ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 4, 2018

Mahabharata Tatparya Nirnaya Kannada 11.111-11.115


ಸ್ಥೂಣಾಕರ್ಣ್ಣಾಭಿಧೇಯಸ್ತಾಮಪಶ್ಯದ್ ದೃಢಕರ್ಣ್ಣತಃ
ಸ ತಸ್ಯಾ ಅಖಿಲಂ ಶ್ರುತ್ವಾ ಕೃಪಾಂ ಚಕ್ರೇ ಮಹಾಮನಾಃ ೧೧.೧೧೧

ದೃಢಕರ್ಣ್ಣನಾದ್ದರಿಂದ(ಗಟ್ಟಿಯಾದ ಕಿವಿ ಉಳ್ಳವನಾದ್ದರಿಂದ) ಸ್ಥೂಣಾಕರ್ಣಾ^ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ  ಆ ತುಮ್ಬುರುವು, ಕಾಡಿನಲ್ಲಿ ಬರುತ್ತಿರುವ ಶಿಖಣ್ಡಿನೀಯನ್ನು ಕಂಡ ಮತ್ತು ಆಕೆಯಿಂದ ಎಲ್ಲವನ್ನೂ ಕೇಳಿ ತಿಳಿದು, ಮಹಾಔಧಾರ್ಯ ಉಳ್ಳವನಾಗಿ,  ಅವಳ ಮೇಲೆ  ಕರುಣೆಯನ್ನು ತೋರಿದ.
[ಕೆಲವೊಂದು ಕಡೆ ಶಿಖಣ್ಡಿನೀಗೆ ಸ್ಥೂಣಾಕರ್ಣಾ ಪುಂಸ್ವತ್ವವನ್ನು ಕೊಟ್ಟ ಎಂದು ಹೇಳಿದರೆ, ಇನ್ನು ಕೆಲವೆಡೆ  ತುಮ್ಬುರುವಿಂದ ಆಕೆ ಪುಂಸ್ವತ್ವ ಪಡೆದಳು ಎಂದಿದ್ದಾರೆ. ಈ ಗೊಂದಲವನ್ನು ಆಚಾರ್ಯರು ಇಲ್ಲಿ ಪರಿಹರಿಸಿದ್ದಾರೆ. ದೃಢಕರ್ಣ್ಣನಾಗಿದ್ದ ತುಮ್ಬುರುವನ್ನು ಸ್ಥೂಣಾಕರ್ಣಾ ಎಂದೂ ಕರೆಯುತ್ತಿದ್ದರು ಎನ್ನುವುದನ್ನು ನಾವಿಲ್ಲಿ ತಿಳಿಯುತ್ತೇವೆ.]


ಸ ತಸ್ಯೈ ಸ್ವಂ ವಪುಃ ಪ್ರಾದಾತ್ ತದೀಯಂ ಜಗೃಹೇ ತಥಾ
ಅಂಶೇನ ಪುಂಸ್ವಭಾವಾರ್ತ್ಥಂ ಪೂರ್ವದೇಹೇ ಸಮಾಸ್ಥಿತಃ        ೧೧.೧೧೨

ಪುಂಸಾಂ ಸ್ತ್ರೀತ್ವಂ ಭವೇತ್ ಕ್ವಾಪಿ ತಥಾsಪ್ಯನ್ತೇ ಪುಮಾನ್ ಭವೇತ್ ।
ಸ್ತ್ರೀಣಾಂ ನೈವ ಹಿ ಪುಂಸ್ತ್ವಂ ಸ್ಯಾದ್ ಬಲವತ್ಕಾರಣೈರಪಿ        ೧೧.೧೧೩


ಅತಃ ಶಿವವರೇsಪ್ಯೇಷಾ ಜಜ್ಞೇ ಯೋಷೈವ ನಾನ್ಯಥಾ
ಪಶ್ಚಾತ್ ಪುಂದೇಹಮಪಿ ಸಾ ಪ್ರವಿವೇಶೈವ ಪುಂಯುತಮ್ ॥೧೧.೧೧೪

ನಾಸ್ಯಾ ದೇಹಃ ಪುಂಸ್ತ್ವಮಾಪ ನಚ ಪುಂಸಾsನಧಿಷ್ಠಿತೇ ।
ಪುಂದೇಹೇ ನ್ಯವಸತ್ ಸಾsಥ ಗನ್ಧರ್ವೇಣ ತ್ವಧಿಷ್ಠಿತಮ್ ೧೧.೧೧೫


