ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 15, 2023

Mahabharata Tatparya Nirnaya Kannada 24-62-69

 

ಏಕೋsಪಿ ವಿಷ್ಣುಃ ಸ ತು ಭಾರ್ಗ್ಗವಾತ್ಮಾ ವ್ಯಾಸಃ ಸಶಿಷ್ಯಸ್ತದನನ್ಯದೃಶ್ಯಃ ।

ಯಯೌ ತದುಕ್ತೇರ್ಹಿ ಗುಣಾನ್ ಪ್ರವೇತ್ತುಂ ನಾನ್ಯೋ ಹಿ ಶಕ್ತಸ್ತಮೃತೇ ಯತಃ ಪ್ರಭುಮ್ ॥೨೪.೬೨॥

 

ಪರಶುರಾಮರೂಪಿ ಹಾಗೂ ವೇದವ್ಯಾಸರೂಪಿಯಾದ ಆ ಶ್ರೀಕೃಷ್ಣ ಒಬ್ಬನೇ ಆದರೂ,  ಪರಶುರಾಮ ಹಾಗೂ ವೇದವ್ಯಾಸರಿಂದ ಅನುಸರಿಸಲ್ಪಟ್ಟವನಾಗಿ, ಮೂರು ರೂಪದಿಂದ ಸಾಗಿದ. (ಏಕೆ ಹೀಗೆ ಎಂದರೆ-) ಶ್ರೀಕೃಷ್ಣ ಪರಮಾತ್ಮನ ಅಭಿಪ್ರಾಯವನ್ನು ಸಂಪೂರ್ಣವಾಗಿ ತಿಳಿದು ಅರ್ಥಮಾಡಿಕೊಳ್ಳಲು ಬೇರೊಬ್ಬರಿಗೆ ಶಕ್ತಿ ಇಲ್ಲವಷ್ಟೇ.  

 

ಸ ವನ್ದ್ಯಮಾನೋsಖಿಲರಾಷ್ಟ್ರವಾಸಿಭಿಃ ಪ್ರಸೂನವರ್ಷೈರಭಿವರ್ಷಿತಃ ಸುರೈಃ ।

ಸಂಸ್ತೂಯಮಾನಃ ಪ್ರಣತೋsಬ್ಜಜಾದಿಭಿರ್ಗ್ಗಜಾಹ್ವಯಂ ಪ್ರಾಪ ಪರೋSಪ್ರಮೇಯಃ ॥೨೪.೬೩॥

 

ಶ್ರೀಕೃಷ್ಣ ಪರಮಾತ್ಮನು ಎಲ್ಲಾ ರಾಷ್ಟ್ರವಾಸಿಗಳಿಂದ  ನಮಿಸಲ್ಪಟ್ಟವನಾಗಿ, ದೇವತೆಗಳ ಪುಷ್ಪವೃಷ್ಟಿಗೆ ಒಳಗಾಗಿ, ಬ್ರಹ್ಮ-ಮೊದಲಾದ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟು ನಮಸ್ಕರಿಸಲ್ಪಟ್ಟವನಾಗಿ ಹಸ್ತಿನಪುರವನ್ನು ಹೊಂದಿದನು.

 

ಸ ಭೀಷ್ಮಮುಖ್ಯೈಃ ಸರಸಾಭಿಯಾತಃ ಸಹೈವ ತೈಃ ಪ್ರಯಯೌ ರಾಜಮಾರ್ಗ್ಗೇ ।

ದಿದೃಕ್ಷವಸ್ತಂ ಜಗದೇಕಸುನ್ದರಂ ಗುಣಾರ್ಣ್ಣವಂ ಪ್ರಾಯಯುರತ್ರ ಸರ್ವೇ ॥೨೪.೬೪॥

 

ಭೀಷ್ಮಾಚಾರ್ಯರೇ ಮೊದಲಾದವರಿಂದ ಸ್ನೇಹಪೂರ್ವಕವಾಗಿ ಎದುರುಗೊಂಡ ಶ್ರೀಕೃಷ್ಣ ಪರಮಾತ್ಮನು, ಅವರೆಲ್ಲರಿಂದ ಕೂಡಿಕೊಂಡು ರಾಜಮಾರ್ಗದಲ್ಲಿ ಪ್ರವೇಶಮಾಡಿದನು. ಜಗತ್ತಿನಲ್ಲಿ ಅತ್ಯಂತ ಚೆಲುವನಾದ, ಗುಣಗಳಿಗೆ ಕಡಲಿನಂತಿರುವ ಶ್ರೀಕೃಷ್ಣ ಪರಮಾತ್ಮನನ್ನು ಕಾಣಲು ಬಯಸಿ ಎಲ್ಲರೂ ಕೂಡಾ ಅಲ್ಲಿ ಬಂದಿದ್ದರು. 

 

ಸಭಾಜಿತಸ್ತೈಃ ಪರಮಾದರೇಣ ವಿವೇಶ ಗೇಹಂ ನೃಪತೇರನನ್ತಃ ।

ಸ ಭೀಷ್ಮಮುಖ್ಯಾನ್ ಪುರತೋ ನಿಧಾಯ ವೈಚಿತ್ರವೀರ್ಯ್ಯೇಣ ಸಮರ್ಚ್ಚಿತೋSಜಃ ।

ರೌಗ್ಮೇ ನಿಷಣ್ಣಃ ಪರಮಾಸನೇ ಪ್ರಭುರ್ಬಭೌ ಸ್ವಭಾಸಾ ಕಕುಭೋSವಭಾಸಯನ್ ॥೨೪.೬೫॥

 

ಭೀಷ್ಮಾದಿಗಳಿಂದ ಆದರದಿಂದ ಗೌರವಿಸಲ್ಪಟ್ಟವನಾದ ಶ್ರೀಕೃಷ್ಣನು ಧೃತರಾಷ್ಟ್ರನ ಮನೆಯನ್ನು ಕುರಿತು ತೆರಳಿದನು. ಭೀಷ್ಮ ಮೊದಲಾದವರನ್ನು ಮುಂದೆ ಇಟ್ಟುಕೊಂಡ ಧೃತರಾಷ್ಟ್ರನಿಂದ ಶ್ರೀಕೃಷ್ಣ ಪರಮಾತ್ಮನು ಪೂಜಿತನಾದನು. ಬಂಗಾರಮಯವಾದ ಆಸನದಲ್ಲಿ ಕುಳಿತವನಾಗಿ, ತನ್ನ ಕಾಂತಿಯಿಂದ ದಿಕ್ಕನ್ನು ಬೆಳಗುತ್ತಾ ಶ್ರೀಕೃಷ್ಣ ಶೋಭಿಸಿದನು.

