ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 21, 2023

Mahabharata Tatparya Nirnaya Kannada 25-01-17

 

೨೫. ಭೀಷ್ಮಪಾತಃ

 

̐

ತೇ ಸೇನೇ ಸಮರಾರಮ್ಭೇ ಸಮೇತೇ ಸಾಗರೋಪಮೇ 

ಭೀಮಭೀಷ್ಮಮುಖೇ ವೀಕ್ಷ್ಯ ಪ್ರಾಹ ವಾಸವಿರಚ್ಯುತಮ್ ॥೨೫.೦೧ ॥

 

ಸಮರದ ತೊಡುಗುವಿಕೆಯಲ್ಲಿ ಇರುವ, ಭೀಮ-ಭೀಷ್ಮಾಚಾರ್ಯರೇ ಅಗ್ರೇಸರರಾಗಿರುವ, ಕಡಲಿಗೆ ಸದೃಶರಾಗಿರುವ ಆ ಎರಡು ಸೇನೆಗಳನ್ನು ಕಂಡ ಆರ್ಜುನನು ಕೃಷ್ಣನನ್ನು ಕುರಿತು ಮಾತನಾಡಿದ-

 

‘ಸೇನಯೋರುಭಯೋರ್ಮ್ಮದ್ಧ್ಯೇ ರಥಂ ಸ್ಥಾಪಯ ಮೇSಚ್ಯುತ’ ।

ಇತ್ಯುಕ್ತಃ ಸ ತಥಾ ಚಕ್ರೇ ಪಾರ್ತ್ಥಃ ಪಶ್ಯಂಶ್ಚ ಬಾನ್ಧವಾನ್ ॥೨೫.೦೨॥

 

ವಿಸಸರ್ಜ್ಜ ಧನುಃ ಪಾಪಾಶಙ್ಕೀ ತತ್ರಾSಹ ಮಾಧವಃ ।

ಸ್ವಧರ್ಮ್ಮೋ ದುಷ್ಟದಮನಂ ಧರ್ಮ್ಮಜ್ಞಾನಾನುಪಾಲನಮ್ ॥೨೫.೦೩ ॥

 

ಕ್ಷತ್ರಿಯಸ್ಯ ತಮುತ್ಸೃಜ್ಯ ನಿನ್ದಿತೋ ಯಾತ್ಯಧೋ ದ್ಧ್ರುವಮ್ ।

‘ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ॥೨೫.೦೪ ॥

 

‘ಸ್ವಕರ್ಮ್ಮಣಾ ತಮಭ್ಯರ್ಚ್ಚ್ಯ ಸಿದ್ಧಿಂ ವಿನ್ದತಿ ಮಾನವಃ’ ।

ನಚ ಶೋಕಸ್ತ್ವಯಾ ಕಾರ್ಯ್ಯೋ ಬನ್ಧೂನಾಂ ನಿಧನೇಕ್ಷಯಾ ॥೨೫.೦೫ ॥

 

ದೇಹಸ್ಯ ಸರ್ವಥಾ ನಾಶಾದನಾಶಾಚ್ಚೇತನಸ್ಯ ಚ ।

ಸೃಷ್ಟಿಸ್ಥಿತ್ಯಪ್ಯಯಾಜ್ಞಾನಬನ್ಧಮೋಕ್ಷಪ್ರವೃತ್ತಯಃ ॥೨೫.೦೬ ॥

 

ಪ್ರಕಾಶನಿಯಮೌ ಚೈವ ಬ್ರಹ್ಮೇಶಾದಿಕ್ಷರಸ್ಯ ಚ ।

ಅಕ್ಷರಪ್ರಕೃತೇಃ ಸನ್ತೋ ಮತ್ತ ಏವ ನಚಾನ್ಯತಃ ॥೨೫.೦೭ ॥

 

ಕೃಷ್ಣನೇ, ಈ ಎರಡು ಸೇನೆಗಳ ಮಧ್ಯದಲ್ಲಿ  ನನ್ನ ರಥವನ್ನು ನಿಲ್ಲಿಸು ಎಂದು ಅರ್ಜುನನಿಂದ ಹೇಳಲ್ಪಟ್ಟ ಶ್ರೀಕೃಷ್ಣನು ಹಾಗೆಯೇ ಮಾಡಿದನು. ಬಂಧುಗಳನ್ನು ನೋಡಿ ಅರ್ಜುನನು ‘ಇದು ಪಾಪದ ಕೆಲಸವೋ ಏನೋ’ ಎಂದು ಮನಸ್ಸಿನಲ್ಲಿ ತಳಮಳ ಹೊಂದಿ  ಬಿಲ್ಲನ್ನು ಕೈಬಿಟ್ಟಾಗ, ಶ್ರೀಕೃಷ್ಣ ಹೇಳುತ್ತಾನೆ: ‘ಕ್ಷತ್ರಿಯರಿಗೆ ಸ್ವಧರ್ಮ ಎಂದರೆ ಧರ್ಮದ ಹಾಗೂ ಜ್ಞಾನದ ಪಾಲನೆ. ಹಾಗಾಗಿ ಅವರು ಸ್ವಧರ್ಮವನ್ನು ಬಿಟ್ಟರೆ ಲೋಕದ ನಿಂದೆಗೆ ಒಳಗಾಗಿ ಅಧೋಗತಿಯನ್ನು ಹೊಂದುತ್ತಾರೆ. ಯಾವ ಪರಮಾತ್ಮನಿಂದ ಎಲ್ಲಾ ಪ್ರಾಣಿಗಳ ತೊಡಗುವಿಕೆಯೋ, ಯಾರಿಂದ ಇವೆಲ್ಲವೂ ವ್ಯಾಪಿಸಲ್ಪಟ್ಟಿದೆಯೋ, ಯಾರು ಇದೆಲ್ಲವನ್ನೂ ಕೂಡಾ ಹಬ್ಬಿ ನಿಂತಿದ್ದಾನೋ, ಅವನನ್ನು ತನಗೆ ಯೋಗ್ಯವಾಗಿರುವ ಕರ್ಮದಿಂದ(ಸ್ವಕರ್ಮದಿಂದ) ಪೂಜಿಸಿ ಪ್ರಜ್ಞಾವಂತನು ಸಿದ್ಧಿಯನ್ನು ಹೊಂದುತ್ತಾನೆ.

