ಸಸಮ್ಭ್ರಮನ್ತಂ ಪತಿತಂ
ಪದಾಬ್ಜಯೋಸ್ತ್ವರನ್ ಸಮುತ್ಥಾಪ್ಯ ಸಮಾಶ್ಲಿಷತ್ ಪ್ರಭುಃ ।
ಸ ಚೋಪವಿಷ್ಟೋ ಜಗದೀಶಸನ್ನಿಧೌ
ತದಾಜ್ಞಯೈವಾsದಿಶದಾಶು ವಾನರಾನ್ ॥೬.೩೨॥
ಉದ್ವೇಗದಿಂದ ಕೂಡಿ ಅವಸರ ಮಾಡುತ್ತಾ ತನ್ನ ಪಾದಕಮಲಗಳಿಗೆ ಬಿದ್ದ
ಸುಗ್ರೀವನನ್ನು ಮೇಲೆತ್ತಿದ ಶ್ರೀರಾಮನು, ಅವನನ್ನು
ಆಲಿಂಗಿಸುತ್ತಾನೆ. ಸುಗ್ರೀವನಾದರೋ, ರಾಮನ ಸನ್ನಿಧಾನದಲ್ಲಿ ಕುಳಿತವನಾಗಿ, ರಾಮನ ಅಪ್ಪಣೆಯಂತೆ ತನ್ನ ಕಪಿಗಳಿಗೆ
ಆಜ್ಞೆ ಮಾಡುತ್ತಾನೆ:
ಸಮಸ್ತದಿಕ್ಷು ಪ್ರಹಿತೇಷು ತೇನ
ಪ್ರಭುರ್ಹನೂಮನ್ತಮಿದಂ ಬಭಾಷೇ ।
ನ ಕಶ್ಚಿದೀಶಸ್ತ್ವದೃತೇsಸ್ತಿ ಸಾಧನೇ ಸಮಸ್ತಕಾರ್ಯ್ಯಪ್ರವರಸ್ಯ
ಮೇsಸ್ಯ ॥೬.೩೩॥
ಸುಗ್ರೀವನಿಂದ ಎಲ್ಲಾ ದಿಕ್ಕುಗಳಿಗೆ ವಾನರರು ಕಳುಹಿಸಲ್ಪಡಲು,
ರಾಮಚಂದ್ರನು ಹನುಮಂತನನ್ನು ಕುರಿತು ಹೇಳುತ್ತಾನೆ: “ನನ್ನ ಎಲ್ಲಾ ಕೆಲಸವನ್ನೂ ಸಾಧನೆ ಮಾಡಲು
ನಿನ್ನನ್ನು ಬಿಟ್ಟು ಇನ್ನಾರೂ ಕೂಡಾ ಸಮರ್ಥರಲ್ಲ” ಎಂದು.
ಅತಸ್ತ್ವಮೇವ ಪ್ರತಿಯಾಹಿ ದಕ್ಷಿಣಾಂ
ದಿಶಂ ಸಮಾದಾಯ ಮದಙ್ಗುಲೀಯಕಮ್ ।
ಇತೀರಿತೋsಸೌ ಪುರುಷೋತ್ತಮೇನ ಯಯೌ ದಿಶಂ ತಾಂ
ಯುವರಾಜಯುಕ್ತಃ॥೬.೩೪॥
“ನನ್ನ ಉಂಗುರವನ್ನು ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ಹೋಗು” ಎಂದು
ಶ್ರೀರಾಮನಿಂದ ಹೇಳಲ್ಪಟ್ಟ ಹನುಮಂತನು, ರಾಮಚಂದ್ರನಿಂದ
ಪ್ರಚೋಧಿತನಾಗಿ, ಯುವರಾಜ ಅಂಗದನೊಂದಿಗೆ ಕೂಡಿಕೊಂಡು, ದಕ್ಷಿಣ ದಿಕ್ಕಿನತ್ತ ತೆರಳುತ್ತಾನೆ.
ಸಮಸ್ತದಿಕ್ಷು ಪ್ರತಿಯಾಪಿತಾ ಹಿ ತೇ
ಹರೀಶ್ವರಾಜ್ಞಾಮುಪಧಾರ್ಯ್ಯ ಮಾಸತಃ ।
ಸಮಾಯ ಯುಸ್ತೇSಙ್ಗದಜಾಮ್ಬವನ್ಮುಖಾಃ ಸುತೇನ ವಾಯೋಃ
ಸಹಿತಾ ನ ಚಾSಯಯುಃ ॥೬.೩೫॥
ಸುಗ್ರೀವನ ಅಣತಿಯನ್ನು ಹೊತ್ತು ಎಲ್ಲಾ ದಿಕ್ಕುಗಳಿಗೆ ಕಳುಹಿಸಲ್ಪಟ್ಟ
ಆ ಕಪಿಗಳು ಕೊಟ್ಟ ಒಂದು ತಿಂಗಳ ಕಾಲಾವಕಾಶದೊಳಗೆ ಮರಳಿ ಬರುತ್ತಾರೆ. ಆದರೆ ಹನುಮಂತನಿಂದ ಕೂಡಿದ ಅಂಗದ, ಜಾಂಬವಂತನೇ ಮೊದಲಾದವರು
ಮರಳಿ ಬರಲಿಲ್ಲ.
No comments:
Post a Comment