ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 3, 2023

Mahabharata Tatparya Nirnaya Kannada 30-33-47

 

ಪಪ್ರಚ್ಛ ತಂ ಕೃಷ್ಣಪುರೋ ಯುಧಿಷ್ಠಿರ ಉದಾರಧೀಃ ।

ಕಲೇ ಕಿಮಿತಿ ಮೇ ರಾಷ್ಟ್ರಂ ವಿಪ್ಲಾವಯಸಿ ದುರ್ಮ್ಮತೇ ॥ ೩೦.೩೩ ॥

 

ಒಳ್ಳೆಯ ಪ್ರಜ್ಞೆಯುಳ್ಳ ಯುಧಿಷ್ಠಿರನು ಶ್ರೀಕೃಷ್ಣನ ಮುಂದೆ ಕಲಿಯನ್ನು ಕುರಿತು ಕೇಳುತ್ತಾನೆ- ‘ಎಲೈ ದುರ್ಬುದ್ಧಿಯುಳ್ಳ ಕಲಿಯೇ, ನನ್ನ ರಾಷ್ಟ್ರವನ್ನು ಏಕಾಗಿ ಹಾಳುಮಾಡುತ್ತಿರುವೆ? 

 

ಇತ್ಯುಕ್ತ ಆಹ ಕಾಲೋSಯಂ ದುರ್ಯ್ಯೋಧನನಿಪಾತನಮ್ ।

ಆರಭ್ಯ ಮಮ ತತ್ರ ತ್ವಂ ಬಲಾದಾಕ್ರಮ್ಯ ತಿಷ್ಠಸಿ ॥ ೩೦.೩೪ ॥

 

ತತೋ ಮಯಾ ಕೃತೋ ರಾಷ್ಟ್ರವಿಪ್ಲವಸ್ತೇ ನರಾಧಿಪ ।

ತಮಾಹ ರಾಜಾ ರಾಜ್ಞಾಂ ಹಿ ಬಲಾದ್ ರಾಜ್ಯಂ ಪ್ರತರ್ತ್ತತೇ ॥ ೩೦.೩೫ ॥

 

ಅಪಿ ಕಾಲಭವಂ ರಾಷ್ಟ್ರಂ ತ್ವದೀಯಂ ಮಾದೃಶೈರ್ನ್ನೃಪೈಃ ।

ಹ್ರಿಯತೇ ಬಲವದ್ಭಿರ್ಹಿ ರಾಜ್ಯಾಶಾ ತೇ ಕುತಸ್ತದಾ ॥ ೩೦.೩೬ ॥

 

ಈರೀತಿಯಾಗಿ ಯುಧಿಷ್ಠಿರನಿಂದ ಕೇಳಲ್ಪಟ್ಟ ಕಲಿ ಹೇಳುತ್ತಾನೆ- ‘ದುರ್ಯೋಧನ ಬಿದ್ದಮೇಲಿನ ಕಾಲ ನನ್ನದು(ಕಲಿ ಕಾಲ) ಆದರೆ ನೀನು ನನ್ನ ಕಾಲದಲ್ಲಿ ಬಲಾತ್ಕಾರದಿಂದ ಆಕ್ರಮಿಸಿ ನಿಂತಿರುವೆ. ಎಲೋ ನರಾಧಿಪನಾದ ಧರ್ಮರಾಜನೇ, ಈ ಕಾರಣದಿಂದ ನನ್ನಿಂದ ನಿನ್ನ ರಾಷ್ಟ್ರದ ವಿಪ್ಲವವು ಮಾಡಲ್ಪಟ್ಟಿತು.’

 ಈರೀತಿಯಾಗಿ ಮಾತನಾಡುವ ಕಲಿಯನ್ನು ಕುರಿತು ಧರ್ಮರಾಜ ಹೇಳುತ್ತಾನೆ- ‘ರಾಜರ ಬಲದಿಂದಲೇ ರಾಜ್ಯವು ಪ್ರವೃತ್ತವಾಗುತ್ತದೆ. ಇದು ನಿನ್ನ ಕಾಲ ಆಗಿರಬಹುದು, ಆದರೆ ನನ್ನಂತಹ ರಾಜರಿಂದ ನಿನ್ನ ರಾಜ್ಯವು ಅಪಹರಿಸಲ್ಪಡುತ್ತದೆ. ಹೀಗಿರುವಾಗ ನೀನು ರಾಜ್ಯದ ಮೇಲೇಕೆ ಆಸೆಪಡುತ್ತಿರುವೆ?’ (ನಿನಗೆ ಯಾವುದೇ ಹಕ್ಕು ಇಲ್ಲಾ ಎನ್ನುವ ಧ್ವನಿ)