ತುಮ್ಬುರುವು ಶಿಖಂಡಿನೀಗೆ ತನ್ನ ದೇಹವನ್ನು ಕೊಟ್ಟು, ಆಕೆಯ ದೇಹವನ್ನು ತಾನು ಸ್ವೀಕರಿಸಿದ. ನಂತರ ಅವಳ ದೇಹದಲ್ಲಿ ಪುಂಸ್ವಭಾವ ಬರಲೆಂದು ಅವಳಿಗೆ ಕೊಟ್ಟ ಆ ದೇಹದಲ್ಲಿ  ಒಂದಂಶದಿಂದ ತಾನೂ ಅಧಿಷ್ಠಿತನಾದ.

ಏಕೆ ತುಮ್ಬುರು ಆ ದೇಹದಲ್ಲಿ ಅಧಿಷ್ಠಿತನಾದ ಎನ್ನುವುದನ್ನು ವಿವರಿಸುತ್ತಾ ಆಚಾರ್ಯರು ಹೇಳುತ್ತಾರೆ:  ಗಂಡು ಮಕ್ಕಳಿಗೆ ಪಾಪ, ಶಾಪಾದಿ ದೋಷದಿಂದ ಸ್ತ್ರೀತ್ವ ಬಂದೀತು. ಆದರೂ ಅಂತಹ ಜೀವ ಮುಕ್ತಿಯನ್ನು ಹೊಂದುವ ಕಾಲದಲ್ಲಿ ಪುರುಷನೇ ಆಗುತ್ತಾನೆ. ಆದರೆ ಸ್ತ್ರೀಯರಿಗೆ ಪುಂಸ್ವ ಬರುವುದೇ ಇಲ್ಲಾ. ಎಷ್ಟೇ ಬಲಿಷ್ಟವಾದ ಕಾರಣ ಇದ್ದರೂ ಕೂಡಾ ಹೆಣ್ಣು ಗಂಡಾಗುವುದಿಲ್ಲಾ. ಈ  ಕಾರಣದಿಂದ ಶಿವನ ವರವಿದ್ದರೂ ಕೂಡಾ, ಆಕೆ ಹೆಣ್ಣೇ ಆದಳು ಹೊರತು ಗಂಡಾಗಿ ಪರಿವರ್ತನೆಯಾಗಲಿಲ್ಲಾ. ಈರೀತಿ ತುಮ್ಬುರು ಒಂದಂಶದಿಂದ ಅಧಿಷ್ಠಿತವಾಗಿರುವ ಪುಂದೇಹವನ್ನು ಶಿಖಂಡಿನೀ ಪ್ರವೇಶಿಸಿದಳು.
ಹೀಗೆ ಶಿಖಂಡಿನೀಯ ದೇಹವು ಗಂಡಾಗಿ ಪರಿವರ್ತನೆ ಆಗಲಿಲ್ಲಾ ಮತ್ತು ಆಕೆ ಗಂಡಿನಿಂದ ಅಧಿಷ್ಠಿತವಲ್ಲದ ಗಂಡಿನ ದೇಹದಲ್ಲಿ ವಾಸ ಮಾಡಲಿಲ್ಲಾ. ಪುಂದೇಹದಲ್ಲಿ ಪುರುಷನಿಂದ ಅಧಿಷ್ಠಿತವಾದ ನಂತರವೇ ಆಕೆ ಪ್ರವೇಶ ಮಾಡಿದಳು.
[ಶಿಖಂಡಿನೀ ಗಂಡಿನ ದೇಹದಲ್ಲಿ ಸ್ವತಂತ್ರವಾಗಿರಲಿಲ್ಲಾ. ಆಕೆ ಮೊದಲು ಸ್ತ್ರೀಯಾಗಿದ್ದಳು. ಆನಂತರ ಪುರುಷ ಶರೀರವನ್ನು ಪ್ರವೇಶ ಮಾಡಿದಳು. ಆ ದೇಹದಲ್ಲಿ ಒಂದಂಶದಲ್ಲಿ ಪುರುಷನಾದ ತುಮ್ಬುರು ಇದ್ದ.  ಒಂದು ವೇಳೆ ಆ ದೇಹದೊಳಗೆ ಕೇವಲ ಶಿಖಂಡಿನೀ ಮಾತ್ರ ಪ್ರವೇಶಿಸಿದ್ದರೆ ಅದು ಹೆಣ್ಣುದೇಹವಾಗಿಯೇ ಇರುತ್ತಿತ್ತು]

