ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, January 11, 2023

Mahabharata Tatparya Nirnaya Kannada 24-50-61

 

ಇತ್ಯುಕ್ತೇ ವೈರಮಾತ್ಮೋತ್ಥಂ ಲೋಕಮದ್ಧ್ಯೇ ಪ್ರಹಾಪಯನ್ ।

ಲೋಕಸಙ್ಗ್ರಹಣಾರ್ತ್ಥಾಯ ಭೀಮಸೇನೋSಬ್ರವೀದ್ ವಚಃ ॥೨೪.೫೦॥

 

ಈರೀತಿಯಾಗಿ ಶ್ರೀಕೃಷ್ಣ ಹೇಳಲು, ಕೌರವಾದಿಗಳ ಮೇಲಿನ ತನ್ನ ಶತ್ರುತ್ವವನ್ನು ಜನರ ಮುಂದೆ ಬಿಟ್ಟಂತೆ ನಟಿಸುತ್ತಾ, ಮುಂದೆ ನಿರ್ಣಾಯಕವಾದ ಪ್ರಸಂಗದಲ್ಲಿ ಯಾವ ರೀತಿ ನಡೆಯಬೇಕು ಎನ್ನುವುದನ್ನು ತೋರಿಸಲು ಭೀಮಸೇನ ಮಾತನಾಡಿದ-

 

ನಾಸ್ಮನ್ನಿಮಿತ್ತನಾಶಃ ಸ್ಯಾತ್ ಕುಲಸ್ಯಾಪಿ  ವಯಂ ಕುಲಮ್ ।

ರಕ್ಷಿತುಂ ಧಾರ್ತ್ತರಾಷ್ಟ್ರಸ್ಯ  ಭವೇಮಾಧಶ್ಚರಾ ಇತಿ ॥೨೪.೫೧॥

 

‘ಇಡೀ ಕುರುಕುಲ ನಮ್ಮಿಂದ ನಾಶವಾಗದೇ ಇರಲಿ. ನಾವು ವಂಶವನ್ನು ರಕ್ಷಿಸಲು ದುರ್ಯೋಧನನ ದಾಸರಾಗುತ್ತೇವೆ’.

[ಮಹಾಭಾರತದ ಉದ್ಯೋಗಪರ್ವದಲ್ಲಿ (೭೩.೨೦) ಈ ಪ್ರಸಂಗದ ವಿವರಣೆ ಕಾಣಸಿಗುತ್ತದೆ  : ‘ಅಪಿ ದುರ್ಯೋಧನಂ ಕೃಷ್ಣ ಸರ್ವೇ ವಯಮಧಶ್ಚರಾಃ । ನೀಚೈರ್ಭೂತ್ವಾSನುಯಾಸ್ಯಾಮೋ ಮಾ ಸ್ಮ ನೋ ಭರತಾ ನಶನ್’ ]

 

[ಇಷ್ಟು ವರ್ಷಗಳ ಕಾಲ ದ್ವೇಷ ಸಾಧನೆ ಮಾಡಿಕೊಂಡು ಬಂದಿದ್ದ ಭೀಮ ಈಗ ಏಕೆ ಹೀಗೆ ಹೇಳಿದ ಎಂದರೆ, ಅದರ ಉದ್ದೇಶವನ್ನು ಹೇಳುತ್ತಾರೆ-]

 

ಇಚ್ಛತಾSಪ್ಯಖಿಲಾನ್ ಹನ್ತುಂ ಧಾರ್ತ್ತರಾಷ್ಟ್ರಾನ್ ದೃಢಾತ್ಮನಾ ।

ಭೀಮೇನೋಕ್ತೋ ವಾಸುದೇವೋ ಲೋಕಸಙ್ಗ್ರಹಣೇಚ್ಛಯಾ ॥೨೪.೫೨॥

 

ಎಲ್ಲಾ ದುರ್ಯೋಧನಾದಿಗಳನ್ನು ಕೊಲ್ಲಲು ಧೃಡವಾಗಿ ಬಯಸಿರುವ ಭೀಮಸೇನನು ಲೋಕದ ಹಿತದೃಷ್ಟಿಯಿಂದ ಮತ್ತು ಲೋಕಕ್ಕೆ ವಿಷಯವನ್ನು ತೋರಿಸಲೋಸುಗ (ಅವಿವೇಕದಿಂದಾಗಲೀ, ದುಡುಕಿನಿಂದಾಗಲೀ ಯುದ್ಧ ಮಾಡುತ್ತಿಲ್ಲ ಎಂದು ತೋರಿಸಲು) ಈ ಮಾತನ್ನು ಹೇಳಿದ.    