 

‘ಕಾಲೋ ವಾ ಕಾರಣಂ ರಾಜ್ಞೋ ರಾಜಾ ವಾ ಕಾಲಕಾರಣಮ್ ।

ಇತಿ ತೇ ಸಂಶಯೋ ಮಾ ಭೂದ್ ರಾಜಾ ಕಾಲಸ್ಯ ಕಾರಣಮ್’ ॥ ೩೦.೩೭ ॥

 

‘ಕಾಲ ರಾಜನಿಗೆ ಕಾರಣವೋ, ರಾಜ ಕಾಲಕ್ಕೆ ಕಾರಣವೋ ಎಂಬ ಸಂಶಯ ಬೇಡ. ಯಾವ ರೀತಿಯ ರಾಜ ಇರುತ್ತಾನೋ, ಆ ರೀತಿಯ ಕಾಲ ಇರುತ್ತದೆ.’

 

ತಮುವಾಚ ಕಲಿಃ ಕಾಲೇ ಮದೀಯೇ ತ್ವಾದೃಶಃ ಕುತಃ ।

ರಾಜಾನಂ ಪೂರ್ವಮಾವಿಶ್ಯ ವಿಪ್ರಾಂಶ್ಚ ಸ್ಯಾಮಹಂ ನೃಪ ॥ ೩೦.೩೮ ॥

 

ಈರೀತಿಯಾಗಿ ಹೇಳಿದಾಗ ಕಲಿ ಧರ್ಮರಾಜನಿಗೆ ಹೇಳುತ್ತಾನೆ- ‘ನನ್ನ ಕಾಲದಲ್ಲಿ ನಿಮ್ಮಂತವರು ಏಕಾಗಿ ಇದ್ದೀರಿ? ಮೊದಲು ನಾನು ರಾಜರಲ್ಲಿ ಪ್ರವೇಶ ಮಾಡುತ್ತೇನೆ. ತದನಂತರ ಬ್ರಾಹ್ಮಣರಲ್ಲಿ ನಾನು ಪ್ರವೇಶಿಸುತ್ತೇನೆ. ಆಗ ಎಲ್ಲವೂ ನನ್ನ ವಶವಾಗುತ್ತದೆ.

 

ವಾಸುದೇವಸಹಾಯೇಷು ತೇಜೋ ಯುಷ್ಮಾಸು ಮೇ ನಹಿ ।

ಕ್ವ ರಾಜಾSಸಾವೃತೇ ಯುಷ್ಮಾನ್ ಯೋ ಮಯಾ ನಾಭಿಭೂಯತೇ ॥ ೩೦.೩೯ ॥

 

ಮದೀಯಕಾಲೇ ಭೂಪಾಲ ವಿಪ್ರವೇದವಿರೋಧಿನಿ ।

ಮದ್ದೃಷ್ಟಿಪಾತೇ ಕ್ವ ಗುಣಾಃ ಕ್ವ ವೇದಾಃ ಕ್ವ ಸುಯುಕ್ತಯಃ ॥ ೩೦.೪೦ ॥

 

ನಿಮಗೆ ವಾಸುದೇವನ ಸಹಾಯ ಇರುವುದರಿಂದ ನನ್ನ ತೇಜಸ್ಸು ಇಲ್ಲವಾಗಿದೆ. ಬ್ರಾಹ್ಮಣರಿಗೆ, ವೇದಗಳಿಗೆ  ವಿರುದ್ಧವಾಗಿರುವ ನನ್ನ ಕಾಲದಲ್ಲಿ, ನಿಮ್ಮನ್ನು ಬಿಟ್ಟು ಇತರ ಯಾವ ರಾಜರು ನನಗೆ ವಶವಾಗದೇ ಉಳಿಯುತ್ತಾರೆ? ನನ್ನ ದೃಷ್ಟಿ ಬಿದ್ದರೆ ಎಲ್ಲಿಯ ಗುಣ? ಎಲ್ಲಿಯ ವೇದ? ಎಲ್ಲಿಯ ಯುಕ್ತಿ?

