ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, January 10, 2019

Mahabharata Tatparya Nirnaya Kannada 11.167-11.169


ಅಥಾಙ್ಗನಾರತ್ನಮವಾಪ್ಯ ತದ್ ದ್ವಯಂ ಪಾಣ್ಡುಸ್ತು ಭೋಗಾನ್ ಬುಭುಜೇ ಯಥೇಷ್ಟತಃ ।
ಅಪೀಪಲದ್ ಧರ್ಮ್ಮಸಮಾಶ್ರಯೋ ಮಹೀಂ ಜ್ಯೇಷ್ಠಾಪಚಾಯೀ ವಿದುರೋಕ್ತಮಾರ್ಗ್ಗತಃ ೧೧.೧೬೭

ಹೀಗೆ ಕುಂತೀ ಮತ್ತು ಮಾದ್ರೀ ಎನ್ನುವ ಇಬ್ಬರು ಶ್ರೇಷ್ಠರಾದ ಹೆಂಡಂದಿರನ್ನು ಹೊಂದಿದ ಪಾಂಡುವು, ಅವರೊಂದಿಗೆ ಸುಖ-ಭೋಗದಿಂದಿದ್ದನು. ಧರ್ಮವನ್ನು ಆಶ್ರಯಿಸಿಕೊಂಡಿರುವ ಅಣ್ಣ ದೃತರಾಷ್ಟ್ರನನ್ನು ಧನಿಕನನ್ನಾಗಿ ಮಾಡತಕ್ಕ  ಪಾಂಡುವು, ವಿದುರನಿಂದ ಹೇಳಲ್ಪಟ್ಟ ನೀತಿಮಾರ್ಗದಂತೆ ಭೂಮಿಯನ್ನು ಪರಿಪಾಲಿಸಿದನು.  

ಭೀಷ್ಮೋ ಹಿ ರಾಷ್ಟ್ರೇ ಧೃತರಾಷ್ಟ್ರಮೇವ ಸಂಸ್ಥಾಪ್ಯ ಪಾಣ್ಡುಂ ಯುವರಾಜಮೇವ ।
ಚಕ್ರೇ ತಥಾsಪ್ಯನ್ಧ ಇತಿ ಸ್ಮ ರಾಜ್ಯಂ ಚಕಾರ ನಾಸಾವಕರೋಚ್ಚ ಪಾಣ್ಡುಃ ॥೧೧.೧೬೮     

ಭೀಷ್ಮನು ಹಸ್ತಿನಾವತಿಯಲ್ಲಿ ದೃತರಾಷ್ಟ್ರನನ್ನೇ ಇರಿಸಿ (ಆತ ಕುರುಡನಾದ್ದರಿಂದ  ರಾಜ್ಯಭಾರವನ್ನು ಮಾಡುವಂತಿರಲಿಲ್ಲ. ಆದರೂ ಸಹೋದರರಲ್ಲಿ ಒಡಕುಂಟುಮಾಡಬಾರದು ಎಂದು ಆತನನ್ನೇ  ಮಹಾರಾಜನನ್ನಾಗಿ  ಮಾಡಿ), ಪಾಂಡುವನ್ನು ಯುವರಾಜನನ್ನಾಗಿ ಮಾಡಿದನು. ಯುವರಾಜನಾದರೂ ಕೂಡಾ, ಅಣ್ಣ ಕುರುಡನಾದ್ದರಿಂದ(ಕುರುಡ ಎನ್ನುವ ಕಾರಣದಿಂದ ರಾಜ್ಯವನ್ನು ಧೃತರಾಷ್ಟ್ರ ಪರಿಪಾಲಿಸಲಿಲ್ಲವಾದ್ದರಿಂದ)  ರಾಜ್ಯವನ್ನು ಪಾಂಡುವೇ ಪರಿಪಾಲಿಸಿದನು.