 

[ಭೀಮಸೇನ ದುರ್ಯೋಧನನ ದಾಸರಾಗುತ್ತೇವೆ ಎಂದು ಹೇಳಿದಾಕ್ಷಣ ಶ್ರೀಕೃಷ್ಣ ಆಕ್ಷೇಪ ಮಾಡಿದ. ಮಹಾಭಾರತದಲ್ಲಿ ಶ್ರೀಕೃಷ್ಣನ ಮಾತಿನ ವಿವರ ಕಾಣಸಿಗುತ್ತದೆ-: ‘ಇದಂ ಮೇ ಮಹದಾಶ್ಚರ್ಯಂ  ಪರ್ವತಸ್ಯೇವ ಸರ್ಪಣಮ್ ಯದೀದೃಷಂ ಪ್ರಭಾಷೇಥಾ ಭೀಮಸೇನಾಸಮಂ ವಚಃ । ಸ ದೃಷ್ಟ್ವಾ ಸ್ವಾನಿ ಕರ್ಮಣಿ ಕುಲೇ ಜನ್ಮ ಚ ಭಾರತ । ಉತ್ತಿಷ್ಠಸ್ವ ವಿಷಾದಂ ಮಾ ಕೃಥಾ ವೀರ ಸ್ಥಿರೋ ಭವ (೭೪.೨೧.೨) ‘ಪರ್ವತ ಜರಗಿದರೆ ಯಾವರೀತಿ ಅಚ್ಚರಿಯಾಗಬೇಕೋ ಆ ರೀತಿ ಅಚ್ಚರಿಯಾಗುತ್ತಿದೆ ನೀನು ಈ ರೀತಿ ಹೇಳುತ್ತಿರುವುದು.  ನಿನಗೆ ಯುಕ್ತವಲ್ಲದ ಮಾತನ್ನು ಆಡುತ್ತಿದ್ದೀಯ. ನೀನು ಖಿನ್ನತೆಗೊಳಗಾದಂತೆ ಕಾಣುತ್ತಿದ್ದೀಯ. ಎದ್ದು ನಿಲ್ಲು. ಹಿಂದಿನಂತೆಯೇ ಧೃಡನಾಗು’ -ಇದರ ತಾತ್ಪರ್ಯವನ್ನು ಆಚಾರ್ಯರು ಇಲ್ಲಿ ವಿವರಿಸಿರುವುದನ್ನು ಕಾಣಬಹುದು-]

 

ವಧಂ ತೇಷಾಂ ಧರ್ಮ್ಮಮೇವ ಲೋಕೇ ಜ್ಞಾಪಯಿತುಂ ಹರಿಃ ।

ಆಕ್ಷಿಪನ್ನಿವ ಭೀಮಂ ತಂ ಯುದ್ಧಾಯ ಪ್ರೇರಯದ್ ದೃಢಮ್ ॥೨೪.೫೩॥

 

ಶ್ರೀಕೃಷ್ಣಪರಮಾತ್ಮನು ದುರ್ಯೋಧನಾದಿಗಳ ಸಂಹಾರವನ್ನು ಧರ್ಮ ಎಂಬುದಾಗಿ ಜಗತ್ತಿನ ಜನರ ಎದುರಿನಲ್ಲಿ ನೆನಪಿಸಲು, ಭೀಮಸೇನನನ್ನು ಬಯ್ಯುತ್ತಿರುವನೋ ಎಂಬಂತೆ, ದೃಢವಾಗಿ  ಯುದ್ಧಕ್ಕಾಗಿಯೇ ಪ್ರಚೋದಿಸಿದನು.

