ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, March 3, 2023

Mahabharata Tatparya Nirnaya Kannada 26-101-111

 

ಕೃನ್ತನ್ ಶರೈಸ್ತಂ ಜಲಸನ್ಧ ಆಗಮದ್ ರಣೇ ಗಜಸ್ಕನ್ಧಗತೋSಭಿಯೋದ್ಧುಮ್ ।

ನಿವಾರಯನ್ತಂ ತಮಸ̐ಹ್ಯವಿಕ್ರಮಂ ನಿಹತ್ಯ ಬಾಣೈಃ ಸಮರೇ ಸ ಸಾತ್ಯಕಿಃ ॥ ೨೬.೧೦೧ ॥

 

ವಿಲೋಳಯಾಮಾಸ ಬಲಂ ಕುರೂಣಾಂ ನಿಘ್ನನ್ ಗಜಸ್ಯನ್ದನವಾಜಿಪತ್ತಿನಃ ।

ಸ ಪಾರ್ವತೀಯಾಂಶ್ಚ ಶಿಲಾಪ್ರವರ್ಷಿಣೋ ನಿಹತ್ಯ ವಿದ್ರಾಪ್ಯ ಚ ಸರ್ವಸೈನಿಕಾನ್ ॥ ೨೬.೧೦೨ ॥

 

ಸಮಾಸದತ್ ಕೇಶವಫಲ್ಗುನೌ ಚ ಬಲೀ ತಮಾರಾSಶು ಚ ಯೂಪಕೇತುಃ ।

ತಯೋರಭೂದ್ ಯುದ್ಧಮತೀವ ಘೋರಂ ಚಿರಂ ವಿಚಿತ್ರಂ ಚ ಮಹದ್ ವಿಭೀಷಣಮ್ ॥ ೨೬.೧೦೩ ॥

 

ಆನೆಯನ್ನೇರಿದ ಜಲಸಂಧ ಎನ್ನುವವನು ಯುದ್ಧಮಾಡಲು ಸಾತ್ಯಕಿಯನ್ನು ಹೊಂದಿದನು. ಪರಾಕ್ರಮಿಯಾಗಿರುವ ಜಲಸಂಧನನ್ನು ಬಾಣಗಳಿಂದ ಕೊಂದ ಸಾತ್ಯಕಿ, ಕೌರವರ ಸೇನೆಯನ್ನು ಉಲ್ಲೋಲಕಲ್ಲೋಲ ಮಾಡಿದನು.  ಹೀಗೆ ಕೌರವರ ಪಡೆಯ ಆನೆ, ಕುದುರೆ, ರಥ, ಕಾಲಾಳುಗಳನ್ನು ನಿಗ್ರಹಿಸುತ್ತಾ, ಕಲ್ಲುಗಳನ್ನು ಹೊಡೆಯುತ್ತಾ ಯುದ್ಧಮಾಡುವ ಪರ್ವತದಲ್ಲಿ ವಾಸಮಾಡುವ ಪಾರ್ವತೇಯ ನಾಮಕ ಗಣಗಳನ್ನು ಕೊಂದು, ಎಲ್ಲಾ ಸೈನಿಕರನ್ನು ಓಡಿಸಿ, ದೂರದಲ್ಲಿರುವ ಕೃಷ್ಣಾರ್ಜುನರನ್ನು ಹೊಂದಿದನು. ಆಗ ಯೂಪಕೇತು(ಭೂರಿಶ್ರವಸ್ಸು) ಅವನನ್ನು ಎದುರಿಸಿದ. ಅವರಿಬ್ಬರ ನಡುವೆ ಘೋರವಾಗಿರುವ, ವಿಚಿತ್ರವಾಗಿರುವ ಭಯಂಕರ ಯುದ್ಧ ನಡೆಯಿತು.  

 

ಪರಸ್ಪರಂ ತೌ ತುರಗಾನ್ ನಿಹತ್ಯ ವಿಪಾತ್ಯ ಸೂತೌ ಧನುಷೀ ನಿಕೃತ್ಯ ।

ಸಮೀಯತುಶ್ಚರ್ಮ್ಮಮಹಾಸಿಧಾರಿಣೌ ವಿಚಿತ್ರಮಾರ್ಗ್ಗಾನ್ ಯುಧಿ ಸಞ್ಚರನ್ತೌ ॥ ೨೬.೧೦೪ ॥

 

ಅವರಿಬ್ಬರೂ ಪರಸ್ಪರರ ಕುದುರೆಗಳನ್ನು ಸಂಹರಿಸಿ, ಸಾರಥಿಗಳನ್ನು ಕೊಂದುಕೊಂಡು, ಬಿಲ್ಲುಗಳನ್ನೂ ಮುರಿದುಕೊಂಡು, ಕತ್ತಿ ಗುರಾಣಿಗಳನ್ನು ಹಿಡಿದುಕೊಂಡು ಭೂಮಿಯಲ್ಲಿ ನಿಂತು ಚಿತ್ರವಿಚಿತ್ರವಾಗಿ ಯುದ್ಧಮಾಡಲಾರಂಭಿಸಿದರು.

 

ಸ ಸೌಮದತ್ತಿರ್ಬ್ಭುವಿ ಸಾತ್ಯಕಿಂ ರಣೇ ನಿಪಾತ್ಯ ಕೇಶೇಷು ಚ ಸಮ್ಪ್ರಗೃಹ್ಯ ।

ಪದಾSಸ್ಯ ವಕ್ಷಸ್ಯಧಿರುಹ್ಯ ಖಡ್ಗಮುದಗ್ರಹೀದಾಶು ಶಿರೋSಪಹರ್ತ್ತುಮ್ ॥ ೨೬.೧೦೫ ॥

 

ಆ ಭೂರೀಶ್ರವಸ್ಸು ಸಾತ್ಯಕಿಯನ್ನು ಭೂಮಿಯಲ್ಲಿ ಬೀಳಿಸಿ, ಅವನ ಕೂದಲನ್ನು ಹಿಡಿದು, ಕಾಲಿನಿಂದ ಎದೆಯನ್ನು ಮೆಟ್ಟಿ, ಅವನ ತಲೆಯನ್ನು ಕತ್ತರಿಸಲು ಕೈಯನ್ನು ಮೇಲೆತ್ತಿದ.

