ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, September 13, 2018

Mahabharata Tatparya Nirnaya Kannada 10.42-10.46


ವಸಿಷ್ಠನಾಮಾ ಕಮಳೋದ್ಭವಾತ್ಮಜಃ ಸುತೋsಸ್ಯ ಶಕ್ತಿಸ್ತನಯಃ ಪರಾಶರಃ
ತಸ್ಯೋತ್ತಮಂ ಸೋsಪಿ ತಪೋsಚರದ್ಧರಿಃ ಸುತೋ ಮಮ ಸ್ಯಾದಿತಿ ತದ್ಧರಿರ್ದ್ದದೌ        ೧೦.೪೨

ಬ್ರಹ್ಮನ ಮಗ  ವಸಿಷ್ಠ. ವಸಿಷ್ಠರ ಮಗ ಶಕ್ತಿ ಎನ್ನುವ ಹೆಸರಿನವನು.  ಶಕ್ತಿಗೆ ಪರಾಶರನು ಮಗನು. ಈ ಪರಾಶರರು ನಾರಾಯಣನು ತನ್ನ ಮಗನಾಗಲಿ ಎಂದು  ಉತ್ಕೃಷ್ಟವಾದ ತಪಸ್ಸನ್ನು ಮಾಡಿದರು. ಶ್ರೀಹರಿಯು ಪರಾಶರರಿಗೆ ಅವರ ಅಭೀಷ್ಟವನ್ನು ಅನುಗ್ರಹಿಸಿದನು.

ಉವಾಚ ಚೈನಂ ಭಗವಾನ್ ಸುತೋಷಿತೋ ವಸೋರ್ಮ್ಮದೀಯಸ್ಯ ಸುತಾsಸ್ತಿ ಶೋಭನಾ
ವನೇ ಮೃಗಾರ್ತ್ಥಂ ಚರತೋsಸ್ಯ ವೀಯ್ಯಂ ಪಪಾತ ಭಾರ್ಯ್ಯಾಂ ಮನಸಾ ಗತಸ್ಯ   ೧೦.೪೩

ತಚ್ಛ್ಯೇನಹಸ್ತೇ ಪ್ರದದೌ ಸ ತಸ್ಯೈ ದಾತುಂ ತದನ್ಯೇನ ತು ಯುದ್ಧ್ಯತೋsಪತತ್
ಜಗ್ರಾಸ ತನ್ಮತ್ಸ್ಯವಧೂರ್ಯ್ಯಮಸ್ವಸುರ್ಜ್ಜಲಸ್ಥಮೇನಾಂ ಜಗೃಹುಶ್ಚ ದಾಶಾಃ    ೧೦.೪೪

ತದ್ಗರ್ಭತೋsಭೂನ್ಮಿಥುನಂ ಸ್ವರಾಜ್ಞೇ ನ್ಯವೇದಯನ್ ಸೋsಪಿ ವಸೋಃ ಸಮರ್ಪ್ಪಯತ್
ಪುತ್ರಂ ಸಮಾದಾಯ ಸುತಾಂ ಸ ತಸ್ಮೈ ದದೌ ಸುತೋsಭೂದಥ ಮತ್ಸ್ಯರಾಜಃ ೧೦.೪೫

ಕನ್ಯಾ ತು ಸಾ ದಾಶರಾಜಸ್ಯ ಸದ್ಮನ್ಯವರ್ದ್ಧತಾತೀವ ಸುರೂಪಯುಕ್ತಾ
ನಾಮ್ನಾ ಚ ಸಾ ಸತ್ಯವತೀತಿ ತಸ್ಯಾಂ ತವಾsತ್ಮಜೋsಹಂ ಭವಿತಾಸ್ಮ್ಯಜೋsಪಿ    ೧೦.೪೬

