ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 11, 2018

Mahabharata Tatparya Nirnaya Kannada 10.33-10.37


ತಸ್ಯಾರ್ದ್ಧದೇಹಾತ್ ಸಮಭೂದಲಕ್ಷ್ಮೀಸ್ತತ್ಪುತ್ರಕಾ ದೋಷಗಣಾಶ್ಚ ಸರ್ವಶಃ
ಅಥೇನ್ದಿರಾ ವಕ್ಷಸಿ ತೇ ಸಮಾಸ್ಥಿತಾ ತ್ವತ್ ಕಣ್ಠಗಂ ಕೌಸ್ತುಭಮಾಸ ಧಾತಾ           ೧೦.೩೩

ಅವನ(ಕಲಿಯ) ಅರ್ಧದೇಹದಿಂದ ಅಲಕ್ಷ್ಮಿ ಹುಟ್ಟಿದಳು. (ಅಲಕ್ಷ್ಮಿ ಕಲಿಯ ಅರ್ಧಾಂಗಿ).  ಅವರಿಬ್ಬರ ಮಕ್ಕಳು ಎಲ್ಲಾ ದೋಷಗಳೇ ಆಗಿವೆ. (ಸಮಸ್ತ ದೋಷಗಳ ಅಭಿಮಾನಿಗಳು ಕಲಿ-ಅಲಕ್ಷ್ಮಿಯ ಮಕ್ಕಳಾದ ದೈತ್ಯವೃನ್ಧವಾಗಿದೆ).
ಸಮುದ್ರ ಮಥನದಲ್ಲಿ ಆವಿರ್ಭವಿಸಿದ ಶ್ರೀಲಕ್ಷ್ಮಿ ನಿನ್ನ ಎದೆಯಲ್ಲಿ ಆಶ್ರಯಪಡೆದಳು. ಬ್ರಹ್ಮಾಭಿಮಾನಿಕವಾದ ಆ ಕೌಸ್ತುಭವು ನಿನ್ನ ಕಂಠದಲ್ಲಿ ಉಳಿಯಿತು.

ಯಥಾವಿಭಾಗಂ ಚ ಸುರೇಷು ದತ್ತಾಸ್ತ್ವಯಾ ತಥಾsನ್ಯೇsಪಿ ಹಿ ತತ್ರ ಜಾತಾಃ
ಇತ್ಥಂ ತ್ವಯಾ ಸಾಧ್ವಮೃತಂ ಸುರೇಷು ದತ್ತಂ ಹಿ ಮೋಕ್ಷಸ್ಯ ನಿದರ್ಶನಾಯ           ೧೦.೩೪

ದೇವತೆಗಳಿಗೂ ಕೂಡಾ, ಅವರವರ ತಾರತಮ್ಯಕ್ಕೆ ಅನುಗುಣವಾಗಿ ನೀನು ಅಮೃತವನ್ನು ನೀಡಿದೆ. ಉಚ್ಚೈಃಶ್ರವಸ್ಸು, ಐರಾವತ, ಪಾರಿಜಾತ, ಮೊದಲಾದವು ದೇವತೆಗಳಿಗೆ ನಿನ್ನಿಂದ ಕೊಡಲ್ಪಟ್ಟಿತು. ಈರೀತಿಯಾಗಿ ಮೋಕ್ಷದ ನಿದರ್ಶನಕ್ಕಾಗಿ ಸ್ವಾದುವಾದ ಅಮೃತವು  ದೇವತೆಗಳಿಗೆ ನಿನ್ನಿಂದ ಕೊಡಲ್ಪಟ್ಟಿತು.

ಭವೇದ್ಧಿ ಮೋಕ್ಷೋ ನಿಯತಂ ಸುರಾಣಾಂ ನೈವಾಸುರಾಣಾಂ ಸ ಕಥಞ್ಚನ ಸ್ಯಾತ್
ಉತ್ಸಾಹಯುಕ್ತಸ್ಯ ಚ ತತ್ ಪ್ರತೀಪಂ ಭವೇದ್ಧಿ ರಾಹೋರಿವ ದುಃಖರೂಪಮ್ ೧೦.೩೫

