ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 19, 2023

Mahabharata Tatparya Nirnaya Kannada 26-74-78

 

ಪಾರ್ತ್ಥೇ ಪ್ರವಿಷ್ಟೇ ಕುರುಸೈನ್ಯಮದ್ಧ್ಯಂ ದ್ರೋಣೋSವಿಶತ್ ಪಾಣ್ಡವಸೈನ್ಯಮಾಶು ।

ಸ ತದ್ರಥಾನೀಕಮುದಗ್ರವೇಗೈಃ ಶರೈರ್ವಿಧೂಯ ನ್ಯಹನಚ್ಚ ವೀರಾನ್ ॥೨೬.೭೪॥

 

ಅರ್ಜುನನು ಕೌರವ ಸೈನ್ಯ ನಡುವಲ್ಲಿ ಪ್ರವೇಶಮಾಡುತ್ತಿರಲು, ಇತ್ತ ದ್ರೋಣಾಚಾರ್ಯರು ಪಾಂಡವರ ಸೇನೆಯನ್ನು ಹೊಕ್ಕರು. ಅವರು ಪಾಂಡವರ ರಥಿಕರ ಸಮೂಹವನ್ನು ಉಗ್ರವಾದ, ವೇಗವಾದ ಬಾಣಗಳಿಂದ ಹೊಡೆದು ಓಡಿಸಿ, ಬಹಳ ಜನ ಪರಾಕ್ರಮಶಾಲಿಗಳನ್ನು ಕೊಂದರು.

 

ಸ ವೀರವರ್ಯ್ಯಃ ಸ್ಥವಿರೋSಪಿ ಯೂನಾಂ ಯುವೇವ ಮದ್ಧ್ಯೇ ಪ್ರಚಚಾರ ಧನ್ವಿನಾಮ್ ।

ಪ್ರಪಾತಯನ್ ವೀರಶಿರಾಂಸಿ ಬಾಣೈರ್ಯ್ಯುಧಿಷ್ಠಿರಂ ಚಾSಸದದುಗ್ರವೀರ್ಯ್ಯಃ ॥೨೬.೭೫॥

 

ವೀರರಲ್ಲಿಯೇ ಹಿರಿಯರಾದ ಆ ದ್ರೋಣಾಚಾರ್ಯರು ವೃದ್ಧರಾದರೂ ಕೂಡಾ, ಯುವಕರ ಮಧ್ಯದಲ್ಲಿ ಯುವಕನಂತೆ ಹೋರಾಡಿದರು. ಬಾಣಗಳಿಂದ ವೀರರ ತಲೆಗಳನ್ನು ಉರುಳಿಸುತ್ತಾ, ಮಹೋಗ್ರಪರಾಕ್ರಮವುಳ್ಳವರಾಗಿ ಯುಧಿಷ್ಠಿರನನ್ನು ಹೊಂದಿದರು.

 

ನೃಪಗ್ರಹೇಚ್ಛುಂ ತಮವೇತ್ಯ ಸತ್ಯಜಿನ್ನ್ಯವಾರಯದ್ ದ್ರೌಪದಿರಾಶು ವೀರ್ಯ್ಯವಾನ್ ।

ನಿವಾರಿತಸ್ತೇನ ಶಿರಃ ಶರೇಣ ಚಕರ್ತ್ತ ಪಾಞ್ಚಾಲಸುತಸ್ಯ ವಿಪ್ರಃ ॥ ೨೬.೭೬ ॥

 

ಯುಧಿಷ್ಠಿರನನ್ನು ಹಿಡಿಯಬೇಕು ಎಂದು ಬಯಸುವ ದ್ರೋಣಾಚಾರ್ಯರನ್ನು ತಿಳಿದು, ದ್ರುಪದನ ಮಗನಾದ, ವೀರ್ಯವಂತನಾದ ಸತ್ಯಜಿತ್ ಎನ್ನುವವನು ಅವರನ್ನು ಶೀಘ್ರದಲ್ಲಿ ತಡೆದನು. ಅವನಿಂದ ತಡೆಹಿಡಿಯಲ್ಪಟ್ಟ ದ್ರೋಣಾಚಾರ್ಯರು ಸತ್ಯಜಿತನ ತಲೆಯನ್ನು ಬಾಣದಿಂದ ಕತ್ತರಿಸಿದರು.