 

ಯಥೋಚಿತಂ ತೇಷು ವಿಧಾಯ ಕೇಶವೋ ದೌರ್ಯ್ಯೋಧನಂ ಪ್ರಾಪ್ಯ ಗೃಹಂ ಚ ಪೂಜಿತಃ  

ಪೂಜಾಂ ತದೀಯಾಂ ಗುಣವದ್ ದ್ವಿಡಿತ್ಯಸೌ ಜಗ್ರಾಹ ನೋ ವಿದುರಂ ಚಾsಜಗಾಮ ॥೨೪.೬೬॥

 

ಭೀಷ್ಮಾದಿಗಳಲ್ಲೂ ಕೂಡಾ ಶ್ರೀಕೃಷ್ಣ ಯೋಗ್ಯವಾಗಿ ಪೂಜೆಯನ್ನು ಸ್ವೀಕರಿಸಿದ. ಆದರೆ ದುರ್ಯೋಧನನ ಮನೆಗೆ ತೆರಳಿದ ಅವನು  ಅಲ್ಲಿ ಗುಣದ್ವೇಷಿಯಾದ ದುರ್ಯೋಧನನ ಪೂಜೆಯನ್ನು ಸ್ವೀಕರಿಸಲಿಲ್ಲ. ನಂತರ ಕೃಷ್ಣ ವಿದುರನ ಬಳಿಗೆ ಬಂದ.

 

ಸ ಭೀಷ್ಮಪೂರ್ವೈರಭಿಯಾಚಿತೋSಪಿ ಜಗಾಮ ನೈಷಾಂ ಗೃಹಮಾದಿದೇವಃ ।

ಉಪೇಕ್ಷಿತಾ ದ್ರೌಪದೀತ್ಯಪ್ರಮೇಯೋ ಜಗಾಮ ಗೇಹಂ ವಿದುರಸ್ಯ ಶೀಘ್ರಮ್ ॥೨೪.೬೭॥

 

ದ್ರೌಪದಿಯನ್ನು(ವಸ್ತ್ರಾಪಹರಣ ಪ್ರಸಂಗದಲ್ಲಿ) ಉಪೇಕ್ಷೆ ಮಾಡಿದ್ದ ಭೀಷ್ಮಾಚಾರ್ಯರೇ ಮೊದಲಾದವರಿಂದ ಬೇಡಲ್ಪಟ್ಟರೂ ಕೂಡಾ ಕೃಷ್ಣ ಅವರ ಮನೆಗೆ ತೆರಳಲಿಲ್ಲ. ಆದರೆ ಶೀಘ್ರದಲ್ಲಿ ವಿದುರನ ಮನೆಗೆ ಕೃಷ್ಣ ತೆರಳಿದ.

 

 ಸ ತೇನ ಭಕ್ತ್ಯಾSಭಿಗತಃ ಪ್ರಸನ್ನಃ ಪ್ರವಿಶ್ಯ ಚಾನ್ತರ್ಗ್ಗೃಹಮೀಶ್ವರೋSಜಃ ।

ಭಕ್ತ್ಯಾSಭಿಪೂರ್ಣ್ಣೇನ ಸಸಮ್ಭ್ರಮೇಣ ಸಮ್ಪೂಜಿತಃ ಸರ್ವಸಮರ್ಪ್ಪಣೇನ ॥೨೪.೬೮॥

 

ವಿದುರನಿಂದ ಭಕ್ತಿಯಿಂದ ಎದುರುಗೊಳ್ಳಲ್ಪಟ್ಟವನಾಗಿ, ಅವನ ಮೇಲೆ ಅನುಗ್ರಹ ಮಾಡುತ್ತಾ, ಪ್ರಸನ್ನನಾಗಿ ಅವನ ಒಳಮನೆಯನ್ನು ಶ್ರೀಕೃಷ್ಣ ಹೊಕ್ಕ.  ಭಕ್ತಿಯಿಂದ ತುಂಬಿರುವ, ಸಂಭ್ರಮಪೂರ್ವಕವಾಗಿ ತನ್ನಲಿದ್ದ ಎಲ್ಲವನ್ನೂ ಕೊಟ್ಟು, ಸಂಪೂರ್ಣ ಸಮರ್ಪಣೆಯಿಂದ ವಿದುರ ಕೃಷ್ಣನನ್ನು ಪೂಜಿಸಿದ.  

 

ಪರೇ ದಿನೇSಸೌ ಧೃತರಾಷ್ಟ್ರಸೂನುನಾ ಸಮಾನೀತಃ ಸಂಸದಿ ಕೌರವಾಣಾಮ್ ।

ವಿವೇಶ ದಿವ್ಯೇ ಮಣಿಕಾಞ್ಚನಾಸನೇ ಸಾರ್ದ್ಧಂ ಮುನೀನ್ದ್ರೈಃ ಪರಮಾರ್ತ್ಥವೇದಿಭಿಃ ॥೨೪.೬೯॥

 

ಮಾರನೇದಿನ ದುರ್ಯೋಧನನಿಂದ ಖುದ್ದಾಗಿ ಕರೆದೊಯ್ಯಲ್ಪಟ್ಟವನಾಗಿ, ಕೌರವರ ಸಭೆಯನ್ನು ಪ್ರವೇಶಿಸಿದ ಶ್ರೀಕೃಷ್ಣ,  ಮುತ್ತು ಬಂಗಾರಗಳಿಂದ ಖಚಿತವಾಗಿರುವ ಅಲೌಕಿಕವಾಗಿರುವ ಆಸನದಲ್ಲಿ ಎಲ್ಲಾ ಮುನಿಗಳ ಜೊತೆಗೆ ಕುಳಿತನು.