ದೇವತೆಗಳಿಗೆ ಮೋಕ್ಷವು ನಿಯತವು(ಹಾಗಾಗಿ ಅವರಿಗೆ ನಿನ್ನಿಂದ ಅಮೃತ ಕೊಡಲ್ಪಟ್ಟಿತು) . ಅಸುರರಿಗೆ ಎಂದಿಗೂ ಮೋಕ್ಷವಿಲ್ಲ(ಹಾಗಾಗಿ ಅವರಿಗೆ ಅಮೃತ ಸಿಗಲಿಲ್ಲ). ಒಬ್ಬ ಉತ್ಸಾಹದಿಂದ ಕೂಡಿದ್ದರೆ, ಅದು ರಾಹುವಿನಂತೆ ದುಃಖರೂಪವಾಗಿ ಪರಿಣಮಿಸುತ್ತದೆ.(ಅಯೋಗ್ಯನಾದವನು ರಾಹುವಿನಂತೆ ಮೋಕ್ಷವನ್ನು ಬಯಸಿ ಕರ್ಮವನ್ನು ಮಾಡಿದರೆ, ಅದು ಅವನ ದುಃಖಕ್ಕೆ ಕಾರಣವಾಗುತ್ತದೆ)  [ಈ ರೀತಿ ಸಮುದ್ರ ಮಥನ ಎನ್ನುವುದು ದೇವತೆಗಳು ಮತ್ತು ದೈತ್ಯರ ಮುಂದಿನ ಗತಿಯನ್ನು ತಿಳಿಸತಕ್ಕ  ಒಂದು ಮಾದರಿ ಎನ್ನುವುದನ್ನು ನಾವಿಲ್ಲಿ ತಿಳಿಯುತ್ತೇವೆ].     

ಕಲಿಸ್ತ್ವಯಂ ಬ್ರಹ್ಮವರಾದಿದಾನೀಂ ವಿಬಾಧತೇsಸ್ಮಾನ್ ಸಕಲಾನ್ ಪ್ರಜಾಶ್ಚ
ಅಜ್ಞಾನಮಿತ್ಥ್ಯಾಮತಿರೂಪತೋsಸೌ ಪ್ರವಿಶ್ಯ ಸಜ್ಜ್ಞಾನವಿರುದ್ಧರೂಪಃ ೧೦.೩೬

ಬ್ರಹ್ಮವರದಿಂದ ಅವಧ್ಯನಾದ  ಕಲಿಯು, ಈಗ ಅಜ್ಞಾನ ಮತ್ತು ವಿಪರೀತ ಜ್ಞಾನ(ಮಿಥ್ಯಾಮತಿ)  ರೂಪದಿಂದ, ನಮ್ಮೆಲ್ಲರ ನ್ನು ಪ್ರವೇಶಮಾಡಿ ಪೀಡಿಸುತ್ತಿದ್ದಾನೆ.  ಈ ರೀತಿ ಆತ ನಮಗೆ ಒಳ್ಳೆಯ ಜ್ಞಾನ ಬರದಂತೆ ತಡೆಯುತ್ತಿದ್ದಾನೆ.

ತ್ವದಾಜ್ಞಯಾ ತಸ್ಯ ವರೋsಬ್ಜಜೇನ ದತ್ತಃ ಸ ಆವಿಶ್ಯ ಶಿವಂ ಚಕಾರ
ಕದಾಗಮಾಂಸ್ತಸ್ಯ ಕುಯುಕ್ತಿಬಾಧಾನ್ ನಹಿ ತ್ವದನ್ಯಶ್ಚರಿತುಂ ಸಮರ್ತ್ಥಃ ೧೦.೩೭

ನಿನ್ನ ಆಜ್ಞೆಯಿಂದಲೇ  ಅವನಿಗೆ ಬ್ರಹ್ಮನಿಂದ ವರವು ಕೊಡಲ್ಪಟ್ಟಿದೆ. ಅಂಥವನು ಶಿವನನ್ನು ಪ್ರವೇಶಿಸಿ, ಕುತ್ಸಿತ ಆಗಮಗಳನ್ನು ರಚಿಸಿದ್ದಾನೆ. (ಪಾಶುಪತಾಗಮನ ಇತ್ಯಾದಿ). ಅವನ ಕುಯುಕ್ತಿಗಳ ನಾಶವನ್ನು ನಿನಗಿಂತ ಬೇರೆಯಾದವನು ಮಾಡಲು ಸಾಧ್ಯವಿಲ್ಲಾ. [ಅದಕ್ಕಾಗಿ, ಜ್ಞಾನವನ್ನು ನೀಡುವವನಾಗಿ ನೀನೇ (ವ್ಯಾಸ ರೂಪದಿಂದ)ಅವತರಿಸಿ ಬರಬೇಕು ಎನ್ನುವ ದೇವತೆಗಳ ಪ್ರಾರ್ಥನೆ ಇದಾಗಿದೆ].

No comments:

Post a Comment