 

ತದ್ ವಾಸುದೇವಸ್ತು ನಿರೀಕ್ಷ್ಯ ವಿಶ್ವತಶ್ಚಕ್ಷುರ್ಜ್ಜುಗಾದಾSಶು ಧನಞ್ಜಯಂ ರಣೇ ।

ತ್ರಾಯಸ್ವ ಶೈನೇಯಮಿತಿ ಸ್ಮ ಸೋSಪಿ ಭಲ್ಲೇನ ಚಿಚ್ಛೇದ ಭುಜಂ ಪರಸ್ಯ ॥ ೨೬.೧೦೬ ॥

 

ಆಗ ಎಲ್ಲೆಡೆ ಕಣ್ಗಳುಳ್ಳ ಶ್ರೀಕೃಷ್ಣನು ಅದನ್ನು ನೋಡಿ, ಧನಂಜಯನಿಗೆ- ‘ಸಾತ್ಯಕಿಯನ್ನು ರಕ್ಷಿಸು’ ಎಂದ. ಅರ್ಜುನನಾದರೋ ತನ್ನ ಬಾಣದಿಂದ  ಭೂರೀಶ್ರವಸ್ಸಿನ ಭುಜವನ್ನು ಕತ್ತರಿಸಿದ.

 

ಸ ತೇನ ಚೋತ್ಕೃತ್ತಸಖಡ್ಗಬಾಹುರ್ವಿನಿನ್ದ್ಯ ಪಾರ್ತ್ಥಂ ನಿಷಸಾದ ಭೂಮೌ ।

ಪ್ರಾಯೋಪವಿಷ್ಟಃ ಶರಸಂಸ್ತರೇ ಹರಿಂ ದ್ಧ್ಯಾಯನ್ ವಿನಿನ್ದನ್ನಸುರಪ್ರವೇಶಾತ್ ॥ ೨೬.೧೦೭ ॥

 

ಗತೇSಸುರಾವೇಶ ಉತಾತಿಭಕ್ತ್ಯಾ ದ್ಧ್ಯಾಯತ್ಯಮುಷ್ಮಿನ್ ಗರುಡಧ್ವಜಂ ತಮ್ ।

ಶೈನೇಯ ಉತ್ಥಾಯ ನಿವಾರ್ಯ್ಯಮಾಣಃ ಕೃಷ್ಣಾರ್ಜ್ಜುನಾದ್ಯೈರಹರಚ್ಛಿರೋSಸ್ಯ ॥ ೨೬.೧೦೮ ॥

 

ಅರ್ಜುನನ ಬಾಣವಿಶೇಷದಿಂದ ಖಡ್ಗ ಸಮೇತವಾದ ಅವನ ಕೈ ಕತ್ತರಿಸಿ ಹೋಯಿತು. ಆಗ ಭೂರಿಶ್ರವಸ್ಸು ಅರ್ಜುನನನ್ನು ಬಯ್ಯುತ್ತಾ, ಬಾಣಗಳನ್ನು ಚಾಪೆಯಂತೆ ಹಾಸಿ, ಪ್ರಾಯೋಪವೇಶದಿಂದ ಕುಳಿತು, ಅಸುರಪ್ರವೇಶದಿಂದ ಕೃಷ್ಣನನ್ನು ಬಯ್ಯುತ್ತಾ, ನಂತರ ಅಸುರಾವೇಶ ಕಳೆದುಕೊಂಡು ಗರುಡಧ್ವಜ ಭಗವಂತನನ್ನು ಧ್ಯಾನಿಸಿದ. ಆಗ ಸಾತ್ಯಕಿಯು ಮೇಲೆದ್ದು, ಕೃಷ್ಣ-ಅರ್ಜುನ ಮೊದಲಾದವರಿಂದ ತಡೆಯಲ್ಪಟ್ಟರೂ,  ಭೂರೀಶ್ರವಸ್ಸಿನ ತಲೆಯನ್ನು ಕತ್ತರಿಸಿ ಹಾಕಿದ.

 

ತದಾ ಸ್ವಕೀಯಂ ರಥಮೇತದರ್ತ್ಥಂ ಕ್ಲ್ ಪ್ತಂ ದದೌ ಸಾತ್ಯಕಯೇ ಸಸೂತಮ್ ।

ಕೃಷ್ಣೋSಥ ಪಾರ್ತ್ಥಸ್ಯ ಹಯಾಸ್ತೃಷಾSರ್ದ್ದಿತಾಸ್ತದಾSಸೃಜದ್ ವಾರುಣಾಸ್ತ್ರಂ ಸ ಪಾರ್ತ್ಥಃ ॥ ೨೬.೧೦೯ ॥

 

ಶ್ರೀಕೃಷ್ಣನು ಸಾತ್ಯಕಿಗೋಸ್ಕರ ಸಿದ್ಧಗೊಳಿಸಲ್ಪಟ್ಟ, ಸೂತನಿಂದ(ದಾರುಕನಿಂದ) ಸಹಿತವಾದ ತನ್ನ ರಥವನ್ನು ಕೊಟ್ಟ. ಸ್ವಲ್ಪಕಾಲದ  ನಂತರ ಅರ್ಜುನನ ಕುದುರೆಗಳು ಬಾಯಾರಿದವು. ಆಗ ಅರ್ಜುನ ವರುಣಾಸ್ತ್ರವನ್ನು ಪ್ರಯೋಗಿಸಿದ. 

 

ತೇನೈವ ತೀರ್ತ್ಥಂ ಪರಮಂ ಚಕಾರ ತಥಾSಶ್ವಶಾಲಾಮಪಿ ಬಾಣರೂಪಾಮ್ ।

ತತೋ ವಿಮುಚ್ಯಾತ್ರ ಹಯಾನಪಾಯಯದ್ಧರಿಸ್ತದಾ ವಾಸವಿರಾರ್ದ್ಧಯತ್ ಪರಾನ್ ॥ ೨೬.೧೧೦ ॥

 

ಅರ್ಜುನನು ವರುಣಾಸ್ತ್ರದಿಂದ ಒಂದು ಸರೋವರವನ್ನು ನಿರ್ಮಿಸಿದನು. ಹಾಗೇ ಬಾಣಗಳಿಂದ ಒಂದು ಅಶ್ವಶಾಲೆಯನ್ನೂ ನಿರ್ಮಿಸಿದನು. ಅದಾದಮೇಲೆ ಶ್ರೀಕೃಷ್ಣನು ಕುದುರೆಗಳನ್ನು ರಥದಿಂದ ಬಿಡಿಸಿ, ಅಶ್ವಶಾಲೆಯಲ್ಲಿ  ಕುದುರೆಗಳಿಗೆ ನೀರು ಕುಡಿಸಿದನು. ಆಗ ಅರ್ಜುನನು ಭೂಮಿಯಲ್ಲೇ ನಿಂತು ಶತ್ರುಗಳನ್ನು ನಿಗ್ರಹಿಸಿದನು.