ನೀನು ಬಂಧುಗಳು ಸಾಯುತ್ತಾರೆ ಎಂದು ಶೋಕಪಡಬೇಡ. ದೇಹ ಹೇಗೂ ನಾಶವಾಗುತ್ತದೆ, ಆದರೆ ಚೇತನ(ಜೀವ) ಎಂದೂ ನಾಶವಾಗುವುದಿಲ್ಲ.  ಸೃಷ್ಟಿ, ಸ್ಥಿತಿ, ಪ್ರಳಯ, ಅಜ್ಞಾನ, ಬಂಧ, ಮೋಕ್ಷ, ಪ್ರವೃತ್ತಿ, ಪ್ರಕಾಶ, ನಿಯಮ, ಮೊದಲಾದವುಗಳು ಲಕ್ಷ್ಮೀದೇವಿಗೂ, ಬ್ರಹ್ಮ ಮೊದಲಾದ ಕ್ಷರ-ಪುರುಷರಿಗೂ ನನ್ನಿಂದಲೇ ಆಗುತ್ತವೆ.

 

ನ ಮೇ ಕುತಶ್ಚಿತ್ ಸರ್ಗ್ಗಾದ್ಯಾಃ ಸ್ವಾತನ್ತ್ರ್ಯಾದ್ ಗುಣಪೂರ್ತ್ತಿತಃ ।

ಅತಃ ಸಮಾಧಿಕಾಭಾವಾನ್ಮಮ ಮದ್ವಶಮೇವ ಚ ॥೨೫.೦೮ ॥

 

ನಾನು ಬೇರೊಬ್ಬರ ವಶನಲ್ಲದಿರುವುದರಿಂದ(ಸರ್ವಸ್ವತಂತ್ರನಾಗಿರುವುದರಿಂದ), ಗುಣಗಳಿಂದ ತುಂಬಿರುವುದರಿಂದ, ನನಗೆ ಸಮನಾಗಲೀ ಮಿಗಿಲಾಗಲೀ ಇಲ್ಲದಿರುವುದರಿಂದ,  ಈ ಪ್ರಪಂಚ ನನ್ನ ವಶದಲ್ಲಿ ಇರುವುದರಿಂದಾಗಿ, ಯಾರಿಂದಲೂ ನನಗೆ ಸೃಷ್ಟಿ ಮೊದಲಾದವುಗಳು ಇಲ್ಲ.  

 

ಜ್ಞಾತ್ವೈಷಾಂ ನಿಧನಾದ್ಯಂ ಚ ಜೀವಾದೇರಸ್ವತನ್ತ್ರತಾಮ್ ।

ಅಸ್ವಾತನ್ತ್ರ್ಯನ್ನಿವೃತ್ತೌ ಚ ‘ಮಾಮನುಸ್ಮರ ಯುದ್ಧ್ಯ ಚ’ ॥೨೫. ೦೯ ॥

 

ಇವರೆಲ್ಲರ ಹುಟ್ಟು-ಸಾವು ಮೊದಲಾದವುಗಳು ನನ್ನ ಅಧೀನವಾಗಿದೆ ಎನ್ನುವುದನ್ನು ತಿಳಿದು, ಜೀವಾದಿಗಳಿಗೆ ಅಸ್ವಾತಂತ್ರ್ಯವನ್ನು ತಿಳಿದು, ಯುದ್ಧಮಾಡದೇ ಹಿಂತಿರುಗಲೂ ನಿನಗೆ ಸ್ವಾತಂತ್ರ್ಯ ಇಲ್ಲದಿರುವುದರಿಂದ  ನನ್ನನ್ನು ಸ್ಮರಣೆ ಮಾಡು, ಯುದ್ಧಮಾಡು ಕೂಡಾ.

 

ಯೇ ತು ಸರ್ಮಾಣಿ ಕರ್ಮ್ಮಾಣಿ ಮಯಿ ಸನ್ನ್ಯಸ್ಯ ಮತ್ಪರಾಃ ।

‘ಅನನ್ಯೇನೈವ ಯೋಗೇನ ಮಾಂ ದ್ಧ್ಯಾಯನ್ತ ಉಪಾಸತೇ ॥ ೨೫.೧೦ ॥

 

‘ತೇಷಾಮಹಂ ಸಮುದ್ಧರ್ತ್ತಾ ಮೃತ್ಯುಸಂಸಾರಸಾಗರಾತ್ ।

‘ಭವಾಮಿ ನಚಿರಾತ್ ಪಾರ್ತ್ಥ ಮಯ್ಯಾವೇಶಿತಚೇತಸಾಮ್ ॥೨೫.೧೧ ॥

 

ಯಾರು ತಮ್ಮೆಲ್ಲಾ ಕರ್ಮಗಳನ್ನು ನನ್ನಲ್ಲಿ ಸಮರ್ಪಿಸಿ, ಅನನ್ಯ ಭಕ್ತಿಯಿಂದ ನನ್ನನ್ನು ಧ್ಯಾನಿಸುತ್ತಾ ಉಪಾಸನೆ ಮಾಡುತ್ತಾರೋ, ಅವರನ್ನು ನಾನು ಮೃತ್ಯು-ಸಂಸಾರ ಎಂಬ ಸಾಗರದಿಂದ ಮೇಲೆತ್ತುತ್ತೇನೆ.  

 

‘ಮಯಾ ತತಮಿದಂ ಸರ್ವಂ ಜಗದವ್ಯಕ್ತ ಮೂರ್ತ್ತಿನಾ ।

‘ಮತ್ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ’ ॥ ೧೨ ॥

 

ಅವ್ಯಕ್ತಮೂರ್ತಿಯಾದ ನನ್ನಿಂದ ಇಡೀ ಪ್ರಪಂಚವು ವ್ಯಾಪಿಸಲ್ಪಟ್ಟಿದೆ. ಎಲ್ಲರೂ ಕೂಡಾ ನನ್ನನ್ನು ಆಶ್ರಯಿಸಿಕೊಂಡಿದ್ದಾರೆ. ಆದರೆ  ನಾನು ಅವರಲ್ಲಿ ಆಶ್ರಿತನಾಗಿಲ್ಲ.

 

ಸುಪೂರ್ಣ್ಣಸತ್ಸರ್ವಗುಣದೇಹೋsಹಂ ಸರ್ವದಾ ಪ್ರಭುಃ ।

ಅಸ್ಪೃಷ್ಟಾಖಿಲದೋಷೈಕನಿತ್ಯಸತ್ತನುರವ್ಯಯಃ ॥ ೨೫.೧೩ ॥

 

ನಾನು ಸರ್ವಕಾಲದಲ್ಲಿಯೂ ಪರಿಪೂರ್ಣವಾದ, ನಿರ್ದುಷ್ಟವಾದ, ಎಲ್ಲಾ ರೀತಿಯ ಗುಣವೇ ಮೈವೆತ್ತು ಬಂದವನು. ಯಾವಾಗಲೂ ನಾನು ಸರ್ವಸ್ವತಂತ್ರ.  ನನ್ನಲ್ಲಿ ಯಾವುದೇ ದೋಷಗಳಿಲ್ಲ. ನಿತ್ಯವಾದ, ಶೋಭಾನವಾದ, ನಾಶವಿಲ್ಲದ ಸ್ವರೂಪವುಳ್ಳವನು ನಾನು’.