ಭೀಷ್ಮಾಮ್ಬಿಕೇಯೋಕ್ತಿಪರಃ ಸದೈವ ಪಾಣ್ಡುಃ ಶಶಾಸಾವನಿಮೇಕವೀರಃ ।    
ಅಥಾsಮ್ಬಿಕೇಯೋ ಬಹುಭಿಶ್ಚ ಯಜ್ಞೈರೀಜೇ ಸಪಾಣ್ಡುಶ್ಚ ಮಹಾಧನೌಘೈಃ ॥೧೧.೧೬೯   

ಪಾಂಡುವು ಭೀಷ್ಮಾಚಾರ್ಯರ ಮತ್ತು ದೃತರಾಷ್ಟ್ರನ ಮಾತನ್ನು ನಡೆಸುತ್ತಾ, ಭೂಮಿಯನ್ನು ಪಾಲಿಸಿಕೊಂಡಿದ್ದನು. ತದನಂತರ ದೃತರಾಷ್ಟ್ರನು ಬಹಳ ಯಜ್ಞಗಳಿಂದ ಭಗವಂತನನ್ನು ಆರಾಧಿಸಿದನು. ಪಾಂಡುವೂ ಕೂಡಾ, ದಿಗ್ವಿಜಯದಿಂದ ಗಳಿಸಿದ ಸಂಪತ್ತಿನಿಂದ ಯಜ್ಞಗಳನ್ನು ಮಾಡಿ, ಭಗವಂತನನ್ನು ಆರಾಧಿಸಿದನು.

Wednesday, January 9, 2019

Mahabharata Tatparya Nirnaya Kannada 11.162-11.166

ಅಥ ಕುನ್ತೀ ದತ್ತಾ ಸಾ ಪಾಣ್ಡೋಃ ಸೋsಪ್ಯೇತಯಾ ಚಿರಂ ರೇಮೇ ।
ಶೂರಾಚ್ಛೂದ್ರ್ಯಾಂ ಜಾತಾಂ ವಿದುರೋsವಹದಾರುಣೀಂ ಗುಣಾಢ್ಯಾಂ ಚ ॥೧೧.೧೬೨

ಕರ್ಣನ ಹುಟ್ಟಿನ ನಂತರ ಕುಂತಿಯು ಪಾಂಡುವಿಗಾಗಿ ಕೊಡಲ್ಪಟ್ಟಳು. ಪಾಂಡುವಾದರೋ ಕುಂತಿಯೊಂದಿಗೆ ಅನೇಕ ವರ್ಷಗಳಕಾಲ ವಿಹರಿಸಿಕೊಂಡು ಸುಖವಾಗಿದ್ದನು. ಕುಂತಿಯ ತಂದೆಯಾದ ಶೂರರಾಜನಿಂದ  ಶೂದ್ರಸ್ತ್ರೀಯಲ್ಲಿ ಹುಟ್ಟಿರುವ, ಗುಣಸಂಪನ್ನಳಾದ ಆರುಣೀ ಎನ್ನುವವಳನ್ನು  ವಿದುರನು ಮದುವೆಯಾದನು. 

ಅಥ ಚರ್ತ್ತಾಯನನಾಮಾ ಮದ್ರೇಶಃ ಶಕ್ರತುಲ್ಯಪುತ್ರಾರ್ತ್ಥೀ  ।
ಕನ್ಯಾರತ್ನಂ ಚೇಚ್ಛಂಶ್ಚಕ್ರೇ ಬ್ರಾಹ್ಮಂ ತಪೋ ವರಂ ಚಾsಪ ॥೧೧.೧೬೩

(ಕಥಾಂತರದಲ್ಲಿ  ಪಾಂಡುರಾಜನ ಎರಡನೇ ಪತ್ನಿಯ ಹಿನ್ನೆಲೆಯನ್ನು ಇಲ್ಲಿ ವಿವರಿಸಿದ್ದಾರೆ).  ಋತಾಯನ ಎಂಬ ಹೆಸರುಳ್ಳ  ಮದ್ರದೇಶದ ರಾಜನು ಇಂದ್ರನಿಗೆ ಸಮನಾದ ಮಗ ಹಾಗು  ಕನ್ಯಾರತ್ನವನ್ನು  ಬಯಸಿ, ಬ್ರಹ್ಮನಿಗೆ ಸಂಬಂಧಪಟ್ಟ ತಪಸ್ಸನ್ನು ಮಾಡಿ  ವರವನ್ನು ಹೊಂದಿದನು.

