ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 8, 2023

Mahabharata Tatparya Nirnaya Kannada 24-38-49

 

ಸಞ್ಜಯಂ ಪ್ರೇಷಯಾಮಾಸ ಧೃತರಾಷ್ಟ್ರೋSಥ ಶಾನ್ತಯೇ ।

ಪಾಣ್ಡವಾನ್ ಪ್ರತ್ಯಧರ್ಮ್ಮಂ ಚ ಯುದ್ಧಂ ಸಃ ಪ್ರತ್ಯಪಾದಯತ್ ॥೨೪.೩೮॥

 

ಇತ್ತ ಧೃತರಾಷ್ಟ್ರನು ಒಂದು ಒಪ್ಪಂದಕ್ಕಾಗಿ ಸಂಜಯನನ್ನು ಪಾಂಡವರ ಬಳಿ ಕಳುಹಿಸಿದ. ಸಂಜಯನಾದರೋ ಪಾಂಡವರನ್ನು ಕುರಿತು ಯುದ್ಧವೆನ್ನುವುದು ಅಧರ್ಮ’ ಎಂದು ಪ್ರತಿಪಾದಿಸಿದ.

 

ಹಠವಾದೇSವದದ್ ಭೀಮೋ ಯಂ ಧರ್ಮ್ಮಂ ದ್ರೌಪದೀ ತಥಾ ।

ತಮೇವೋಕ್ತ್ವಾ ಧರ್ಮ್ಮಜಸ್ತು ಚಕಾರ ಚ ನಿರುತ್ತರಮ್ ॥೨೪.೩೯॥

 

ಹಿಂದೆ ಭೀಮಸೇನನು ಹಾಗೂ ದ್ರೌಪದಿಯು ಹಠವಾದದಲ್ಲಿ ಏನನ್ನು ಹೇಳಿದ್ದರೋ ಅದನ್ನೇ ಧರ್ಮರಾಜ ಸಂಜಯನಿಗೆ ಉತ್ತರರೂಪವಾಗಿ ಹೇಳಿ, ಅವನನ್ನು ನಿರುತ್ತರನನ್ನಾಗಿ ಮಾಡಿದ.

 

ಕೃಷ್ಣೋSಪಿ ತಸ್ಯ ಧರ್ಮ್ಮಸ್ಯ ಪ್ರಾಮಾಣ್ಯಂ ಪ್ರತ್ಯಪಾದಯತ್ ।

ತತೋ ನಿರುತ್ತರಃ ಕೃಷ್ಣಂ ಪಾಣ್ಡವಾಂಶ್ಚ ಪ್ರಣಮ್ಯ ಸಃ ॥೨೪.೪೦॥

 

ಧೃತರಾಷ್ಟ್ರಂ ಯಯೌ ತಂ ಚ ವಿನಿನ್ದ್ಯ ಪ್ರಯಯೌ ಗೃಹಮ್ ।

ನಿನ್ದಿತಃ ಸಞ್ಜಯೇನಾಸಾವಾಹೂಯ ವಿದುರಂ ನಿಶಿ ॥೨೪.೪೧॥

 

ಪಪ್ರಚ್ಛ ಸೋSವದದ್ ಧರ್ಮ್ಮಂ ಪಾರ್ತ್ಥಾನಾಂ ರಾಜ್ಯದಾಪನಮ್ ।

ಐಹಿಕಸ್ಯ ಸುಖಸ್ಯಾಪಿ ಕಾರಣಂ ತದನಿನ್ದಿತಮ್ ॥೨೪.೪೨॥

 