 

ಜಗಾದ ನೃಪತಿಃ ಸತ್ಯಂ ಕಲೇ ವಕ್ಷ್ಯನೃತೋSಪಿ ಸನ್ ।

ಮೋಚಯೇ ತ್ವರ್ತ್ತವಚನಾದ್ ಯದಾSಸ್ಮತ್ಸನ್ತತೇಃ ಪರಮ್ ॥ ೩೦.೪೧ ॥

 

ವಿಲುಮ್ಪಸ್ಯಖಿಲಾನ್ ಧರ್ಮ್ಮಾನ್ ಕರಂ ತತ್ರಾಪಿ ನೋSರ್ಪ್ಪಯ ।

ಸೀಮಾSSಧಿರ್ಬಹುವಾಕ್ಯಂ ಚ ತುಲಾಮಾನೇ ಚ ಮೇ ಕರಃ ॥ ೩೦.೪೨ ॥

 

ಈರೀತಿ ಕಲಿ ಹೇಳಿದಾಗ ರಾಜನಾದ ಯುಧಿಷ್ಠಿರ ಹೇಳುತ್ತಾನೆ – ‘ಕಲಿಯೇ, ನೀನು ಸುಳ್ಳೇ ಮೈವೆತ್ತು ಬಂದಿದ್ದರೂ ಕೂಡಾ ಸತ್ಯವನ್ನು ಹೇಳುತ್ತಿರುವೆ. ಅದಕ್ಕಾಗಿ ನಿನ್ನನ್ನು ಬಿಡಿಸುತ್ತೇನೆ. ನಮ್ಮ ಸಂತತಿ ಮುಗಿದ ಬಳಿಕ ನೀನು ಮುಂದುವರಿಯಬಹುದು(ಧರ್ಮ ನಾಶ ಮಾಡುವೆ).  ಆದರೆ ನಮ್ಮ ಸಂತತಿ ಮುಗಿದಮೇಲೂ ಕೂಡಾ ನೀನು ನಮಗೆ ನಾಲ್ಕು ವಿಧದ ಕರವನ್ನು ನೀಡತಕ್ಕದ್ದು. ಗಡಿ (ದೇಶದ ಸೀಮೆ, ನಗರ ಸೀಮೆ, ಇತ್ಯಾದಿ) ಅಥವಾ ಅಡವಿಟ್ಟ ವಸ್ತು,  ಬಹುಜನರ ಸಾಕ್ಷಿ, ತುಲಾ(ತಕ್ಕಡಿ) ಹಾಗೂ ಮಾನ(ಅಳತೆ) ಇವುಗಳಲ್ಲಿ ನೀನು ಪ್ರವೇಶಿಸಕೂಡದು. ಇದನ್ನು  ಕರವಾಗಿ ನೀನು ನನಗೆ ಕೊಡತಕ್ಕದ್ದು.’

 

ನೈವಾತಿಕ್ರಮಮೇತೇಷಾಂ ಕುರು ಸರ್ವಾತ್ಮನಾ ಕ್ವಚಿತ್ ।

ತಮಾಹ ಭಗವಾನ್ ಕೃಷ್ಣೋ ಯಾವತ್ ಪಾಣ್ಡವಸನ್ತತಿಃ ॥ ೩೦.೪೩ ॥

 

ತಾವನ್ನ ತೇ ಭವೇಚ್ಛಕ್ತಿಃ ಪ್ರವೃತ್ತಸ್ಯಾಪಿ ಭೂತಳೇ ।

ಪಾಣ್ಡವೇಭ್ಯಃ ಪರಂ ಯಾವತ್ ಕ್ಷೇಮಕಃ ಕ್ರಮವರ್ದ್ಧಿತಾ ॥ ೩೦.೪೪ ॥

 

