆ ಶಾಪ ಬರುವಂತೆ ಮಾಡಿರುವುದು].

 

ವಾಯುಸ್ತಮಾವಿಶ್ಯ ತು ಕೀಚಕಂ ತಂ ನ್ಯಪಾತಯತ್ ತಾಂ ಸಮೀಕ್ಷ್ಯೈವ ಭೀಮಃ ।

ಚುಕೋಪ ವೃಕ್ಷಂ ಚ ಸಮೀಕ್ಷಮಾಣಂ ತಂ ವಾರಯಾಮಾಸ ಯುಧಿಷ್ಠಿರೋsಗ್ರಜಃ ॥೨೩.೨೪॥

 

ಮುಖ್ಯಪ್ರಾಣನು ಆ ಹೇತಿ ಎನ್ನುವ ರಾಕ್ಷಸನನ್ನು ಹೊಕ್ಕು ಕೀಚಕನನ್ನು ಬೀಳಿಸಿದನು. ದ್ರೌಪದಿ ಸಭೆಗೆ ಬಂದಾಗ ಅಲ್ಲಿದ್ದ ಭೀಮಸೇನ ದ್ರೌಪದಿಯ ಆ ಸ್ಥಿತಿಯನ್ನು ಕಂಡು ಸಿಟ್ಟುಗೊಂಡು ಅಲ್ಲಿರುವ ದೊಡ್ಡ ಮರವೊಂದನ್ನು ನೋಡುತ್ತಿರಲು, ಅಣ್ಣನಾದ ಯುಧಿಷ್ಠಿರ ಅವನನ್ನು ತಡೆದ.

[‘ವಾಯುಸ್ತಮಾವಿಶ್ಯ ತು ಕೀಚಕಂ ತಂ ನ್ಯಪಾತಯತ್’ ಎನ್ನುವುದಕ್ಕೆ ಪ್ರಮಾಣ ಮೂಲ ಭಾರತದಲ್ಲೇ ಇದೆ: ‘ಉಪಾತಿಷ್ಠತ ಸಾ ಸೂರ್ಯಂ ಮುಹೂರ್ತಮಬಲಾ ತದಾ । ತದಸ್ಯಾಸ್ತನುಮಧ್ಯಾಯಾಃ ಸರ್ವಂ ಸೂರ್ಯೋSವಬುದ್ಧವಾನ್ ।  ಅಂತರ್ಹಿತಂ ತತಸ್ತಸ್ಯಾ ರಕ್ಷೋ ರಕ್ಷಾರ್ಥಮಾದಿಶತ್’ (ವಿರಾಟಪರ್ವ ೧೯.೩-೪) ‘ತತೋ ದಿವಾಕರೇಣಾSಶು ರಾಕ್ಷಸಃ ಸನ್ನಿಯೋಜಿತಃ । ಸ ಕೀಚಕಮಪೋವಾಹ ವಾತವೇಗೇನ ಭಾರತ (೧೯.೨೫) ದ್ರೌಪದಿ ಸೂರ್ಯನನ್ನು ನಮಸ್ಕರಿಸಿದಳು. ಅವನು ರಾಕ್ಷಸನನ್ನು ಆದೇಶಿಸಿದ. ಸೂರ್ಯನಿಂದ ಪ್ರಚೋದಿತನಾದ ರಾಕ್ಷಸನು ಕೀಚಕನನ್ನು ವಾಯುವೇಗದಲ್ಲಿ ಎಳೆದುಕೊಂಡು ಹೋದ. ಇಲ್ಲಿ ‘ವಾತವೇಗೇನ’ ಎನ್ನುವ ವಿಶೇಷಣ ಬಳಕೆಯಾಗಿದೆ. ಇದನ್ನು  ವಾತಸ್ಯ-ಮುಖ್ಯಪ್ರಾಣಸ್ಯ-ವೇಗಃ-ಬಲಮ್ ಎಂದು ವ್ಯಾಖ್ಯಾನ ಮಾಡಿದಂತಾಗುತ್ತದೆ. ಮುಖ್ಯಪ್ರಾಣನ ಆವೇಶವಿದ್ದುದರಿಂದ ಹೇತು ಕೀಚಕನನ್ನು ಆರೀತಿ ಬೀಳಿಸಲು ಸಾಧ್ಯವಾಯಿತು.