Monday, December 3, 2018

Mahabharata Tatparya Nirnaya Kannada 11.103-11.110


ಏತಸ್ಮಿನ್ನೇವ ಕಾಲೇ ತು ಸುತಾರ್ತ್ಥಂ ದ್ರುಪದಸ್ತಪಃ ।
ಚಕಾರ ಶಮ್ಭವೇ ಚೈನಂ ಸೋsಬ್ರವೀತ್ ಕನ್ಯಕಾ ತವ                    ॥೧೧.೧೦೩

ಭೂತ್ವಾ ಭವಿಷ್ಯತಿ ಪುಮಾನಿತಿ ಸಾsಮ್ಬಾ ತತೋsಜನಿ ।
ನಾಮ್ನಾ ಶಿಖಣ್ಡಿನೀ ತಸ್ಯಾಃ ಪುಂವತ್ ಕರ್ಮ್ಮಾಣಿ ಚಾಕರೋತ್ ॥೧೧.೧೦೪

ಇದೇ ಕಾಲದಲ್ಲಿ ದ್ರುಪದನು ಮಕ್ಕಳನ್ನು ಬಯಸಿ ರುದ್ರ ದೇವರನ್ನು ಕುರಿತು ತಪಸ್ಸನ್ನು ಮಾಡುತ್ತಿದ್ದನು.  ರುದ್ರ ದೇವರು ದ್ರುಪದನಿಗೆ: “ನಿನಗೆ ಹೆಣ್ಣು ಮಗಳು ಹುಟ್ಟುತ್ತಾಳೆ ಮತ್ತು ಅವಳು ಕಾಲಾಂತರದಲ್ಲಿ ಪುರುಷನಾಗುತ್ತಾಳೆ” ಎನ್ನುವ ವರವನ್ನು ನೀಡಿದರು.  ಶಿವನ ವರಪ್ರಸಾದದಂತೆ  ಅಂಬೆಯೇ ಶಿಖಣ್ಡಿನೀ ^  ಎನ್ನುವ ಹೆಸರಿನಿಂದ ದ್ರುಪದನಲ್ಲಿ  ಹುಟ್ಟಿದಳು. ಪಾಂಚಾಲ ರಾಜನಾದ ದ್ರುಪದನು ಆಕೆಗೆ ಗಂಡು ಮಗುವಿನಂತೆ ಸಂಸ್ಕಾರಾದಿಗಳನ್ನು ಮಾಡಿ ಬೆಳೆಸಿದನು.
[^ಶಿಖಂಡೀ ಎನ್ನುವ ಪದಕ್ಕೆ ಸಾಮಾಜಿಕವಾಗಿ ತಪ್ಪಾದ ಅರ್ಥ ರೂಢಿಯಲ್ಲಿದೆ. ಆದರೆ  ಶಿಖಂಡೀ ಎಂದರೆ ಮೂಲಭೂತವಾಗಿ ಶಿಖಂಡ ಉಳ್ಳವನು ಎಂದರ್ಥ. ಇದು ವಿಷ್ಣು ಸಹಸ್ರನಾಮದಲ್ಲಿ ಬರುವ ಭಗವಂತನ ಸಾವಿರ ನಾಮದಲ್ಲಿನ ಒಂದು ನಾಮ ಕೂಡಾ ಹೌದು. ಶಿಖ+ಅಂಡ ಎನ್ನುವಲ್ಲಿ ಶಿಖ ಎಂದರೆ ತಲೆಕೂದಲು. ತಲೆಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಕೃಷ್ಣ ಬಾಲಕನಿದ್ದಾಗ ತಾಯಿ ಯಶೋದೆ ಆತನ ಕೂದಲನ್ನು ಈ ರೀತಿ ಕಟ್ಟುತ್ತಿದ್ದಳು. ಈ ಕಾರಣಕ್ಕಾಗಿ ಆತನನ್ನೂ ಶಿಖಂಡೀ ಎಂದು ಕರೆಯುತ್ತಿದ್ದರು. ನವಿಲು ಗರಿಯನ್ನು ತಲೆಯಲ್ಲಿ ಧರಿಸುವವರನ್ನು ಕೂಡ ಶಿಖಂಡೀ ಎಂದು ಕರೆಯುತ್ತಿದ್ದರು. ಕೃಷ್ಣ ಬಾಲಕನಿದ್ದಾಗ ಇತರ ಗೋಪಾಲಕರ ಜೊತೆ ನವಿಲುಗರಿ ಧರಿಸುತ್ತಿದ್ದ. ಆ ಕಾರಣಕ್ಕಾಗಿ ಆತನನ್ನೂ ಶಿಖಂಡೀ ಎನ್ನುವುದು ವಾಡಿಕೆ.  ಇಲ್ಲಿ ಶಿಖಂಡ (ನವಿಲುಗರಿ) ತೊಟ್ಟವಳು ಶಿಖಣ್ಡಿನೀ]