[ಅರ್ಜುನ ಕುದುರೆಗಳಿಗಾಗಿ ಅಸ್ತ್ರದಿಂದ ಸರೋವರ ನಿರ್ಮಿಸಿರುವುದನ್ನು ಮಹಾಭಾರತದಲ್ಲಿ ಹೀಗೆ ವರ್ಣಿಸಿದ್ದಾರೆ: ‘ಇದಮಸ್ತೀತ್ಯಸಮ್ಭ್ರಾನ್ತೋ ಬ್ರುವನ್ನಸ್ತ್ರೇಣ ಮೇದಿನೀಮ್ । ಅಭಿಹತ್ಯಾರ್ಜುನಶ್ಚಕ್ರೇ ವಾಜಿಪಾನಂ ಸರಃ ಶುಭಮ್’ (ದ್ರೋಣಪರ್ವ ೯೯.೬೦)]

 

ಯುಯೋಜ ಕೃಷ್ಣಸ್ತುರಗಾನ್ ರಥೇ ಪುನರ್ಗ್ಗತಶ್ರಮಾನುದ್ಧೃತಸಾಯಕಾನ್ ಪ್ರಭುಃ ।

ಪ್ರಚೋದಿತೇ ತೇನ ರಥೇ ಸ್ಥಿತಃ ಪುನಸ್ತಥೈವ ಬೀಭತ್ಸುರರೀನಯೋಧಯತ್ ॥ ೨೬.೧೧೧ ॥

 

ಶ್ರೀಕೃಷ್ಣನು ಕುದುರೆಗಳ ಮೈಯಲ್ಲಿ ಚುಚ್ಚಿದ್ದ ಬಾಣಗಳನ್ನು ತೆಗೆದು, ಅವುಗಳ  ಮೈಯನ್ನು ಪ್ರೀತಿಯಿಂದ ನೇವರಿಸಿ, ದಣಿವಾರಿದ ಕುದುರೆಗಳನ್ನು ರಥಕ್ಕೆ ಹೂಡಿದ. ಕೃಷ್ಣನಿಂದ ಪ್ರಚೋದಿತವಾದ ಆ ರಥದಲ್ಲಿ ನಿಂತ ಅರ್ಜುನನು ಮತ್ತೆ ಹಿಂದಿನಂತೆಯೇ ಯುದ್ಧಮಾಡಿದ.

Monday, February 20, 2023

Mahabharata Tatparya Nirnaya Kannada 26-89-100

 

ತದಾSSಸದತ್ ಕೃತವರ್ಮ್ಮಾ ರಥೇನ ಸೇನಾಂ ಪಾಣ್ಡೂನಾಂ ಶರವರ್ಷಂ ಪ್ರಮುಞ್ಚನ್ ।

ದದೌ ವರಂ ತಸ್ಯ ಹಿ ಪೂರ್ವಮಚ್ಯುತಃ ಪ್ರೀತಃ ಸ್ತುತ್ಯಾ ಸರ್ವಜಯಂ ಮೂಹೂರ್ತ್ತೇ ॥ ೨೬.೮೯ ॥

 

ಇನ್ನೊಂದು ಕಡೆಯಿಂದ ಕೃತವರ್ಮನು ರಥವನ್ನೇರಿ, ಬಾಣಗಳನ್ನು ಬಿಡುತ್ತಾ ಪಾಂಡವರ ಸೇನೆಯ ಬಳಿಗೆ ಬಂದನು. ಹಿಂದೆ ಶ್ರೀಕೃಷ್ಣ ಪರಮಾತ್ಮನು ಈ ಕೃತವರ್ಮನ ಸ್ತೋತ್ರದಿಂದ ಪ್ರೀತನಾಗಿ ಒಂದು   ಮುಹೂರ್ತ ಕಾಲದಲ್ಲಿ  ಎಲ್ಲರನ್ನೂ ಗೆಲ್ಲಬಲ್ಲ  ವರವನ್ನು ಅವನಿಗೆ ಕೊಟ್ಟಿರುವನು.

 

ಸ ತೇನ ಪಾಞ್ಚಾಲಗಣಾನ್ ವಿಜಿಗ್ಯೇ ಯಮೌ ಚ ಭೀಮಸ್ಯ ಪುರೋSಥ ತಂ ಚ ।

ವಿವ್ಯಾಧ ಬಾಣೇನ ಸ ವಾಸುದೇವವರಂ ವಿಜಾನನ್ ನ ತದಾ ಸಮಭ್ಯಯಾತ್ ॥ ೨೬.೯೦ ॥

 

ಕೃತವರ್ಮನು ವರಬಲದಿಂದ ಧೃಷ್ಟದ್ಯುಮ್ನ ಮೊದಲಾದವರನ್ನು, ನಕುಲ-ಸಹದೇವರನ್ನೂ ಕೂಡಾ ಭೀಮಸೇನನ ಮುಂದೆಯೇ ಗೆದ್ದ ಮತ್ತು ಭೀಮಸೇನನನ್ನೂ ಕೂಡಾ ತನ್ನ ಬಾಣದಿಂದ ಹೊಡೆದ. ಆದರೆ ಭೀಮಸೇನನು ಕೃಷ್ಣನ ವರವನ್ನು ತಿಳಿದು, ಆ ಮುಹೂರ್ತದಲ್ಲಿ  ಕೃತವರ್ಮನನ್ನು ಎದುರಿಸಲಿಲ್ಲ.