ಪ್ರಹ್ಲಾದಾವರಜೋ ಯಃ ಸಹ್ಲಾದೋ ನಾಮತೋ ಹರೇರ್ಭಕ್ತಃ ।
ಸೋsಭೂದ್ ಬ್ರಹ್ಮವರಾನ್ತೇ ವಾಯೋರಾವೇಶಯುಕ್ ಸುತೋ ರಾಜ್ಞಃ ॥೧೧.೧೬೪

ಪ್ರಹ್ಲಾದನ ತಮ್ಮನಾಗಿ ಯಾರು ಸಹ್ಲಾದ ಎಂಬ ಹೆಸರಿನಿಂದ ಪರಮಾತ್ಮನ ಭಕ್ತನಾಗಿದ್ದನೋ, ಅವನೇ ಬ್ರಹ್ಮದೇವರ ವರದಂತೆ ಮುಖ್ಯಪ್ರಾಣನ ಆವೇಶದಿಂದ ಕೂಡಿದವನಾಗಿ,  ಋತಾಯನನ ಮಗನಾಗಿ ಹುಟ್ಟಿದನು.

[ಈ ರೀತಿ ಸಹ್ಲಾದ  ಋತಾಯನನ ಮಗನಾಗಿ ಹುಟ್ಟಿರುವ ಹಿನ್ನೆಲೆಯನ್ನು  ಆದಿಪರ್ವದಲ್ಲಿ (೬೮.೬) ವಿವರಿಸಿರುವುದನ್ನು ಕಾಣುತ್ತೇವೆ: ‘ಸಹ್ಲಾದ ಇತಿ ವಿಖ್ಯಾತಃ  ಪ್ರಹ್ಲಾದಸ್ಯಾನುಜಸ್ತು ಯಃ । ಸ ಶಲ್ಯ ಇತಿ ವಿಖ್ಯಾತೋ ಜಜ್ಞೇ ವಾಹೀಕಪುಙ್ಗವಃ’]

ಸ ಮಾರುತಾವೇಶವಶಾತ್ ಪೃಥಿವ್ಯಾಂ ಬಲಾಧಿಕೋsಭೂದ್ ವರತಶ್ಚ ಧಾತುಃ ।
ಶಲ್ಯಶ್ಚ ನಾಮ್ನಾsಖಿಲಶತ್ರುಶಲ್ಯೋ ಬಭೂವ ಕನ್ಯಾsಸ್ಯ ಚ ಮಾದ್ರಿ ನಾಮ್ನೀ ॥೧೧.೧೬೫

ಅವನು ಮುಖ್ಯಪ್ರಾಣನ ಆವೇಶದಿಂದಾಗಿ, ಬ್ರಹ್ಮದೇವರ ವರದಿಂದಲೂ, ಭೂಮಿಯಲ್ಲಿ ಬಲದಿಂದ ಅಧಿಕನಾಗಿದ್ದ. ಎಲ್ಲ ರಾಜರಿಗೂ ಕೂಡಾ ಮುಳ್ಳಿನಂತೆ ಇರುವ ಅವನು ಹೆಸರಿನಿಂದಲೂ ಶಲ್ಯನಾದನು.  ಅವನಿಗೆ ಮಾದ್ರಿ ಎಂಬ ಹೆಸರುಳ್ಳ ಕನ್ಯೆಯು ಹುಟ್ಟಿದಳು.