 

 

ಅಭಿಪ್ರಾಯಂ ಕೇಶವಸ್ಯ ಜಾನನ್ ಭೀಮೋ ನಿಜಂ ಬಲಮ್ ।

ರಾಜ್ಞಾಂ ಮದ್ಧ್ಯೇSವದತ್ ತಚ್ಚ ಕೃಷ್ಣೋSಭ್ಯಧಿಕಮೇವ ಹಿ ॥೨೪.೫೪॥

 

ಭೀಮಸೇನನು ಶ್ರೀಕೃಷ್ಣ ಪರಮಾತ್ಮನ ಅಭಿಪ್ರಾಯವನ್ನು ತಿಳಿದೇ ರಾಜರ ಮಧ್ಯದಲ್ಲಿ ತನ್ನ ಬಲವನ್ನು ಹೇಳಿದ. ಆಗ  ಶ್ರೀಕೃಷ್ಣನು ‘ನಿನ್ನ ಬಲವು ಇದಕ್ಕಿಂತ ಹೆಚ್ಚಾಗಿದೆ ಆದರೆ ನೀನೇ ಕಡಿಮೆ ಹೇಳುತ್ತಿರುವೆ’ ಎಂದು ಹೇಳಿದ.

 

[ಈ ಕುರಿತಾದ ವಿವರವನ್ನು ನಾವು ಎರಡನೇ ಅಧ್ಯಾಯದಲ್ಲಿ(೨.೧೫೭) ನೋಡಿದ್ದೇವೆ. ಮಹಾಭಾರತದ ಉದ್ಯೋಗಪರ್ವದಲ್ಲಿ(೭೬.೩-೪; ೧೮ ) ಶ್ರೀಕೃಷ್ಣ ಭೀಮಸೇನನನ್ನು ಕುರಿತು ಈ ರೀತಿ ಹೇಳುತ್ತಾನೆ: ಓ  ಭೀಮಸೇನನೇ, ನಿನ್ನಲ್ಲಿ ಯಾವ ಮಂಗಳಕರವಾದ ಸಂಗತಿಯನ್ನು ನೀನು ಇದೇ ಎಂದು  ಹೇಳುತ್ತೀಯೋ, ಆ ಗುಣದ  ಸಾವಿರಪಟ್ಟು  ಮಿಗಿಲಾದದ್ದು ನಿನ್ನಲ್ಲಿದೆ ಎಂದು ನಾನು ತಿಳಿಯುತ್ತೇನೆ. ಯಾರ ಮಗನಾಗಿದ್ದೀಯ, ಯಾರ ಕುಲದಲ್ಲಿ ಹುಟ್ಟಿದ್ದೀಯ, ಈತನಕದ ನಿನ್ನ ಕೆಲಸಗಳು ಏನಿದೆ, ನೀನು ಎಂಥವನು ಎಂದು ನಿರ್ಣಯಮಾಡಲು ಇಷ್ಟು ಸಾಕು’ ಎಂದು.

ಇಲ್ಲಿ ಭೀಮಸೇನ ತನ್ನ ಬಲದ ಕುರಿತು ಜಗತ್ತಿನ ಮುಂದೆ ಹೇಳಲೀ ಎನ್ನುವ ಅಭಿಪ್ರಾಯ ಕೃಷ್ಣನದಾಗಿತ್ತು.  ಕೃಷ್ಣನ ಸಂಕಲ್ಪವನ್ನು ತಿಳಿದ ಭೀಮಸೇನ ತನ್ನ ಬಲವನ್ನು ಹೇಳಿಕೊಂಡ]

 

ಶಶಂಸ ಸತ್ಯೈಃ  ಸದ್ವಾಕ್ಯೈ ರಾಜ್ಞಾಂ ಮದ್ಧ್ಯೇ ಪ್ರಕಾಶಯನ್ ।

ವಧಂ ಕುರೂಣಾಂ ಸದ್ಧರ್ಮ್ಮಂ ಗುಣಾನ್ ಭೀಮಸ್ಯ ಚಾಮಿತಾನ್ ॥೨೪.೫೫॥

 

ತದನಂತರ ರಾಜರ ಮಧ್ಯದಲ್ಲಿ ಸತ್ಯವಾಗಿರುವ ಮಾತುಗಳಿಂದ ಭೀಮನು  ‘ಕುರುಗಳ ವಧೆಯು ಧರ್ಮವೇ’ ಎಂದು ಹೇಳಿದ. ಭೀಮನ ಅಮಿತವಾಗಿರುವ ಗುಣಗಳನ್ನೂ ಶ್ರೀಕೃಷ್ಣ ಹೇಳಿದ.