ಯಾವುದೇ ರೀತಿಯಿಂದ ಇವುಗಳಲ್ಲಿ ನೀನು ತಲೆ ತೂರಿಸುವಂತಿಲ್ಲ ಎಂದು  ಕಲಿಗೆ ಧರ್ಮರಾಜ ಹೇಳಿದಾಗ ಶ್ರೀಕೃಷ್ಣ ಹೇಳುತ್ತಾನೆ- ‘ಎಲ್ಲಿಯ ತನಕ ಪಾಂಡವ ಸಂತತಿ ಇರುತ್ತದೋ ಅಲ್ಲಿಯ ತನಕ ನೀನು ಭೂಮಿಯಲ್ಲಿ ಪ್ರವೃತ್ತನಾದರೂ ಕೂಡಾ ನಿನಗೆ ಶಕ್ತಿ ಇರುವುದಿಲ್ಲ. ಪಾಂಡವರ ಸಂತತಿ ಕೊನೆಯಾದ ಮೇಲೆ ಅಂದರೆ ಕ್ಷೇಮಕನ (ಪಾಂಡವ ಸಂತತಿಯ ಕೊನೇಯ ರಾಜನ) ಕಾಲಾನಂತರ ನಿನಗೆ ಕ್ರಮವಾಗಿ ಶಕ್ತಿ ವೃದ್ಧಿಯಾಗುತ್ತದೆ.

 

ಕ್ಷೇಮಕಾತ್ ಪರತಃ ಪೂರ್ತ್ತಿಂ ಶಕ್ತಿಸ್ತೇ ಯಾಸ್ಯತಿ ದ್ಧ್ರುವಮ್ ।

ನ ದ್ರಷ್ಟವ್ಯಂ ಭೂತಳಂ ತೇ ಕುತ ಏವ ಸ್ಪೃಶೇರ್ಭುವಮ್ ॥ ೩೦.೪೫ ॥

 

ಯಾವತ್ ಪಾರ್ಥಾ ಅಹಂ ಚಾತ್ರ ತತೋ ಭುವಿ ಪದಂ ಕುರು ।

ಇತ್ಯುಕ್ತೋ ವಾಸುದೇವೇನ ಮೋಚಿತೋ ಧರ್ಮ್ಮಜೇನ ಚ ॥ ೩೦.೪೬ ॥

 

ತಾನ್ ಪ್ರಣಮ್ಯ ಯಯೌ ಪಾರೇ ಸಮುದ್ರಸ್ಯಾಶ್ರಯದ್ ಗುಹಾಮ್ ।

ಪಾರ್ತ್ಥಾಶ್ಚ ಕೃಷ್ಣಸಹಿತಾ ರಕ್ಷನ್ತಃ ಕ್ಷ್ಮಾಂ ಮುದಂ ಯಯುಃ ॥ ೩೦.೪೭ ॥

 

ಕ್ಷೇಮಕ ರಾಜನ ನಂತರ ನಿನ್ನ ಶಕ್ತಿ ಸಂಪೂರ್ಣವಾಗಿ  ನಿನಗೆ ಬರುತ್ತದೆ. ಪಾಂಡವರು ಹಾಗೂ ನಾನು ಭೂಮಿಯಲ್ಲಿರುವ ತನಕ  ನೀನು ಭೂಮಿಯನ್ನು ಕುರಿತು ಯೋಚಿಸಲೂ(ನೋಡಲೂ)ಬಾರದು. ಇನ್ನು ಭೂಮಿಯನ್ನು ಮುಟ್ಟುವ ಮಾತೆಲ್ಲಿ? ಆನಂತರ ಭೂಮಿಯ ಮೇಲೆ ಹೆಜ್ಜೆ ಇಡು. ಈರೀತಿಯಾಗಿ ಪರಮಾತ್ಮನಿಂದ  ಹೇಳಲ್ಪಟ್ಟಾಗ ಧರ್ಮರಾಜನಿಂದ ಕಲಿ ಬಿಡಲ್ಪಟ್ಟವನಾದ.

ಕಲಿ ಅವರೆಲ್ಲರಿಗೂ ನಮಸ್ಕರಿಸಿ ಅಲ್ಲಿಂದ ತೆರಳಿದ ಮತ್ತು ಸಮುದ್ರದ ಆಚೆಯ ದಡದ ದ್ವೀಪದಲ್ಲಿರುವ ಗುಹೆಯೊಂದನ್ನು ಆಶ್ರಯಿಸಿದ. ಇತ್ತ ಪಾಂಡವರು ಶ್ರೀಕೃಷ್ಣನಿಂದ ಕೂಡಿಕೊಂಡು ಭೂಮಿಯನ್ನು ರಕ್ಷಿಸುತ್ತಾ, ಆನಂದ ತುಂಬಿದವರಾದರು.

No comments:

Post a Comment