ಪರಾಶರರ ತಪಸ್ಸಿನಿಂದ ಅತ್ಯಂತ ಸಂತಸಗೊಂಡ ನಾರಾಯಣನು ಅವರನ್ನು  ಕುರಿತು ಹೀಗೆ ಹೇಳುತ್ತಾನೆ: “ನನ್ನ ಭಕ್ತನಾದ ವಸುರಾಜನಿಗೆ ಅತ್ತ್ಯಂತ ಸಾತ್ತ್ವಿಕಳಾದ ಮಗಳೊಬ್ಬಳಿದ್ದಾಳೆ. ಅವಳಲ್ಲಿ ನಿನ್ನ ಮಗನಾಗಿ ಅವತರಿಸುತ್ತೇನೆ” ಎಂದು.
ಆಕೆಯ ಉತ್ಪತ್ತಿಪೂರ್ವಕ ಕಥೆಯನ್ನು ಇಲ್ಲಿ ಹೇಳಲಾಗಿದೆ: ಒಮ್ಮೆ ಕಾಡಿನಲ್ಲಿ ಬೇಟೆಗೆಂದು ತಿರುಗುತ್ತಿದ್ದ ವಸುರಾಜ, ಕಾಡಿನ ಸೌಂದರ್ಯವನ್ನು ನೋಡಿ, ಮಾನಸಿಕವಾಗಿ ತನ್ನ ಹೆಂಡತಿಯನ್ನು ಸೇರಿದ. ಆಗ  ಆತನ ವೀರ್ಯ ಸ್ಕಲನಗೊಂಡಿತು.
ಈ ರೀತಿ ಸ್ಕಲನಗೊಂಡ ರೇತಸ್ಸನ್ನು  ವಸುವು ಗಿಡುಗದ ಕೈಯಲ್ಲಿ  ಕೊಟ್ಟು, ಅದನ್ನು  ತನ್ನ ಹೆಂಡತಿಗೆ ಕೊಡಲು ಹೇಳಿ ಕಳುಹಿಸಿದ.  ಗಿಡುಗ ಆ ರೇತಸ್ಸನ್ನು ಹೊತ್ತು ಆಕಾಶದಲ್ಲಿ ಸಾಗುತ್ತಿರುವಾಗ, ಇನ್ನೊಂದು ಗಿಡುಗ ಈ ಗಿಡುಗದೊಂದಿಗೆ ಯುದ್ಧಕ್ಕೆ ನಿಂತಿತು. ಹೀಗೆ ಯುದ್ಧ ಮಾಡುವಾಗ ಗಿಡುಗದ ಕೈಯಲ್ಲಿದ್ದ  ರೇತಸ್ಸು ಯಮುನಾ ನದಿಯ ನೀರಿನಲ್ಲಿ ಬಿದ್ದಿತು. ಆ ರೀತಿ ಬಿದ್ದ ರೇತಸ್ಸನ್ನು  ಒಂದು ಹೆಣ್ಣು ಮೀನು ನುಂಗಿತು. ಆ ಮೀನನ್ನು ಅಂಬಿಗರು ಹಿಡಿದರು.
ಆ ಮೀನಿನ ಹೊಟ್ಟೆಯಲ್ಲಿ ಬೆಸ್ತರು  ಅವಳಿ ಜವಳಿ ಮಕ್ಕಳಿರುವುದನ್ನು ಕಂಡರು ಮತ್ತು ಅದನ್ನು ಅವರು ತಮ್ಮ ಒಡೆಯನಾದ ದಾಶರಾಜನಿಗೆ ಒಪ್ಪಿಸಿದರು. ದಾಶರಾಜ ಆ ಮಕ್ಕಳನ್ನು ತನ್ನ ರಾಜನಾದ ವಸುವಿಗೇ ನಿವೇದನೆ ಮಾಡಿದನು. ಅವನಾದರೋ, ಗಂಡುಮಗುವನ್ನು ತಾನಿಟ್ಟುಕೊಂಡು,  ಮಗಳನ್ನು ದಾಶರಾಜನಿಗೆ ಕೊಟ್ಟನು. ಆ ಗಂಡುಮಗುವೇ ಮುಂದೆ  ಮತ್ಸ್ಯರಾಜನಾದ. ಅವನೇ ವಿರಾಟ.
ಭಗವಂತ ಹೇಳುತ್ತಾನೆ: “ಈ ಹೆಣ್ಣು ಮಗಳು ಅಂಬಿಗರ ಒಡೆಯನ ಮನೆಯಲ್ಲಿ ಬೆಳೆದಿದ್ದಾಳೆ. ಆಕೆ ಅತ್ಯಂತ ರೂಪವತಿ. ಅವಳ ಹೆಸರು ಸತ್ಯವತಿ. ನಿನ್ನ ಮೇಲಿನ ಅನುಗ್ರಹದಿಂದ ಹುಟ್ಟಿಲ್ಲದ ನಾನು ಅವಳಲ್ಲಿ ನಿನ್ನ ಮಗನಾಗಿ ಅವತರಿಸುತ್ತೇನೆ” ಎಂದು.