 

ನಿಹತ್ಯ ತಂ ವೀರತಮಂ ರಣೋತ್ಕಟಂ ಯುಧಿಷ್ಠಿರಂ ಬಾಣಗಣೈಃ ಸಮಾರ್ದ್ದಯತ್ ।

ಸ ಶಕ್ತಿತಸ್ತೇನ ವಿಧಾಯ ಸಙ್ಗರಂ ನಿರಾಯುಧೋ ವ್ಯಶ್ವರಥಃ ಕೃತಃ ಕ್ಷಣಾತ್ ॥ ೨೬.೭೭ ॥

 

ವೀರಗ್ರೇಸರರಾದ ದ್ರೋಣಾಚಾರ್ಯರು ರಣೋತ್ಕಟ ಸತ್ಯಜಿತನನ್ನು ಕೊಂದು, ಯುಧಿಷ್ಠಿರನನ್ನು ಬಾಣಗಳ ಸಮೂಹದಿಂದ ಪೀಡಿಸಿದರು. ಯುಧಿಷ್ಠಿರನಾದರೋ ಶಕ್ತಿ ಇದ್ದಷ್ಟು, ದ್ರೋಣಾಚಾರ್ಯರೊಡನೆ ಯುದ್ಧವನ್ನು ಮಾಡಿದನು. ಅವನು ದ್ರೋಣಾಚಾರ್ಯರಿಂದ ಒಂದು ಕ್ಷಣದಲ್ಲಿ ನಿರಾಯುಧನಾಗಿಯೂ, ಕುದುರೆ-ರಥಗಳನ್ನು ಕಳೆದುಕೊಂಡವನಾಗಿಯೂ  ಮಾಡಲ್ಪಟ್ಟನು.

 

ಸ ಊರ್ಧ್ವಬಾಹುರ್ಭುವಿ ಸಂಸ್ಥಿತೋSಪಿ ಗೃಹೀತುಮಾಜೌ ಗುರೂಣಾSಭಿಪನ್ನಃ ।

ಮಾದ್ರೀಸುತಸ್ಯಾವರಜಸ್ಯ ಯಾನಮಾರುಹ್ಯ ವೇಗಾದಪಜಗ್ಮಿವಾಂಸ್ತತಃ ॥ ೨೬.೭೮ ॥

 

ಆಗ ಧರ್ಮರಾಜನು ಕೈಗಳನ್ನು ಮೇಲೆತ್ತಿ, ಭೂಮಿಯಲ್ಲಿ ಇದ್ದರೂ ಕೂಡಾ ಯುದ್ಧದಲ್ಲಿ ಹಿಡಿಯಲು ದ್ರೋಣಾಚಾರ್ಯರಿಂದ ಅಭಿಮುಖವಾಗಿ ಹೊಂದಲ್ಪಟ್ಟವನಾಗಿ, ಏನೂ ಮಾಡಲು ತೋಚದೇ, ಮಾದ್ರೀಸುತ ಸಹದೇವನ ರಥವನ್ನೇರಿ ಅಲ್ಲಿಂದ ದೂರ ಹೊರಟು ಹೋದನು.

