ಸಮಾಧಿವಿರತೋದಙ್ಕಪರಿಪೃಷ್ಟಃ
ಪಥಿ ಪ್ರಭುಃ ।
ಹತಂ ದುರ್ಯ್ಯೋಧನಂ
ಪ್ರಾಹ ಸಭ್ರಾತೃಸುತಸೈನಿಕಮ್ ॥ ೩೦.೫೯ ॥
ದ್ವಾರಕೆಗೆ ತೆರಳುತ್ತಿರುವ
ದಾರಿಯಲ್ಲಿ ಸಮಾಧಿಯಿಂದ ಹೊರಗೆ ಬಂದ ಉದಙ್ಕನೆಂಬ ಋಷಿಯಿಂದ ದುರ್ಯೋಧನನ ಬಗೆಗೆ ಕೇಳಲ್ಪಟ್ಟ
ಶ್ರೀಕೃಷ್ಣ ಪರಮಾತ್ಮನು, ‘ದುರ್ಯೋಧನನು ತನ್ನ ಸೈನಿಕರು, ಮಕ್ಕಳು ಹಾಗೂ ಸಹೋದರರ ಜೊತೆಗೆ
ಸತ್ತಿದ್ದಾನೆ’ ಎಂದು ಅವನಿಗೆ ಹೇಳಿದನು.
[ಹಿನ್ನೆಲೆ: ಉದಙ್ಕ
ಎನ್ನುವ ಒಬ್ಬ ಋಷಿ ಇದ್ದ. ಅವನು ದುರ್ಯೋಧನನ ಗುರು. ಅವನು ಸಾತ್ವಿಕ. ಆದರೆ ದುರ್ಯೋಧನನ ಮೇಲೆ
ಅವನಿಗೆ ಉತ್ಕಟವಾದ ಪ್ರೀತಿ ಇತ್ತು. ತಪಸ್ಸು ಮಾಡುತ್ತಾ ಸಮಾಧಿಸ್ಥಿತಿಯಲ್ಲಿ ಅವನಿದ್ದ. ಕೃಷ್ಣ ದ್ವಾರಕೆಗೆ
ಬರುತ್ತಿರುವಾಗ ಅವನಿಗೆ ದಾರಿಯಲ್ಲಿ ಉದಙ್ಕ ಸಿಕ್ಕಿದ ಮತ್ತು ಅವನು ಕೃಷ್ಣನನ್ನು ಕುರಿತು
ಮಾತನಾಡಿದ]
ತಂ ಶಿಷ್ಯವಧಕೋಪೇನ
ಶಪ್ತುಮಾತ್ಮಾನಮುದ್ಯತಮ್ ।
ಕೇಶವೋSಶಮಯದ್ ವಾಕ್ಯೈರ್ವಿಶ್ವರೂಪಂ
ಪ್ರದರ್ಶ್ಯ ಚ ॥ ೩೦.೬೦ ॥
ನನ್ನ ಶಿಷ್ಯನಾಗಿರುವ
ದುರ್ಯೋಧನನನ್ನು ಕೊಂದಿದ್ದೀಯ ಎನ್ನುವ ಸಿಟ್ಟಿನಿಂದ ಉದಙ್ಕ ಕೃಷ್ಣನಿಗೇ ಶಾಪಕೊಡಲು ಸಿದ್ದನಾದ. ಆಗ
ಶ್ರೀಕೃಷ್ಣ ಅವನಿಗೆ ತನ್ನ ವಿಶ್ವರೂಪವನ್ನು ತೋರಿಸಿ, ತನ್ನ ಯುಕ್ತಿಯುಕ್ತವಾದ ಮಾತುಗಳಿಂದ ಅವನನ್ನು ಸಮಾಧಾನಗೊಳಿಸಿದ.
[ದೇವರು ಉದಙ್ಕನ ಶಾಪದ ಭಯದಿಂದ ವಿಶ್ವರೂಪ ತೋರಿಸಿರುವುದಲ್ಲ. ಅದರ
ಹಿಂದಿನ ಕಾರಣವೇನು ಎನ್ನುವುದನ್ನು ವಿವರಿಸುತ್ತಾರೆ-]
ಮದ್ಭಕ್ತೋ ನಿತರಾಮೇಷ ಮದಾರಾಧನತತ್ಪರಃ
।
ಮಾಮವಜ್ಞಾಯ ನಿರಯಂ ಮಾSನುತ್ಥಾನಂ ವ್ರಜೇದಿತಿ ॥ ೩೦.೬೧
॥
ಕೃಪಯಾ ವಾಸುದೇವೇನ
ಬೋಧಿತಃ ಶಾನ್ತಮಾನಸಃ ।
ಪಶ್ಚಾತ್ತಾಪಾಭಿತಪ್ತಾತ್ಮಾ
ತಮೇವ ಶರಣಂ ಯಯೌ ॥ ೩೦.೬೨ ॥
ಈ ಉದಙ್ಕನು ತನ್ನ
ಭಕ್ತನೇ ಆಗಿದ್ದಾನೆ. ನನ್ನನ್ನು ನಿರಂತರ ಆರಾಧನೆ ಮಾಡುತ್ತಿದ್ದಾನೆ. ಇವನು ನನ್ನನ್ನು ತಿರಸ್ಕರಿಸಿ, ಅವಮಾನಮಾಡಿ, ಉದ್ಧಾರವಿಲ್ಲದ
ನರಕವನ್ನು ಸೇರಬಾರದು ಎನ್ನುವ ಕೃಪೆಯಿಂದ ವಾಸುದೇವನಿಂದ ಉಪದೇಶಿಸಿಸಲ್ಪಟ್ಟವನಾದ ಉದಙ್ಕ,
ಶಾಂತಮನಸ್ಸುಳ್ಳವನಾಗಿ ಪಶ್ಚಾತ್ತಾಪದಿಂದ ಅವನನ್ನೇ ರಕ್ಷಕನಾಗಿ ಹೊಂದಿದನು.
