ಸಮ್ಪೂಜಿತೋ
ಭೀಷ್ಮಮುಖೈಃ ಸಮಸ್ತೈ ರರಾಜ ರಾಜೀವಸಮಾನನೇತ್ರಃ ।
ಯಥೋಚಿತಾಸ್ತತ್ರ ವಿಧಾಯ
ವಾರ್ತ್ತಾ ಜಗಾದ ಕಾಲೇ ಕಲಿಕಲ್ಮಷಾಪಹಃ ॥೨೪.೭೦॥
ತಾವರೆಯ ಎಸಳಿನಂತೆ ಸುಂದರವಾದ ಅರಳು ಕಣ್ಗಳುಳ್ಳ ಶ್ರೀಕೃಷ್ಣ ಪರಮಾತ್ಮನು, ಭೀಷ್ಮಾಚಾರ್ಯರೇ
ಮೊದಲಾದ ಎಲ್ಲರಿಂದ ಗೌರವಿಸಲ್ಪಟ್ಟವನಾಗಿ ಶೋಭಿಸಿದ. ಕಲಿ-ಕಷ್ಮಲವನ್ನು ನಾಶಮಾಡತಕ್ಕ ಶ್ರೀಕೃಷ್ಣ ಪರಮಾತ್ಮನು ಯಥೋಚಿತ
ವಾರ್ತಾಲಾಪದೊಂದಿಗೆ ಮಾತನ್ನಾರಂಭಿಸಿ ಹೇಳಿದ-
ವೈಚಿತ್ರವೀರ್ಯ್ಯ
ಸ್ವಕುಲಸ್ಯ ವೃದ್ಧ್ಯೈ ಪ್ರದೇಹಿ ರಾಜ್ಯಂ ತವ ಸತ್ಸುತಾಯ
ಯಶಶ್ಚ ಧರ್ಮ್ಮಂ ಪರಮಂ
ಪ್ರಸಾದಂ ಮಮ ತ್ವಮಾಪ್ನೋಷಿ ತದೈವ ರಾಜನ್ ॥೨೪.೭೧॥
‘ಓ ವಿಚಿತ್ರವೀರ್ಯನ ಮಗನೇ(ಧೃತರಾಷ್ಟ್ರನೇ), ನಿನ್ನ ಕುಲ ಬೆಳೆಯಬೇಕು ಎಂದಾದರೆ ನಿನ್ನ
ಒಳ್ಳೆಯ ಮಗನಿಗೆ ರಾಜ್ಯವನ್ನು ನೀಡು. ಅದರಿಂದ ಜಗತ್ತಿನಲ್ಲಿ ಕೀರ್ತಿಯನ್ನು ಹೊಂದುತ್ತೀಯ.
ಪುಣ್ಯವನ್ನು ಹೊಂದುತ್ತೀಯ. ನನ್ನ ವಿಶೇಷವಾದ ಅನುಗ್ರಹವನ್ನು ಹೊಂದುತ್ತೀಯ.
ಅತೋSನ್ಯಥಾ ಯಶಸೋ ಧರ್ಮ್ಮತಶ್ಚ
ಹೀನಃ ಪ್ರತೀಪತ್ವಮುಪೈಷಿ ಮೇSತಃ ।
ಇತೀರಿತಃ ಪ್ರಾಹ
ಮಮಾತಿವರ್ತ್ತಿನಂ ಸುತಂ ಸ್ವಯಂ ಮೇ ಪ್ರತಿಬೋಧಯೇತಿ ॥೨೪.೭೨॥
ಹೀಗಲ್ಲದಿದ್ದರೆ, ಕೀರ್ತಿಯಿಂದಲೂ, ಪುಣ್ಯದಿಂದಲೂ ರಹಿತನಾಗಿ ನನ್ನ ವಿರೋಧವನ್ನು
ಹೊಂದುತ್ತೀಯ’. ಈರೀತಿಯಾಗಿ ಹೇಳಲ್ಪಟ್ಟ ಧೃತರಾಷ್ಟ್ರನು : ‘ನನ್ನ ಮಾತನ್ನು ಕೇಳದ
ಮಗನಿಗೆ ನೀನೇ ಹೇಳಬೇಕು’ ಎಂದು ಹೇಳಿ ಕೈಚೆಲ್ಲಿ ಕುಳಿತ.