[ಕೈಗಳನ್ನು ಮೇಲೆತ್ತಿ ನಿಲ್ಲುವುದು ಎಂದರೆ- ನನಗೆ ನಿನ್ನ ಹತ್ತಿರ ಯುದ್ಧ ಮಾಡುವ ಬಯಕೆ ಇಲ್ಲ. ಆದರೂ ಯುದ್ಧವನ್ನು ಕರ್ತವ್ಯದಂತೆ ಮಾಡಿದ್ದೇನೆ. ನನ್ನ ಹತ್ತಿರ ಯಾವುದೇ ಆಯುಧವಿಲ್ಲ. ನಾನು ನಿನ್ನನ್ನು ಯಾವುದೇ ರೀತಿಯಲ್ಲಿ ಛಲದಿಂದ ನೋಡುತ್ತಿಲ್ಲ, ಇತ್ಯಾದಿಯನ್ನು ಸೂಚಿಸುವುದು. ಹೀಗೆ ಕೈ ಎತ್ತಿದರೂ ದ್ರೋಣಾಚಾರ್ಯರು ಆಕ್ರಮಿಸಿ ಬಂದಾಗ ಯುಧಿಷ್ಠಿರ ಅವರಿಂದ ತಪ್ಪಿಸಿಕೊಂಡು ಸಹದೇವನ ರಥವನ್ನೇರಿ ಅಲ್ಲಿಂದ ಪಲಾಯನ ಮಾಡಿದನು.]

Mahabharata Tatparya Nirnaya Kannada 26-68-73

ಹತೇಷು ವೀರೇಷು ನಿಜೇಷು ಸಙ್ಘಶೋ ವಿದ್ರಾವಿತೇಷ್ವಾಲುಳಿತೇ ಚ ಸೈನ್ಯೇ ।

ದುರ್ಯ್ಯೋಧನೋ ದ್ರೋಣಮುಪೇತ್ಯ ದೀನಮುವಾಚ ಹಾ ಪಾರ್ತ್ಥ ಉಪೇಕ್ಷಿತಸ್ತ್ವಯಾ ॥೨೬.೬೮॥

 

ತನ್ನ ವೀರರು ಒಟ್ಟೊಟ್ಟಿಗೆ ಸಾಯುತ್ತಿರಲು, ಉಳಿದವರು ಗುಂಪಾಗಿ ಓಡಿಹೋಗುತ್ತಿರಲು, ಸೈನ್ಯವು ಉಲ್ಲೋಲಕಲ್ಲೋಲವಾಗಲು, ದುರ್ಯೋಧನನು ದ್ರೋಣಾಚಾರ್ಯರ ಬಳಿ ಬಂದು, ದೀನನಾಗಿ ಹೇಳಿದ- ‘ಅಯ್ಯೋ, ಅರ್ಜುನನು ನಿಮ್ಮಿಂದ ಉಪೇಕ್ಷಿಸಲ್ಪಟ್ಟಿರುವನು’ ಎಂದು.

 

ಇತೀರಿತೇSಭೇದ್ಯಮಮುಷ್ಯ ವರ್ಮ್ಮ  ಬಧ್ವಾ ಮಹಾಮನ್ತ್ರಬಲಾತ್ ಸ ವಿಪ್ರಃ ।

ಜಗಾದ ಯೇನೈವ ಬಲೇನ ಪಾರ್ತ್ಥೈರ್ವಿರುದ್ಧ್ಯಸೇ ತೇನ ಹಿ ಯಾಹಿ ಫಲ್ಗುನಮ್ ॥೨೬.೬೯॥

 

ಈರೀತಿ ಹೇಳಲ್ಪಟ್ಟ ದ್ರೋಣಾಚಾರ್ಯರು ಮಹಾಮಂತ್ರ ಬಲದಿಂದ ಅವನಿಗೆ ಅಭೇದ್ಯ ಕವಚವನ್ನು ಅಭಿಮಂತ್ರಿಸಿ ಕಟ್ಟಿ, ‘ಎಷ್ಟು ಬಲದಿಂದ ಪಾಂಡವರ ಜೊತೆ ಯುದ್ಧಮಾಡಬಲ್ಲೆಯೋ, ಅಷ್ಟೂ ಬಲದಿಂದ ಅರ್ಜುನನೊಡನೆ ಹೋರಾಡು’ ಎಂದು ಹೇಳಿದರು.