ಸಾ ಪಾಣ್ಡುಭಾರ್ಯ್ಯೈವ ಚ ಪೂರ್ವಜನ್ಮನ್ಯಭೂತ್ ಪುನಶ್ಚ ಪ್ರತಿಪಾದಿತಾsಸ್ಮೈ ।
ಶಲ್ಯಶ್ಚ ರಾಜ್ಯಂ ಪಿತೃದತ್ತಮಞ್ಜೋ ಜುಗೋಪ ಧರ್ಮ್ಮೇಣ ಸಮಸ್ತಶಾಸ್ತ್ರವಿತ್ ॥೧೧.೧೬೬     

ಮಾದ್ರಿಯು ಮೂಲರೂಪದಲ್ಲಿಯೂ ಕೂಡಾ ಪಾಂಡುವಿನ ಹೆಂಡತಿಯಾಗಿಯೇ ಇದ್ದಳು. ಈಗ ಮತ್ತೆ ಪಾಂಡುವಿಗೆ ಕೊಡಲ್ಪಟ್ಟಳು. ಶಲ್ಯನಾದರೋ, ತಂದೆಕೊಟ್ಟ ರಾಜ್ಯವನ್ನು ಚನ್ನಾಗಿ, ಎಲ್ಲಶಾಸ್ತ್ರವನ್ನು ಬಲ್ಲವನಾಗಿ, ಧರ್ಮದಿಂದ ಪಾಲನೆ ಮಾಡಿಕೊಂಡಿದ್ದನು.
[ಈ ಮೇಲಿನ ಮಾತಿನ ಹಿನ್ನೆಲೆಯನ್ನು ಆದಿಪರ್ವದಲ್ಲಿ(೬೮.೧೬೦) ಕಾಣಬಹುದು: ‘ಸಿದ್ಧಿರ್ಧೃತಿಶ್ಚ ಯೇ ದೇವ್ಯೌ ಪಞ್ಚಾನಾಂ ಮಾತರೌ ತು ತೇ । ಕುಂತೀ ಮಾದ್ರೀ ಚ ಜಜ್ಞಾತೇ ಮತಿಸ್ತು ಸುಬಲಾತ್ಮಜಾ’]

Monday, January 7, 2019

Mahabharata Tatparya Nirnaya Kannada 11.158-11.161

ತತಾsಪಿ ರಾಮಸೇವನಾದ್ದರೇಶ್ಚ ಸನ್ನಿಧಾನಯುಕ್ ।
ಸುದರ್ಶನೀಯಕರ್ಣ್ಣತಃ ಸ ಕರ್ಣ್ಣನಾಮಕೋsಭವತ್  ೧೧.೧೫೮

ಈ ರೀತಿ ಹುಟ್ಟಿದ ಸೂರ್ಯ, ಅಸುರಾವೇಶದಿಂದ ಹುಟ್ಟಿದ್ದರೂ ಕೂಡಾ, ಹಿಂದೆ ಸುಗ್ರೀವನಾಗಿದ್ದಾಗ ಮಾಡಿದ್ದ ಶ್ರೀರಾಮನ ಸೇವೆಯ ಫಲದಿಂದ   ನಾರಾಯಣನ ಸನ್ನಿಧಾನದಿಂದ ಕೂಡಿದವನಾಗಿ ಹುಟ್ಟಿದ್ದ.  ಅಂದವಾದ ಕಿವಿ ಉಳ್ಳವನಾದ ಅವನು ‘ಕರ್ಣ’ ಎಂಬ ಹೆಸರುಳ್ಳವನಾದ.

