ವಸಿಷ್ಠನಾಮಾ ಕಮಳೋದ್ಭವಾತ್ಮಜಃ ಸುತೋsಸ್ಯ ಶಕ್ತಿಸ್ತನಯಃ ಪರಾಶರಃ ।
ತಸ್ಯೋತ್ತಮಂ ಸೋsಪಿ ತಪೋsಚರದ್ಧರಿಃ ಸುತೋ ಮಮ ಸ್ಯಾದಿತಿ
ತದ್ಧರಿರ್ದ್ದದೌ ॥೧೦.೪೨॥
ಬ್ರಹ್ಮನ ಮಗ ವಸಿಷ್ಠ. ವಸಿಷ್ಠರ ಮಗ ಶಕ್ತಿ ಎನ್ನುವ
ಹೆಸರಿನವನು. ಶಕ್ತಿಗೆ ಪರಾಶರನು ಮಗನು. ಈ ಪರಾಶರರು
ನಾರಾಯಣನು ತನ್ನ ಮಗನಾಗಲಿ ಎಂದು ಉತ್ಕೃಷ್ಟವಾದ
ತಪಸ್ಸನ್ನು ಮಾಡಿದರು. ಶ್ರೀಹರಿಯು ಪರಾಶರರಿಗೆ ಅವರ ಅಭೀಷ್ಟವನ್ನು ಅನುಗ್ರಹಿಸಿದನು.
ಉವಾಚ ಚೈನಂ ಭಗವಾನ್ ಸುತೋಷಿತೋ ವಸೋರ್ಮ್ಮದೀಯಸ್ಯ ಸುತಾsಸ್ತಿ ಶೋಭನಾ ।
ವನೇ ಮೃಗಾರ್ತ್ಥಂ ಚರತೋsಸ್ಯ ವೀಯ್ಯಂ ಪಪಾತ ಭಾರ್ಯ್ಯಾಂ ಮನಸಾ
ಗತಸ್ಯ ॥೧೦.೪೩॥
ತಚ್ಛ್ಯೇನಹಸ್ತೇ ಪ್ರದದೌ ಸ ತಸ್ಯೈ ದಾತುಂ ತದನ್ಯೇನ ತು ಯುದ್ಧ್ಯತೋsಪತತ್ ।
ಜಗ್ರಾಸ ತನ್ಮತ್ಸ್ಯವಧೂರ್ಯ್ಯಮಸ್ವಸುರ್ಜ್ಜಲಸ್ಥಮೇನಾಂ ಜಗೃಹುಶ್ಚ
ದಾಶಾಃ ॥೧೦.೪೪॥
ತದ್ಗರ್ಭತೋsಭೂನ್ಮಿಥುನಂ ಸ್ವರಾಜ್ಞೇ ನ್ಯವೇದಯನ್
ಸೋsಪಿ ವಸೋಃ ಸಮರ್ಪ್ಪಯತ್ ।
ಪುತ್ರಂ ಸಮಾದಾಯ ಸುತಾಂ ಸ ತಸ್ಮೈ ದದೌ ಸುತೋsಭೂದಥ ಮತ್ಸ್ಯರಾಜಃ ॥೧೦.೪೫॥
ಕನ್ಯಾ ತು ಸಾ ದಾಶರಾಜಸ್ಯ ಸದ್ಮನ್ಯವರ್ದ್ಧತಾತೀವ ಸುರೂಪಯುಕ್ತಾ ।
ನಾಮ್ನಾ ಚ ಸಾ ಸತ್ಯವತೀತಿ ತಸ್ಯಾಂ ತವಾsತ್ಮಜೋsಹಂ ಭವಿತಾಸ್ಮ್ಯಜೋsಪಿ ॥೧೦.೪೬॥
ಪರಾಶರರ ತಪಸ್ಸಿನಿಂದ ಅತ್ಯಂತ
ಸಂತಸಗೊಂಡ ನಾರಾಯಣನು ಅವರನ್ನು ಕುರಿತು ಹೀಗೆ ಹೇಳುತ್ತಾನೆ:
“ನನ್ನ ಭಕ್ತನಾದ ವಸುರಾಜನಿಗೆ ಅತ್ತ್ಯಂತ ಸಾತ್ತ್ವಿಕಳಾದ ಮಗಳೊಬ್ಬಳಿದ್ದಾಳೆ. ಅವಳಲ್ಲಿ ನಿನ್ನ
ಮಗನಾಗಿ ಅವತರಿಸುತ್ತೇನೆ” ಎಂದು.
