ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 15, 2018

Mahabharata Tatparya Nirnaya Kannada 6.32-6.35


ಸಸಮ್ಭ್ರಮನ್ತಂ ಪತಿತಂ ಪದಾಬ್ಜಯೋಸ್ತ್ವರನ್ ಸಮುತ್ಥಾಪ್ಯ ಸಮಾಶ್ಲಿಷತ್ ಪ್ರಭುಃ ।
ಸ ಚೋಪವಿಷ್ಟೋ ಜಗದೀಶಸನ್ನಿಧೌ ತದಾಜ್ಞಯೈವಾsದಿಶದಾಶು ವಾನರಾನ್ ॥೬.೩೨॥

ಉದ್ವೇಗದಿಂದ ಕೂಡಿ ಅವಸರ ಮಾಡುತ್ತಾ ತನ್ನ ಪಾದಕಮಲಗಳಿಗೆ ಬಿದ್ದ ಸುಗ್ರೀವನನ್ನು ಮೇಲೆತ್ತಿದ  ಶ್ರೀರಾಮನು, ಅವನನ್ನು ಆಲಿಂಗಿಸುತ್ತಾನೆ. ಸುಗ್ರೀವನಾದರೋ, ರಾಮನ ಸನ್ನಿಧಾನದಲ್ಲಿ  ಕುಳಿತವನಾಗಿ, ರಾಮನ ಅಪ್ಪಣೆಯಂತೆ ತನ್ನ ಕಪಿಗಳಿಗೆ ಆಜ್ಞೆ ಮಾಡುತ್ತಾನೆ:    

ಸಮಸ್ತದಿಕ್ಷು ಪ್ರಹಿತೇಷು ತೇನ ಪ್ರಭುರ್ಹನೂಮನ್ತಮಿದಂ ಬಭಾಷೇ ।
ನ ಕಶ್ಚಿದೀಶಸ್ತ್ವದೃತೇsಸ್ತಿ ಸಾಧನೇ ಸಮಸ್ತಕಾರ್ಯ್ಯಪ್ರವರಸ್ಯ ಮೇsಸ್ಯ ॥೬.೩೩॥

ಸುಗ್ರೀವನಿಂದ ಎಲ್ಲಾ ದಿಕ್ಕುಗಳಿಗೆ ವಾನರರು ಕಳುಹಿಸಲ್ಪಡಲು, ರಾಮಚಂದ್ರನು ಹನುಮಂತನನ್ನು ಕುರಿತು ಹೇಳುತ್ತಾನೆ: “ನನ್ನ ಎಲ್ಲಾ ಕೆಲಸವನ್ನೂ ಸಾಧನೆ ಮಾಡಲು ನಿನ್ನನ್ನು ಬಿಟ್ಟು ಇನ್ನಾರೂ ಕೂಡಾ ಸಮರ್ಥರಲ್ಲ” ಎಂದು.

ಅತಸ್ತ್ವಮೇವ ಪ್ರತಿಯಾಹಿ ದಕ್ಷಿಣಾಂ ದಿಶಂ ಸಮಾದಾಯ ಮದಙ್ಗುಲೀಯಕಮ್ ।
ಇತೀರಿತೋsಸೌ ಪುರುಷೋತ್ತಮೇನ ಯಯೌ ದಿಶಂ ತಾಂ ಯುವರಾಜಯುಕ್ತಃ॥೬.೩೪॥

“ನನ್ನ ಉಂಗುರವನ್ನು ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ಹೋಗು” ಎಂದು ಶ್ರೀರಾಮನಿಂದ ಹೇಳಲ್ಪಟ್ಟ ಹನುಮಂತನು, ರಾಮಚಂದ್ರನಿಂದ  ಪ್ರಚೋಧಿತನಾಗಿ, ಯುವರಾಜ ಅಂಗದನೊಂದಿಗೆ  ಕೂಡಿಕೊಂಡು, ದಕ್ಷಿಣ ದಿಕ್ಕಿನತ್ತ ತೆರಳುತ್ತಾನೆ.