[‘ಜಿತ್ವಾ ಪಾಣ್ಡುಸುತಾನ್ ಯುದ್ಧೇ ಭೀಮಸೇನಪುರೋಗಮಾನ್ । ಹಾರ್ದಿಕ್ಯಃ ಸಮರೇSತಿಷ್ಠದ್ ವಿಧೂಮ ಇವ ಪಾವಕಃ’ (ದ್ರೋಣಪರ್ವ ೧೧೪.೧೦೨)- ಭೀಮಸೇನನ ಮುಂದಾಳತ್ವದಲ್ಲಿದ್ದ ಪಾಂಡುಸುತರನ್ನು ಯುದ್ಧದಲ್ಲಿ ಗೆದ್ದ ಹಾರ್ದಿಕ್ಯನು ಧೂಮರಹಿತ ಬೆಂಕಿಯಂತೆ ಪ್ರಕಾಶಿಸಿದನು]

 

 

ವಿನೈವ ವೃಷ್ಣೀನ್ ವಿಜಯೇ ವರೋ  ಯದಮುಷ್ಯ ತೇನಾಸ್ಯ ಹಯಾನ್ ಸ ಸಾತ್ಯಕಿಃ ।

ನಿಹತ್ಯ ಬಾಣೈರತುದತ್ ಸ ಯಾನಮನ್ಯತ್ ಸಮಾಸ್ಥಾಯ ತತೋSಪಜಗ್ಮಿವಾನ್ ॥ ೨೬.೯೧ ॥

 

‘ಯಾದವರನ್ನು ಬಿಟ್ಟು ಎಲ್ಲರನ್ನೂ ಒಂದು ಮುಹೂರ್ತ ಗೆಲ್ಲಬಲ್ಲೆ’ ಎನ್ನುವ ವರ ಅದಾಗಿದ್ದುದರಿಂದ  ಯಾದವ ವೀರನಾದ ಸಾತ್ಯಕಿಯು ಕೃತವರ್ಮನನ್ನು ಎದುರಿಸಿ, ಅವನ ಕುದುರೆಗಳನ್ನು ಕೊಂದು, ಬಾಣಗಳಿಂದ ಹಿಂಸೆಗೊಳಿಸಿದ. ಆಗ ಕೃತವರ್ಮ ಇನ್ನೊಂದು ರಥವನ್ನೇರಿ ರಣಭೂಮಿಯಿಂದ ಪಲಾಯನ ಮಾಡಿದನು.

 

ತದಾ ಹರಿಃ ಪಾಞ್ಚಜನ್ಯಂ ಸುಘೋಷಮಾಪೂರಯಾಮಾಸ ಜಯೇSಭಿಯುದ್ಧ್ಯತಿ ।

ಕರ್ಣ್ಣಾದಿಭಿರ್ದ್ದ್ರೌಣಿಮುಖೈ ರಿಪೂಣಾಂ ಬಲಪ್ರಹಾಣಾಯ ಪರಃ ಪರೇಭ್ಯಃ ॥ ೨೬.೯೨ ॥

 

ಇತ್ತ ರಣಭೂಮಿಯ ಇನ್ನೊಂದು ಭಾಗದಲ್ಲಿ ಅರ್ಜುನನು ಅಶ್ವತ್ಥಾಮಾಚಾರ್ಯರೇ ಪ್ರಧಾನರಾಗಿರುವ,  ಕರ್ಣನೇ ಮೊದಲಾದವರಿಂದ ಯುದ್ಧಮಾಡುತ್ತಿರಲು, ಶ್ರೀಕೃಷ್ಣ ಪರಮಾತ್ಮನು ಶತ್ರುಗಳ ಬಲದ ನಾಶಕ್ಕಾಗಿ ಚೆನ್ನಾದ ಧ್ವನಿಯುಳ್ಳ ಪಾಂಚಜನ್ಯವನ್ನು ಮೊಳಗಿಸಿದನು. 

 

‘ಸ ಪಾಞ್ಚಜನ್ಯೋSಚ್ಯುತವಕ್ತ್ರವಾಯುನಾ ಭೃಶಂ ಸುಪೂರ್ಣ್ಣೋದರನಿಸ್ಸೃತಧ್ವನಿಃ ।

ಜಗದ್ ವಿರಿಞ್ಚೇಶಸುರೇನ್ದ್ರಪೂರ್ವಕಂ ಪ್ರಕಮ್ಪಯಾಮಾಸ ಯುಗಾತ್ಯಯೇ ಯಥಾ’ ॥ ೨೬.೯೩ ॥

 

ಶ್ರೀಕೃಷ್ಣನ ಮುಖದ ಗಾಳಿಯಿಂದ ಚೆನ್ನಾಗಿ ತನ್ನ ಒಡಲನ್ನು ತುಂಬಿಕೊಂಡ ಆ ಪಾಂಚಜನ್ಯದಿಂದ ಹೊರ ಹೊಮ್ಮಿದ ಧ್ವನಿಯು, ಪ್ರಳಯಕಾಲದಲ್ಲಿ ಹೇಗೋ ಹಾಗೇ, ಬ್ರಹ್ಮಾದಿಗಳನ್ನೊಳಗೊಂಡ ಜಗತ್ತನ್ನು ಅಲ್ಲಾಡುವಂತೆ ಮಾಡಿತು.

 

ಗಾಣ್ಡೀವಘೋಷೇ ಚ ತದಾSಭಿಭೂತೇ ಯುಧಿಷ್ಠಿರೋ ಭೀತಭೀತಸ್ತದೇತ್ಯ ।

ಶೈನೇಯಮೂಚೇ ಪರಸೈನ್ಯಮಗ್ನೇ ಪಾರ್ಥ್ಥೇ ಸ್ವಯಂ ಯುದ್ಧ್ಯತಿ ಕೇಶವಃ ಸ್ಮ  ॥ ೨೬.೯೪ ॥

 

ನ ಶ್ರೂಯತೇ ಗಾಣ್ಡಿವಸ್ಯಾದ್ಯ ಘೋಷಃ ಸಂಶ್ರೂಯತೇ ಪಾಞ್ಚಜನ್ಯಸ್ಯ ಘೋಷಃ ।

ತದ್ ಯಾಹಿ ಜಾನೀಹಿ ತಮದ್ಯ ಪಾರ್ತ್ಥಂ ಯದಿ ಸ್ಮ ಜೀವತ್ಯಸಹಾಯ ಏಷಃ ॥ ೨೬.೯೫ ॥

 