[ಇಲ್ಲಿ ಶ್ರೀಕೃಷ್ಣನ ಉದ್ದೇಶ - ಪಾಂಡವರು ಯುದ್ಧವನ್ನು ಬಯಸುವುದು ಧರ್ಮಪೂರ್ವಕವಾಗಿದೆ, ಇದೊಂದು ಧರ್ಮಯುದ್ಧ ಎನ್ನುವುದನ್ನು ಜಗತ್ತಿಗೆ ತೋರಿಸುವುದು ಹಾಗೂ  ಭೀಮಸೇನ ಒಂದು ಸೌಜನ್ಯದಿಂದ ಮಾತನಾಡಿದನೇ ಹೊರತು, ವಸ್ತುತಃ ಭೀಮನಿಗೆ ಭಯ ಮೊದಲಾದವುಗಳಿಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸುವುದಾಗಿತ್ತು.]

 

ನಿತ್ಯಮೇಕಮನಸ್ಕೌ ತಾವಪಿ ಕೇಶವಮಾರುತೀ ।

ಏವಂ ಲೋಕಸ್ಯ ಸಂವಾದಹೇತೋಃ ಸಂವಾದಮಕ್ರತಾಮ್ ॥೨೪.೫೬॥

 

ಕೃಷ್ಣ ಭೀಮಸೇನರು ಯಾವಾಗಲೂ ಒಂದೇ ಅಭಿಪ್ರಾಯವುಳ್ಳವರಾಗಿದ್ದರೂ ಕೂಡಾ, ಲೋಕದ ಮುಂದೆ ನಾವಿಬ್ಬರೂ ಒಂದೇ ಅಭಿಪ್ರಾಯವನ್ನು ಹೊಂದಿದ್ದೇವೆ ಎಂದು ತಿಳಿಸಲು ಇಲ್ಲಿ ಹೀಗೆ ಮಾತನಾಡಿದರು.

[ಒಂದು ವೇಳೆ ಭೀಮಸೇನ ರಾಜರ ಮಧ್ಯೆ ಈಗ ಮಾತನಾಡಿಲ್ಲ ಎಂದಾಗಿದ್ದರೆ, ಭೀಮ ಹಾಗೂ ಕೃಷ್ಣ ಇಬ್ಬರಿಗೂ ಒಂದೇ ಅಭಿಪ್ರಾಯವಿದೆ ಎನ್ನುವುದು ಜಗತ್ತಿಗೇ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ದೇವರ ಸಂಕಲ್ಪದಂತೆ ಭೀಮಸೇನ ಮಾತನಾಡಿದ]

 

ತತಃ ಕೃಷ್ಣೋSರ್ಜ್ಜುನಂ ಚೈವ ಕೃಪಾಲುಂ ಸನ್ಧಿಕಾಮುಕಮ್ ।

ಹೇತುಮದ್ಭಿಃ ಶುಭೈರ್ವಾಕ್ಯೈರನುನೀಯ ಜಗತ್ಪತಿಃ ॥೨೪.೫೭॥

 

ಧರ್ಮರಾಜ ಹಾಗೂ ಭೀಮಸೇನ ಮಾತನಾಡಿದ ನಂತರ ಕೌರವರ ಮೇಲೆ ಕೃಪೆ ಇಟ್ಟಿರುವ, ಸಂಧಾನವನ್ನು ಬಯಸುತ್ತಿರುವ ಅರ್ಜುನನನ್ನು ಕುರಿತು ಯುಕ್ತಿಯುಕ್ತವಾಗಿರುವ ಶಾಸ್ತ್ರಪ್ರಣೀತವಾಗಿರುವ ವಾಕ್ಯಗಳಿಂದ ಶ್ರೀಕೃಷ್ಣ ಸಮಾಧಾನಗೊಳಿಸಿದ. (ಯುದ್ಧಭೂಮಿಗೆ ತೆರಳುವ ಮೊದಲೇ ಅರ್ಜುನನ ಮನಸ್ಸಿನಲ್ಲಾಗಿರುವ ಬದಲಾವಣೆಯನ್ನು ನಾವಿಲ್ಲಿ ಗಮನಿಸಬೇಕು)

 

ಉಕ್ತೋ ಮಾನುಷಯಾ ಬುದ್ಧ್ಯಾ ನಕುಲೇನ ಸುನೀತಿವತ್ ।

ಶೌರ್ಯ್ಯಪ್ರಕಾಶನಾಯೈವ ಯುದ್ಧಂ ಯೋಜಯತಾಂ ಭವಾನ್  ॥೨೪.೫೮॥

 