ಸ ವಾಸುದೇವೇನ ವಿಬೋಧಿತೋSಪಿ ಪಾಪಾಭಿಸನ್ಧಿರ್ದ್ಧೃತರಾಷ್ಟ್ರಸೂನುಃ
।
ಉತ್ಥಾಯ
ತಸ್ಮಾದನುಜೈರಮಾತ್ಯೈರ್ನ್ನಿಯನ್ತುಮೀಶಂ ಕುಮತಿರ್ವ್ಯಧಾನ್ಮತಿಮ್ ॥೨೪.೭೩॥
ಶ್ರೀಕೃಷ್ಣ ಪರಮಾತ್ಮನಿಂದ ಉಪದೇಶಕ್ಕೆ ಒಳಗಾದರೂ, ಕೆಟ್ಟ ಕೆಲಸದಲ್ಲಿಯೇ ರಥನಾಗಿರುವ
ದುರ್ಯೋಧನನು ಎದ್ದು, ಅಮಾತ್ಯರಿಂದಲೂ, ತಮ್ಮನ್ದಿರಿಂದಲೂ ಕೂಡಿಕೊಂಡು, ಶ್ರೀಕೃಷ್ಣನನ್ನು
ನಿಗ್ರಹಿಸಿ ಬಂಧಿಸಲು ಬುದ್ಧಿಯನ್ನು ಮಾಡಿದ.
ಯೇಯೇ ತದಾ ಕೇಶವಸಂಯಮಾಯ
ನ್ಯಮನ್ತ್ರಯಂಸ್ತೇ ವಿಬುಧಪ್ರತೀಪಾಃ ।
ಅತೋ ವಿಕರ್ಣ್ಣಪ್ರಮುಖಾ
ಅಪಿ ಸ್ಮ ವದ್ಧ್ಯತ್ವಮಾಯನ್ನಶುಭಾಂ ಗತಿಂ ಚ ॥೨೪.೭೪॥
ಆಗ ಶ್ರೀಕೃಷ್ಣನನ್ನು ನಿಗ್ರಹಿಸಲು ಯಾರುಯಾರು ಆಲೋಚಿಸಿದರೋ, ಅವರೆಲ್ಲರೂ ಕೂಡಾ ದೇವತೆಗಳ
ದ್ವೇಷಿಗಳಾದ ಅಸುರರು. ಆ ಕಾರಣದಿಂದ ವಿಕರ್ಣ ಮೊದಲಾದವರೂ ಕೂಡಾ ವಧಾರ್ಹತ್ವವನ್ನು ಹೊಂದಿದರು ಮತ್ತು
ಕೆಟ್ಟ ಗತಿಯನ್ನೂ ಪಡೆದರು.
[ಹಾಗಿದ್ದರೆ ದುರ್ಯೋಧನನ ಜೊತೆಗೆ ಸೇರಿಕೊಂಡಿರುವ ದೇವತಾ ಅವತಾರವಾದ ಕರ್ಣ ಹೇಗೆ ಕೆಟ್ಟ
ಗತಿಯಿಂದ ಪಾರಾದ ಎಂದರೆ - ]
ಕರ್ಣ್ಣಃ ಸುರಾಗ್ರ್ಯೋSಪಿ ಸುಯೋಧನಾರ್ತ್ಥೇ ನ್ಯಮನ್ತ್ರಯದ್ ಭಾವತೋ ನೈವ
ದುಷ್ಟಃ ।
ಅತೋ ಗತಿಶ್ಚಾಸ್ಯ
ಸುಶೋಭನಾSಭೂದ್
ಯೇSತ್ರಾನುಕೂಲಾಃ ಪರಮಸ್ಯ ತೇ ಶುಭಾಃ ॥೨೪.೭೫॥
ಕರ್ಣನು ದೇವತಾಶ್ರೇಷ್ಠನಾದರೂ, ದುರ್ಯೋಧನನ ಪ್ರೀತಿಗಾಗಿ(ಅಸುರಾವೇಶವೂ ಇದ್ದುದರಿಂದ) ಮಂತ್ರಾಲೋಚನೆಯಲ್ಲಿ
ಪಾಲ್ಗೊಂಡಿದ್ದ. ಆದರೆ ಮನಸ್ಸಿನ ಒಳಗಡೆಯಿಂದ ದೋಷಕ್ಕೆ ಒಳಗಾಗಿರಲಿಲ್ಲ. ಆ ಕಾರಣದಿಂದ ಕರ್ಣನಿಗೆ
ಮಂಗಳಲೋಕ ಪ್ರಾಪ್ತಿಯಾಯಿತು. ಒಟ್ಟಿನಲ್ಲಿ ಆ ಕಾಲದಲ್ಲಿ ಯಾರು ಪರಮಾತ್ಮನಿಗೆ ಅನುಕೂಲರಾಗಿದ್ದರೋ
ಅವರು ಸಜ್ಜನರಾಗಿದ್ದರು.