Wednesday, September 12, 2018

Mahabharata Tatparya Nirnaya Kannada 10.38-10.41


ವೇದಾಶ್ಚ ಸರ್ವೇ ಸಹಶಾಸ್ತ್ರಸಙ್ಘಾ ಉತ್ಸಾದಿತಾಸ್ತೇನ ನ ಸನ್ತಿ ತೇsದ್ಯ
ತತ್ ಸಾಧು ಭೂಮಾವವತೀರ್ಯ್ಯ ವೇದಾನುದ್ಧೃತ್ಯ ಶಾಸ್ತ್ರಾಣಿ ಕುರುಷ್ವ ಸಮ್ಯಕ್           ೧೦.೩೮

ಮುಂದುವರಿದು ದೇವತೆಗಳು ಹೇಳುತ್ತಾರೆ: ಶಾಸ್ತ್ರಗಳಿಂದ ಕೂಡಿರುವ ಎಲ್ಲಾ ವೇದಗಳು ಕಲಿಯ ಪ್ರವೇಶದಿಂದಾಗಿ ಜನರ ಮನಸ್ಸಿನಿಂದ ಅಳಿದಿದೆ. ಅವುಗಳು ಈಗ ಯಾರ ಚಿತ್ತದಲ್ಲೂ ಉಳಿದಿಲ್ಲಾ. ಆ ಕಾರಣದಿಂದ ಭೂಮಿಯಲ್ಲಿ ಮತ್ತೆ ಅವತರಿಸಿ,  ವೇದಗಳನ್ನು ಸಂಪಾದಿಸಿ, ಚೆನ್ನಾದ ಶಾಸ್ತ್ರಗಳನ್ನು ನೀನು ನೀಡಬೇಕು.

ಅದೃಶ್ಯಮಜ್ಞೇಯಮತರ್ಕ್ಕ್ಯರೂಪಂ ಕಲಿಂ ನಿಲೀನಂ ಹೃದಯೇsಖಿಲಸ್ಯ
ಸಚ್ಛಾಸ್ತ್ರಶಸ್ತ್ರೇಣ ನಿಹತ್ಯ ಶೀಘ್ರಂ ಪದಂ ನಿಜಂ ದೇಹಿ ಮಹಾಜನಸ್ಯ         ೧೦.೩೯

ಕಣ್ಣಿಗೆ ಕಾಣದ, ತಿಳಿಯದ, ಊಹಿಸಲಾಗದ, ಆದರೆ ಎಲ್ಲರ ಹೃದಯದಲ್ಲಿ ಅಡಗಿಕೊಂಡಿರುವ ಕಲಿಯನ್ನು, ಒಳ್ಳೆಯ ಶಾಸ್ತ್ರವೆಂಬ ಶಸ್ತ್ರದಿಂದ ಕೊಂದು, ಭಕ್ತರಿಗೆ ನಿಜಪದವನ್ನು ಬೇಗದಲ್ಲಿ ಕೊಡು.