Wednesday, January 11, 2023

Mahabharata Tatparya Nirnaya Kannada 24-50-61

 

ಇತ್ಯುಕ್ತೇ ವೈರಮಾತ್ಮೋತ್ಥಂ ಲೋಕಮದ್ಧ್ಯೇ ಪ್ರಹಾಪಯನ್ ।

ಲೋಕಸಙ್ಗ್ರಹಣಾರ್ತ್ಥಾಯ ಭೀಮಸೇನೋSಬ್ರವೀದ್ ವಚಃ ॥೨೪.೫೦॥

 

ಈರೀತಿಯಾಗಿ ಶ್ರೀಕೃಷ್ಣ ಹೇಳಲು, ಕೌರವಾದಿಗಳ ಮೇಲಿನ ತನ್ನ ಶತ್ರುತ್ವವನ್ನು ಜನರ ಮುಂದೆ ಬಿಟ್ಟಂತೆ ನಟಿಸುತ್ತಾ, ಮುಂದೆ ನಿರ್ಣಾಯಕವಾದ ಪ್ರಸಂಗದಲ್ಲಿ ಯಾವ ರೀತಿ ನಡೆಯಬೇಕು ಎನ್ನುವುದನ್ನು ತೋರಿಸಲು ಭೀಮಸೇನ ಮಾತನಾಡಿದ-

 

ನಾಸ್ಮನ್ನಿಮಿತ್ತನಾಶಃ ಸ್ಯಾತ್ ಕುಲಸ್ಯಾಪಿ  ವಯಂ ಕುಲಮ್ ।

ರಕ್ಷಿತುಂ ಧಾರ್ತ್ತರಾಷ್ಟ್ರಸ್ಯ  ಭವೇಮಾಧಶ್ಚರಾ ಇತಿ ॥೨೪.೫೧॥

 

‘ಇಡೀ ಕುರುಕುಲ ನಮ್ಮಿಂದ ನಾಶವಾಗದೇ ಇರಲಿ. ನಾವು ವಂಶವನ್ನು ರಕ್ಷಿಸಲು ದುರ್ಯೋಧನನ ದಾಸರಾಗುತ್ತೇವೆ’.

[ಮಹಾಭಾರತದ ಉದ್ಯೋಗಪರ್ವದಲ್ಲಿ (೭೩.೨೦) ಈ ಪ್ರಸಂಗದ ವಿವರಣೆ ಕಾಣಸಿಗುತ್ತದೆ  : ‘ಅಪಿ ದುರ್ಯೋಧನಂ ಕೃಷ್ಣ ಸರ್ವೇ ವಯಮಧಶ್ಚರಾಃ । ನೀಚೈರ್ಭೂತ್ವಾSನುಯಾಸ್ಯಾಮೋ ಮಾ ಸ್ಮ ನೋ ಭರತಾ ನಶನ್’ ]

 

[ಇಷ್ಟು ವರ್ಷಗಳ ಕಾಲ ದ್ವೇಷ ಸಾಧನೆ ಮಾಡಿಕೊಂಡು ಬಂದಿದ್ದ ಭೀಮ ಈಗ ಏಕೆ ಹೀಗೆ ಹೇಳಿದ ಎಂದರೆ, ಅದರ ಉದ್ದೇಶವನ್ನು ಹೇಳುತ್ತಾರೆ-]

 

ಇಚ್ಛತಾSಪ್ಯಖಿಲಾನ್ ಹನ್ತುಂ ಧಾರ್ತ್ತರಾಷ್ಟ್ರಾನ್ ದೃಢಾತ್ಮನಾ ।

ಭೀಮೇನೋಕ್ತೋ ವಾಸುದೇವೋ ಲೋಕಸಙ್ಗ್ರಹಣೇಚ್ಛಯಾ ॥೨೪.೫೨॥

 

ಎಲ್ಲಾ ದುರ್ಯೋಧನಾದಿಗಳನ್ನು ಕೊಲ್ಲಲು ಧೃಡವಾಗಿ ಬಯಸಿರುವ ಭೀಮಸೇನನು ಲೋಕದ ಹಿತದೃಷ್ಟಿಯಿಂದ ಮತ್ತು ಲೋಕಕ್ಕೆ ವಿಷಯವನ್ನು ತೋರಿಸಲೋಸುಗ (ಅವಿವೇಕದಿಂದಾಗಲೀ, ದುಡುಕಿನಿಂದಾಗಲೀ ಯುದ್ಧ ಮಾಡುತ್ತಿಲ್ಲ ಎಂದು ತೋರಿಸಲು) ಈ ಮಾತನ್ನು ಹೇಳಿದ.    

 

[ಭೀಮಸೇನ ದುರ್ಯೋಧನನ ದಾಸರಾಗುತ್ತೇವೆ ಎಂದು ಹೇಳಿದಾಕ್ಷಣ ಶ್ರೀಕೃಷ್ಣ ಆಕ್ಷೇಪ ಮಾಡಿದ. ಮಹಾಭಾರತದಲ್ಲಿ ಶ್ರೀಕೃಷ್ಣನ ಮಾತಿನ ವಿವರ ಕಾಣಸಿಗುತ್ತದೆ-: ‘ಇದಂ ಮೇ ಮಹದಾಶ್ಚರ್ಯಂ  ಪರ್ವತಸ್ಯೇವ ಸರ್ಪಣಮ್ ಯದೀದೃಷಂ ಪ್ರಭಾಷೇಥಾ ಭೀಮಸೇನಾಸಮಂ ವಚಃ । ಸ ದೃಷ್ಟ್ವಾ ಸ್ವಾನಿ ಕರ್ಮಣಿ ಕುಲೇ ಜನ್ಮ ಚ ಭಾರತ । ಉತ್ತಿಷ್ಠಸ್ವ ವಿಷಾದಂ ಮಾ ಕೃಥಾ ವೀರ ಸ್ಥಿರೋ ಭವ (೭೪.೨೧.೨) ‘ಪರ್ವತ ಜರಗಿದರೆ ಯಾವರೀತಿ ಅಚ್ಚರಿಯಾಗಬೇಕೋ ಆ ರೀತಿ ಅಚ್ಚರಿಯಾಗುತ್ತಿದೆ ನೀನು ಈ ರೀತಿ ಹೇಳುತ್ತಿರುವುದು.  ನಿನಗೆ ಯುಕ್ತವಲ್ಲದ ಮಾತನ್ನು ಆಡುತ್ತಿದ್ದೀಯ. ನೀನು ಖಿನ್ನತೆಗೊಳಗಾದಂತೆ ಕಾಣುತ್ತಿದ್ದೀಯ. ಎದ್ದು ನಿಲ್ಲು. ಹಿಂದಿನಂತೆಯೇ ಧೃಡನಾಗು’ -ಇದರ ತಾತ್ಪರ್ಯವನ್ನು ಆಚಾರ್ಯರು ಇಲ್ಲಿ ವಿವರಿಸಿರುವುದನ್ನು ಕಾಣಬಹುದು-]