 

ಇತೀರಿತೋ ಧಾರ್ತ್ತರಾಷ್ಟ್ರಃ ಸ ಚಾಪಮಾದಾಯ ಸೌವರ್ಣ್ಣರಥೋಪರಿಸ್ಥಃ ।

ಜಗಾಮ ಪಾರ್ತ್ಥಂ ತಮವಾರಯಚ್ಚ ಶರೈರನೇಕೈರನಲಪ್ರಕಾಶೈಃ ॥೨೬.೭೦॥

 

ಈರೀತಿಯಾಗಿ ಹೇಳಲ್ಪಟ್ಟ ದುರ್ಯೋಧನನು ಬಿಲ್ಲನ್ನು ಹಿಡಿದು, ಬಂಗಾರದ ರಥದಮೇಲೆ ಕುಳಿತವನಾಗಿ, ಅರ್ಜುನನನ್ನು ಹೊಂದಿ, ವಿಚಿತ್ರವಾಗಿರುವ, ಬೆಂಕಿಯಂತೆ ಪ್ರಕಾಶಮಾನವಾದ ತೀಕ್ಷ್ಣವಾಗಿರುವ ಬಾಣಗಳಿಂದ ಅರ್ಜುನನನ್ನು ತಡೆದ.

 

ವಿವ್ಯಾಧ ಪಾರ್ತ್ಥೋSಪಿ ತಮುಗ್ರವೇಗೈಃ ಶರೈರ್ನ್ನ ತೇ ತಸ್ಯ ಚ ವರ್ಮ್ಮಭೇದಮ್ ।

ಚಕ್ರುಸ್ತತೋ ವಾಸವಿರ್ದಿವ್ಯಮಸ್ತ್ರಂ ತದ್ವರ್ಮ್ಮಭೇದಾಯ ಸಮಾದದೇ ರುಷಾ ॥೨೬.೭೧॥

 

ಅರ್ಜುನನೂ ಕೂಡಾ ದುರ್ಯೋಧನನನ್ನು ಉಗ್ರವಾಗಿರುವ, ವೇಗವುಳ್ಳ ಬಾಣಗಳಿಂದ ಹೊಡೆದ. ಆ ಬಾಣಗಳು ದುರ್ಯೋಧನನ ಕವಚದ ತುಂಡರಿಸುವಿಕೆಯನ್ನು ಮಾಡಲಿಲ್ಲ. ಅದರಿಂದ ಸಿಟ್ಟುಗೊಂಡ ಅರ್ಜುನನು ಅಲೌಕಿಕವಾದ ಅಸ್ತ್ರವನ್ನು, ದುರ್ಯೋಧನನ ಕವಚವನ್ನು ಕತ್ತರಿಸಲೆಂದು ಬತ್ತಳಿಕೆಯಿಂದ ತೆಗೆದುಕೊಂಡನು.

 

ಸನ್ಧೀಯಮಾನಂ ತು ಗುರೋಃ ಸುತಸ್ತಚ್ಚಿಚ್ಛೇದ ಪಾರ್ತ್ಥೋSಥ ಸುಯೋಧನಾಶ್ವಾನ್ ।

ಹತ್ವಾ ತಳೇSವಿದ್ಧ್ಯದಥೈನಮುಗ್ರೈರ್ದ್ದ್ರೌಣಿಃ ಶರೈಃ ಪಾರ್ತ್ಥಮವಾರಯದ್ ಯುಧಿ ॥೨೬.೭೨॥

 

