ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 7, 2023

Mahabharata Tatparya Nirnaya Kannada 30-59-67

 

ಸಮಾಧಿವಿರತೋದಙ್ಕಪರಿಪೃಷ್ಟಃ ಪಥಿ ಪ್ರಭುಃ ।

ಹತಂ ದುರ್ಯ್ಯೋಧನಂ ಪ್ರಾಹ ಸಭ್ರಾತೃಸುತಸೈನಿಕಮ್ ॥ ೩೦.೫೯ ॥

 

ದ್ವಾರಕೆಗೆ ತೆರಳುತ್ತಿರುವ ದಾರಿಯಲ್ಲಿ ಸಮಾಧಿಯಿಂದ ಹೊರಗೆ ಬಂದ ಉದಙ್ಕನೆಂಬ ಋಷಿಯಿಂದ ದುರ್ಯೋಧನನ ಬಗೆಗೆ ಕೇಳಲ್ಪಟ್ಟ ಶ್ರೀಕೃಷ್ಣ ಪರಮಾತ್ಮನು, ‘ದುರ್ಯೋಧನನು ತನ್ನ ಸೈನಿಕರು, ಮಕ್ಕಳು ಹಾಗೂ ಸಹೋದರರ ಜೊತೆಗೆ ಸತ್ತಿದ್ದಾನೆ’ ಎಂದು ಅವನಿಗೆ ಹೇಳಿದನು.

[ಹಿನ್ನೆಲೆ: ಉದಙ್ಕ ಎನ್ನುವ ಒಬ್ಬ ಋಷಿ ಇದ್ದ. ಅವನು ದುರ್ಯೋಧನನ ಗುರು. ಅವನು ಸಾತ್ವಿಕ. ಆದರೆ ದುರ್ಯೋಧನನ ಮೇಲೆ ಅವನಿಗೆ ಉತ್ಕಟವಾದ ಪ್ರೀತಿ ಇತ್ತು. ತಪಸ್ಸು ಮಾಡುತ್ತಾ ಸಮಾಧಿಸ್ಥಿತಿಯಲ್ಲಿ ಅವನಿದ್ದ. ಕೃಷ್ಣ ದ್ವಾರಕೆಗೆ ಬರುತ್ತಿರುವಾಗ ಅವನಿಗೆ ದಾರಿಯಲ್ಲಿ ಉದಙ್ಕ ಸಿಕ್ಕಿದ ಮತ್ತು ಅವನು ಕೃಷ್ಣನನ್ನು ಕುರಿತು ಮಾತನಾಡಿದ]

 

ತಂ ಶಿಷ್ಯವಧಕೋಪೇನ ಶಪ್ತುಮಾತ್ಮಾನಮುದ್ಯತಮ್ ।

ಕೇಶವೋSಶಮಯದ್ ವಾಕ್ಯೈರ್ವಿಶ್ವರೂಪಂ ಪ್ರದರ್ಶ್ಯ ಚ ॥ ೩೦.೬೦ ॥

 

ನನ್ನ ಶಿಷ್ಯನಾಗಿರುವ ದುರ್ಯೋಧನನನ್ನು ಕೊಂದಿದ್ದೀಯ ಎನ್ನುವ ಸಿಟ್ಟಿನಿಂದ ಉದಙ್ಕ ಕೃಷ್ಣನಿಗೇ ಶಾಪಕೊಡಲು ಸಿದ್ದನಾದ. ಆಗ ಶ್ರೀಕೃಷ್ಣ ಅವನಿಗೆ ತನ್ನ ವಿಶ್ವರೂಪವನ್ನು ತೋರಿಸಿ, ತನ್ನ ಯುಕ್ತಿಯುಕ್ತವಾದ ಮಾತುಗಳಿಂದ ಅವನನ್ನು ಸಮಾಧಾನಗೊಳಿಸಿದ.

 

[ದೇವರು ಉದಙ್ಕನ  ಶಾಪದ ಭಯದಿಂದ ವಿಶ್ವರೂಪ ತೋರಿಸಿರುವುದಲ್ಲ. ಅದರ ಹಿಂದಿನ ಕಾರಣವೇನು ಎನ್ನುವುದನ್ನು ವಿವರಿಸುತ್ತಾರೆ-]

 

ಮದ್ಭಕ್ತೋ ನಿತರಾಮೇಷ ಮದಾರಾಧನತತ್ಪರಃ ।

ಮಾಮವಜ್ಞಾಯ ನಿರಯಂ ಮಾSನುತ್ಥಾನಂ ವ್ರಜೇದಿತಿ ॥ ೩೦.೬೧ ॥

 

ಕೃಪಯಾ ವಾಸುದೇವೇನ ಬೋಧಿತಃ ಶಾನ್ತಮಾನಸಃ ।

ಪಶ್ಚಾತ್ತಾಪಾಭಿತಪ್ತಾತ್ಮಾ ತಮೇವ ಶರಣಂ ಯಯೌ ॥ ೩೦.೬೨ ॥

 

ಈ ಉದಙ್ಕನು ತನ್ನ ಭಕ್ತನೇ ಆಗಿದ್ದಾನೆ. ನನ್ನನ್ನು ನಿರಂತರ ಆರಾಧನೆ ಮಾಡುತ್ತಿದ್ದಾನೆ. ಇವನು ನನ್ನನ್ನು ತಿರಸ್ಕರಿಸಿ, ಅವಮಾನಮಾಡಿ, ಉದ್ಧಾರವಿಲ್ಲದ ನರಕವನ್ನು ಸೇರಬಾರದು ಎನ್ನುವ ಕೃಪೆಯಿಂದ ವಾಸುದೇವನಿಂದ ಉಪದೇಶಿಸಿಸಲ್ಪಟ್ಟವನಾದ ಉದಙ್ಕ, ಶಾಂತಮನಸ್ಸುಳ್ಳವನಾಗಿ ಪಶ್ಚಾತ್ತಾಪದಿಂದ ಅವನನ್ನೇ ರಕ್ಷಕನಾಗಿ ಹೊಂದಿದನು.   