ಋಷಿಭಿರ್ಜ್ಜಾಮದಗ್ನ್ಯೇನ
ವ್ಯಾಸೇನಾಪ್ಯಮಿತೌಜಸಾ ।
ವಾಸುದೇವಾತ್ಮನಾ ಚೈವ
ತ್ರಿರೂಪೇಣೈವ ವಿಷ್ಣುನಾ ॥೨೪.೭೬॥
ಮಾತಾಪಿತೃಭ್ಯಾಂ
ಭೀಷ್ಮಾದ್ಯೈರನುಶಿಷ್ಟೋSಪಿ
ದುರ್ಮ್ಮತಿಃ
।
ದೂರ್ಯ್ಯೋಧನೋ
ಮನ್ತ್ರಯತೇ ಮುಕುನ್ದಸ್ಯಾSಶು ಬನ್ಧನಮ್ ॥೨೪.೭೭॥
ಅಲ್ಲಿ ನೆರೆದ ಎಲ್ಲಾ ಋಷಿಗಳಿಂದಲೂ, ಪರಶುರಾಮ-ವೇದವ್ಯಾಸ-ಶ್ರೀಕೃಷ್ಣ ಹೀಗೆ ಮೂರು
ರೂಪವನ್ನು ಹೊಂದಿರುವ ವಿಷ್ಣುವಿನಿಂದಲೂ, ಗಾಂಧಾರಿ-ಧೃತರಾಷ್ಟ್ರರಿಂದಲೂ, ಭೀಷ್ಮ-ದ್ರೋಣ
ಮೊದಲಾದವರಿಂದಲೂ ಬುದ್ಧಿವಾದಕ್ಕೆ ಒಳಗಾದರೂ, ಬದಲಿಸಲಾಗದ ಬುದ್ಧಿಯಿರುವ ದುರ್ಯೋಧನನು ಶ್ರೀಕೃಷ್ಣ
ಪರಮಾತ್ಮನ ಸೆರೆಯನ್ನು ಚರ್ಚೆ ಮಾಡುತ್ತಿದ್ದ.
ಸಾತ್ಯಕಿಃ ಕೃತವರ್ಮ್ಮಾ
ಚ ತಚ್ಛುಶ್ರುವತುರಞ್ಜಸಾ ।
ಸಂಸ್ಥಾಪ್ಯ ಕೃತವರ್ಮ್ಮಾಣಂ
ರಹಃ ಸಾತ್ಯಕಿರತ್ರ ಚ ।
ಅಭ್ಯೇತ್ಯ ಕೇಶವಂ
ಪ್ರಾಹ ದೂರ್ಯ್ಯೋಧನವಿನಿಶ್ಚಯಮ್ ॥೨೪.೭೮॥
ಸಾತ್ಯಕಿಯೂ, ಕೃತವರ್ಮನೂ ದುರ್ಯೋಧನನ ಆ ಮಂತ್ರಾಲೋಚನೆಯನ್ನು ಚೆನ್ನಾಗಿ ಕೇಳಿದರು.
ಸಾತ್ಯಕಿಯು ಕೃತವರ್ಮನನ್ನು ಅಲ್ಲೇ ಇರುವಂತೆ
ಹೇಳಿ, ಪರಮಾತ್ಮನ ಬಳಿಬಂದು, ದುರ್ಯೋಧನನ ಕೃಷ್ಣಬಂಧನ
ನಿಶ್ಚಯವನ್ನು ತಿಳಿಸಿದನು.
ಜಾನನ್ನಪ್ಯಖಿಲಂ ಕೃಷ್ಣಸ್ತಚ್ಛ್ರುತ್ವಾ
ಸಾತ್ಯಕೇರ್ಮ್ಮುಖಾತ್ ।
ವೈಚಿತ್ರವೀರ್ಯ್ಯಮವದತ್
ಪಶ್ಯ ಮಾಮಿತಿ ಸರ್ವಗಮ್ ॥೨೪.೭೯॥
ಶ್ರೀಕೃಷ್ಣನು ಅದೆಲ್ಲವನ್ನೂ ಮೊದಲೇ ತಿಳಿದಿದ್ದರೂ ಕೂಡಾ, ಸಾತ್ಯಕಿಯ ಮುಖದಿಂದ ಅದನ್ನು
ಕೇಳಿ, ಧೃತರಾಷ್ಟ್ರನಿಗೆ- ‘ವಿಶ್ವರೂಪ ಹೊಂದಿರುವ ನನ್ನನ್ನು ನೋಡು’ ಎಂದು ಹೇಳಿದ.