ಅರ್ಜುನ ಬಿಲ್ಲಿನಲ್ಲಿ ಬಾಣವನ್ನು ಹೂಡುತ್ತಿರಬೇಕಾದರೆ ಅಶ್ವತ್ಥಾಮನು ಆ ದಿವ್ಯಾಸ್ತ್ರವನ್ನು ಛೇದಿಸಿದನು. ಆಗ  ಅರ್ಜುನನು ಸುಯೋಧನನ ಕುದುರೆಗಳನ್ನು ಕೊಂದು, ಅವನ ಕವಚವಿರದ ಭಾಗದಲ್ಲಿ ಉಗ್ರವಾದ ಬಾಣಗಳಿಂದ ಹೊಡೆದು ಗಾಯಗೊಳಿಸಿದನು. ಆಗ ಅಶ್ವತ್ಥಾಮನು ತನ್ನ ಬಾಣಗಳಿಂದ (ದುರ್ಯೋಧನನ ಮೇಲೆ ಹೆಚ್ಚಿಗೆ ದಾಳಿ ಮಾಡದಂತೆ) ಅರ್ಜುನನನ್ನು ತಡೆದ.

 

ಸ ದ್ರೌಣಿಕರ್ಣ್ಣಪ್ರಮುಖೈರ್ದ್ಧನಞ್ಜಯೋ ಯುಯೋಧ ತೇ ಚೈನಮವಾರಯಞ್ಛರೈಃ ।

ಬಭೂವ ಯುದ್ಧಂ  ತದತುಲ್ಯಮದ್ಭುತಂ ಜಯದ್ರಥಾರ್ತ್ಥೇSದ್ಭುತವೀರ್ಯ್ಯಕರ್ಮ್ಮಣಾಮ್ ॥೨೬.೭೩॥

 

ಆ ಅರ್ಜುನನು ಅಶ್ವತ್ಥಾಮ, ಕರ್ಣ, ಮೊದಲಾದ ಪ್ರಮುಖರಿಂದ ತಡೆಯಲ್ಪಟ್ಟವನಾಗಿ ಯುದ್ಧಮಾಡಿದ. ಜಯದ್ರಥನಿಗಾಗಿ ನಡೆದ ಆ ಯುದ್ಧವು ಆಶ್ಚರ್ಯಾದ್ಭುತವಾಗಿತ್ತು.   

Mahabharata Tatparya Nirnaya Kannada 26-59-67

 

ವಿಜಿತ್ಯ ಹಾರ್ದ್ದಿಕ್ಯಮಥಾಪ್ರಯತ್ನತಃ  ಸ ಇನ್ದ್ರಸೂನುಃ ಪ್ರವಿವೇಶ ತದ್ ಬಲಮ್ ।

ವಿಲೋಳಯಾಮಾಸ ಚ ಸಾಯಕೋತ್ತಮೈರ್ಯ್ಯಥಾ ಗಜೇನ್ದ್ರೋ ನಳಿನೀಂ ಬಲೋದ್ಧತಃ ॥೨೬.೫೯॥

 

ದ್ರೋಣರನ್ನು ದಾಟಿದಮೇಲೆ ಎದುರಾದ ಕೃತವರ್ಮನನ್ನು ಅರ್ಜುನನು ಯಾವುದೇ ಪ್ರಯತ್ನವಿಲ್ಲದೇ ಗೆದ್ದು, ಆ ಕೌರವಸೇನೆಯನ್ನು ಪ್ರವೇಶಿಸಿ, ಉತ್ಕೃಷ್ಟವಾದ ಬಾಣಗಳಿಂದ ಸೇನೆಯನ್ನು ಉಲ್ಲೋಲಕಲ್ಲೋಲ  ಮಾಡಿದ. ಹೇಗೆ ಮದ್ದಾನೆ ಪದ್ಮಗಳುಳ್ಳ ಸರೋವರವನ್ನು ಉಲ್ಲೋಲಕಲ್ಲೋಲ ಮಾಡುತ್ತದೋ ಹಾಗೆ.