 

ಕೃಷ್ಣಾ ರಾತ್ರೌ ಭೀಮಸಕಾಶಮೇತ್ಯ ಹನ್ತುಂ ಪಾಪಂ ಕೀಚಕಂ ಪ್ರೈರಯತ್ ತಮ್ ।

ಭೀಮಸ್ಯ ಬುದ್ಧ್ಯಾ ನಿಶಿ ಸಾ ಕೀಚಕಂ ಚ ಜಗಾದ ಗನ್ತುಂ ಶೂನ್ಯಗೃಹಂ ಸ ಚಾಗಾತ್ ॥೨೫.೨೫॥

 

ದ್ರೌಪದಿಯು ಆರಾತ್ರಿ ಭೀಮನ ಬಳಿಗೆ ತೆರಳಿ, ಪಾಪಿಷ್ಠನಾದ ಕೀಚಕನನ್ನು ಕೊಲ್ಲಲು ಅವನನ್ನು ಪ್ರೇರಿಸಿದಳು. ಭೀಮಸೇನನ ಸಲಹೆಯಂತೆ ಅವಳು ಕೀಚಕನನ್ನು ರಾತ್ರಿಯಲ್ಲಿ ಯಾರೂ ಇಲ್ಲದ ಮನೆಗೆ(ನೃತ್ಯಗೃಹಕ್ಕೆ ) ಬರಲು ಹೇಳಿದಳು ಮತ್ತು ಕೀಚಕನು ಅಲ್ಲಿಗೆ ಬಂದ ಕೂಡಾ.

 

ತತ್ರೈನಮಾಸಾದ್ಯ ತು ಭೀಮಸೇನೋ ವಿಜಿತ್ಯ ತಂ ಬಾಹುಯುದ್ಧೇ ನಿಹತ್ಯ ।

ಶಿರೋ ಗುದೇ ಪಾಣಿಪಾದೌ ಚ ತಸ್ಯ ಪ್ರವೇಶಯಾಮಸ ವಿಮೃದ್ಯ ವೀರಃ ॥೨೩.೨೬॥

 

ಶೂನ್ಯಗೃಹದಲ್ಲಿದ್ದ ಕೀಚಕನ ಬಳಿ ಬಂದ ಭೀಮಸೇನನು ಮಲ್ಲಯುದ್ಧದಲ್ಲಿ ಅವನನ್ನು ಸೋಲಿಸಿದ. ಕೈಯಿಂದ ಗುದ್ದಿ, ತಲೆಯನ್ನೂ, ಪೃಷ್ಟಭಾಗವನ್ನೂ, ಕೈ-ಕಾಲುಗಳನ್ನು ಒಂದರ ಒಳಗೆ ಒಂದನ್ನು ಹೊಗಿಸಿ ಭೀಕರವಾಗಿ ಕೀಚಕನನ್ನು ಭೀಮಸೇನ ಕೊಂದುಹಾಕಿದ.

[ಮಹಾಭಾರತ: ‘ಅಥ ಪಾಣೀ ಚ ಪಾದೌ ಚ ಶಿರೋ ಗ್ರೀವಾಂ ಸಕುಣ್ಡಲಾಮ್ । ಗುದೇ ಪ್ರವೇಶಯಾಮಾಸ ಮೃದಿತ್ವಾSಙ್ಗಾನಿ ಸರ್ವಶಃ’ (ವಿರಾಟಪರ್ವ ೨೬.೪೦). ಇಷ್ಟು ಭೀಕರವಾಗಿ ಕೀಚಕ ಭೀಮನಿಂದ ಕೊಲ್ಲಲ್ಪಟ್ಟ].