ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, February 8, 2019

Mahabharata Tatparya Nirnaya Kannada 11.233-11.237


ಅಭೂಚ್ಛಿನಿರ್ನ್ನಾಮ ಯದುಪ್ರವೀರಸ್ತಸ್ಯಾsತ್ಮಜಃ ಸತ್ಯಕ ಆಸ ತಸ್ಮಾತ್ ।
ಕೃಷ್ಣಃ ಪಕ್ಷೋ ಯುಯುಧಾನಾಭಿಧೇಯೋ ಗರುತ್ಮತೋsಮ್ಶೇನ ಯುತೋ ಬಭೂವ ॥೧೧.೨೩೩

ಯಃ ಸಂವಹೋ ನಾಮ ಮರುತ್ ತದಂಶಶ್ಚಕ್ರಸ್ಯ ವಿಷ್ಣೋಶ್ಚ ಬಭೂವ ತಸ್ಮಿನ್
ಯದುಷ್ವಭೂದ್ಧೃದಿಕೋ ಭೋಜವಂಶೇ ಸಿತಃ ಪಕ್ಷಸ್ತಸ್ಯ ಸುತೋ ಬಭೂವ॥೧೧.೨೩೪

ಸ ಪಾಞ್ಚಜನ್ಯಾಂಶಯುತೋ ಮರುತ್ಸು ತಥಾSಮ್ಶಯುಕ್ತಃ ಪ್ರವಹಸ್ಯ ವೀರಃ ।
ನಾಮಾಸ್ಯ ಚಾಭೂತ್ ಕೃತವರ್ಮ್ಮೇತ್ಯಥಾನ್ಯೇ ಯೇ ಯಾದವಾಸ್ತೇsಪಿ ಸುರಾಃ ಸಗೋಪಾಃ॥೧೧.೨೩೫

ಶಿನಿ ಎಂಬ ಹೆಸರಿನ ಯಾದವಶ್ರೇಷ್ಠನೊಬ್ಬನಿದ್ದ. ಅವನ ಮಗ ಸತ್ಯಕ.  ಈ ಸತ್ಯಕನಿಂದ ಕೃಷ್ಣಪಕ್ಷಾಭಿಮಾನಿದೇವತೆಯು ಗರುಡನ ಅಂಶದಿಂದ ಕೂಡಿದವನಾಗಿ ಹುಟ್ಟಿದ. ಅವನೇ ಯುಯುಧಾನ.
ಯುಯುಧಾನನಲ್ಲಿ ‘ಸಂವಹ’ ಎನ್ನುವ ಹೆಸರಿನ ಮರುದ್ದೇವತೆಯ ಅಂಶವೂ,  ವಿಷ್ಣುಚಕ್ರಾಭಿಮಾನಿಯ  ಅಂಶವೂ ಇತ್ತು. ಹಾಗೇ, ‘ಹೃಧಿಕ’ ಎನ್ನುವ ಯದುವಿಗೆ    ಶುಕ್ಲಪಕ್ಷಾಭಿಮಾನಿ ದೇವತೆಯು ಮಗನಾಗಿ ಹುಟ್ಟಿದನು. ಅವನು ಪಾಂಚಜನ್ಯದ(ಭಗವಂತನ ಶಂಖಾಭಿಮಾನಿಯಾದ ಅನಿರುದ್ಧನ) ಅಂಶದಿಂದಲೂ ಹಾಗು ‘ಪ್ರವಹ’ ಎಂಬ ಪ್ರಸಿದ್ಧ ಮರುದ್ದೇವತೆಯ  ಅಂಶದಿಂದಲೂ ಕೂಡಿದವನಾಗಿದ್ದನು. ಅವನೇ ಕೃತವರ್ಮ. ಇದೇ ರೀತಿ ಉಳಿದ ಯಾದವರು ಮತ್ತು ಗೋಪಾಲಕರೆಲ್ಲರೂ ಕೂಡಾ ದೇವತೆಗಳೇ ಆಗಿದ್ದರು.