ಕೃಷ್ಣನೂ ಕೂಡಾ ಧರ್ಮರಾಜ ಹೇಳಿದ ಮಾತಿಗೆ ‘ಅದು ಸರಿ ಎಂದು ಪ್ರತಿಪಾದನೆ ಮಾಡಿದ. ತದನಂತರ ನಿರುತ್ತರನಾದ ಸಂಜಯ ಕೃಷ್ಣ ಹಾಗೂ ಪಾಂಡವರಿಗೆ ನಮಸ್ಕರಿಸಿ, ಧೃತರಾಷ್ಟ್ರನಲ್ಲಿಗೆ ಹಿಂತಿರುಗಿದ. ಹೋದ ಕಾರ್ಯದ ಕುರಿತು ಕೇಳಿದ ಧೃತರಾಷ್ಟ್ರನನ್ನು  ಸಂಜಯ ಚನ್ನಾಗಿ ಬೈದು, ತನ್ನ ಮನೆಗೆ ಹೊರಟುಹೋದ.

ಸಂಜಯನಿಂದ ನಿಂದಿತನಾದ ಧೃತರಾಷ್ಟ್ರನು ರಾತ್ರಿಯಲ್ಲಿ ವಿದುರನನ್ನು ಕರೆದು ಧರ್ಮದ ಕುರಿತು ಪ್ರಶ್ನೆಮಾಡಿದನು. ‘ಪಾಂಡವರಿಗೆ ರಾಜ್ಯವನ್ನು ಕೊಡುವುದು ಇಲ್ಲಿಯ(ಭೂಲೋಕಸಂಬಂಧಿಯಾದ) ಸುಖಕ್ಕೆ ಕಾರಣವಾಗುತ್ತದೆ ಮತ್ತು  ಅದು ನಿಂದನೆಯನ್ನು ತಡೆಯುತ್ತದೆ.

 

 

ಅನ್ಯಥಾ ಸರ್ವಪುತ್ರಾಣಾಮ್ ನಾಶಂ ಧರ್ಮ್ಮಾತಿಲಙ್ಘನಮ್ ।

ತತ್ರ ಭಾವಮಕೃತ್ವಾ ಸ ಜ್ಞಾನಾದಿಚ್ಛನ್ನಘಕ್ಷಯಮ್ ॥೨೪.೪೩॥

 

ವಿಷ್ಣೋಃ ಸ್ವರೂಪಂ ಪಪ್ರಚ್ಛ ಸೋsಸ್ಮರಚ್ಚ ಸನಾತನಮ್ ।

ಸ ಆಗತ್ಯಾವದತ್ ತತ್ವಂ ವಿಷ್ಣೋರ್ಮ್ಮಾಯಾವಿನಃ ಶುಭಾ । ॥೨೪.೪೪॥

 

ನ ಗತಿಶ್ಚೇತ್ಯಥ ಪ್ರಾತಃ ಸಞ್ಜಯಃ ಪಾಣ್ಡವೋದಿತಮ್ ।

ಅವದದ್ ಧೃತರಾಷ್ಟ್ರಾಯ ಸಭಾಯಾಂ ಕುರುಸನ್ನಿಧೌ ॥೨೪.೪೫॥

 