 

ತಸ್ಮೈ ದೇವೋSಭಯಂ ದತ್ತ್ವಾ ಪ್ರೇಷಯಿಷ್ಯೇSಮೃತಂ ತವ ।

ದಾತುಂ ಶಕ್ರಮಿತಿ ಪ್ರೋಕ್ತ್ವಾ ಯಯೌ ದ್ವಾರವತೀಂ ಪ್ರಭುಃ ॥ ೩೦.೬೩ ॥

 

ತನಗೆ ಅಮೃತಬೇಕೆಂದು ಕೇಳಿದ ಉದಙ್ಕನಿಗೆ ಅಭಯವನ್ನು ಕೊಟ್ಟು, ‘ನಿನಗೆ ಅಮೃತವನ್ನು ಕೊಡುವುದಕ್ಕಾಗಿ ದೇವೇಂದ್ರನನ್ನು ಕಳುಹಿಸಿ ಕೊಡುವೆನು  ಎಂದು ಹೇಳಿ, ದ್ವಾರಕಾಪಟ್ಟಣವನ್ನು ಕುರಿತು ತೆರಳಿದನು.

 

ಅಥಾSದಿದೇಶ ದೇವೇಶಂ ವಾಸುದೇವೋSಮೃತಂ ಮುನೇಃ ।

ದೇಹೀತಿ ವಞ್ಚಯಿಷ್ಯಾಮೀತ್ಯಾಹ ಸೋSಪಿ ಕ್ಷಮಾಪಯನ್ ॥ ೩೦.೬೪ ॥

 

ತದನಂತರ ಇಂದ್ರನನ್ನು ಕುರಿತು ‘ಮುನಿಗೆ ಅಮೃತವನ್ನು ಕೊಡು’ ಎಂದು ಶ್ರೀಕೃಷ್ಣನು ಆದೇಶಮಾಡಿದನು. ಆ ಇಂದ್ರನಾದರೋ, ಕ್ಷಮೆಕೋರುತ್ತಾ, ಮೋಸ ಮಾಡುತ್ತೇನೆ ಎಂದನು.

 

ಓಮಿತ್ಯುಕ್ತೋ ಭಗವತಾ ತತ್ಸ್ನೇಹಾತ್ ಸ ಶಚೀಪತಿಃ ।

ಸುಜುಗುಪ್ಸಿತಮಾತಙ್ಗವೇಷೋ ಭೂತ್ವಾ ಮುನಿಂ ಯಯೌ ॥ ೩೦.೬೫ ॥

 

‘ಹಾಗೇ ಆಗಲಿ’ ಎಂದು ಕೃಷ್ಣನಿಂದ ಹೇಳಲ್ಪಟ್ಟ ಇಂದ್ರನು ಅತ್ಯಂತ ಕೆಟ್ಟ ಬೇಡನ ವೇಷವನ್ನು ಧರಿಸಿ, ಉದಙ್ಕನ ಬಳಿ ತೆರಳಿದನು.

 

ಮೂತ್ರಸ್ರೋತಸಿ ಸೋSಧಶ್ಚ ನಿಧಾಯ ಕಲಶಂ ವಶೀ ।

ಮೂತ್ರಯನ್ನಿವ ತಂ ಪ್ರಾಹ ವಾಸುದೇವಃ ಸುಧಾಮಿಮಾಮ್ ॥ ೩೦.೬೬ ॥

 

ಮಹರ್ಷೇ ಪ್ರೇಷಯಾಮಾಸ ತವಾರ್ತ್ಥೇ ತತ್ ಪಿಬೇತಿ ಚ ।

ಸ ಮೂತ್ರಮಿತಿ ಮತ್ವಾ ತಂ ಯಾಹೀತ್ಯೇವಾSಹ ಭತ್ಸಯನ್ ॥ ೩೦.೬೭ ॥

 

ಅಮೃತಸಂಬಂಧಿಯಾದ ಕಲಶವನ್ನು ತನ್ನ ಮೂತ್ರದ್ವಾರದಬಳಿ ಇಟ್ಟು, ಇಂದ್ರಿಯವನ್ನು ನಿಗ್ರಹದಲ್ಲಿಟ್ಟುಕೊಂಡ ಇಂದ್ರನು, ಕಲಶದಲ್ಲಿ ಮೂತ್ರ ಮಾಡುತ್ತಿರುವನೋ ಎನ್ನುವಂತೆ ತೋರಿಸುತ್ತಾ, ಉದಙ್ಕನಿಗೆ- ‘ಶ್ರೀಕೃಷ್ಣನು ಈ ಅಮೃತವನ್ನು ನಿನಗಾಗಿ ಕಳುಹಿಸಿದ್ದಾನೆ. ಇದನ್ನು ಕುಡಿ’ ಎಂದು ಹೇಳಿದನು. ಉದಙ್ಕನಾದರೋ, ಅದನ್ನು ಮೂತ್ರವೆಂದು ತಿಳಿದು, ಇಂದ್ರನನ್ನು ಬಯ್ಯುತ್ತಾ, ‘ಇಲ್ಲಿಂದ ಹೊರಟುಹೋಗು’  ಎಂದನು.