ಸ ರತ್ನಪೂರ್ಣ್ಣಮಞ್ಜುಷಾಗತೋ ವಿಸರ್ಜ್ಜಿತೋ ಜಲೇ ।
ಜನಾಪವಾದಭೀತಿತಸ್ತಯಾ ಯಮಸ್ವಸುರ್ದ್ದ್ರುತಮ್      ೧೧.೧೫೯

ನದೀಪ್ರವಾಹತೋ ಗತಂ ದದರ್ಶ ಸೂತನನ್ದನಃ ।
ತಮಗ್ರಹೀತ್ ಸರತ್ನಕಂ ಚಕಾರ ಪುತ್ರಕಂ ನಿಜಮ್ ೧೧.೧೬೦

ಜನರಿಂದೊದಗಬಹುದಾದ ಅಪವಾದ ಭಯಕ್ಕೊಳಪಟ್ಟ ಕುಂತಿಯಿಂದ, ಕರ್ಣನು ರತ್ನದಿಂದ ತುಂಬಿದ ಪೆಟ್ಟಿಗೆಯಲ್ಲಿ ಇಡಲ್ಪಟ್ಟವನಾಗಿ, ಯಮುನಾ ನದಿಯ  ನೀರಿನಲ್ಲಿ ಬಿಡಲ್ಪಟ್ಟನು.
ನದಿಯ ಪ್ರವಾಹಕ್ಕನುಗುಣವಾಗಿ ಹೋಗುತ್ತಿರುವ ಆ ಪೆಟ್ಟಿಗೆ ಅಧಿರಥನೆಂಬ ಸೂತನ ಕಣ್ಣಿಗೆ ಬಿತ್ತು. ಆತ ರತ್ನದಿಂದ ಕೂಡಿದ ಪೆಟ್ಟಿಗೆಯಲ್ಲಿದ್ದ  ಆ ಮಗುವನ್ನು ಸ್ವೀಕರಿಸಿ, ಆತನನ್ನು ತನ್ನ ಮಗನನ್ನಾಗಿ ಮಾಡಿಕೊಳ್ಳುತ್ತಾನೆ. ಹೀಗೆ ಕರ್ಣ ಸೂತಪುತ್ರನೆನಿಸುತ್ತಾನೆ.

ಸೂತೇನಾಧಿರಥೇನ ಲಾಳಿತತನುಸ್ತದ್ಭಾರ್ಯ್ಯಯಾ ರಾಧಯಾ ।
ಸಂವೃದ್ಧೋ ನಿಖಿಲಾಃ ಶ್ರುತಿರಧಿಜಗೌ ಶಾಸ್ತ್ರಾಣಿ ಸರ್ವಾಣಿ ಚ 
ಬಾಲ್ಯಾದೇವ ಮಹಾಬಲೋ ನಿಜಗುಣೈಃ ಸಮ್ಭಾಸಮಾನೋsವಸ-
ನ್ನಾಮ್ನಾsಸೌ ವಸುಷೇಣತಾಮಗಮದಸ್ಯಾsಸೀದ್ಧ್ಯಮಾ ತದ್ ವಸು ॥೧೧.೧೬೧

ಆ ಅಧಿರಥನೆಂಬ ಸೂತನಿಂದ ಮತ್ತು ಅವನ ಹೆಂಡತಿಯಾದ ರಾಧೆಯಿಂದ ಮುದ್ದಿಸಲ್ಪಟ್ಟವನಾಗಿ ಬೆಳೆದ ಕರ್ಣ, ವೇದಗಳನ್ನೂ, ಎಲ್ಲ ಶಾಸ್ತ್ರಗಳನ್ನೂ ಅಭ್ಯಾಸ ಮಾಡಿದ. (ಕುಂತಿ ಪೆಟ್ಟಿಗೆಯಲ್ಲಿ ಇರಿಸಿದ್ದ) ಧನಾದಿ ಸಂಪತ್ತು ಅವನ ಸಮೀಪದಲ್ಲೇ ಇದ್ದುದರಿಂದ ಹೆಸರಿಂದ ಆತ ವಸುಷೇಣನಾದ. (ವಸುಷೇಣ ಎನ್ನುವುದು ಕರ್ಣನ ಮೂಲ ಹೆಸರು) ಬಾಲ್ಯದಿಂದಲೇ ಮಹಾಬಲವುಳ್ಳವನಾಗಿದ್ದ ಆತ,  ತನ್ನ ಗುಣಗಳಿಂದ ಬೆಳಗುತ್ತಿದ್ದ.