ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 7, 2023

Mahabharata Tatparya Nirnaya Kannada 30-48-58

 

ಏವಂ ಪಾರ್ತ್ಥಾನ್ ಪ್ರತಿಷ್ಠಾಪ್ಯ ಶಕ್ರಪ್ರಸ್ಥೇ ತು ಸಾರ್ಜ್ಜುನಃ ।

ಕ್ರೀಡನ್ ದಿವ್ಯಾಃ ಕಥಾಃ ಪ್ರಾಹ ಪುತ್ರಶೋಕಾಪನುತ್ತಯೇ ॥ ೩೦.೪೮ ॥

 

ಈರೀತಿಯಾಗಿ ಶ್ರೀಕೃಷ್ಣಪರಮಾತ್ಮನು ಚೆನ್ನಾಗಿ ಪಾಂಡವರನ್ನು ನೆಲೆಗೊಳಿಸಿ, ಅರ್ಜುನನಿಂದ ಕೂಡಿ  ಇಂದ್ರಪ್ರಸ್ಥದಲ್ಲಿದ್ದು, ವಿಹರಿಸುತ್ತಾ, ಅರ್ಜುನನಿಗೆ ಅವನ ಪುತ್ರಶೋಕ ಕಳೆಯಲೆಂದು  ಅಲೌಕಿಕವಾಗಿರುವ ಕಥೆಗಳನ್ನು ಹೇಳುತ್ತಿದ್ದನು.

 

ಗೀತೋಕ್ತಂ ವಿಸ್ಮೃತಂ ಚಾಸ್ಮೈ ಪುನರ್ವಿಸ್ತರತೋSವದತ್ ।

ವಾಣೀ ಪ್ರಾಣೋ ವಾಸುದೇವ ಇತ್ಯೇತೈರಖಿಲಂ ತತಮ್ ॥ ೩೦.೪೯ ॥

 

ಗೀತೆಯಲ್ಲಿ ತಾನು ಹೇಳಿರುವುದರಲ್ಲಿ ಅರ್ಜುನ ಮರೆತಿರುವುದನ್ನು ಮತ್ತೆ ಕೃಷ್ಣ ವಿಸ್ತಾರವಾಗಿ ಅರ್ಜುನನಿಗೆ ವಿವರಿಸಿ ಹೇಳಿದನು. (ಅದರ ಸಾರವನ್ನು ಇಲ್ಲಿ ಹೇಳುತ್ತಾರೆ-) ಇಡೀ ಜಗತ್ತು ಭಾರತೀದೇವಿ, ಮುಖ್ಯಪ್ರಾಣ, ವಾಸುದೇವ ಎನ್ನುವ ಈ ಮೂವರಿಂದ ವ್ಯಾಪಿಸಲ್ಪಟ್ಟಿದೆ.

 

ಸರ್ವೋತ್ತಮತ್ವಮೇತೇಷಾಂ ಸರ್ವಮೇತದ್ವಶೇ ಜಗತ್ ।

ಉತ್ತರೋತ್ತರಮೇತೇSಪಿ ಗುಣೋಚ್ಚಾಸ್ತದ್ವಶೇSಪರೇ ॥ ೩೦.೫೦ ॥

 

ಈ ಮೂವರಿಗೆ ಎಲ್ಲರಿಗಿಂತ ಉತ್ತಮತ್ವವಿದೆ. ಈ ಜಗತ್ತು ಇವರ ಅಧೀನದಲ್ಲಿದೆ. ಉತ್ತರೋತ್ತರವಾಗಿ ಇವರು ಗುಣದಲ್ಲಿ ಅಧಿಕರಾಗಿದ್ದಾರೆ ಮತ್ತು ಅವರ ವಶದಲ್ಲಿ ಉಳಿದವರಿದ್ದಾರೆ.

 

ಇತ್ಥಂ ಹರೇರ್ವಶೇ ಸರ್ವಗುಣಪೂರ್ಣ್ಣಶ್ಚ ಸ ಪ್ರಭುಃ ।

ಏಕ ಏವ ನಚಾನ್ಯೋSಸ್ತಿ ಪ್ರಾಣೋಚ್ಚಾ ತದಧೋ ರಮಾ ॥ ೩೦.೫೧ ॥

 

ಪರಮಾತ್ಮನಾದರೋ ಎಲ್ಲಾ ಗುಣಗಳಿಂದ ಪೂರ್ಣನಾಗಿದ್ದಾನೆ ಮತ್ತು ಅವನಂತೆ ಇನ್ನೊಬ್ಬನಿಲ್ಲ. ಉಳಿದವರೆಲ್ಲರೂ ಕೂಡಾ ಭಗವಂತನ ವಶದಲ್ಲಿದ್ದಾರೆ. ಪ್ರಾಣನಿಗಿಂತ ಮಿಗಿಲಾಗಿರುವ ಲಕ್ಷ್ಮೀದೇವಿಯು ಪರಮಾತ್ಮನಿಗಿಂತ ಕೆಳಗಿದ್ದಾಳೆ.