ತಸ್ಯೈ ಪಾಞ್ಚಾಲರಾಜಃ ಸ ದಶಾರ್ಣ್ಣಾಧಿಪತೇಃ ಸುತಾಮ್ ।
ಉದ್ವಾಹಯಾಮಾಸ ಸಾ ತಾಂ ಪುಂವೇಷೇಣೈವ ಗೂಹಿತಾಮ್            ೧೧.೧೦೫

ಗಂಡಿನ ವೇಷದಿಂದ ಮುಚ್ಚಲ್ಪಟ್ಟ ಶಿಖಣ್ಡಿನೀಗೆ  ದ್ರುಪದನು, ದಶಾರ್ಣ ದೇಶದ ದೊರೆ ಹಿರಣ್ಯವರ್ಮನ ಮಗಳನ್ನು ಮದುವೆಮಾಡಿ ಕೊಡುತ್ತಾನೆ. 

ಅನ್ಯತ್ರ ಮಾತಾಪಿತ್ರೋಸ್ತು ನ ವಿಜ್ಞಾತಾಂ ಬುಬೋಧ ಹ
ಧಾತ್ರ್ಯೈನ್ಯವೇದಯತ್ ಸಾsಥ ತತ್ಪಿತ್ರೇ ಸಾ ನ್ಯವೇದಯತ್               ೧೧.೧೦೬

ತಂದೆ ತಾಯಿಗಳಿಗಿಂತ ಹೊರತಾಗಿ ಬೇರೆ ಯಾರಿಗೂ ಶಿಖಣ್ಡಿನೀ ‘ಹೆಣ್ಣು’ ಎನ್ನುವ ವಿಷಯ ತಿಳಿದಿರಲಿಲ್ಲಾ. ಆದರೆ ಈ ವಿಷಯ ಮದುವೆಯ ನಂತರ ದಶಾರ್ಣ ದೇಶದ ರಾಜನ ಮಗಳಿಗೆ ತಿಳಿಯುತ್ತದೆ. ಅವಳು ತನ್ನ ಸಾಕು ತಾಯಿಗೆ ಈ ವಿಷಯವನ್ನು ಹೇಳುತ್ತಾಳೆ. ಸ್ವಲ್ಪ ಕಾಲದ ನಂತರ, ಆ ಸಾಕು ತಾಯಿಯು ಹಿರಣ್ಯವರ್ಮನಿಗೆ ವಿಷಯವನ್ನು ತಿಳಿಸುತ್ತಾಳೆ.

ಸ ಕ್ರುದ್ಧಃ ಪ್ರೇಷಯಾಮಾಸ ನಿಹನ್ಮಿ ತ್ವಾಂ ಸಬಾನ್ಧವಮ್ ।
ಇತಿ ಪಾಞ್ಚಾಲರಾಜಾಯ ನಿರ್ಜ್ಜಗಾಮ ಚ ಸೇನಯಾ              ೧೧.೧೦೭

ವಿಷಯವನ್ನು ಕೇಳಿ ತಿಳಿದ ಹಿರಣ್ಯವರ್ಮ ಕೋಪದಿಂದ ಧೂತನ ಮೂಲಕ  ‘ನಿನ್ನನ್ನು ಬಂಧುಗಳ ಸಹಿತವಾಗಿ ಕೊಲ್ಲುತ್ತೇನೆ’  ಎಂಬ ಸಂದೇಶವನ್ನು ಪಾಂಚಾಲ ರಾಜನಿಗೆ ಕಳುಹಿಸುತ್ತಾನೆ. ಅಷ್ಟೇ ಅಲ್ಲಾ, ಸೇನೆಯಿಂದ ಕೂಡಿ  ಯುದ್ಧಕ್ಕೆ ಸಿದ್ಧನಾಗಿ ಹೊರಡುತ್ತಾನೆ.