ಯೇ ಪಾಣ್ಡವಾನಾಮಭವನ್ ಸಹಾಯಾ ದೇವಾಶ್ಚ ದೇವಾನುಚರಾಃ ಸಮಸ್ತಾಃ
ಅನ್ಯೇ ತು ಸರ್ವೇsಪ್ಯಸುರಾ ಹಿ ಮಧ್ಯಮಾ ಯೇ ಮಾನುಷಾಸ್ತೇ ಚಲಬುದ್ಧಿವೃತ್ತಯಃ ॥೧೧.೨೩೬ 

ಯಾರು-ಯಾರು ಪಾಂಡವರಿಗೆ ಸಹಾಯಕರಾಗಿದ್ದರೋ, ಅವರೆಲ್ಲರೂ ದೇವತೆಗಳು ಹಾಗು ದೇವತೆಗಳಿಗೆ ಅನುಕೂಲರಾದ ಗಂಧರ್ವಾದಿಗಳ ಅವತಾರಭೂತರಾಗಿದ್ದರು. ಪಾಂಡವರಿಗೆ ವಿರುದ್ಧವಾಗಿ ನಿಂತವರು ಅಸುರರಾಗಿದ್ದರು. ಕೆಲವೊಮ್ಮೆ ಪಾಂಡವರ ಪರ, ಇನ್ನು ಕೆಲವೊಮ್ಮೆ ವಿರುದ್ಧ,  ಈ ರೀತಿಯ ಚಂಚಲ ಮನೋವೃತ್ತಿ ಉಳ್ಳವರು ಮಧ್ಯಮರಾದ ಮನುಷ್ಯರಾಗಿದ್ದರು.  

ಲಿಙ್ಗಂ ಸುರಾಣಾಂ ಹಿ ಪರೈವ ಭಕ್ತಿರ್ವಿಷ್ಣೌ ತದನ್ಯೇಷು ಚ ತತ್ ಪ್ರತೀಪತಾ ।
ಅತೋsತ್ರ ಯೇಯೇ ಹರಿಭಕ್ತಿತತ್ಪರಾಸ್ತೇತೇ ಸುರಾಸ್ತದ್ಭರಿತಾ ವಿಶೇಷತಃ೧೧.೧೩೭

ನಾರಾಯಣನಲ್ಲಿ ಉತ್ಕೃಷ್ಟವಾದ  ಭಕ್ತಿಯೇ ದೇವತೆಗಳಿಗೆ ಲಕ್ಷಣವು. ಭಗವಂತನ ವಿರುದ್ಧತ್ವವೇ ಅಸುರರ ಲಕ್ಷಣವು. ಮಹಾಭಾರತ-ಪುರಾಣ ಮೊದಲಾದವುಗಳಲ್ಲಿ  ಯಾರು-ಯಾರು ಹರಿಭಕ್ತಿತತ್ಪರರೋ, ಅವರೆಲ್ಲರೂ ದೇವತೆಗಳು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭಗವದವತಾರಪ್ರತಿಜ್ಞಾ ನಾಮ ಏಕಾದಶೋsಧ್ಯಾಯಃ ॥

*********

Thursday, February 7, 2019

Mahabharata Tatparya Nirnaya Kannada 11.230-11.232

ಅಥಾವತೀರ್ಣ್ಣಾಃ ಸಕಲಾಶ್ಚ ದೇವತಾ ಯಥಾಯಥೈವಾsಹ ಹರಿಸ್ತಥಾತಥಾ ।
ವಿತ್ತೇಶ್ವರಃ ಪೂರ್ವಮಭೂದ್ಧಿ ಭೌಮಾದ್ಧರೇಃ ಸುತತ್ವೇsಪಿ ತದಿಚ್ಛಯಾsಸುರಾತ್ ॥೧೧.೨೩೦    