 

ವಧಂ ತೇಷಾಂ ಧರ್ಮ್ಮಮೇವ ಲೋಕೇ ಜ್ಞಾಪಯಿತುಂ ಹರಿಃ ।

ಆಕ್ಷಿಪನ್ನಿವ ಭೀಮಂ ತಂ ಯುದ್ಧಾಯ ಪ್ರೇರಯದ್ ದೃಢಮ್ ॥೨೪.೫೩॥

 

ಶ್ರೀಕೃಷ್ಣಪರಮಾತ್ಮನು ದುರ್ಯೋಧನಾದಿಗಳ ಸಂಹಾರವನ್ನು ಧರ್ಮ ಎಂಬುದಾಗಿ ಜಗತ್ತಿನ ಜನರ ಎದುರಿನಲ್ಲಿ ನೆನಪಿಸಲು, ಭೀಮಸೇನನನ್ನು ಬಯ್ಯುತ್ತಿರುವನೋ ಎಂಬಂತೆ, ದೃಢವಾಗಿ  ಯುದ್ಧಕ್ಕಾಗಿಯೇ ಪ್ರಚೋದಿಸಿದನು.

 

 

ಅಭಿಪ್ರಾಯಂ ಕೇಶವಸ್ಯ ಜಾನನ್ ಭೀಮೋ ನಿಜಂ ಬಲಮ್ ।

ರಾಜ್ಞಾಂ ಮದ್ಧ್ಯೇSವದತ್ ತಚ್ಚ ಕೃಷ್ಣೋSಭ್ಯಧಿಕಮೇವ ಹಿ ॥೨೪.೫೪॥

 

ಭೀಮಸೇನನು ಶ್ರೀಕೃಷ್ಣ ಪರಮಾತ್ಮನ ಅಭಿಪ್ರಾಯವನ್ನು ತಿಳಿದೇ ರಾಜರ ಮಧ್ಯದಲ್ಲಿ ತನ್ನ ಬಲವನ್ನು ಹೇಳಿದ. ಆಗ  ಶ್ರೀಕೃಷ್ಣನು ‘ನಿನ್ನ ಬಲವು ಇದಕ್ಕಿಂತ ಹೆಚ್ಚಾಗಿದೆ ಆದರೆ ನೀನೇ ಕಡಿಮೆ ಹೇಳುತ್ತಿರುವೆ’ ಎಂದು ಹೇಳಿದ.

 

[ಈ ಕುರಿತಾದ ವಿವರವನ್ನು ನಾವು ಎರಡನೇ ಅಧ್ಯಾಯದಲ್ಲಿ(೨.೧೫೭) ನೋಡಿದ್ದೇವೆ. ಮಹಾಭಾರತದ ಉದ್ಯೋಗಪರ್ವದಲ್ಲಿ(೭೬.೩-೪; ೧೮ ) ಶ್ರೀಕೃಷ್ಣ ಭೀಮಸೇನನನ್ನು ಕುರಿತು ಈ ರೀತಿ ಹೇಳುತ್ತಾನೆ: ಓ  ಭೀಮಸೇನನೇ, ನಿನ್ನಲ್ಲಿ ಯಾವ ಮಂಗಳಕರವಾದ ಸಂಗತಿಯನ್ನು ನೀನು ಇದೇ ಎಂದು  ಹೇಳುತ್ತೀಯೋ, ಆ ಗುಣದ  ಸಾವಿರಪಟ್ಟು  ಮಿಗಿಲಾದದ್ದು ನಿನ್ನಲ್ಲಿದೆ ಎಂದು ನಾನು ತಿಳಿಯುತ್ತೇನೆ. ಯಾರ ಮಗನಾಗಿದ್ದೀಯ, ಯಾರ ಕುಲದಲ್ಲಿ ಹುಟ್ಟಿದ್ದೀಯ, ಈತನಕದ ನಿನ್ನ ಕೆಲಸಗಳು ಏನಿದೆ, ನೀನು ಎಂಥವನು ಎಂದು ನಿರ್ಣಯಮಾಡಲು ಇಷ್ಟು ಸಾಕು’ ಎಂದು.

ಇಲ್ಲಿ ಭೀಮಸೇನ ತನ್ನ ಬಲದ ಕುರಿತು ಜಗತ್ತಿನ ಮುಂದೆ ಹೇಳಲೀ ಎನ್ನುವ ಅಭಿಪ್ರಾಯ ಕೃಷ್ಣನದಾಗಿತ್ತು.  ಕೃಷ್ಣನ ಸಂಕಲ್ಪವನ್ನು ತಿಳಿದ ಭೀಮಸೇನ ತನ್ನ ಬಲವನ್ನು ಹೇಳಿಕೊಂಡ]

 

ಶಶಂಸ ಸತ್ಯೈಃ  ಸದ್ವಾಕ್ಯೈ ರಾಜ್ಞಾಂ ಮದ್ಧ್ಯೇ ಪ್ರಕಾಶಯನ್ ।

ವಧಂ ಕುರೂಣಾಂ ಸದ್ಧರ್ಮ್ಮಂ ಗುಣಾನ್ ಭೀಮಸ್ಯ ಚಾಮಿತಾನ್ ॥೨೪.೫೫॥

 

ತದನಂತರ ರಾಜರ ಮಧ್ಯದಲ್ಲಿ ಸತ್ಯವಾಗಿರುವ ಮಾತುಗಳಿಂದ ಭೀಮನು  ‘ಕುರುಗಳ ವಧೆಯು ಧರ್ಮವೇ’ ಎಂದು ಹೇಳಿದ. ಭೀಮನ ಅಮಿತವಾಗಿರುವ ಗುಣಗಳನ್ನೂ ಶ್ರೀಕೃಷ್ಣ ಹೇಳಿದ.