Mahabharata Tatparya Nirnaya Kannada 30-48-58

 

ಏವಂ ಪಾರ್ತ್ಥಾನ್ ಪ್ರತಿಷ್ಠಾಪ್ಯ ಶಕ್ರಪ್ರಸ್ಥೇ ತು ಸಾರ್ಜ್ಜುನಃ ।

ಕ್ರೀಡನ್ ದಿವ್ಯಾಃ ಕಥಾಃ ಪ್ರಾಹ ಪುತ್ರಶೋಕಾಪನುತ್ತಯೇ ॥ ೩೦.೪೮ ॥

 

ಈರೀತಿಯಾಗಿ ಶ್ರೀಕೃಷ್ಣಪರಮಾತ್ಮನು ಚೆನ್ನಾಗಿ ಪಾಂಡವರನ್ನು ನೆಲೆಗೊಳಿಸಿ, ಅರ್ಜುನನಿಂದ ಕೂಡಿ  ಇಂದ್ರಪ್ರಸ್ಥದಲ್ಲಿದ್ದು, ವಿಹರಿಸುತ್ತಾ, ಅರ್ಜುನನಿಗೆ ಅವನ ಪುತ್ರಶೋಕ ಕಳೆಯಲೆಂದು  ಅಲೌಕಿಕವಾಗಿರುವ ಕಥೆಗಳನ್ನು ಹೇಳುತ್ತಿದ್ದನು.

 

ಗೀತೋಕ್ತಂ ವಿಸ್ಮೃತಂ ಚಾಸ್ಮೈ ಪುನರ್ವಿಸ್ತರತೋSವದತ್ ।

ವಾಣೀ ಪ್ರಾಣೋ ವಾಸುದೇವ ಇತ್ಯೇತೈರಖಿಲಂ ತತಮ್ ॥ ೩೦.೪೯ ॥

 

ಗೀತೆಯಲ್ಲಿ ತಾನು ಹೇಳಿರುವುದರಲ್ಲಿ ಅರ್ಜುನ ಮರೆತಿರುವುದನ್ನು ಮತ್ತೆ ಕೃಷ್ಣ ವಿಸ್ತಾರವಾಗಿ ಅರ್ಜುನನಿಗೆ ವಿವರಿಸಿ ಹೇಳಿದನು. (ಅದರ ಸಾರವನ್ನು ಇಲ್ಲಿ ಹೇಳುತ್ತಾರೆ-) ಇಡೀ ಜಗತ್ತು ಭಾರತೀದೇವಿ, ಮುಖ್ಯಪ್ರಾಣ, ವಾಸುದೇವ ಎನ್ನುವ ಈ ಮೂವರಿಂದ ವ್ಯಾಪಿಸಲ್ಪಟ್ಟಿದೆ.

 

ಸರ್ವೋತ್ತಮತ್ವಮೇತೇಷಾಂ ಸರ್ವಮೇತದ್ವಶೇ ಜಗತ್ ।

ಉತ್ತರೋತ್ತರಮೇತೇSಪಿ ಗುಣೋಚ್ಚಾಸ್ತದ್ವಶೇSಪರೇ ॥ ೩೦.೫೦ ॥

 

ಈ ಮೂವರಿಗೆ ಎಲ್ಲರಿಗಿಂತ ಉತ್ತಮತ್ವವಿದೆ. ಈ ಜಗತ್ತು ಇವರ ಅಧೀನದಲ್ಲಿದೆ. ಉತ್ತರೋತ್ತರವಾಗಿ ಇವರು ಗುಣದಲ್ಲಿ ಅಧಿಕರಾಗಿದ್ದಾರೆ ಮತ್ತು ಅವರ ವಶದಲ್ಲಿ ಉಳಿದವರಿದ್ದಾರೆ.

 

ಇತ್ಥಂ ಹರೇರ್ವಶೇ ಸರ್ವಗುಣಪೂರ್ಣ್ಣಶ್ಚ ಸ ಪ್ರಭುಃ ।

ಏಕ ಏವ ನಚಾನ್ಯೋSಸ್ತಿ ಪ್ರಾಣೋಚ್ಚಾ ತದಧೋ ರಮಾ ॥ ೩೦.೫೧ ॥

 

ಪರಮಾತ್ಮನಾದರೋ ಎಲ್ಲಾ ಗುಣಗಳಿಂದ ಪೂರ್ಣನಾಗಿದ್ದಾನೆ ಮತ್ತು ಅವನಂತೆ ಇನ್ನೊಬ್ಬನಿಲ್ಲ. ಉಳಿದವರೆಲ್ಲರೂ ಕೂಡಾ ಭಗವಂತನ ವಶದಲ್ಲಿದ್ದಾರೆ. ಪ್ರಾಣನಿಗಿಂತ ಮಿಗಿಲಾಗಿರುವ ಲಕ್ಷ್ಮೀದೇವಿಯು ಪರಮಾತ್ಮನಿಗಿಂತ ಕೆಳಗಿದ್ದಾಳೆ.