ತದನಂತರ ಎಲ್ಲಾ ದೇವತೆಗಳು ನಾರಾಯಣನು ಹೇಗೆ-ಹೇಗೆ ಹೇಳಿದನೋ ಹಾಗೆಯೇ ಭೂಮಿಯಲ್ಲಿ ಅವತಾರ ಮಾಡಿದರು. ಆದರೆ ಇದಕ್ಕೂ ಮೊದಲೇ ಕುಬೇರನು, ಪರಮಾತ್ಮನ ಮಗನಾಗಿದ್ದರೂ ಕೂಡಾ  ಅಸುರನಾದ ನರಕಾಸುರನ ಮಗನಾಗಬೇಕೆಂದು ಬಯಸಿ  (ನರಕಾಸುರನ ಮಗನಾಗಬೇಕು ಎನ್ನುವ ಇಚ್ಛೆಯಿಂದಲೇ) ಅವತಾರ ಮಾಡಿದ್ದನು.
[ಈ ರೀತಿ ಕುಬೇರ ನರಕಾಸುರನ ಮಗನಾಗಿ ಹುಟ್ಟಲಿಚ್ಛಿಸಲು  ಕಾರಣವೇನು ಎನ್ನುವುದನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ]

ಪಾಪೇನ ತೇನಾಪಹೃತೋ ಹಿ ಹಸ್ತೀ ಶಿವಪ್ರದತ್ತಃ ಸುಪ್ರತೀಕಾಭಿಧಾನಃ ।
ತದರ್ತ್ಥಮೇವಾಸ್ಯ ಸುತೋsಭಿಜಾತೋ ಧನೇಶ್ವರೋ ಭಗದತ್ತಾಭಿಧಾನಃ ॥೧೧.೨೩೧      

ಪಾಪಿಷ್ಠನಾದ ನರಕಾಸುರನಿಂದ,  ಕುಬೇರನಿಗೆ  ಶಿವನೇ ಕೊಟ್ಟಿರುವ ‘ಸುಪ್ರತೀಕ’ ಎನ್ನುವ ಹೆಸರಿನ ಉತ್ಕೃಷ್ಟವಾದ ಆನೆಯು ಅಪಹರಿಸಲ್ಪಟ್ಟಿತ್ತು. ಆ ಆನೆಯನ್ನು ಮತ್ತೆ ಪಡೆಯುವುದಕ್ಕಾಗಿ ಕುಬೇರನು ‘ಭಗದತ್ತ’ ಎಂಬ ಹೆಸರುಳ್ಳವನಾಗಿ, ನರಕಾಸುರನ ಮಗನಾಗಿ ಹುಟ್ಟಿದ್ದನು.

ಮಹಾಸುರಸ್ಯಾಂಶಯುತಃ ಸ ಏವ ರುದ್ರಾವೇಶಾದ್ ಬಲವಾನಸ್ತ್ರವಾಂಶ್ಚ
ಶಿಷ್ಯೋ ಮಹೇನ್ದ್ರಸ್ಯ ಹತೇ ಬಭೂವ ತಾತೇ ಸ್ವಧರ್ಮ್ಮಾಭಿರತಶ್ಚ ನಿತ್ಯಮ್ ॥೧೧.೨೩೨   

ಭಗದತ್ತನು ಮಹಾಸುರನ ಅಂಶದಿಂದಲೂ ಕೂಡಿದ್ದ ಮತ್ತು  ರುದ್ರನ ಆವೇಶದಿಂದ ಬಲಿಷ್ಠನಾಗಿಯೂ, ಅಸ್ತ್ರವುಳ್ಳವನಾಗಿಯೂ ಇದ್ದ. ಈತ ಇಂದ್ರದೇವರ ಶಿಷ್ಯನೂ ಆಗಿದ್ದ. (ತನ್ನ ಅಪ್ಪನ ಪ್ರಬಲ ವೈರಿಯ ಶಿಷ್ಯನಾಗಿದ್ದ!). ಈತ ತನ್ನ ಅಪ್ಪನಾದ ನರಕಾಸುರ   ಸತ್ತ ಮೇಲೆಯೇ ಸ್ವಧರ್ಮದಲ್ಲಿ ರಥನಾದ (ಅಸುರಾವೇಶ ನಷ್ಟವಾಗಿ, ದೇವತೆಗಳ ಅವತಾರಕ್ಕೆ ಯೋಗ್ಯವಾದ ಧರ್ಮನುಷ್ಟಾನದಲ್ಲಿ ತೊಡಗಿದ).