ತಸ್ಮೈ ದೇವೋSಭಯಂ ದತ್ತ್ವಾ ಪ್ರೇಷಯಿಷ್ಯೇSಮೃತಂ ತವ ।
ದಾತುಂ ಶಕ್ರಮಿತಿ
ಪ್ರೋಕ್ತ್ವಾ ಯಯೌ ದ್ವಾರವತೀಂ ಪ್ರಭುಃ ॥ ೩೦.೬೩ ॥
ತನಗೆ ಅಮೃತಬೇಕೆಂದು
ಕೇಳಿದ ಉದಙ್ಕನಿಗೆ ಅಭಯವನ್ನು ಕೊಟ್ಟು, ‘ನಿನಗೆ ಅಮೃತವನ್ನು ಕೊಡುವುದಕ್ಕಾಗಿ ದೇವೇಂದ್ರನನ್ನು ಕಳುಹಿಸಿ ಕೊಡುವೆನು’ ಎಂದು ಹೇಳಿ,
ದ್ವಾರಕಾಪಟ್ಟಣವನ್ನು ಕುರಿತು ತೆರಳಿದನು.
ಅಥಾSದಿದೇಶ ದೇವೇಶಂ ವಾಸುದೇವೋSಮೃತಂ ಮುನೇಃ ।
ದೇಹೀತಿ
ವಞ್ಚಯಿಷ್ಯಾಮೀತ್ಯಾಹ ಸೋSಪಿ ಕ್ಷಮಾಪಯನ್ ॥ ೩೦.೬೪ ॥
ತದನಂತರ ಇಂದ್ರನನ್ನು
ಕುರಿತು ‘ಮುನಿಗೆ ಅಮೃತವನ್ನು ಕೊಡು’ ಎಂದು ಶ್ರೀಕೃಷ್ಣನು ಆದೇಶಮಾಡಿದನು. ಆ ಇಂದ್ರನಾದರೋ,
ಕ್ಷಮೆಕೋರುತ್ತಾ, ಮೋಸ ಮಾಡುತ್ತೇನೆ ಎಂದನು.
ಓಮಿತ್ಯುಕ್ತೋ ಭಗವತಾ
ತತ್ಸ್ನೇಹಾತ್ ಸ ಶಚೀಪತಿಃ ।
ಸುಜುಗುಪ್ಸಿತಮಾತಙ್ಗವೇಷೋ
ಭೂತ್ವಾ ಮುನಿಂ ಯಯೌ ॥ ೩೦.೬೫ ॥
‘ಹಾಗೇ ಆಗಲಿ’ ಎಂದು
ಕೃಷ್ಣನಿಂದ ಹೇಳಲ್ಪಟ್ಟ ಇಂದ್ರನು ಅತ್ಯಂತ ಕೆಟ್ಟ ಬೇಡನ ವೇಷವನ್ನು ಧರಿಸಿ, ಉದಙ್ಕನ ಬಳಿ ತೆರಳಿದನು.
ಮೂತ್ರಸ್ರೋತಸಿ ಸೋSಧಶ್ಚ ನಿಧಾಯ ಕಲಶಂ ವಶೀ ।
ಮೂತ್ರಯನ್ನಿವ ತಂ
ಪ್ರಾಹ ವಾಸುದೇವಃ ಸುಧಾಮಿಮಾಮ್ ॥ ೩೦.೬೬ ॥
ಮಹರ್ಷೇ ಪ್ರೇಷಯಾಮಾಸ
ತವಾರ್ತ್ಥೇ ತತ್ ಪಿಬೇತಿ ಚ ।
ಸ ಮೂತ್ರಮಿತಿ ಮತ್ವಾ
ತಂ ಯಾಹೀತ್ಯೇವಾSಹ
ಭತ್ಸಯನ್ ॥ ೩೦.೬೭ ॥
ಅಮೃತಸಂಬಂಧಿಯಾದ
ಕಲಶವನ್ನು ತನ್ನ ಮೂತ್ರದ್ವಾರದಬಳಿ ಇಟ್ಟು, ಇಂದ್ರಿಯವನ್ನು ನಿಗ್ರಹದಲ್ಲಿಟ್ಟುಕೊಂಡ ಇಂದ್ರನು, ಕಲಶದಲ್ಲಿ ಮೂತ್ರ ಮಾಡುತ್ತಿರುವನೋ
ಎನ್ನುವಂತೆ ತೋರಿಸುತ್ತಾ, ಉದಙ್ಕನಿಗೆ- ‘ಶ್ರೀಕೃಷ್ಣನು ಈ ಅಮೃತವನ್ನು
ನಿನಗಾಗಿ ಕಳುಹಿಸಿದ್ದಾನೆ. ಇದನ್ನು ಕುಡಿ’ ಎಂದು ಹೇಳಿದನು. ಉದಙ್ಕನಾದರೋ, ಅದನ್ನು ಮೂತ್ರವೆಂದು ತಿಳಿದು, ಇಂದ್ರನನ್ನು ಬಯ್ಯುತ್ತಾ, ‘ಇಲ್ಲಿಂದ
ಹೊರಟುಹೋಗು’ ಎಂದನು.
No comments:
Post a Comment