‘ಪಾಂಡವರಿಗೆ ರಾಜ್ಯವನ್ನು ಕೊಡದೇ ಹೋದರೆ ನಿನ್ನೆಲ್ಲಾ ಪುತ್ರರ ಸಾವನ್ನೂ, ಧರ್ಮವನ್ನು ಮೀರಿದ ಪಾಪವನ್ನೂ ಹೊಂದುತ್ತೀಯ’ ಎಂದು ವಿದುರ ಹೇಳಿದಾಗ ಧೃತರಾಷ್ಟ್ರ ಆ ವಿಚಾರದಲ್ಲಿ ಮನಸ್ಸನ್ನು ಮಾಡದೆಯೇ, ಜ್ಞಾನದಿಂದ ಪಾಪದ ನಾಶವನ್ನು ಬಯಸಿ, ‘ನಾರಾಯಣನ ಸ್ವರೂಪವನ್ನು ನನಗೆ ಹೇಳು’ ಎಂದು ಕೇಳಿದ. ಆಗ ವಿದುರ ಸನಾತನ ಋಷಿಯನ್ನು ಸ್ಮರಿಸಿದ. ಆ ಸನಾತನ ಋಷಿ ಬಂದು  ಸರ್ವೋತ್ಕೃಷ್ಟವಾದ ಇಚ್ಛೆಯಿರುವ ಸತ್ಯಸಂಕಲ್ಪನಾದ ನಾರಾಯಣನ ತತ್ವವನ್ನು[1] ವಿವರಿಸಿದ. (ಯಾವ ರೀತಿ ರೆಕ್ಕೆ ಬಲಿತ ಹಕ್ಕಿ ಗೂಡನ್ನು ಬಿಟ್ಟು ಹಾರಿ ಹೋಗುತ್ತದೋ, ಹಾಗೇ ಕಲಿತ ವೇದ ಪಾಪ ಮಾಡಿದರೆ ನಮ್ಮನ್ನು ರಕ್ಷಿಸುವುದಿಲ್ಲ, ಬಿಟ್ಟು ಹೋಗುತ್ತದೆ), ಕಪಟಿಗೆ ಸದ್ಗತಿಯಾಗದು  ಎಂದು ಸನತ್ಸುಜಾತರು ವಿವರಿಸಿ ಹೇಳುತ್ತಾರೆ.

ಮರುದಿನ ಬೆಳಗಾದ ಕೂಡಲೇ ಸಂಜಯನು ಪಾಂಡವರು ಹೇಳಿದ್ದೆಲ್ಲವನ್ನೂ ಧೃತರಾಷ್ಟ್ರನ ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಹೇಳುತ್ತಾನೆ.

 

ತಚ್ಛ್ರುತ್ವಾ ಸ ತು ಭೀತೋsಪಿ ಪುತ್ರಸ್ನೇಹಾನುಗೋ ನೃಪಃ ।

ರಾಜ್ಯಂ ನಾದಾತ್ ಪಾಣ್ಡವಾನಾಂ ತತೋ ಧರ್ಮ್ಮಸುತೋ ನೃಪಃ ॥೨೪.೪೬॥

 

ಯದುಕ್ತವಾನ್ ಸಞ್ಜಯಾಯ ಯದಿ ದಿತ್ಸತಿ ನಃ ಪಿತಾ ।

ರಾಜ್ಯಂ ತದಾ ತ್ವಮಾಗಚ್ಛ ವಿದುರೋ ವಾ ನ ಚೇನ್ನಚ ॥೨೪.೪೭॥

 

ತಾವಥಾನಾಗತೌ ಜ್ಞಾತ್ವಾ ಮನ್ತ್ರಯಾಮಾಸ ಶೌರಿಣಾ ।

ಸೋSಪ್ಯಾಹಾಹಂ ಗಮಿಷ್ಯಾಮಿ ಸಭಾಯಾಮೃಷಿಸನ್ನಿಧೌ ॥೨೪.೪೮॥

 

ವಕ್ಷ್ಯೇ ಪಥ್ಯಾನಿ ಯುಕ್ತಾನಿ ಯದಿ ನಾಸೌ ಗ್ರಹೀಷ್ಯತಿ ।

ವದ್ಧ್ಯಃ ಸರ್ವಸ್ಯ ಲೋಕಸ್ಯ ಸ ಭವೇತ್ ಸರ್ವಧರ್ಮ್ಮಹಾ ॥೨೪.೪೯॥

 

ಸಂಜಯನ ಮಾತನ್ನು ಕೇಳಿ ಅಳುಕಿದರೂ ಕೂಡಾ, ಕುರುಡನಾದ ಧೃತರಾಷ್ಟ್ರ ತನ್ನ ಮಕ್ಕಳ ಮೇಲಿನ ಪ್ರೀತಿಯಿಂದ ಪಾಂಡವರಿಗೆ ರಾಜ್ಯವನ್ನು ಕೊಡಲಿಲ್ಲ.