 

ಇತ್ಯುಕ್ತೋ ವಾಸವಿಃ ಪ್ರಾಹ ವ್ಯಾಪ್ತಂ ತೇ ದರ್ಶಯೇಶ ಮೇ ।

ಅಥ ದಿವ್ಯದೃಶಂ ತಸ್ಯ ದತ್ವಾ ವ್ಯಾಪ್ತಂ ನಿಜಂ ವಪುಃ  ॥ ೨೫.೧೪ ॥

 

ಈರೀತಿಯಾಗಿ ಹೇಳಲ್ಪಟ್ಟ ಅರ್ಜುನನು – ‘ಓ ಒಡೆಯನೇ, ನಿನ್ನ ಎಲ್ಲೆಡೆ ಹರಡಿದ ರೂಪವನ್ನು ನನಗೆ ತೋರಿಸು’ ಎಂದು ಕೃಷ್ಣನನ್ನು ಬೇಡಿದನು. ಆಗ ಶ್ರೀಕೃಷ್ಣನು ಅರ್ಜುನನಿಗೆ ದೇವರನ್ನು ಕಾಣಬಲ್ಲ  ಅಲೌಕಿಕವಾದ ಕಣ್ಣನ್ನು ಕೊಟ್ಟು, ಎಲ್ಲೆಡೆ ಹರಡಿದ ತನ್ನ ರೂಪವನ್ನು ತೋರಿದನು.

 

ದೇಶತಃ ಕಾಲತಶ್ಚೈವ ಪೂರ್ಣ್ಣಂ ಸರ್ವಗುಣೈಃ ಸದಾ ।

ದರ್ಶಯಾಮಾಸ ಭಗವಾನ್ ಯಾವತ್ಯರ್ಜ್ಜುನಯೋಗ್ಯತಾ ॥ ೨೫.೧೫ ॥

 

ಸರ್ವತ್ರವ್ಯಾಪ್ತವಾಗಿರುವ, ಎಲ್ಲಾ ಕಾಲದಲ್ಲೂ ಇರುವ, ಸರ್ವಗುಣಪೂರ್ಣವಾಗಿರುವ ತನ್ನ ವಿಶ್ವರೂಪವನ್ನು, ಅರ್ಜುನನಯೋಗ್ಯತೆಯ ಮಟ್ಟಕ್ಕೆ ಅನುಗುಣವಾಗಿ ಶ್ರೀಕೃಷ್ಣ ತೋರಿದ.

 

ತತ್ಪ್ರಾರ್ತ್ಥಿತಃ ಪುನಃ ಕೃಷ್ಣಸ್ತದ್ ರೂಪಂ ಲೋಕಮಾನತಃ ।

ಪೂರ್ವವದ್ ದರ್ಶಯಾಮಾಸ ಪುನಶ್ಚೈನಮಶಿಕ್ಷಯತ್ ॥ ೨೫.೧೬ ॥

 

ಪುನಃ ಅರ್ಜುನನಿಂದ ಬೇಡಲ್ಪಟ್ಟವನಾದ ಶ್ರೀಕೃಷ್ಣನು  (‘ನನ್ನಿಂದ ನಿನ್ನ ಈ ವಿಶ್ವರೂಪವನ್ನು ನೋಡಲಾಗುತ್ತಿಲ್ಲ, ದಯವಿಟ್ಟು ಆಚ್ಛಾದನೆ ಮಾಡಿ ಮೊದಲಿನಂತೆ ಕಾಣಿಸು’ ಎಂದು ಅರ್ಜುನನಿಂದ ಪ್ರಾರ್ಥಿಸಲ್ಪಟ್ಟ ಶ್ರೀಕೃಷ್ಣನು) ಹಿಂದಿನಂತೆಯೇ, ಆಕಾಲದ ರೂಪದಂತೆ ತೋರಿದ ಮತ್ತು ಅರ್ಜುನನಿಗೆ  ಅನೇಕ ಸಂಗತಿಗಳನ್ನು ಉಪದೇಶಿಸಿದ.   

 

ಜ್ಞಾನಜ್ಞೇಯಪ್ರಕೃತ್ಯಾದಿ ಜ್ಞಾಪಯನ್ ಪುರುಷೋತ್ತಮಃ ।

ತೇನಾನುಶಿಷ್ಟಃ ಪಾರ್ತ್ಥಸ್ತು ಸಶರಂ ಧನುರಾದದೇ ॥ ೨೫.೧೭ ॥

 

ಜ್ಞಾನವೆಂದರೇನು, ತಿಳಿಯಲೇ ಬೇಕಾದ ಸಂಗತಿ ಯಾವುದು, ಈ ಪ್ರಕೃತಿ ನಮ್ಮನ್ನು ಯಾವ ರೀತಿ ವ್ಯಾಪಿಸಿದೆ ಮತ್ತು ಅದನ್ನು ಮೀರುವ ಬಗೆ ಹೇಗೆ, ಇತ್ಯಾದಿಯಾದ ಅರ್ಜುನನಿಗೆ ಹಿಂದೆ ತಿಳಿದಿರುವುದನ್ನೇ ನೆನಪಿಸುತ್ತಾ, ಶ್ರೀಕೃಷ್ಣ ಶಿಕ್ಷಣವನ್ನು ಕೊಟ್ಟ. ಶ್ರೀಕೃಷ್ಣನಿಂದ ಶಿಕ್ಷಿಸಲ್ಪಟ್ಟ ಅರ್ಜುನನು ಬಿಲ್ಲು ಬಾಣಗಳನ್ನು ಹಿಡಿದು ಯುದ್ಧಕ್ಕೆ ಸನ್ನದ್ಧನಾದ.