ಇತ್ಯುಕ್ತ ಸಹದೇವೇನ ಯುಯುಧಾನೇನ ಚಾಚ್ಯುತಃ ।

ದಸ್ಯೂನಾಂ ನಿಗ್ರಹೋ ಧರ್ಮ್ಮಃ ಕ್ಷತ್ರಿಯಾಣಾಂ ಯತಃ ಪರಃ ॥೨೪.೫೯॥

 

ಅತೋ ನ ಧಾರ್ತರಾಷ್ಟ್ರೈರ್ನ್ನಃ ಸನ್ಧಿಃ ಸ್ಯಾದಿತಿ ಪಾರ್ಷತೀ ।

ಜಗಾದ ಕೃಷ್ಣಂ ಸೋSಪ್ಯೇನಾಮೋಮಿತ್ಯುಕ್ತ್ವಾ ವಿನಿರ್ಯ್ಯಯೌ ॥೨೪.೬೦॥

 

ನಂತರ ನಕುಲ, ಶ್ರೀಕೃಷ್ಣ ಒಬ್ಬ ಮನುಷ್ಯ ಎನ್ನುವ ಬುದ್ಧಿಯಿಂದ ಅವನಿಗೆ ನೀತಿಯನ್ನು ಉಪದೇಶ ಮಾಡಿದ. ಸಾತ್ಯಕಿ ಮತ್ತು ಸಹದೇವ ‘ಶೌರ್ಯಪ್ರಕಾಶನಕ್ಕಾಗಿ ಯುದ್ಧವನ್ನು ಆಯೋಜಿಸಬೇಕು’ ಎಂದು ಹೇಳಿದರು. ಇನ್ನು ದ್ರೌಪದಿ- ‘ಕಳ್ಳರನ್ನು ನಿಗ್ರಹಿಸುವುದು ಧರ್ಮ. ಇದು  ಕ್ಷತ್ರಿಯರಿಗಂತೂ ಇನ್ನೂ ವಿಶೇಷವಾದ ಧರ್ಮ. ಆ ಕಾರಣದಿಂದ ದುರ್ಯೋಧನಾದಿಗಳೊಂದಿಗೆ ನಮಗೆ ಸಂಧಾನವಾಗಬಾರದು’ ಎಂದಳು. ಕೃಷ್ಣ  ‘ಆಯಿತು ಎಂದು ಹೇಳಿ ಹೊರಟ.

 

ಸಸಾತ್ಯಕಿಃ ಸ್ಯನ್ದನವರ್ಯ್ಯಸಂಸ್ಥಿತಃ  ಪೃಥಾತನೂಜೈರಖಿಲೈಃ ಸ ಭೂಮಿಪೈಃ ।

ಅನ್ವಾಗತೋ ದೂರತರಂ ಗಿರಾ ತಾನ್ ಸಂಸ್ಥಾಪ್ಯ ವಿಪ್ರಪ್ರವರೈಃ ಕುರೂನ್ ಯಯೌ ॥೨೪.೬೧॥

 

ಸಾತ್ಯಕಿಯಿಂದ ಕೂಡಿಕೊಂಡು, ತನ್ನ ಉತ್ಕೃಷ್ಟವಾದ ರಥದಲ್ಲಿ ಕುಳಿತು, ಎಲ್ಲಾ ಪಾಂಡವರಿಂದಲೂ, ವಿರಾಟ, ದ್ರುಪದ, ಮೊದಲಾದ ರಾಜರಿಂದಲೂ ಬಹಳ ದೂರದ ತನಕ ಹಿಂಬಾಲಿಸಲ್ಪಟ್ಟವನಾಗಿ, ತದನಂತರ ಮಾತಿನಿಂದ ಎಲ್ಲರನ್ನೂ ನಿಲ್ಲಿಸಿ(ಎಲ್ಲರಿಗೂ ‘ನೀವು ಇಲ್ಲೇ ಇರಿ- ನಾನು ಹೋಗಿ ಬರುತ್ತೇನೆ ಎಂದು ಹೇಳಿ), ಶ್ರೇಷ್ಠ ಬ್ರಾಹ್ಮಣರೊಂದಿಗೆ ಕೌರವರ ಬಳಿಗೆ ಶ್ರೀಕೃಷ್ಣ ತೆರಳಿದ.

No comments:

Post a Comment