[ಮಹಾಭಾರತದ ಆದಿಪರ್ವದಲ್ಲಿ(೬೮.೯) ಒಂದು ಮಾತಿದೆ: ‘ಬಾಷ್ಕಲೋ ನಾಮ ಯಸ್ತೇಷಾಮಾಸೀದಸುರಸತ್ತಮಃ। ಭಗದತ್ತ ಇತಿ ಖ್ಯಾತಃ ಸ ಜಜ್ಞೇ ಪುರುಷರ್ಷಭಃ’ . ಇಲ್ಲಿ ‘ಬಾಷ್ಕಲ’ ಎಂಬ ದೈತ್ಯ ಭಗದತ್ತನಾಗಿ ಹುಟ್ಟಿದ ಎಂದು ಹೇಳಿದ್ದಾರೆ. ಆದರೆ ಇತರ ಪುರಾಣಗಳಲ್ಲಿ ಕುಬೇರನೇ ಭಗದತ್ತನಾಗಿ ಹುಟ್ಟಿದ ಎನ್ನುವ ವಿವರ ಕಾಣಸಿಗುತ್ತದೆ.  ಈ ವಿರೋಧಕ್ಕೆ ಇಲ್ಲಿ ಆಚಾರ್ಯರು ನಿರ್ಣಯ ನೀಡುತ್ತಾ ‘ಮಹಾಸುರಸ್ಯಾಂಶಯುತಃ’  ಎಂದಿದ್ದಾರೆ. ಕುಬೇರನೇ ಭಗದತ್ತನಾಗಿ ಹುಟ್ಟಿರುವುದು ಆದರೆ ಆತನಲ್ಲಿ ಬಾಷ್ಕಲನೆಂಬ ದೈತ್ಯನ ಆವೇಶವಿತ್ತು] 

Wednesday, February 6, 2019

Mahabharata Tatparya Nirnaya Kannada 11.226-11.229


ತತ್ ತ್ವಂ ಭವಸ್ವಾsಶು ಚ ದೇವಕೀಸುತಸ್ತಥೈವ ಯೋ ದ್ರೋಣನಾಮಾ ವಸುಃ ಸಃ
ಸ್ವಭಾರ್ಯ್ಯಯಾ ಧರಯಾ ತ್ವತ್ಪಿತೃತ್ವಂ ಪ್ರಾಪ್ತುಂ ತಪಸ್ತೇಪ ಉದಾರಮಾನಸಃ ॥೧೧.೨೨೬