Monday, January 16, 2023

Mahabharata Tatparya Nirnaya Kannada 24-83-88

 

ಅನನ್ತಶಕ್ತಿಃ ಪುರುಷೋತ್ತಮೋSಸೌ ಶಕ್ತೋSಪಿ ದುರ್ಯ್ಯೋಧನಚಿತ್ತನಿಗ್ರಹೇ ।

ನೈವ ವ್ಯಧಾದೇನಮಥೋಕ್ತಕಾರಿಣಂ ನಿಪಾತಯನ್ನನ್ಧತಮಸ್ಯನನ್ತಃ  ॥೨೪.೮೩॥

 

ಪರಮಾತ್ಮನು ಅನಂತವಾದ ಶಕ್ತಿಯುಳ್ಳವನಾದರೂ, ಎಲ್ಲರಿಗಿಂತಲೂ ಉತ್ತಮನಾದರೂ, ದುರ್ಯೋಧನನ ಮನಸ್ಸಿನ ನಿಯಂತ್ರಣದಲ್ಲಿ ಶಕ್ತನಾದರೂ, ದುಷ್ಟರನ್ನು ಅನ್ಧಂತಮಸ್ಸಿನಲ್ಲಿ ಬೀಳಿಸುವುದಕ್ಕಾಗಿ ದುರ್ಯೋಧನ ತನ್ನ ಮಾತನ್ನು ಕೇಳುವಂತೆ ಮಾಡಲಿಲ್ಲ.

[ಸ್ವತಂತ್ರನಾದ ಭಗವಂತ  ಸೃಷ್ಟಿ ಎನ್ನುವ ತೋಟ ನಿರ್ಮಿಸಿ ಅಲ್ಲಿ ಒಬ್ಬ ತೋಟಗಾರನಂತೆ ಜೀವ ಎನ್ನುವ ಬೀಜವನ್ನು  ಬಿತ್ತಿ ಬೆಳೆಸುತ್ತಾನೆ. ಅದರಿಂದ ನಮ್ಮ ದೇಹ ಎನ್ನುವ ಮರ ಬೆಳೆಯುತ್ತದೆ ಮತ್ತು ಅದರಿಂದ ಕಹಿಯಾದ, ಹುಳಿಯಾದ  ಅಥವಾ ಸಿಹಿಯಾದ ಹಣ್ಣು ಜೀವಸ್ವಭಾವದಂತೆ ಅಭಿವ್ಯಕ್ತವಾಗುತ್ತದೆ. ಆದ್ದರಿಂದ ಕೆಟ್ಟಕೆಲಸ ಅಥವಾ ಒಳ್ಳೆಯಕೆಲಸ ಎನ್ನುವುದು ನಮ್ಮ ಸ್ವಭಾವವನ್ನವಲಂಬಿಸಿದೆಯೇ  ಹೊರತು ಭಗವಂತನನ್ನಲ್ಲ. ತೋಟಗಾರ ಎಂದೂ ಮೆಣಸಿನ ಗಿಡಕ್ಕೆ ಖಾರವಾದ ನೀರನ್ನು ಹರಿಸುವುದಿಲ್ಲ. ಎಲ್ಲಾ ಗಿಡದಂತೆ ಆ ಗಿಡವನ್ನೂ ಪೋಷಿಸಿ ಬೆಳೆಸುತ್ತಾನೆ. ಆದರೆ ಅದು ಖಾರವಾದ ಹಣ್ಣನ್ನು ತನ್ನ ಸ್ವಭಾವದಂತೆ ಕೊಡುತ್ತದೆ. ಆಸುರೀ ಸ್ವಭಾವ ಎನ್ನುವುದು ಮೂಲತಃ ಜೀವಸ್ವಭಾವ. ಹೇಗೆ ಹಾಗಲಕಾಯಿ ಕಹಿಯೋ ಹಾಗೇ ಈ ಆಸುರೀ ಜನರ ಜೀವಸ್ವಭಾವ ತಾಮಸ. ಅದನ್ನು ಭಗವಂತ ಬದಲಿಸುವುದಿಲ್ಲ. ಬದಲಿಗೆ ಆ ಜೀವದ ಸ್ವಭಾವಕ್ಕನುಗುಣವಾಗಿ ಜೀವದ ಗತಿ ನಿರ್ಮಾಣವಾಗುತ್ತದೆ. ಭಗವಂತನನ್ನು ದ್ವೇಷಿಸುವ, ಮನುಕುಲವನ್ನು ದ್ವೇಷಿಸುವ, ಪ್ರಪಂಚವನ್ನೇ ದ್ವೇಷಿಸುವ ಈ ಕ್ರೂರಿಗಳನ್ನು ಭಗವಂತ ನಿರಂತರ ಸಂಸಾರ ಸಾಗರದಲ್ಲಿ ಹಾಕುತ್ತಾನೆ ಅಥವಾ ಅವರು ಅನ್ಧಂತಮಸ್ಸನ್ನು ಹೊಂದುವಂತೆ ಮಾಡುತ್ತಾನೆ. ಅದರಿಂದಾಗಿ ಶ್ರೀಕೃಷ್ಣ ದುರ್ಯೋಧನನ ಮನಸ್ಸನ್ನು ನಿಗ್ರಹಿಸಲಿಲ್ಲ. ಆದರೆ ಇದರರ್ಥ  ದುರ್ಯೋಧನನ ಮನಸ್ಸನ್ನು ಬದಲಿಸದ ಶ್ರೀಕೃಷ್ಣ ಅಶಕ್ತನೆಂದಲ್ಲ. ಶಕ್ತನಾದರೂ ಕೂಡಾ  ಸ್ವಭಾವ ಆವಿಷ್ಕರಣೆಗಾಗಿ ಜೀವ ಸ್ವಭಾವವನ್ನು ಭಗವಂತ ಬದಲಿಸುವುದಿಲ್ಲ ಅಷ್ಟೇ]

 

ಪುನಶ್ಚ ಕುನ್ತೀಗೃಹಮೇತ್ಯ ಕೃಷ್ಣಸ್ತಯೋದ್ಯೋಗಂ ಧರ್ಮ್ಮಸುತಸ್ಯ ಶಿಷ್ಟಮ್ ।

ಶ್ರುತ್ವಾ ಯಯೌ ಸೂರ್ಯ್ಯಜಮಾತ್ಮಯಾನೇ ನಿಧಾಯ ತಸ್ಯಾವದದಾತ್ಮಜನ್ಮ ॥೨೪.೮೪॥

 

ಆಯಾಹಿ ಪಾಣ್ಡೂನಿತಿ ತದ್ವಚಃ ಸ ನೈವಾಕರೋನ್ಮಾನಿತೋ ಧಾರ್ತ್ತರಾಷ್ಟ್ರೈಃ ।

ಸಂಸ್ಥಾಪ್ಯ ತಂ ಭಗವಾನ್ ದ್ರೌಣಯೇ ಚ ರಹೋSವದನ್ಮಿತ್ರಭಾವಂ ಪೃಥಾಜೈಃ ॥೨೪.೮೫॥

 