 

ಸ ಹುತಾಶ ಇತಿ ಪ್ರೋಕ್ತೋ ಹುತಮತ್ತ್ಯಖಿಲಂ ಯತಃ ।

ವಾಕ್ಪ್ರಾಣಮದ್ಧ್ಯಗೋ ನಿತ್ಯಂ ಧಾರಯತ್ಯಖಿಲಂ ಜಗತ್ ॥ ೩೦.೫೨ ॥

 

ಅಂತಹ ಪರಮಾತ್ಮನನ್ನು ಹುತಾಶಃ ಎಂದು ಕರೆಯುತ್ತಾರೆ (ಮುಖ್ಯಪ್ರಾಣ ಮತ್ತು ಭಾರತೀದೇವಿಯರಿಂದ ಕೊಡಲ್ಪಡುವ ಈ ಪ್ರಪಂಚವನ್ನು ಉಣ್ಣುವ ಭಗವಂತ ಹುತಾಶಃ). ಮಾತು ಮತ್ತು ಕ್ರಿಯೆಯಿಂದ ಭಗವಂತ ಇಡೀ ಪ್ರಪಂಚದಲ್ಲಿ  ವ್ಯಾಪ್ತನಾಗಿದ್ದಾನೆ. (ಮಾತಿಗೆ ಅಭಿಮಾನಿನಿ ಭಾರತೀದೇವಿಯಾದರೆ, ಕ್ರಿಯೆಗೆ ಅಭಿಮಾನಿ ಮುಖ್ಯಪ್ರಾಣ. ಅವರಿಬ್ಬರೂ ಕೊಡುವ ಜಗದ ತುತ್ತನ್ನು ಇಟ್ಟುಕೊಳ್ಳುವವನು ಪರಮಾತ್ಮ) ಅಂತಹ ಭಗವಂತ ಇಡೀ ಪ್ರಪಂಚವನ್ನು ಹೊತ್ತು ನಿಂತಿದ್ದಾನೆ.

 

ಸ ಈಶೋ ಬ್ರಹ್ಮರುದ್ರಾದ್ಯಾ ಜೀವಾ ಏವ ಪ್ರಕೀರ್ತ್ತಿತಾಃ ।

ಯೇ ತಸ್ಯಾನಾದಿಸದ್ಭಕ್ತಾ ಮುಕ್ತಿಯೋಗ್ಯಾ ಹಿ ತೇ ಸ್ಮೃತಾಃ ॥ ೩೦.೫೩ ॥

 

ಇಂತಹ ನಾರಾಯಣನು ಎಲ್ಲರ ಒಡೆಯನು. ಬ್ರಹ್ಮ-ರುದ್ರ ಇವರೆಲ್ಲರೂ ‘ಜೀವರೇ’ ಆಗಿದ್ದಾರೆ. ಯಾರು ಅನಾದಿಕಾಲದಿಂದ ಪರಮಾತ್ಮನ ಭಕ್ತರಾಗಿದ್ದಾರೋ, ಅವರು ಮುಕ್ತಿಗೆ ಯೋಗ್ಯರು ಎಂದು ಹೇಳಲ್ಪಟ್ಟಿದ್ದಾರೆ.

 

ಅನಾದಿದ್ವೇಷಿಣೋ ಯೇSಸ್ಮಿಂಸ್ತಮೋಯೋಗ್ಯಾಃ ಸುಪಾಪಿನಃ ।

ಮಿಶ್ರಾ ಮದ್ಧ್ಯಾ ಇತಿ ಜ್ಞೇಯಾಃ ಸಂಸಾರಪರಿವರ್ತ್ತಿನಃ ॥ ೩೦.೫೪ ॥

 

ಪರಮಾತ್ಮನನ್ನು ಅನಾದಿಕಾಲದಿಂದ ದ್ವೇಷಮಾಡುವವರು ಪಾಪಿಗಳು ಮತ್ತು ತಮಸ್ಸಿಗೆ ಯೋಗ್ಯರು. ಸ್ವಲ್ಪ ದ್ವೇಷ, ಸ್ವಲ್ಪ ಭಕ್ತಿ ಉಳ್ಳವರು ಮಧ್ಯಮರು ಎಂದು ಕರೆಯಲ್ಪಡುತ್ತಾರೆ. ಅಂತವರು ಸಂಸಾರದಲ್ಲಿ ಸುತ್ತುತ್ತಿರುತ್ತಾರೆ.

 

ಏವಂ ಜೀವಾಸ್ತ್ರಿಧಾ ಪ್ರೋಕ್ತಾ ಭವನ್ತ್ಯೇತೇ ನಚಾನ್ಯಥಾ ।

ತಾರತಮ್ಯಂ ಚ ವಿಜ್ಞೇಯಂ ಲಿಙ್ಗೈರ್ದ್ದೈಹಿಕಮಾನಸೈಃ ॥ ೩೦.೫೫ ॥

 

ಈರೀತಿಯಾಗಿ ಈ ಬ್ರಹ್ಮಾಂಡದಲ್ಲಿರುವ ಎಲ್ಲಾ ತರದ ಜೀವರೂ ಕೂಡಾ ಮೂರೇ ರೀತಿಯಾಗಿರುವುದು ಹೊರತು ಬೇರೆ ಇಲ್ಲ. ಅವರ ದೈಹಿಕವಾದ ಮತ್ತು ಮಾನಸಿಕವಾದ ಲಕ್ಷಣಗಳಿಂದ ತಾರತಮ್ಯವು ತಿಳಿಯಲ್ಪಡತಕ್ಕದ್ದು.