[ಇಲ್ಲಿ ಶ್ರೀಕೃಷ್ಣನ ಉದ್ದೇಶ - ಪಾಂಡವರು ಯುದ್ಧವನ್ನು ಬಯಸುವುದು ಧರ್ಮಪೂರ್ವಕವಾಗಿದೆ, ಇದೊಂದು ಧರ್ಮಯುದ್ಧ ಎನ್ನುವುದನ್ನು ಜಗತ್ತಿಗೆ ತೋರಿಸುವುದು ಹಾಗೂ  ಭೀಮಸೇನ ಒಂದು ಸೌಜನ್ಯದಿಂದ ಮಾತನಾಡಿದನೇ ಹೊರತು, ವಸ್ತುತಃ ಭೀಮನಿಗೆ ಭಯ ಮೊದಲಾದವುಗಳಿಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸುವುದಾಗಿತ್ತು.]

 

ನಿತ್ಯಮೇಕಮನಸ್ಕೌ ತಾವಪಿ ಕೇಶವಮಾರುತೀ ।

ಏವಂ ಲೋಕಸ್ಯ ಸಂವಾದಹೇತೋಃ ಸಂವಾದಮಕ್ರತಾಮ್ ॥೨೪.೫೬॥

 

ಕೃಷ್ಣ ಭೀಮಸೇನರು ಯಾವಾಗಲೂ ಒಂದೇ ಅಭಿಪ್ರಾಯವುಳ್ಳವರಾಗಿದ್ದರೂ ಕೂಡಾ, ಲೋಕದ ಮುಂದೆ ನಾವಿಬ್ಬರೂ ಒಂದೇ ಅಭಿಪ್ರಾಯವನ್ನು ಹೊಂದಿದ್ದೇವೆ ಎಂದು ತಿಳಿಸಲು ಇಲ್ಲಿ ಹೀಗೆ ಮಾತನಾಡಿದರು.

[ಒಂದು ವೇಳೆ ಭೀಮಸೇನ ರಾಜರ ಮಧ್ಯೆ ಈಗ ಮಾತನಾಡಿಲ್ಲ ಎಂದಾಗಿದ್ದರೆ, ಭೀಮ ಹಾಗೂ ಕೃಷ್ಣ ಇಬ್ಬರಿಗೂ ಒಂದೇ ಅಭಿಪ್ರಾಯವಿದೆ ಎನ್ನುವುದು ಜಗತ್ತಿಗೇ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ದೇವರ ಸಂಕಲ್ಪದಂತೆ ಭೀಮಸೇನ ಮಾತನಾಡಿದ]

 

ತತಃ ಕೃಷ್ಣೋSರ್ಜ್ಜುನಂ ಚೈವ ಕೃಪಾಲುಂ ಸನ್ಧಿಕಾಮುಕಮ್ ।

ಹೇತುಮದ್ಭಿಃ ಶುಭೈರ್ವಾಕ್ಯೈರನುನೀಯ ಜಗತ್ಪತಿಃ ॥೨೪.೫೭॥

 

ಧರ್ಮರಾಜ ಹಾಗೂ ಭೀಮಸೇನ ಮಾತನಾಡಿದ ನಂತರ ಕೌರವರ ಮೇಲೆ ಕೃಪೆ ಇಟ್ಟಿರುವ, ಸಂಧಾನವನ್ನು ಬಯಸುತ್ತಿರುವ ಅರ್ಜುನನನ್ನು ಕುರಿತು ಯುಕ್ತಿಯುಕ್ತವಾಗಿರುವ ಶಾಸ್ತ್ರಪ್ರಣೀತವಾಗಿರುವ ವಾಕ್ಯಗಳಿಂದ ಶ್ರೀಕೃಷ್ಣ ಸಮಾಧಾನಗೊಳಿಸಿದ. (ಯುದ್ಧಭೂಮಿಗೆ ತೆರಳುವ ಮೊದಲೇ ಅರ್ಜುನನ ಮನಸ್ಸಿನಲ್ಲಾಗಿರುವ ಬದಲಾವಣೆಯನ್ನು ನಾವಿಲ್ಲಿ ಗಮನಿಸಬೇಕು)

 

ಉಕ್ತೋ ಮಾನುಷಯಾ ಬುದ್ಧ್ಯಾ ನಕುಲೇನ ಸುನೀತಿವತ್ ।

ಶೌರ್ಯ್ಯಪ್ರಕಾಶನಾಯೈವ ಯುದ್ಧಂ ಯೋಜಯತಾಂ ಭವಾನ್  ॥೨೪.೫೮॥

 

ಇತ್ಯುಕ್ತ ಸಹದೇವೇನ ಯುಯುಧಾನೇನ ಚಾಚ್ಯುತಃ ।

ದಸ್ಯೂನಾಂ ನಿಗ್ರಹೋ ಧರ್ಮ್ಮಃ ಕ್ಷತ್ರಿಯಾಣಾಂ ಯತಃ ಪರಃ ॥೨೪.೫೯॥

 

ಅತೋ ನ ಧಾರ್ತರಾಷ್ಟ್ರೈರ್ನ್ನಃ ಸನ್ಧಿಃ ಸ್ಯಾದಿತಿ ಪಾರ್ಷತೀ ।

ಜಗಾದ ಕೃಷ್ಣಂ ಸೋSಪ್ಯೇನಾಮೋಮಿತ್ಯುಕ್ತ್ವಾ ವಿನಿರ್ಯ್ಯಯೌ ॥೨೪.೬೦॥

 