ಮತ್ತೆ ಕುಂತಿಯ ಮನೆಗೆ ತೆರಳಿದ ಶ್ರೀಕೃಷ್ಣನು ಅವಳಿಂದ ಧರ್ಮರಾಜನು ಮಾಡಬೇಕಾದ ಕರ್ತವ್ಯವನ್ನು ಕೇಳಿ,  ಆಮೇಲೆ ಕರ್ಣನ ಬಳಿ ತೆರಳಿ, ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಊರ ಹೊರಗೆ ಕರೆದುಕೊಂಡು ಹೋಗಿ, ಅವನಿಗೆ ಅವನ ಹುಟ್ಟು ಹೇಗಾಯ್ತು(ನೀನು ಕುಂತಿಯ ಮಗ) ಎನ್ನುವುದನ್ನು ಹೇಳಿದ.

‘ಪಾಂಡವರ ಬಳಿಗೆ ಬಾ’ ಎಂದು ಕರ್ಣನಿಗೆ ಕೃಷ್ಣ ಹೇಳಿದ. ಆದರೆ ಶ್ರೀಕೃಷ್ಣನ ಮಾತನ್ನು ದುರ್ಯೋಧನನಿಗೋಸ್ಕರ ಕರ್ಣ ಅಂಗೀಕರಿಸಲಿಲ್ಲ. ಶ್ರೀಕೃಷ್ಣನು ಕರ್ಣನನ್ನು ರಥದಿಂದಿಳಿಸಿ,  ಅಶ್ವತ್ಥಾಮನನ್ನು ಆಚೆ ಕರೆದುಕೊಂಡು ಹೋಗಿ, - ‘ಪಾಂಡವರಿಗೆ ಒಳ್ಳೆಯ ಗೆಳೆಯನಾದ ನೀನು, ಆ ಗೆಳೆತನವನ್ನು ಯುದ್ಧ ಮಾಡುವಾಗಲೂ ಏಕೆ ಉಳಿಸಿಕೊಳ್ಳಬಾರದು’ ಎಂದು ಕೇಳಿದ.

 

ಯಾವತ್  ಪಿತುರ್ಮ್ಮರಣಂ ಸೋSಪಿ ಮೈತ್ರೀಂ ವವ್ರೇ ಪಾರ್ತ್ಥೈಸ್ತಂ ಚ ವಿಸೃಜ್ಯ ಕೃಷ್ಣಃ ।

ಯಯೌ ಕುರೂನ್ ಪೂರ್ವಮೇವೋದ್ವಿಸೃಜ್ಯ ಪೃಥಾಸುತಾನಾಂ ಸ ಸಕಾಶಮೀಶಃ ॥೨೪.೮೬॥

 

ಅಶ್ವತ್ಥಾಮನು ‘ನನ್ನ ಅಪ್ಪನ ಸಾವು ಆಗುವ ತನಕ ನನಗೆ ಪಾಂಡವರ ಜೊತೆಗೆ ಗೆಳೆತನ ಇರುವುದು’ ಎಂದು ಹೇಳಿದ. ಆನಂತರ ಶ್ರೀಕೃಷ್ಣ ಕುರುಗಳನ್ನು ಬಿಟ್ಟು ಪಾಂಡವರ ಬಳಿ ತೆರಳಿದ.

 

ಸಮ್ಪ್ರಾರ್ತ್ಥಿತಃ ಪೃಥಯಾ ಚೈವ ಕರ್ಣ್ಣಃ ಪಾರ್ತ್ಥೈರ್ಯ್ಯೋಗಂ ಯಾಹಿ ಸೂನುರ್ಮ್ಮಮಾಸಿ ।

ತೇನಾಪ್ಯುಕ್ತಾ ವಾಸವಿನಾ ವಿನಾSಹಂ ಹನ್ಯಾಂ ಸುತಾಂಸ್ತೇ ನ ಕಥಞ್ಚನೇತಿ ॥೨೪.೮೭॥

 

ಕುಂತಿಯಿಂದ ಚೆನ್ನಾಗಿ ಪ್ರಾರ್ಥಿಸಲ್ಪಟ್ಟ ಕರ್ಣನು  ಕುಂತಿಯನ್ನು ಕುರಿತು- ‘ಅರ್ಜುನನಿಂದ ಹೊರತು ಬೇರೆ ನಿನ್ನ ಮಕ್ಕಳನ್ನು ಖಂಡಿತಾ ಸಂಹಾರ ಮಾಡುವುದಿಲ್ಲ’ ಎಂದು ಹೇಳಿದನು.   

[ಶ್ರೀಕೃಷ್ಣನು ತೆರಳಿದ ಮೇಲೆ ಕುಂತಿ ಕರ್ಣನನ್ನು ಭೇಟಿಮಾಡಿ, ನಾನು ನಿನ್ನ ತಾಯಿ ಹಾಗಾಗಿ ನನ್ನ ಮಕ್ಕಳೊಂದಿಗೆ ನೀನು ಸೇರು ಎಂದು ಕೇಳುತ್ತಾಳೆ.  ಆಗ ಕರ್ಣ ಕೊಟ್ಟ ಉತ್ತರವನ್ನು ಮಹಾಭಾರತದಲ್ಲಿ ವೇದವ್ಯಾಸರು ಹೀಗೆ ವರ್ಣಿಸಿದ್ದಾರೆ: ‘ನ ತೇ ಜಾತು ನಶಿಷ್ಯನ್ತಿ ಪುತ್ರಾಃ  ಪಞ್ಚ ಯಶಸ್ವಿನಿ । ನಿರರ್ಜುನಾಃ ಸಕರ್ಣಾ ವಾ ಸಾರ್ಜುನಾ ವಾ ಹತೇ ಮಯಿ’ (ಉದ್ಯೋಗಪರ್ವ ೧೪೬.೨೩). ‘ಕೀರ್ತಿಯುಳ್ಳವಳೇ, ನಿನಗೆ ಯಾವಾಗಲೂ ಐದು ಜನ ಮಕ್ಕಳು ಇದ್ದೇ ಇರುತ್ತಾರೆ. ಅರ್ಜುನ ಸತ್ತರೆ ಕರ್ಣನಿಂದೊಡಗೂಡಿದ ಐದು ಜನ. ನಾನು ಸತ್ತರೆ ಅರ್ಜುನನಿಂದೊಡಗೂಡಿದ ಐದು ಜನ’ ಎಂದು].