ಶ್ರೀಕೃಷ್ಣ ಪಾಂಚಜನ್ಯವನ್ನು ಊದಿದಾಗ ಜೊತೆಗೆ ಗಾಣ್ಡೀವ ಬಿಲ್ಲಿನ ಶಬ್ದವು ಕೇಳಿಸದೇ ಇರುತ್ತಿರಲು, ಭಯಗೊಂಡ ಯುಧಿಷ್ಠಿರನು ಸಾತ್ಯಕಿಯನ್ನು ಹೊಂದಿ- (ಅರ್ಜುನನಿಗೆ ಏನಾದರೂ ಆಪತ್ತು ಉಂಟಾಗಿದೆಯೋ ಏನೋ ಎನ್ನುವ ದುಗುಡದಿಂದ ಹೇಳುತ್ತಾನೆ:) ‘ಅರ್ಜುನನು ಕೌರವ ಸೇನೆಯಲ್ಲಿ ಮುಳುಗುತ್ತಿರಲು, ಶ್ರೀಕೃಷ್ಣನು ತಾನೇ ಯುದ್ಧ ಮಾಡುತ್ತಿರುವನೇ? ಗಾಣ್ಡೀವದ ಧ್ವನಿ ಈಗ ಕೇಳಿಸುತ್ತಿಲ್ಲ, ಕೇವಲ ಶಂಖದ ಧ್ವನಿ ಮಾತ್ರ ಕೇಳಿಸುತ್ತಿದೆ. ಅದರಿಂದ ನೀನು ಈಗಲೇ ತೆರಳು, ಆ ಅರ್ಜುನನನ್ನು ತಿಳಿ. ಸಹಾಯಕರಹಿತನಾಗಿ  ಅರ್ಜುನ ಬದುಕಿರುವನೋ ಇಲ್ಲವೋ.’

 

ಇತೀರಿತಃ ಸಾತ್ಯಕಿರತ್ರ ವಿಪ್ರಾನ್ ಸಮ್ಪೂಜ್ಯ ವಿತ್ತೈಃ ಪರಮಾಶಿಷಶ್ಚ ।

ಜಯಾಯ ತೇಭ್ಯಃ ಪ್ರತಿಗೃಹ್ಯ ಸೇನಾಮುಖಂ ಯಯೌ ಭೀಮಸೇನಾನುಯಾತಃ ॥ ೨೬.೯೬ ॥

 

ಈರೀತಿಯಾಗಿ ಹೇಳಲ್ಪಟ್ಟ ಸಾತ್ಯಕಿಯು (ಶಿಬಿರಕ್ಕೆ ಬಂದು), ದ್ರವ್ಯಗಳಿಂದ ಬ್ರಾಹ್ಮಣರನ್ನು ಪೂಜಿಸಿ, ಅವರಿಂದ ಜಯಕ್ಕಾಗಿ ಆಶೀರ್ವಾದವನ್ನು ಪಡೆದು, ಭೀಮಸೇನನ ಬೆಂಗಾವಲಿನೊಂದಿಗೆ ಸೈನ್ಯದ ದ್ವಾರವನ್ನು ಕುರಿತು ತೆರಳಿದನು.

 

ಭೀಮಸ್ತು ಸೇನಾಮುಖಮಾಶು ಭಿತ್ತ್ವಾ ಪ್ರಾವೇಶಯದ್ ಯುಯುಧಾನಂ ಚಮೂಂ ತಾಮ್ ।

ಸ ಯುದ್ಧ್ಯಮಾನೋ ಗುರುಣಾSಭ್ಯುಪೇಕ್ಷಿತಃ ಸೂತಂ ನಿಹತ್ಯ ದ್ರಾವಯಾಮಾಸ ಚಾಶ್ವಾನ್ ॥ ೨೬.೯೭ ॥

 

ಭೀಮಸೇನನಾದರೋ ಸೇನೆಯ ಮುಂಭಾಗವನ್ನು ಭೇದಿಸಿ, ಸಾತ್ಯಕಿಯು ಆ ಸೇನೆಯನ್ನು ಪ್ರವೇಶಿಸುವಂತೆ ಅನುವುಮಾಡಿಕೊಟ್ಟನು. ಸಾತ್ಯಕಿಯು ದ್ರೋಣಾಚಾರ್ಯರೊಂದಿಗೆ ಯುದ್ಧಮಾಡಿ ಉಪೇಕ್ಷಿಸಲ್ಪಟ್ಟನು. ಆದರೂ ಸಾತ್ಯಕಿಯು ಅವರ ಸೂತನನ್ನು ಕೊಂದು, ಕುದುರೆಗಳನ್ನು ಓಡುವಂತೆ ಮಾಡಿದನು.    

 

ಬಲಂ ವಿವೃದ್ಧಂ ಚ ತದಾSಸ್ಯ ಸಾತ್ಯಕೇರ್ವಿಪ್ರಾಶೀರ್ಭಿಃ ಕೃಷ್ಣವರಾದಪಿ ಸ್ಮ ।

ಬಲಸ್ಯ ವೃದ್ಧಿರ್ಹಿ ಪುರಾSಸ್ಯ ದತ್ತಾ ಕೃಷ್ಣೇನ ತುಷ್ಟೇನ ದಿನೇ ಹಿ ತಸ್ಮಿನ್ ॥ ೨೬.೯೮ ॥

 

ವ್ಯೂಹವನ್ನು ಪ್ರವೇಶಿಸಿದ ಸಾತ್ಯಕಿಯ ಬಲವು ಬ್ರಾಹ್ಮಣರ ಆಶೀರ್ವಾದದಿಂದಲೂ, ಕೃಷ್ಣನ ವರದಿಂದಲೂ ಬೆಳೆದಿತ್ತು. ಹಿಂದೆ ಅತ್ಯಂತ ಸಂತುಷ್ಟನಾದ ಕೃಷ್ಣನಿಂದ ಸಾತ್ಯಕಿಗೆ ಈ ಒಂದು ದಿವಸದಲ್ಲಿ ಬಲದ ಅಭಿವೃದ್ದಿಯು ವರವಾಗಿ ಕೊಡಲ್ಪಟ್ಟದ್ದಾಗಿತ್ತು.