 

ವಿಷ್ಣೋರ್ಲ್ಲಿಙ್ಗಾನುಸಾರಿತ್ವತಾರತಮ್ಯಾತ್ ತದೀಕ್ಷಣಮ್ ।

ವಿಷ್ಣೋಸ್ತದನುಗಾನಾಂ ಚ ಪ್ರೀತಿಕೃದ್ ಧರ್ಮ್ಮ ಈರಿತಃ ॥ ೩೦.೫೬ ॥

 

ಅಧರ್ಮ್ಮೋSನ್ಯ ಇಯಂ ನಿಷ್ಠಾ ಪ್ರಲಾಪಃ ಕಿಂ ಕರಿಷ್ಯತಿ ।

ಏವಮಾದ್ಯನುಶಾಸ್ಯಾಜಃ ಪಾರ್ತ್ಥಂ ಪಾರ್ತ್ಥೈಃ ಸುಸತ್ಕೃತಃ  ॥ ೩೦.೫೭ ॥

 

ಕಥಞ್ಚಿತ್ ತಾನವಸ್ಥಾಪ್ಯ ಸುದೂರಾನುಗತಾನ್ ಪ್ರಭುಃ ।

ಸುಭದ್ರಾಸಹಿತಃ ಪ್ರಾಯಾದ್ ಯಾನೇನ ದ್ವಾರಕಾಪುರೀಮ್ ॥ ೩೦.೫೮ ॥

 

ಪರಮಾತ್ಮನನ್ನು ಮುಂದೆ ಇಟ್ಟುಕೊಂಡೇ, ಪರಮಾತ್ಮನ ಭಕ್ತಿಗೆ ಅನುಗುಣವಾದ ತಾರತಮ್ಯವನ್ನು ನಾವು ಕಾಣಬೇಕು. ನಾರಾಯಣನಿಗೆ ಮತ್ತು ಅವನ ಭಕ್ತರಿಗೆ ಯಾವುದು ಪ್ರೀತಿಯನ್ನು ಉಂಟುಮಾಡುತ್ತದೋ, ಅದು ಧರ್ಮವಾಗಿರುತ್ತದೆ. ಪ್ರೀತಿಯನ್ನು ಉಂಟುಮಾಡದೇ ಇರುವುದು ಅಧರ್ಮವಾಗಿದೆ. ಇದೇ ನಿಶ್ಚಿತವಾದದ್ದು. ಬೇರೆ ಉಳಿದದ್ದರ ಬಗೆಗೆ ವ್ಯರ್ಥವಾದ ಮಾತು ಏಕೆ? ಇವೇ ಮೊದಲಾಗಿ ಅರ್ಜುನನಿಗೆ ಶ್ರೀಕೃಷ್ಣಪರಮಾತ್ಮನು ಉಪದೇಶಿಸಿ, ಪಾಂಡವರಿಂದ ಚೆನ್ನಾಗಿ ಸತ್ಕೃತನಾಗಿ, ತನ್ನನ್ನು ಬೀಳ್ಕೊಡಲೆಂದು ಬಹಳ ದೂರದ ತನಕ ಹಿಂಬಾಲಿಸಿ ಬಂದ ಎಲ್ಲರನ್ನೂ  ಹೇಗೋ ನಿಲ್ಲುವಂತೆ ಮಾಡಿ, ಸುಭದ್ರೆಯಿಂದ ಕೂಡಿಕೊಂಡು ರಥವನ್ನೇರಿ ದ್ವಾರಕಾ ನಗರಕ್ಕೆ ಮರಳಿದನು.

Sunday, September 3, 2023

Mahabharata Tatparya Nirnaya Kannada 30-33-47

 

ಪಪ್ರಚ್ಛ ತಂ ಕೃಷ್ಣಪುರೋ ಯುಧಿಷ್ಠಿರ ಉದಾರಧೀಃ ।

ಕಲೇ ಕಿಮಿತಿ ಮೇ ರಾಷ್ಟ್ರಂ ವಿಪ್ಲಾವಯಸಿ ದುರ್ಮ್ಮತೇ ॥ ೩೦.೩೩ ॥

 

ಒಳ್ಳೆಯ ಪ್ರಜ್ಞೆಯುಳ್ಳ ಯುಧಿಷ್ಠಿರನು ಶ್ರೀಕೃಷ್ಣನ ಮುಂದೆ ಕಲಿಯನ್ನು ಕುರಿತು ಕೇಳುತ್ತಾನೆ- ‘ಎಲೈ ದುರ್ಬುದ್ಧಿಯುಳ್ಳ ಕಲಿಯೇ, ನನ್ನ ರಾಷ್ಟ್ರವನ್ನು ಏಕಾಗಿ ಹಾಳುಮಾಡುತ್ತಿರುವೆ? 