 

ಸ ಹುತಾಶ ಇತಿ ಪ್ರೋಕ್ತೋ ಹುತಮತ್ತ್ಯಖಿಲಂ ಯತಃ ।

ವಾಕ್ಪ್ರಾಣಮದ್ಧ್ಯಗೋ ನಿತ್ಯಂ ಧಾರಯತ್ಯಖಿಲಂ ಜಗತ್ ॥ ೩೦.೫೨ ॥

 

ಅಂತಹ ಪರಮಾತ್ಮನನ್ನು ಹುತಾಶಃ ಎಂದು ಕರೆಯುತ್ತಾರೆ (ಮುಖ್ಯಪ್ರಾಣ ಮತ್ತು ಭಾರತೀದೇವಿಯರಿಂದ ಕೊಡಲ್ಪಡುವ ಈ ಪ್ರಪಂಚವನ್ನು ಉಣ್ಣುವ ಭಗವಂತ ಹುತಾಶಃ). ಮಾತು ಮತ್ತು ಕ್ರಿಯೆಯಿಂದ ಭಗವಂತ ಇಡೀ ಪ್ರಪಂಚದಲ್ಲಿ  ವ್ಯಾಪ್ತನಾಗಿದ್ದಾನೆ. (ಮಾತಿಗೆ ಅಭಿಮಾನಿನಿ ಭಾರತೀದೇವಿಯಾದರೆ, ಕ್ರಿಯೆಗೆ ಅಭಿಮಾನಿ ಮುಖ್ಯಪ್ರಾಣ. ಅವರಿಬ್ಬರೂ ಕೊಡುವ ಜಗದ ತುತ್ತನ್ನು ಇಟ್ಟುಕೊಳ್ಳುವವನು ಪರಮಾತ್ಮ) ಅಂತಹ ಭಗವಂತ ಇಡೀ ಪ್ರಪಂಚವನ್ನು ಹೊತ್ತು ನಿಂತಿದ್ದಾನೆ.

 

ಸ ಈಶೋ ಬ್ರಹ್ಮರುದ್ರಾದ್ಯಾ ಜೀವಾ ಏವ ಪ್ರಕೀರ್ತ್ತಿತಾಃ ।

ಯೇ ತಸ್ಯಾನಾದಿಸದ್ಭಕ್ತಾ ಮುಕ್ತಿಯೋಗ್ಯಾ ಹಿ ತೇ ಸ್ಮೃತಾಃ ॥ ೩೦.೫೩ ॥

 

ಇಂತಹ ನಾರಾಯಣನು ಎಲ್ಲರ ಒಡೆಯನು. ಬ್ರಹ್ಮ-ರುದ್ರ ಇವರೆಲ್ಲರೂ ‘ಜೀವರೇ’ ಆಗಿದ್ದಾರೆ. ಯಾರು ಅನಾದಿಕಾಲದಿಂದ ಪರಮಾತ್ಮನ ಭಕ್ತರಾಗಿದ್ದಾರೋ, ಅವರು ಮುಕ್ತಿಗೆ ಯೋಗ್ಯರು ಎಂದು ಹೇಳಲ್ಪಟ್ಟಿದ್ದಾರೆ.

 

ಅನಾದಿದ್ವೇಷಿಣೋ ಯೇSಸ್ಮಿಂಸ್ತಮೋಯೋಗ್ಯಾಃ ಸುಪಾಪಿನಃ ।

ಮಿಶ್ರಾ ಮದ್ಧ್ಯಾ ಇತಿ ಜ್ಞೇಯಾಃ ಸಂಸಾರಪರಿವರ್ತ್ತಿನಃ ॥ ೩೦.೫೪ ॥

 

ಪರಮಾತ್ಮನನ್ನು ಅನಾದಿಕಾಲದಿಂದ ದ್ವೇಷಮಾಡುವವರು ಪಾಪಿಗಳು ಮತ್ತು ತಮಸ್ಸಿಗೆ ಯೋಗ್ಯರು. ಸ್ವಲ್ಪ ದ್ವೇಷ, ಸ್ವಲ್ಪ ಭಕ್ತಿ ಉಳ್ಳವರು ಮಧ್ಯಮರು ಎಂದು ಕರೆಯಲ್ಪಡುತ್ತಾರೆ. ಅಂತವರು ಸಂಸಾರದಲ್ಲಿ ಸುತ್ತುತ್ತಿರುತ್ತಾರೆ.