ವಿಶ್ವಸ್ಯ ವಾಕ್ಯಂ ರುದ್ರಸ್ಯ ಪುಮಾನೇವೇತಿ ಪಾರ್ಷತಃ ।
ಪ್ರೇಷಯಾಮಾಸ ಧಿಗ್ ಬುದ್ಧಿರ್ಭಿನ್ನಾ ತೇ ಬಾಲವಾಕ್ಯತಃ        ೧೧.೧೦೮

ಅಪರೀಕ್ಷಕಸ್ಯ ತೇ ರಾಷ್ಟ್ರಂ ಕಥಮಿತ್ಯೇವ ನರ್ಮ್ಮಕೃತ್
ಅಥ ಭಾರ್ಯ್ಯಾಸಮೇತಂ ತಂ ಪಿತರಂ ಚಿನ್ತಯಾssಕುಲಮ್ ೧೧.೧೦೯

ದೃಷ್ಟ್ವಾ ಶಿಖಣ್ಡಿನೀ ದುಃಖಾನ್ಮನ್ನಿಮಿತ್ತಾನ್ನ ನಶ್ಯತು
ಇತಿ ಮತ್ವಾ ವನಾಯೈವ ಯಯೌ ತತ್ರ ಚ ತುಮ್ಬುರುಃ           ೧೧.೧೧೦

‘ನಿನ್ನ ಮಗಳು ಗಂಡಾಗುತ್ತಾಳೆ’ ಎನ್ನುವ  ಶಿವನ ಮಾತಿನಲ್ಲಿ ಪೂರ್ಣ ನಂಬಿಕೆ ಹೊಂದಿದ್ದ ದ್ರುಪದ, ‘ ಶಿಖಣ್ಡಿನೀ ಗಂಡೇ’ ಎಂದು ಹೇಳಿ ಧೂತನನ್ನುಹಿಂದೆ  ಕಳುಹಿಕೊಟ್ಟ. ಅಷ್ಟೇ ಅಲ್ಲ,  “ನಿನ್ನ ಬುದ್ಧಿಯು ಅಪ್ರಬುದ್ಧರ ಮಾತಿನಿಂದ ತಪ್ಪು ಹಾದಿ ಹಿಡಿದಿದೆ. ಒಂದು ವಿಷಯವನ್ನು ಪರೀಕ್ಷೆ ಮಾಡಿ ನಂಬಬೇಕು ಎನ್ನುವುದು ನಿನಗೆ ತಿಳಿದಿಲ್ಲ. ಪರೀಕ್ಷೆ ಮಾಡದೇ ಮಾತನಾಡುವ ನೀನು  ರಾಜ್ಯವನ್ನು ಹೇಗೆ ಆಳುತ್ತಿರುವೆ” ಎಂದು ಹಾಸ್ಯವನ್ನೂ ಮಾಡಿದ. ಆದರೆ ಧೂತನನ್ನು ಕಳುಹಿಕೊಟ್ಟ ನಂತರ ಹೆಂಡತಿಯಿಂದ ಕೂಡಿ ಆತ ಚಿಂತೆಗೆ ಒಳಗಾದ.
ಚಿಂತೆಯಿಂದ ಬೆಂದು ಹೋಗುತ್ತಿರುವ ತಂದೆಯನ್ನು ನೋಡಿದ ಶಿಖಣ್ಡಿನೀಯು, ‘ನನ್ನ ನಿಮಿತ್ತವಾಗಿರುವ ದುಃಖದಿಂದ ತಂದೆ ಸಾಯಬಾರದು’  ಎಂದು ನಿಶ್ಚಯಿಸಿ, ಕಾಡಿಗೆ ಓಡುತ್ತಾಳೆ. ಆಕೆ ಕಾಡಿನಲ್ಲಿ  ಎಲ್ಲಿ ತುಮ್ಬುರು ಎನ್ನುವ ಹೆಸರಿನ ಗಂಧರ್ವ ನೆಲೆಸಿದ್ದನೋ ಅಲ್ಲಿಗೆ ತೆರಳುತ್ತಾಳೆ.