 

ಇತ್ಯುಕ್ತ ಆಹ ಕಾಲೋSಯಂ ದುರ್ಯ್ಯೋಧನನಿಪಾತನಮ್ ।

ಆರಭ್ಯ ಮಮ ತತ್ರ ತ್ವಂ ಬಲಾದಾಕ್ರಮ್ಯ ತಿಷ್ಠಸಿ ॥ ೩೦.೩೪ ॥

 

ತತೋ ಮಯಾ ಕೃತೋ ರಾಷ್ಟ್ರವಿಪ್ಲವಸ್ತೇ ನರಾಧಿಪ ।

ತಮಾಹ ರಾಜಾ ರಾಜ್ಞಾಂ ಹಿ ಬಲಾದ್ ರಾಜ್ಯಂ ಪ್ರತರ್ತ್ತತೇ ॥ ೩೦.೩೫ ॥

 

ಅಪಿ ಕಾಲಭವಂ ರಾಷ್ಟ್ರಂ ತ್ವದೀಯಂ ಮಾದೃಶೈರ್ನ್ನೃಪೈಃ ।

ಹ್ರಿಯತೇ ಬಲವದ್ಭಿರ್ಹಿ ರಾಜ್ಯಾಶಾ ತೇ ಕುತಸ್ತದಾ ॥ ೩೦.೩೬ ॥

 

ಈರೀತಿಯಾಗಿ ಯುಧಿಷ್ಠಿರನಿಂದ ಕೇಳಲ್ಪಟ್ಟ ಕಲಿ ಹೇಳುತ್ತಾನೆ- ‘ದುರ್ಯೋಧನ ಬಿದ್ದಮೇಲಿನ ಕಾಲ ನನ್ನದು(ಕಲಿ ಕಾಲ) ಆದರೆ ನೀನು ನನ್ನ ಕಾಲದಲ್ಲಿ ಬಲಾತ್ಕಾರದಿಂದ ಆಕ್ರಮಿಸಿ ನಿಂತಿರುವೆ. ಎಲೋ ನರಾಧಿಪನಾದ ಧರ್ಮರಾಜನೇ, ಈ ಕಾರಣದಿಂದ ನನ್ನಿಂದ ನಿನ್ನ ರಾಷ್ಟ್ರದ ವಿಪ್ಲವವು ಮಾಡಲ್ಪಟ್ಟಿತು.’

 ಈರೀತಿಯಾಗಿ ಮಾತನಾಡುವ ಕಲಿಯನ್ನು ಕುರಿತು ಧರ್ಮರಾಜ ಹೇಳುತ್ತಾನೆ- ‘ರಾಜರ ಬಲದಿಂದಲೇ ರಾಜ್ಯವು ಪ್ರವೃತ್ತವಾಗುತ್ತದೆ. ಇದು ನಿನ್ನ ಕಾಲ ಆಗಿರಬಹುದು, ಆದರೆ ನನ್ನಂತಹ ರಾಜರಿಂದ ನಿನ್ನ ರಾಜ್ಯವು ಅಪಹರಿಸಲ್ಪಡುತ್ತದೆ. ಹೀಗಿರುವಾಗ ನೀನು ರಾಜ್ಯದ ಮೇಲೇಕೆ ಆಸೆಪಡುತ್ತಿರುವೆ?’ (ನಿನಗೆ ಯಾವುದೇ ಹಕ್ಕು ಇಲ್ಲಾ ಎನ್ನುವ ಧ್ವನಿ)

 

‘ಕಾಲೋ ವಾ ಕಾರಣಂ ರಾಜ್ಞೋ ರಾಜಾ ವಾ ಕಾಲಕಾರಣಮ್ ।

ಇತಿ ತೇ ಸಂಶಯೋ ಮಾ ಭೂದ್ ರಾಜಾ ಕಾಲಸ್ಯ ಕಾರಣಮ್’ ॥ ೩೦.೩೭ ॥

 

‘ಕಾಲ ರಾಜನಿಗೆ ಕಾರಣವೋ, ರಾಜ ಕಾಲಕ್ಕೆ ಕಾರಣವೋ ಎಂಬ ಸಂಶಯ ಬೇಡ. ಯಾವ ರೀತಿಯ ರಾಜ ಇರುತ್ತಾನೋ, ಆ ರೀತಿಯ ಕಾಲ ಇರುತ್ತದೆ.’

 

ತಮುವಾಚ ಕಲಿಃ ಕಾಲೇ ಮದೀಯೇ ತ್ವಾದೃಶಃ ಕುತಃ ।

ರಾಜಾನಂ ಪೂರ್ವಮಾವಿಶ್ಯ ವಿಪ್ರಾಂಶ್ಚ ಸ್ಯಾಮಹಂ ನೃಪ ॥ ೩೦.೩೮ ॥

 

ಈರೀತಿಯಾಗಿ ಹೇಳಿದಾಗ ಕಲಿ ಧರ್ಮರಾಜನಿಗೆ ಹೇಳುತ್ತಾನೆ- ‘ನನ್ನ ಕಾಲದಲ್ಲಿ ನಿಮ್ಮಂತವರು ಏಕಾಗಿ ಇದ್ದೀರಿ? ಮೊದಲು ನಾನು ರಾಜರಲ್ಲಿ ಪ್ರವೇಶ ಮಾಡುತ್ತೇನೆ. ತದನಂತರ ಬ್ರಾಹ್ಮಣರಲ್ಲಿ ನಾನು ಪ್ರವೇಶಿಸುತ್ತೇನೆ. ಆಗ ಎಲ್ಲವೂ ನನ್ನ ವಶವಾಗುತ್ತದೆ.