ನಂತರ ನಕುಲ, ಶ್ರೀಕೃಷ್ಣ ಒಬ್ಬ ಮನುಷ್ಯ ಎನ್ನುವ ಬುದ್ಧಿಯಿಂದ ಅವನಿಗೆ ನೀತಿಯನ್ನು ಉಪದೇಶ ಮಾಡಿದ. ಸಾತ್ಯಕಿ ಮತ್ತು ಸಹದೇವ ‘ಶೌರ್ಯಪ್ರಕಾಶನಕ್ಕಾಗಿ ಯುದ್ಧವನ್ನು ಆಯೋಜಿಸಬೇಕು’ ಎಂದು ಹೇಳಿದರು. ಇನ್ನು ದ್ರೌಪದಿ- ‘ಕಳ್ಳರನ್ನು ನಿಗ್ರಹಿಸುವುದು ಧರ್ಮ. ಇದು  ಕ್ಷತ್ರಿಯರಿಗಂತೂ ಇನ್ನೂ ವಿಶೇಷವಾದ ಧರ್ಮ. ಆ ಕಾರಣದಿಂದ ದುರ್ಯೋಧನಾದಿಗಳೊಂದಿಗೆ ನಮಗೆ ಸಂಧಾನವಾಗಬಾರದು’ ಎಂದಳು. ಕೃಷ್ಣ  ‘ಆಯಿತು ಎಂದು ಹೇಳಿ ಹೊರಟ.

 

ಸಸಾತ್ಯಕಿಃ ಸ್ಯನ್ದನವರ್ಯ್ಯಸಂಸ್ಥಿತಃ  ಪೃಥಾತನೂಜೈರಖಿಲೈಃ ಸ ಭೂಮಿಪೈಃ ।

ಅನ್ವಾಗತೋ ದೂರತರಂ ಗಿರಾ ತಾನ್ ಸಂಸ್ಥಾಪ್ಯ ವಿಪ್ರಪ್ರವರೈಃ ಕುರೂನ್ ಯಯೌ ॥೨೪.೬೧॥

 

ಸಾತ್ಯಕಿಯಿಂದ ಕೂಡಿಕೊಂಡು, ತನ್ನ ಉತ್ಕೃಷ್ಟವಾದ ರಥದಲ್ಲಿ ಕುಳಿತು, ಎಲ್ಲಾ ಪಾಂಡವರಿಂದಲೂ, ವಿರಾಟ, ದ್ರುಪದ, ಮೊದಲಾದ ರಾಜರಿಂದಲೂ ಬಹಳ ದೂರದ ತನಕ ಹಿಂಬಾಲಿಸಲ್ಪಟ್ಟವನಾಗಿ, ತದನಂತರ ಮಾತಿನಿಂದ ಎಲ್ಲರನ್ನೂ ನಿಲ್ಲಿಸಿ(ಎಲ್ಲರಿಗೂ ‘ನೀವು ಇಲ್ಲೇ ಇರಿ- ನಾನು ಹೋಗಿ ಬರುತ್ತೇನೆ ಎಂದು ಹೇಳಿ), ಶ್ರೇಷ್ಠ ಬ್ರಾಹ್ಮಣರೊಂದಿಗೆ ಕೌರವರ ಬಳಿಗೆ ಶ್ರೀಕೃಷ್ಣ ತೆರಳಿದ.

Sunday, January 8, 2023

Mahabharata Tatparya Nirnaya Kannada 24-38-49

 

ಸಞ್ಜಯಂ ಪ್ರೇಷಯಾಮಾಸ ಧೃತರಾಷ್ಟ್ರೋSಥ ಶಾನ್ತಯೇ ।

ಪಾಣ್ಡವಾನ್ ಪ್ರತ್ಯಧರ್ಮ್ಮಂ ಚ ಯುದ್ಧಂ ಸಃ ಪ್ರತ್ಯಪಾದಯತ್ ॥೨೪.೩೮॥

 

ಇತ್ತ ಧೃತರಾಷ್ಟ್ರನು ಒಂದು ಒಪ್ಪಂದಕ್ಕಾಗಿ ಸಂಜಯನನ್ನು ಪಾಂಡವರ ಬಳಿ ಕಳುಹಿಸಿದ. ಸಂಜಯನಾದರೋ ಪಾಂಡವರನ್ನು ಕುರಿತು ಯುದ್ಧವೆನ್ನುವುದು ಅಧರ್ಮ’ ಎಂದು ಪ್ರತಿಪಾದಿಸಿದ.

 

ಹಠವಾದೇSವದದ್ ಭೀಮೋ ಯಂ ಧರ್ಮ್ಮಂ ದ್ರೌಪದೀ ತಥಾ ।

ತಮೇವೋಕ್ತ್ವಾ ಧರ್ಮ್ಮಜಸ್ತು ಚಕಾರ ಚ ನಿರುತ್ತರಮ್ ॥೨೪.೩೯॥

 

ಹಿಂದೆ ಭೀಮಸೇನನು ಹಾಗೂ ದ್ರೌಪದಿಯು ಹಠವಾದದಲ್ಲಿ ಏನನ್ನು ಹೇಳಿದ್ದರೋ ಅದನ್ನೇ ಧರ್ಮರಾಜ ಸಂಜಯನಿಗೆ ಉತ್ತರರೂಪವಾಗಿ ಹೇಳಿ, ಅವನನ್ನು ನಿರುತ್ತರನನ್ನಾಗಿ ಮಾಡಿದ.