Sunday, December 2, 2018

Mahabharata Tatparya Nirnaya Kannada 11.97-11.102


ಯಶೋ ಭೀಷ್ಮಸ್ಯ ದತ್ವಾ ತು ಸೋsಮ್ಬಾಂ ಚ ಶರಣಾಗತಾಮ್ ।
ಉನ್ಮುಚ್ಯ ಭರ್ತ್ತೃದ್ವೇಷೋತ್ಥಾತ್ ಪಾಪಾತ್ ತೇನಾsಶ್ವಯೋಜಯತ್ ॥೧೧.೯೭

ಅನನ್ತರಂ ಶಿಖಣ್ಡಿತ್ವಾತ್ ತದಾ ಸಾ ಶಾಙ್ಕರಂ ತಪಃ ।
ಭೀಷ್ಮಸ್ಯ ನಿಧನಾರ್ತ್ಥಾಯ ಪುಂಸ್ತ್ವಾರ್ತ್ಥಂ ಚ ಚಕಾರ ಹ ॥೧೧.೯೮

ಭೀಷ್ಮೋ ಯಥಾ ತ್ವಾಂ ಗೃಹ್ಣೀಯಾತ್ ತಥಾ ಕುರ್ಯ್ಯಾಮಿತೀರಿತಮ್ ।
ರಾಮೇಣ ಸತ್ಯಂ ತಚ್ಚಕ್ರೇ ಭೀಷ್ಮೇ ದೇಹಾನ್ತರಂ ಗತೇ ॥೧೧.೯೯


ಪರಶುರಾಮನು ಭೀಷ್ಮನಿಗೆ ಯಶಸ್ಸನ್ನು ಕೊಟ್ಟು, ಶರಣಾಗತಳಾಗಿರುವ ಅಂಬೆಯನ್ನು ‘ಗಂಡನನ್ನು ದ್ವೇಷಮಾಡಿದ’ ಪಾಪದಿಂದ ಬಿಡಿಸಿದನು. ‘ಭೀಷ್ಮನು ಹೇಗೆ ನಿನ್ನನ್ನು ಸ್ವೀಕರಿಸಬಲ್ಲನೋ,  ಹಾಗೇ ಮಾಡುತ್ತೇನೆ’ ಎನ್ನುವ ಹೇಳಿಕೆಯೂ ರಾಮನಿಂದ ಸತ್ಯವಾಗಿ ನಡೆಸಲ್ಪಟ್ಟಿತು.
ಅಂಬೆ ಮೊದಲು ಗಂಡನ ದ್ವೇಷದಿಂದಾದ ಉಂಟಾದ ಪಾಪದಿಂದಾಗಿ ಭೀಷ್ಮರನ್ನು ಸೇರಲಾಗಲಿಲ್ಲಾ. ತದನಂತರ ಅವಳು ಶಿಖಂಡಿಯಾದ್ದರಿಂದ ಹೊಂದಲಿಲ್ಲಾ. ಆದರೆ ಮುಂದೆ ಭೀಷ್ಮಾಚಾರ್ಯರು ತನ್ನ ದೇಹವನ್ನು ಬಿಟ್ಟು ಮೂಲರೂಪವನ್ನು (ದ್ಯುವಸು ರೂಪವನ್ನು) ಹೊಂದಿದಾಗ, ಪರಶುರಾಮನ ಅನುಗ್ರಹದಿಂದ, ತನ್ನೆಲ್ಲಾ ಪಾಪವನ್ನು ಕಳಚಿಕೊಂಡ ಆಕೆ, ತಾನೂ ಮೂಲರೂಪವನ್ನು ಹೊಂದಿ, ಆತನ(ದ್ಯುವಸುವಿನ) ಪತ್ನಿಯಾಗಿ  ಸೇರುತ್ತಾಳೆ. [ಒಟ್ಟಿನಲ್ಲಿ ಹೇಳಬೇಕೆಂದರೆ: ಪರಶುರಾಮ, ಭೀಷ್ಮನ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಿ, ಅವನಿಗೆ ಕೀರ್ತಿಯನ್ನು ನೀಡಿದ.  ಗಂಡನನ್ನು ದ್ವೇಷಿಸಿದ ಅಂಬೆಯ ಪಾಪವನ್ನು ನಾಶ ಮಾಡಿ, ಆಕೆ ಮುಂದೆ ತನ್ನ ಮೂಲರೂಪದಲ್ಲಿ ಮರಳಿ ಗಂಡನನ್ನು ಸೇರುವಂತೆ ಮಾಡಿದ]