 

ತತೋ ಯಯುಃ ಕೌರವಾಃ ಪಾಣ್ಡವಾಶ್ಚ ಕುರುಕ್ಷೇತ್ರಂ ಯೋದ್ಧುಕಾಮಾಃ ಸಕೃಷ್ಣಾಃ ।

ಚಕ್ರುಶ್ಚ ತೇ ಶಿಬಿರಾಣ್ಯತ್ರ ಸರ್ವೇ ಶುಭೇ ದೇಶೇ ಪಾಣ್ಡವಾಃ ಕೃಷ್ಣಬುದ್ಧ್ಯಾ ॥೨೪.೮೮॥

 

ತದನಂತರ ಕೌರವರೂ ಪಾಂಡವರೂ ಯುದ್ಧ ಮಾಡಲು ಬಯಸಿ, ಕುರುಕ್ಷೇತ್ರಕ್ಕೆಂದು ತೆರಳಿ ಅಲ್ಲಿ  ಶಿಬಿರಗಳನ್ನು ಮಾಡಿಕೊಂಡರು. ಪಾಂಡವರು ಪರಮಾತ್ಮನ ಮೇಲಿನ ಭಕ್ತಿಯಿಂದ ಕೃಷ್ಣ ಹೇಳಿದ ಸ್ಥಳದಲ್ಲಿ, ಅವನು ಹೇಳಿದಂತೆ ಶಿಬಿರಗಳನ್ನು ಸ್ಥಾಪಿಸಿದರು.

 

[ಆದಿತಃ ಶ್ಲೋಕಾಃ :  ೩೬೯೮+೮೮=೩೭೮೬]

॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಯುದ್ಧೋದ್ಯೋಗೋ ನಾಮ ಚತುರ್ವಿಂಶೋsದ್ಧ್ಯಾಯಃ

*********

Mahabharata Tatparya Nirnaya Kannada 24-70-82

 

ಸಮ್ಪೂಜಿತೋ ಭೀಷ್ಮಮುಖೈಃ ಸಮಸ್ತೈ ರರಾಜ ರಾಜೀವಸಮಾನನೇತ್ರಃ ।

ಯಥೋಚಿತಾಸ್ತತ್ರ ವಿಧಾಯ ವಾರ್ತ್ತಾ ಜಗಾದ ಕಾಲೇ ಕಲಿಕಲ್ಮಷಾಪಹಃ ॥೨೪.೭೦॥

 

ತಾವರೆಯ ಎಸಳಿನಂತೆ ಸುಂದರವಾದ ಅರಳು ಕಣ್ಗಳುಳ್ಳ ಶ್ರೀಕೃಷ್ಣ ಪರಮಾತ್ಮನು, ಭೀಷ್ಮಾಚಾರ್ಯರೇ ಮೊದಲಾದ ಎಲ್ಲರಿಂದ ಗೌರವಿಸಲ್ಪಟ್ಟವನಾಗಿ ಶೋಭಿಸಿದ.  ಕಲಿ-ಕಷ್ಮಲವನ್ನು ನಾಶಮಾಡತಕ್ಕ ಶ್ರೀಕೃಷ್ಣ ಪರಮಾತ್ಮನು ಯಥೋಚಿತ ವಾರ್ತಾಲಾಪದೊಂದಿಗೆ ಮಾತನ್ನಾರಂಭಿಸಿ ಹೇಳಿದ-

 

ವೈಚಿತ್ರವೀರ್ಯ್ಯ ಸ್ವಕುಲಸ್ಯ ವೃದ್ಧ್ಯೈ ಪ್ರದೇಹಿ ರಾಜ್ಯಂ ತವ ಸತ್ಸುತಾಯ

ಯಶಶ್ಚ ಧರ್ಮ್ಮಂ ಪರಮಂ ಪ್ರಸಾದಂ ಮಮ ತ್ವಮಾಪ್ನೋಷಿ ತದೈವ ರಾಜನ್ ॥೨೪.೭೧॥

 

‘ಓ ವಿಚಿತ್ರವೀರ್ಯನ ಮಗನೇ(ಧೃತರಾಷ್ಟ್ರನೇ), ನಿನ್ನ ಕುಲ ಬೆಳೆಯಬೇಕು ಎಂದಾದರೆ ನಿನ್ನ ಒಳ್ಳೆಯ ಮಗನಿಗೆ ರಾಜ್ಯವನ್ನು ನೀಡು. ಅದರಿಂದ ಜಗತ್ತಿನಲ್ಲಿ ಕೀರ್ತಿಯನ್ನು ಹೊಂದುತ್ತೀಯ. ಪುಣ್ಯವನ್ನು ಹೊಂದುತ್ತೀಯ. ನನ್ನ ವಿಶೇಷವಾದ ಅನುಗ್ರಹವನ್ನು ಹೊಂದುತ್ತೀಯ.

 

ಅತೋSನ್ಯಥಾ ಯಶಸೋ ಧರ್ಮ್ಮತಶ್ಚ ಹೀನಃ ಪ್ರತೀಪತ್ವಮುಪೈಷಿ ಮೇSತಃ ।

ಇತೀರಿತಃ ಪ್ರಾಹ ಮಮಾತಿವರ್ತ್ತಿನಂ ಸುತಂ ಸ್ವಯಂ ಮೇ ಪ್ರತಿಬೋಧಯೇತಿ  ॥೨೪.೭೨॥

 

ಹೀಗಲ್ಲದಿದ್ದರೆ, ಕೀರ್ತಿಯಿಂದಲೂ, ಪುಣ್ಯದಿಂದಲೂ ರಹಿತನಾಗಿ ನನ್ನ ವಿರೋಧವನ್ನು ಹೊಂದುತ್ತೀಯ’.  ಈರೀತಿಯಾಗಿ  ಹೇಳಲ್ಪಟ್ಟ ಧೃತರಾಷ್ಟ್ರನು : ‘ನನ್ನ ಮಾತನ್ನು ಕೇಳದ ಮಗನಿಗೆ ನೀನೇ ಹೇಳಬೇಕು’ ಎಂದು ಹೇಳಿ ಕೈಚೆಲ್ಲಿ ಕುಳಿತ.