 

ತತೋ ವಿವೃದ್ಧೋರುಬಲಾತ್ ಸ ಸಾತ್ಯಕಿಃ ಸಂಸ್ಥಾಪ್ಯ ಭೀಮಂ ಪ್ರಯಯೌ ರಥೇನ ।

ತಂ ಬಾಣವರ್ಷೈಃ ಪೃತನಾಂ ಸಮನ್ತಾನ್ನಿಘ್ನನ್ತಮಾಜೌ ಹೃದಿಕಾತ್ಮಜೋSಭ್ಯಯಾತ್ ॥ ೨೬.೯೯ ॥

 

ತದನಂತರ ಬಲವನ್ನು ಚೆನ್ನಾಗಿ ಬೆಳೆಸಿಕೊಂಡ ಸಾತ್ಯಕಿಯು ಭೀಮನನ್ನು ಅಲ್ಲೇ ನಿಲ್ಲಿಸಿ, ರಥದಿಂದ ಮುಂದೆ ಸಾಗಿದನು. ಬಾಣದ ಸಮೂಹದಿಂದ ಎಲ್ಲೆಡೆ ಸೇನೆಯನ್ನು ಕೊಲ್ಲುತ್ತಿರುವ ಸಾತ್ಯಕಿಯನ್ನು ಕೃತವರ್ಮನು ಎದುರುಗೊಂಡ.

 

ತಯೋರಭೂದ್ ಯುದ್ಧಮತೀವ ದಾರುಣಂ ತತ್ರಾಕರೋತ್ ತಂ ವಿರಥಂ ಸ ಸಾತ್ಯಕಿಃ ।

ವಿಜಿತ್ಯ ತಂ ಸಾತ್ಯಕಿರುಗ್ರಧನ್ವಾ ಯಯಾವತೀತ್ಯೈವ ಶಿರಾಂಸಿ ಯೂನಾಮ್ ॥ ೨೬.೧೦೦ ॥

 

ಅವರಿಬ್ಬರಿಗೂ ಅತ್ಯಂತ ಭಯಂಕರವಾದ ಯುದ್ಧ ನಡೆಯಿತು. ಆ ಯುದ್ಧದಲ್ಲಿ ಸಾತ್ಯಕಿಯು ಕೃತವರ್ಮನನ್ನು ರಥಹೀನನನ್ನಾಗಿ ಮಾಡಿದ. ಹೀಗೆ ಕೃತವರ್ಮನನ್ನು ಗೆದ್ದ  ಭಯಂಕರವಾದ ಧನುಸ್ಸುಳ್ಳ ಸಾತ್ಯಕಿಯು, ಯುವಕರ ತಲೆಗಳನ್ನು ಕತ್ತರಿಸುತ್ತಾ ಮುಂದೆ ಸಾಗಿದ.

Sunday, February 19, 2023

Mahabharata Tatparya Nirnaya Kannada 26-79-88

 

ದ್ರೋಣಂ ತತಃ ಶೈಶುಪಾಲಿಃ ಸಪುತ್ರೋ ಜಾರಾಸನ್ಧಿಃ ಕಾಶಿರಾಜಃ ಸಶೈವ್ಯಃ ।

ಸಮಾಸದನ್ ಕೈಕಯಾಶ್ಚೈವ ಪಞ್ಚ ಸಮಾರ್ದ್ದಯನ್ ಬಾಣಗಣೈಶ್ಚ ಸರ್ವಶಃ ॥ ೨೬.೭೯ ॥

 

ತದನಂತರ ಶಿಶುಪಾಲನ ಮಗನಾದ ಧೃಷ್ಟಕೇತು (ಯುಧಿಷ್ಠಿರನ ಪತ್ನಿ ದೇವಕಿಯ ಅಣ್ಣ), ಜರಾಸಂಧನ ಮಗ ಸಹದೇವ, ಭೀಮನ ಮಾವನಾದ ಕಾಶೀರಾಜ, ಶೈಬ್ಯ, ಐದುಜನ ಕೇಕಯರು ದ್ರೋಣಾಚಾರ್ಯರನ್ನು ಎದುರುಗೊಂಡರು ಹಾಗೂ ಎಲ್ಲೆಡೆಯಿಂದ ಬಾಣಗಳಿಂದ ದಾಳಿ ನಡೆಸಿ ಅವರನ್ನು ಪೀಡಿಸಿದರು.

 

ಸ ತಾನ್ ಕ್ರಮೇಣೈವ ನಿಕೃತ್ತಕನ್ಧರಾಞ್ಛರೋತ್ತಮೈರತ್ರ ವಿಧಾಯ ವಿಪ್ರಃ ।

ನಿನಾಯ ಲೋಕಂ ಪರಮರ್ಕ್ಕಮಣ್ಡಲಂ ವ್ರಜನ್ತಿ ನಿರ್ಭಿದ್ಯ ಯಮೂರ್ಧ್ವರೇತಸಃ ॥ ೨೬.೮೦ ॥

 

ಹೀಗೆ ಬಂದ ಅವರೆಲ್ಲರನ್ನೂ ಕ್ರಮವಾಗಿ ಆ ದ್ರೋಣಾಚಾರ್ಯರು ತನ್ನ ಬಾಣಗಳಿಂದ ಕತ್ತರಿಸಲ್ಪಟ್ಟ ಕತ್ತುಳ್ಳವರನ್ನಾಗಿ ಮಾಡಿ, ಸೂರ್ಯಮಂಡಲದ ಆಚೆ ಇರುವ ಲೋಕಕ್ಕೆ ಕಳುಹಿಸಿದರು. ಯಾವ ಲೋಕವನ್ನು ಸನ್ಯಾಸಿಗಳು ಸೂರ್ಯಮಂಡಲವನ್ನು ಭೇದಿಸಿ ಹೋಗುತ್ತಾರೋ, ಆ ಲೋಕವನ್ನು ಅವರಿಗೆ ದ್ರೋಣಾಚಾರ್ಯರು ಹೊಂದಿಸಿಕೊಟ್ಟರು.

 

ವಿಧೂಯಮಾನೇ ಗುರುಣೋರುಸೈನ್ಯೇ ಪೃಥಾಸುತಾನಾಂ ಪೃತನಾಃ ಪರೇಷಾಮ್ ।

ಪ್ರಾಯೋ ರಣೇ ಮಾರುತಸೂನುನೈವ ಹತಪ್ರವೀರಾ ಮೃದಿತಾಃ ಪರಾದ್ರವನ್ ॥೨೬.೮೧॥

 

ಹೀಗೆ ದ್ರೋಣಾಚಾರ್ಯರಿಂದ ಪಾಂಡವರ ಸೈನ್ಯವು ನಾಶಮಾಡಲ್ಪಡುತ್ತಿರಲು, ಅತ್ತ ಕೌರವರ ಸೇನೆಯು ಭೀಮನಿಂದ ತಮ್ಮ ವೀರರನ್ನು ಕಳೆದುಕೊಂಡು, ಪೀಡಿತವಾಗಿ, ಪಲಾಯನ ಮಾಡಿದವು.