ಸಮಸ್ತದಿಕ್ಷು ಪ್ರತಿಯಾಪಿತಾ ಹಿ ತೇ ಹರೀಶ್ವರಾಜ್ಞಾಮುಪಧಾರ್ಯ್ಯ ಮಾಸತಃ ।
ಸಮಾಯ ಯುಸ್ತೇSಙ್ಗದಜಾಮ್ಬವನ್ಮುಖಾಃ ಸುತೇನ ವಾಯೋಃ ಸಹಿತಾ ನ ಚಾSಯಯುಃ ॥೬.೩೫॥

ಸುಗ್ರೀವನ ಅಣತಿಯನ್ನು ಹೊತ್ತು ಎಲ್ಲಾ ದಿಕ್ಕುಗಳಿಗೆ ಕಳುಹಿಸಲ್ಪಟ್ಟ ಆ ಕಪಿಗಳು ಕೊಟ್ಟ ಒಂದು ತಿಂಗಳ ಕಾಲಾವಕಾಶದೊಳಗೆ ಮರಳಿ ಬರುತ್ತಾರೆ. ಆದರೆ  ಹನುಮಂತನಿಂದ ಕೂಡಿದ ಅಂಗದ, ಜಾಂಬವಂತನೇ ಮೊದಲಾದವರು ಮರಳಿ ಬರಲಿಲ್ಲ.

Monday, May 14, 2018

Mahabharata Tatparya Nirnaya Kannada 6.28-6.31

ತದೈವ ರಾಮೋsಪಿ ಹಿ ಭೋಗಸಕ್ತಂ ಪ್ರಮತ್ತಮಾಲಕ್ಷ್ಯ ಕಪೀಶ್ವರಂ ಪ್ರಭುಃ ।
ಜಗಾದ ಸೌಮಿತ್ರಿಮಿದಂ ವಚೋ ಮೇ ಪ್ಲವಙ್ಗಮೇಶಾಯ ವದಾsಶು ಯಾಹಿ ॥೬.೨೮॥

ಈ ಹೊತ್ತಿಗಾಗಲೇ  ಭೋಗದಲ್ಲಿದ್ದು ಪ್ರಮಾದವನ್ನು ಮಾಡಿರುವ ಸುಗ್ರೀವನನ್ನು ಗಮನಿಸಿದ ಶ್ರೀರಾಮಚಂದ್ರನು,  ಲಕ್ಷ್ಮಣನಲ್ಲಿ, ತನ್ನ ಮಾತನ್ನು ಸುಗ್ರೀವನಿಗೆ ತಲುಪಿಸುವುದಕ್ಕಾಗಿ ಆತನಿದ್ದಲ್ಲಿಗೆ ತೆರಳುವಂತೆ ಹೇಳುತ್ತಾನೆ.

ಯದಿ ಪ್ರಮತ್ತೋsಸಿ ಮದೀಯಕಾರ್ಯ್ಯೇ ನಯಾಮ್ಯಹಂ ತ್ವೇನ್ದ್ರಸುತಸ್ಯ ಮಾರ್ಗ್ಗಮ್ ।
ಪ್ರಾಯಃ ಸ್ವಕಾರ್ಯ್ಯೇ ಪ್ರತಿಪಾದಿತೇ ಹಿ ಮದೋದ್ಧತಾ ನ ಪ್ರತಿಕರ್ತ್ತುಮೀಶತೇ ॥೬.೨೯॥

ಹೆಚ್ಚಾಗಿ  ತಮ್ಮ ಕೆಲಸವಾಗುತ್ತಿರಲು ಕೃತಘ್ನರು ಪ್ರತ್ಯುಪಕಾರ ಮಾಡುವುದಿಲ್ಲ.  “ಒಂದು ವೇಳೆ ಸುಗ್ರೀವ ನನ್ನ ಕೆಲಸವನ್ನು ಮರೆತಿದ್ದರೆ,  ವಾಲಿಯ ದಾರಿಯನ್ನೇ ಅವನಿಗೂ ತೋರಿಸುತ್ತೇನೆ.”. ಎನ್ನುವ ಎಚ್ಚರಿಕೆಯ ಸಂದೇಶವನ್ನು ಶ್ರೀರಾಮ ಲಕ್ಷ್ಮಣನ ಮುಖೇನ ಸುಗ್ರೀವನಿಗೆ ತಲುಪಿಸುತ್ತಾನೆ.