ಇತ್ತ ಭೀಷ್ಮನಿಂದ ದೂರಾದ ಅಂಬೆ, ‘ಭೀಷ್ಮ ಸಾಯಬೇಕು’ ಮತ್ತು ‘ತಾನು ಪುರುಷನಾಗಿ ಹುಟ್ಟಬೇಕು’ ಎಂದು ಬಯಸಿ, ಶಂಕರನನ್ನು ಕುರಿತಾಗಿ ತಪಸ್ಸನ್ನು ಮಾಡುತ್ತಾಳೆ.

ರುದ್ರಸ್ತು ತಸ್ಯಾಸ್ತಪಸಾ ತುಷ್ಟಃ ಪ್ರಾದಾದ್ ವರಂ ತದಾ
ಭೀಷ್ಮಸ್ಯ ಮೃತಿಹೇತುತ್ವಂ ಕಾಲಾತ್ ಪುಂದೇಹಸಮ್ಭವಮ್೧೧.೧೦೦

ಮಾಲಾಂ ಚ ಯ ಇಮಾಂ ಮಾಲಾಂ ಗೃಹ್ಣೀಯಾತ್ ಸ ಹನಿಷ್ಯತಿ ।
ಭೀಷ್ಮಮಿತ್ಯೇವ ತಾಂ ಮಾಲಾಂ ಗೃಹೀತ್ವಾ ಸಾ ನೃಪಾನ್ ಯಯೌ ॥೧೧.೧೦೧

ತಾಂ ನ ಭೀಷ್ಮಭಯಾತ್ ಕೇsಪಿ ಜಗೃಹುಸ್ತಾಂ ಹಿ ಸಾ ತತಃ ।
ದ್ರುಪದಸ್ಯ ಗೃಹದ್ವಾರಿ ನ್ಯಸ್ಯ ಯೋಗಾತ್ ತನುಂ ಜಹೌ ॥೧೧.೧೦೨


ಅಂಬೆಯ ತಪಸ್ಸಿಗೆ ಪ್ರೀತನಾಗಿ ರುದ್ರನು, ಆಕೆಗೆ ವರವನ್ನು ನೀಡುತ್ತಾನೆ. ‘ಭೀಷ್ಮನ ಸಾವಿಗೆ ನೀನೇ ಕಾರಣಳಾಗುವೆ ಎಂದೂ, ಕಾಲಕ್ರಮೇಣ ಪುರುಷ ದೇಹ ಪ್ರಾಪ್ತಿಯಾಗುತ್ತದೆ ಎಂದೂ  ಶಿವ ವರವನ್ನು ನೀಡಿ,  ಆಕೆಗೆ  ಮಾಲೆಯೊಂದನ್ನು ಕೊಟ್ಟು, “ಯಾರು ಈ ಮಾಲೆಯನ್ನು ಸ್ವೀಕರಿಸುತ್ತಾನೋ, ಅವನು ಭೀಷ್ಮನನ್ನು ಕೊಲ್ಲುತ್ತಾನೆ”  ಎಂದು ಹೇಳುತ್ತಾನೆ. ಅವಳಾದರೋ, ಆ ಮಾಲೆಯನ್ನು ಹಿಡಿದುಕೊಂಡು ರಾಜರ ಬಳಿ ತೆರಳುತ್ತಾಳೆ.
ಆದರೆ  ಆ ಮಾಲೆಯನ್ನು ಭೀಷ್ಮರ ಮೇಲಿನ ಭಯದಿಂದ ಯಾವ ರಾಜರೂ ಕೂಡಾ ಸ್ವೀಕರಿಸುವುದಿಲ್ಲಾ.  ಆಗ  ಅಂಬೆ ಆ  ಮಾಲೆಯನ್ನು ದ್ರುಪದನ ಮನೆಯ ಬಾಗಿಲಲ್ಲಿ ಇಟ್ಟು, ಯೋಗ ಶಕ್ತಿಯಿಂದ ತನ್ನ ದೇಹವನ್ನು ತ್ಯಜಿಸುತ್ತಾಳೆ.