 

ಸ ವಾಸುದೇವೇನ ವಿಬೋಧಿತೋSಪಿ ಪಾಪಾಭಿಸನ್ಧಿರ್ದ್ಧೃತರಾಷ್ಟ್ರಸೂನುಃ ।

ಉತ್ಥಾಯ ತಸ್ಮಾದನುಜೈರಮಾತ್ಯೈರ್ನ್ನಿಯನ್ತುಮೀಶಂ ಕುಮತಿರ್ವ್ಯಧಾನ್ಮತಿಮ್ ॥೨೪.೭೩॥

 

ಶ್ರೀಕೃಷ್ಣ ಪರಮಾತ್ಮನಿಂದ ಉಪದೇಶಕ್ಕೆ ಒಳಗಾದರೂ, ಕೆಟ್ಟ ಕೆಲಸದಲ್ಲಿಯೇ ರಥನಾಗಿರುವ ದುರ್ಯೋಧನನು ಎದ್ದು, ಅಮಾತ್ಯರಿಂದಲೂ, ತಮ್ಮನ್ದಿರಿಂದಲೂ ಕೂಡಿಕೊಂಡು, ಶ್ರೀಕೃಷ್ಣನನ್ನು ನಿಗ್ರಹಿಸಿ ಬಂಧಿಸಲು ಬುದ್ಧಿಯನ್ನು ಮಾಡಿದ.

 

ಯೇಯೇ ತದಾ ಕೇಶವಸಂಯಮಾಯ ನ್ಯಮನ್ತ್ರಯಂಸ್ತೇ ವಿಬುಧಪ್ರತೀಪಾಃ ।

ಅತೋ ವಿಕರ್ಣ್ಣಪ್ರಮುಖಾ ಅಪಿ ಸ್ಮ ವದ್ಧ್ಯತ್ವಮಾಯನ್ನಶುಭಾಂ ಗತಿಂ ಚ ॥೨೪.೭೪॥

 

ಆಗ ಶ್ರೀಕೃಷ್ಣನನ್ನು ನಿಗ್ರಹಿಸಲು ಯಾರುಯಾರು ಆಲೋಚಿಸಿದರೋ, ಅವರೆಲ್ಲರೂ ಕೂಡಾ ದೇವತೆಗಳ ದ್ವೇಷಿಗಳಾದ ಅಸುರರು. ಆ ಕಾರಣದಿಂದ ವಿಕರ್ಣ ಮೊದಲಾದವರೂ ಕೂಡಾ ವಧಾರ್ಹತ್ವವನ್ನು ಹೊಂದಿದರು ಮತ್ತು ಕೆಟ್ಟ ಗತಿಯನ್ನೂ ಪಡೆದರು.

 

[ಹಾಗಿದ್ದರೆ ದುರ್ಯೋಧನನ ಜೊತೆಗೆ ಸೇರಿಕೊಂಡಿರುವ ದೇವತಾ ಅವತಾರವಾದ ಕರ್ಣ ಹೇಗೆ ಕೆಟ್ಟ ಗತಿಯಿಂದ ಪಾರಾದ ಎಂದರೆ - ]

 

ಕರ್ಣ್ಣಃ ಸುರಾಗ್ರ್ಯೋSಪಿ ಸುಯೋಧನಾರ್ತ್ಥೇ ನ್ಯಮನ್ತ್ರಯದ್ ಭಾವತೋ ನೈವ ದುಷ್ಟಃ ।

ಅತೋ ಗತಿಶ್ಚಾಸ್ಯ ಸುಶೋಭನಾSಭೂದ್ ಯೇSತ್ರಾನುಕೂಲಾಃ ಪರಮಸ್ಯ ತೇ ಶುಭಾಃ ॥೨೪.೭೫॥

 

ಕರ್ಣನು ದೇವತಾಶ್ರೇಷ್ಠನಾದರೂ, ದುರ್ಯೋಧನನ ಪ್ರೀತಿಗಾಗಿ(ಅಸುರಾವೇಶವೂ ಇದ್ದುದರಿಂದ) ಮಂತ್ರಾಲೋಚನೆಯಲ್ಲಿ ಪಾಲ್ಗೊಂಡಿದ್ದ. ಆದರೆ ಮನಸ್ಸಿನ ಒಳಗಡೆಯಿಂದ ದೋಷಕ್ಕೆ ಒಳಗಾಗಿರಲಿಲ್ಲ. ಆ ಕಾರಣದಿಂದ ಕರ್ಣನಿಗೆ ಮಂಗಳಲೋಕ ಪ್ರಾಪ್ತಿಯಾಯಿತು. ಒಟ್ಟಿನಲ್ಲಿ ಆ ಕಾಲದಲ್ಲಿ ಯಾರು ಪರಮಾತ್ಮನಿಗೆ ಅನುಕೂಲರಾಗಿದ್ದರೋ ಅವರು ಸಜ್ಜನರಾಗಿದ್ದರು.

 

ಋಷಿಭಿರ್ಜ್ಜಾಮದಗ್ನ್ಯೇನ ವ್ಯಾಸೇನಾಪ್ಯಮಿತೌಜಸಾ ।

ವಾಸುದೇವಾತ್ಮನಾ ಚೈವ ತ್ರಿರೂಪೇಣೈವ ವಿಷ್ಣುನಾ ॥೨೪.೭೬॥

 

ಮಾತಾಪಿತೃಭ್ಯಾಂ ಭೀಷ್ಮಾದ್ಯೈರನುಶಿಷ್ಟೋSಪಿ ದುರ್ಮ್ಮತಿಃ ।

ದೂರ್ಯ್ಯೋಧನೋ ಮನ್ತ್ರಯತೇ ಮುಕುನ್ದಸ್ಯಾSಶು ಬನ್ಧನಮ್ ॥೨೪.೭೭॥

 

ಅಲ್ಲಿ ನೆರೆದ ಎಲ್ಲಾ ಋಷಿಗಳಿಂದಲೂ, ಪರಶುರಾಮ-ವೇದವ್ಯಾಸ-ಶ್ರೀಕೃಷ್ಣ ಹೀಗೆ ಮೂರು ರೂಪವನ್ನು ಹೊಂದಿರುವ ವಿಷ್ಣುವಿನಿಂದಲೂ, ಗಾಂಧಾರಿ-ಧೃತರಾಷ್ಟ್ರರಿಂದಲೂ, ಭೀಷ್ಮ-ದ್ರೋಣ ಮೊದಲಾದವರಿಂದಲೂ ಬುದ್ಧಿವಾದಕ್ಕೆ ಒಳಗಾದರೂ, ಬದಲಿಸಲಾಗದ ಬುದ್ಧಿಯಿರುವ ದುರ್ಯೋಧನನು ಶ್ರೀಕೃಷ್ಣ ಪರಮಾತ್ಮನ ಸೆರೆಯನ್ನು ಚರ್ಚೆ ಮಾಡುತ್ತಿದ್ದ.