 

ವಾಸುದೇವಸಹಾಯೇಷು ತೇಜೋ ಯುಷ್ಮಾಸು ಮೇ ನಹಿ ।

ಕ್ವ ರಾಜಾSಸಾವೃತೇ ಯುಷ್ಮಾನ್ ಯೋ ಮಯಾ ನಾಭಿಭೂಯತೇ ॥ ೩೦.೩೯ ॥

 

ಮದೀಯಕಾಲೇ ಭೂಪಾಲ ವಿಪ್ರವೇದವಿರೋಧಿನಿ ।

ಮದ್ದೃಷ್ಟಿಪಾತೇ ಕ್ವ ಗುಣಾಃ ಕ್ವ ವೇದಾಃ ಕ್ವ ಸುಯುಕ್ತಯಃ ॥ ೩೦.೪೦ ॥

 

ನಿಮಗೆ ವಾಸುದೇವನ ಸಹಾಯ ಇರುವುದರಿಂದ ನನ್ನ ತೇಜಸ್ಸು ಇಲ್ಲವಾಗಿದೆ. ಬ್ರಾಹ್ಮಣರಿಗೆ, ವೇದಗಳಿಗೆ  ವಿರುದ್ಧವಾಗಿರುವ ನನ್ನ ಕಾಲದಲ್ಲಿ, ನಿಮ್ಮನ್ನು ಬಿಟ್ಟು ಇತರ ಯಾವ ರಾಜರು ನನಗೆ ವಶವಾಗದೇ ಉಳಿಯುತ್ತಾರೆ? ನನ್ನ ದೃಷ್ಟಿ ಬಿದ್ದರೆ ಎಲ್ಲಿಯ ಗುಣ? ಎಲ್ಲಿಯ ವೇದ? ಎಲ್ಲಿಯ ಯುಕ್ತಿ?

 

ಜಗಾದ ನೃಪತಿಃ ಸತ್ಯಂ ಕಲೇ ವಕ್ಷ್ಯನೃತೋSಪಿ ಸನ್ ।

ಮೋಚಯೇ ತ್ವರ್ತ್ತವಚನಾದ್ ಯದಾSಸ್ಮತ್ಸನ್ತತೇಃ ಪರಮ್ ॥ ೩೦.೪೧ ॥

 

ವಿಲುಮ್ಪಸ್ಯಖಿಲಾನ್ ಧರ್ಮ್ಮಾನ್ ಕರಂ ತತ್ರಾಪಿ ನೋSರ್ಪ್ಪಯ ।

ಸೀಮಾSSಧಿರ್ಬಹುವಾಕ್ಯಂ ಚ ತುಲಾಮಾನೇ ಚ ಮೇ ಕರಃ ॥ ೩೦.೪೨ ॥

 

ಈರೀತಿ ಕಲಿ ಹೇಳಿದಾಗ ರಾಜನಾದ ಯುಧಿಷ್ಠಿರ ಹೇಳುತ್ತಾನೆ – ‘ಕಲಿಯೇ, ನೀನು ಸುಳ್ಳೇ ಮೈವೆತ್ತು ಬಂದಿದ್ದರೂ ಕೂಡಾ ಸತ್ಯವನ್ನು ಹೇಳುತ್ತಿರುವೆ. ಅದಕ್ಕಾಗಿ ನಿನ್ನನ್ನು ಬಿಡಿಸುತ್ತೇನೆ. ನಮ್ಮ ಸಂತತಿ ಮುಗಿದ ಬಳಿಕ ನೀನು ಮುಂದುವರಿಯಬಹುದು(ಧರ್ಮ ನಾಶ ಮಾಡುವೆ).  ಆದರೆ ನಮ್ಮ ಸಂತತಿ ಮುಗಿದಮೇಲೂ ಕೂಡಾ ನೀನು ನಮಗೆ ನಾಲ್ಕು ವಿಧದ ಕರವನ್ನು ನೀಡತಕ್ಕದ್ದು. ಗಡಿ (ದೇಶದ ಸೀಮೆ, ನಗರ ಸೀಮೆ, ಇತ್ಯಾದಿ) ಅಥವಾ ಅಡವಿಟ್ಟ ವಸ್ತು,  ಬಹುಜನರ ಸಾಕ್ಷಿ, ತುಲಾ(ತಕ್ಕಡಿ) ಹಾಗೂ ಮಾನ(ಅಳತೆ) ಇವುಗಳಲ್ಲಿ ನೀನು ಪ್ರವೇಶಿಸಕೂಡದು. ಇದನ್ನು  ಕರವಾಗಿ ನೀನು ನನಗೆ ಕೊಡತಕ್ಕದ್ದು.’