ಋತೇ ಭವನ್ತಂ ನಹಿ ತನ್ನಿಹನ್ತಾ ತ್ವಮೇಕ ಏವಾಖಿಲಶಕ್ತಿಪೂರ್ಣ್ಣಃ
ತತೋ ಭವನ್ತಂ ಶರಣಂ ಗತಾ ವಯಂ ತಮೋನಿಹತ್ಯೈ ನಿಜಭೋಧವಿಗ್ರಹಮ್         ೧೦.೪೦

ನಿನ್ನನ್ನು ಬಿಟ್ಟು ಕಲಿಯನ್ನು ಕೊಲ್ಲಲು ಇನ್ನೊಬ್ಬ ಸಮರ್ಥನಲ್ಲ. ನೀನೊಬ್ಬನೇ  ಎಲ್ಲಾ ಶಕ್ತಿಯಿಂದ ಪೂರ್ಣನಾಗಿರುವವನು.  ಆ ಕಾರಣದಿಂದ ನಾವು ನಮ್ಮ ಅಜ್ಞಾನದ ನಾಶಕ್ಕಾಗಿ ಸ್ವರೂಪಜ್ಞಾನವೇ ಮೈದಾಳಿ ಬಂದ ನಿನ್ನನ್ನು ಶರಣು ಹೊಂದಿದ್ದೇವೆ.
[ಕಲ್ಕಿ ರೂಪದಿಂದ ಶ್ರೀಹರಿಯು ಕಲಿಯನ್ನು ಸಂಹಾರ ಮಾಡುತ್ತಾನೆ ಎನ್ನುವುದು ಸುಪ್ರಸಿದ್ಧವು]

ಇತೀರಿತಸ್ತೈರಭಯಂ ಪ್ರದಾಯ ಸುರೇಶ್ವರಾಣಾಂ ಪರಮೋsಪ್ರಮೇಯಃ
ಪ್ರಾದುರ್ಭಬೂವಾಮೃತಭೂರಿಳಾಯಾಂ ವಿಶುದ್ಧವಿಜ್ಞಾನಘನಸ್ವರೂಪಃ     ೧೦.೪೧

ಈ ರೀತಿಯಾಗಿ ದೇವತೆಗಳಿಂದ ಪ್ರಾರ್ಥಿಸಲ್ಪಟ್ಟಾಗ, ಅವರಿಗೆ ಅಭಯವನ್ನಿತ್ತ  ಉತ್ಕೃಷ್ಟನೂ, ಅಪ್ರಮೇಯನೂ, ಶುದ್ಧವಾದ ಅರಿವಿನ ಗಟ್ಟಿಸ್ವರೂಪವುಳ್ಳವನೂ ಆದ ನಾರಾಯಣನು ಭೂಮಿಯಲ್ಲಿ ಅವತರಿಸಿದನು.
[ಇಲ್ಲಿ ಭಗವಂತನನ್ನು ‘ಅಮೃತಭೂಃ’  ಎನ್ನುವ ವಿಶೇಷಣದಿಂದ ಸಂಬೋಧಿಸಿದ್ದಾರೆ. ಭೂಃ  ಎಂದರೆ ಹುಟ್ಟು. ಮೃತ ಎಂದರೆ ಸಾವು. ‘ಅ-ಮೃತ-ಭೂಃ’   ಎಂದರೆ: ಹುಟ್ಟು-ಸಾವಿಲ್ಲದವನು. ಅಂತಹ ಭಗವಂತ ಭೂಮಿಯಲ್ಲಿ ಅವತರಿಸಿದನು]

Tuesday, September 11, 2018

Mahabharata Tatparya Nirnaya Kannada 10.33-10.37


ತಸ್ಯಾರ್ದ್ಧದೇಹಾತ್ ಸಮಭೂದಲಕ್ಷ್ಮೀಸ್ತತ್ಪುತ್ರಕಾ ದೋಷಗಣಾಶ್ಚ ಸರ್ವಶಃ
ಅಥೇನ್ದಿರಾ ವಕ್ಷಸಿ ತೇ ಸಮಾಸ್ಥಿತಾ ತ್ವತ್ ಕಣ್ಠಗಂ ಕೌಸ್ತುಭಮಾಸ ಧಾತಾ           ೧೦.೩೩