 

 

ಸಾತ್ಯಕಿಃ ಕೃತವರ್ಮ್ಮಾ ಚ ತಚ್ಛುಶ್ರುವತುರಞ್ಜಸಾ ।

ಸಂಸ್ಥಾಪ್ಯ ಕೃತವರ್ಮ್ಮಾಣಂ ರಹಃ ಸಾತ್ಯಕಿರತ್ರ ಚ ।

ಅಭ್ಯೇತ್ಯ ಕೇಶವಂ ಪ್ರಾಹ ದೂರ್ಯ್ಯೋಧನವಿನಿಶ್ಚಯಮ್ ॥೨೪.೭೮॥

 

ಸಾತ್ಯಕಿಯೂ, ಕೃತವರ್ಮನೂ ದುರ್ಯೋಧನನ ಆ ಮಂತ್ರಾಲೋಚನೆಯನ್ನು ಚೆನ್ನಾಗಿ ಕೇಳಿದರು.  ಸಾತ್ಯಕಿಯು ಕೃತವರ್ಮನನ್ನು ಅಲ್ಲೇ ಇರುವಂತೆ ಹೇಳಿ, ಪರಮಾತ್ಮನ ಬಳಿಬಂದು, ದುರ್ಯೋಧನನ ಕೃಷ್ಣಬಂಧನ ನಿಶ್ಚಯವನ್ನು ತಿಳಿಸಿದನು.

 

ಜಾನನ್ನಪ್ಯಖಿಲಂ ಕೃಷ್ಣಸ್ತಚ್ಛ್ರುತ್ವಾ ಸಾತ್ಯಕೇರ್ಮ್ಮುಖಾತ್ ।

ವೈಚಿತ್ರವೀರ್ಯ್ಯಮವದತ್ ಪಶ್ಯ ಮಾಮಿತಿ ಸರ್ವಗಮ್ ॥೨೪.೭೯॥

 

ಶ್ರೀಕೃಷ್ಣನು ಅದೆಲ್ಲವನ್ನೂ ಮೊದಲೇ ತಿಳಿದಿದ್ದರೂ ಕೂಡಾ, ಸಾತ್ಯಕಿಯ ಮುಖದಿಂದ ಅದನ್ನು ಕೇಳಿ, ಧೃತರಾಷ್ಟ್ರನಿಗೆ- ‘ವಿಶ್ವರೂಪ ಹೊಂದಿರುವ ನನ್ನನ್ನು ನೋಡು’ ಎಂದು ಹೇಳಿದ.

 

ಅಥ ತೇನಾSಹುತೇ ಪುತ್ರೇ ಸಾಮಾತ್ಯೇ ಪುರುಷೋತ್ತಮಃ ।

ಸ್ವಂ ರೂಪಂ ದರ್ಶಯಾಮಾಸ ಸರ್ವಗಂ ಪೂರ್ಣ್ಣಸದ್ಗುಣಮ್ ॥೨೪.೮೦॥

 

ಸ್ವಲ್ಪ ಹೊತ್ತಾದಮೇಲೆ ಧೃತರಾಷ್ಟ್ರನಿಂದ, ಅಮಾತ್ಯರಿಂದ ಕೂಡಿದ ಮಗನು ಆಹ್ವಾನಿಸಲ್ಪಡಲು, ಎಲ್ಲೆಡೆ ವ್ಯಾಪಿಸಿರುವ, ಗುಣಗಳಿಂದ ತುಂಬಿದ ಶ್ರೀಕೃಷ್ಣ ಪರಮಾತ್ಮನು ತನ್ನ ವಿಶ್ವರೂಪವನ್ನು(ಧೃತರಾಷ್ಟ್ರನಿಗೆ ದಿವ್ಯದೃಷ್ಟಿಯನ್ನು ಕೊಟ್ಟು) ತೋರಿದನು.  

 

ತತ್ ಕಾಲಸೂರ್ಯ್ಯಾಮಿತದೀಪ್ತಿ ಸರ್ವಜಗದ್ಭರಂ ಶಾಶ್ವತಮಪ್ರಮೇಯಮ್ ।

ದೃಷ್ಟ್ವೈವ ಚಕ್ಷೂಂಷಿ ಸುಯೋಧನಾದ್ಯಾ ನ್ಯಮೀಲಯನ್ ದೀಧಿತಿವಾರಿತಾನಿ ॥೨೪.೮೧॥

 

ಪ್ರಳಯಕಾಲದ ಸೂರ್ಯರಿಗಿಂತಲೂ ಮಿಗಿಲಾಗಿರುವ ಕಾಂತಿಯುಳ್ಳ, ಎಲ್ಲಾ ಜಗತ್ತನ್ನೂ ಕೂಡಾ ತುಂಬಿದ, ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗದ ಆ ವಿಶ್ವರೂಪವನ್ನು, ಪ್ರಖರವಾದ ಬೆಳಕಿನಲ್ಲಿ ನೋಡಲಾಗದೇ ದುರ್ಯೋಧನ ಮೊದಲಾದವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡರು. 

 

ಪಿಧಾಯ ರೂಪಂ ಪುನರೇವ ತದ್ಧರಿರ್ವೈಚಿತ್ರವೀರ್ಯ್ಯೇಣ ಸಮರ್ತ್ಥಿತಃ ಪುನಃ ।

ಕೃತ್ವಾSನ್ಧಮೇವ ಪ್ರಯಯೌ ಸುಯೋಧನಂ ಸಹಾನುಗಂ ಪಾಪತಮಂ ಪ್ರಕಾಶ್ಯ ॥೨೪.೮೨॥

 

ಶ್ರೀಕೃಷ್ಣ ಪರಮಾತ್ಮನು ಧೃತರಾಷ್ಟ್ರನಿಂದ ಬೇಡಲ್ಪಟ್ಟವನಾಗಿ ತನ್ನ ವಿಶ್ವರೂಪವನ್ನು ಮುಚ್ಚಿದನು. ಮತ್ತೆ ಧೃತರಾಷ್ಟ್ರನನ್ನು ಕುರುಡನನ್ನಾಗಿಯೇ ಮಾಡಿ, ದುರ್ಯೋಧನನನ್ನು ಲಜ್ಜೆಗೆಟ್ಟವನು, ನೀತಿಗೆಟ್ಟವನು ಎಂದು ಜಗತ್ತಿಗೇ ತೋರಿಸಿ, ಶ್ರೀಕೃಷ್ಣ ಅಲ್ಲಿಂದ ಹೊರಟು ಹೋದನು.