 

ಏವಂ ಜೀವಾಸ್ತ್ರಿಧಾ ಪ್ರೋಕ್ತಾ ಭವನ್ತ್ಯೇತೇ ನಚಾನ್ಯಥಾ ।

ತಾರತಮ್ಯಂ ಚ ವಿಜ್ಞೇಯಂ ಲಿಙ್ಗೈರ್ದ್ದೈಹಿಕಮಾನಸೈಃ ॥ ೩೦.೫೫ ॥

 

ಈರೀತಿಯಾಗಿ ಈ ಬ್ರಹ್ಮಾಂಡದಲ್ಲಿರುವ ಎಲ್ಲಾ ತರದ ಜೀವರೂ ಕೂಡಾ ಮೂರೇ ರೀತಿಯಾಗಿರುವುದು ಹೊರತು ಬೇರೆ ಇಲ್ಲ. ಅವರ ದೈಹಿಕವಾದ ಮತ್ತು ಮಾನಸಿಕವಾದ ಲಕ್ಷಣಗಳಿಂದ ತಾರತಮ್ಯವು ತಿಳಿಯಲ್ಪಡತಕ್ಕದ್ದು.

 

ವಿಷ್ಣೋರ್ಲ್ಲಿಙ್ಗಾನುಸಾರಿತ್ವತಾರತಮ್ಯಾತ್ ತದೀಕ್ಷಣಮ್ ।

ವಿಷ್ಣೋಸ್ತದನುಗಾನಾಂ ಚ ಪ್ರೀತಿಕೃದ್ ಧರ್ಮ್ಮ ಈರಿತಃ ॥ ೩೦.೫೬ ॥

 

ಅಧರ್ಮ್ಮೋSನ್ಯ ಇಯಂ ನಿಷ್ಠಾ ಪ್ರಲಾಪಃ ಕಿಂ ಕರಿಷ್ಯತಿ ।

ಏವಮಾದ್ಯನುಶಾಸ್ಯಾಜಃ ಪಾರ್ತ್ಥಂ ಪಾರ್ತ್ಥೈಃ ಸುಸತ್ಕೃತಃ  ॥ ೩೦.೫೭ ॥

 

ಕಥಞ್ಚಿತ್ ತಾನವಸ್ಥಾಪ್ಯ ಸುದೂರಾನುಗತಾನ್ ಪ್ರಭುಃ ।

ಸುಭದ್ರಾಸಹಿತಃ ಪ್ರಾಯಾದ್ ಯಾನೇನ ದ್ವಾರಕಾಪುರೀಮ್ ॥ ೩೦.೫೮ ॥

 

ಪರಮಾತ್ಮನನ್ನು ಮುಂದೆ ಇಟ್ಟುಕೊಂಡೇ, ಪರಮಾತ್ಮನ ಭಕ್ತಿಗೆ ಅನುಗುಣವಾದ ತಾರತಮ್ಯವನ್ನು ನಾವು ಕಾಣಬೇಕು. ನಾರಾಯಣನಿಗೆ ಮತ್ತು ಅವನ ಭಕ್ತರಿಗೆ ಯಾವುದು ಪ್ರೀತಿಯನ್ನು ಉಂಟುಮಾಡುತ್ತದೋ, ಅದು ಧರ್ಮವಾಗಿರುತ್ತದೆ. ಪ್ರೀತಿಯನ್ನು ಉಂಟುಮಾಡದೇ ಇರುವುದು ಅಧರ್ಮವಾಗಿದೆ. ಇದೇ ನಿಶ್ಚಿತವಾದದ್ದು. ಬೇರೆ ಉಳಿದದ್ದರ ಬಗೆಗೆ ವ್ಯರ್ಥವಾದ ಮಾತು ಏಕೆ? ಇವೇ ಮೊದಲಾಗಿ ಅರ್ಜುನನಿಗೆ ಶ್ರೀಕೃಷ್ಣಪರಮಾತ್ಮನು ಉಪದೇಶಿಸಿ, ಪಾಂಡವರಿಂದ ಚೆನ್ನಾಗಿ ಸತ್ಕೃತನಾಗಿ, ತನ್ನನ್ನು ಬೀಳ್ಕೊಡಲೆಂದು ಬಹಳ ದೂರದ ತನಕ ಹಿಂಬಾಲಿಸಿ ಬಂದ ಎಲ್ಲರನ್ನೂ  ಹೇಗೋ ನಿಲ್ಲುವಂತೆ ಮಾಡಿ, ಸುಭದ್ರೆಯಿಂದ ಕೂಡಿಕೊಂಡು ರಥವನ್ನೇರಿ ದ್ವಾರಕಾ ನಗರಕ್ಕೆ ಮರಳಿದನು.

No comments:

Post a Comment