 

ಸ ಉಚ್ಚಕಾಶೇSತಿರಥೋ ರಥೋತ್ತಮೇ ಸವಾಸುದೇವೋ ಹರಿಣಾ ಯಥೇನ್ದ್ರಃ ।

ಚಕರ್ತ್ತ ಚೋಗ್ರೋ ದ್ವಿಷತಾಂ ಶಿರಾಂಸಿ ಶರೈಃ ಶರೀರಾನ್ತಕರೈಃ ಸಮನ್ತತಃ ॥೨೬.೬೦॥

 

ಹೇಗೆ ಇಂದ್ರನು ಉಪೇಂದ್ರನಿಂದ ಕೂಡಿದರೆ ಶೋಭಿಸಬೇಕೋ ಹಾಗೆ ಶ್ರೀಕೃಷ್ಣನಿಂದೊಡಗೂಡಿದ ಅರ್ಜುನ ರಥದಲ್ಲಿ ಶೋಭಿಸಿದ. ಶತ್ರುಭಯಂಕರನಾದ ಅರ್ಜುನನು  ಸಿಟ್ಟಿನಿಂದ ಶತ್ರುಗಳ ತಲೆಗಳನ್ನು ಎಲ್ಲೆಡೆಯಿಂದ ಕತ್ತರಿಸಿದನು.

 

ದೃಢಾಯುಮಚ್ಯುತಾಯುಂ ಚ ಹತ್ವಾ ವಿನ್ದಾನುವಿನ್ದಕೌ ।

ಶರಾಭ್ಯಾಂ ಪ್ರೇಷಯಾಮಾಸ ಯಮಾಯ ವಿಜಯೋ ಯುಧಿ ॥೨೬.೬೧॥

 

ಅರ್ಜುನನು ಯುದ್ಧದಲ್ಲಿ ಎರಡು ಬಾಣಗಳಿಂದ ದೃಢಾಯು ಅಚ್ಯುತಾಯುವನ್ನು ಸಂಹರಿಸಿ, ಪುನಃ ವಿನ್ದ-ಅನುವಿನ್ದರನ್ನು ಇನ್ನೆರಡು ಬಾಣಗಳಿಂದ ಯಮಲೋಕಕ್ಕೆ ಕಳುಹಿಸಿದನು.  

 

ಸುದಕ್ಷಿಣಂ ಚ ಕಾಮ್ಬೋಜಂ ನಿಹತ್ಯಾಮ್ಬಷ್ಠಮೇವ ಚ ।

ಶ್ರುತಾಯುಧಂ ನದೀಜಾತಂ ವರುಣಾದಾಸಸಾದ  ಹ ॥೨೬.೬೨॥

 

ಯಸ್ಯಾದಾದ್ ವರುಣೋ ದಿವ್ಯಾಮಮೋಘಾಂ ಮಹತೀಂ ಗದಾಮ್ ।

ಸ ತು ತೇನ ಶರೈಸ್ತೀಕ್ಷ್ಣೈರರ್ಪ್ಪಿತೋ ವಿರಥಂ ಕ್ಷಣಾತ್ ॥೨೬.೬೩॥

 

ಚಕಾರ ಪಾರ್ತ್ಥಸ್ಯ ರಥಮಾರುಹ್ಯಾರಿಧರಾಯ ತಾಮ್ ।

ಗದಾಂ ಚಿಕ್ಷೇಪ ಸಾ ತಸ್ಯ ವಾರುಣೇಃ ಶಿರ ಏವತು ॥೨೬.೬೪॥

 

ಬಿಭೇದ ಶತಧಾ ಶೀರ್ಣ್ಣಮಸ್ತಿಷ್ಕಃ ಸೋSಪತದ್ ಭುವಿ ।

ಅಯುದ್ಧ್ಯನ್ತಂ ಸ್ವಗದಯಾ ಯದಿ ತಾಡಯಸಿ ಸ್ವಯಮ್ ॥೨೬.೬೫॥

 

ತಯಾ ವಿಶೀರ್ಣ್ಣಮಸ್ತಿಷ್ಕೋ ಮರಿಷ್ಯಸಿ ನ ಸಂಶಯಃ ।

ಅಮೋಘಾ ಚಾನ್ಯಥಾ ಸೇಯಂ ಗದಾ ತವ ಭವಿಷ್ಯತಿ ॥೨೬.೬೬॥

 

