ಅನನ್ತಶಕ್ತಿಃ
ಪುರುಷೋತ್ತಮೋSಸೌ
ಶಕ್ತೋSಪಿ ದುರ್ಯ್ಯೋಧನಚಿತ್ತನಿಗ್ರಹೇ ।
ನೈವ ವ್ಯಧಾದೇನಮಥೋಕ್ತಕಾರಿಣಂ
ನಿಪಾತಯನ್ನನ್ಧತಮಸ್ಯನನ್ತಃ ॥೨೪.೮೩॥
ಪರಮಾತ್ಮನು ಅನಂತವಾದ ಶಕ್ತಿಯುಳ್ಳವನಾದರೂ, ಎಲ್ಲರಿಗಿಂತಲೂ ಉತ್ತಮನಾದರೂ, ದುರ್ಯೋಧನನ
ಮನಸ್ಸಿನ ನಿಯಂತ್ರಣದಲ್ಲಿ ಶಕ್ತನಾದರೂ, ದುಷ್ಟರನ್ನು ಅನ್ಧಂತಮಸ್ಸಿನಲ್ಲಿ ಬೀಳಿಸುವುದಕ್ಕಾಗಿ ದುರ್ಯೋಧನ
ತನ್ನ ಮಾತನ್ನು ಕೇಳುವಂತೆ ಮಾಡಲಿಲ್ಲ.
[ಸ್ವತಂತ್ರನಾದ
ಭಗವಂತ ಸೃಷ್ಟಿ ಎನ್ನುವ ತೋಟ ನಿರ್ಮಿಸಿ ಅಲ್ಲಿ ಒಬ್ಬ ತೋಟಗಾರನಂತೆ ಜೀವ ಎನ್ನುವ ಬೀಜವನ್ನು ಬಿತ್ತಿ ಬೆಳೆಸುತ್ತಾನೆ. ಅದರಿಂದ ನಮ್ಮ ದೇಹ ಎನ್ನುವ
ಮರ ಬೆಳೆಯುತ್ತದೆ ಮತ್ತು ಅದರಿಂದ ಕಹಿಯಾದ, ಹುಳಿಯಾದ ಅಥವಾ ಸಿಹಿಯಾದ ಹಣ್ಣು ಜೀವಸ್ವಭಾವದಂತೆ
ಅಭಿವ್ಯಕ್ತವಾಗುತ್ತದೆ. ಆದ್ದರಿಂದ ಕೆಟ್ಟಕೆಲಸ ಅಥವಾ ಒಳ್ಳೆಯಕೆಲಸ ಎನ್ನುವುದು ನಮ್ಮ
ಸ್ವಭಾವವನ್ನವಲಂಬಿಸಿದೆಯೇ ಹೊರತು
ಭಗವಂತನನ್ನಲ್ಲ. ತೋಟಗಾರ ಎಂದೂ ಮೆಣಸಿನ ಗಿಡಕ್ಕೆ ಖಾರವಾದ ನೀರನ್ನು ಹರಿಸುವುದಿಲ್ಲ. ಎಲ್ಲಾ
ಗಿಡದಂತೆ ಆ ಗಿಡವನ್ನೂ ಪೋಷಿಸಿ ಬೆಳೆಸುತ್ತಾನೆ. ಆದರೆ ಅದು ಖಾರವಾದ ಹಣ್ಣನ್ನು ತನ್ನ
ಸ್ವಭಾವದಂತೆ ಕೊಡುತ್ತದೆ. ಆಸುರೀ ಸ್ವಭಾವ ಎನ್ನುವುದು ಮೂಲತಃ ಜೀವಸ್ವಭಾವ. ಹೇಗೆ ಹಾಗಲಕಾಯಿ
ಕಹಿಯೋ ಹಾಗೇ ಈ ಆಸುರೀ ಜನರ ಜೀವಸ್ವಭಾವ ತಾಮಸ. ಅದನ್ನು ಭಗವಂತ ಬದಲಿಸುವುದಿಲ್ಲ. ಬದಲಿಗೆ ಆ
ಜೀವದ ಸ್ವಭಾವಕ್ಕನುಗುಣವಾಗಿ ಜೀವದ ಗತಿ ನಿರ್ಮಾಣವಾಗುತ್ತದೆ. ಭಗವಂತನನ್ನು ದ್ವೇಷಿಸುವ, ಮನುಕುಲವನ್ನು ದ್ವೇಷಿಸುವ,
ಪ್ರಪಂಚವನ್ನೇ ದ್ವೇಷಿಸುವ ಈ ಕ್ರೂರಿಗಳನ್ನು ಭಗವಂತ ನಿರಂತರ ಸಂಸಾರ ಸಾಗರದಲ್ಲಿ
ಹಾಕುತ್ತಾನೆ ಅಥವಾ ಅವರು ಅನ್ಧಂತಮಸ್ಸನ್ನು ಹೊಂದುವಂತೆ ಮಾಡುತ್ತಾನೆ. ಅದರಿಂದಾಗಿ
ಶ್ರೀಕೃಷ್ಣ ದುರ್ಯೋಧನನ ಮನಸ್ಸನ್ನು ನಿಗ್ರಹಿಸಲಿಲ್ಲ. ಆದರೆ ಇದರರ್ಥ