ಇತೀಡ್ಯರಾಮೇಣ ಸಮೀರಿತೇ ತದಾ ಯಯೌ ಸಬಾಣಃ ಸಧನುಃ ಸ ಲಕ್ಷ್ಮಣಃ ।
ದೃಷ್ಟ್ವೈವ ತಂ ತೇನ ಸಹೈವ ತಾಪನಿರ್ಭಯಾದ್ ಯಯೌ ರಾಮಪದಾನ್ತಿಕಂ ತ್ವರನ್ ॥೬.೩೦॥

ಈರೀತಿಯಾಗಿ ಪೂಜ್ಯನಾದ ಶ್ರೀರಾಮನಿಂದ  ಹೇಳಲ್ಪಡುತ್ತಿರಲು,  ಬಿಲ್ಲು-ಬಾಣಗಳನ್ನು ಹಿಡಿದ ಲಕ್ಷ್ಮಣನು ಸುಗ್ರೀವನಿದ್ದಲ್ಲಿಗೆ  ತೆರಳುತ್ತಾನೆ. ಲಕ್ಷ್ಮಣನನ್ನು ನೋಡಿದೊಡನೆಯೇ ಸೂರ್ಯನ ಮಗನಾದ ಸುಗ್ರೀವನು ತಕ್ಷಣ, ಶೀಘ್ರವಾಗಿ ಲಕ್ಷ್ಮಣನೊಂದಿಗೆ  ಹೊರಟು ರಾಮನಿದ್ದಲ್ಲಿಗೆ ಬರುತ್ತಾನೆ.  

ಹನೂಮತಃ ಸಾಧುವಚೋಭಿರಾಶು ಪ್ರಸನ್ನಚೇತಸ್ಯಧಿಪೇ ಕಪೀನಾಮ್ ।
ಸಮಾಗತೇ ಸರ್ವಹರಿಪ್ರವೀರೈಃ ಸಹೈವ ತಂ ವೀಕ್ಷ್ಯ ನನನ್ದ ರಾಘವಃ ॥೬.೩೧॥


ಹನುಮಂತನ ಒಳ್ಳೆಯ ಮಾತುಗಳಿಂದ, ಭಕ್ತಿಯುಕ್ತವಾದ ಮನಸ್ಸನ್ನು ಹೊಂದಿರುವ ಸುಗ್ರೀವನು ರಾಮಚಂದ್ರನ ಬಳಿಗೆ ಎಲ್ಲಾ ಕಪಿಗಳಿಂದ ಕೂಡಿ ಬರಲು, ಅವನನ್ನು ನೋಡಿ ರಾಮಚಂದ್ರನು ಪ್ರಸನ್ನನಾಗುತ್ತಾನೆ.

Sunday, May 13, 2018

Mahabharata Tatparya Nirnaya Kannada 6.24-6.27


ಅಥಾತಿಸಕ್ತೇ ಕ್ಷಿತಿಪೇ ಕಪೀನಾಂ ಪ್ರವಿಸ್ಮೃತೇ ರಾಮಕೃತೋಪಕಾರೇ ।
ಪ್ರಸಹ್ಯ̐  ತಂ ಬುದ್ಧಿಮತಾಂ ವರಿಷ್ಠೋ ರಾಮಾಙ್ಘ್ರಿಭಕ್ತೋ ಹನುಮಾನುವಾಚ ॥೬.೨೪॥

ಕಪಿರಾಜ್ಯವನ್ನು ಪಡೆದ ನಂತರ ,  ಕಪಿಗಳ ರಾಜನಾದ ಸುಗ್ರೀವನು ಭೋಗದಲ್ಲಿ ಅತ್ಯಂತ ಆಸಕ್ತನಾಗಿ,  ರಾಮಚಂದ್ರನ ಉಪಕಾರವನ್ನು ಮರೆಯಲು, ಶ್ರೇಷ್ಠ ಬುದ್ಧಿಯುಳ್ಳ ರಾಮನ ಪಾದ ಸೇವಕನಾದ ಹನುಮಂತನು ಅವನಿಗೆ  ಬುದ್ಧಿವಾದ  ಹೇಳಿ ಕರ್ತವ್ಯವನ್ನು ನೆನಪಿಸುತ್ತಾನೆ.