 

ಅಲಮ್ಭುಸೋ ನಾಮ ತದೈವ ರಾಕ್ಷಸಃ ಸಮಾಸದನ್ಮಾರುತಿಮುಗ್ರಪೌರುಷಮ್ ।

ಸ ಪೀಡಿತಸ್ತೇನ ಶರೈಃ ಸುತೇಜನೈಃ ಕ್ಷಣಾದದೃಶ್ಯತ್ವಮವಾಪ ಮಾಯಯಾ ॥೨೬.೮೨ ॥

 

ಆಗಲೇ ಅಲಮ್ಭುಸ ಎನ್ನುವ ರಾಕ್ಷಸನು ಉಗ್ರವಾದ ಪರಾಕ್ರಮವುಳ್ಳ ಭೀಮಸೇನನನ್ನು ಹೊಂದಿದನು. ಅವನು ಭೀಮನ ತೀಕ್ಷ್ಣವಾದ ಬಾಣಗಳಿಂದ ನೋವುಂಡು ಕ್ಷಣದಲ್ಲೇ ಮಾಯಾ ವಿದ್ಯೆಯಿಂದ ಅದೃಶ್ಯತ್ವವನ್ನು ಹೊಂದಿದನು.

 

ಸೋSದೃಶ್ಯರೂಪೋSನುಚರಾನಪೀಡಯದ್ ಭೀಮಸ್ಯ ತದ್ ವೀಕ್ಷ್ಯ ಚುಕೋಪ ಮಾರುತಿಃ ।

ಅಸ್ತ್ರಜ್ಞತಾಮಾತ್ಮನಿ ಕೇಶವಾಜ್ಞಯಾ ಸನ್ದರ್ಶಯನ್ನಾಗತಧರ್ಮ್ಮಸಙ್ಕಟಃ ॥೨೬.೮೩ ॥

 

ತ್ವಾಷ್ಟ್ರಾಸ್ತ್ರಮಾದತ್ತ ಸ ಕಾಮ್ಯಕರ್ಮ್ಮಹೀನೋSಪಿ ಭೀಮಸ್ತತ ಉತ್ಥಿಥಾಃ ಶರಾಃ ।

ತೇ ಬಾಣವರ್ಯ್ಯಾಸ್ತದದೃಶ್ಯವೇಧಿನೋ ರಕ್ಷೋ ವಿದಾರ್ಯ್ಯಾSವಿವಿಶುರ್ದ್ಧರಾತಳಮ್ ॥ ೨೬.೮೪ ॥

 

ಅಲಮ್ಭುಸನು ಅದೃಶ್ಯರೂಪನಾಗಿ ಭೀಮಸೇನನ ಬೆಂಗಾವಲು ಪಡೆಯನ್ನು ಹಿಂಸೆ ಮಾಡಿದನು. ಅದನ್ನು ನೋಡಿ, ಭೀಮಸೇನ ಕೋಪಗೊಂಡ. ಪರಮಾತ್ಮನ ಆಜ್ಞೆಯಿಂದ ತನ್ನಲ್ಲಿ ಅಸ್ತ್ರ ವಿದ್ಯೆಯೂ ಇದೇ ಎನ್ನುವುದನ್ನು ಪ್ರಪಂಚಕ್ಕೆ ತೋರಿಸುತ್ತಾ, ಕಾಮ್ಯಕರ್ಮವಿಲ್ಲದ ಭೀಮಸೇನನು ತ್ವಷ್ಟ್ರ ದೇವತಾಕವಾದ ಅಸ್ತ್ರವನ್ನು ತೆಗೆದುಕೊಂಡ. ಆ ಅಸ್ತ್ರದಿಂದ ಮೇಲೆದ್ದ ಬಾಣಗಳು ಯಾರಿಗೂ ಕಾಣದ ಅಲಮ್ಭುಸನನ್ನು ಸೀಳಿಕೊಂಡು ಭೂಮಿಯನ್ನು ಪ್ರವೇಶ ಮಾಡಿತು.

[ಭೀಮಸೇನ ದ್ರೋಣಾಚಾರ್ಯರಲ್ಲಾಗಲೀ  ಅಥವಾ ಇನ್ನೆಲ್ಲೋ ಅಸ್ತ್ರವಿದ್ಯೆ ಕಲಿತ  ವಿವರ ನಮಗೆ ಕಾಣಸಿಗುವುದಿಲ್ಲ. ಆದರೆ ಇಲ್ಲಿ ಅವನು ಅಸ್ತ್ರವನ್ನು ಅನುಸಂಧಾನ ಮಾಡಿದ ಎಂದು ಹೇಳಿದ್ದಾರೆ. ಹೌದು, ಭೀಮ ಅಸ್ತ್ರವನ್ನು ಕಲಿಯಲಿಲ್ಲ. ಆದರೆ ಪ್ರತಿಭೆ ಇರುವುದರಿಂದ ಅಸ್ತ್ರದ ಮಂತ್ರ ಗೊತ್ತಿತ್ತು. ಕಾಮ್ಯಕರ್ಮ ಮಾಡದ ಭೀಮಸೇನ ಆ ಮಂತ್ರಗಳನ್ನು ಉಪಯೋಗಿಸುತ್ತಿರಲಿಲ್ಲ ಅಷ್ಟೇ. ಮಹಾಭಾರತದಲ್ಲಿ ಭೀಮಸೇನ ಅಸ್ತ್ರಪ್ರಯೋಗಿಸುವುದನ್ನು ಹೀಗೆ ವಿವರಿಸಿದ್ದಾರೆ: ‘ಸಾ ರಾಕ್ಷಸವಿಸೃಷ್ಟಾ ತು ಶರವೃಷ್ಟಿಃ ಸುದಾರುಣಾ । ಜಘಾನ ಪಾಂಡುಪುತ್ರಸ್ಯ ಸೈನಿಕಾನ್ ರಣಮೂರ್ಧನಿ’ (ದ್ರೋಣಪರ್ವ ೧೦೮.೩೦) ‘ತತಃ ಕ್ರೋಧಾಭಿತಾಮ್ರಾರಾಕ್ಷೋ ನಿರ್ದಹನ್ನಿವ ಪಾವಕಃ । ಸನ್ದಧೇ ತ್ವಾಷ್ಟ್ರಮಸ್ತ್ರಂ ಸ ಸ್ವಯಂ ತ್ವಷ್ಟೇವ  ಮಾರುತಿಃ’ (೩೮) ] 