ಅಥ ತೇನಾSಹುತೇ ಪುತ್ರೇ ಸಾಮಾತ್ಯೇ
ಪುರುಷೋತ್ತಮಃ ।
ಸ್ವಂ ರೂಪಂ ದರ್ಶಯಾಮಾಸ
ಸರ್ವಗಂ ಪೂರ್ಣ್ಣಸದ್ಗುಣಮ್ ॥೨೪.೮೦॥
ಸ್ವಲ್ಪ ಹೊತ್ತಾದಮೇಲೆ ಧೃತರಾಷ್ಟ್ರನಿಂದ, ಅಮಾತ್ಯರಿಂದ ಕೂಡಿದ ಮಗನು ಆಹ್ವಾನಿಸಲ್ಪಡಲು,
ಎಲ್ಲೆಡೆ ವ್ಯಾಪಿಸಿರುವ, ಗುಣಗಳಿಂದ ತುಂಬಿದ ಶ್ರೀಕೃಷ್ಣ ಪರಮಾತ್ಮನು ತನ್ನ ವಿಶ್ವರೂಪವನ್ನು(ಧೃತರಾಷ್ಟ್ರನಿಗೆ
ದಿವ್ಯದೃಷ್ಟಿಯನ್ನು ಕೊಟ್ಟು) ತೋರಿದನು.
ತತ್ ಕಾಲಸೂರ್ಯ್ಯಾಮಿತದೀಪ್ತಿ
ಸರ್ವಜಗದ್ಭರಂ ಶಾಶ್ವತಮಪ್ರಮೇಯಮ್ ।
ದೃಷ್ಟ್ವೈವ ಚಕ್ಷೂಂಷಿ
ಸುಯೋಧನಾದ್ಯಾ ನ್ಯಮೀಲಯನ್ ದೀಧಿತಿವಾರಿತಾನಿ ॥೨೪.೮೧॥
ಪ್ರಳಯಕಾಲದ ಸೂರ್ಯರಿಗಿಂತಲೂ ಮಿಗಿಲಾಗಿರುವ ಕಾಂತಿಯುಳ್ಳ, ಎಲ್ಲಾ ಜಗತ್ತನ್ನೂ ಕೂಡಾ
ತುಂಬಿದ, ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗದ ಆ ವಿಶ್ವರೂಪವನ್ನು, ಪ್ರಖರವಾದ ಬೆಳಕಿನಲ್ಲಿ
ನೋಡಲಾಗದೇ ದುರ್ಯೋಧನ ಮೊದಲಾದವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡರು.
ಪಿಧಾಯ ರೂಪಂ ಪುನರೇವ
ತದ್ಧರಿರ್ವೈಚಿತ್ರವೀರ್ಯ್ಯೇಣ ಸಮರ್ತ್ಥಿತಃ ಪುನಃ ।
ಕೃತ್ವಾSನ್ಧಮೇವ ಪ್ರಯಯೌ ಸುಯೋಧನಂ
ಸಹಾನುಗಂ ಪಾಪತಮಂ ಪ್ರಕಾಶ್ಯ ॥೨೪.೮೨॥
ಶ್ರೀಕೃಷ್ಣ ಪರಮಾತ್ಮನು ಧೃತರಾಷ್ಟ್ರನಿಂದ ಬೇಡಲ್ಪಟ್ಟವನಾಗಿ ತನ್ನ ವಿಶ್ವರೂಪವನ್ನು
ಮುಚ್ಚಿದನು. ಮತ್ತೆ ಧೃತರಾಷ್ಟ್ರನನ್ನು ಕುರುಡನನ್ನಾಗಿಯೇ ಮಾಡಿ, ದುರ್ಯೋಧನನನ್ನು ಲಜ್ಜೆಗೆಟ್ಟವನು, ನೀತಿಗೆಟ್ಟವನು ಎಂದು ಜಗತ್ತಿಗೇ ತೋರಿಸಿ, ಶ್ರೀಕೃಷ್ಣ ಅಲ್ಲಿಂದ ಹೊರಟು ಹೋದನು.
No comments:
Post a Comment