ವೇದಾಶ್ಚ ಸರ್ವೇ ಸಹಶಾಸ್ತ್ರಸಙ್ಘಾ ಉತ್ಸಾದಿತಾಸ್ತೇನ ನ ಸನ್ತಿ ತೇsದ್ಯ ।
ತತ್ ಸಾಧು ಭೂಮಾವವತೀರ್ಯ್ಯ ವೇದಾನುದ್ಧೃತ್ಯ ಶಾಸ್ತ್ರಾಣಿ ಕುರುಷ್ವ
ಸಮ್ಯಕ್ ॥೧೦.೩೮॥
ಮುಂದುವರಿದು ದೇವತೆಗಳು
ಹೇಳುತ್ತಾರೆ: ಶಾಸ್ತ್ರಗಳಿಂದ ಕೂಡಿರುವ ಎಲ್ಲಾ ವೇದಗಳು ಕಲಿಯ ಪ್ರವೇಶದಿಂದಾಗಿ ಜನರ ಮನಸ್ಸಿನಿಂದ
ಅಳಿದಿದೆ. ಅವುಗಳು ಈಗ ಯಾರ ಚಿತ್ತದಲ್ಲೂ ಉಳಿದಿಲ್ಲಾ. ಆ ಕಾರಣದಿಂದ ಭೂಮಿಯಲ್ಲಿ ಮತ್ತೆ ಅವತರಿಸಿ, ವೇದಗಳನ್ನು ಸಂಪಾದಿಸಿ, ಚೆನ್ನಾದ ಶಾಸ್ತ್ರಗಳನ್ನು ನೀನು
ನೀಡಬೇಕು.
ಅದೃಶ್ಯಮಜ್ಞೇಯಮತರ್ಕ್ಕ್ಯರೂಪಂ ಕಲಿಂ ನಿಲೀನಂ ಹೃದಯೇsಖಿಲಸ್ಯ ।
ಸಚ್ಛಾಸ್ತ್ರಶಸ್ತ್ರೇಣ ನಿಹತ್ಯ ಶೀಘ್ರಂ ಪದಂ ನಿಜಂ ದೇಹಿ ಮಹಾಜನಸ್ಯ ॥೧೦.೩೯॥
ಕಣ್ಣಿಗೆ ಕಾಣದ, ತಿಳಿಯದ, ಊಹಿಸಲಾಗದ,
ಆದರೆ ಎಲ್ಲರ ಹೃದಯದಲ್ಲಿ ಅಡಗಿಕೊಂಡಿರುವ ಕಲಿಯನ್ನು, ಒಳ್ಳೆಯ ಶಾಸ್ತ್ರವೆಂಬ ಶಸ್ತ್ರದಿಂದ
ಕೊಂದು, ಭಕ್ತರಿಗೆ ನಿಜಪದವನ್ನು ಬೇಗದಲ್ಲಿ ಕೊಡು.
ಋತೇ ಭವನ್ತಂ ನಹಿ ತನ್ನಿಹನ್ತಾ ತ್ವಮೇಕ ಏವಾಖಿಲಶಕ್ತಿಪೂರ್ಣ್ಣಃ ।
ತತೋ ಭವನ್ತಂ ಶರಣಂ ಗತಾ ವಯಂ ತಮೋನಿಹತ್ಯೈ ನಿಜಭೋಧವಿಗ್ರಹಮ್ ॥೧೦.೪೦॥
ನಿನ್ನನ್ನು ಬಿಟ್ಟು ಕಲಿಯನ್ನು
ಕೊಲ್ಲಲು ಇನ್ನೊಬ್ಬ ಸಮರ್ಥನಲ್ಲ. ನೀನೊಬ್ಬನೇ ಎಲ್ಲಾ
ಶಕ್ತಿಯಿಂದ ಪೂರ್ಣನಾಗಿರುವವನು. ಆ ಕಾರಣದಿಂದ
ನಾವು ನಮ್ಮ ಅಜ್ಞಾನದ ನಾಶಕ್ಕಾಗಿ ಸ್ವರೂಪಜ್ಞಾನವೇ ಮೈದಾಳಿ ಬಂದ ನಿನ್ನನ್ನು ಶರಣು
ಹೊಂದಿದ್ದೇವೆ.
[ಕಲ್ಕಿ ರೂಪದಿಂದ ಶ್ರೀಹರಿಯು ಕಲಿಯನ್ನು
ಸಂಹಾರ ಮಾಡುತ್ತಾನೆ ಎನ್ನುವುದು ಸುಪ್ರಸಿದ್ಧವು]
ಇತೀರಿತಸ್ತೈರಭಯಂ ಪ್ರದಾಯ ಸುರೇಶ್ವರಾಣಾಂ ಪರಮೋsಪ್ರಮೇಯಃ ।
ಪ್ರಾದುರ್ಭಬೂವಾಮೃತಭೂರಿಳಾಯಾಂ ವಿಶುದ್ಧವಿಜ್ಞಾನಘನಸ್ವರೂಪಃ ॥೧೦.೪೧॥
ಈ ರೀತಿಯಾಗಿ ದೇವತೆಗಳಿಂದ ಪ್ರಾರ್ಥಿಸಲ್ಪಟ್ಟಾಗ,
ಅವರಿಗೆ ಅಭಯವನ್ನಿತ್ತ ಉತ್ಕೃಷ್ಟನೂ, ಅಪ್ರಮೇಯನೂ,
ಶುದ್ಧವಾದ ಅರಿವಿನ ಗಟ್ಟಿಸ್ವರೂಪವುಳ್ಳವನೂ ಆದ ನಾರಾಯಣನು ಭೂಮಿಯಲ್ಲಿ ಅವತರಿಸಿದನು.
[ಇಲ್ಲಿ ಭಗವಂತನನ್ನು
‘ಅಮೃತಭೂಃ’ ಎನ್ನುವ ವಿಶೇಷಣದಿಂದ ಸಂಬೋಧಿಸಿದ್ದಾರೆ.
ಭೂಃ ಎಂದರೆ ಹುಟ್ಟು. ಮೃತ ಎಂದರೆ ಸಾವು. ‘ಅ-ಮೃತ-ಭೂಃ’ ಎಂದರೆ: ಹುಟ್ಟು-ಸಾವಿಲ್ಲದವನು. ಅಂತಹ ಭಗವಂತ ಭೂಮಿಯಲ್ಲಿ
ಅವತರಿಸಿದನು]
No comments:
Post a Comment