 

ಕೃಷ್ಣೋSಪಿ ತಸ್ಯ ಧರ್ಮ್ಮಸ್ಯ ಪ್ರಾಮಾಣ್ಯಂ ಪ್ರತ್ಯಪಾದಯತ್ ।

ತತೋ ನಿರುತ್ತರಃ ಕೃಷ್ಣಂ ಪಾಣ್ಡವಾಂಶ್ಚ ಪ್ರಣಮ್ಯ ಸಃ ॥೨೪.೪೦॥

 

ಧೃತರಾಷ್ಟ್ರಂ ಯಯೌ ತಂ ಚ ವಿನಿನ್ದ್ಯ ಪ್ರಯಯೌ ಗೃಹಮ್ ।

ನಿನ್ದಿತಃ ಸಞ್ಜಯೇನಾಸಾವಾಹೂಯ ವಿದುರಂ ನಿಶಿ ॥೨೪.೪೧॥

 

ಪಪ್ರಚ್ಛ ಸೋSವದದ್ ಧರ್ಮ್ಮಂ ಪಾರ್ತ್ಥಾನಾಂ ರಾಜ್ಯದಾಪನಮ್ ।

ಐಹಿಕಸ್ಯ ಸುಖಸ್ಯಾಪಿ ಕಾರಣಂ ತದನಿನ್ದಿತಮ್ ॥೨೪.೪೨॥

 

ಕೃಷ್ಣನೂ ಕೂಡಾ ಧರ್ಮರಾಜ ಹೇಳಿದ ಮಾತಿಗೆ ‘ಅದು ಸರಿ ಎಂದು ಪ್ರತಿಪಾದನೆ ಮಾಡಿದ. ತದನಂತರ ನಿರುತ್ತರನಾದ ಸಂಜಯ ಕೃಷ್ಣ ಹಾಗೂ ಪಾಂಡವರಿಗೆ ನಮಸ್ಕರಿಸಿ, ಧೃತರಾಷ್ಟ್ರನಲ್ಲಿಗೆ ಹಿಂತಿರುಗಿದ. ಹೋದ ಕಾರ್ಯದ ಕುರಿತು ಕೇಳಿದ ಧೃತರಾಷ್ಟ್ರನನ್ನು  ಸಂಜಯ ಚನ್ನಾಗಿ ಬೈದು, ತನ್ನ ಮನೆಗೆ ಹೊರಟುಹೋದ.

ಸಂಜಯನಿಂದ ನಿಂದಿತನಾದ ಧೃತರಾಷ್ಟ್ರನು ರಾತ್ರಿಯಲ್ಲಿ ವಿದುರನನ್ನು ಕರೆದು ಧರ್ಮದ ಕುರಿತು ಪ್ರಶ್ನೆಮಾಡಿದನು. ‘ಪಾಂಡವರಿಗೆ ರಾಜ್ಯವನ್ನು ಕೊಡುವುದು ಇಲ್ಲಿಯ(ಭೂಲೋಕಸಂಬಂಧಿಯಾದ) ಸುಖಕ್ಕೆ ಕಾರಣವಾಗುತ್ತದೆ ಮತ್ತು  ಅದು ನಿಂದನೆಯನ್ನು ತಡೆಯುತ್ತದೆ.

 

 

ಅನ್ಯಥಾ ಸರ್ವಪುತ್ರಾಣಾಮ್ ನಾಶಂ ಧರ್ಮ್ಮಾತಿಲಙ್ಘನಮ್ ।

ತತ್ರ ಭಾವಮಕೃತ್ವಾ ಸ ಜ್ಞಾನಾದಿಚ್ಛನ್ನಘಕ್ಷಯಮ್ ॥೨೪.೪೩॥

 

ವಿಷ್ಣೋಃ ಸ್ವರೂಪಂ ಪಪ್ರಚ್ಛ ಸೋsಸ್ಮರಚ್ಚ ಸನಾತನಮ್ ।

ಸ ಆಗತ್ಯಾವದತ್ ತತ್ವಂ ವಿಷ್ಣೋರ್ಮ್ಮಾಯಾವಿನಃ ಶುಭಾ । ॥೨೪.೪೪॥

 

ನ ಗತಿಶ್ಚೇತ್ಯಥ ಪ್ರಾತಃ ಸಞ್ಜಯಃ ಪಾಣ್ಡವೋದಿತಮ್ ।

ಅವದದ್ ಧೃತರಾಷ್ಟ್ರಾಯ ಸಭಾಯಾಂ ಕುರುಸನ್ನಿಧೌ ॥೨೪.೪೫॥

 

‘ಪಾಂಡವರಿಗೆ ರಾಜ್ಯವನ್ನು ಕೊಡದೇ ಹೋದರೆ ನಿನ್ನೆಲ್ಲಾ ಪುತ್ರರ ಸಾವನ್ನೂ, ಧರ್ಮವನ್ನು ಮೀರಿದ ಪಾಪವನ್ನೂ ಹೊಂದುತ್ತೀಯ’ ಎಂದು ವಿದುರ ಹೇಳಿದಾಗ ಧೃತರಾಷ್ಟ್ರ ಆ ವಿಚಾರದಲ್ಲಿ ಮನಸ್ಸನ್ನು ಮಾಡದೆಯೇ, ಜ್ಞಾನದಿಂದ ಪಾಪದ ನಾಶವನ್ನು ಬಯಸಿ, ‘ನಾರಾಯಣನ ಸ್ವರೂಪವನ್ನು ನನಗೆ ಹೇಳು’ ಎಂದು ಕೇಳಿದ. ಆಗ ವಿದುರ ಸನಾತನ ಋಷಿಯನ್ನು ಸ್ಮರಿಸಿದ. ಆ ಸನಾತನ ಋಷಿ ಬಂದು  ಸರ್ವೋತ್ಕೃಷ್ಟವಾದ ಇಚ್ಛೆಯಿರುವ ಸತ್ಯಸಂಕಲ್ಪನಾದ ನಾರಾಯಣನ ತತ್ವವನ್ನು[1] ವಿವರಿಸಿದ. (ಯಾವ ರೀತಿ ರೆಕ್ಕೆ ಬಲಿತ ಹಕ್ಕಿ ಗೂಡನ್ನು ಬಿಟ್ಟು ಹಾರಿ ಹೋಗುತ್ತದೋ, ಹಾಗೇ ಕಲಿತ ವೇದ ಪಾಪ ಮಾಡಿದರೆ ನಮ್ಮನ್ನು ರಕ್ಷಿಸುವುದಿಲ್ಲ, ಬಿಟ್ಟು ಹೋಗುತ್ತದೆ), ಕಪಟಿಗೆ ಸದ್ಗತಿಯಾಗದು  ಎಂದು ಸನತ್ಸುಜಾತರು ವಿವರಿಸಿ ಹೇಳುತ್ತಾರೆ.

ಮರುದಿನ ಬೆಳಗಾದ ಕೂಡಲೇ ಸಂಜಯನು ಪಾಂಡವರು ಹೇಳಿದ್ದೆಲ್ಲವನ್ನೂ ಧೃತರಾಷ್ಟ್ರನ ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಹೇಳುತ್ತಾನೆ.