ನ ವಿಸ್ಮೃತಿಸ್ತೇ ರಘುವರ್ಯ್ಯಕಾರ್ಯ್ಯೇ ಕಾರ್ಯ್ಯಾ ಕಥಞ್ಚಿತ್ ಸ ಹಿ ನೋsಭಿಪೂಜ್ಯಃ ।
ನ ಚೇತ್ ಸ್ವಯಂ ಕರ್ತ್ತುಮಭಿಷ್ಟಮದ್ಯತೇ ದ್ಧ್ರು ವಂ ಬಲೇನಾಪಿ ಹಿ ಕಾರಯಾಮಿ ॥೬.೨೫॥

“ನಿನಗೆ ರಾಮಚಂದ್ರನ ಕೆಲಸದಲ್ಲಿ ಮರೆವು ಇರಬಾರದು. ಅವನು ನಮಗೆ ಪೂಜ್ಯನಷ್ಟೇ. ನಿನಗೆ ಕರ್ತವ್ಯ ನಿಭಾಯಿಸಲು ಇಷ್ಟವಿಲ್ಲದಿದ್ದರೆ, ಖಂಡಿತವಾಗಿ ನಾನು ಬಲಾತ್ಕಾರವಾಗಿ  ನಿನ್ನ ಕೈಯಲ್ಲಿ ರಾಮನ  ಕೆಲಸವನ್ನು  ಮಾಡಿಸುತ್ತೇನೆ” ಎನ್ನುತ್ತಾನೆ ಹನುಮಂತ.

ಸ ಏವಮುಕ್ತ್ವಾ ಹರಿರಾಜಸನ್ನಿಧೌ ದ್ವೀಪೇಷು ಸಪ್ತಸ್ವಪಿ ವಾನರಾನ್ ಪ್ರತಿ ।
ಸಮ್ಮೇಳನಾಯಾsಶುಗತೀನ್ ಸ್ಮ ವಾನರಾನ್ ಪ್ರಸ್ಥಾಪಯಾಮಾಸ ಸಮಸ್ತಶಃ ಪ್ರಭುಃ ॥೬.೨೬॥

ಈರೀತಿಯಾಗಿ  ಸುಗ್ರೀವನ ಸನ್ನಿಧಿಯಲ್ಲಿ ಹೇಳಿದ ಹನುಮಂತ,   ಏಳು ದ್ವೀಪಗಳಲ್ಲಿ ಇರುವ ಕಪಿಗಳನ್ನು  ಒಟ್ಟಿಗೆ ಸೇರಿಸಲು, ಅಲ್ಲಿಗೆ ಶೀಘ್ರದಲ್ಲಿ ತಲುಪಬಲ್ಲ ತಮ್ಮ  ವಾನರ ಧೂತರನ್ನು ಕಳುಹಿಸುತ್ತಾನೆ.

ಹರೀಶ್ವರಾಜ್ಞಾಪ್ರಣಿಧಾನಪೂರ್ವಕಂ ಹನೂಮತಾ ತೇ ಪ್ರಹಿತಾ ಹಿ ವಾನರಾಃ ।
ಸಮಸ್ತಶೈಲದ್ರುಮಷಣ್ಡಸಂಸ್ಥಿತಾನ್ ಹರೀನ್ ಸಮಾಧಾಯ ತದಾsಭಿಜಗ್ಮುಃ ॥೬.೨೭॥

ಸುಗ್ರೀವನ ಆಜ್ಞೆಯ ಜೊತೆಗೆ ಹನುಮಂತನಿಂದ ಕಳುಹಿಸಲ್ಪಟ್ಟ ವಾನರ ಧೂತರು ಎಲ್ಲಾ ಬೆಟ್ಟ, ಕಾಡುಗಳಲ್ಲಿ ಇರುವ ಕಪಿಗಳನ್ನು ಕರೆದುಕೊಂಡು ಬರುತ್ತಾರೆ.