ಅವನ(ಕಲಿಯ) ಅರ್ಧದೇಹದಿಂದ ಅಲಕ್ಷ್ಮಿ ಹುಟ್ಟಿದಳು. (ಅಲಕ್ಷ್ಮಿ ಕಲಿಯ ಅರ್ಧಾಂಗಿ).  ಅವರಿಬ್ಬರ ಮಕ್ಕಳು ಎಲ್ಲಾ ದೋಷಗಳೇ ಆಗಿವೆ. (ಸಮಸ್ತ ದೋಷಗಳ ಅಭಿಮಾನಿಗಳು ಕಲಿ-ಅಲಕ್ಷ್ಮಿಯ ಮಕ್ಕಳಾದ ದೈತ್ಯವೃನ್ಧವಾಗಿದೆ).
ಸಮುದ್ರ ಮಥನದಲ್ಲಿ ಆವಿರ್ಭವಿಸಿದ ಶ್ರೀಲಕ್ಷ್ಮಿ ನಿನ್ನ ಎದೆಯಲ್ಲಿ ಆಶ್ರಯಪಡೆದಳು. ಬ್ರಹ್ಮಾಭಿಮಾನಿಕವಾದ ಆ ಕೌಸ್ತುಭವು ನಿನ್ನ ಕಂಠದಲ್ಲಿ ಉಳಿಯಿತು.

ಯಥಾವಿಭಾಗಂ ಚ ಸುರೇಷು ದತ್ತಾಸ್ತ್ವಯಾ ತಥಾsನ್ಯೇsಪಿ ಹಿ ತತ್ರ ಜಾತಾಃ
ಇತ್ಥಂ ತ್ವಯಾ ಸಾಧ್ವಮೃತಂ ಸುರೇಷು ದತ್ತಂ ಹಿ ಮೋಕ್ಷಸ್ಯ ನಿದರ್ಶನಾಯ           ೧೦.೩೪

ದೇವತೆಗಳಿಗೂ ಕೂಡಾ, ಅವರವರ ತಾರತಮ್ಯಕ್ಕೆ ಅನುಗುಣವಾಗಿ ನೀನು ಅಮೃತವನ್ನು ನೀಡಿದೆ. ಉಚ್ಚೈಃಶ್ರವಸ್ಸು, ಐರಾವತ, ಪಾರಿಜಾತ, ಮೊದಲಾದವು ದೇವತೆಗಳಿಗೆ ನಿನ್ನಿಂದ ಕೊಡಲ್ಪಟ್ಟಿತು. ಈರೀತಿಯಾಗಿ ಮೋಕ್ಷದ ನಿದರ್ಶನಕ್ಕಾಗಿ ಸ್ವಾದುವಾದ ಅಮೃತವು  ದೇವತೆಗಳಿಗೆ ನಿನ್ನಿಂದ ಕೊಡಲ್ಪಟ್ಟಿತು.

ಭವೇದ್ಧಿ ಮೋಕ್ಷೋ ನಿಯತಂ ಸುರಾಣಾಂ ನೈವಾಸುರಾಣಾಂ ಸ ಕಥಞ್ಚನ ಸ್ಯಾತ್
ಉತ್ಸಾಹಯುಕ್ತಸ್ಯ ಚ ತತ್ ಪ್ರತೀಪಂ ಭವೇದ್ಧಿ ರಾಹೋರಿವ ದುಃಖರೂಪಮ್ ೧೦.೩೫