 

ತಚ್ಛ್ರುತ್ವಾ ಸ ತು ಭೀತೋsಪಿ ಪುತ್ರಸ್ನೇಹಾನುಗೋ ನೃಪಃ ।

ರಾಜ್ಯಂ ನಾದಾತ್ ಪಾಣ್ಡವಾನಾಂ ತತೋ ಧರ್ಮ್ಮಸುತೋ ನೃಪಃ ॥೨೪.೪೬॥

 

ಯದುಕ್ತವಾನ್ ಸಞ್ಜಯಾಯ ಯದಿ ದಿತ್ಸತಿ ನಃ ಪಿತಾ ।

ರಾಜ್ಯಂ ತದಾ ತ್ವಮಾಗಚ್ಛ ವಿದುರೋ ವಾ ನ ಚೇನ್ನಚ ॥೨೪.೪೭॥

 

ತಾವಥಾನಾಗತೌ ಜ್ಞಾತ್ವಾ ಮನ್ತ್ರಯಾಮಾಸ ಶೌರಿಣಾ ।

ಸೋSಪ್ಯಾಹಾಹಂ ಗಮಿಷ್ಯಾಮಿ ಸಭಾಯಾಮೃಷಿಸನ್ನಿಧೌ ॥೨೪.೪೮॥

 

ವಕ್ಷ್ಯೇ ಪಥ್ಯಾನಿ ಯುಕ್ತಾನಿ ಯದಿ ನಾಸೌ ಗ್ರಹೀಷ್ಯತಿ ।

ವದ್ಧ್ಯಃ ಸರ್ವಸ್ಯ ಲೋಕಸ್ಯ ಸ ಭವೇತ್ ಸರ್ವಧರ್ಮ್ಮಹಾ ॥೨೪.೪೯॥

 

ಸಂಜಯನ ಮಾತನ್ನು ಕೇಳಿ ಅಳುಕಿದರೂ ಕೂಡಾ, ಕುರುಡನಾದ ಧೃತರಾಷ್ಟ್ರ ತನ್ನ ಮಕ್ಕಳ ಮೇಲಿನ ಪ್ರೀತಿಯಿಂದ ಪಾಂಡವರಿಗೆ ರಾಜ್ಯವನ್ನು ಕೊಡಲಿಲ್ಲ.

ತದನಂತರ ಧರ್ಮರಾಜನು ‘ನಮ್ಮ ದೊಡ್ಡಪ್ಪ ಒಂದು ವೇಳೆ ರಾಜ್ಯವನ್ನು ಕೊಡಲು ಬಯಸಿದರೆ ಆಗ ನೀನಾಗಿರಬಹುದು ಅಥವಾ ವಿದುರನಾಗಿರಬಹುದು ಬರಬೇಕು. ಇಲ್ಲದಿದ್ದರೆ ಯಾರೂ ಬರುವುದು ಬೇಕಾಗಿಲ್ಲ’ ಈ ಪ್ರಕಾರವಾಗಿ ಸಂಜಯನಿಗೆ ಯಾವ ಕಾರಣದಿಂದ ಹೇಳಿರುವನೋ- ಆದುದರಿಂದ ಸಂಜಯ-ವಿದುರರನ್ನು ಬಾರದಿರುವವರನ್ನಾಗಿ ತಿಳಿದು, ಕೃಷ್ಣನ ಜೊತೆಗೆ ಮುಂದೇನು ಮಾಡಬೇಕು ಎನ್ನುವುದರ ಕುರಿತು ವಿಚಾರ ಮಾಡಿದ.

ಆಗ ಶ್ರೀಕೃಷ್ಣಪರಮಾತ್ಮನು- ‘ನಾನೇ ಹಸ್ತಿನಪುರಕ್ಕೆ ತೆರುಳುತ್ತೇನೆ,  ಋಷಿಗಳ ಸನ್ನಿಧಾನದ ಸಭೆಯಲ್ಲಿ ಒಳ್ಳೆಯದಾಗಲು ಇರುವ ಮಾರ್ಗಗಳನ್ನು ಹೇಳುತ್ತೇನೆ. ಒಂದು ವೇಳೆ ದುರ್ಯೋಧನ ಅದನ್ನು ಸ್ವೀಕರಿಸಲಿಲ್ಲವೆಂದರೆ ಅವನು ಸಂಹಾರಕ್ಕೆ ಅರ್ಹನೆನಿಸುತ್ತಾನೆ. ಅವನು ಕೊಡದೇ ಇರುವುದರಿಂದ ಲೋಕಧರ್ಮ ವಿರೋಧಿ ಅವನಾಗುತ್ತಾನೆ’ ಎನ್ನುತ್ತಾನೆ.

[ಇದೊಂದು ಧರ್ಮಯುದ್ಧ. ಅವನು ಕೊಡಲಿಲ್ಲವೆಂದರೆ ಪಾಂಡವರ ಧರ್ಮಪಾಲನೆಗೆ ಅವನು ಕಂಟಕ ಎನಿಸುತ್ತಾನೆ. ಯಾರು ಸ್ವಧರ್ಮ ಆಚರಿಸಲು ಕಂಟಕರಾಗಿರುತ್ತಾರೋ ಅವರನ್ನು ಕೊಲ್ಲಬೇಕು ಎನ್ನುವುದು ಶಾಸ್ತ್ರದ ವಿಧಿ. ಈ ಕಾರಣದಿಂದ ಅವರನ್ನು ಕೊಲ್ಲಬೇಕಾಗುತ್ತದೆ]  



[1] ಇದನ್ನು ಇಂದು ಸನತ್ಸುಜಾತೀಯ ಎಂದು ಕರೆಯುತ್ತೇವೆ. ಮಹಾಭಾರತದ ಸರ್ವೋತ್ಕೃಷ್ಟ ಭಾಗವಾಗಿರುವ ವಿದುರನೀತಿ ಮತ್ತು ಸನತ್ಸುಜಾತೀಯ ಉದ್ಯೋಗಪರ್ವದಲ್ಲೇ ಬರುತ್ತವೆ.