 

ನೈವಾತಿಕ್ರಮಮೇತೇಷಾಂ ಕುರು ಸರ್ವಾತ್ಮನಾ ಕ್ವಚಿತ್ ।

ತಮಾಹ ಭಗವಾನ್ ಕೃಷ್ಣೋ ಯಾವತ್ ಪಾಣ್ಡವಸನ್ತತಿಃ ॥ ೩೦.೪೩ ॥

 

ತಾವನ್ನ ತೇ ಭವೇಚ್ಛಕ್ತಿಃ ಪ್ರವೃತ್ತಸ್ಯಾಪಿ ಭೂತಳೇ ।

ಪಾಣ್ಡವೇಭ್ಯಃ ಪರಂ ಯಾವತ್ ಕ್ಷೇಮಕಃ ಕ್ರಮವರ್ದ್ಧಿತಾ ॥ ೩೦.೪೪ ॥

 

ಯಾವುದೇ ರೀತಿಯಿಂದ ಇವುಗಳಲ್ಲಿ ನೀನು ತಲೆ ತೂರಿಸುವಂತಿಲ್ಲ ಎಂದು  ಕಲಿಗೆ ಧರ್ಮರಾಜ ಹೇಳಿದಾಗ ಶ್ರೀಕೃಷ್ಣ ಹೇಳುತ್ತಾನೆ- ‘ಎಲ್ಲಿಯ ತನಕ ಪಾಂಡವ ಸಂತತಿ ಇರುತ್ತದೋ ಅಲ್ಲಿಯ ತನಕ ನೀನು ಭೂಮಿಯಲ್ಲಿ ಪ್ರವೃತ್ತನಾದರೂ ಕೂಡಾ ನಿನಗೆ ಶಕ್ತಿ ಇರುವುದಿಲ್ಲ. ಪಾಂಡವರ ಸಂತತಿ ಕೊನೆಯಾದ ಮೇಲೆ ಅಂದರೆ ಕ್ಷೇಮಕನ (ಪಾಂಡವ ಸಂತತಿಯ ಕೊನೇಯ ರಾಜನ) ಕಾಲಾನಂತರ ನಿನಗೆ ಕ್ರಮವಾಗಿ ಶಕ್ತಿ ವೃದ್ಧಿಯಾಗುತ್ತದೆ.

 

ಕ್ಷೇಮಕಾತ್ ಪರತಃ ಪೂರ್ತ್ತಿಂ ಶಕ್ತಿಸ್ತೇ ಯಾಸ್ಯತಿ ದ್ಧ್ರುವಮ್ ।

ನ ದ್ರಷ್ಟವ್ಯಂ ಭೂತಳಂ ತೇ ಕುತ ಏವ ಸ್ಪೃಶೇರ್ಭುವಮ್ ॥ ೩೦.೪೫ ॥

 

ಯಾವತ್ ಪಾರ್ಥಾ ಅಹಂ ಚಾತ್ರ ತತೋ ಭುವಿ ಪದಂ ಕುರು ।

ಇತ್ಯುಕ್ತೋ ವಾಸುದೇವೇನ ಮೋಚಿತೋ ಧರ್ಮ್ಮಜೇನ ಚ ॥ ೩೦.೪೬ ॥

 

ತಾನ್ ಪ್ರಣಮ್ಯ ಯಯೌ ಪಾರೇ ಸಮುದ್ರಸ್ಯಾಶ್ರಯದ್ ಗುಹಾಮ್ ।

ಪಾರ್ತ್ಥಾಶ್ಚ ಕೃಷ್ಣಸಹಿತಾ ರಕ್ಷನ್ತಃ ಕ್ಷ್ಮಾಂ ಮುದಂ ಯಯುಃ ॥ ೩೦.೪೭ ॥

 

ಕ್ಷೇಮಕ ರಾಜನ ನಂತರ ನಿನ್ನ ಶಕ್ತಿ ಸಂಪೂರ್ಣವಾಗಿ  ನಿನಗೆ ಬರುತ್ತದೆ. ಪಾಂಡವರು ಹಾಗೂ ನಾನು ಭೂಮಿಯಲ್ಲಿರುವ ತನಕ  ನೀನು ಭೂಮಿಯನ್ನು ಕುರಿತು ಯೋಚಿಸಲೂ(ನೋಡಲೂ)ಬಾರದು. ಇನ್ನು ಭೂಮಿಯನ್ನು ಮುಟ್ಟುವ ಮಾತೆಲ್ಲಿ? ಆನಂತರ ಭೂಮಿಯ ಮೇಲೆ ಹೆಜ್ಜೆ ಇಡು. ಈರೀತಿಯಾಗಿ ಪರಮಾತ್ಮನಿಂದ  ಹೇಳಲ್ಪಟ್ಟಾಗ ಧರ್ಮರಾಜನಿಂದ ಕಲಿ ಬಿಡಲ್ಪಟ್ಟವನಾದ.

ಕಲಿ ಅವರೆಲ್ಲರಿಗೂ ನಮಸ್ಕರಿಸಿ ಅಲ್ಲಿಂದ ತೆರಳಿದ ಮತ್ತು ಸಮುದ್ರದ ಆಚೆಯ ದಡದ ದ್ವೀಪದಲ್ಲಿರುವ ಗುಹೆಯೊಂದನ್ನು ಆಶ್ರಯಿಸಿದ. ಇತ್ತ ಪಾಂಡವರು ಶ್ರೀಕೃಷ್ಣನಿಂದ ಕೂಡಿಕೊಂಡು ಭೂಮಿಯನ್ನು ರಕ್ಷಿಸುತ್ತಾ, ಆನಂದ ತುಂಬಿದವರಾದರು.