ಕಾಶ್ಯಪನ  ಕುರಿತು ವಿವರಿಸಿದ ಚತುರ್ಮುಖ ಭಗವಂತನಲ್ಲಿ  ‘ನೀನು ಕೂಡಲೇ ದೇವಕಿಯ ಮಗನಾಗಿ ಆವಿರ್ಭವಿಸು’ ಎಂದು ಪ್ರಾರ್ಥಿಸುತ್ತಾನೆ.
[ಭಗವಂತ ವಸುದೇವ-ದೇವಕಿಯ ಮಗನಾಗಿ ಹುಟ್ಟಿದರೂ ಕೂಡಾ,  ಬೆಳೆಯಬೇಕಾಗಿರುವುದು ಬೇರೆಡೆ. ಏಕೆ ಹೀಗೆ? ಇದರ ಹಿನ್ನೆಲೆಯ ಕಥೆಯನ್ನೂ ಇಲ್ಲಿ ಚತುರ್ಮುಖ ನಾರಾಯಣನಿಗೆ ವಿವರಿಸುತ್ತಾನೆ:]
ದ್ರೋಣ ಎಂಬ ಹೆಸರುಳ್ಳ ವಸುವು ತನ್ನ ಹೆಂಡತಿಯಾದ ಧರೆಯೊಂದಿಗೆ ಕೂಡಿಕೊಂಡು ನಿನ್ನ ಅಪ್ಪನಾಗಬೇಕೆಂದು ಉತ್ಕೃಷ್ಟನಾದ ಮನಸ್ಸುಳ್ಳವನಾಗಿ ತಪಸ್ಸನ್ನು ಮಾಡಿರುವನು.
[ಈ ಕುರಿತಾದ ವಿವರವನ್ನು ಪಾದ್ಮಪುರಾಣದ ಸೃಷ್ಟಿಖಂಡದಲ್ಲಿ(೧೩.೧೪೭) ಕಾಣುತ್ತೇವೆ: ‘ನಂದೋ ದ್ರೋಣಃ  ಸಮಾಖ್ಯಾತೋ ಯಶೋದಾsಥ ಧರಾsಭವತ್    ಬ್ರಹ್ಮಾಂಡಪುರಾಣದಲ್ಲೂ (ಉಪೋದ್ಘಾತಪಾದೇ-೨೩೮-೨೩೯) ಈ ವಿವರ  ಕಾಣಸಿಗುತ್ತದೆ: ‘ಪುರುಷಃ ಕಾಶ್ಯಪಸ್ತವಾಸಿದದಿತಿಸ್ತತ್ಪ್ರಿಯಾ  ತಥಾ ಕಾಶ್ಯಪೋ ಬ್ರಹ್ಮಣೋಂsಶಾಶ್ಚ ಪೃಥಿವ್ಯಾ ಅದಿತಿಸ್ತಥಾ ನಂದೋ ದ್ರೋಣಃ ಸಮಾಖ್ಯಾತೋ ಯಶೋದಾ ಚ ಧರಾsಭವತ್’]

ತಸ್ಮೈ ವರಃ ಸ ಮಯಾ ಸನ್ನಿಸೃಷ್ಟಃ ಸ ಚಾsಸ ನನ್ದಾಖ್ಯ ಉತಾಸ್ಯ ಭಾರ್ಯ್ಯಾ
ನಾಮ್ನಾ ಯಶೋದಾ ಸ ಚ ಶೂರತಾತಸುತಸ್ಯ ವೈಶ್ಯಾಪ್ರಭವೋsಥ ಗೋಪಃ ॥೧೧.೨೨೭   

ಈರೀತಿ ತಪಸ್ಸನ್ನಾಚರಿಸಿದ ದ್ರೋಣನಿಗೆ (ವಸುದಂಪತಿಗಳಿಗೆ) ನನ್ನಿಂದ ವರವು ಕೊಡಲ್ಪಟ್ಟಿದೆ. ಅವನಾದರೋ, ರಾಜಾಧಿದೇವನ^  ವೈಶ್ಯಪತ್ನಿಯಲ್ಲಿ  ಹುಟ್ಟಿ   ನಂದನೆಂಬ ಹೆಸರಿನ ಗೋಪನಾಗಿ ಭೂಮಿಯಲ್ಲಿದ್ದಾನೆ. ಅವನ ಹೆಂಡತಿ ‘ಧರೆ’ ಯಶೋದೆ ಎಂಬ ಹೆಸರಿನಿಂದ ಭೂಮಿಯಲ್ಲಿ ಹುಟ್ಟಿದ್ದಾಳೆ.
[^ಇಲ್ಲಿ ಆಚಾರ್ಯರು ‘ಶೂರತಾತಸುತಸ್ಯ’ ಎನ್ನುವ ಪ್ರಯೋಗ ಮಾಡಿರುವುದನ್ನು ಕಾಣುತ್ತೇವೆ. ಶೂರಸೇನನ ತಂದೆಯ ಇಬ್ಬರು ಗಂಡುಮಕ್ಕಳಲ್ಲಿ, ಶೂರನ ತಮ್ಮನಾದ ರಾಜಾಧಿದೇವನ ಮಗನೇ ನಂದ’. ಇದು ಈ ಮಾತಿನ ಅರ್ಥವಿರಬಹುದು.  ಬ್ರಹ್ಮಾಂಡಪುರಾಣದಲ್ಲಿ(ಉಪೋದ್ಘಾತಪಾದೇ ೭೧.೧೩೭) ಈ ಕುರಿತು ಒಂದು ಸುಳಿವು ಸಿಗುತ್ತದೆ. ಅಲ್ಲಿ ‘ರಾಜಾಧಿದೇವಃ  ಶೂರಶ್ಚ  ವಿಡೂರಥಸುತೋsಭವತ್’ ಎಂದು ಹೇಳಿದ್ದಾರೆ. ರಾಜಾಧಿದೇವ ಮತ್ತು ಶೂರಸೇನ ವಿಡೂರಥನ ಮಕ್ಕಳಾಗಿದ್ದಾರೆ ಎಂದು ಅಲ್ಲಿ ಹೇಳಿರುವುದರಿಂದ, ಶೂರನ ತಂದೆ ವಿಡೂರಥ, ಅವನ ಮಗ ಎಂದರೆ-ರಾಜಾಧಿದೇವ, ಈ ರಾಜಾಧಿದೇವನ ವೈಶ್ಯಪತ್ನಿಯಲ್ಲಿ ಹುಟ್ಟಿದವನೇ ನಂದ ಎಂದು ನಾವು ತಿಳಿಯಬಹುದು. ಆದ್ದರಿಂದ ವಸುದೇವ ಮತ್ತು ನಂದಗೋಪ ಸೋದರಸಂಬಂಧಿ (cousins) ]    