ದುರ್ಯೋಧನನ ಮನಸ್ಸನ್ನು ಬದಲಿಸದ ಶ್ರೀಕೃಷ್ಣ
ಅಶಕ್ತನೆಂದಲ್ಲ. ಶಕ್ತನಾದರೂ ಕೂಡಾ ಸ್ವಭಾವ ಆವಿಷ್ಕರಣೆಗಾಗಿ
ಜೀವ ಸ್ವಭಾವವನ್ನು ಭಗವಂತ ಬದಲಿಸುವುದಿಲ್ಲ ಅಷ್ಟೇ]
ಪುನಶ್ಚ
ಕುನ್ತೀಗೃಹಮೇತ್ಯ ಕೃಷ್ಣಸ್ತಯೋದ್ಯೋಗಂ ಧರ್ಮ್ಮಸುತಸ್ಯ ಶಿಷ್ಟಮ್ ।
ಶ್ರುತ್ವಾ ಯಯೌ ಸೂರ್ಯ್ಯಜಮಾತ್ಮಯಾನೇ
ನಿಧಾಯ ತಸ್ಯಾವದದಾತ್ಮಜನ್ಮ ॥೨೪.೮೪॥
ಆಯಾಹಿ ಪಾಣ್ಡೂನಿತಿ
ತದ್ವಚಃ ಸ ನೈವಾಕರೋನ್ಮಾನಿತೋ ಧಾರ್ತ್ತರಾಷ್ಟ್ರೈಃ ।
ಸಂಸ್ಥಾಪ್ಯ ತಂ ಭಗವಾನ್
ದ್ರೌಣಯೇ ಚ ರಹೋSವದನ್ಮಿತ್ರಭಾವಂ
ಪೃಥಾಜೈಃ ॥೨೪.೮೫॥
ಮತ್ತೆ ಕುಂತಿಯ ಮನೆಗೆ ತೆರಳಿದ ಶ್ರೀಕೃಷ್ಣನು ಅವಳಿಂದ
ಧರ್ಮರಾಜನು ಮಾಡಬೇಕಾದ ಕರ್ತವ್ಯವನ್ನು ಕೇಳಿ, ಆಮೇಲೆ
ಕರ್ಣನ ಬಳಿ ತೆರಳಿ, ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಊರ ಹೊರಗೆ ಕರೆದುಕೊಂಡು ಹೋಗಿ, ಅವನಿಗೆ ಅವನ ಹುಟ್ಟು ಹೇಗಾಯ್ತು(ನೀನು ಕುಂತಿಯ ಮಗ)
ಎನ್ನುವುದನ್ನು ಹೇಳಿದ.
‘ಪಾಂಡವರ ಬಳಿಗೆ ಬಾ’ ಎಂದು ಕರ್ಣನಿಗೆ ಕೃಷ್ಣ ಹೇಳಿದ. ಆದರೆ ಶ್ರೀಕೃಷ್ಣನ ಮಾತನ್ನು ದುರ್ಯೋಧನನಿಗೋಸ್ಕರ
ಕರ್ಣ ಅಂಗೀಕರಿಸಲಿಲ್ಲ. ಶ್ರೀಕೃಷ್ಣನು ಕರ್ಣನನ್ನು ರಥದಿಂದಿಳಿಸಿ, ಅಶ್ವತ್ಥಾಮನನ್ನು ಆಚೆ ಕರೆದುಕೊಂಡು
ಹೋಗಿ, - ‘ಪಾಂಡವರಿಗೆ ಒಳ್ಳೆಯ ಗೆಳೆಯನಾದ ನೀನು, ಆ ಗೆಳೆತನವನ್ನು ಯುದ್ಧ ಮಾಡುವಾಗಲೂ ಏಕೆ
ಉಳಿಸಿಕೊಳ್ಳಬಾರದು’ ಎಂದು ಕೇಳಿದ.
ಯಾವತ್ ಪಿತುರ್ಮ್ಮರಣಂ ಸೋSಪಿ ಮೈತ್ರೀಂ ವವ್ರೇ ಪಾರ್ತ್ಥೈಸ್ತಂ
ಚ ವಿಸೃಜ್ಯ ಕೃಷ್ಣಃ ।
ಯಯೌ ಕುರೂನ್
ಪೂರ್ವಮೇವೋದ್ವಿಸೃಜ್ಯ ಪೃಥಾಸುತಾನಾಂ ಸ ಸಕಾಶಮೀಶಃ ॥೨೪.೮೬॥
ಅಶ್ವತ್ಥಾಮನು ‘ನನ್ನ ಅಪ್ಪನ ಸಾವು ಆಗುವ ತನಕ ನನಗೆ ಪಾಂಡವರ ಜೊತೆಗೆ ಗೆಳೆತನ ಇರುವುದು’
ಎಂದು ಹೇಳಿದ. ಆನಂತರ ಶ್ರೀಕೃಷ್ಣ ಕುರುಗಳನ್ನು ಬಿಟ್ಟು ಪಾಂಡವರ ಬಳಿ ತೆರಳಿದ.