ಆಕೆಯ ಉತ್ಪತ್ತಿಪೂರ್ವಕ ಕಥೆಯನ್ನು
ಇಲ್ಲಿ ಹೇಳಲಾಗಿದೆ: ಒಮ್ಮೆ ಕಾಡಿನಲ್ಲಿ ಬೇಟೆಗೆಂದು ತಿರುಗುತ್ತಿದ್ದ ವಸುರಾಜ, ಕಾಡಿನ ಸೌಂದರ್ಯವನ್ನು
ನೋಡಿ, ಮಾನಸಿಕವಾಗಿ ತನ್ನ ಹೆಂಡತಿಯನ್ನು ಸೇರಿದ. ಆಗ ಆತನ ವೀರ್ಯ ಸ್ಕಲನಗೊಂಡಿತು.
ಈ ರೀತಿ ಸ್ಕಲನಗೊಂಡ
ರೇತಸ್ಸನ್ನು ವಸುವು ಗಿಡುಗದ ಕೈಯಲ್ಲಿ ಕೊಟ್ಟು, ಅದನ್ನು ತನ್ನ ಹೆಂಡತಿಗೆ ಕೊಡಲು ಹೇಳಿ ಕಳುಹಿಸಿದ. ಗಿಡುಗ ಆ ರೇತಸ್ಸನ್ನು ಹೊತ್ತು ಆಕಾಶದಲ್ಲಿ
ಸಾಗುತ್ತಿರುವಾಗ, ಇನ್ನೊಂದು ಗಿಡುಗ ಈ ಗಿಡುಗದೊಂದಿಗೆ ಯುದ್ಧಕ್ಕೆ ನಿಂತಿತು. ಹೀಗೆ ಯುದ್ಧ
ಮಾಡುವಾಗ ಗಿಡುಗದ ಕೈಯಲ್ಲಿದ್ದ ರೇತಸ್ಸು ಯಮುನಾ
ನದಿಯ ನೀರಿನಲ್ಲಿ ಬಿದ್ದಿತು. ಆ ರೀತಿ ಬಿದ್ದ ರೇತಸ್ಸನ್ನು ಒಂದು ಹೆಣ್ಣು ಮೀನು ನುಂಗಿತು. ಆ ಮೀನನ್ನು ಅಂಬಿಗರು
ಹಿಡಿದರು.
ಆ ಮೀನಿನ ಹೊಟ್ಟೆಯಲ್ಲಿ ಬೆಸ್ತರು ಅವಳಿ ಜವಳಿ ಮಕ್ಕಳಿರುವುದನ್ನು ಕಂಡರು ಮತ್ತು ಅದನ್ನು ಅವರು
ತಮ್ಮ ಒಡೆಯನಾದ ದಾಶರಾಜನಿಗೆ ಒಪ್ಪಿಸಿದರು. ದಾಶರಾಜ ಆ ಮಕ್ಕಳನ್ನು ತನ್ನ ರಾಜನಾದ ವಸುವಿಗೇ
ನಿವೇದನೆ ಮಾಡಿದನು. ಅವನಾದರೋ, ಗಂಡುಮಗುವನ್ನು ತಾನಿಟ್ಟುಕೊಂಡು, ಮಗಳನ್ನು ದಾಶರಾಜನಿಗೆ ಕೊಟ್ಟನು. ಆ ಗಂಡುಮಗುವೇ ಮುಂದೆ
ಮತ್ಸ್ಯರಾಜನಾದ. ಅವನೇ ವಿರಾಟ.
ಭಗವಂತ ಹೇಳುತ್ತಾನೆ: “ಈ ಹೆಣ್ಣು
ಮಗಳು ಅಂಬಿಗರ ಒಡೆಯನ ಮನೆಯಲ್ಲಿ ಬೆಳೆದಿದ್ದಾಳೆ. ಆಕೆ ಅತ್ಯಂತ ರೂಪವತಿ. ಅವಳ ಹೆಸರು ಸತ್ಯವತಿ. ನಿನ್ನ
ಮೇಲಿನ ಅನುಗ್ರಹದಿಂದ ಹುಟ್ಟಿಲ್ಲದ ನಾನು ಅವಳಲ್ಲಿ ನಿನ್ನ ಮಗನಾಗಿ ಅವತರಿಸುತ್ತೇನೆ” ಎಂದು.
No comments:
Post a Comment