ದೇವತೆಗಳಿಗೆ ಮೋಕ್ಷವು ನಿಯತವು(ಹಾಗಾಗಿ ಅವರಿಗೆ ನಿನ್ನಿಂದ ಅಮೃತ ಕೊಡಲ್ಪಟ್ಟಿತು) . ಅಸುರರಿಗೆ ಎಂದಿಗೂ ಮೋಕ್ಷವಿಲ್ಲ(ಹಾಗಾಗಿ ಅವರಿಗೆ ಅಮೃತ ಸಿಗಲಿಲ್ಲ). ಒಬ್ಬ ಉತ್ಸಾಹದಿಂದ ಕೂಡಿದ್ದರೆ, ಅದು ರಾಹುವಿನಂತೆ ದುಃಖರೂಪವಾಗಿ ಪರಿಣಮಿಸುತ್ತದೆ.(ಅಯೋಗ್ಯನಾದವನು ರಾಹುವಿನಂತೆ ಮೋಕ್ಷವನ್ನು ಬಯಸಿ ಕರ್ಮವನ್ನು ಮಾಡಿದರೆ, ಅದು ಅವನ ದುಃಖಕ್ಕೆ ಕಾರಣವಾಗುತ್ತದೆ)  [ಈ ರೀತಿ ಸಮುದ್ರ ಮಥನ ಎನ್ನುವುದು ದೇವತೆಗಳು ಮತ್ತು ದೈತ್ಯರ ಮುಂದಿನ ಗತಿಯನ್ನು ತಿಳಿಸತಕ್ಕ  ಒಂದು ಮಾದರಿ ಎನ್ನುವುದನ್ನು ನಾವಿಲ್ಲಿ ತಿಳಿಯುತ್ತೇವೆ].     

ಕಲಿಸ್ತ್ವಯಂ ಬ್ರಹ್ಮವರಾದಿದಾನೀಂ ವಿಬಾಧತೇsಸ್ಮಾನ್ ಸಕಲಾನ್ ಪ್ರಜಾಶ್ಚ
ಅಜ್ಞಾನಮಿತ್ಥ್ಯಾಮತಿರೂಪತೋsಸೌ ಪ್ರವಿಶ್ಯ ಸಜ್ಜ್ಞಾನವಿರುದ್ಧರೂಪಃ ೧೦.೩೬

ಬ್ರಹ್ಮವರದಿಂದ ಅವಧ್ಯನಾದ  ಕಲಿಯು, ಈಗ ಅಜ್ಞಾನ ಮತ್ತು ವಿಪರೀತ ಜ್ಞಾನ(ಮಿಥ್ಯಾಮತಿ)  ರೂಪದಿಂದ, ನಮ್ಮೆಲ್ಲರ ನ್ನು ಪ್ರವೇಶಮಾಡಿ ಪೀಡಿಸುತ್ತಿದ್ದಾನೆ.  ಈ ರೀತಿ ಆತ ನಮಗೆ ಒಳ್ಳೆಯ ಜ್ಞಾನ ಬರದಂತೆ ತಡೆಯುತ್ತಿದ್ದಾನೆ.

ತ್ವದಾಜ್ಞಯಾ ತಸ್ಯ ವರೋsಬ್ಜಜೇನ ದತ್ತಃ ಸ ಆವಿಶ್ಯ ಶಿವಂ ಚಕಾರ
ಕದಾಗಮಾಂಸ್ತಸ್ಯ ಕುಯುಕ್ತಿಬಾಧಾನ್ ನಹಿ ತ್ವದನ್ಯಶ್ಚರಿತುಂ ಸಮರ್ತ್ಥಃ ೧೦.೩೭

ನಿನ್ನ ಆಜ್ಞೆಯಿಂದಲೇ  ಅವನಿಗೆ ಬ್ರಹ್ಮನಿಂದ ವರವು ಕೊಡಲ್ಪಟ್ಟಿದೆ. ಅಂಥವನು ಶಿವನನ್ನು ಪ್ರವೇಶಿಸಿ, ಕುತ್ಸಿತ ಆಗಮಗಳನ್ನು ರಚಿಸಿದ್ದಾನೆ. (ಪಾಶುಪತಾಗಮನ ಇತ್ಯಾದಿ). ಅವನ ಕುಯುಕ್ತಿಗಳ ನಾಶವನ್ನು ನಿನಗಿಂತ ಬೇರೆಯಾದವನು ಮಾಡಲು ಸಾಧ್ಯವಿಲ್ಲಾ. [ಅದಕ್ಕಾಗಿ, ಜ್ಞಾನವನ್ನು ನೀಡುವವನಾಗಿ ನೀನೇ (ವ್ಯಾಸ ರೂಪದಿಂದ)ಅವತರಿಸಿ ಬರಬೇಕು ಎನ್ನುವ ದೇವತೆಗಳ ಪ್ರಾರ್ಥನೆ ಇದಾಗಿದೆ].