ಸಮ್ಪ್ರಾರ್ತ್ಥಿತಃ
ಪೃಥಯಾ ಚೈವ ಕರ್ಣ್ಣಃ ಪಾರ್ತ್ಥೈರ್ಯ್ಯೋಗಂ ಯಾಹಿ ಸೂನುರ್ಮ್ಮಮಾಸಿ ।
ತೇನಾಪ್ಯುಕ್ತಾ
ವಾಸವಿನಾ ವಿನಾSಹಂ
ಹನ್ಯಾಂ ಸುತಾಂಸ್ತೇ ನ ಕಥಞ್ಚನೇತಿ ॥೨೪.೮೭॥
ಕುಂತಿಯಿಂದ ಚೆನ್ನಾಗಿ ಪ್ರಾರ್ಥಿಸಲ್ಪಟ್ಟ ಕರ್ಣನು ಕುಂತಿಯನ್ನು ಕುರಿತು- ‘ಅರ್ಜುನನಿಂದ ಹೊರತು ಬೇರೆ
ನಿನ್ನ ಮಕ್ಕಳನ್ನು ಖಂಡಿತಾ ಸಂಹಾರ ಮಾಡುವುದಿಲ್ಲ’ ಎಂದು ಹೇಳಿದನು.
[ಶ್ರೀಕೃಷ್ಣನು ತೆರಳಿದ ಮೇಲೆ ಕುಂತಿ ಕರ್ಣನನ್ನು ಭೇಟಿಮಾಡಿ, ನಾನು ನಿನ್ನ ತಾಯಿ ಹಾಗಾಗಿ ನನ್ನ ಮಕ್ಕಳೊಂದಿಗೆ ನೀನು ಸೇರು ಎಂದು ಕೇಳುತ್ತಾಳೆ. ಆಗ ಕರ್ಣ ಕೊಟ್ಟ ಉತ್ತರವನ್ನು ಮಹಾಭಾರತದಲ್ಲಿ ವೇದವ್ಯಾಸರು
ಹೀಗೆ ವರ್ಣಿಸಿದ್ದಾರೆ: ‘ನ ತೇ ಜಾತು ನಶಿಷ್ಯನ್ತಿ ಪುತ್ರಾಃ ಪಞ್ಚ ಯಶಸ್ವಿನಿ । ನಿರರ್ಜುನಾಃ ಸಕರ್ಣಾ ವಾ ಸಾರ್ಜುನಾ ವಾ ಹತೇ
ಮಯಿ’ (ಉದ್ಯೋಗಪರ್ವ ೧೪೬.೨೩).
‘ಕೀರ್ತಿಯುಳ್ಳವಳೇ, ನಿನಗೆ ಯಾವಾಗಲೂ ಐದು ಜನ ಮಕ್ಕಳು ಇದ್ದೇ ಇರುತ್ತಾರೆ. ಅರ್ಜುನ ಸತ್ತರೆ
ಕರ್ಣನಿಂದೊಡಗೂಡಿದ ಐದು ಜನ. ನಾನು ಸತ್ತರೆ ಅರ್ಜುನನಿಂದೊಡಗೂಡಿದ ಐದು ಜನ’ ಎಂದು].
ತತೋ ಯಯುಃ ಕೌರವಾಃ
ಪಾಣ್ಡವಾಶ್ಚ ಕುರುಕ್ಷೇತ್ರಂ ಯೋದ್ಧುಕಾಮಾಃ ಸಕೃಷ್ಣಾಃ ।
ಚಕ್ರುಶ್ಚ ತೇ
ಶಿಬಿರಾಣ್ಯತ್ರ ಸರ್ವೇ ಶುಭೇ ದೇಶೇ ಪಾಣ್ಡವಾಃ ಕೃಷ್ಣಬುದ್ಧ್ಯಾ ॥೨೪.೮೮॥
ತದನಂತರ ಕೌರವರೂ ಪಾಂಡವರೂ ಯುದ್ಧ ಮಾಡಲು ಬಯಸಿ,
ಕುರುಕ್ಷೇತ್ರಕ್ಕೆಂದು ತೆರಳಿ ಅಲ್ಲಿ ಶಿಬಿರಗಳನ್ನು ಮಾಡಿಕೊಂಡರು. ಪಾಂಡವರು ಪರಮಾತ್ಮನ ಮೇಲಿನ
ಭಕ್ತಿಯಿಂದ ಕೃಷ್ಣ ಹೇಳಿದ ಸ್ಥಳದಲ್ಲಿ, ಅವನು ಹೇಳಿದಂತೆ ಶಿಬಿರಗಳನ್ನು ಸ್ಥಾಪಿಸಿದರು.
[ಆದಿತಃ
ಶ್ಲೋಕಾಃ : ೩೬೯೮+೮೮=೩೭೮೬]
॥ ಇತಿ
ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಯುದ್ಧೋದ್ಯೋಗೋ ನಾಮ ಚತುರ್ವಿಂಶೋsದ್ಧ್ಯಾಯಃ ॥
*********
No comments:
Post a Comment