ತೌ ದೇವಕೀವಸುದೇವೌ ಚ ತೇಪತುಸ್ತಪಸ್ತ್ವದೀಯಂ ಸುತಮಿಚ್ಛಮಾನೌ
ತ್ವಾಮೇವ ತಸ್ಮಾತ್ ಪ್ರಥಮಂ ಪ್ರದರ್ಶ್ಯ ತತ್ರ ಸ್ವರೂಪಂ ಹಿ ತತೋ ವ್ರಜಂ ವ್ರಜ ॥೧೧.೨೨೮

ಆ ದೇವಕಿ ಮತ್ತು ವಸುದೇವರು ನಿನ್ನನ್ನೇ ಮಗನಾಗಿ  ಪಡೆಯಲು ಬಯಸಿ, ನಿನ್ನ ಸಂಬಂಧಿಯಾದ ತಪಸ್ಸನ್ನು ಮಾಡಿರುವರು.  ಆ ಕಾರಣದಿಂದ ಮೊದಲು ನೀನು  ದೇವಕೀ-ವಸುದೇವರಲ್ಲಿ ಪ್ರಾದುರ್ಭಾವಗೊಂಡು ನಂತರ ವ್ರಜಕ್ಕೆ(ನಂದಗೋಪನ ಮನೆಗೆ) ತೆರಳು. 

ಇತೀರಿತೇ ಸೋsಬ್ಜಭವೇನ ಕೇಶವಸ್ತಥೇತಿ ಚೋಕ್ತ್ವಾ ಪುನರಾಹ ದೇವತಾಃ
ಸರ್ವೇ ಭವನ್ತೋ ಭವತಾsಶು ಮಾನುಷೇ ಕಾರ್ಯ್ಯಾನುಸಾರೇಣ ಯಥಾನುರೂಪತಃ ॥೧೧.೨೨೯    

ಈರೀತಿಯಾಗಿ ಬ್ರಹ್ಮನಿಂದ ಹೇಳಲ್ಪಡುತ್ತಿರಲು, ಆ ಕೇಶವನು ‘ಹಾಗೇ ಆಗಲಿ’ ಎಂದು ಹೇಳಿ, ಮತ್ತೆ ದೇವತೆಗಳನ್ನು ಕುರಿತು ‘ನೀವೆಲ್ಲರೂ ಕೂಡಾ ನಿಮಗೆ ವಹಿಸಿರುವ ಕಾರ್ಯಕ್ಕೆ ಅನುಗುಣವಾಗಿ ಮತ್ತು ಅದಕ್ಕನುರೂಪವಾಗಿ ಮನುಷ್ಯರಾಗಿ ಹುಟ್ಟಿ’  ಎಂದು ಹೇಳಿದನು.