ಇತ್ಯಬ್ರವೀತ್ ತಂ ವರುಣಃ ಪುರಾ ತೇನ ಸ ಕೇಶವೇ ।

ಅಯುದ್ಧ್ಯತಿ ಗದಾಕ್ಷೇಪಾತ್ ತಯಾ ಶೀರ್ಣ್ಣಶಿರಾ ಅಭೂತ್ ॥೨೬.೬೭॥

 

ಅರ್ಜುನನು ಕಾಮ್ಬೋಜದ  ಸುದಕ್ಷಿಣನನ್ನು ಹಾಗೂ ಅಮ್ಬಷ್ಠನನ್ನೂ ಕೂಡಾ ಸಂಹಾರಮಾಡಿ, ನಂತರ  ವರುಣನಿಂದ ನದಿಯಾಭಿಮಾನಿ ದೇವತೆಗೆ ಹುಟ್ಟಿದ ಶ್ರುತಾಯುಧ ಎನ್ನುವವನನ್ನು ಯುದ್ಧಕ್ಕೆಂದು ಎದುರುಗೊಂಡ.

ಯಾರಿಗೆ ವರುಣನು ಎಂದೂ ವ್ಯರ್ಥವಾಗದ ದೊಡ್ಡ ಅಲೌಕಿಕವಾದ ಗದೆಯನ್ನು ಕೊಟ್ಟಿದ್ದನೋ, ಅಂತಹ ಶ್ರುತಾಯುಧ ಕ್ಷಣದಲ್ಲಿ ಅರ್ಜುನನ ಚೂಪಾದ ಬಾಣಗಳಿಂದ ಗಾಯಗೊಂಡು ವಿರಥನಾದ.   

ವಿರಥನಾದ ಅವನು ಅರ್ಜುನನ ರಥವನ್ನೇರಿ, ಶ್ರೀಕೃಷ್ಣನಿಗೆ ಗದೆಯಿಂದ ಹೊಡೆದ. ಆಗ ಶ್ರುತಾಯುಧನ ತಲೆಯೇ ನೂರು ಚೂರಾಗಿ ಸಿಡಿದುಹೋಯಿತು. ಹೀಗೆ ಪುಡಿಯಾದ ತಲೆಯುಳ್ಳವನಾಗಿ ಅವನು ಭೂಮಿಯಲ್ಲಿ ಬಿದ್ದ.

(ಈರೀತಿ ಆಗಲು ಕಾರಣವೇನೆಂದು ಹೇಳುತ್ತಾರೆ-)

‘ಯುದ್ಧ ಮಾಡದವನನ್ನು ಒಂದುವೇಳೆ ನಿನ್ನ ಗದೆಯಿಂದ ನೀನು ಹೊಡೆದರೆ  ಆಗ ನೀನೇ ಒಡೆದ ತೆಲೆಯುಳ್ಳವನಾಗಿ ಸಾಯುತ್ತೀಯ, ಇದರಲ್ಲಿ ಸಂಶಯವಿಲ್ಲ. ಅನ್ಯತಾ ನಿನ್ನ ಗದೆಯು ವ್ಯರ್ಥವಾಗುವುದಿಲ್ಲ’ ಎಂದು  ವರುಣ ಹಿಂದೆ ಗದೆಯನ್ನು ಕೊಡುವಾಗಲೇ ಹೇಳಿದ್ದ. ಹೀಗಾಗಿ ಯುದ್ಧಮಾಡದಿರುತ್ತಿರುವ  ಕೃಷ್ಣನಲ್ಲಿ ಗದೆಯನ್ನು ಹೊಡೆದುದ್ದರಿಂದ ಶ್ರುತಾಯುಧ ತನ್ನ ತಲೆಯನ್ನೇ ಕಳೆದುಕೊಂಡ.