ತದನಂತರ ಧರ್ಮರಾಜನು ‘ನಮ್ಮ ದೊಡ್ಡಪ್ಪ ಒಂದು ವೇಳೆ ರಾಜ್ಯವನ್ನು ಕೊಡಲು ಬಯಸಿದರೆ ಆಗ ನೀನಾಗಿರಬಹುದು ಅಥವಾ ವಿದುರನಾಗಿರಬಹುದು ಬರಬೇಕು. ಇಲ್ಲದಿದ್ದರೆ ಯಾರೂ ಬರುವುದು ಬೇಕಾಗಿಲ್ಲ’ ಈ ಪ್ರಕಾರವಾಗಿ ಸಂಜಯನಿಗೆ ಯಾವ ಕಾರಣದಿಂದ ಹೇಳಿರುವನೋ- ಆದುದರಿಂದ ಸಂಜಯ-ವಿದುರರನ್ನು ಬಾರದಿರುವವರನ್ನಾಗಿ ತಿಳಿದು, ಕೃಷ್ಣನ ಜೊತೆಗೆ ಮುಂದೇನು ಮಾಡಬೇಕು ಎನ್ನುವುದರ ಕುರಿತು ವಿಚಾರ ಮಾಡಿದ.

ಆಗ ಶ್ರೀಕೃಷ್ಣಪರಮಾತ್ಮನು- ‘ನಾನೇ ಹಸ್ತಿನಪುರಕ್ಕೆ ತೆರುಳುತ್ತೇನೆ,  ಋಷಿಗಳ ಸನ್ನಿಧಾನದ ಸಭೆಯಲ್ಲಿ ಒಳ್ಳೆಯದಾಗಲು ಇರುವ ಮಾರ್ಗಗಳನ್ನು ಹೇಳುತ್ತೇನೆ. ಒಂದು ವೇಳೆ ದುರ್ಯೋಧನ ಅದನ್ನು ಸ್ವೀಕರಿಸಲಿಲ್ಲವೆಂದರೆ ಅವನು ಸಂಹಾರಕ್ಕೆ ಅರ್ಹನೆನಿಸುತ್ತಾನೆ. ಅವನು ಕೊಡದೇ ಇರುವುದರಿಂದ ಲೋಕಧರ್ಮ ವಿರೋಧಿ ಅವನಾಗುತ್ತಾನೆ’ ಎನ್ನುತ್ತಾನೆ.

[ಇದೊಂದು ಧರ್ಮಯುದ್ಧ. ಅವನು ಕೊಡಲಿಲ್ಲವೆಂದರೆ ಪಾಂಡವರ ಧರ್ಮಪಾಲನೆಗೆ ಅವನು ಕಂಟಕ ಎನಿಸುತ್ತಾನೆ. ಯಾರು ಸ್ವಧರ್ಮ ಆಚರಿಸಲು ಕಂಟಕರಾಗಿರುತ್ತಾರೋ ಅವರನ್ನು ಕೊಲ್ಲಬೇಕು ಎನ್ನುವುದು ಶಾಸ್ತ್ರದ ವಿಧಿ. ಈ ಕಾರಣದಿಂದ ಅವರನ್ನು ಕೊಲ್ಲಬೇಕಾಗುತ್ತದೆ]  



[1] ಇದನ್ನು ಇಂದು ಸನತ್ಸುಜಾತೀಯ ಎಂದು ಕರೆಯುತ್ತೇವೆ. ಮಹಾಭಾರತದ ಸರ್ವೋತ್ಕೃಷ್ಟ ಭಾಗವಾಗಿರುವ ವಿದುರನೀತಿ ಮತ್ತು ಸನತ್ಸುಜಾತೀಯ ಉದ್ಯೋಗಪರ್ವದಲ್ಲೇ ಬರುತ್ತವೆ.

No comments:

Post a Comment