 ವಿವರ ನಮಗೆ ಕಾಣಸಿಗುವುದಿಲ್ಲ

ತದ್ಧನ್ಯಮಾನಂ ಪ್ರವಿಹಾಯ ಭೀಮಮಪಾದ್ರವದ್ ದೂರತರಂ ಸುಭೀತಮ್ ।

ತತಸ್ತು ಭೀಮೋ ದ್ವಿಷತಾಂ ವರೂಥಿನೀಂ ವಿದ್ರಾವಯಾಮಾಸ ಶರೈಃ ಸುಮುಕ್ತೈಃ ॥ ೨೬.೮೫ ॥

 

ಆ ರಾಕ್ಷಸನು ಭೀಮನಿಂದ ಪೆಟ್ಟು ತಿಂದು, ಭೀಮನನ್ನು ಬಿಟ್ಟು, ಅತಿ ಭಯಗೊಂಡು ಬಹಳ ದೂರ ಓಡಿಹೋದನು. ತದನಂತರ ಭೀಮಸೇನನು ಶತ್ರುಗಳ ಸೇನೆಯನ್ನು ಉತ್ಕೃಷ್ಟವಾದ ಬಾಣಗಳಿಂದ ಓಡಿಸಿದನು.

[ತದಸ್ತ್ರಂ ಪ್ರೇರಿತಂ ತೇನ ಭೀಮಸೇನೇನ ಸಂಯುಗೇ ರಾಕ್ಷಸಸ್ಯ ಮಹಾಮಾಯಾಂ ಹತ್ವಾ ರಾಕ್ಷಸಮಾರ್ಧಯತ್’ (ದ್ರೋಣಪರ್ವ ೧೦೮.೪೦)- ರಾಕ್ಷಸನ ಮಾಯೆಯನ್ನು ಯಾವುದೇ ಶ್ರಮವಿಲ್ಲದೇ ಭೀಮಸೇನ ನಾಶಮಾಡಿದನು]

 

ತದೈವ ಕೃಷ್ಣಾತನಯಾಃ ಸಮೇತಾ ಜಘ್ನುಃ ಶಲಂ ಸಂಯತಿ ಸೌಮದತ್ತಿಮ್ ।

ಅಲಮ್ಭುಸಂ ಪ್ರಾಪ ತದಾ ಘಟೋತ್ಕಚಃ ಪರಸ್ಪರಂ ತೌ ರಥಿನಾವಯುದ್ಧ್ಯತಾಮ್ ॥ ೨೬.೮೬ ॥

 

ಆಗಲೇ ದ್ರೌಪದಿಯ ಮಕ್ಕಳು ಒಟ್ಟುಗೂಡಿ ಸೋಮದತ್ತನ ಮಗನಾದ ಶಲನನ್ನು ಯುದ್ಧದಲ್ಲಿ ಕೊಂದುಹಾಕಿದರು. ಆಗ ಘಟೋತ್ಕಚನು  ಅಲಮ್ಭುಸನನ್ನು ಎದುರುಗೊಂಡನು. ಅವರಿಬ್ಬರೂ ಪರಸ್ಪರ ಯುದ್ಧಮಾಡಲಾರಂಭಿಸಿದರು.

 

 

ಘಟೋತ್ಕಚಸ್ತಂ ವಿರಥಂ ವಿಧಾಯ ಖಸ್ಥಂ ಖ ಏವಾಭಿಯುಯೋಧ ಸಂಸ್ಥಿತಃ ।

ತತಸ್ತು ತಂ ಭೀಮಸುತೋ ನಿಗೃಹ್ಯ ನಿಪಾತ್ಯ ಭೂಮೌ ಪ್ರದದೌ ಪ್ರಹಾರಮ್ ॥ ೨೬.೮೭ ॥

 

ಪದಾ ಶಿರಸ್ಯೇವ ಸ ಪಿಷ್ಟಮಸ್ತಕೋ ಮಮಾರ ಮದ್ಧ್ಯೇ ಪೃಥಿವೀಪತೀನಾಮ್ ।

ತಸ್ಮಿನ್ ಹತೇ ಭೈಮಸೇನಿಃ ಕುರೂಣಾಂ ವ್ಯದ್ರಾವಯದ್ ರಥವೃನ್ದಂ ಸಮನ್ತಾತ್ ॥ ೨೬.೮೮ ॥

 

ಘಟೋತ್ಕಚನು ಅಲಮ್ಭುಸನನ್ನು ರಥಹೀನನನ್ನಾಗಿ ಮಾಡಿ ಆಕಾಶದಲ್ಲಿರುವ ಅವನೊಂದಿಗೆ  ಆಕಾಶದಲ್ಲಿಯೇ ನಿಂತು ಯುದ್ಧಮಾಡಿದನು. ಕೆಲವು ಹೊತ್ತು ಯುದ್ಧವಾದಮೇಲೆ ಘಟೋತ್ಕಚನು ಅಲಮ್ಭುಸನನ್ನು ನಿಗ್ರಹಿಸಿ, ಭೂಮಿಯಲ್ಲಿ ಬೀಳಿಸಿ, ಕಾಲಿನಿಂದ ಪ್ರಹಾರಮಾಡಿದನು. ಆಗ ಚೂರು-ಚೂರಾದ ತಲೆಯುಳ್ಳವನಾದ ಅಲಮ್ಭುಸನು ರಾಜರ ಮಧ್ಯದಲ್ಲಿ ಸತ್ತುಹೋದನು. ಅವನು ಸಾಯುತ್ತಿರಲು ಭೀಮಸೇನನ ಮಗನಾದ ಆ ಘಟೋತ್ಕಚನು ಅವನ ಬೆಂಗಾವಲು ಪಡೆಯನ್ನು ಓಡಿಸಿದನು.